ಉಲ್ಟಾ ಹೊಡೆದ ಟ್ರಂಪ್ ಲೆಕ್ಕಾಚಾರ; ಬ್ಯಾರೆಲ್ ಗೆ 110 ಡಾಲರ್ ದಾಟಿದ ಕಚ್ಚಾ ತೈಲದ ಬೆಲೆ!
ಹಡಗು ಬಾಡಿಗೆ 35 ಪಟ್ಟು ಹೆಚ್ಚಳ; ಡೀಸೆಲ್, ಅನಿಲ, ಗೊಬ್ಬರ ಪೂರೈಕೆಗೂ ಬಿಕ್ಕಟ್ಟಿನ ಬಿಸಿ

ಡೊನಾಲ್ಡ್ ಟ್ರಂಪ್ | Photo Credit : PTI
ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಮುಂದುವರಿದಿದ್ದು, ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ ಗೆ 110 ಡಾಲರ್ ಗಡಿ ದಾಟಿದೆ. ಯುದ್ಧ ಆರಂಭಕ್ಕೂ ಮುನ್ನ 70ರಿಂದ 75 ಡಾಲರ್ ಆಸುಪಾಸಿನಲ್ಲಿದ್ದ ತೈಲದ ಬೆಲೆಯನ್ನು ಮತ್ತೆ ಹಿಂದಿನ ಮಟ್ಟಕ್ಕೆ ಇಳಿಸುವುದಾಗಿ ಭರವಸೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಮುಂಬರುವ ಮಧ್ಯಂತರ ಚುನಾವಣೆಗೂ ಮುನ್ನ ತೈಲ ಬೆಲೆ ಇಳಿಸುವ ಅವರ ಪ್ರಯತ್ನಗಳಿಗೆ ಹಿನ್ನಡೆಯಾಗಿದ್ದು, ಸಂಘರ್ಷ ಶೀಘ್ರವೇ ಅಂತ್ಯಗೊಳ್ಳಲಿದೆ ಎಂಬ ನಿರೀಕ್ಷೆಯೂ ಹುಸಿಯಾಗಿದೆ. ಇದರ ಪರಿಣಾಮವಾಗಿ ಜಾಗತಿಕ ಹಣದುಬ್ಬರ ಹೆಚ್ಚಾಗಿದೆ.
ಹಾರ್ಮುಝ್ ಜಲಸಂಧಿಯ ಮೇಲಿನ ಇರಾನ್ ನ ನಿಯಂತ್ರಣ ಸಂಪೂರ್ಣ ಅಂತ್ಯಗೊಂಡಿದೆ ಎಂಬ ಪಾಶ್ಚಿಮಾತ್ಯ ರಾಷ್ಟ್ರಗಳ ವಾದಗಳ ನಡುವೆಯೂ ತೈಲ ಸಾಗಣೆ ಮಾರ್ಗಗಳಲ್ಲಿನ ಅಪಾಯ ಮುಂದುವರಿದಿದೆ. ಒಮಾನ್ ಕರಾವಳಿಯ ಪರ್ಯಾಯ ಮಾರ್ಗದಲ್ಲಿ ತೈಲ ಸಾಗಿಸುವ ಹಡಗುಗಳ ಮೇಲೆ ಪ್ರತಿದಿನ ಎರಡರಿಂದ ಮೂರು ಬಾರಿ ದಾಳಿಗಳು ನಡೆಯುತ್ತಿವೆ. ಈ ಹಿಂದೆ ವಾರಕ್ಕೆ ಎರಡು ಅಥವಾ ಮೂರು ದಾಳಿಗಳು ನಡೆಯುತ್ತಿದ್ದ ಪ್ರದೇಶದಲ್ಲಿ ಈಗ ನಿತ್ಯವೂ ದಾಳಿಗಳು ಸಂಭವಿಸುತ್ತಿವೆ. ಹೀಗಾಗಿ, ತೈಲ ಪೂರೈಕೆ ಸಹಜ ಸ್ಥಿತಿಗೆ ಮರಳಿದೆ ಎಂಬ ಅಮೆರಿಕ ಆಡಳಿತದ ಹೇಳಿಕೆಗಳ ವಿಶ್ವಾಸಾರ್ಹತೆಯೇ ಪ್ರಶ್ನೆಗೀಡಾಗಿದೆ.
