ಅಮೆರಿಕದಲ್ಲಿ ಡೆಲಿಲಾ ಕಾನೂನು ತರಲು ಮುಂದಾದ ಟ್ರಂಪ್; ಕಾನೂನು ಜಾರಿಯಾದರೆ ಭಾರತೀಯ ಟ್ರಕ್ ಡ್ರೈವರ್ಗಳಿಗೆ ಸಂಕಷ್ಟ ಯಾಕೆ?

Photo Credit : indiatoday.in
ಅಕ್ರಮ ವಲಸಿಗರಿಗೆ ವಾಣಿಜ್ಯ ಚಾಲನಾ ಪರವಾನಗಿ ನೀಡುವುದನ್ನು ನಿರ್ಬಂಧಿಸುವ ಗುರಿಯನ್ನು ಹೊಂದಿರುವ ‘ಡೆಲಿಲಾ ಕಾನೂನು’ ಅನುಷ್ಠಾನಕ್ಕಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಬ್ರವರಿ 24ರಂದು ಯುಎಸ್ ಕಾಂಗ್ರೆಸ್ನ ಜಂಟಿ ಅಧಿವೇಶನವನ್ನು ಒತ್ತಾಯಿಸಿದ್ದಾರೆ. ಈ ಕ್ರಮವು ಸಾವಿರಾರು ಭಾರತೀಯ ಮೂಲದ ಚಾಲಕರ ಮೇಲೆ, ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣದ ಚಾಲಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಜೂನ್ 20, 2024ರಂದು ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾರ್ಡಿನೊ ಕೌಂಟಿಯ ಅಡೆಲಾಂಟೊದಲ್ಲಿ ಭಾರತೀಯ ಟ್ರಕ್ ಚಾಲಕನೊಬ್ಬ ಕಾರಿಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಡೆಲಿಲಾ ಕೋಲ್ಮನ್ ಎಂಬ ಬಾಲಕಿಗೆ ಗಂಭೀರ ಗಾಯಗಳಾಗಿತ್ತು. ಈ ಬಾಲಕಿಯ ಹೆಸರನ್ನೇ ಈ ಕಾನೂನಿಗೆ ಇಡಲಾಗಿದೆ.
ತಮ್ಮ ವಾರ್ಷಿಕ ಯುಎಸ್ ಸ್ಟೇಟ್ ಆಫ್ ದಿ ಯೂನಿಯನ್ ಉದ್ದೇಶಿಸಿ ನಡೆಸಿದ ಭಾಷಣದಲ್ಲಿ ಅಧ್ಯಕ್ಷ ಟ್ರಂಪ್ ಈ ಕಾನೂನು ಬಗ್ಗೆ ಉಲ್ಲೇಖಿಸಿದ್ದಾರೆ. ಯಾವುದೇ ರಾಜ್ಯವು ದಾಖಲೆರಹಿತ ಚಾಲಕರಿಗೆ ಚಾಲನಾ ಪರವಾನಗಿ ನೀಡುವುದನ್ನು ತಡೆಯಲು ಏಕೀಕೃತ ಪ್ರಯತ್ನದ ಬೇಡಿಕೆಯನ್ನು ಟ್ರಂಪ್ ಒತ್ತಾಯಿಸಿದ್ದಾರೆ. “ಇಂದು ರಾತ್ರಿ, ನಾನು ಪ್ರತಿಯೊಬ್ಬ ಜನಪ್ರತಿನಿಧಿಯನ್ನು ನನ್ನ ಆಡಳಿತದೊಂದಿಗೆ ಸೇರಿ ಮೂಲಭೂತ ತತ್ವವನ್ನು ಪುನರುಚ್ಚರಿಸುವಂತೆ ಆಹ್ವಾನಿಸುತ್ತಿದ್ದೇನೆ. ನೀವು ಈ ಹೇಳಿಕೆಯನ್ನು ಒಪ್ಪಿದರೆ, ಎದ್ದುನಿಂತು ನಿಮ್ಮ ಬೆಂಬಲವನ್ನು ತೋರಿಸಿ. ಅಮೆರಿಕನ್ ಸರ್ಕಾರದ ಮೊದಲ ಕರ್ತವ್ಯವೆಂದರೆ ಅಕ್ರಮ ವಿದೇಶಿಯರನ್ನಲ್ಲ, ಅಮೆರಿಕನ್ ನಾಗರಿಕರನ್ನು ರಕ್ಷಿಸುವುದು” ಎಂದು ಟ್ರಂಪ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಯಾರು ಈ ಡೆಲಿಲಾ ಕೋಲ್ಮನ್?
