US ಮಧ್ಯಂತರ ಚುನಾವಣೆ: ಟ್ರಂಪ್ ಗೆ ಹಿನ್ನಡೆ; ಅಮೆರಿಕ-ಭಾರತ ವ್ಯಾಪಾರ ಒಪ್ಪಂದದ ಮೇಲಾಗುವ ಪರಿಣಾಮಗಳೇನು?
►ರವಿ ದತ್ತ ಮಿಶ್ರಾ – indianexpress. com ವರದಿ

ಡೊನಾಲ್ಡ್ ಟ್ರಂಪ್ | Photo Credit : PTI
2026ರ US ಮಧ್ಯಂತರ ಚುನಾವಣೆಯಲ್ಲಿ ಡೆಮೋಕ್ರಾಟಿಕ್ ಪಕ್ಷವು ಭಾರೀ ಜಯಗಳಿಸಿದ್ದು, ಅಮೆರಿಕನ್ ಕಾಂಗ್ರೆಸ್ನ ಎರಡೂ ಸದನಗಳಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್ ಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕದ ನೀತಿಗಳು ಮತ್ತು ಇರಾನ್ ವಿರುದ್ಧದ ಯುದ್ಧದಿಂದಾಗಿ ಉಲ್ಬಣಗೊಂಡ ಜೀವನ ವೆಚ್ಚದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ನಿರ್ಣಾಯಕ ಫಲಿತಾಂಶ ಬಂದಿದೆ. ಇದು ಅಮೆರಿಕದಲ್ಲಿ ಹೆಚ್ಚು ಸ್ಥಿರ ಹಾಗೂ ನಿರೀಕ್ಷಿತ ವ್ಯಾಪಾರ ನೀತಿಯ ಭರವಸೆಯನ್ನು ಮೂಡಿಸಿದೆ.
ಇದು ಭಾರತಕ್ಕೂ ಸಣ್ಣ ಸಮಾಧಾನ ತಂದಿದೆ. ಭಾರೀ ಸುಂಕಗಳನ್ನು ಎದುರಿಸಿಯೂ, ಡಿಜಿಟಲ್ ವ್ಯಾಪಾರದ ಮೇಲೆ ಏಕಪಕ್ಷೀಯ ಷರತ್ತುಗಳನ್ನು ಹೇರುವ ಮತ್ತು ಕೃಷಿಯಂತಹ ರಾಜಕೀಯವಾಗಿ ಸೂಕ್ಷ್ಮ ವಲಯಗಳಿಗೆ ಪ್ರವೇಶ ಕೋರುವ ಏಕಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಿಲುಕದೆ ಉಳಿದ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದೆ. ಡೆಮೋಕ್ರಾಟ್ ಗಳ ನಿಯಂತ್ರಣದಲ್ಲಿರುವ US ಕಾಂಗ್ರೆಸ್ನಿಂದ ಹೆಚ್ಚಿನ ಪರಿಶೀಲನೆ ನಡೆಯುವುದರಿಂದ, ಅಮೆರಿಕದ ಮಾತುಕತೆಗಾರರು ಹೆಚ್ಚು ಪ್ರಾಯೋಗಿಕ ಬೇಡಿಕೆಗಳನ್ನು ಮುಂದಿಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಟ್ರಂಪ್ ತಮ್ಮ ಎರಡನೇ ಅಧಿಕಾರಾವಧಿಯಲ್ಲಿ ಅಸಾಧಾರಣವಾಗಿ ಹೆಚ್ಚಿನ ಸಂಖ್ಯೆಯ ಎಕ್ಸಿಕ್ಯೂಟಿವ್ ಆದೇಶಗಳನ್ನು ಬಳಸುತ್ತಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ವ್ಯಾಪಾರ ಪಾಲುದಾರರಿಗೆ ತೊಂದರೆ ಉಂಟುಮಾಡುವುದನ್ನು ಮುಂದುವರಿಸಬಹುದು. ಚುನಾವಣಾ ಫಲಿತಾಂಶದ ಬೆನ್ನಲ್ಲೇ ಟ್ರಂಪ್ ತಮ್ಮ 'ಟ್ರೂತ್ ಸೋಷಿಯಲ್' ಜಾಲತಾಣದಲ್ಲಿ "ವೀಟೋ" (VETO) ಎಂದು ಬರೆದಿದ್ದ ಕೆಂಪು ಟೋಪಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಫಾಕ್ಸ್ ನ್ಯೂಸ್ ಜೊತೆ ಮಾತನಾಡುತ್ತಾ, ವಲಸೆಯಂತಹ ವಿಷಯಗಳಲ್ಲಿ ಡೆಮೋಕ್ರಾಟ್ ಗಳೊಂದಿಗೆ ಕೆಲಸ ಮಾಡುವುದಾಗಿ ಹೇಳಿದರೂ, ಅವರು ಅಂಗೀಕರಿಸುವ ಯಾವುದೇ "ಅಸಂಬದ್ಧ" ವಿಧೇಯಕಗಳಿಗೆ ವೀಟೋ ಅಧಿಕಾರ ಬಳಸಿ ತಡೆಯೊಡ್ಡುವುದಾಗಿ ಬೆದರಿಕೆ ಹಾಕಿದ್ದಾರೆ.