ಮುಂದಿನ ವರ್ಷವೂ ತೈಲ ಬೆಲೆ ಇಳಿಕೆಯ ನಿರೀಕ್ಷೆಯಿಲ್ಲ!
ತಕ್ಷಣದ ತೈಲ ಖರೀದಿ ದರದ ಜತೆಗೆ ದೀರ್ಘಾವಧಿ ಒಪ್ಪಂದಗಳ ಬೆಲೆಯೂ ದಾಖಲೆ ಮಟ್ಟಕ್ಕೆ ಏರಿದೆ. 2027ರ ಡಿಸೆಂಬರ್ ನಲ್ಲಿ ವಿತರಣೆಗೊಳ್ಳಲಿರುವ ಬ್ರೆಂಟ್ ಕಚ್ಚಾ ತೈಲದ ಭವಿಷ್ಯದ ಒಪ್ಪಂದಗಳು ಪ್ರತಿ ಬ್ಯಾರೆಲ್ಗೆ 90 ಡಾಲರ್ಗಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ. ಮುಂದಿನ ಒಂದು ಅಥವಾ ಎರಡು ವರ್ಷಗಳಲ್ಲಿ ಸಂಘರ್ಷ ಶಮನವಾಗಲಿದೆ ಎಂಬ ಭರವಸೆ ತೈಲ ವ್ಯಾಪಾರಿಗಳು ಮತ್ತು ಹೂಡಿಕೆದಾರರಲ್ಲಿ ಇಲ್ಲ ಎಂಬುದನ್ನು ಈ ದರಗಳು ಸೂಚಿಸುತ್ತಿವೆ.
ಯುದ್ಧ ನಿಂತ ತಕ್ಷಣ ಪೆಟ್ರೋಲ್ ಬೆಲೆ ಪ್ರತಿ ಗ್ಯಾಲನ್ ಗೆ 2.5 ಡಾಲರ್ ಗೆ ಇಳಿಯಲಿದೆ ಎಂಬ ಟ್ರಂಪ್ ಅವರ ಭರವಸೆಯೂ ಸದ್ಯಕ್ಕೆ ರಾಜಕೀಯ ಭಾಷಣವಾಗಿಯೇ ಉಳಿದಿದೆ.
4 ಡಾಲರ್ ನಿಂದ 140 ಡಾಲರ್ ಗೆ ಏರಿದ ಸಾಗಣೆ ವೆಚ್ಚ!
ತೈಲ ಬೆಲೆ ಏರಿಕೆಗೆ ಸಮುದ್ರ ಸಾರಿಗೆ ವೆಚ್ಚದಲ್ಲಿನ ಅಸಾಮಾನ್ಯ ಹೆಚ್ಚಳವೂ ಪ್ರಮುಖ ಕಾರಣವಾಗಿದೆ. ಜಗತ್ತಿನಲ್ಲಿ ಸರಕು ಸಾಗಣೆಗೆ ಅತ್ಯಂತ ಅಗ್ಗದ ಮಾರ್ಗವೆಂದು ಪರಿಗಣಿಸಲಾಗುವ ಸಮುದ್ರ ಸಾರಿಗೆಯೇ ಈಗ ದುಬಾರಿಯಾಗಿದೆ.