ಡೆಲಿಲಾ ಕೋಲ್ಮನ್ ಆರು ವರ್ಷದ ಬಾಲಕಿ. ಭಾರತೀಯ ಟ್ರಕ್ ಚಾಲಕನಿಂದ ಸಂಭವಿಸಿದ ಬಹುವಾಹನ ಅಪಘಾತದಲ್ಲಿ ಈಕೆಗೆ ಗಂಭೀರ ಗಾಯಗಳಾಗಿತ್ತು. ಅಪಘಾತದ ಸಮಯದಲ್ಲಿ ಕೋಲ್ಮನ್ಗೆ ಐದು ವರ್ಷ ವಯಸ್ಸಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ವಿಮಾನದ ಮೂಲಕ ಅಪಘಾತ ಸ್ಥಳದಿಂದ ಹೊರತರಲಾಗಿತ್ತು. ಈ ಅಪಘಾತದಲ್ಲಿ ಕೋಲ್ಮನ್ನ ಮೆದುಳು ಮತ್ತು ತಲೆಬುರುಡೆಗೆ ಗಾಯಗಳಾಗಿದ್ದು, ಎಲುಬು ಮುರಿದಿತ್ತು. ಆಕೆ ಮೂರು ವಾರಗಳ ಕಾಲ ಕೋಮಾದಲ್ಲಿದ್ದಳು. ನಂತರ ಆಕೆ ಕ್ರೇನಿಯೆಕ್ಟಮಿ (ತಲೆಬುರುಡೆಯ ಒಂದು ಭಾಗವನ್ನು ತೆಗೆಯುವ ಶಸ್ತ್ರಚಿಕಿತ್ಸೆ)ಗೆ ಒಳಗಾಗಬೇಕಾಯಿತು.
ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, ಅಪಘಾತದ ನಂತರ ಕೋಲ್ಮನ್ ನಡೆಯಲು ಕಷ್ಟಪಡುತ್ತಿದ್ದಾಳೆ. ಆಕೆಗೆ ಆಹಾರ ಸೇವಿಸಲು ಆಗುತ್ತಿಲ್ಲ. ಅವಳಿಗೆ ಡಿಪ್ಲೆಜಿಕ್ ಸೆರೆಬ್ರಲ್ ಪಾಲ್ಸಿ ಇರುವುದಾಗಿ ಪತ್ತೆಯಾಗಿದೆ.
ಅಧ್ಯಕ್ಷ ಟ್ರಂಪ್ ಅವರ ಸ್ಟೇಟ್ ಆಫ್ ದಿ ಯೂನಿಯನ್ ಭಾಷಣದಲ್ಲಿ ಕೋಲ್ಮನ್ ಕೂಡ ಭಾಗವಹಿಸಿದ್ದಾಳೆ.
ತಮ್ಮ ಭಾಷಣದಲ್ಲಿ ಟ್ರಂಪ್, “ಡೆಲಿಲಾ ಎಂದಿಗೂ ನಡೆಯಲು ಅಥವಾ ಮಾತನಾಡಲು ಸಾಧ್ಯವಾಗುವುದಿಲ್ಲ, ಉತ್ತಮ ಜೀವನವನ್ನು ನಡೆಸುವುದಿಲ್ಲ ಎಂದು ವೈದ್ಯರು ಹೇಳಿದರು. ಅವಳಿಗೆ ತಿನ್ನಲು ಸಹ ಸಾಧ್ಯವಾಗುವುದಿಲ್ಲ. ಆದರೆ ಈ ಎಲ್ಲ ತೊಂದರೆಗಳನ್ನು ಅನುಭವಿಸಿಯೂ ಅವಳು ಈಗ ಮೊದಲ ತರಗತಿಯಲ್ಲಿದ್ದಾಳೆ, ನಡೆಯಲು ಕಲಿಯುತ್ತಿದ್ದಾಳೆ. ಅವಳು ಇಂದು ಸಂಜೆ ಆಕೆಯ ಅಪ್ಪ ಮಾರ್ಕಸ್ ಜೊತೆ ಇಲ್ಲಿದ್ದಾಳೆ. ಆತ ಅದ್ಭುತ ವ್ಯಕ್ತಿ. ಡೆಲಿಲಾ, ನೀವು ದೊಡ್ಡ ಪ್ರೇರಣೆ. ದಯವಿಟ್ಟು ಎಲ್ಲರೂ ಎದ್ದುನಿಲ್ಲಿ. ಧನ್ಯವಾದಗಳು, ಡೆಲಿಲಾ” ಎಂದು ಹೇಳಿದ್ದಾರೆ.
