ತಿರುಪರಂಕುಂದ್ರಂ ದೀಪತೂಣ್ ನಲ್ಲಿ ದೀಪ ಬೆಳಗಲು ಆದೇಶ; ಏನಿದು ವಿವಾದ? ಹೈಕೋರ್ಟ್ ತೀರ್ಪು ಏನು ಹೇಳುತ್ತದೆ?

Photo Credit : PTI
ತಮಿಳುನಾಡಿನ ತಿರುಪರಂಕುಂದ್ರಂ ಬೆಟ್ಟದ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವದ ಸಂದರ್ಭದಲ್ಲಿ ವಿಧ್ಯುಕ್ತವಾಗಿ ದೀಪ ಬೆಳಗಲು ಅನುಮತಿ ನೀಡಿದ ಏಕಸದಸ್ಯ ನ್ಯಾಯಾಧೀಶರ ತೀರ್ಪನ್ನು ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠ ಮಂಗಳವಾರ ಎತ್ತಿಹಿಡಿದಿದೆ.
ನ್ಯಾಯಮೂರ್ತಿಗಳಾದ ಜಿ. ಜಯಚಂದ್ರನ್ ಮತ್ತು ಕೆ.ಕೆ. ರಾಮಕೃಷ್ಣನ್ ಅವರ ಪೀಠವು, ದೇವಸ್ಥಾನವು ದೀಪತೂಣ್ ನಲ್ಲಿ (ದೀಪಸ್ತಂಭ) ದೀಪ ಬೆಳಗಿಸಬೇಕು ಎಂದು ಆದೇಶಿಸಿದೆ. ದೀಪ ಬೆಳಗಲು ಅವಕಾಶವಿರುವ ಕಲ್ಲಿನ ಸ್ತಂಭವನ್ನು ತಮಿಳಿನಲ್ಲಿ ‘ದೀಪತೂಣ್’ (ತೂಣ್ ಅಂದರೆ ಕಂಬ) ಎಂದು ಕರೆಯಲಾಗುತ್ತದೆ.
ಬೆಟ್ಟದ ಮೇಲಿನ ಸ್ಮಾರಕಗಳನ್ನು ರಕ್ಷಿಸಲು ASI ಅಗತ್ಯವಾದ ಷರತ್ತುಗಳನ್ನು ವಿಧಿಸಬೇಕು. ಕಾರ್ತಿಕ ದೀಪೋತ್ಸವದ ಸಂದರ್ಭದಲ್ಲಿ ದೇವಸ್ಥಾನವು ತನ್ನ ತಂಡದ ಮೂಲಕವೇ ದೀಪ ಬೆಳಗಿಸಬೇಕು. ದೇವಸ್ಥಾನ ತಂಡದೊಂದಿಗೆ ಯಾವುದೇ ಸಾರ್ವಜನಿಕರನ್ನು ಹೋಗಲು ಅನುಮತಿಸಬಾರದು. ತಂಡದ ಸದಸ್ಯರ ಸಂಖ್ಯೆಯನ್ನು ASI ಮತ್ತು ಪೊಲೀಸರೊಂದಿಗೆ ಸಮಾಲೋಚಿಸಿ ನಿರ್ಧರಿಸಬೇಕು. ಜಿಲ್ಲಾಧಿಕಾರಿಗಳು ಕಾರ್ಯಕ್ರಮವನ್ನು ಸಂಘಟಿಸಬೇಕು ಮತ್ತು ಮೇಲ್ವಿಚಾರಣೆ ವಹಿಸಬೇಕು.
ದೀಪ ಬೆಳಗುವಿಕೆಯನ್ನು ಪ್ರಶ್ನಿಸುವವರು ಆಗಮ ಶಾಸ್ತ್ರಗಳ ಪ್ರಕಾರ ಈ ದೀಪವನ್ನು ಬೆಳಗಿಸಲು ಅನುಮತಿ ಇಲ್ಲ ಎಂದು ತೋರಿಸಲು ಯಾವುದೇ ಪ್ರಬಲ ಪುರಾವೆಗಳನ್ನು ಸಲ್ಲಿಸಿಲ್ಲ ಎಂದು ಪೀಠ ಹೇಳಿದೆ.