ಮಧ್ಯಂತರ ಚುನಾವಣಾ ಫಲಿತಾಂಶದ ನಂತರ ಟ್ರಂಪ್ ಏನು ಮಾಡಬಹುದು?
ಚುನಾವಣೆಗಳು ಮುಗಿದ ಬೆನ್ನಲ್ಲೇ, ಅಮೆರಿಕದ ವ್ಯಾಪಾರ ಪ್ರತಿನಿಧಿ (USTR) 1974ರ US ಟ್ರೇಡ್ ಆಕ್ಟ್ನ ಸೆಕ್ಷನ್ 301ರ ಅಡಿಯಲ್ಲಿ 'ಅತಿಯಾದ ಉತ್ಪಾದನಾ ಸಾಮರ್ಥ್ಯ'ದ (ಒಂದು ವಲಯ ಅಥವಾ ದೇಶದ ಉತ್ಪಾದನಾ ಸಾಮರ್ಥ್ಯವು ಮಾರುಕಟ್ಟೆಯ ಬೇಡಿಕೆಗಿಂತ ಹೆಚ್ಚಿರುವ ಸ್ಥಿತಿ) ತನಿಖೆಯ ವರದಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ತಮ್ಮ ಸುಂಕದ ವ್ಯವಸ್ಥೆಯನ್ನು ಮರುಜಾರಿಗೆ ತರಲು ಟ್ರಂಪ್ ಆಡಳಿತ ಕಂಡುಕೊಂಡಿರುವ ಇತ್ತೀಚಿನ ಮಾರ್ಗ ಇದಾಗಿದೆ.
ಪ್ರಸ್ತುತ, ಚೀನಾವನ್ನು ಹೊರತುಪಡಿಸಿ ಹೆಚ್ಚಿನ ದೇಶಗಳ ಮೇಲಿನ ಸುಂಕಗಳು ಶೇ. 10ರಿಂದ 12.5ರ ವ್ಯಾಪ್ತಿಯಲ್ಲಿವೆ. ಆದರೆ, ಈ ಹೊಸ ಸುಂಕಗಳು ಅಂತಿಮ ದರಗಳನ್ನು ನಿರ್ಧರಿಸಲಿದ್ದು, ಭಾರತ ಸೇರಿದಂತೆ ಜಾಗತಿಕ ಪಾಲುದಾರರೊಂದಿಗಿನ ವ್ಯಾಪಾರ ಒಪ್ಪಂದಗಳನ್ನು ನವೀಕರಿಸಲು ಆಧಾರವಾಗಲಿವೆ.
►ಹಾಗಿದ್ದರೆ, ಮಧ್ಯಂತರ ಚುನಾವಣೆಯ ಹಿನ್ನಡೆಯ ನಂತರ ಟ್ರಂಪ್ ತಮ್ಮ ಈ ರೀತಿಯ ಕ್ರಮಗಳನ್ನು ಕಡಿಮೆಗೊಳಿಸಲಿದ್ದಾರೆಯೇ?
