30 ವರ್ಷ ದಾಟಿದ ಬಳಿಕ ನಿತ್ಯ ವ್ಯಾಯಾಮದ ಹೊರತಾಗಿಯೂ ಹೊಟ್ಟೆ ಉಬ್ಬುವುದೇಕೆ?

ಸಾಂದರ್ಭಿಕ ಚಿತ್ರ | Photo Credit : freepik.com
40 ಮತ್ತು 50ರ ವಯಸ್ಸಿನಲ್ಲಿ ಬೇಕಾದರೂ ಉದ್ದೇಶಿತ ಸ್ಟ್ರೆಂತ್ ಟ್ರೈನಿಂಗ್ ಮೂಲಕ ಸ್ನಾಯು ರಾಶಿಯನ್ನು ಮರುನಿರ್ಮಿಸಬಹುದು ಮತ್ತು ಹೊಟ್ಟೆ ಉಬ್ಬುವ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು!
ವಯಸ್ಸು 30 ದಾಟಿದ ತಕ್ಷಣ ಆಹಾರ ಮತ್ತು ವ್ಯಾಯಾಮದಲ್ಲಿ ಯಾವುದೇ ಬದಲಾವಣೆ ತರದೆ ಇದ್ದರೂ ಸೊಂಟದ ಸುತ್ತ ಬೊಜ್ಜು ಬೆಳೆಯುವುದನ್ನು ಕಂಡು ಬಹಳಷ್ಟು ಮಂದಿ ಹತಾಶೆಗೆ ಜಾರುತ್ತಾರೆ. ವಯಸ್ಸಾಗುತ್ತಿದ್ದಂತೆ ಸೊಂಟದ ಸುತ್ತ ಬೊಜ್ಜು ಬೆಳೆಯುವುದೇಕೆ ಮತ್ತು ಅದನ್ನು ತೊಡೆದು ಹಾಕುವುದು ಎಷ್ಟು ಕಷ್ಟ ಎನ್ನುವ ಸಮಸ್ಯೆಯ ಬಗ್ಗೆ ಏಮ್ಸ್, ಹಾರ್ವರ್ಡ್ ಮತ್ತು ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯಗಳಲ್ಲಿ ತರಬೇತಿ ಪಡೆದ ಕ್ಯಾಲಿಫೋರ್ನಿಯದಲ್ಲಿ ನೆಲೆಸಿರುವ ಜಠರಕರುಳಿನ ತಜ್ಞರಾದ (ಗ್ಯಾಸ್ಟ್ರೋಎಂಟೆರೊಲಾಜಿಸ್ಟ್) ಡಾ ಸೌರಭ್ ಸೇಥಿ ಇನ್ಸ್ಟಾಗ್ರಾಂನಲ್ಲಿ ಅಭಿಪ್ರಾಯ ಮುಂದಿಟ್ಟಿದ್ದಾರೆ.
ಸ್ನಾಯುಗಳ ನಷ್ಟದಿಂದ ಕೊಬ್ಬು
ಇನ್ಸ್ಟಾಗ್ರಾಂ ಪೋಸ್ಟ್ ಒಂದರಲ್ಲಿ ಸೌರಭ್ ಅವರು ಹೇಳಿರುವ ಪ್ರಕಾರ, “ಬದಲಾಗದ ಆಹಾರವೇ ಹೊಟ್ಟೆಯ ಸುತ್ತ ಕೊಬ್ಬು ತುಂಬಲು ಕಾರಣವಾಗುತ್ತದೆ. ಅದೇ ವ್ಯಾಯಾಮದಿಂದ ಹೆಚ್ಚು ಪರಿಣಾಮ ಸಿಗುವುದಿಲ್ಲ. ಆಹಾರ ಮತ್ತು ವ್ಯಾಯಾಮದ ಶಿಸ್ತಿನ ಕೊರತೆಯಿಂದ ಇದು ಸಂಭವಿಸುವುದಿಲ್ಲ. ಬದಲಾಗಿ ನಿರೀಕ್ಷಿತ ಶಾರೀರಿಕ ಪ್ರಕ್ರಿಯೆಯಾಗಿರುತ್ತದೆ. ಸ್ನಾಯುಗಳ ನಷ್ಟವಾಗುವುದು ಒಂದು ಮುಖ್ಯ ಅಂಶವಾಗಿರುತ್ತದೆ!