ಅದೇ ವೇಳೆ, ಬೆಟ್ಟದ ಮೇಲೆ ದೀಪ ಹಚ್ಚಿದರೆ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಬಹುದು ಎಂಬ ವಾದಗಳನ್ನು ಪೀಠ ತಿರಸ್ಕರಿಸಿದೆ. ದೇವಾಲಯದ ಭೂಮಿಯಲ್ಲಿ ದೇವಾಲಯದ ಆಡಳಿತ ಮಂಡಳಿಯು ದೀಪ ಹಚ್ಚುವುದರಿಂದ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುತ್ತದೆ ಎಂಬ ತಮಿಳುನಾಡು ಸರ್ಕಾರದ ಆತಂಕ ಹಾಸ್ಯಾಸ್ಪದ ಹಾಗೂ ನಂಬಲು ಕಷ್ಟಕರವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಯಾವುದೇ ರಾಜ್ಯವು ತನ್ನ ರಾಜಕೀಯ ಅಜೆಂಡಾವನ್ನು ಸಾಧಿಸಲು ಆ ಮಟ್ಟಕ್ಕೆ ಇಳಿಯಬಾರದು ಎಂದು ಪೀಠ ಹೇಳಿದೆ.
ಸಾರ್ವಜನಿಕ ಶಾಂತಿಗೆ ಭಂಗ ತರುವ ಸಾಧ್ಯತೆಯ ಬಗ್ಗೆ ಜಿಲ್ಲಾಡಳಿತ ವ್ಯಕ್ತಪಡಿಸಿರುವ ಆತಂಕ ಕಾಲ್ಪನಿಕವಾಗಿದ್ದು, ಇದು ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಅನುಮಾನ ಮತ್ತು ನಿರಂತರ ಅಪನಂಬಿಕೆಗೆ ಒಳಪಡಿಸಿದೆ ಎಂದು ನ್ಯಾಯಾಲಯ ಹೇಳಿದೆ.
ಕಲ್ಲಿನ ಕಂಬವು ದರ್ಗಾಕ್ಕೆ ಸೇರಿದೆ ಎಂದು ವಕ್ಫ್ ಮಂಡಳಿಯು ಮಾಡಿದ ವಾದವನ್ನು ನ್ಯಾಯಾಲಯ ತೀವ್ರವಾಗಿ ಟೀಕಿಸಿದ್ದು, ದೇವಾಲಯವು ಕಲ್ಲಿನ ಕಂಬದಲ್ಲೇ, ಅಂದರೆ ದೀಪತೂಣ್ ನಲ್ಲಿ, ದೀಪವನ್ನು ಬೆಳಗಿಸಬೇಕು ಎಂದು ಸ್ಪಷ್ಟಪಡಿಸಿದೆ. ಜಿಲ್ಲಾಧಿಕಾರಿಗಳು ಈ ಕಾರ್ಯಕ್ರಮದ ಮೇಲ್ವಿಚಾರಣೆ ಮತ್ತು ಸಮನ್ವಯವನ್ನು ವಹಿಸಬೇಕು ಎಂದು ಸೂಚಿಸಿದೆ.
