ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಮೊದಲ ಎಲ್‌ಇಡಿ ತಾರಾಲಯ

ಮೈಸೂರು: ಗ್ರಹ, ನಕ್ಷತ್ರಗಳ ಅಧ್ಯಯನಕ್ಕೆ ವಿದ್ಯಾರ್ಥಿಗಳನ್ನು ಆಕರ್ಷಿಸಿ ಉದಯೋನ್ಮುಖ ಖಗೋಳಶಾಸ್ತ್ರಜ್ಞರು, ಸಂಶೋಧಕರಿಗೆ ನೆರವಾಗಲು ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಿರ್ಮಿಸುತ್ತಿರುವ ವಿಶ್ವದ ಮೊದಲ ಎಲ್‌ಇಡಿ ಗುಮ್ಮಟ (ತಾರಾಲಯ) ನಿರ್ಮಾಣ ಕಾಮಗಾರಿ ಬಿರುಸಿನಿಂದ ಸಾಗಿದೆ.
ಮೈಸೂರು ವಿಶ್ವವಿದ್ಯಾನಿಲಯದ ಚಾಮುಂಡಿಬೆಟ್ಟದ ಕ್ಯಾಂಪಸ್‌ನಲ್ಲಿ ಕಾಸಾಲಜಿ ಶಿಕ್ಷಣ ಮತ್ತು ಸಂಶೋಧನಾ-ತರಬೇತಿ ಕೇಂದ್ರದ ನಿರ್ಮಾಣವು ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದೆ. 2022ರಲ್ಲಿ ಆರಂಭವಾದ ಕಾಮಗಾರಿಯೂ 2024ರಲ್ಲಿ ಪೂರ್ಣಗೊಳ್ಳಲಿದೆ.
ಎಲ್‌ಇಡಿ ಡೋಮ್‌ನ ಅಭಿವೃದ್ಧಿ ಮತ್ತು ಸಿವಿಲ್ ನಿರ್ಮಾಣ ಕೆಲಸವು ಪ್ರಗತಿಯಲ್ಲಿದೆ. 8ಕೆ ರೆಸಲ್ಯೂಶನ್ ಹೊಂದಿರುವ ಹೈಟೆಕ್ 15-ಮೀಟರ್ ಎಲ್‌ಇಡಿ ಗುಮಟ ತಾರಾಲಯವು ವಿಶ್ವದ ಮೊದಲ ಗುಮ್ಮಟ ತಾರಾಲಯ ಎಂಬ ಪ್ರಸಿದ್ಧಿಗೆ ಪಾತ್ರವಾಗಲಿದೆ. 8ಕೆ ರೆಸಲ್ಯೂಶನ್ ಹೊಂದಿರುವ ಕಾಸೊಸ್ ಹೈಟೆಕ್ 15-ಮೀಟರ್ ಎಲ್‌ಇಡಿ ಗುಮ್ಮಟ ತಾರಾಲಯವು ವಿಶ್ವದ ಮೊದಲ ಓರೆಯಾದ ಎಲ್‌ಇಡಿ ಗುಮ್ಮಟ ತಾರಾಲಯವಾಗಿದೆ. ಅಂದಾಜು 86 ಕೋಟಿ ರೂ. ಆಯವ್ಯಯದೊಂದಿಗೆ ಈ ಯೋಜನೆಯು ನಿರ್ಮಾಣ ಮತ್ತು ಕಾರ್ಯಾಚರಣೆಗಾಗಿ ಮೈಸೂರು ವಿಶ್ವವಿದ್ಯಾನಿಲಯದೊಂದಿಗೆ ಒಪ್ಪಂದದ ಮೂಲಕ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಮೂಲಕ ಕಾರ್ಯಗತಗೊಳಿಸಲಾಗಿದೆ. ಎಲ್‌ಇಡಿ ಗುಮಟವನ್ನು ಕೊನಿಕಾ-ಮಿನೋಲ್ಟಾ (ಜಪಾನ್), ಆಎರ್ಸ್ ಎ-ಕಾಸೊಸ್ (ಫ್ರಾನ್ಸ್) ಮತ್ತು ಮೆಸರ್ಸ್ ಆರ್ಬಿಟ್-ಅನಿಮೇಟ್ (ಇಂಡಿಯಾ) ಕನ್ಸೋರ್ಟಿಯಂ ಅಭಿವೃದ್ಧಿಪಡಿಸುತ್ತಿವೆ.