ಎರಡು ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಸಾಗಿಸುವ ಸಾಮರ್ಥ್ಯವಿರುವ ವೆರಿ ಲಾರ್ಜ್ ಕ್ರೂಡ್ ಕ್ಯಾರಿಯರ್ (ವಿಎಲ್ಸಿಸಿ) ಹಡಗುಗಳ ಬಾಡಿಗೆ, ಯುದ್ಧಕ್ಕೂ ಮುನ್ನ ಪರ್ಷಿಯನ್ ಕೊಲ್ಲಿಯಿಂದ ಚೀನಾಕ್ಕೆ ಸಾಗಿಸುವ ಮಾರ್ಗದಲ್ಲಿ ಪ್ರತಿ ಬ್ಯಾರೆಲ್ ಗೆ 4 ಡಾಲರ್ ಇತ್ತು. ಈಗ ಅದು 140 ಡಾಲರ್ ಗೆ ಏರಿದೆ. ಅಂದರೆ, ಸಾರಿಗೆ ವೆಚ್ಚ 35 ಪಟ್ಟು ಹೆಚ್ಚಾಗಿದೆ. ಜಪಾನ್ ಮತ್ತು ದಕ್ಷಿಣ ಕೊರಿಯಾಕ್ಕೆ ಸಾಗಿಸುವ ಮಾರ್ಗಗಳಲ್ಲಿ ಪ್ರತಿ ಬ್ಯಾರೆಲ್ ನ ಸಾಗಣೆ ವೆಚ್ಚ 150 ಡಾಲರ್ ಗೆ ಮುಟ್ಟಿದೆ.
ಯುದ್ಧಕ್ಕೂ ಮುನ್ನ ಒಂದು ವಿಎಲ್ಸಿಸಿ ಹಡಗನ್ನು ಖರೀದಿಸಲು ಬೇಕಾಗುತ್ತಿದ್ದ ಮೊತ್ತಕ್ಕೆ ಈಗ ಅದನ್ನು ಒಂದೇ ಬಾರಿ ಬಾಡಿಗೆಗೆ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಜಾಗತಿಕವಾಗಿ ಕಾರ್ಯನಿರ್ವಹಿಸುತ್ತಿರುವ ಸುಮಾರು ಒಂದು ಸಾವಿರ ವಿಎಲ್ಸಿಸಿ ಹಡಗುಗಳಲ್ಲಿ ಶೇ. 15ರಷ್ಟು ಹಡಗುಗಳು ಒಮಾನ್ ಸಮುದ್ರದಲ್ಲೇ ಲಂಗರು ಹಾಕಿ ನಿಂತಿವೆ. ಸಣ್ಣ ಹಡಗುಗಳಿಂದ ದೊಡ್ಡ ಹಡಗುಗಳಿಗೆ ತೈಲ ವರ್ಗಾವಣೆ ಮಾಡುವಾಗ ಭದ್ರತಾ ತಪಾಸಣೆ ಮತ್ತು ಅಮೆರಿಕದ ನೌಕಾಪಡೆಯ ರಕ್ಷಣೆಗಾಗಿ ದಿನಗಟ್ಟಲೆ ಕಾಯಬೇಕಾಗಿದೆ.
ಇದರಿಂದಾಗಿ ಸಾಮಾನ್ಯವಾಗಿ 30 ದಿನಗಳಲ್ಲಿ ಪೂರ್ಣಗೊಳ್ಳುತ್ತಿದ್ದ ಪ್ರಯಾಣಕ್ಕೆ ಈಗ 45 ದಿನಗಳು ಬೇಕಾಗುತ್ತಿವೆ. ಜಾಗತಿಕ ಹಡಗು ಸಾಮರ್ಥ್ಯದ ದೊಡ್ಡ ಪಾಲು ಒಂದೇ ಪ್ರದೇಶದಲ್ಲಿ ಸಿಲುಕಿಕೊಂಡಿರುವುದರಿಂದ ವೆನೆಜುವೆಲಾ ಮತ್ತು ಪಶ್ಚಿಮ ಆಫ್ರಿಕಾದಿಂದ ತೈಲ ಸಾಗಿಸುವ ಹಡಗುಗಳ ಬಾಡಿಗೆಯೂ ಹೆಚ್ಚಾಗಿದೆ. ಕ್ಷಿಪಣಿ ದಾಳಿ ಮತ್ತು ಸಮುದ್ರದಲ್ಲಿನ ಸ್ಫೋಟಕ ಮೈನ್ಸ್ ಗಳ ಭೀತಿಯಿಂದ ವಿಮಾ ವೆಚ್ಚವೂ ವಿಪರೀತ ಏರಿಕೆಯಾಗಿದೆ.
