ರಷ್ಯಾದ ತೈಲ, ಅನಿಲದ ಮೇಲಿನ ನಿರ್ಬಂಧ ಮತ್ತು ಸುಂಕಕ್ಕೆ ವಿನಾಯಿತಿ ನೀಡಿದ ಟ್ರಂಪ್; ಭಾರತದ ಮೇಲಾಗುವ ಪರಿಣಾಮಗಳೇನು?
►ಸ್ಮೃತಿ ಜೈನ್ - timesofindia. com ವರದಿ

ಡೊನಾಲ್ಡ್ ಟ್ರಂಪ್ (Photo: PTI)
ಟ್ರಂಪ್ ರಷ್ಯಾದ ತೈಲ ಮತ್ತು ಅನಿಲಕ್ಕೆ ಸಂಬಂಧಿಸಿದ ನಿರ್ಬಂಧ ಹಾಗೂ ಸುಂಕಗಳಿಂದ ವಿನಾಯಿತಿ ನೀಡಿದ್ದು, ಭಾರತಕ್ಕೆ ದೊಡ್ಡ ಪ್ರಮಾಣದ ನಿರಾಳತೆ ಸಿಕ್ಕಿದೆ. ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ರಷ್ಯಾ ಮತ್ತು ಇರಾನ್ ಮೇಲಿನ ನಿರ್ಬಂಧ ಕಾಯ್ದೆಯ ಅಡಿಯಲ್ಲಿ ಜಾರಿಯಲ್ಲಿದ್ದ ನಿರ್ಬಂಧಗಳು ಹಾಗೂ ಸುಂಕಗಳಿಂದ ವಿನಾಯಿತಿ ನೀಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
2026ರ ‘ಲಿಂಡ್ಸೆ ಒ. ಗ್ರಹಾಂ ರಷ್ಯಾ ಮತ್ತು ಇರಾನ್ ನಿರ್ಬಂಧ ಕಾಯ್ದೆ’ಯು ರಷ್ಯಾದ ತೈಲ ಮತ್ತು ಅನಿಲ ಖರೀದಿಸುವ ಚೀನಾ ಹಾಗೂ ಭಾರತದಂತಹ ಪ್ರಮುಖ ದೇಶಗಳ ಮೇಲೆ ಭಾರೀ ಸುಂಕ ವಿಧಿಸಲು ಟ್ರಂಪ್ ಅವರಿಗೆ ಅಧಿಕಾರ ನೀಡಿತ್ತು. ದಿವಂಗತ ಸೆನೆಟರ್ ಲಿಂಡ್ಸೆ ಗ್ರಹಾಂ ಅವರ ಬೆಂಬಲದೊಂದಿಗೆ ರೂಪಿಸಲಾದ ಈ ಶಾಸನವು, ರಷ್ಯಾದ ಕಚ್ಚಾ ತೈಲ ಅಥವಾ ಅನಿಲ ಆಮದು ಮಾಡಿಕೊಳ್ಳುವ ಅಗ್ರ ಐದು ದೇಶಗಳಿಂದ ಅಮೆರಿಕದ ಮಾರುಕಟ್ಟೆಗೆ ಪ್ರವೇಶಿಸುವ ಸರಕುಗಳ ಮೇಲೆ 30 ದಿನಗಳೊಳಗೆ ಶೇ. 100ರವರೆಗೆ ಸುಂಕ ವಿಧಿಸಲು ಅವಕಾಶ ಕಲ್ಪಿಸಿತ್ತು.
ಕಾಯ್ದೆ ಜಾರಿಗೆ ಬಂದ 30 ದಿನಗಳ ಬಳಿಕವೂ ರಷ್ಯಾದ ತೈಲ ಅಥವಾ ಅನಿಲ ಖರೀದಿಸುವ ದೇಶಗಳಲ್ಲದೆ, ರಷ್ಯಾ ಮೇಲಿನ ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುವ ಅಗ್ರ ಐದು ದೇಶಗಳನ್ನೂ ಈ ಕಾಯ್ದೆ ಒಳಗೊಂಡಿತ್ತು.