ಇದು ಸಾಧ್ಯವಿಲ್ಲವೆಂದೇ ತೋರುತ್ತದೆ. ಅಮೆರಿಕದಲ್ಲಿ ನೆಲೆಸಿರುವ ಭಾರತದ ಮಾಜಿ ರಾಯಭಾರಿ ಮೋಹನ್ ಕುಮಾರ್ ಅವರ ಪ್ರಕಾರ, ತಮ್ಮ ಅಧಿಕಾರಾವಧಿಯ ಕೊನೆಯ ಹಂತದಲ್ಲಿ ದೇಶದೊಳಗೆ ರಾಜಕೀಯವಾಗಿ ಹಿನ್ನಡೆ ಅನುಭವಿಸಿದ ಅಧ್ಯಕ್ಷರು, ವಿದೇಶಾಂಗ ವಿಚಾರಗಳಲ್ಲಿ ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತಷ್ಟು ಮುಕ್ತವಾಗಿರುತ್ತಾರೆ. ಹೀಗಾಗಿ, ವಿದೇಶಗಳ ವಿಷಯದಲ್ಲಿ ಅಧ್ಯಕ್ಷರು ಒಳ್ಳೆಯದು ಮಾಡುವ ಅಥವಾ ಹಾನಿ ಉಂಟುಮಾಡುವ ಅವಕಾಶಗಳು ಹಿಂದಿನಂತೆಯೇ ಇರುತ್ತವೆ ಅಥವಾ ಇನ್ನಷ್ಟು ಹೆಚ್ಚಾಗಬಹುದು. "ವೈಟ್ ಹೌಸ್ನಲ್ಲಿರುವ ಈ ಪ್ರವೃತ್ತಿಯ ಅಧ್ಯಕ್ಷರ ನಿರ್ಧಾರಗಳು ಮುಂದಿನ ದಿನಗಳಲ್ಲಿ ಹೇಗೆ ಪರಿಣಾಮ ಬೀರಲಿವೆ ಎಂಬುದನ್ನು ಕಾದು ನೋಡಬೇಕಿದೆ" ಎಂದಿದ್ದಾರೆ.
"ಹಲವು ನೀತಿಗಳನ್ನು ಜಾರಿಗೆ ತರಲು ಸತತ ಅಧ್ಯಕ್ಷರು ಅಮೆರಿಕನ್ ಕಾಂಗ್ರೆಸ್ ನ ಅಂಕಿತವನ್ನು ಪಡೆದಿಲ್ಲ. ಒಬಾಮಾ 35 ಎಕ್ಸಿಕ್ಯೂಟಿವ್ ಆದೇಶಗಳನ್ನು ಹೊರಡಿಸಿದ್ದರು, ಜಾರ್ಜ್ ಬುಷ್ 42 ಆದೇಶಗಳನ್ನು ಹೊರಡಿಸಿದ್ದರು. ಬೈಡನ್ ಕೇವಲ ಒಂದೇ ಅಧಿಕಾರಾವಧಿಯಲ್ಲಿ 162 ಎಕ್ಸಿಕ್ಯೂಟಿವ್ ಆದೇಶಗಳನ್ನು ಹೊರಡಿಸಿದ್ದರು. ಆದರೆ, ಅಧ್ಯಕ್ಷ ಟ್ರಂಪ್ ಕೇವಲ ಎರಡು ವರ್ಷಗಳಲ್ಲಿ ಬೃಹತ್ ಪ್ರಮಾಣದಲ್ಲಿ 166 ಎಕ್ಸಿಕ್ಯೂಟಿವ್ ಆದೇಶಗಳನ್ನು ಹೊರಡಿಸಿದ್ದಾರೆ. ಆದ್ದರಿಂದ, ಸಂಸತ್ತು ಅದನ್ನು ಇಷ್ಟಪಡಲಿ ಅಥವಾ ಬಿಡಲಿ, ಎಕ್ಸಿಕ್ಯೂಟಿವ್ ಆದೇಶಗಳ ಮೂಲಕವೇ ಆಡಳಿತ ನಡೆಯುವುದನ್ನು ಮುಂದುವರಿಸುವ ನಿರೀಕ್ಷೆಯಿದೆ" ಎಂದು ಒ.ಪಿ. ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿಯ 'ಮೋಟ್ವಾನಿ ಜಡೇಜಾ ಇನ್ಸ್ಟಿಟ್ಯೂಟ್ ಫಾರ್ ಅಮೆರಿಕನ್ ಸ್ಟಡೀಸ್'ನ ಡೈರೆಕ್ಟರ್ ಜನರಲ್ ಆಗಿರುವ ಕುಮಾರ್ ತಿಳಿಸಿದ್ದಾರೆ (ಇದು ಕುಮಾರ್ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ).
