ಯೆನ್ ರಕ್ಷಣೆಗೆ ಟ್ರಂಪ್ ಮಧ್ಯಪ್ರವೇಶ; ಜಪಾನ್ ಕರೆನ್ಸಿ ಬಿಕ್ಕಟ್ಟಿನ ಹಿಂದಿನ ಆರ್ಥಿಕ, ರಾಜಕೀಯ ಲೆಕ್ಕಾಚಾರ

ಡೊನಾಲ್ಡ್ ಟ್ರಂಪ್ | Photo Credit : AP , PTI
ಹೊಸದಿಲ್ಲಿ: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದ ಕುರಿತು ಭಾರತದಲ್ಲಿ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ, ಜಪಾನ್ ನ ಕರೆನ್ಸಿಯಾದ ಯೆನ್ ಕೂಡ ತೀವ್ರ ಒತ್ತಡಕ್ಕೆ ಸಿಲುಕಿದೆ. ಆದರೆ ಈ ಬೆಳವಣಿಗೆಯಲ್ಲಿ ವಿಶೇಷ ಗಮನ ಸೆಳೆದಿರುವುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡೆ. ಯೆನ್ ಮೌಲ್ಯ ಸ್ಥಿರಗೊಳಿಸುವ ಪ್ರಯತ್ನಕ್ಕೆ ಅಮೆರಿಕ ಬೆಂಬಲ ನೀಡಿರುವುದು ಜಾಗತಿಕ ಹಣಕಾಸು ವಲಯದಲ್ಲಿ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಅಮೆರಿಕ ಯೆನ್ ಖರೀದಿಸಲು ಮುಂದಾಗಿರುವುದು ಏಕೆ? ಇದು ಜಪಾನ್ ಗೆ ನೆರವಾಗುವ ಕ್ರಮವೇ, ಅಥವಾ ಅದರ ಹಿಂದೆ ಅಮೆರಿಕದ ಸ್ವಂತ ಆರ್ಥಿಕ ಮತ್ತು ರಾಜಕೀಯ ಹಿತಾಸಕ್ತಿ ಅಡಗಿದೆಯೇ ಎಂಬ ಚರ್ಚೆ ಈಗ ನಡೆಯುತ್ತಿದೆ.
ಯೆನ್ ಮೌಲ್ಯ ಕುಸಿಯತೊಡಗಿದಾಗ, ಭಾರತ ರೂಪಾಯಿಯನ್ನು ಬೆಂಬಲಿಸಲು ಡಾಲರ್ ಮಾರಾಟ ಮಾಡಿದ ಮಾದರಿಯಲ್ಲೇ ಜಪಾನ್ ಕೂಡ ತನ್ನ ವಿದೇಶಿ ವಿನಿಮಯ ಸಂಗ್ರಹದಿಂದ ಟ್ರಿಲಿಯನ್ಗಟ್ಟಲೆ ಡಾಲರ್ಗಳನ್ನು ಮಾರಾಟ ಮಾಡಿ ಯೆನ್ ಮೌಲ್ಯ ಸ್ಥಿರಗೊಳಿಸಲು ಪ್ರಯತ್ನಿಸಿತು. ಆದರೆ ಆ ಕ್ರಮ ಫಲ ನೀಡಲಿಲ್ಲ. ಪರಿಣಾಮವಾಗಿ ಯೆನ್ ಸುಮಾರು ನಾಲ್ಕು ದಶಕಗಳಲ್ಲೇ ಅತ್ಯಂತ ದುರ್ಬಲ ಮಟ್ಟಕ್ಕೆ ಕುಸಿಯಿತು.
ಈ ಬೆಳವಣಿಗೆಯ ಬೆನ್ನಲ್ಲೇ, ಅಮೆರಿಕದ ನ್ಯೂಯಾರ್ಕ್ ಫೆಡರಲ್ ಬ್ಯಾಂಕ್, ಖಜಾನೆ ಇಲಾಖೆಯ ಪರವಾಗಿ ಯೂರೋಗಳನ್ನು ಮಾರಾಟ ಮಾಡಿ ಯೆನ್ ಖರೀದಿಸಿದೆ ಎಂದು ವರದಿಯಾಗಿದೆ. ಅಗತ್ಯವಿದ್ದರೆ ಜಪಾನ್ನೊಂದಿಗೆ ಈ ಕ್ರಮವನ್ನು ಮುಂದುವರಿಸಲಾಗುವುದು ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸ್ಸೆಂಟ್ ಹೇಳಿದ್ದಾರೆ.