ಡೀಸೆಲ್ ಕೊರತೆ: ದಿನಕ್ಕೆ 5 ಮಿಲಿಯನ್ ಬ್ಯಾರೆಲ್ ಅಭಾವ
ಮಧ್ಯಪ್ರಾಚ್ಯದ ಪ್ರಮುಖ ತೈಲ ಶುದ್ಧೀಕರಣ ಘಟಕಗಳ ಮೇಲಿನ ದಾಳಿಗಳಿಂದ ಡೀಸೆಲ್ ಉತ್ಪಾದನೆ ಕುಸಿದಿದೆ. ತಮ್ಮ ದೇಶೀಯ ಅಗತ್ಯಗಳನ್ನು ಪೂರೈಸಿಕೊಳ್ಳಲು ಚೀನಾ ಮತ್ತು ರಷ್ಯಾ ಡೀಸೆಲ್ ರಫ್ತನ್ನು ಸಂಪೂರ್ಣವಾಗಿ ನಿರ್ಬಂಧಿಸಿವೆ. ಭಾರತ ಹೆಚ್ಚಿನ ಪ್ರಮಾಣದಲ್ಲಿ ಡೀಸೆಲ್ ರಫ್ತು ಮಾಡುತ್ತಿದ್ದರೂ ಜಾಗತಿಕ ಕೊರತೆಯನ್ನು ನೀಗಿಸಲು ಸಾಧ್ಯವಾಗುತ್ತಿಲ್ಲ.
ಸದ್ಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿದಿನ ಸುಮಾರು 5 ಮಿಲಿಯನ್ ಬ್ಯಾರೆಲ್ ಡೀಸೆಲ್ ಕೊರತೆ ಎದುರಾಗಿದೆ. ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡು ಬಿಕ್ಕಟ್ಟು ಬಗೆಹರಿಸಲು ಅಮೆರಿಕ ಪ್ರಯತ್ನಿಸುತ್ತಿದ್ದರೂ, ಅದರಿಂದ ಯಾವುದೇ ಪ್ರಾಯೋಗಿಕ ಫಲಿತಾಂಶ ದೊರೆತಿಲ್ಲ.
ಅನಿಲ, ಗೊಬ್ಬರ ಪೂರೈಕೆಗೂ ಪೆಟ್ಟು
ನೈಸರ್ಗಿಕ ಅನಿಲ ಮತ್ತು ಕೃಷಿ ಗೊಬ್ಬರದ ಪೂರೈಕೆಯಲ್ಲಿಯೂ ತೀವ್ರ ವ್ಯತ್ಯಯ ಉಂಟಾಗಿದೆ. ವಿಶ್ವದ ಅತಿ ದೊಡ್ಡ ನೈಸರ್ಗಿಕ ಅನಿಲ ರಫ್ತುದಾರ ರಾಷ್ಟ್ರವಾದ ಖತರ್, ಕಳೆದ ಆರು ತಿಂಗಳಲ್ಲಿ ಕೇವಲ 18 ಹಡಗುಗಳ ಮೂಲಕ ಅನಿಲ ರವಾನಿಸಿದೆ. ಸಾಮಾನ್ಯವಾಗಿ ವರ್ಷಕ್ಕೆ 509 ಕಾರ್ಗೊಗಳು ರವಾನೆಯಾಗುತ್ತಿದ್ದರೆ, ಅರ್ಧ ವರ್ಷದಲ್ಲಿ ಕನಿಷ್ಠ 254 ಕಾರ್ಗೊಗಳು ಸಾಗಣೆಯಾಗಬೇಕಿತ್ತು.