ವಿದೇಶಾಂಗ, ಭದ್ರತೆ ಅಥವಾ ವ್ಯಾಪಾರ ನೀತಿಯ ವಿಷಯ ಬಂದಾಗ ಅಮೆರಿಕ ಅಧ್ಯಕ್ಷರು ಯಾವುದೇ ಕಾರಣಕ್ಕೂ "ನಿಷ್ಕ್ರಿಯ" ಎನಿಸಿಕೊಳ್ಳುವುದಿಲ್ಲ ಎಂದು ಮಾಜಿ ರಾಯಭಾರಿ ಹೇಳಿದ್ದಾರೆ. "ಅಧ್ಯಕ್ಷ ಟ್ರಂಪ್ ತಾವು ಹಿಂದೆ ಮಾಡುತ್ತಿದ್ದ ಕೆಲಸಗಳನ್ನೇ ಮುಂದುವರಿಸುವ ಸಾಧ್ಯತೆಯಿದೆ. ಉದಾಹರಣೆಗೆ, ಈ ವರ್ಷದ ಜೂನ್ನಲ್ಲಿ ಕೆಳಮನೆ ಮತ್ತು ಮೇಲ್ಮನೆ ಎರಡೂ ಸೇರಿ ಇರಾನ್ ವಿರುದ್ಧದ ಶತ್ರುತ್ವವನ್ನು ಕೊನೆಗೊಳಿಸುವಂತೆ ಅಧ್ಯಕ್ಷ ಟ್ರಂಪ್ ಗೆ ಸೂಚಿಸುವ 'ವಾರ್ ಪವರ್ಸ್ ರೆಸಲ್ಯೂಶನ್' ಅನ್ನು ಅಂಗೀಕರಿಸಿದ್ದವು. ಸೆಪ್ಟೆಂಬರ್ನಲ್ಲಿ ಸಂಸತ್ತು ರಷ್ಯಾ ಮೇಲಿನ ನಿರ್ಬಂಧಗಳನ್ನು ವೀಟೋ ಅಧಿಕಾರವನ್ನು ಮೀರಿದ ಬಹುಮತದೊಂದಿಗೆ ಅಂಗೀಕರಿಸಿತ್ತು. ಆದರೆ, ಅಧ್ಯಕ್ಷ ಟ್ರಂಪ್ ರಾಷ್ಟ್ರೀಯ ಹಿತಾಸಕ್ತಿಯ 'ವಿನಾಯಿತಿ' ಬಳಸಿ ಆ ನಿರ್ಬಂಧಗಳನ್ನು ರದ್ದುಗೊಳಿಸಿದರು. ಹೀಗಾಗಿ, ತಮ್ಮ ಉಳಿದ ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ಅಧ್ಯಕ್ಷ ಟ್ರಂಪ್ ಈ ರೀತಿಯ ಮಾರ್ಗಗಳನ್ನೇ ಹೆಚ್ಚು ಬಳಸಲಿದ್ದಾರೆ" ಎಂದು ಅವರು ವಿವರಿಸಿದ್ದಾರೆ.
►ಹಾಗಿದ್ದರೆ, ಡೆಮೋಕ್ರಾಟ್ ಗಳ ನಿಯಂತ್ರಣದಲ್ಲಿರುವ ಸಂಸತ್ತಿನ ಪ್ರಭಾವವೇನಿರಬಹುದು?
ಚುನಾವಣಾ ಫಲಿತಾಂಶದ ಹಿಂದಿನ ಮುಖ್ಯ ಕಾರಣಗಳಲ್ಲಿ ಅಮೆರಿಕನ್ನರಲ್ಲಿ ಬದುಕಿನ ವೆಚ್ಚದ ಏರಿಕೆ ಮತ್ತು ಡೀಸೆಲ್ ಬೆಲೆ ಏರಿಕೆಯ ಬಗ್ಗೆ ಇದ್ದ ಕೋಪವೂ ಒಂದು. ಈ ಹೆಚ್ಚಿನ ಬೆಲೆಗಳ ಹಿಂದೆ ಟ್ರಂಪ್ ಅವರ ಸುಂಕದ ನೀತಿಗಳು (ಇದರ ಹೊರೆ ಅಮೆರಿಕದ ಗ್ರಾಹಕರ ಮೇಲೆಯೇ ಬಿದ್ದಿದೆ ಎಂದು ಅಧ್ಯಯನಗಳು ತೋರಿಸಿವೆ) ಮತ್ತು ಇರಾನ್ ವಿರುದ್ಧದ ಯುದ್ಧ ಕಾರಣವಾಗಿವೆ. ಈ ಯುದ್ಧದಿಂದಾಗಿ ಇಂಧನ ಸಾಗಣೆಗೆ ಅತ್ಯಂತ ಪ್ರಮುಖವಾಗಿದ್ದ 'ಹಾರ್ಮುಝ್ ಜಲಸಂಧಿ' ಬಂದ್ ಆಗುವಂತಾಯಿತು.