ಆದರೆ ಅಮೆರಿಕ ಯೆನ್ ಖರೀದಿಸುವುದರಿಂದ ಮೂಲ ಸಮಸ್ಯೆ ಪರಿಹಾರವಾಗುವುದಿಲ್ಲ. ಆದರೆ ಮಾರುಕಟ್ಟೆಯಲ್ಲಿನ ಒತ್ತಡವನ್ನು ತಾತ್ಕಾಲಿಕವಾಗಿ ತಗ್ಗಿಸಿ, ಕರೆನ್ಸಿಯ ಕುಸಿತದ ವೇಗವನ್ನು ನಿಯಂತ್ರಿಸಲು ಸಾಧ್ಯವಾಗಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಡುತ್ತಾರೆ.
►ಯೆನ್ ಕುಸಿತಕ್ಕೆ ಕ್ಯಾರಿ ಟ್ರೇಡ್ ಕಾರಣ
ಯೆನ್ ದುರ್ಬಲಗೊಳ್ಳಲು ಪ್ರಮುಖ ಕಾರಣಗಳಲ್ಲಿ ಮೊದಲನೆಯದು ಕ್ಯಾರಿ ಟ್ರೇಡ್.
ಕಡಿಮೆ ಬಡ್ಡಿದರ ಇರುವ ದೇಶದ ಕರೆನ್ಸಿಯಲ್ಲಿ ಸಾಲ ಪಡೆದು, ಹೆಚ್ಚಿನ ಬಡ್ಡಿದರ ನೀಡುವ ದೇಶಗಳ ಕರೆನ್ಸಿ ಅಥವಾ ಆಸ್ತಿಗಳಲ್ಲಿ ಹೂಡಿಕೆ ಮಾಡುವ ಹಣಕಾಸು ತಂತ್ರವನ್ನು ಕ್ಯಾರಿ ಟ್ರೇಡ್ ಎಂದು ಕರೆಯಲಾಗುತ್ತದೆ.
ಜಪಾನ್ ನಲ್ಲಿ ಬಡ್ಡಿದರ ಅತ್ಯಂತ ಕಡಿಮೆ ಇರುವುದರಿಂದ ಜಾಗತಿಕ ಹೂಡಿಕೆದಾರರು ಹಾಗೂ ಅಲ್ಲಿನ ದೊಡ್ಡ ಹಣಕಾಸು ಸಂಸ್ಥೆಗಳು ಅಗ್ಗದ ದರದಲ್ಲಿ ಯೆನ್ ನಲ್ಲಿ ಸಾಲ ಪಡೆಯುತ್ತವೆ. ನಂತರ ಆ ಹಣದಿಂದ ಅಮೆರಿಕ ಡಾಲರ್ ಸೇರಿದಂತೆ ಹೆಚ್ಚಿನ ಆದಾಯ ನೀಡುವ ಕರೆನ್ಸಿ ಹಾಗೂ ಹಣಕಾಸು ಆಸ್ತಿಗಳನ್ನು ಖರೀದಿಸುತ್ತವೆ.
ಇದರಿಂದ ಮಾರುಕಟ್ಟೆಯಲ್ಲಿ ಯೆನ್ ಪೂರೈಕೆ ನಿರಂತರವಾಗಿ ಹೆಚ್ಚುತ್ತದೆ. ಯಾವುದೇ ಕರೆನ್ಸಿಯ ಪೂರೈಕೆ ಹೆಚ್ಚಿದಂತೆ ಅದರ ಮೌಲ್ಯ ಕುಸಿಯುತ್ತದೆ. ಮತ್ತೊಂದೆಡೆ ಡಾಲರ್ ಗೆ ಬೇಡಿಕೆ ಹೆಚ್ಚಿದಂತೆ ಅದರ ಮೌಲ್ಯ ಏರಿಕೆಯಾಗುತ್ತದೆ. ಈ ಪ್ರಕ್ರಿಯೆ ಯೆನ್ ಮೇಲೆ ನಿರಂತರ ಒತ್ತಡ ಉಂಟುಮಾಡುತ್ತಿದೆ.
►ತೈಲ ಆಮದು ಮತ್ತು ಪಶ್ಚಿಮ ಏಷ್ಯಾ ಯುದ್ಧ ತಂದ ಆಪತ್ತು
ಜಪಾನ್ ತನ್ನ ಕಚ್ಚಾ ತೈಲ ಮತ್ತು ಅನಿಲ ಅಗತ್ಯಗಳಲ್ಲಿ ಸುಮಾರು 99 ಶೇಕಡಾವನ್ನು ವಿದೇಶಗಳಿಂದ, ಮುಖ್ಯವಾಗಿ ಪಶ್ಚಿಮ ಏಷ್ಯಾದ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ.
