ವಿಶ್ವಕಪ್ ಕಣದಲ್ಲಿ ಅಲೆಮಾರಿ ಹುಡುಗ; ಇರಾನ್ ಗೋಲ್ಕೀಪರ್ ಅಲಿರೆಜಾ ಬೀರನ್ವಾಂಡ್ ಯಶೋಗಾಥೆ!

ಅಲಿರೆಜಾ ಬೀರನ್ವಾಂಡ್ | Photo Credit : @afcasiancup
ವಿಶೇಷವಾಗಿ ಕೇಪ್ ವರ್ಡೆ, ಕ್ಯುರಾಕೊ ಮತ್ತು ಇರಾನ್ನಂತಹ ಸಣ್ಣ ರಾಷ್ಟ್ರಗಳ ಗೋಲ್ಕೀಪರ್ಗಳಿಂದ ಅದ್ಭುತ ಪ್ರದರ್ಶನಗಳು ದಾಖಲಾಗಿವೆ.
48 ತಂಡಗಳ ಫಿಫಾ ವಿಶ್ವಕಪ್ ನೀರಸವಾಗಿದೆ ಮತ್ತು ಏಕಪಕ್ಷೀಯ ಪಂದ್ಯಗಳು ನಡೆಯುತ್ತಿವೆ ಎಂದು ಹೇಳಿದವರಾರು? ಪಂದ್ಯಾವಳಿಯ ಗುಂಪು ಹಂತವು ಮುಕ್ತಾಯಗೊಳ್ಳುತ್ತಿರುವ ಸಂದರ್ಭದಲ್ಲಿ ಕೆಲವು ವೀರೋಚಿತ ಪ್ರದರ್ಶನಗಳು ಕಂಡುಬಂದಿವೆ. ವಿಶೇಷವಾಗಿ ಕೇಪ್ ವರ್ಡೆ, ಕ್ಯುರಾಕೊ ಮತ್ತು ಇರಾನ್ನಂತಹ ಸಣ್ಣ ರಾಷ್ಟ್ರಗಳ ಗೋಲ್ಕೀಪರ್ಗಳಿಂದ ಅದ್ಭುತ ಪ್ರದರ್ಶನಗಳು ದಾಖಲಾಗಿವೆ.
ವೊಜಿನ್ಹಾ ಮತ್ತು ಎಲಾಯ್ ರೂಮ್ ಅವರ ಗೋಲು ತಡೆಯುವಲ್ಲಿನ ಅದ್ಭುತ ಪ್ರದರ್ಶನಗಳ ನಂತರ ಇದೀಗ ಇರಾನ್ನ ಗೋಲ್ಕೀಪರ್ ಅಲಿರೆಜಾ ಬೀರನ್ವಾಂಡ್ ಸುದ್ದಿಯಲ್ಲಿದ್ದಾರೆ. ಫಿಫಾ ಶ್ರೇಯಾಂಕದ ಪ್ರಕಾರ ವಿಶ್ವದ 9ನೇ ಸ್ಥಾನದಲ್ಲಿರುವ ಬೆಲ್ಜಿಯಂ ವಿರುದ್ಧ ಇರಾನ್ ಗೋಲುರಹಿತ ಡ್ರಾ ಸಾಧಿಸುವಲ್ಲಿ ಬೀರನ್ವಾಂಡ್ ರೋಮಾಂಚಕ ಪ್ರದರ್ಶನ ನೀಡಿದ್ದಾರೆ. ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊದಲ್ಲಿ ನಡೆಯುತ್ತಿರುವ ವಿಶ್ವಕಪ್ ಕೆಲವು ಅದ್ಭುತ ಗೋಲ್ಕೀಪಿಂಗ್ ಪ್ರದರ್ಶನಗಳಿಗೆ ಸಾಕ್ಷಿಯಾಗಿದ್ದರೂ, ಬೀರನ್ವಾಂಡ್ ಅವರ ಪ್ರದರ್ಶನ ಉಳಿದವರಿಗಿಂತ ಭಿನ್ನವಾಗಿದೆ.
ಮೂರು ಅಂಕಗಳಿಗಾಗಿ ಬೆಲ್ಜಿಯಂ, ಇರಾನ್ ವಿರುದ್ಧ ತನ್ನೆಲ್ಲ ಸಾಮರ್ಥ್ಯವನ್ನು ಪಣಕ್ಕಿಟ್ಟಿತ್ತು. ಆದರೆ ಅವರಿಗೆ ತಡೆಗೋಡೆಯಾದವರು 6 ಅಡಿ 4 ಇಂಚು ಎತ್ತರದ ಅಲಿರೆಜಾ ಬೀರನ್ವಾಂಡ್. ಅವರು ಏಳು ಸೇವ್ಗಳನ್ನು ದಾಖಲಿಸಿ ಪಂದ್ಯಶ್ರೇಷ್ಠ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.