ಆರೋಪಿ ಚಾಲಕ ಯಾರು?
ಜೂನ್ 2024ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಪರ್ತಾಪ್ ಸಿಂಗ್ ಎಂಬಾತ ಚಲಾಯಿಸುತ್ತಿದ್ದ 18 ಚಕ್ರದ ಟ್ರಕ್ ಒಂದಕ್ಕಿಂತ ಹೆಚ್ಚು ಕಾರುಗಳಿಗೆ ಡಿಕ್ಕಿ ಹೊಡೆದಿತ್ತು. ಅಕ್ರಮವಾಗಿ ಅಮೆರಿಕಕ್ಕೆ ವಲಸೆ ಬಂದ ಭಾರತೀಯ ವ್ಯಕ್ತಿಯಾಗಿರುವ ಪರ್ತಾಪ್ ಸಿಂಗ್ ಅಸುರಕ್ಷಿತ ವೇಗದಲ್ಲಿ ಚಾಲನೆ ಮಾಡಿ ರಸ್ತೆ ಸಂಚಾರ ನಿಯಮ ಉಲ್ಲಂಘಿಸಿದ್ದರು. ಅವರನ್ನು ಆಗಸ್ಟ್ 2025ರಲ್ಲಿ ಯುಎಸ್ ವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ಅಧಿಕಾರಿಗಳು ಬಂಧಿಸಿದರು.
ಇದಕ್ಕೂ ಮುನ್ನ 2025ರ ಆಗಸ್ಟ್ನಲ್ಲಿ ಭಾರತದ 28 ವರ್ಷದ ಅಕ್ರಮ ವಲಸಿಗ ಹರ್ಜಿಂದರ್ ಸಿಂಗ್ ಫೋರ್ಟ್ ಪಿಯರ್ಸ್ ಬಳಿಯ “ಅಧಿಕೃತ ಬಳಕೆಗೆ ಮಾತ್ರ” ಪ್ರವೇಶ ದ್ವಾರದಲ್ಲಿ ಯು-ಟರ್ನ್ ಮಾಡಲು ಪ್ರಯತ್ನಿಸುವಾಗ ಫ್ಲೋರಿಡಾ ಟರ್ನ್ಪೈಕ್ನಲ್ಲಿ ರಸ್ತೆ ಅಪಘಾತ ಸಂಭವಿಸಿತ್ತು. ಅವರ ಸೆಮಿ-ಟ್ರಕ್ ಇಲ್ಲಿ ಸಿಕ್ಕಿಹಾಕಿಕೊಂಡು ಎಲ್ಲಾ ಲೇನ್ಗಳನ್ನು ನಿರ್ಬಂಧಿಸಿತು. ಇದರಲ್ಲಿ ಮಿನಿವ್ಯಾನ್ ಟ್ರೇಲರ್ಗೆ ಡಿಕ್ಕಿ ಹೊಡೆದು ಮೂವರು ಸಾವಿಗೀಡಾಗಿದ್ದರು.
2018ರಲ್ಲಿ ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಿದ ಸಿಂಗ್ ಕ್ಯಾಲಿಫೋರ್ನಿಯಾಗೆ ತೆರಳಿದ್ದರು. ಅಲ್ಲಿ ಬಂಧನಕ್ಕೊಳಗಾದ ಅವರನ್ನು ಫ್ಲೋರಿಡಾಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಅವರ ವಿರುದ್ಧ ನರಹತ್ಯೆ ಪ್ರಕರಣ ದಾಖಲಿಸಲಾಗಿದ್ದು, ಕಾನೂನು ಕ್ರಮ ಎದುರಿಸುತ್ತಿದ್ದಾರೆ. ಅಪರಾಧ ಸಾಬೀತಾದರೆ, ಅವರು 45 ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಅಕ್ರಮ ವಲಸಿಗರನ್ನು ಒಳಗೊಂಡ ಎರಡು ಪ್ರಮುಖ ಅಪಘಾತಗಳ ನಂತರ ವಾಣಿಜ್ಯ ಚಾಲನಾ ಪರವಾನಗಿಗಳ ವಿತರಣೆಯನ್ನು ನಿರ್ಬಂಧಿಸಲು ಅಮೆರಿಕ ನಿರ್ಧರಿಸಿತು.