ಇರಾನ್ ಸಂಬಂಧಿತ ಯುದ್ಧದ ಬಳಿಕ ತೈಲ ಪೂರೈಕೆಯಲ್ಲಿ ಅನಿಶ್ಚಿತತೆ ಉಂಟಾಗಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಏರಿಕೆಯಾಗಿವೆ.
ದುಬಾರಿ ತೈಲ ಖರೀದಿಸಲು ಜಪಾನ್ ಹೆಚ್ಚಿನ ಪ್ರಮಾಣದಲ್ಲಿ ಡಾಲರ್ ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಡಾಲರ್ ಗೆ ಬೇಡಿಕೆ ಹೆಚ್ಚಿ, ಯೆನ್ ಮತ್ತಷ್ಟು ದುರ್ಬಲಗೊಂಡಿದೆ.
ಇದರ ಪರಿಣಾಮವಾಗಿ ದೇಶದಲ್ಲಿ ಹಣದುಬ್ಬರವೂ ಏರಿಕೆಯಾಗಿದೆ. ವಿದ್ಯುತ್ ಮತ್ತು ಪೆಟ್ರೋಲ್ ದರ ಏರಿಕೆಯಿಂದ ಸಾರ್ವಜನಿಕರ ಮೇಲಿನ ಹೊರೆ ಕಡಿಮೆ ಮಾಡಲು ಜಪಾನ್ ಸರಕಾರ ಶತಕೋಟಿ ಡಾಲರ್ಗಳ ಸಬ್ಸಿಡಿ ನೀಡುತ್ತಿದೆ. ಇದರಿಂದ ಸರಕಾರದ ಹಣಕಾಸಿನ ಮೇಲೂ ಹೆಚ್ಚಿನ ಒತ್ತಡ ಉಂಟಾಗಿದೆ.
►ಬಡ್ಡಿದರ ನೀತಿಯ ದ್ವಂದ್ವ
ಹಣದುಬ್ಬರ ನಿಯಂತ್ರಿಸಲು ಅಮೆರಿಕದ ಕೇಂದ್ರ ಬ್ಯಾಂಕ್ ತನ್ನ ಬಡ್ಡಿದರವನ್ನು ಸುಮಾರು 5 ಶೇಕಡಾಕ್ಕೆ ಏರಿಸಿದೆ.
ಆದರೆ ಬ್ಯಾಂಕ್ ಆಫ್ ಜಪಾನ್ ಕೂಡ ಬಡ್ಡಿದರ ಹೆಚ್ಚಿಸಿದರೆ ಅಲ್ಲಿನ ಕಂಪೆನಿಗಳು ಹಾಗೂ ಸಾಮಾನ್ಯ ಜನರು ಹೆಚ್ಚಿನ ಸಾಲದ ಹೊರೆ ಎದುರಿಸಬೇಕಾಗುತ್ತದೆ. ಇದರಿಂದ ಆರ್ಥಿಕ ಚಟುವಟಿಕೆ ನಿಧಾನಗೊಳ್ಳುವ ಅಪಾಯವಿದೆ.
ಮತ್ತೊಂದೆಡೆ ಬಡ್ಡಿದರ ಹೆಚ್ಚಿಸದೇ ಇರುವುದರಿಂದ ಅಮೆರಿಕ ಮತ್ತು ಜಪಾನ್ ನಡುವಿನ ಬಡ್ಡಿದರ ಅಂತರ ಮುಂದುವರಿಯುತ್ತಿದೆ. ಇದೇ ಅಂತರ ಹೂಡಿಕೆದಾರರನ್ನು ಡಾಲರ್ ಕಡೆಗೆ ಸೆಳೆಯುತ್ತಿದ್ದು, ಯೆನ್ ಮೌಲ್ಯ ನಿರಂತರವಾಗಿ ಕುಸಿಯಲು ಕಾರಣವಾಗಿದೆ.
►ಹಿರಿಯರ ಸಂಖ್ಯೆಯೇ ಹೆಚ್ಚು ಮತ್ತು ಭಾರೀ ಸಾಲ
ಜಪಾನ್ ನ ಆರ್ಥಿಕತೆಗೆ ಮತ್ತೊಂದು ದೊಡ್ಡ ಸವಾಲು ಅದರ ಜನಸಂಖ್ಯೆಯ ರಚನೆ.
ದೇಶದಲ್ಲಿ 65 ವರ್ಷ ಮೇಲ್ಪಟ್ಟ ಸುಮಾರು 36 ಮಿಲಿಯನ್ ಜನರಿದ್ದು, ಇದು ಒಟ್ಟು ಜನಸಂಖ್ಯೆಯ ಸುಮಾರು 30 ಶೇಕಡಾವಾಗಿದೆ.