►ಟ್ರಂಪ್ ಘೋಷಿಸಿದ್ದೇನು?
ಕಾಯ್ದೆಯ ಹಲವು ನಿಯಮಗಳು ಜಾರಿಗೆ ಬರಲು ಕೆಲವೇ ದಿನಗಳು ಬಾಕಿ ಇರುವಾಗ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿನಾಯಿತಿ ಘೋಷಿಸಿದ್ದಾರೆ. ಸೆಪ್ಟೆಂಬರ್ ಮಧ್ಯಭಾಗದಲ್ಲಿ ಅವರು ಈ ವಿಧೇಯಕಕ್ಕೆ ಸಹಿ ಹಾಕಿದ್ದರು.
“ಗ್ರಹಾಂ ಕಾಯ್ದೆಯಲ್ಲಿ ಉಲ್ಲೇಖಿಸಲಾದ ನಿರ್ಬಂಧಗಳು ಮತ್ತು ಸುಂಕಗಳ ಜಾರಿಗೆ ನಾನು ಈ ಮೂಲಕ ವಿನಾಯಿತಿ ನೀಡುತ್ತಿದ್ದೇನೆ” ಎಂದು ಶುಕ್ರವಾರ ಸಂಜೆ ಹೊರಡಿಸಿದ ಆದೇಶದಲ್ಲಿ ಟ್ರಂಪ್ ತಿಳಿಸಿದ್ದಾರೆ.
ಈ ಹಂತದಲ್ಲಿ ವಿನಾಯಿತಿ ನೀಡುವುದು ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗೆ ಅಗತ್ಯವಾಗಿದೆ ಎಂದು ಸಂಸತ್ತಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಟ್ರಂಪ್ ಬಹಿರಂಗವಾಗಿ ಟೀಕಿಸುತ್ತಿದ್ದು, ರಷ್ಯಾದ ಬಗ್ಗೆ ಮೃದು ಧೋರಣೆ ತಳೆಯುತ್ತಿರುವ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ. ಉಕ್ರೇನ್ಗೆ ಹೊಸ ನಾಯಕನ ಅಗತ್ಯವಿದೆ ಎಂದೂ ಅವರು ಪ್ರತಿಪಾದಿಸಿದ್ದಾರೆ.
ರಷ್ಯಾದ ತೈಲವನ್ನು ಹೆಚ್ಚು ಅವಲಂಬಿಸಿರುವ ದೇಶಗಳಲ್ಲಿ ಪ್ರಸ್ತಾವಿತ ನಿರ್ಬಂಧಗಳು ಕಳವಳ ಮೂಡಿಸಿದ್ದವು. ರಷ್ಯಾದ ಕಚ್ಚಾ ತೈಲವನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುವ ಪ್ರಮುಖ ದೇಶಗಳಲ್ಲಿ ಒಂದಾದ ಭಾರತವೂ ಈ ಕಾಯ್ದೆಯ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು.
►ಭಾರತದ ಮೇಲಾಗುವ ಪರಿಣಾಮಗಳೇನು?
ಭಾರತಕ್ಕೆ ರಷ್ಯಾ ಇಂದಿಗೂ ಅತಿ ದೊಡ್ಡ ತೈಲ ಪೂರೈಕೆದಾರ ದೇಶವಾಗಿದೆ. ಮುಂಬರುವ ದಿನಗಳಲ್ಲಿ ಜಾರಿಗೆ ಬರಬಹುದಾಗಿದ್ದ ಶೇ. 100ರವರೆಗಿನ ಸುಂಕದಿಂದ ವಿನಾಯಿತಿ ಸಿಕ್ಕಿರುವುದರಿಂದ, ಭಾರತವು ಹೆಚ್ಚುವರಿ ಸುಂಕದ ಹೊರೆಯಿಲ್ಲದೆ ಮಾಸ್ಕೋದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಲು ಅವಕಾಶ ಸಿಕ್ಕಂತಾಗಿದೆ.
