“ಸಮಯ ಯಾರಿಗೂ ಕಾಯುವುದಿಲ್ಲ”: 14 ಕೋಟಿ ರೂ. ವೆಚ್ಚದಲ್ಲಿ 33 ವರ್ಷ ವಿಶ್ವಪರ್ಯಟನೆ ಮಾಡಿದ ಚೀನೀ ಉದ್ಯಮಿ!

ಸಾಂದರ್ಭಿಕ ಚಿತ್ರ | Photo Credit : magnific.com
ತಮ್ಮ ಸಮಯವನ್ನು ಮನೆ ಮತ್ತು ಪ್ರಯಾಣದ ನಡುವೆ ಹಂಚಿಕೊಂಡರು. ಒಂದು ತಿಂಗಳು ಚೀನಾದಲ್ಲಿದ್ದರೆ, ಮತ್ತೊಂದು ತಿಂಗಳು ವಿದೇಶದಲ್ಲಿರುತ್ತಿದ್ದರು.
53 ವರ್ಷ ವಯಸ್ಸಿನ ಚೀನಾದ ಉದ್ಯಮಿ ಚೆನ್ ಜಿನ್ವೈ ಅವರಿಗೆ ಪ್ರಪಂಚ ಸುತ್ತುವುದು ರಜಾದ ಮಜಾ ಕಳೆಯುವ ಉದ್ದೇಶವಾಗಿರಲಿಲ್ಲ. 33 ವರ್ಷಗಳಲ್ಲಿ 233 ದೇಶ, ಪ್ರಾಂತ್ಯ ಮತ್ತು ವಿವಿಧ ಪ್ರದೇಶಗಳಿಗೆ ಅವರು ಭೇಟಿ ನೀಡಿದ್ದಾರೆ. 1990ರ ದಶಕದಲ್ಲಿ ಕೆಲವು ಪ್ರವಾಸಗಳು ಜೀವಮಾನದ ಪರಿಶೋಧನಾ ಪ್ರಯಾಣವಾಗಿತ್ತು. ಪೆರು ಪ್ರವಾಸದ ಜೊತೆಗೆ ಕೊನೆಗೊಂಡ ತನ್ನ ಮಹತ್ವಾಕಾಂಕ್ಷೆಯ ಜಾಗತಿಕ ಪ್ರವಾಸವನ್ನು ಪೂರ್ಣಗೊಳಿಸಿ ಚೆನ್ ಇತ್ತೀಚೆಗೆ ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದ ಹುಟ್ಟೂರು ಝುಜಿಗೆ ಮರಳಿದ್ದಾರೆ. ವರದಿಗಳ ಪ್ರಕಾರ ಚೀನಾದಲ್ಲಿ ಇದಕ್ಕೆ ಮೊದಲು 70 ಮಂದಿ ಮಾತ್ರ 233 ದೇಶಗಳು, ಪ್ರದೇಶಗಳು ಮತ್ತು ಪ್ರಾಂತ್ಯಗಳಿಗೆ ಪ್ರಯಾಣಿಸಿದ್ದಾರೆ.
ಜಗತ್ತಿನಲ್ಲಿ 195 ಅಧಿಕೃತವಾಗಿ ಗುರುತಿಸಲಾದ ದೇಶಗಳಿವೆ. ಕೆಲವರು ಅವಲಂಬಿತ ಪ್ರದೇಶಗಳ, ಪ್ರಾಂತ್ಯಗಳು ಮತ್ತು ವಿಶೇಷ ಪ್ರದೇಶಗಳನ್ನು ಸೇರಿಸುವ ಮೂಲಕ 233 ಅಥವಾ ಅದಕ್ಕಿಂತ ಹೆಚ್ಚಿನದನ್ನು ಎಣಿಸುತ್ತಾರೆ. ಯಂತ್ರೋಪಕರಣಗಳ ಕಂಪನಿಯ ಮಾಲಕರಾದ ಚೆನ್ ತಮ್ಮ ವಿಶ್ವ ಪರ್ಯಟನೆಗೆ ಸುಮಾರು 14 ಕೋಟಿ ರೂ. ಖರ್ಚು ಮಾಡಿದ್ದಾರೆ. ಹಾಗೆಂದು ತಮ್ಮ ಪ್ರಯಾಣದ ಉದ್ದೇಶಕ್ಕಾಗಿ ಕುಟುಂಬ ಅಥವಾ ಉದ್ಯಮದಿಂದ ದೂರ ಸರಿಯಲಿಲ್ಲ. ತಮ್ಮ ಸಮಯವನ್ನು ಮನೆ ಮತ್ತು ಪ್ರಯಾಣದ ನಡುವೆ ಹಂಚಿಕೊಂಡರು. ಒಂದು ತಿಂಗಳು ಚೀನಾದಲ್ಲಿದ್ದರೆ, ಮತ್ತೊಂದು ತಿಂಗಳು ವಿದೇಶದಲ್ಲಿರುತ್ತಿದ್ದರು.