ಮಧ್ಯಪ್ರಾಚ್ಯದಿಂದ ಜಗತ್ತಿಗೆ ಸರಬರಾಜಾಗುವ ರಾಸಾಯನಿಕ ಗೊಬ್ಬರದ ಪ್ರಮಾಣದಲ್ಲಿಯೂ ಮೂರನೇ ಒಂದು ಭಾಗದಷ್ಟು ಕಡಿತವಾಗಿದೆ. ಮುಂಬರುವ ಬಿತ್ತನೆ ಹಂಗಾಮಿನಲ್ಲಿ ಗೊಬ್ಬರದ ಕೊರತೆ ಕೃಷಿ ಉತ್ಪಾದನೆಯ ಮೇಲೆ ಪರಿಣಾಮ ಬೀರುವುದರ ಜತೆಗೆ ಆಹಾರ ಧಾನ್ಯಗಳ ಬೆಲೆ ಏರಿಕೆಗೂ ಕಾರಣವಾಗುವ ಆತಂಕವಿದೆ.
ಯುದ್ಧ ನಿಂತರೂ ತೈಲ ಬೆಲೆ ತಕ್ಷಣ ಇಳಿಯದು!
ತುರ್ತು ಮೀಸಲು ಸಂಗ್ರಹದಿಂದ ನಿರಂತರವಾಗಿ ತೈಲವನ್ನು ಹೊರತೆಗೆಯುತ್ತಿರುವುದು ಬಿಕ್ಕಟ್ಟಿನ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ನಾಳೆಯೇ ಯುದ್ಧ ನಿಂತರೂ ಖಾಲಿಯಾಗಿರುವ ತುರ್ತು ತೈಲ ಸಂಗ್ರಹಾಗಾರಗಳನ್ನು ಮತ್ತೆ ಭರ್ತಿ ಮಾಡಬೇಕಾಗುತ್ತದೆ. ಹೀಗಾಗಿ, ಸಂಘರ್ಷ ಅಂತ್ಯಗೊಂಡ ತಕ್ಷಣವೇ ತೈಲ ಬೆಲೆ ಇಳಿಯುವುದು ಕಷ್ಟ ಎಂಬ ವಿಶ್ಲೇಷಣೆ ವ್ಯಕ್ತವಾಗಿದೆ.
ವಾಷಿಂಗ್ಟನ್ ಆಡಳಿತ ಸಂಧಾನದ ಮಾರ್ಗವನ್ನು ಆಯ್ಕೆ ಮಾಡುತ್ತದೆಯೇ ಅಥವಾ ಇರಾನ್ ಮೇಲೆ ಹೊಸ ದಾಳಿಗೆ ಮುಂದಾಗುತ್ತದೆಯೇ ಎಂಬುದು ಜಾಗತಿಕ ತೈಲ ಮಾರುಕಟ್ಟೆಯ ಮುಂದಿನ ದಿಕ್ಕನ್ನು ನಿರ್ಧರಿಸಲಿದೆ. ತೈಲ ಬೆಲೆಯ ಏರಿಳಿತವಷ್ಟೇ ಅಲ್ಲದೆ, ಡೀಸೆಲ್, ನೈಸರ್ಗಿಕ ಅನಿಲ ಮತ್ತು ಗೊಬ್ಬರದ ಪೂರೈಕೆಯ ಮೇಲಿನ ಒತ್ತಡವೂ ಜಾಗತಿಕ ಆರ್ಥಿಕತೆಯ ಮುಂದಿನ ಹಾದಿಯನ್ನು ರೂಪಿಸಲಿದೆ.