ಭಾರತೀಯ ವಲಸಿಗರ ಮೇಲೆ ಪರಿಣಾಮ
ಡೊನಾಲ್ಡ್ ಟ್ರಂಪ್ ಆಡಳಿತವು ಹಿಂದೆ 2,400 ಕ್ಕೂ ಹೆಚ್ಚು ಅಕ್ರಮ ಭಾರತೀಯ ವಲಸಿಗರನ್ನು ಗಡೀಪಾರು ಮಾಡಿತ್ತು. ಜನವರಿ 2025ರಿಂದ ಜನವರಿ 2026ರವರೆಗೆ 2,400 ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನು ಗಡೀಪಾರು ಮಾಡಲಾಗಿದೆ ಅಥವಾ ಸ್ವದೇಶಕ್ಕೆ ಕಳುಹಿಸಲಾಗಿದೆ. 1.5 ಲಕ್ಷಕ್ಕೂ ಹೆಚ್ಚು ಭಾರತೀಯ ಮೂಲದ ಟ್ರಕ್ ಚಾಲಕರು ಅಮೆರಿಕದಲ್ಲಿ ಇದ್ದಾರೆ. ಇವರಲ್ಲಿ ಹೆಚ್ಚಿನವರು ಪಂಜಾಬ್ ಮತ್ತು ಹರಿಯಾಣದವರು ಎಂದು ವರದಿಯಾಗಿದೆ.
ಆದಾಗ್ಯೂ, ಟ್ರಂಪ್ ತಮ್ಮ ಭಾಷಣದಲ್ಲಿ ಚಾಲಕರಿಗೆ ಇಂಗ್ಲಿಷ್ ಪ್ರಾವೀಣ್ಯತೆ ಇಲ್ಲದಿರುವುದರಿಂದ ರಸ್ತೆ ಅಪಘಾತಗಳು ಸಂಭವಿಸುತ್ತವೆ ಎಂದು ಹೇಳಿದ್ದಾರೆ. ಹೆಚ್ಚಿನ ಅಕ್ರಮ ವಲಸಿಗರು ಇಂಗ್ಲಿಷ್ ಮಾತನಾಡುವುದಿಲ್ಲ. ಅವರಿಗೆ ರಸ್ತೆಗಳಲ್ಲಿನ ಗುರುತು ಫಲಕಗಳನ್ನು ಸಹ ಓದಲು ಬರುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಕಳೆದ ವರ್ಷ ಅಮೆರಿಕದಾದ್ಯಂತ ಕಡ್ಡಾಯ ಇಂಗ್ಲಿಷ್ ಪ್ರಾವೀಣ್ಯತೆ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ಸುಮಾರು 7,248 ವಾಣಿಜ್ಯ ಟ್ರಕ್ ಚಾಲಕರನ್ನು ಅನರ್ಹಗೊಳಿಸಲಾಗಿತ್ತು. ಇದರಲ್ಲಿ ಹೆಚ್ಚಿನವರು ಭಾರತೀಯ ಮೂಲದವರು ಎಂದು ವರದಿಯಾಗಿದೆ. ಭಾರತದ ಚಾಲಕರು ಒಳಗೊಂಡ ಹಲವಾರು ಅಪಘಾತಗಳ ನಂತರ ಯುಎಸ್ ಸಾರಿಗೆ ಇಲಾಖೆ (DOT) ಈ ಕ್ರಮ ಕೈಗೊಂಡಿತ್ತು.
ಪಂಜಾಬ್ ಮತ್ತು ಹರಿಯಾಣದಿಂದ 1,30,000ರಿಂದ 1,50,000 ಟ್ರಕ್ ಚಾಲಕರು ಪ್ರಸ್ತುತ ಯುಎಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಉತ್ತರ ಅಮೆರಿಕಾದ ಪಂಜಾಬಿ ಟ್ರಕ್ಕರ್ಸ್ ಅಸೋಸಿಯೇಷನ್ ಅಂದಾಜಿಸಿದೆ. ಅವರಲ್ಲಿ ಹಲವರು ಹೊಸ ನಿಯಮಗಳಿಂದ ಪ್ರಭಾವಿತರಾಗಿದ್ದಾರೆ.
