ಬಂಗಾಳ ಚುನಾವಣಾ ಸೋಲಿನ ಬಳಿಕ TMC–ಮಮತಾ ಬ್ಯಾನರ್ಜಿ ಅವರಿಗೆ ಆಘಾತ ನೀಡಿದ ನಕಲಿ ಸಹಿ ಹಗರಣ ಏನು?

ಮಮತಾ ಬ್ಯಾನರ್ಜಿ | Photo Credit : PTI
ಪಶ್ಚಿಮ ಬಂಗಾಳ ವಿಧಾನಸಭೆಗೆ ಸಲ್ಲಿಸಲಾದ ಅಧಿಕೃತ ದಾಖಲೆಗಳಲ್ಲಿ ಪಕ್ಷದ ಹಲವು ಶಾಸಕರ ಸಹಿಗಳನ್ನು ನಕಲು ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ತೃಣಮೂಲ ಕಾಂಗ್ರೆಸ್ (TMC) ತನ್ನ ಇತಿಹಾಸದಲ್ಲೇ ಅತ್ಯಂತ ಕಠಿಣ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ‘ಸೈನ್ಗೇಟ್’ ಎಂದು ಕರೆಯಲಾಗುತ್ತಿರುವ ಈ ವಿವಾದದ ಕುರಿತು CID ತನಿಖೆ ನಡೆಸುತ್ತಿದ್ದು, ಇಬ್ಬರು TMC ಶಾಸಕರನ್ನು ಉಚ್ಛಾಟಿಸಲಾಗಿದೆ. ಅಲ್ಲದೆ, ಪಕ್ಷದ ಹಿರಿಯ ನಾಯಕರನ್ನೂ ತನಿಖೆಗೆ ಒಳಪಡಿಸಲಾಗುತ್ತಿದೆ.
►ಏನಿದು ನಕಲಿ ಸಹಿ ಹಗರಣ?
2026ರ ವಿಧಾನಸಭಾ ಚುನಾವಣೆಯ ನಂತರ, ಪಶ್ಚಿಮ ಬಂಗಾಳ ವಿಧಾನಸಭೆಗೆ ವಿರೋಧ ಪಕ್ಷದ ನಾಯಕ ಮತ್ತು ಪಕ್ಷದ ಮುಖ್ಯ ಸಚೇತಕರ ನೇಮಕಾತಿಗೆ ಸಂಬಂಧಿಸಿ ಸಲ್ಲಿಸಲಾದ ದಾಖಲೆಗಳ ಸುತ್ತ ಈ ವಿವಾದ ಉದ್ಭವಿಸಿದೆ. ಈ ದಾಖಲೆಗಳಲ್ಲಿ ಕಂಡುಬಂದಿರುವ ಹಲವು TMC ಶಾಸಕರ ಸಹಿಗಳನ್ನು ನಕಲು ಮಾಡಲಾಗಿದೆ ಅಥವಾ ಅವರ ಅನುಮತಿಯಿಲ್ಲದೆ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಹಿರಿಯ TMC ನಾಯಕ ಶೋವಂದೇಬ್ ಚಟ್ಟೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಬೆಂಬಲಿಸಿ ಸಲ್ಲಿಸಲಾದ ಪತ್ರದಲ್ಲಿನ ಸಹಿಗಳು ನಿಜವೇ ಎಂಬ ಪ್ರಶ್ನೆ ಎತ್ತಿ, TMC ಶಾಸಕರಾದ ರಿತಬ್ರತ ಬ್ಯಾನರ್ಜಿ ಮತ್ತು ಸಂದೀಪನ್ ಸಾಹ ದೂರು ನೀಡಿದ ಬಳಿಕ ವಿವಾದ ಮುನ್ನೆಲೆಗೆ ಬಂದಿದೆ. ಈ ದೂರುಗಳ ಆಧಾರದಲ್ಲಿ ಪಶ್ಚಿಮ ಬಂಗಾಳ ಅಪರಾಧ ತನಿಖಾ ಇಲಾಖೆ (CID) ಅಧಿಕೃತ ತನಿಖೆ ಆರಂಭಿಸಿದೆ.
