Google ಪ್ರಕಾರ ನಾಲ್ಕು ರೀತಿಯ Traveller ಗಳಿದ್ದಾರೆ,ಅದರಲ್ಲಿ ನೀವು ಯಾರು?

ಸಾಂದರ್ಭಿಕ ಚಿತ್ರ | Photo Credit : freepik
ಇಂದಿನ ಪ್ರವಾಸಿಗರು ಪ್ರಯಾಣ ಬೆಳೆಸಲು ಮೂಲ ಕಾರಣವಾಗುವುದು ಸಾಮಾಜಿಕ ಮಾಧ್ಯಮ! ಯುಟ್ಯೂಬ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕಂಟೆಂಟ್ ಸೃಷ್ಟಿಸುವವರು ತಿಳಿಸಿದ ವಿವರಗಳಿಂದ ತಮ್ಮ ಪ್ರಯಾಣದ ಪಟ್ಟಿಯನ್ನು ನಿರ್ಧರಿಸಿರುತ್ತಾರೆ.
ಸೂರ್ಯಾಸ್ತವನ್ನು ಕಂಡಾಗ, ಬೆಟ್ಟದ ತುದಿಯನ್ನು ತಲುಪಿದಾಗ ಸಿಗುವ ಅನುಭವವನ್ನು ಮರೆಯಲು ಸಾಧ್ಯವಿಲ್ಲ. ಅಂತಹ ಪ್ರಯಾಣದ ಹುಚ್ಚು ನಿಮಗೂ ಇದೆಯೆ? ಹಾಗಿದ್ದರೆ ನೀವು ಯಾವ ವಿಭಾಗದ ಪ್ರಯಾಣಿಕರು?
ಗೂಗಲ್ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ಭಾರತೀಯ ಪ್ರವಾಸಿಗರನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿದೆ. ಪ್ರತಿಯೊಂದು ವಿಭಾಗದವರೂ ತಮ್ಮದೇ ಆದ ಶೈಲಿ, ಉದ್ದೇಶ ಮತ್ತು ವಿಶಿಷ್ಟ ದೃಷ್ಟಿಕೋನದಿಂದ ಪ್ರವಾಸ ಕೈಗೊಳ್ಳುತ್ತಾರೆ.
►ಅನುಭವಕ್ಕಾಗಿ ಪ್ರವಾಸ
ಮೊದಲನೆಯ ವಿಭಾಗದವವರು ಅನುಭವಕ್ಕಾಗಿ ಪ್ರವಾಸ ಮಾಡುವವರು! ಇವರು ಕಲಾವಿದರ ಕಾರ್ಯಕ್ರಮಗಳು, ಕ್ರೀಡಾ ಪಂದ್ಯಾವಳಿಗಳು ಮೊದಲಾದ ಉದ್ದೇಶಗಳಿಗೆ ಪ್ರವಾಸ ಬೆಳೆಸುತ್ತಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ನೋಡುವ ಬದಲಾಗಿ ಸ್ವತಃ ಅನುಭವಪಡೆಯಲು ಬಯಸುವವರು. ಇವರು ಸೂರ್ಯಾಸ್ತ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಟೇಡಿಯಂನ ಅಬ್ಬರ, ಹಬ್ಬಗಳು ಮೊದಲಾಗಿ “ನಾನಲ್ಲಿದ್ದೆ” ಎನ್ನುವ ಕ್ಷಣಗಳನ್ನು ಜೀವಿಸಬಯಸುವವರು. ಜನರೇಶನ್ ಝೆಡ್ ಅಥವಾ ಜನ್ ಝೆಡ್ ಎಂದೇ ಹೆಸರಾದವರು ಇವರು!
ಸಮೀಕ್ಷೆಯ ಪ್ರಕಾರ ಇವರು ವಾರವಿಡೀ ತಮ್ಮ ಪ್ರಯಾಣವನ್ನು ಯೋಜಿಸುತ್ತಾರೆ. ಬಹುತೇಕ 11 ದಿನಗಳ ಕಾಲ ಪ್ರಯಾಣ ಕೈಗೊಳ್ಳುತ್ತಾರೆ. ಸಾಮಾನ್ಯವಾಗಿ ಸ್ನೇಹಿತರ ಜೊತೆಗೆ ಯೋಜನೆ ರೂಪಿಸುತ್ತಾರೆ. ಶೇ 64ರಷ್ಟು ಜನ್ ಝೆಡ್ ಅಂತಾರಾಷ್ಟ್ರೀಯ ತಾಣಗಳನ್ನು ಬಯಸುತ್ತಾರೆ.
►ಮಿಲೇನಿಯಲ್ ಗಳ ಪ್ರಯಾಣ
ಇನ್ನೊಂದು ತಂಡ ಮಿಲೇನಿಯಲ್ ಗಳು ಎಂದು ಕರೆಸಿಕೊಳ್ಳುವವರು ಮತ್ತು ಮಹಾನಗರಗಳಲ್ಲಿ ನೆಲೆಸಿರುವವರು. ತಮ್ಮದೇ ಆದ ಸಾಹಸಗಳಿಗೆ ಹಣಕಾಸು ಒದಗಿಸುವವರು. ಶೇ. 59ರಷ್ಟು ಮಂದಿ ಯೋಜನೆಯ ಸಂಪೂರ್ಣ ಜವಾಬ್ದಾರಿ ಹೊರುತ್ತಾರೆ. ಇವರು ಆನಂದಕ್ಕಾಗಿ ಪ್ರಯಾಣಿಸುವವರು. ಇವರಿಗೆ ಪ್ರಯಾಣವು ಗಮ್ಯ ಸ್ಥಾನದಷ್ಟೇ ಮುಖ್ಯವಾಗುತ್ತದೆ.