“30 ದಾಟಿದ ಮೇಲೆ ದಶಕವೊಂದರಲ್ಲಿ ಶೇ 3-8ರಷ್ಟು ಸ್ನಾಯುಗಳನ್ನು ಸಹಜವಾಗಿ ಕಳೆದುಕೊಂಡಿರುತ್ತೇವೆ. ಕ್ಯಾಲರಿ ನಷ್ಟ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿರ್ವಹಿಸುವಲ್ಲಿ ಸ್ನಾಯುಗಳು ಪ್ರಮುಖ ಪಾತ್ರವಹಿಸುತ್ತವೆ. ಅವುಗಳ ನಷ್ಟದಿಂದ ದೈನಂದಿನ ಶಕ್ತಿಯ ಬಳಕೆ ನಿಧಾನವಾಗುತ್ತದೆ. ಶೇ 70-80ರಷ್ಟು ಗ್ಲುಕೋಸ್ ವಿಲೇವಾರಿಯಲ್ಲಿ ಸ್ನಾಯುಗಳು ಪ್ರಮುಖ ಪಾತ್ರ ವಹಿಸುತ್ತವೆ. ಸ್ನಾಯುವಿನ ರಾಶಿಯು (ದೇಹದಲ್ಲಿರುವ ಒಟ್ಟು ಸ್ನಾಯು ಅಂಗಾಂಶದ ಪ್ರಮಾಣ) ಕುಸಿದಾಗ, ರಕ್ತದಲ್ಲಿ ಗ್ಲುಕೋಸ್ ಹೆಚ್ಚು ಸಮಯ ಉಳಿದುಕೊಳ್ಳುತ್ತದೆ ಮತ್ತು ಅವು ಹೊಟ್ಟೆಯ ಕೊಬ್ಬಿನಲ್ಲಿ ಸಂಗ್ರಹವಾಗಿರುವ ಸಾಧ್ಯತೆಯಿರುತ್ತದೆ.
ಇನ್ಸುಲಿನ್ ಕುಸಿತವೂ ಕಾರಣ
ಇನ್ಸುಲಿನ್ ಸಂವೇದನಾಶೀಲತೆಯಲ್ಲಿನ ಕುಸಿತ ಮತ್ತೊಂದು ಪ್ರಮುಖ ಕಾರಣವಾಗಿರುತ್ತದೆ. ಒಂದು ದಶಕದಲ್ಲಿ ಅದು ಶೇ 4-5ರಷ್ಟು ಕುಸಿದಿರುತ್ತದೆ. ಅಂದರೆ, ಅದೇ ಕಾರ್ಬೊಹೈಡ್ರೇಟ್ಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಏರಿಕೆಯ ಪ್ರಮಾಣ ಹೆಚ್ಚಾಗುತ್ತದೆ ಮತ್ತು ಮುಖ್ಯವಾಗಿ ಸೊಂಟದ ಸುತ್ತ ಕೊಬ್ಬುಗಳು ಹೆಚ್ಚು ವೇಗವಾಗಿ ಶೇಖರಣೆಗೊಳ್ಳುತ್ತವೆ. ಹಾರ್ಮೋನ್ ಬದಲಾವಣೆಯೂ ಮುಖ್ಯ ಪಾತ್ರವಹಿಸುತ್ತದೆ.
ಹಾರ್ಮೋನ್ ಪರಿಣಾಮವೂ ಹೌದು
ಬೆಳವಣಿಗೆಯ ಹಾರ್ಮೋನ್ ಟೆಸ್ಟೊಸ್ಟೆರಾನ್ ಮತ್ತು ಈಸ್ಟ್ರೊಜನ್ ಮಟ್ಟಗಳು ಕುಸಿಯುವುದರಿಂದ ಕಾರ್ಟಿಸಾಲ್ನಲ್ಲಿ ಏರಿಕೆಯಾಗುತ್ತದೆ. “ಈ ಸಂಯೋಜನೆಯು ಹೊಟ್ಟೆಯ ಸುತ್ತ ಅತಿಯಾದ ಕೊಬ್ಬಿನ ಸಂಗ್ರಹಕ್ಕೆ ಕಾರಣವಾಗುತ್ತದೆ. ಅದೇ ಕಾಲಾನುಸಾರ ವೈಸರಲ್ (ಒಳ ಅಂಗಗಳ) ಕೊಬ್ಬಾಗಿ ಪರಿಣಮಿಸುತ್ತದೆ. ಅದು ಬಹಳ ಹಾನಿಯುಂಟು ಮಾಡಲಿದೆ. ಈ ಕೊಬ್ಬು ಅಂಗಗಳನ್ನು ಸುತ್ತುವರಿಯುತ್ತದೆ ಮತ್ತು ಇನ್ಸುಲಿನ್ ಪ್ರತಿರೋಧ ಮತ್ತು ಉರಿಯೂತವನ್ನು ಇನ್ನಷ್ಟು ಹದಗೆಡಿಸುತ್ತದೆ” ಎನ್ನುತ್ತಾರೆ ಡಾ ಸೌರಭ್ ಸೇಥಿ.