ನಾವು ಎರಡೂ ಪಕ್ಷಗಳ ಶಾಂತಿಯುತ ಸಹಬಾಳ್ವೆಯನ್ನು ಬಯಸುತ್ತೇವೆ. ಕೆಲವು ರೀತಿಯ ಪರಸ್ಪರ ತಿಳುವಳಿಕೆ ಮತ್ತು ಏಕರೂಪತೆ ಇದ್ದರೆ ಅದನ್ನು ಸಾಧಿಸಬಹುದು. ದಯವಿಟ್ಟು ಆದೇಶವನ್ನು ಪಾಲಿಸಿ. ಸಂವಿಧಾನ ಮತ್ತು ನೈಸರ್ಗಿಕ ಸಂಪನ್ಮೂಲಗಳು ಎಲ್ಲರಿಗೂ ಸೇರಿವೆ. ಇನ್ನೊಬ್ಬರಿಗೆ ತೊಂದರೆಯಾಗದಂತೆ ಪ್ರತಿಯೊಬ್ಬರೂ ಧಾರ್ಮಿಕ ಸ್ವಾತಂತ್ರ್ಯವನ್ನು ಅನುಭವಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ತಿರುಪರಂಕುಂದ್ರಂ ಬೆಟ್ಟದ ಮೇಲಿರುವ ಕಲ್ಲಿನ ಕಂಬದಲ್ಲಿ ಕಾರ್ತಿಕ ದೀಪವನ್ನು ಬೆಳಗಿಸಲು ಕೋರಿ ಕೆಲವು ದೇವಾಲಯ ಭಕ್ತರು ಅರ್ಜಿಗಳನ್ನು ಸಲ್ಲಿಸಿದ ನಂತರ, ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಗಳ ಮೇಲೆ ಈ ತೀರ್ಪು ನೀಡಲಾಗಿದೆ.
ಡಿಸೆಂಬರ್ 1ರಂದು ಮದ್ರಾಸ್ ಹೈಕೋರ್ಟ್ ನ ಮಧುರೈ ಪೀಠದ ನ್ಯಾಯಮೂರ್ತಿ ಜಿ. ಸ್ವಾಮಿನಾಥನ್ ಅವರು ಹಿಂದೂ ತಮಿಳರ್ ಕಚ್ಚಿ ಸಂಸ್ಥಾಪಕ ರಾಮ ರವಿಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಕೈಗೆತ್ತಿಕೊಂಡು ತಿರುಪರಂಕುಂದ್ರಂ ಬೆಟ್ಟದ ‘ದೀಪತೂಣ್’ ಸ್ತಂಭದಲ್ಲಿ ಭಕ್ತರು ದೀಪ ಬೆಳಗಲು ಅನುಮತಿ ನೀಡಿದ್ದರು. ಇದಾದ ಬಳಿಕ ವಿವಾದ ಭುಗಿಲೆದ್ದಿತು.
ಡಿಸೆಂಬರ್ 3ರಂದು ಆಚರಿಸಲಾಗುವ ‘ಕಾರ್ತಿಗೈ ದೀಪಂ’ (ಕಾರ್ತಿಕ ದೀಪ) ಹಬ್ಬದ ಸಂದರ್ಭದಲ್ಲಿ ದೀಪ ಬೆಳಗಲು ಅವಕಾಶ ನೀಡದಿದ್ದ ಹಿನ್ನೆಲೆಯಲ್ಲಿ, ರವಿಕುಮಾರ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದರು. ಅದೇ ದಿನ ಏಕಸದಸ್ಯ ಪೀಠವು ರವಿಕುಮಾರ್ ಸೇರಿದಂತೆ ಇತರ 10 ಮಂದಿಗೆ ದೀಪತೂಣ್ ನಲ್ಲಿ ದೀಪ ಬೆಳಗಲು ಅವಕಾಶ ಮಾಡಿಕೊಟ್ಟಿತು. ಇವರಿಗೆ CISF ಸಿಬ್ಬಂದಿಯಿಂದ ಭದ್ರತೆ ಒದಗಿಸಲು ಆದೇಶಿಸಿತು. ಆದರೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಉಲ್ಲೇಖಿಸಿ ಪೊಲೀಸರು ಮತ್ತೆ ಬೆಟ್ಟದ ತಪ್ಪಲಿನಲ್ಲಿ ಗುಂಪನ್ನು ತಡೆದಿದ್ದರು.
►ವಿವಾದ ಆರಂಭವಾದದ್ದು ಹೇಗೆ?