ಎಲ್‌ಇಡಿ ಗುಮ್ಮಟ: ಪ್ರಪಂಚದಾದ್ಯಂತ ಹೆಚ್ಚಿನ ತಾರಾಲಯಗಳು ಚಿತ್ರಗಳನ್ನು ಮತ್ತು ಚಲನಚಿತ್ರಗಳನ್ನು ನಿಷ್ಕ್ರಿಯ ಗುಮಟದ ಮೇಲೆ ಬಿತ್ತರಿಸಲು ಪ್ರೊಜೆಕ್ಟರ್ ಅವಲಂಬಿಸಿವೆ. ಮೈಸೂರಿನಲ್ಲಿ ಸ್ಥಾಪಿಸುತ್ತಿರುವ ತಾರಾಲಯದಲ್ಲಿ ಪ್ರೊಜೆಕ್ಟರ್ ಬಳಸುತ್ತಿಲ್ಲ. ಬದಲಾಗಿ ಗುಮಟವನ್ನು ಎಲ್‌ಇಡಿ ದೀಪಗಳ ಫಲಕಗಳಿಂದ ನಿರ್ಮಿಸಲಾಗುವುದು. ಅದು ಕಂಪ್ಯೂಟರ್ ಸಿಸ್ಟಂನಿಂದ ನಿಯಂತ್ರಿಸಲ್ಪಡುತ್ತದೆ. ಅತ್ಯಾಧುನಿಕ ತಾರಾಲಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಡೇಟಾ ವಿಶ್ಲೇಷಣೆ ತರಬೇತಿ ಮತ್ತು ಸಂಪನ್ಮೂಲ ಕೇಂದ್ರವನ್ನು ಒಳಗೊಂಡಿರುತ್ತದೆ. ಇಲ್ಲಿ ಕಾಲೇಜು-ಶಾಲಾ ವಿದ್ಯಾರ್ಥಿಗಳಿಗೆ ಖಗೋಳಶಾಸ್ತ್ರದ ಮಾತುಕತೆ, ದತ್ತಾಂಶ ವಿಶ್ಲೇಷಣೆ ಕಾರ್ಯಾಗಾರ, ಗಾಮೀಣ ಶಾಲೆಗಳಿಗೆ ಶೈಕ್ಷಣಿಕ ನೆರವು, ಸಾರ್ವಜನಿಕರಿಗೆ ದೂರದರ್ಶಕ ವೀಕ್ಷಣೆ ಮಾಡಬಹುದಾಗಿದೆ.
5 ಕೋಟಿ ರೂ. ಅನುದಾನ
ಮೈಸೂರಿನಲ್ಲಿ ತಾರಾಲಯ ನಿರ್ಮಾಣಕ್ಕೆ ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸಂಸದರ ನಿಧಿಯಿಂದ 5 ಕೋಟಿ ರೂ. ಅನುದಾನ ನೀಡುವ ಮೂಲಕ ವಿನಿಯೋಗಿಸಿದ್ದಾರೆ ಮತ್ತು ಮಾರ್ಚ್ 2022ರಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು. ಕರ್ನಾಟಕದ ಯುವಜನರಲ್ಲಿ ಬಾಹ್ಯಾಕಾಶ ಮತ್ತು ವಿಶ್ವ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಬೆಳೆಸಲು ಡಿಜಿಸ್ಟಾರ್ 7 ತಾರಾಲಯವನ್ನು ಸ್ಥಾಪಿಸುವ ಕಲ್ಪನೆಯಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಚಾಮುಂಡಿಬೆಟ್ಟದ ತಪ್ಪಲಿನ ಮೈಸೂರು ವಿವಿ ಕ್ಯಾಂಪಸ್‌ನ 3 ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದ ಮೊದಲ ಅತ್ಯಾಧುನಿಕ ತಾರಾಲಯ ಕಟ್ಟಡ ನಿರ್ಮಾಣ ಕಾಮಗಾರಿ 2024ರ ಆಗಸ್ಟ್‌ನಲ್ಲಿ ಪೂರ್ಣಗೊಳ್ಳಲಿದೆ. ಅನನ್ಯ ಶೈಕ್ಷಣಿಕ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಸಂಘಟಿಸಲು ಉತ್ಸುಕರಾಗಿದ್ದೇವೆ.
<ಪ್ರೊ.ಅನ್ನಪೂರ್ಣಿ ಸುಬ್ರಹ್ಮಣ್ಯಂ,
ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯ ನಿರ್ದೇಶಕಿ