ಫ್ಯಾಟಿ ಲಿವರ್ (ಯಕೃತ್ತಿನ ಕೊಬ್ಬು), ಮಧುಮೇಹದ ಪೂರ್ವ ಅವಧಿ, ಮಧುಮೇಹ ಅಥವಾ ಹೆಚ್ಚು ಟ್ರೈಗ್ಲಿಸೆರೈಡ್ಗಳು ಇರುವವವರಲ್ಲಿ ಇದು ಹೆಚ್ಚು ಪರಿಣಾಮ ಬೀರುತ್ತದೆ.
ಒಳಾಂಗಗಳ ಕೊಬ್ಬೆಂದು ಹೇಗೆ ತಿಳಿಯುವುದು?
ಆದರೆ ಸೊಂಟದ ಸುತ್ತಲಿನ ಕೊಬ್ಬು ಒಳ ಅಂಗಗಳಲ್ಲಿ ಸುತ್ತುವರಿದಿದೆ ಎಂದು ಹೇಗೆ ತಿಳಿದುಕೊಳ್ಳುವುದು? ಬೆಂಗಳೂರಿನ ಸೈಟೆಕೇರ್ ಆಸ್ಪತ್ರೆಯಲ್ಲಿ ಜಿಐ & ಎಚ್ಪಿಬಿ ಸರ್ಜರಿ ವಿಭಾಗದಲ್ಲಿ ಹಿರಿಯ ಕನ್ಸಲ್ಟಂಟ್ ಆಗಿರುವ ಡಾ ಆದಿತ್ಯ ವಿ ನರಗುಂದ ಹೇಳುವ ಪ್ರಕಾರ, “ಒಳ ಅಂಗಗಳಲ್ಲಿ ಶೇಖರಣೆಯಾಗುವ ಕೊಬ್ಬು ಮುಖ್ಯವಾಗಿ ಯಕೃತ್ತು ಮತ್ತು ಕರುಳಿನಂತಹ ಆಂತರಿಕ ಅಂಗಗಳನ್ನು ಸುತ್ತುವರೆದಿರುವ ಕೊಬ್ಬಾಗಿರುತ್ತದೆ. ಅವು ಚಯಾಪಚಯ ಕ್ರಿಯೆಯಲ್ಲಿ ಸಕ್ರಿಯವಾಗಿರುತ್ತವೆ. ಸಬ್ಕ್ಯುಟೇನಿಯಸ್ ಕೊಬ್ಬಾಗಿದ್ದರೆ, ಚರ್ಮದ ಅಡಿಯಲ್ಲಿ ಜಡವಾಗಿರುತ್ತದೆ. ಆದರೆ ಒಳಾಂಗಗಳ ಕೊಬ್ಬುಗಳು ಚಾಚಿಕೊಂಡಿರುತ್ತವೆ. ಸರಳ ತೂಕ ಇಳಿಸುವ ವ್ಯಾಯಾಮದಿಂದ ಕಡಿಮೆಯಾಗುವುದಿಲ್ಲ.
ಭಾರತೀಯರಲ್ಲಿ ಪುರುಷರಲ್ಲಿ 90 ಸೆಂಮೀ ಸೊಂಟದ ಸುತ್ತಳತೆ ಮತ್ತು ಮಹಿಳೆಯರಲ್ಲಿ 80 ಸೆಂಟಿಮೀಟರ್ ಸೊಂಟದ ಸುತ್ತಳತೆ ಇದ್ದರೆ ಸ್ಪಷ್ಟವಾಗಿ ಒಳಾಂಗಗಳ ಕೊಬ್ಬು ತುಂಬಿದೆ ಎಂದು ಹೇಳಬಹುದು. ಅಲ್ಟ್ರಾಸೌಂಡ್, ಸಿಟಿ ಸ್ಕ್ಯಾನ್ ಅಥವಾ ಡೆಕ್ಸಾ ಮೂಲಕ ಇದನ್ನು ದೃಢೀಕರಿಸಬಹುದು. ಆದರೆ ನಿತ್ಯದ ವಿಶ್ಲೇಷಣೆಗೆ ಯಾವಾಗಲೂ ಇಂತಹ ಪರೀಕ್ಷೆಗಳ ಅಗತ್ಯವಿರುವುದಿಲ್ಲ.