ಇದಾದ ಬಳಿಕ ವಿಧಾನಸಭೆಯ ಕಾರ್ಯದರ್ಶಿ FIR ದಾಖಲಿಸಿದರು. ವಿವಾದಿತ ದಾಖಲೆಗಳಲ್ಲಿ ಹೆಸರುಗಳಿರುವ ಶಾಸಕರ ಹೇಳಿಕೆಗಳು ಹಾಗೂ ಮಾದರಿ ಸಹಿಗಳನ್ನು ಸಂಗ್ರಹಿಸಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ. ತನಿಖೆಯ ಭಾಗವಾಗಿ CID ಅಧಿಕಾರಿಗಳು ಈಗಾಗಲೇ ಹಲವು TMC ಶಾಸಕರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
►TMCಗೆ ಹೊಡೆತ ನೀಡಿದ ಹಗರಣ
ಯಾವತ್ತೂ ತನ್ನ ನಾಯಕತ್ವದ ಕಟ್ಟುನಿಟ್ಟಿನ ನಿಯಂತ್ರಣದಲ್ಲಿದ್ದ ಪಕ್ಷದೊಳಗೆ, ಈ ಹಗರಣವು ಆಂತರಿಕ ಭಿನ್ನಾಭಿಪ್ರಾಯದ ಲಕ್ಷಣಗಳನ್ನು ಬಹಿರಂಗಪಡಿಸಿರುವುದರಿಂದ TMCಗೆ ತೀವ್ರ ಹಾನಿ ಉಂಟುಮಾಡಿದೆ. ಸಹಿಗಳ ಬಗ್ಗೆ ಬಹಿರಂಗವಾಗಿ ಪ್ರಶ್ನೆ ಎತ್ತಿದ ತಕ್ಷಣವೇ ರಿತಬ್ರತ ಬ್ಯಾನರ್ಜಿ ಮತ್ತು ಸಂದೀಪನ್ ಸಾಹ ಅವರನ್ನು ಪಕ್ಷವಿರೋಧಿ ಚಟುವಟಿಕೆಗಳ ಆರೋಪದ ಮೇಲೆ TMC ಉಚ್ಛಾಟಿಸಿತು.
ಇದರಿಂದ ವಿವಾದ ಮತ್ತಷ್ಟು ತಾರಕಕ್ಕೇರಿದ್ದು, ಪಕ್ಷದ ಸಂಘಟನೆಯೊಳಗೆ ಬಿರುಕು ಮೂಡುತ್ತಿರುವ ಬಗ್ಗೆ ವದಂತಿಗಳು ಹರಡಲು ಕಾರಣವಾಯಿತು.
ಅಷ್ಟೇ ಅಲ್ಲದೆ, TMCಯ ಹಿರಿಯ ನಾಯಕ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರಿಗೂ ಈ ತನಿಖೆಗೆ ಸಂಬಂಧಿಸಿ CID ಸಮನ್ಸ್ ಜಾರಿ ಮಾಡಿರುವುದರಿಂದ ವಿವಾದದ ಬಿಸಿ ಪಕ್ಷದ ಉನ್ನತ ನಾಯಕತ್ವಕ್ಕೂ ತಟ್ಟಿದೆ.
ಚುನಾವಣೆಯ ಹೀನಾಯ ಸೋಲಿನ ಬೆನ್ನಲ್ಲೇ ಎದುರಾಗಿರುವ ಈ ವಿವಾದ ಕೇವಲ ದಾಖಲೆಗಳ ಜಗಳವಾಗಿ ಉಳಿದಿಲ್ಲ. ಬದಲಾಗಿ, ಪಕ್ಷದ ಶಿಸ್ತು ಮತ್ತು ನಾಯಕತ್ವದ ಅಧಿಕಾರಕ್ಕೆ ಎದುರಾಗಿರುವ ದೊಡ್ಡ ಪರೀಕ್ಷೆಯಾಗಿದೆ.
►ಯಾರು ಈ ರಿತಬ್ರತ ಬ್ಯಾನರ್ಜಿ?