ಅಮೆರಿಕದ ಮತದಾರರಿಗೆ ಆರ್ಥಿಕತೆಯೇ ಪ್ರಮುಖ ಕಳವಳದ ವಿಷಯವಾಗಿತ್ತು ಎಂದು ಎಕ್ಸಿಟ್ ಪೋಲ್ಗಳು ಸೂಚಿಸಿದ್ದು, ಟೆಕ್ಸಾಸ್ ನಂತಹ ಪ್ರಮುಖ ರಿಪಬ್ಲಿಕನ್ ಭದ್ರಕೋಟೆಗಳೂ ಡೆಮೋಕ್ರಾಟ್ ಗಳ ಪರವಾಗಿ ನಿಲ್ಲುವಂತಾಯಿತು.
ಅಮೆರಿಕದ ಹಲವು ಜನಾಭಿಪ್ರಾಯ ಸಮೀಕ್ಷೆಗಳು ಸುಂಕದ ನೀತಿಗೆ ಸಂಬಂಧಿಸಿದಂತೆ ಸಾರ್ವಜನಿಕರ ನಿಲುವು ಬದಲಾಗಿರುವುದನ್ನು ತೋರಿಸಿವೆ. ABC News ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಶೇ. 64ರಷ್ಟು ಜನರು ಸುಂಕಗಳ ಬಳಕೆ ಮಿತಿ ಮೀರಿದೆ ಎಂದು ತಿಳಿಸಿದ್ದಾರೆ. ಇನ್ನು, 'ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್' ಸಮೀಕ್ಷೆಯ ಪ್ರಕಾರ, ಶೇ. 83ರಷ್ಟು ಜನರು ಟ್ರಂಪ್ ಅವರ ಸುಂಕದ ನೀತಿಗಳೇ ಹಣದುಬ್ಬರಕ್ಕೆ ಕನಿಷ್ಠ ಭಾಗಶಃ ಕಾರಣ ಎಂದು ದೂರಿದ್ದಾರೆ. ಇದು ಟ್ರಂಪ್ ಗೆ ಹಿನ್ನಡೆಯಾದ ಪ್ರಮುಖ ಅಂಶವಾಗಿದೆ.
ಅಮೆರಿಕ ಮೂಲದ 'ಹಡ್ಸನ್ ಇನ್ಸ್ಟಿಟ್ಯೂಟ್' ಎಂಬ ಚಿಂತಕರ ಚಾವಡಿ, "ವ್ಯಾಪಾರ ನೀತಿಯಲ್ಲಿ ಟ್ರಂಪ್ ಅವರ ಪ್ರಭುತ್ವವನ್ನು ತಗ್ಗಿಸಲು ಮತ್ತು ಶಾಸಕಾಂಗದ (ಸಂಸತ್ತಿನ) ಅಧಿಕಾರಗಳನ್ನು ಮರಳಿ ಪಡೆಯಲು ಡೆಮೋಕ್ರಾಟ್ ಗಳು ತಮ್ಮ ಇಚ್ಛೆಯನ್ನು ಸ್ಪಷ್ಟಪಡಿಸಿದ್ದಾರೆ" ಎಂದು ಹೇಳಿದೆ. ಚುನಾವಣೆಯ ನಂತರ ಬಲಗೊಂಡಿರುವ ತಮ್ಮ ರಾಜಕೀಯ ಸ್ಥಾನಮಾನವನ್ನು ಬಳಸಿಕೊಂಡು ವ್ಯಾಪಾರ ನೀತಿಯ ನಿಯಂತ್ರಣವನ್ನು ಮರಳಿ ಪಡೆಯಲು ಡೆಮೋಕ್ರಾಟ್ ನಾಯಕರು ಈಗಾಗಲೇ ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