ಒಂದು ವೇಳೆ ಟ್ರಂಪ್ ಆಡಳಿತ ಶೇ. 100ರಷ್ಟು ಸುಂಕ ವಿಧಿಸಿದ್ದರೆ, ಅಮೆರಿಕಕ್ಕೆ ಸರಕು ರಫ್ತು ಮಾಡುವ ಭಾರತೀಯ ಉದ್ಯಮಿಗಳಿಗೆ ಭಾರೀ ಹೊಡೆತ ಬೀಳುತ್ತಿತ್ತು. ಅಮೆರಿಕ ಭಾರತದ ಅತಿ ದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ.
ಅಲ್ಲದೆ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿರುವ ಸಂದರ್ಭದಲ್ಲಿ ನಿರ್ಬಂಧಗಳು ಜಾರಿಯಾಗಿದ್ದರೆ, ರಷ್ಯಾದ ತೈಲ ಆಮದು ಆರ್ಥಿಕವಾಗಿ ಹೊರೆಯಾಗುವ ಸಾಧ್ಯತೆಯಿತ್ತು. ಇದರಿಂದ ಇಂಧನ ಪೂರೈಕೆಯಲ್ಲಿ ತೀವ್ರ ಕೊರತೆ ಉಂಟಾಗುವ ಅಪಾಯವೂ ಇತ್ತು.
ಪ್ರಸ್ತಾವಿತ ಶೇ. 100ರಷ್ಟು ಸುಂಕದಿಂದ ವಿನಾಯಿತಿ ಸಿಕ್ಕಿರುವುದು ಭಾರತದ ವ್ಯಾಪಾರ ಮತ್ತು ಇಂಧನ ಭದ್ರತೆ ಎರಡೂ ಕ್ಷೇತ್ರಗಳಲ್ಲಿ ದೊಡ್ಡ ನಿರಾಳತೆ ನೀಡಿದೆ ಎಂದು ಗ್ರಾಂಟ್ ಥಾರ್ನ್ಟನ್ ಭಾರತದ ಪಾಲುದಾರ ಹಾಗೂ ತೆರಿಗೆ ವಿವಾದ ನಿರ್ವಹಣಾ ಮುಖ್ಯಸ್ಥ ಮನೋಜ್ ಮಿಶ್ರಾ ಹೇಳಿದ್ದಾರೆ.
“ಹೆಚ್ಚುವರಿ ಭಾರೀ ಸುಂಕವನ್ನು ತಪ್ಪಿಸಿರುವುದರಿಂದ, ಮಧ್ಯಪ್ರಾಚ್ಯದಲ್ಲಿ ಸದ್ಯ ಮುಂದುವರಿದಿರುವ ಉದ್ವಿಗ್ನತೆಯ ನಡುವೆಯೂ ಇಂಧನ ಪೂರೈಕೆಯಲ್ಲಿ ಅಡಚಣೆಯಾಗುವ ಅಪಾಯ ತಗ್ಗಲಿದೆ” ಎಂದು ಮಿಶ್ರಾ ತಿಳಿಸಿದ್ದಾರೆ.
ಅಮೆರಿಕ ಭಾರತದ ಅತಿ ದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿರುವುದರಿಂದ, ಈ ವಿನಾಯಿತಿಯು ವಿವಿಧ ಕ್ಷೇತ್ರಗಳ ಭಾರತೀಯ ರಫ್ತುದಾರರಿಗೆ ಎದುರಾಗಬಹುದಾದ ಪ್ರತಿಕೂಲ ಪರಿಣಾಮಗಳಿಂದ ರಕ್ಷಿಸಲು ನೆರವಾಗಲಿದೆ. ಮುಖ್ಯವಾಗಿ, ಇದು ದ್ವಿಪಕ್ಷೀಯ ವ್ಯಾಪಾರ ಮಾತುಕತೆಗಳಲ್ಲಿನ ಅನಿಶ್ಚಿತತೆಯನ್ನು ಕಡಿಮೆ ಮಾಡಲಿದ್ದು, ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ಮುಂದುವರಿಸಲು ಅನುಕೂಲಕರ ವಾತಾವರಣ ಸೃಷ್ಟಿಸಲಿದೆ.