ರಿತಬ್ರತ ಬ್ಯಾನರ್ಜಿ ಅವರು ಪಕ್ಷದಿಂದ ಉಚ್ಛಾಟನೆ ಎದುರಿಸುತ್ತಿರುವುದು ಇದೇ ಮೊದಲಲ್ಲ. 46 ವರ್ಷದ ಈ ರಾಜಕಾರಣಿಯನ್ನು 9 ವರ್ಷಗಳ ಹಿಂದೆ ಸಿಪಿಎಂ ಪಕ್ಷದಿಂದಲೂ ಹೊರಹಾಕಲಾಗಿತ್ತು. ಆ ಸಂದರ್ಭದಲ್ಲಿ ಅವರು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರಿಗೆ ಆಪ್ತರಾಗಿದ್ದರು.
ಸಿಪಿಎಂ 2014ರಲ್ಲಿ ಬ್ಯಾನರ್ಜಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು. ಅವರ ಅಧಿಕಾರಾವಧಿ 2020ರವರೆಗೆ ಇತ್ತು. ಆದರೆ 2017ರಲ್ಲಿ ಪಕ್ಷದ ನಿಲುವಿಗೆ ವಿರುದ್ಧವಾಗಿ ನಡೆದುಕೊಂಡ ಆರೋಪದ ಮೇಲೆ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಯಿತು. ನಂತರದ ಮೂರು ವರ್ಷಗಳ ಕಾಲ ಅವರು ಯಾವುದೇ ಪಕ್ಷಕ್ಕೆ ಸೇರದೆ ಸ್ವತಂತ್ರ ಸದಸ್ಯರಾಗಿ ರಾಜ್ಯಸಭೆಯಲ್ಲಿ ಮುಂದುವರಿದರು.
ಬಳಿಕ, ಆರ್.ಜಿ. ಕರ್ ಆಸ್ಪತ್ರೆ ವಿವಾದದ ಹಿನ್ನೆಲೆಯಲ್ಲಿ ಜವಾಹರ್ ಸಿರ್ಕಾರ್ ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ಅವಧಿಗೆ ಮುನ್ನವೇ ರಾಜೀನಾಮೆ ನೀಡಿದಾಗ, ಉಳಿದ ಅವಧಿಗೆ ತೃಣಮೂಲ ಕಾಂಗ್ರೆಸ್ ಟಿಕೆಟ್ ಮೂಲಕ ಬ್ಯಾನರ್ಜಿ ರಾಜ್ಯಸಭೆ ಪ್ರವೇಶಿಸಿದರು.
2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಅವರು ಇವರನ್ನು ಚುನಾವಣಾ ಕಣಕ್ಕಿಳಿಸಿ ಶಾಸಕ ಅಭ್ಯರ್ಥಿಯನ್ನಾಗಿ ಮಾಡಿದರು.
ರಿತಬ್ರತ ಬ್ಯಾನರ್ಜಿ ಅವರು ತೃಣಮೂಲ ಕಾಂಗ್ರೆಸ್ನ ಕಾರ್ಮಿಕ ಸಂಘಟನೆಯಾದ ‘ಇಂಡಿಯನ್ ನ್ಯಾಷನಲ್ ತೃಣಮೂಲ ಟ್ರೇಡ್ ಯೂನಿಯನ್ ಕಾಂಗ್ರೆಸ್’ನ ರಾಜ್ಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಈ ಕುರಿತು ಸೋಮವಾರ ಮಾತನಾಡಿದ ಮಮತಾ ಬ್ಯಾನರ್ಜಿ, ಬ್ಯಾನರ್ಜಿ ಅವರ ಹಿಂದಿನ ಎಡಪಂಥೀಯ ರಾಜಕೀಯ ಹಿನ್ನೆಲೆಯನ್ನು ಉಲ್ಲೇಖಿಸಿದರು.