1993ರಲ್ಲಿ ಅವರು ಸಿಂಗಾಪುರ, ಮಲೇಷ್ಯಾ ಮತ್ತು ಥಾಯ್ಲಂಡ್ಗೆ ಪ್ರಯಾಣಿಸಿದಲ್ಲಿಂದ ಅವರ ಪ್ರವಾಸ ಪ್ರಾರಂಭವಾಗಿತ್ತು. ಇಂಟರ್ನೆಟ್ ಆಗಷ್ಟೇ ಬಂದಿದ್ದ ಕಾಲದಲ್ಲಿ ಅವರು ಪುಸ್ತಕಗಳ ಬದಲಾಗಿ ಸ್ವತಃ ದೇಶಗಳನ್ನು ಭೇಟಿ ಮಾಡಿ ನೋಡಲು ಬಯಸಿದ್ದರು. ಮೊದಲ ಪ್ರವಾಸವು ಅವರಲ್ಲಿ ದೊಡ್ಡ ಮಹತ್ವಾಕಾಂಕ್ಷೆ ಹುಟ್ಟು ಹಾಕಿತು.
ಧ್ರುವ ಪ್ರದೇಶಗಳು ಸೇರಿದಂತೆ ಪ್ರಯಾಣದ ಆರಂಭದಲ್ಲಿ ಉದ್ದೇಶಪೂರ್ವಕವಾಗಿ ಕಷ್ಟದ ಯಾತ್ರೆಗಳನ್ನು ನಡೆಸಿದರು. ಅಂಟಾರ್ಕ್ಟಿಕಾವನ್ನು ತಲುಪಲು ಎರಡು ಬಾರಿ ಪ್ರಯತ್ನಿಸಿ ಸಫಲರಾದರು. 2015ರಲ್ಲಿ ಅವರು ಫ್ರೆಂಚ್ ಕ್ರೂಸ್ ಹಡಗು ಲೆ ಬೊರಿಯಾಲ್ನಲ್ಲಿ ಹೊರಟರು. ಆದರೆ ಹಡಗು ವಿದ್ಯುತ್ ವೈಫಲ್ಯ ಎದುರಿಸಿ ಮೂರನೇ ದಿನ ಕಪ್ಪು ಹೊಗೆ ಹೊರಸೂಸಲು ಪ್ರಾರಂಭಿಸಿದ ಕಾರಣ ಪ್ರವಾಸ ಕೈಬಿಡಬೇಕಾಯಿತು.
2016ರ ಜನವರಿಯಲ್ಲಿ ಅವರು ಅಂಟಾರ್ಕ್ಟಿಕಾವನ್ನು ಯಶಸ್ವಿಯಾಗಿ ತಲುಪಿದರು. ನ್ಯೂಝಿಲೆಂಡ್ನ ದೂರದ ಪ್ರದೇಶ ಟೊಕೆಲಾವ್ ಅವರಿಗೆ ದೊಡ್ಡ ಸವಾಲಾಗಿತ್ತು. ಚೆನ್ ಪ್ರವಾಸವನ್ನು ಎಚ್ಚರಿಕೆಯಿಂದ ಯೋಜಿಸಿ 2019ರಲ್ಲಿ ನ್ಯೂಝಿಲೆಂಡ್ಗೆ ಪ್ರಯಾಣಿಸಿದ್ದರು. ಆದರೆ ಕೋವಿಡ್ ಕಾರಣದಿಂದ ಪ್ರಯಾಣ ರದ್ದಾಗಿತ್ತು. ಅಂತಿಮವಾಗಿ ಈ ವರ್ಷ ಟೊಕೆಲಾವ್ ತಲುಪಿರುವುದು ನಂಬಲಾಗದಷ್ಟು ರೋಮಾಂಚಕಾರಿ ಎನ್ನುತ್ತಾರೆ ಚೆನ್.