ತಿರುಪರಂಕುಂದ್ರಂ ಬೆಟ್ಟವು ಮುರುಗನ್ ದೇವರ ಆರು ಪವಿತ್ರ ಸ್ಥಳಗಳಾದ ಅರುಪದೈ ವೀಡುಗಳಲ್ಲಿ ಒಂದಾಗಿದೆ. ಈ ಬೆಟ್ಟವು ಪ್ರಾಚೀನ ಬಂಡೆಯಲ್ಲಿ ಕೊರೆದ ಗುಹಾ ದೇವಾಲಯವನ್ನು ಹೊಂದಿದೆ. ಇದು ತಮಿಳುನಾಡಿನಾದ್ಯಂತ ಭಕ್ತರಿಗೆ ಬಹುಕಾಲದಿಂದ ಯಾತ್ರಾ ಸ್ಥಳವಾಗಿದೆ. ಇಲ್ಲಿ ಒಂದು ದರ್ಗಾವೂ ಇದೆ.
ಕೇವಲ ಮೂರು ಕಿಮೀ ಅಂತರದಲ್ಲಿರುವ ದೇವಾಲಯ ಮತ್ತು ದರ್ಗಾದ ಅಸ್ತಿತ್ವವು ಬೆಟ್ಟದ ಮೇಲಿನ ಹಕ್ಕುಗಳ ಕುರಿತು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಉದ್ವಿಗ್ನತೆಯನ್ನು ಹುಟ್ಟುಹಾಕಿತು. 1920ರಲ್ಲಿ ಬೆಟ್ಟದ ಮಾಲೀಕತ್ವದ ಕುರಿತು ದೇವಾಲಯ ಮತ್ತು ದರ್ಗಾ ನಡುವೆ ವಿವಾದ ಉಂಟಾಯಿತು.
ನಂತರ ಪ್ರಿವಿ ಕೌನ್ಸಿಲ್ ದೃಢೀಕರಿಸಿದ ಸಿವಿಲ್ ನ್ಯಾಯಾಲಯದ ತೀರ್ಪು, ದರ್ಗಾಗೆ ಸಂಬಂಧಿಸಿದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ, ಬೆಟ್ಟವು ಸುಬ್ರಮಣ್ಯಸ್ವಾಮಿ ದೇವಸ್ಥಾನಕ್ಕೆ ಸೇರಿದೆ ಎಂದು ಹೇಳಿತು. ಈ ತೀರ್ಪು ಬೆಟ್ಟದ ಮಾಲೀಕತ್ವವನ್ನು ಇತ್ಯರ್ಥಪಡಿಸಿತು. ಆದರೆ ಇದು ಆಚರಣೆಗಳು, ಪದ್ಧತಿಗಳು ಅಥವಾ ದೀಪ ಬೆಳಗುವ ಸಂಪ್ರದಾಯವನ್ನು ಸ್ಪಷ್ಟಪಡಿಸಲಿಲ್ಲ. ಪ್ರಿವಿ ಕೌನ್ಸಿಲ್ ಆ ಕಾಲದಲ್ಲಿ ಬ್ರಿಟಿಷ್ ಆಡಳಿತಕ್ಕೆ ಸಲಹೆ ನೀಡುವ ಉನ್ನತ ಸಂಸ್ಥೆಯಾಗಿತ್ತು.
1994ರಲ್ಲಿ ಭಕ್ತರೊಬ್ಬರು ದೇವಾಲಯದಲ್ಲಿರುವ ಉಚಿಪಿಳ್ಳರ್ ಕೋವಿಲ್ ಮಂಟಪದಿಂದ ದರ್ಗಾದ ಸಮೀಪವಿರುವ ಬೆಟ್ಟದ ತುದಿಯಲ್ಲಿನ ದೀಪತೂಣ್ ನಲ್ಲಿ ದೀಪ ಬೆಳಗಿಸಲು ಅನುಮತಿ ಕೋರಿ ಮದ್ರಾಸ್ ಹೈಕೋರ್ಟ್ ಮೊರೆ ಹೋದರು. ಇದರಿಂದ ದೀಪ ಬೆಳಗುವ ಆಚರಣೆಯ ಸ್ಥಳವೇ ವಿವಾದಾಸ್ಪದವಾಯಿತು.