ಇದೇ ವೇಳೆ ಕೆಲಸ ಮಾಡುವ ವಯಸ್ಸಿನ 15ರಿಂದ 64 ವರ್ಷ ವಯೋಮಾನದ ಜನಸಂಖ್ಯೆ ವೇಗವಾಗಿ ಕುಸಿಯುತ್ತಿದೆ. 2020ರಲ್ಲಿ ಸುಮಾರು 70 ಮಿಲಿಯನ್ ಇದ್ದ ಈ ವರ್ಗದ ಜನಸಂಖ್ಯೆ 2040ರ ವೇಳೆಗೆ ಸುಮಾರು 62 ಮಿಲಿಯನ್ಕ್ಕೆ ಇಳಿಯಲಿದೆ ಎಂದು ಅಂದಾಜಿಸಲಾಗಿದೆ.
ಇದರಿಂದ ತೆರಿಗೆ ಪಾವತಿಸುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಸರಕಾರದ ಆದಾಯದ ಬಹುಪಾಲು ಪಿಂಚಣಿ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಿಗೆ ವೆಚ್ಚವಾಗುತ್ತಿದೆ.
ಇದರ ಜೊತೆಗೆ ಜಪಾನ್ ನ ಒಟ್ಟು ಸರ್ಕಾರಿ ಸಾಲ ದೇಶದ ಜಿಡಿಪಿಯ 200 ಶೇಕಡಕ್ಕೂ ಹೆಚ್ಚು ತಲುಪಿದೆ. ಆರ್ಥಿಕತೆಯ ಗಾತ್ರಕ್ಕಿಂತ ಎರಡು ಪಟ್ಟು ಹೆಚ್ಚು ಸಾಲ ಇರುವುದರಿಂದ ವಿದೇಶಿ ಹೂಡಿಕೆದಾರರಲ್ಲಿ ಆತಂಕ ಮೂಡಿದೆ. ಇದರ ಪರಿಣಾಮವೂ ಯೆನ್ ಮೇಲಿನ ವಿಶ್ವಾಸ ಕುಗ್ಗಲು ಕಾರಣವಾಗಿದೆ.
►ಟ್ರಂಪ್ ಮಧ್ಯಪ್ರವೇಶದ ಹಿಂದಿನ ಲೆಕ್ಕಾಚಾರ
ಟ್ರಂಪ್ ಜಪಾನ್ ಗೆ ಬೆಂಬಲ ನೀಡುತ್ತಿರುವುದರ ಹಿಂದೆ ಅಮೆರಿಕದ ಸ್ವಂತ ಹಿತಾಸಕ್ತಿಯೂ ಇದೆ ಎಂಬ ವಿಶ್ಲೇಷಣೆಗಳಿವೆ.
ಜಪಾನ್ ಪ್ರಧಾನಿ ಸಾನೇ ತಕೈಚಿ ಅವರ ಆರ್ಥಿಕ ನೀತಿಗಳು ದೇಶದ ಆರ್ಥಿಕ ಕುಸಿತಕ್ಕೆ ಕಾರಣವಾಗುತ್ತಿವೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಹಣದುಬ್ಬರ ಮತ್ತು ದುರ್ಬಲ ಆರ್ಥಿಕ ಬೆಳವಣಿಗೆಯಿಂದ ಸಾರ್ವಜನಿಕರಲ್ಲಿ ಅಸಮಾಧಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರು ಆಹಾರ ಪದಾರ್ಥಗಳ ಮೇಲಿನ ತೆರಿಗೆಯನ್ನು ಮತ್ತೆ ಕಡಿಮೆ ಮಾಡಿದ್ದಾರೆ.