“ಯಾವುದೇ ತತ್ವ-ಆದರ್ಶಗಳಿಲ್ಲದ ವ್ಯಕ್ತಿಯೊಬ್ಬರು ಹಿಂದೆ ಸಿಪಿಎಂನಲ್ಲಿದ್ದರು. ಅವರಿಗೆ ನಮ್ಮ ಪಕ್ಷದಿಂದ ಟಿಕೆಟ್ ನೀಡಿದ್ದು ನಾವು ಮಾಡಿದ ತಪ್ಪು. ಅವರು ನಮ್ಮ ಬಳಿ ಬಂದು ಟಿಕೆಟ್ ಗಾಗಿ ಬೇಡಿಕೊಂಡಿದ್ದರು. ಅಂದು ಸಿಪಿಎಂ ಅವರನ್ನು ಉಚ್ಛಾಟಿಸಿ ಸರಿಯಾದ ನಿರ್ಧಾರವನ್ನೇ ಮಾಡಿತ್ತು. ನಾವು ಅವರನ್ನು ರಕ್ಷಿಸಿದ್ದು ನಮ್ಮ ತಪ್ಪಾಯಿತು. ಇಂತಹ ವ್ಯಕ್ತಿಗಳು ಪ್ರತಿದಿನ ಬಿಜೆಪಿಯ ನಾಯಕರನ್ನು ಭೇಟಿಯಾಗಿ ಅವರ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ಅವರು ಆರೋಪಿಸಿದರು.
ಯಾರ ಹೆಸರನ್ನೂ ನೇರವಾಗಿ ಉಲ್ಲೇಖಿಸದೆ ಮಾತನಾಡಿದ ತೃಣಮೂಲ ಮುಖ್ಯಸ್ಥೆ, “ಅವರಲ್ಲಿ ಒಬ್ಬ ಸಂಸದರೂ ಸೇರಿದ್ದಾರೆ. ಅವರು ತಮ್ಮ ಮಗನಿಗಾಗಿ ಟಿಕೆಟ್ ಕೇಳಿದ್ದರು” ಎಂದರು.
►ಯಾರು ಈ ಸಂದೀಪನ್ ಸಾಹ?
ಸಂದೀಪನ್ ಸಾಹ ಅವರು ತೃಣಮೂಲ ಕಾಂಗ್ರೆಸ್ನ ಮಾಜಿ ಶಾಸಕಿ ಸ್ವರ್ಣಕಮಲ್ ಸಾಹ ಅವರ ಪುತ್ರ. ಅವರು ಈ ಹಿಂದೆ ಕೋಲ್ಕತ್ತಾ ಮಹಾನಗರ ಪಾಲಿಕೆಯಲ್ಲಿ ಕೌನ್ಸಿಲರ್ ಆಗಿದ್ದರು. 2026ರ ವಿಧಾನಸಭಾ ಚುನಾವಣೆಯಲ್ಲಿ ಕೋಲ್ಕತ್ತಾದ ಎಂಟಾಲಿ ಕ್ಷೇತ್ರದಿಂದ TMC ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
►ಚುನಾವಣೆಯ ಹೀನಾಯ ಸೋಲಿನ ಬೆನ್ನಲ್ಲೇ ಬಂದ ಆಘಾತ
ಪಶ್ಚಿಮ ಬಂಗಾಳದಲ್ಲಿ TMCಯ 15 ವರ್ಷಗಳ ಆಡಳಿತಕ್ಕೆ ಅಂತ್ಯ ಹಾಡಿದ 2026ರ ವಿಧಾನಸಭಾ ಚುನಾವಣೆಯ ಭಾರಿ ಸೋಲಿನ ಕೆಲವೇ ವಾರಗಳ ಬಳಿಕ ಈ ನಕಲಿ ಸಹಿ ವಿವಾದ ಭುಗಿಲೆದ್ದಿದೆ. ಈ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸಿ ಇತಿಹಾಸ ನಿರ್ಮಿಸಿದೆ.
ಈ ಫಲಿತಾಂಶವು 2011ರಿಂದ ಬಂಗಾಳದ ರಾಜಕೀಯವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದ TMC ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರಿಗೆ ತೀವ್ರ ಆಘಾತ ನೀಡಿದೆ. ಸೋಲಿನ ಬಳಿಕ ಪಕ್ಷವು ಆಡಳಿತಾತ್ಮಕ ವೈಫಲ್ಯಗಳು, ಭ್ರಷ್ಟಾಚಾರದ ಆರೋಪಗಳು, ಸಂಘಟನಾತ್ಮಕ ದೌರ್ಬಲ್ಯಗಳು ಹಾಗೂ ಚುನಾವಣೆ ನಂತರದ ಹಿಂಸಾಚಾರದ ಕುರಿತು ತೀವ್ರ ಟೀಕೆಗಳನ್ನು ಎದುರಿಸುತ್ತಿದೆ.