“ಆದರೆ, ದೀರ್ಘಕಾಲೀನ ರಫ್ತು ಯೋಜನೆ ಮತ್ತು ಪೂರೈಕೆ ಸರಪಳಿ ನಿರ್ಧಾರಗಳಿಗೆ ನೆರವಾಗುವಂತೆ ಸುಂಕದ ಕುರಿತು ಹೆಚ್ಚಿನ ಸ್ಪಷ್ಟತೆ ಹಾಗೂ ಸ್ಥಿರತೆಯನ್ನು ಉದ್ಯಮಗಳು ನಿರೀಕ್ಷಿಸುತ್ತವೆ” ಎಂದು ಮಿಶ್ರಾ ಹೇಳಿದ್ದಾರೆ.
ಮಧ್ಯಪ್ರಾಚ್ಯವು ಭಾರತದ ಕಚ್ಚಾ ತೈಲ, ಎಲ್ಪಿಜಿ ಮತ್ತು ಎಲ್ಎನ್ಜಿ ಅಗತ್ಯಗಳ ಪ್ರಮುಖ ಪೂರೈಕೆದಾರ ಪ್ರದೇಶವಾಗಿದೆ. ಹಾರ್ಮುಝ್ ಜಲಸಂಧಿಯ ಮೂಲಕ ನಡೆಯುವ ಸರಕು ಸಾಗಣೆಗೆ ಅಡಚಣೆ ಉಂಟಾಗಿರುವುದರಿಂದ, ಭಾರತವು ತನ್ನ ಇಂಧನ ಮೂಲಗಳನ್ನು ವೈವಿಧ್ಯಗೊಳಿಸಲು ಮುಂದಾಗಿದೆ.
ಉಕ್ರೇನ್ ವಿರುದ್ಧ ಮಾಸ್ಕೋ ಯುದ್ಧ ಆರಂಭಿಸಿದ ಬಳಿಕ ಯುರೋಪಿನ ನಿರ್ಬಂಧಗಳಿಂದಾಗಿ ರಷ್ಯಾ ಭಾರತ ಮತ್ತು ಚೀನಾಗಳಿಗೆ ಭಾರೀ ರಿಯಾಯಿತಿಯಲ್ಲಿ ತೈಲ ಮಾರಾಟ ಮಾಡಲು ಆರಂಭಿಸಿತ್ತು. ಈ ಹಿನ್ನೆಲೆಯಲ್ಲಿ ರಷ್ಯಾದ ತೈಲವು ಭಾರತದ ಕಚ್ಚಾ ತೈಲ ಆಮದಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕೆಲವು ತಿಂಗಳ ಹಿಂದೆ ಆಮದು ಪ್ರಮಾಣ ದಾಖಲೆಯ ಮಟ್ಟವನ್ನೂ ತಲುಪಿತ್ತು.
ಕಳೆದ ವರ್ಷ ರಷ್ಯಾದಿಂದ ಕಚ್ಚಾ ತೈಲ ಖರೀದಿಸಿದ್ದಕ್ಕಾಗಿ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ. 25ರಷ್ಟು ದಂಡನಾತ್ಮಕ ಸುಂಕ ವಿಧಿಸಿದ್ದರು. ಇದರಿಂದ ಒಟ್ಟು ಸುಂಕದ ಪ್ರಮಾಣ ಶೇ. 50ಕ್ಕೆ ಏರಿಕೆಯಾಗಿತ್ತು.
ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ನಿಲ್ಲಿಸಲಿಲ್ಲ. ಆದರೆ, ಅಮೆರಿಕವು ರಷ್ಯಾದ ಎರಡು ಪ್ರಮುಖ ತೈಲ ಕಂಪೆನಿಗಳ ಮೇಲೆ ನಿರ್ಬಂಧ ವಿಧಿಸಿದ ಬಳಿಕ ಭಾರತದ ತೈಲ ಆಮದು ಪ್ರಮಾಣ ಕುಸಿಯಲು ಆರಂಭಿಸಿತು.