ಅತ್ಯುತ್ತಮ ಹೊಟೇಲ್, ಮೆನು, ಬ್ಯುಸಿನೆಸ್ ಕ್ಲಾಸ್ ಪ್ರಯಾಣ ಮತ್ತು ಪ್ರೀಮಿಯಂ ಲಾಂಜ್ ಗಳನ್ನು ಹುಡುಕುತ್ತಾರೆ. ಇವರು ಪ್ರಯಾಣದ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿ ವಾರಕ್ಕೂ ಮೊದಲೇ ಯೋಜನೆ ರೂಪಿಸುತ್ತಾರೆ. ಶೇ. 63ರಷ್ಟು ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ ವಿ-ಬ್ಲಾಗ್ ಮಾಡುವವರು ಮತ್ತು ಬಹಳ ಪ್ರಭಾವಿ ಮತ್ತು ಪ್ರಯಾಣಕ್ಕೆ ಸ್ಫೂರ್ತಿ ನೀಡುವವರು. ಇವರು ಒಂದೆರಡು ದಿನಗಳಿಗೆ ಪ್ರಯಾಣಿಸುವವರಲ್ಲ. ವಾರವಿಡೀ ತಿರುಗಾಡುವ ಯೋಜನೆಯೊಂದಿಗೆ ಹೋಗುತ್ತಾರೆ. ಬಹುತೇಕ ಸಂಗಾತಿಗಳ ಜೊತೆಗೆ ತಿರುಗುತ್ತಾರೆ.
►ಆರಂಭಿಕ ಪ್ರಯಾಣಿಗರು
ಇವರು ಬಹುತೇಕ ಜೆನ್ ಝೆಡ್ ಮಹಿಳೆಯರಾಗಿರುತ್ತಾರೆ. ಶೇ 38ರಷ್ಟು ಮಂದಿ 24 ಗಂಟೆಯೊಳಗೆ ನಿರ್ಧಾರ ಮಾಡಿ ಬುಕಿಂಗ್ ಮಾಡಿ ನಾಲ್ಕೈದು ದಿನಗಳಿಗೆ ಹೊರಗೆ ಹೋಗಿ ಬರುವವರು. ಇವರು ಉತ್ಸಾಹಿಗಳು ಮತ್ತು ತಮ್ಮ ಬಜೆಟ್ ಬಗ್ಗೆ ಜಾಗರೂಕರಾಗಿರುತ್ತಾರೆ. ತ್ವರಿತವಾಗಿ ಯೋಜನೆ ರೂಪಿಸುವವರು. ಪ್ಯಾಕೇಜ್ ಮತ್ತು ರಿಯಾಯಿತಿ ಕೊಡುಗೆಗಳಲ್ಲಿ ಪ್ರಯಾಣಿಸಲು ಬಯುಸುತ್ತಾರೆ.
►ಧಾರ್ಮಿಕ ಯಾತ್ರಿಗಳು
ನಾಲ್ಕನೇ ವಿಭಾಗದವರಲ್ಲಿ ಜೆನ್ ಝೆಡ್, ಮಿಲೇನಿಯಲ್ ಅಥವಾ ಜೆನ್ ಎಕ್ಸ್ ಎಲ್ಲರೂ ಇರುತ್ತಾರೆ. ಇವರು ಐತಿಹಾಸಿಕ ತಾಣಗಳಿಗೆ ಭೇಟಿ ಕೊಡಲು ಬಯಸುತ್ತಾರೆ. ವಾರಾಣಾಸಿ, ಹರಿದ್ವಾರ ಇತ್ಯಾದಿ ಸ್ಥಳಗಳಿಗೆ ಪ್ರವಾಸ ಹೋಗುತ್ತಾರೆ. ಪರಂಪರೆ ಮತ್ತು ಸಾಂಸ್ಕೃತಿಕ ಸ್ಥಳಗಳು ಇವರ ಗುರಿಯಾಗಿರುತ್ತದೆ. ವೆಚ್ಚದ ಬಗ್ಗೆ ಬಹಳ ಸೂಕ್ಷ್ಮತೆ ಇರುತ್ತದೆ. ಸ್ನೇಹಿತರು ಮತ್ತು ಕುಟುಂಬದವರ ಜೊತೆಗೆ ಅಥವಾ ಇತರ ಧಾರ್ಮಿಕ ಸಮುದಾಯದವರ ಜೊತೆಗೆ ಪ್ರಯಾಣ ಬೆಳೆಸುತ್ತಾರೆ.
ಇವೆರಲ್ಲರೂ ಪ್ರಯಾಣ ಬೆಳೆಸಲು ಮೂಲ ಕಾರಣವಾಗುವುದು ಸಾಮಾಜಿಕ ಮಾಧ್ಯಮ! ಯುಟ್ಯೂಬ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕಂಟೆಂಟ್ ಸೃಷ್ಟಿಸುವವರು ತಿಳಿಸಿದ ವಿವರಗಳಿಂದ ತಮ್ಮ ಪ್ರಯಾಣದ ಪಟ್ಟಿಯನ್ನು ನಿರ್ಧರಿಸಿರುತ್ತಾರೆ.