ಈಗ ಕೇಳಿಬಂದಿರುವ ನಕಲಿ ಸಹಿ ಆರೋಪಗಳು TMC ಒಳಗಿನ ಬಣ ರಾಜಕೀಯ ಮತ್ತು ಅಸಮಾಧಾನದ ಆತಂಕಗಳನ್ನು ಮತ್ತಷ್ಟು ಹೆಚ್ಚಿಸಿವೆ. ಪಕ್ಷದ ಸಭೆಗಳಿಗೆ ಶಾಸಕರು ಗೈರುಹಾಜರಾಗುತ್ತಿರುವುದು ಮತ್ತು ನಾಯಕರ ನಡುವಿನ ಸಾರ್ವಜನಿಕ ಭಿನ್ನಾಭಿಪ್ರಾಯಗಳ ವರದಿಗಳು, ಅಧಿಕಾರ ಕಳೆದುಕೊಂಡ ಬಳಿಕ ಒಗ್ಗಟ್ಟು ಕಾಯ್ದುಕೊಳ್ಳಲು ಪಕ್ಷವು ಹೆಣಗಾಡುತ್ತಿದೆ ಎಂಬ ಭಾವನೆಯನ್ನು ಬಲಪಡಿಸಿವೆ.
►ಮುಂದೇನು?
ಶಾಸಕರು ಮತ್ತು ಹಿರಿಯ ನಾಯಕರಿಂದ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಮೂಲಕ CID ತನಿಖೆ ಮುಂದುವರಿದಿದೆ. ದಾಖಲೆಗಳಲ್ಲಿನ ಯಾವುದೇ ಸಹಿಗಳನ್ನು ನಿಜವಾಗಿಯೂ ನಕಲು ಮಾಡಲಾಗಿದೆಯೇ, ಇದಕ್ಕೆ ಯಾರು ಜವಾಬ್ದಾರರು ಮತ್ತು ವಿಧಾನಸಭಾ ದಾಖಲೆಗಳನ್ನು ಸಿದ್ಧಪಡಿಸುವ ವೇಳೆ ಯಾವುದೇ ಕ್ರಿಮಿನಲ್ ಅಪರಾಧ ನಡೆದಿದೆಯೇ ಎಂಬುದನ್ನು ಪತ್ತೆಹಚ್ಚುವುದು ತನಿಖೆಯ ಉದ್ದೇಶವಾಗಿದೆ.
ಆದರೆ, TMC ಪಕ್ಷಕ್ಕೆ ಆಗಿರುವ ರಾಜಕೀಯ ನಷ್ಟ ಈಗಾಗಲೇ ಭಾರಿ ಪ್ರಮಾಣದಲ್ಲಿದೆ. ಚುನಾವಣಾ ಸೋಲಿನ ಬೆನ್ನಲ್ಲೇ ಈ ಹಗರಣ ಮುನ್ನೆಲೆಗೆ ಬಂದಿರುವುದರಿಂದ, ಪಕ್ಷದ ಆಂತರಿಕ ಒಗ್ಗಟ್ಟು ಮತ್ತು ನಾಯಕತ್ವದ ನಿಯಂತ್ರಣದ ಕುರಿತು ಮತ್ತಷ್ಟು ಪ್ರಶ್ನೆಗಳು ಉದ್ಭವಿಸಿವೆ. ವಿರೋಧ ಪಕ್ಷವಾಗಿ ಮರುಸಂಘಟಿತಗೊಳ್ಳಲು ಪ್ರಯತ್ನಿಸುತ್ತಿರುವ ಮಮತಾ ಬ್ಯಾನರ್ಜಿ ಅವರ ಪಕ್ಷಕ್ಕೆ ಈ ವಿವಾದ ಸದ್ಯದ ಮಟ್ಟಿಗೆ ಅತ್ಯಂತ ದೊಡ್ಡ ಸವಾಲಾಗಿ ಪರಿಣಮಿಸಿದೆ.