ಈ ವರ್ಷದ ಫೆಬ್ರುವರಿಯಲ್ಲಿ ಭಾರತದ ಮೇಲಿನ ಸುಂಕವನ್ನು ಶೇ. 18ಕ್ಕೆ ಇಳಿಸುವುದಾಗಿ ಹಾಗೂ ಶೇ. 25ರಷ್ಟು ದಂಡನಾತ್ಮಕ ಸುಂಕವನ್ನು ತೆಗೆದುಹಾಕುವುದಾಗಿ ಘೋಷಿಸಿದ್ದ ಟ್ರಂಪ್, ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲಿದೆ ಎಂದು ಹೇಳಿಕೊಂಡಿದ್ದರು.
ಆದರೆ, ಭಾರತವು ಅಂತಹ ಯಾವುದೇ ಹೇಳಿಕೆ ನೀಡಿರಲಿಲ್ಲ. ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಕುರಿತು ಸ್ಪಷ್ಟ ಧೋರಣೆ ಹೊರಹೊಮ್ಮುವ ಮುನ್ನವೇ ಮಧ್ಯಪ್ರಾಚ್ಯ ಸಂಘರ್ಷ ಭುಗಿಲೆದ್ದಿತು.
ಇದೇ ಸಂದರ್ಭದಲ್ಲಿ ಜಾಗತಿಕ ಕಚ್ಚಾ ತೈಲ ಬೆಲೆಯನ್ನು ತಗ್ಗಿಸುವ ಉದ್ದೇಶದಿಂದ ಅಮೆರಿಕವು ರಷ್ಯಾದ ಕಚ್ಚಾ ತೈಲದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿತ್ತು. ಆ ವಿನಾಯಿತಿಗಳು ಮುಕ್ತಾಯಗೊಂಡ ಬಳಿಕವೂ ಭಾರತ ತನ್ನ ಇಂಧನ ಅಗತ್ಯಗಳನ್ನು ಪೂರೈಸಿಕೊಳ್ಳಲು ರಷ್ಯಾದಿಂದ ತೈಲ ಖರೀದಿಸುವುದನ್ನು ಮುಂದುವರಿಸಿತು.
ಕಳೆದ ತಿಂಗಳು ಟ್ರಂಪ್ ಆಡಳಿತವು ನಿರ್ಬಂಧ ಮಸೂದೆಗೆ ಸಹಿ ಹಾಕಿದ ಸುದ್ದಿ ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಮಾತುಕತೆಗಳ ಮೇಲೂ ಪರಿಣಾಮ ಬೀರಬಹುದು ಎಂಬ ಸೂಚನೆ ನೀಡಿತ್ತು.
ಈಗ ನಿರ್ಬಂಧಗಳಿಂದ ವಿನಾಯಿತಿ ನೀಡಿರುವುದರಿಂದ ವ್ಯಾಪಾರ ಮಾತುಕತೆಗಳಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಕಂಡುಬರುವ ಸಾಧ್ಯತೆಯಿದೆ. ಅದರಲ್ಲೂ, ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಅವರು ಇತ್ತೀಚೆಗೆ ಒಪ್ಪಂದದ ಕರಡು ಸಿದ್ಧವಾಗಿದೆ ಎಂದು ಸುಳಿವು ನೀಡಿರುವುದು ಈ ನಿರೀಕ್ಷೆಗೆ ಪುಷ್ಟಿ ನೀಡಿದೆ.
►ಚೀನಾದೊಂದಿಗೆ ತೈಲ ಪೈಪೋಟಿ
ರಷ್ಯಾದ ತೈಲಕ್ಕೆ ಸಂಬಂಧಿಸಿದ ಸುಂಕದ ಭೀತಿ ದೂರವಾಗಿದ್ದರೂ, ಮಾಸ್ಕೋದಿಂದ ಕಚ್ಚಾ ತೈಲ ಪಡೆಯಲು ಭಾರತವು ಚೀನಾದೊಂದಿಗೆ ತೀವ್ರ ಪೈಪೋಟಿ ನಡೆಸಬೇಕಾಗಬಹುದು.