ಬೆಲ್ಜಿಯಂ ಮುಂದೆ ಆಳೆತ್ತರಕ್ಕೆ ನಿಲ್ಲುವ ಮೊದಲು ಬೀರನ್ವಾಂಡ್ ಮನೆಯಿಂದ ಓಡಿಹೋದ ಮಗುವಾಗಿದ್ದರು! ಲೊರೆಸ್ತಾನ್ನ ಬೆಟ್ಟಗುಡ್ಡ ಪ್ರದೇಶದಲ್ಲಿ ಅಲೆಮಾರಿ ಕುರ್ದಿಶ್ ಲಕ್ ಕುಟುಂಬದಲ್ಲಿ ಜನಿಸಿದ ಅವರ ಬಾಲ್ಯವು ತೀವ್ರ ಬಡತನದಲ್ಲಿ ಕಳೆದಿತ್ತು. ಅವರ ಫುಟ್ಬಾಲ್ ಆಡುವ ಕನಸನ್ನು ತಂದೆ ತೀವ್ರವಾಗಿ ವಿರೋಧಿಸಿದ್ದರು. ಒಂದು ಜೋಡಿ ಕೈಗವಸುಗಳನ್ನು ಖರೀದಿಸುವಷ್ಟು ಹಣವೂ ಅವರಲ್ಲಿರಲಿಲ್ಲ. ಹೀಗಾಗಿ ಫುಟ್ಬಾಲ್ ಕೈಗೆಟುಕದ ಐಷಾರಾಮಿಯಾಗಿತ್ತು.
ಹದಿಹರೆಯದಲ್ಲಿ ಬೀರನ್ವಾಂಡ್ ಪಾಕೆಟ್ ಮನಿಗಾಗಿ ಎರವಲು ಪಡೆದು ಮನೆಯಿಂದ ಓಡಿಹೋಗಿ ಟೆಹ್ರಾನ್ಗೆ ಬಸ್ ಹತ್ತಿದ್ದರು. ಇರಾನ್ನ ರಾಜಧಾನಿಗೆ ಬಂದಿಳಿದಾಗ ಅವರಿಗೆ ಹಾಸಿಗೆ, ಕೋಣೆ ಅಥವಾ ಪರಿಚಯಸ್ಥರು ಯಾರೂ ಇರಲಿಲ್ಲ. ತಿಂಗಳುಗಟ್ಟಲೆ ಸ್ಥಳೀಯ ಫುಟ್ಬಾಲ್ ಕ್ಲಬ್ಗಳ ಹೊರಗೆ ಬೀದಿಗಳಲ್ಲೇ ಮಲಗಿದ್ದರು. ಬೀದಿಗಳನ್ನು ಗುಡಿಸಿ, ಕಾರ್ ವಾಶ್ ಕೇಂದ್ರಗಳಲ್ಲಿ ಟೈರ್ಗಳನ್ನು ಸ್ವಚ್ಛಗೊಳಿಸಿ, ಡ್ರೆಸ್ಮೇಕಿಂಗ್ ಕಾರ್ಖಾನೆಯಲ್ಲಿ ಕೆಲಸ ಮಾಡಿದ್ದರು. ಪಿಜ್ಜಾ ಅಂಗಡಿಯಲ್ಲಿ ತಡರಾತ್ರಿವರೆಗೂ ಹಿಟ್ಟು ಕಲಸುತ್ತಿದ್ದರು.
ಆದರೆ ಅವರ ದೇಹದಾರ್ಢ್ಯ ಉತ್ತಮವಾಗಿತ್ತು. ಬೆಟ್ಟಗಳಲ್ಲಿ ಬೆಳೆದ ಅವರು ಬಾಲ್ಯದಲ್ಲಿ ‘ದಲ್ಪರನ್’ ಎಂಬ ಸ್ಥಳೀಯ ಆಟ ಆಡುತ್ತಿದ್ದರು. ಇದರಲ್ಲಿ ಕುರಿಗಳನ್ನು ರಕ್ಷಿಸಲು ಭಾರವಾದ ಕಲ್ಲುಗಳನ್ನು ಬಹಳ ದೂರಕ್ಕೆ ಎಸೆಯಲಾಗುತ್ತಿತ್ತು. ಹೀಗಾಗಿ ಆಧುನಿಕ ಫುಟ್ಬಾಲ್ ಎಂದೂ ಕಾಣದಂತಹ ದೈಹಿಕ ಸಾಮರ್ಥ್ಯವನ್ನು ಅವರು ಹೊಂದಿದ್ದರು. ಎರಡು ಕಾರಣಗಳಿಗಾಗಿ ಅವರು ಗಿನ್ನಿಸ್ ವಿಶ್ವದಾಖಲೆ ಹೊಂದಿದ್ದಾರೆ. ಫುಟ್ಬಾಲ್ನಲ್ಲಿ ದಾಖಲಾದ ಅತಿ ಉದ್ದದ ಎಸೆತ ಮತ್ತು ಫುಟ್ಬಾಲ್ ಇತಿಹಾಸದ ಅತಿ ಉದ್ದದ ಡ್ರಾಪ್ ಕಿಕ್ ಅವರ ಹೆಸರಿನಲ್ಲಿದೆ.
ಬೆಲ್ಜಿಯಂ ವಿರುದ್ಧ ಅವರ ಆಟ ಐತಿಹಾಸಿಕವಾಗಿತ್ತು. ಇರಾನ್ ಪರವಾಗಿ ಅವರು ತಮ್ಮ ಶಾಟ್-ಸ್ಟಾಪಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಮಾತ್ರವಲ್ಲದೆ, ಬೆಲ್ಜಿಯಂಗೆ ಗೋಲು ಗಳಿಸಲು ಅವಕಾಶ ನೀಡಬಾರದು ಎಂಬ ತಮ್ಮ ಧ್ಯೇಯವನ್ನೂ ಸಾಧಿಸಿದರು. ಎರಡು ಪಂದ್ಯಗಳಿಂದ ಎರಡು ಅಂಕಗಳನ್ನು ಗಳಿಸಿರುವ ಇರಾನ್, ನಾಕೌಟ್ ಹಂತಕ್ಕೆ ಅರ್ಹತೆ ಪಡೆಯುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.






