ಬಂಡೀಪುರದಲ್ಲಿ ಸಫಾರಿ ವೇಳೆ ಪ್ರವಾಸಿಗರ ಕ್ಯಾಮರಾಗೆ ಸೆರೆಸಿಕ್ಕ ಹುಲಿರಾಯ

ಗುಂಡ್ಲುಪೇಟೆ: ತಾಲೂಕಿನಲ್ಲಿ ಕಳೆದ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ಈ ಬಾರಿ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಹಸಿರಿನ ಛಾಯೆ ಇನ್ನೂ ಉಳಿದುಕೊಂಡಿದ್ದು, ಪ್ರಾಣಿಗಳಿಗೆ ಮೇವಿನ ಕೊರತೆ ಕಂಡುಬಂದಿಲ್ಲ. ಇದರ ಪರಿಣಾಮ ಸಫಾರಿಗೆ ತೆರಳುವ ಪ್ರವಾಸಿಗರಿಗೆ ಹಾಗೂ ಕೇರಳ ತಮಿಳುನಾಡು ಸಂಪರ್ಕಿಸುವ ಅರಣ್ಯದೊಳಗೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಬಂಡೀಪುರದ ಕಾಡುಪ್ರಾಣಿಗಳ ದರ್ಶನ ಸಿಗುತ್ತಿವೆ.
ಕಾಡಿನೊಳಗೆ ಹಾಗೂ ರಸ್ತೆಯ ಬದಿ ಹುಲಿ, ಆನೆ, ಚಿರತೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಪ್ರವಾಸಿಗರಲ್ಲಿ ಹೆಚ್ಚು ಸಂತಸ ಮೂಡಿಸುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಮಳೆ ವಾಡಿಕೆಗಿಂತ ಕಡಿಮೆಯಾಗಿದ್ದರಿಂದ ಕೆರೆಕಟ್ಟೆಗಳಲ್ಲಿನ ನೀರಿನ ಪ್ರಮಾಣ ಕುಸಿದಿತ್ತು. ಕಾಡು ಪೂರ್ಣವಾಗಿ ಒಣಗಿ ಪ್ರಾಣಿಗಳಿಗೆ ಕುಡಿಯುವ ನೀರಿನ ತೊಂದರೆ ಕಾಡಿತ್ತು.
ನೀರಿನ ದಾಹ ನೀಗಿಸಲು ಬಂಡೀಪುರ ಅರಣ್ಯ ಇಲಾಖೆ ಸೋಲಾರ್ ಪಂಪ್ಗಳನ್ನು ಬಳಸಿಕೊಂಡು ಕೆಲವು ಕೆರೆಗಳಿಗೆ ಅಲ್ಪಪ್ರಮಾಣದ ನೀರು ಒದಗಿಲಾಗಿತ್ತು. ಇದರಿಂದಾಗಿ ಪ್ರಾಣಿಗಳು ಹೆಚ್ಚಾಗಿ ದರ್ಶನ ನೀಡುತ್ತಿರಲಿಲ್ಲ. ಕಳೆದ ವರ್ಷದ ಜೂನ್ನಿಂದ ನವೆಂಬರ್ವರೆಗೆ ತಾಲೂಕಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಕಾಡಿನಲ್ಲಿರುವ ಕೆರೆಕಟ್ಟೆಗಳಲ್ಲಿ ನೀರು ಮತ್ತು ಮೇವು ಸಮೃದ್ಧವಾಗಿದೆ.