1996ರಲ್ಲಿ ಮದ್ರಾಸ್ ಹೈಕೋರ್ಟ್, ಉಚಿಪಿಳ್ಳರ್ ಕೋವಿಲ್ ಬಳಿಯ ಸುಬ್ರಮಣ್ಯಸ್ವಾಮಿ ದೇವಸ್ಥಾನದ ಮಂಟಪದಲ್ಲಿರುವ ಸಾಂಪ್ರದಾಯಿಕ ಸ್ಥಳದಲ್ಲೇ ದೀಪವನ್ನು ಬೆಳಗಿಸಬೇಕು ಎಂದು ಆದೇಶಿಸಿತು.
ಆದರೆ ಈ ತೀರ್ಪು ಭವಿಷ್ಯದಲ್ಲಿ ದೇವಾಲಯದ ಆಡಳಿತ ಮಂಡಳಿಗೆ, ರಾಜ್ಯ ಸರ್ಕಾರದ ಹಿಂದೂ ಧಾರ್ಮಿಕ ಮತ್ತು ದತ್ತಿ (HR&CE) ಇಲಾಖೆಯ ಅನುಮತಿಯೊಂದಿಗೆ, ಬೆಟ್ಟದ ಮೇಲೆ ದೀಪ ಬೆಳಗಿಸಲು ಪರ್ಯಾಯ ಸ್ಥಳವನ್ನು ಆಯ್ಕೆ ಮಾಡಲು ಅವಕಾಶ ನೀಡಿತು. ಆ ಸ್ಥಳವು ದರ್ಗಾಯಿಂದ ದೂರವಿರಬೇಕು ಎಂಬ ಷರತ್ತನ್ನೂ ವಿಧಿಸಿತು. ಕಾನೂನು ದೃಷ್ಟಿಕೋನದಿಂದ, ತಿರುಪರಂಕುಂದ್ರಂ ಬೆಟ್ಟದ ಮೇಲೆ ಕಾರ್ತಿಗೈ ದೀಪವನ್ನು ಹಚ್ಚಲು ನ್ಯಾಯಾಲಯಗಳು ಗುರುತಿಸಿರುವ ಏಕೈಕ ಸ್ಥಳ ಮಂಟಪವೇ ಆಗಿದೆ.
ದೀಪ ಹಚ್ಚುವ ಸ್ಥಳದ ಬಗ್ಗೆ ವಾದಿಸುವವರು, ಉಚಿಪಿಳ್ಳೈಯರ್ ಕೋವಿಲ್ನಲ್ಲಿ ದೀಪ ಹಚ್ಚುವ ಪ್ರಸ್ತುತ ಪದ್ಧತಿ ಆಗಮ ಶಾಸ್ತ್ರಗಳನ್ನು ಉಲ್ಲಂಘಿಸುತ್ತದೆ ಎಂದು ವಾದಿಸುತ್ತಾರೆ. ಆದರೆ ದೇವಾಲಯದ ಆಡಳಿತವು, ಉಚಿಪಿಳ್ಳೈಯರ್ ಕೋವಿಲ್ ಮಂಟಪವೇ ಆಚರಣೆಗೆ ಸಾಂಪ್ರದಾಯಿಕ ಸ್ಥಳವಾಗಿದ್ದು, ಈ ಪದ್ಧತಿ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ನಡೆದುಕೊಂಡು ಬಂದಿದೆ ಎಂದು ನಿರಂತರವಾಗಿ ಸಮರ್ಥಿಸಿಕೊಂಡಿದೆ.
---
►ದೀಪ ಬೆಳಗಿಸಲು ಈ ಹಿಂದೆಯೂ ಮನವಿ ಸಲ್ಲಿಸಲಾಗಿತ್ತು
2014ರಲ್ಲಿ ಮತ್ತೊಬ್ಬ ಭಕ್ತರು ದೀಪಸ್ತಂಭದಲ್ಲಿ ದೀಪ ಬೆಳಗಿಸಲು ಅನುಮತಿ ಕೋರಿ ಹೈಕೋರ್ಟ್ಗೆ ಮೊರೆ ಹೋದರು. ನ್ಯಾಯಮೂರ್ತಿ ಎಂ. ವೇಣುಗೋಪಾಲ್ ಅವರು ಹಲವು ಕಾರಣಗಳಿಂದ ಆ ಅರ್ಜಿಯನ್ನು ವಜಾಗೊಳಿಸಿದರು.