ಆದರೆ ಈ ಕ್ರಮದಿಂದ ಜಪಾನ್ ನ ಹಣಕಾಸು ಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಪರಿಸ್ಥಿತಿಯೇ ಟ್ರಂಪ್ಗೆ ಜಪಾನ್ ನಲ್ಲಿ ತನ್ನ ರಾಜಕೀಯ ಹಾಗೂ ಆರ್ಥಿಕ ಪ್ರಭಾವ ವಿಸ್ತರಿಸಿಕೊಳ್ಳಲು ಅವಕಾಶ ಕಲ್ಪಿಸಿದೆ ಎಂಬ ವಿಶ್ಲೇಷಣೆಗಳೂ ಇವೆ. ಅರ್ಜೆಂಟೀನಾದಲ್ಲಿಯೂ ಇದೇ ರೀತಿಯ ಕಾರ್ಯತಂತ್ರವನ್ನು ಅವರು ಅನುಸರಿಸಿದ್ದಾರೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಕೆಲವು ವಿಶ್ಲೇಷಕರ ಪ್ರಕಾರ, ಎಡಪಂಥೀಯ ಆರ್ಥಿಕ ನೀತಿಗಳಿಗೆ ವಿರುದ್ಧವಾಗಿ ನಿಲ್ಲಬಲ್ಲ ಸೈದ್ಧಾಂತಿಕ ಮಿತ್ರತ್ವವನ್ನೂ ಟ್ರಂಪ್ ತಕೈಚಿಯಿಂದ ನಿರೀಕ್ಷಿಸುತ್ತಿದ್ದಾರೆ. ಇದೂ ಅಮೆರಿಕ ಯೆನ್ ಗೆ ಬೆಂಬಲ ನೀಡುತ್ತಿರುವ ಕಾರಣಗಳಲ್ಲಿ ಒಂದಾಗಿರಬಹುದು ಎಂದು ಹೇಳಲಾಗುತ್ತಿದೆ.
►ಅಮೆರಿಕದ ಬಾಂಡ್ ಮಾರುಕಟ್ಟೆಯೂ ಪ್ರಮುಖ ಕಾರಣ
ಜಪಾನ್ ವಿಶ್ವದಲ್ಲೇ ಅತಿ ಹೆಚ್ಚು ಅಮೆರಿಕದ ಸರ್ಕಾರಿ ಬಾಂಡ್ಗಳನ್ನು ಹೊಂದಿರುವ ದೇಶವಾಗಿದೆ.
ಒಂದು ವೇಳೆ ಜಪಾನ್ ತನ್ನ ಬಳಿ ಇರುವ ಯುಎಸ್ ಬಾಂಡ್ ಗಳನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಿದರೆ, ಅಮೆರಿಕದ ಹಣಕಾಸು ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಸಾಲದ ಮೇಲಿನ ಬಡ್ಡಿದರಗಳು ವೇಗವಾಗಿ ಏರಬಹುದು.
ಗೃಹಸಾಲ, ವಾಹನ ಸಾಲ ಸೇರಿದಂತೆ ವಿವಿಧ ಸಾಲ ಪಡೆದಿರುವ ಅಮೆರಿಕನ್ನರ ಮೇಲಿನ ಬಡ್ಡಿ ಹೊರೆ ಹೆಚ್ಚಾಗದಂತೆ ನೋಡಿಕೊಳ್ಳುವುದು ಟ್ರಂಪ್ಗೆ ರಾಜಕೀಯವಾಗಿಯೂ ಮಹತ್ವದ ವಿಷಯವಾಗಿದೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಅಪಾಯವನ್ನು ತಪ್ಪಿಸಲು ಅವರು ಮಧ್ಯಪ್ರವೇಶಿಸಿದ್ದಾರೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಇದರ ಜೊತೆಗೆ, ಅಮೆರಿಕದ ಫೆಡರಲ್ ರಿಸರ್ವ್ ಜಪಾನ್ ಗೆ ವಿಶೇಷ ಸೌಲಭ್ಯವನ್ನೂ ಒದಗಿಸಿದೆ. ಅದರಡಿ ಜಪಾನ್ ತನ್ನ ಬಳಿ ಇರುವ ಯುಎಸ್ ಬಾಂಡ್ ಗಳನ್ನು ಮಾರಾಟ ಮಾಡುವ ಅಗತ್ಯವಿಲ್ಲ. ಅವುಗಳನ್ನು ಒತ್ತೆಯಿಟ್ಟು ಅಮೆರಿಕದಿಂದ ಡಾಲರ್ ಎರವಲು ಪಡೆಯಬಹುದು.
ಹೀಗಾಗಿ, ಜಪಾನ್ ಗೆ ನೆರವಾಗುತ್ತಿರುವಂತೆ ಕಂಡರೂ, ವಾಸ್ತವದಲ್ಲಿ ತನ್ನದೇ ಹಣಕಾಸು ಮಾರುಕಟ್ಟೆಗೆ ಉಂಟಾಗಬಹುದಾದ ಹೊಡೆತವನ್ನು ತಪ್ಪಿಸುವ ಉದ್ದೇಶದಿಂದ ಅಮೆರಿಕ ಈ ಕ್ರಮಗಳನ್ನು ಕೈಗೊಂಡಿದೆ ಎಂಬುದು ಹಲವು ಆರ್ಥಿಕ ವಿಶ್ಲೇಷಕರ ಅಭಿಪ್ರಾಯವಾಗಿದೆ.