ಪ್ರಯಾಣದಲ್ಲಿ ಅಪಾಯಗಳೂ ಇದ್ದವು. ಆಫ್ರಿಕಾದಲ್ಲಿದ್ದಾಗ ಮಲೇರಿಯಾಗೆ ತುತ್ತಾದರು. ಗ್ರೀಸ್ನಲ್ಲಿದ್ದಾಗ ಭೂಕಂಪ ಎದುರಿಸಿದರು. ಚೆನ್ ಗಮ್ಯ ಸ್ಥಾನಗಳನ್ನು ತಲುಪುವುದಕ್ಕಿಂತ ಹೆಚ್ಚಿನ ಕಲಿಕೆಗೆ ಪ್ರಯತ್ನಿಸಿದರು. ಪ್ರಸಿದ್ಧ ಆಕರ್ಷಣೀಯ ಸ್ಥಳಗಳಿಗೆ ಭೇಟಿ ನೀಡುವ ಬದಲಾಗಿ ಸ್ಥಳೀಯ ಸಂಸ್ಕೃತಿ ಕಲಿಯುತ್ತಾ ಪ್ರತಿ ಸ್ಥಳದಲ್ಲಿ ಸಾಧ್ಯವಾದಷ್ಟು ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿದರು. ಅವರ ಪ್ರಯಾಣದಲ್ಲಿ 198 ದೇಶಗಳ ಕರೆನ್ಸಿಗಳನ್ನು ಸಂಗ್ರಹಿಸಿದ್ದಾರೆ. ನಂತರ ಆ ಸಂಗ್ರಹವನ್ನು ಕ್ಸು ಕ್ಸಿಯಾಕೆ ಮೆಮೊರಿಯಲ್ ಹಾಲ್ಗೆ ದಾನ ನೀಡಿದ್ದಾರೆ. ಚೀನಾದ ಮಿಂಗ್ ರಾಜವಂಶದ ಪ್ರಸಿದ್ಧ ಭೂಗೋಳಶಾಸ್ತ್ರಜ್ಞ ಮತ್ತು ಪರಿಶೋಧಕ ಕ್ಸು ಕ್ಸಿಯಾಕೆ ಅವರನ್ನು ದೇಶದ ಆರಂಭಿಕ ಶ್ರೇಷ್ಠ ಪ್ರಯಾಣ ಬರಹಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ.
ಇದೀಗ ಚೆನ್ ತಮ್ಮ ಮಕ್ಕಳು ಮತ್ತು ಪೋಷಕರ ಜೊತೆಗೆ ಹೆಚ್ಚು ಸಮಯ ಕಳೆಯುವ ಗುರಿ ಹೊಂದಿದ್ದಾರೆ. ಬಹುತೇಕರಿಗೆ ಅವರ ವಿಶ್ವ ಪರ್ಯಟನೆಯ ದೃಢಸಂಕಲ್ಪ ಸ್ಫೂರ್ತಿ ನೀಡಿದರೆ, ಕೆಲವರಿಗೆ ಅವರ ಪ್ರವಾಸ ಸಮಯ ಮತ್ತು ಹಣ ಇದ್ದವರಿಗೆ ಮಾತ್ರ ಸಿಗುವ ಐಷಾರಾಮವಾಗಿದೆ. ತಮ್ಮಂತೆ ಪ್ರಯಾಣ ಬೆಳೆಸಲು ಬಯಸುವವರಿಗೆ ಅವರು ಹೇಳುವುದಿಷ್ಟೆ, “ಕಾಯಬೇಡಿ, ಸಮಯ ಯಾರಿಗೂ ಕಾಯುವುದಿಲ್ಲ!”
ಕೃಪೆ: NDTV