ಕಾಡು ಕೂಡ ಹಸಿರಾಗಿ ಕಂಗೊಳಿಸುತ್ತಿದ್ದು, ಪ್ರಾಣಿಗಳು ಅಲ್ಲಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಕಾಡು ಒಣಗಿದರೆ ಹುಲಿ ಚಿರತೆಗಳು ಅಪರೂಪಕ್ಕೆ ಕಾಣ ಸಿಗುತ್ತವೆ. ಮಳೆಯಿಂದ ಪರಿಸರ ಹಸಿರಾದರೆ ಸಫಾರಿ ಹೋಗುವವರಿಗೆ ಪ್ರತಿನಿತ್ಯ ಸಫಾರಿ ವಲಯದಲ್ಲಿ ಹುಲಿ, ಚಿರತೆ ಸಹಿತ ವನ್ಯಜೀವಿಗಳು ಹೆಚ್ಚಾಗಿ ಕಾಣಸಿಗುತ್ತವೆ. ಹೆಚ್ಚು ನೀರಿರುವ ಕೆರೆಗಳ ಬಳಿ ಪ್ರಾಣಿಗಳು ವಿಶ್ರಾಂತಿ ತೆಗೆದು ಕೊಳ್ಳುತ್ತಿರುವ ದೃಶ್ಯಗಳು ಸಾಮಾನ್ಯ ವಾಗಿ ಕಾಣಸಿಗುತ್ತವೆ ಎಂದು ಸಫಾರಿಗೆ ಕರೆದೊಯ್ಯುವ ಗೈಡ್ಗಳು ತಿಳಿಸಿದ್ದಾರೆ.
ಸಫಾರಿಗೆ ಪ್ರಾಣಿಗಳನ್ನು ನೋಡಬೇಕು ಎಂದು ಬರುವವರ ಸಂಖ್ಯೆ ಹೆಚ್ಚಾಗಿದ್ದು ಮುಕ್ತ ವಲಯದ ಅರಣ್ಯ ಪ್ರದೇಶವಾದ್ದರಿಂದ ಪ್ರಾಣಿಗಳು ಕಾಣಿಸುತ್ತವೆ ಎಂಬ ಖಚಿತತೆ ಇರುವುದಿಲ್ಲ. ಕೆಲವೊಮ್ಮೆ ನಿರೀಕ್ಷೆಗಿಂತಲೂ ಹೆಚ್ಚು ಪ್ರಾಣಿಗಳು ಕಾಣಸಿಗುತ್ತವೆ. ಕೆಲವೊಮ್ಮೆ ಪ್ರಾಣಿಗಳ ದರ್ಶನವೇ ಆಗುವುದಿಲ್ಲ. ಕಾಡು ಹಸಿರಾಗಿದ್ದರೆ ಕೆರೆಗಳಲ್ಲಿ ನೀರು ಕುಡಿಯಲು ಪ್ರಾಣಿಗಳು ದಿನಕ್ಕೆ ಒಂದು ಬಾರಿಯಾದರೂ ಬರುತ್ತವೆ. ಹುಲಿ ಚಿರತೆಗಳ ದರ್ಶನವಾಗುತ್ತದೆ. ಆನೆಗಳ ಗುಂಪು ಕೂಡ ಹೆಚ್ಚು ಕಂಡು ಬರುತ್ತಿದೆ ಎಂದು ತಿಳಿಸಿದ್ದಾರೆ.
ಕೆರೆಗಳಲ್ಲಿ ಪ್ರಾಣಿಗಳಿಗೆ ನೀರು ಸಂಗ್ರಹ
ಇತ್ತೀಚೆಗೆ ಸಫಾರಿಗೆ ಬಂದ ಪ್ರವಾಸಿಗರಿಗೆ ಬೇಸರವಾಗಿಲ್ಲ, ಹೆಚ್ಚು ಪ್ರಾಣಿಗಳ ದರ್ಶನವಾಗಿದೆ. ಕಾಡಿನ ಭಾಗದಲ್ಲಿ ಉತ್ತಮ ಪ್ರಮಾಣದ ಮಳೆ ಬಿದ್ದಿರುವುದರಿಂದ ಕೆರೆಗಳಲ್ಲಿ ನೀರು ಸಂಗ್ರಹ ಇದೆ. ಕಾಡು ಹಸಿರಾಗಿರುವುದರಿಂದ ಹೆಚ್ಚು ಪ್ರಾಣಿಗಳು ಕಾಣುತ್ತಿದೆ. ಕುಡಿಯುವ ನೀರು ಮತ್ತು ಮೇವಿಗೆ ತೊಂದರೆಯಿಲ್ಲ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪ್ರಭಾಕರನ್ ತಿಳಿಸಿದ್ದಾರೆ.