ಅರ್ಜಿದಾರರು ದೇವಾಲಯದ ಆಚರಣೆಗಳ ಮೇಲೆ ಕಾನೂನುಬದ್ಧ ಹಕ್ಕನ್ನು ಸ್ಥಾಪಿಸಲು ವಿಫಲರಾಗಿದ್ದಾರೆ ಹಾಗೂ ಅವರಿಗೆ ಸ್ಥಳದ ಹಕ್ಕಿಲ್ಲ ಎಂದು ನ್ಯಾಯಾಲಯ ತಿಳಿಸಿತು. ನ್ಯಾಯಾಲಯಗಳು ಶಾಸನಬದ್ಧ ಕರ್ತವ್ಯಗಳನ್ನು ಉಲ್ಲಂಘಿಸದ ಹೊರತು ಆಧ್ಯಾತ್ಮಿಕ ಅಥವಾ ಐಚ್ಛಿಕ ಆಚರಣೆಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಧಾರ್ಮಿಕ ಆದ್ಯತೆಗಳನ್ನು ಜಾರಿಗೊಳಿಸಲು ನ್ಯಾಯಾಲಯ ಆದೇಶ ನೀಡಲು ಸಾಧ್ಯವಿಲ್ಲ ಎಂದು ಪೀಠ ಪುನರುಚ್ಚರಿಸಿತು.
ಇದಲ್ಲದೆ, ದೇವಾಲಯವು ಹಿಂದಿನ ವರ್ಷಗಳಲ್ಲಿ ಅನುಸರಿಸಿದ್ದ ಕ್ರಮಗಳನ್ನೇ ಮುಂದುವರಿಸುತ್ತಿದ್ದು, ಯಾವುದೇ ಆಡಳಿತಾತ್ಮಕ ವೈಫಲ್ಯ ಕಂಡುಬಂದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಅಂದರೆ, ಭಕ್ತರು ರಿಟ್ ಅರ್ಜಿಗಳ ಮೂಲಕ ಧಾರ್ಮಿಕ ಆದ್ಯತೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂಬುದು ತೀರ್ಪಿನಿಂದ ಸ್ಪಷ್ಟವಾಗಿದೆ.
ಅರ್ಜಿದಾರರು ಮೇಲ್ಮನವಿ ಸಲ್ಲಿಸಿದಾಗ, 2017ರಲ್ಲಿ ಹೈಕೋರ್ಟ್ನ ವಿಭಾಗೀಯ ಪೀಠವು ಈ ಆದೇಶವನ್ನು ಎತ್ತಿಹಿಡಿದು ಮೂರು ಪ್ರಮುಖ ಅಂಶಗಳನ್ನು ಗಮನಿಸಿತು. ದೀಪವನ್ನು ಬೆಳಗಿಸಬೇಕಾದ ನಿಖರ ಸ್ಥಳವನ್ನು ನ್ಯಾಯಾಲಯಗಳು ನಿರ್ದೇಶಿಸಲು ಸಾಧ್ಯವಿಲ್ಲ, ಏಕೆಂದರೆ ಅದು ದೇವಾಲಯ ಆಡಳಿತದ ವಿಶೇಷಾಧಿಕಾರವಾಗಿದೆ. ಭಕ್ತರಾಗಿರುವ ಅರ್ಜಿದಾರರು ಯಾವುದೇ ನಿರ್ದಿಷ್ಟ ಸ್ಥಳದಲ್ಲಿ ದೀಪ ಬೆಳಗಿಸುವ ವೈಯಕ್ತಿಕ ಕಾನೂನು ಹಕ್ಕನ್ನು ಹೊಂದಿಲ್ಲ. ದೇವಾಲಯವು ತನ್ನ ಕರ್ತವ್ಯಗಳನ್ನು ಉಲ್ಲಂಘಿಸದೆ ಕಾರ್ಯನಿರ್ವಹಿಸುವವರೆಗೆ, ಆಚರಣೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡಬಾರದು ಎಂದು ಪೀಠ ಹೇಳಿತು. HR&CE ಕಾಯ್ದೆಯಡಿಯಲ್ಲಿ ದೇವಾಲಯದ ಸ್ವಾಯತ್ತತೆ ಆಡಳಿತಾತ್ಮಕ ವಿವೇಚನೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
---
►ಆನಂತರ ಏನಾಯಿತು?