30ರ ನಂತರ ಸ್ನಾಯು ನಷ್ಟ ತಡೆಯಲು ಸಾಧ್ಯವಿಲ್ಲವೆ?
ಡಾ ನರಗುಂದ್ ಅಭಿಪ್ರಾಯಪಡುವ ಪ್ರಕಾರ, 30ರ ನಂತರ ಸ್ವಲ್ಪ ಮಟ್ಟಿಗೆ ಸ್ನಾಯುಗಳ ನಷ್ಟವಾಗುವುದನ್ನು ಸರ್ಕೊಪೆನಿಯ ಎಂದು ಕರೆಯಲಾಗುತ್ತದೆ. ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಲಾಗದು. ಬಹಳಷ್ಟು ಮಂದಿಯಲ್ಲಿ ಜಡವಾಗಿರುವುದು, ಸಾಕಷ್ಟು ಪ್ರೊಟೀನ್ ಸೇವಿಸದೆ ಇರುವುದು, ನಿದ್ರೆ ಸರಿಯಾಗಿ ಮಾಡದೆ ಇರುವುದು ಮತ್ತು ಒತ್ತಡದಿಂದಾಗಿ ಸ್ನಾಯುಗಳ ನಷ್ಟವಾಗಿರುತ್ತದೆ. 40 ಮತ್ತು 50ರ ವಯಸ್ಸಿನಲ್ಲಿ ಬೇಕಾದರೂ ಉದ್ದೇಶಿತ ಸ್ಟ್ರೆಂತ್ ಟ್ರೈನಿಂಗ್ ಮೂಲಕ ಸ್ನಾಯು ರಾಶಿಯನ್ನು ಮರುನಿರ್ಮಿಸಬಹುದು. ಸಾಕಷ್ಟು ಶಿಸ್ತಿನಿಂದ ಪ್ರೊಟೀನ್ ಸೇವನೆ, ದ್ವಿದಳ ಧಾನ್ಯಗಳು, ಡೈರಿ ಉತ್ಪನ್ನಗಳು, ಮೊಟ್ಟೆ, ಮೀನು ಅಥವಾ ಲೀನ್ ಮೀಟ್ (ಕಡಿಮೆ ಕೊಬ್ಬಿನ ಮಾಂಸ) ಸೇವನೆಯಿಂದ ಚಯಾಪಚಯ ದರವನ್ನು ಸಂರಕ್ಷಿಸಬಹುದು ಮತ್ತು ಸುಧಾರಿಸಬಹುದು.
ಸ್ನಾಯುಗಳನ್ನು ಉಳಿಸಿಕೊಳ್ಳುವುದು ಅತಿ ಮುಖ್ಯವಾಗುತ್ತದೆ. ಏಕೆಂದರೆ ಸ್ನಾಯು ಅಂಗಾಂಶವು ಇನ್ಸುಲಿನ್ ಸಂವೇದನಾಶೀಲತೆಯನ್ನು ಸುಧಾರಿಸುತ್ತದೆ ಮತ್ತು ವಿರಾಮದಲ್ಲಿ ಶಕ್ತಿಯ ಬಳಕೆಯನ್ನು ಹೆಚ್ಚಿಸುತ್ತದೆ. ಪ್ರಾಯೋಗಿಕವಾಗಿ ಹೇಳುವುದಾದಲ್ಲಿ ಸ್ನಾಯುಗಳನ್ನು ಉಳಿಸಿಕೊಳ್ಳುವುದರಿಂದ, ದೇಹವು ಕಾರ್ಬೋಹೈಡ್ರೇಟ್ಗಳನ್ನು ಚೆನ್ನಾಗಿ ನಿರ್ವಹಿಸುತ್ತದೆ ಮತ್ತು ಸೊಂಟದ ಸುತ್ತ ಕಡಿಮೆ ಕೊಬ್ಬನ್ನು ಸಂಗ್ರಹಿಸಿಡುತ್ತದೆ.
ಕೃಪೆ: indianexpress.com