2025ರಿಂದ ಯುಎಸ್ ಫೆಡರಲ್ ಮೋಟಾರ್ ಕ್ಯಾರಿಯರ್ ಸೇಫ್ಟಿ ಅಡ್ಮಿನಿಸ್ಟ್ರೇಷನ್ (FMCSA) ಟ್ರಕ್ ಚಾಲಕರ ಭಾಷಾ ಕೌಶಲ್ಯದ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪ್ರಾರಂಭಿಸಿದೆ. ಫೆಡರಲ್ ನಿಯಂತ್ರಣ 49 ಸಿಎಫ್ಆರ್ 391.11(ಬಿ)(2) ಅಡಿಯಲ್ಲಿ ಅಧಿಕಾರಿಗಳು ಈಗ ರಸ್ತೆಬದಿಯ ತಪಾಸಣೆಯ ಸಮಯದಲ್ಲಿ ಕಡ್ಡಾಯ ಇಂಗ್ಲಿಷ್ ಭಾಷಾ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಸಂಚಾರ ಚಿಹ್ನೆಗಳನ್ನು ಅನುಸರಿಸಲು ಮತ್ತು ಅಧಿಕಾರಿಗಳೊಂದಿಗೆ ಸಂವಹನ ನಡೆಸಲು ಇಂಗ್ಲಿಷ್ ಅನ್ನು ಸಮರ್ಪಕವಾಗಿ ಮಾತನಾಡಲು ಅಥವಾ ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಯಾವುದೇ ವಾಣಿಜ್ಯ ಚಾಲಕನನ್ನು ಈಗ ಸ್ಥಳದಲ್ಲೇ ಗುರುತಿಸಿ ದಂಡ ವಿಧಿಸಲಾಗುತ್ತಿದೆ.
ಒಬಾಮಾ ಆಡಳಿತದ ಅವಧಿಯಲ್ಲಿ ಮತ್ತು 2016ರವರೆಗೆ ಇಂಗ್ಲಿಷ್ ಪ್ರಾವೀಣ್ಯತೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಚಾಲಕರನ್ನು ತಕ್ಷಣವೇ ಸೇವೆಯಿಂದ ತೆಗೆದುಹಾಕಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ ಜೂನ್ 25, 2026ರಿಂದ ಟ್ರಂಪ್ ಆಡಳಿತವು ಈ ಸಡಿಲಿಕೆಯನ್ನು ಕೊನೆಗೊಳಿಸಿದೆ. ಈಗ ಸಾರಿಗೆ ಇಲಾಖೆಯ ಹೊಸ ಆದೇಶಗಳ ಅಡಿಯಲ್ಲಿ ತಪಾಸಣೆಯ ಸಮಯದಲ್ಲಿ ಇಂಗ್ಲಿಷ್ ಪ್ರಾವೀಣ್ಯತೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಯಾವುದೇ ಚಾಲಕರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗುತ್ತಿದೆ.
ಪ್ಯೂ ಸಂಶೋಧನಾ ಕೇಂದ್ರದ ಪ್ರಕಾರ ಅಮೆರಿಕದಲ್ಲಿರುವ ಎಲ್ಲಾ ದಾಖಲೆರಹಿತ ವಲಸಿಗರಲ್ಲಿ ಸರಿಸುಮಾರು 4.8%ರಿಂದ 5% ರಷ್ಟು ಜನರು ಭಾರತದಿಂದ ಬಂದವರು. ಅಕ್ರಮ ವಲಸಿಗರ ಶೇಕಡಾವಾರು ತುಲನಾತ್ಮಕವಾಗಿ ಕಡಿಮೆ ಇದ್ದರೂ, ಮೆಕ್ಸಿಕೊ ಮತ್ತು ಎಲ್ ಸಾಲ್ವಡಾರ್ ನಂತರ ಭಾರತವು ದಾಖಲೆರಹಿತ ವಲಸಿಗರ ಮೂರನೇ ಅತಿದೊಡ್ಡ ಮೂಲವಾಗಿದೆ.