ಅರ್ಜಿದಾರ ರಾಮ ರವಿಕುಮಾರ್ ಮತ್ತೆ ಸಲ್ಲಿಸಿದ ಅರ್ಜಿಯಲ್ಲಿ ಮೂರು ಪ್ರಮುಖ ವಾದಗಳನ್ನು ಮಂಡಿಸಿದರು. ಮೊದಲನೆಯದಾಗಿ, 1920ರ ತೀರ್ಪು ಇಡೀ ಬೆಟ್ಟದ ಮೇಲೆ ದೇವಾಲಯದ ಮಾಲೀಕತ್ವವನ್ನು ಸ್ಥಾಪಿಸುತ್ತದೆ. ಅಂದರೆ ದೇವಾಲಯದ ಆಸ್ತಿಯೊಳಗೆ ಎಲ್ಲಿಯಾದರೂ ದೀಪವನ್ನು ಕಾನೂನುಬದ್ಧವಾಗಿ ಬೆಳಗಿಸಬಹುದು ಎಂದು ವಾದಿಸಿದರು.
ಎರಡನೆಯದಾಗಿ, ಯಾವುದೇ ನ್ಯಾಯಾಂಗ ಆದೇಶವು ದೀಪತೂಣ್ ನಲ್ಲಿ ದೀಪ ಬೆಳಗಿಸುವುದನ್ನು ನಿಷೇಧಿಸಿಲ್ಲ ಎಂದು ಹೇಳಿದರು. ಮೂರನೆಯದಾಗಿ, 2025ರಲ್ಲಿ ದೀಪತೂಣ್ ಅನ್ನು ಆಚರಣೆಯ ಸ್ಥಳವೆಂದು ಪರಿಗಣಿಸಲು ದೇವಾಲಯ ನಿರಾಕರಿಸಿರುವುದಕ್ಕೆ ಯಾವುದೇ ಸಮಂಜಸ ಕಾರಣವಿಲ್ಲ; ಇದು ಕಾರ್ಯವಿಧಾನದ ನ್ಯಾಯಸಮ್ಮತತೆಯನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದರು. ಈ ವಾದಗಳು ಧಾರ್ಮಿಕ ಸ್ಥಳದ ಪ್ರಶ್ನೆಯನ್ನು ಮತ್ತೆ ಚರ್ಚೆಗೆ ತಂದವು.
---
►ರಾಜಕೀಯ ವಿವಾದ
ಡಿಸೆಂಬರ್ 1 ಮತ್ತು ಡಿಸೆಂಬರ್ 3ರಂದು ಏಕಸದಸ್ಯ ಪೀಠ ನೀಡಿದ ಆದೇಶಗಳಿದ್ದರೂ, ಗುರುವಾರ ಜಿಲ್ಲಾಡಳಿತವು ಭಕ್ತರ ಗುಂಪೊಂದು ದೀಪತೂಣ್ಗೆ ತೆರಳುವುದನ್ನು ತಡೆದಿತು. ಇದರಿಂದ ರಾಜ್ಯದ ವಿರೋಧ ಪಕ್ಷಗಳು ಡಿಎಂಕೆ ಸರ್ಕಾರ ಹಿಂದೂಗಳಿಗೆ ದೀಪ ಹಚ್ಚಲು ಬಿಡುತ್ತಿಲ್ಲ ಎಂದು ಆರೋಪಿಸಿತು. ಆದರೆ ಡಿಎಂಕೆ ಸರ್ಕಾರವು ಹೈಕೋರ್ಟ್ ನ ಹಿಂದಿನ ಆದೇಶಗಳನ್ನು ಪಾಲಿಸುತ್ತಿದೆ ಎಂದು ಪ್ರತಿಕ್ರಿಯಿಸಿತು.