ರಷ್ಯಾದ ತೈಲ ರಫ್ತು ಕುಸಿಯುತ್ತಿರುವುದು ಮತ್ತು ಚೀನಾದಿಂದ ಸ್ಪರ್ಧೆ ಹೆಚ್ಚುತ್ತಿರುವುದರಿಂದ ಅಕ್ಟೋಬರ್ ಹಾಗೂ ನವೆಂಬರ್ನಲ್ಲಿ ರಷ್ಯಾದ ಕಚ್ಚಾ ತೈಲ ಪೂರೈಕೆ ಮತ್ತಷ್ಟು ಬಿಗಿಯಾಗಲಿದೆ ಎಂದು ತೈಲ ಸಂಸ್ಕರಣಾ ಕಂಪೆನಿಗಳು ನಿರೀಕ್ಷಿಸಿವೆ ಎಂದು ವರದಿಗಳು ತಿಳಿಸಿವೆ.
ಈ ಕೊರತೆಯಿಂದಾಗಿ ವಿಶ್ವದ ಮೂರನೇ ಅತಿ ದೊಡ್ಡ ಕಚ್ಚಾ ತೈಲ ಆಮದುದಾರ ದೇಶವಾಗಿರುವ ಭಾರತವು ಈ ವರ್ಷದ ಉಳಿದ ಅವಧಿಯಲ್ಲಿ ಹೆಚ್ಚು ವೆಚ್ಚದಾಯಕ ಪರ್ಯಾಯಗಳತ್ತ ಮುಖ ಮಾಡಬೇಕಾಗಬಹುದು.
ಇತ್ತೀಚಿನ ತಿಂಗಳುಗಳಲ್ಲಿ, ವಿಶ್ವದ ಅತಿ ದೊಡ್ಡ ಕಚ್ಚಾ ತೈಲ ಆಮದುದಾರ ದೇಶವಾಗಿರುವ ಚೀನಾ ತನ್ನ ತೈಲ ಖರೀದಿಯನ್ನು ಹೆಚ್ಚಿಸಿಕೊಂಡಿದೆ. ಇರಾನ್ ಯುದ್ಧದಿಂದ ಮಧ್ಯಪ್ರಾಚ್ಯದ ತೈಲ ಪೂರೈಕೆಯಲ್ಲಿ ಅಡಚಣೆ ಉಂಟಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
“ಚೀನಾದಿಂದ ಬೇಡಿಕೆ ಬಹಳ ಹೆಚ್ಚಾಗಿದೆ. ಭಾರತೀಯ ತೈಲ ಕಂಪೆನಿಗಳಿಗೆ ಹೋಲಿಸಿದರೆ, ಚೀನಾದ ಕಂಪೆನಿಗಳು ಮುಂಚಿತವಾಗಿಯೇ ತೈಲ ಸಾಗಣೆ ನೌಕೆಗಳನ್ನು ಕಾಯ್ದಿರಿಸಲು ಮತ್ತು ಹೆಚ್ಚಿನ ಬೆಲೆ ತೆರಲು ಸಿದ್ಧವಾಗಿದ್ದವು” ಎಂದು ರಷ್ಯಾದ ಕಚ್ಚಾ ತೈಲ ಮಾರಾಟದಲ್ಲಿ ತೊಡಗಿರುವ ಮೂಲವೊಂದು ಇತ್ತೀಚೆಗೆ ರಾಯಿಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿದೆ.
ಅಕ್ಟೋಬರ್ನ ಕೆಪ್ಲರ್ (Kpler) ದತ್ತಾಂಶವು ತೈಲ ಪೂರೈಕೆ ಚೇತರಿಸಿಕೊಳ್ಳುತ್ತಿರುವುದನ್ನು ಸೂಚಿಸುತ್ತದೆ. ಸದ್ಯ ರಷ್ಯಾದ ಕಚ್ಚಾ ತೈಲ ಪೂರೈಕೆ ಪ್ರತಿದಿನ ಸರಾಸರಿ 2 ಮಿಲಿಯನ್ ಬ್ಯಾರೆಲ್ಗಳಿಗಿಂತ ಹೆಚ್ಚಿದೆ.
ಸೌಜನ್ಯ: timesofindia.com