"ವ್ಯಾಪಾರ ನೀತಿಯ ಅಧಿಕಾರ ವ್ಯಾಪ್ತಿ ಹೊಂದಿರುವ ಸೆನೆಟ್ ಹಣಕಾಸು ಸಮಿತಿಯ ನೂತನ ಅಧ್ಯಕ್ಷರಾಗುವ ಸಾಧ್ಯತೆಯಿರುವ ರಾನ್ ವೈಡನ್ ಮತ್ತು ಮೇಲ್ಮನೆಯ ನಾಯಕರಾಗುವ ನಿರೀಕ್ಷೆಯಿರುವ ಚಾರ್ಲ್ಸ್ ಶೂಮರ್, ಟ್ರಂಪ್ ಅವರ ನೀತಿಗಳನ್ನು ರದ್ದುಗೊಳಿಸಲು ವಿಧೇಯಕಗಳನ್ನು ಮಂಡಿಸಿದ್ದಾರೆ. ಶೂಮರ್ ಮಂಡಿಸಿರುವ ವಿಧೇಯಕವು ಟ್ರಂಪ್ ಬಳಸಿದ್ದ ಹಲವು ಕಾಯ್ದೆಗಳನ್ನು ಹಾಗೂ 'ಅನ್ಯಾಯದ ವ್ಯಾಪಾರ ಪದ್ಧತಿಗಳ' ಕುರಿತು ವ್ಯಾಪಕವಾಗಿ ಬಳಸಲಾದ 'ಸೆಕ್ಷನ್ 301' ಅಧಿಕಾರವನ್ನು ರದ್ದುಗೊಳಿಸಲು ಕೋರುತ್ತದೆ" ಎಂದು ವರದಿ ಹೇಳಿದೆ.
►ವ್ಯಾಪಾರ ನೀತಿಯಲ್ಲಿ ಎರಡೂ ಪಕ್ಷಗಳ ಒಮ್ಮತ
ವ್ಯಾಪಾರ ತಜ್ಞರ ಪ್ರಕಾರ, ವ್ಯಾಪಾರ ನೀತಿ ಮತ್ತು ಚೀನಾವನ್ನು ಎದುರಿಸುವ ವಿಷಯದಲ್ಲಿ ರಿಪಬ್ಲಿಕನ್ ಮತ್ತು ಡೆಮೋಕ್ರಾಟ್ ಎರಡೂ ಪಕ್ಷಗಳು ಒಂದೇ ನಿಲುವನ್ನು ಹೊಂದಿವೆ.
ವಿಶ್ವ ವ್ಯಾಪಾರ ಸಂಸ್ಥೆ (WTO) ಸೇರಿದಂತೆ ಬಹುರಾಷ್ಟ್ರೀಯ ಸಂಸ್ಥೆಗಳನ್ನು ಟ್ರಂಪ್ ಕಡೆಗಣಿಸಿದರು ಎಂದು ಭಾವಿಸಲಾಗಿದ್ದರೂ, ವ್ಯಾಪಾರ ಸಂಸ್ಥೆಗೆ ನ್ಯಾಯಾಧೀಶರ ನೇಮಕಾತಿಯನ್ನು ತಡೆಹಿಡಿಯುವ ಪ್ರಕ್ರಿಯೆ ಆರಂಭವಾಗಿದ್ದು ಒಬಾಮಾ ಆಡಳಿತದ ಅವಧಿಯಲ್ಲೇ. ಇದು ಅಂತಿಮವಾಗಿ ವಿಶ್ವ ವ್ಯಾಪಾರ ಸಂಸ್ಥೆಯ ಕಾರ್ಯಾಚರಣೆ ಸ್ಥಗಿತಗೊಳ್ಳಲು ಕಾರಣವಾಯಿತು. ಇದು ಟ್ರಂಪ್ ಆಡಳಿತದ ಏಕಪಕ್ಷೀಯ ನಿರ್ಧಾರಗಳಿಗೆ ಹಾದಿ ಮಾಡಿಕೊಟ್ಟಿತು. ಆದರೆ, ಟ್ರಂಪ್ ಅವರ ರಕ್ಷಣಾತ್ಮಕ ವ್ಯಾಪಾರ ಕ್ರಮಗಳು ಅತ್ಯಂತ ಅಸಾಂಪ್ರದಾಯಿಕ ಮತ್ತು ಅನಿರೀಕ್ಷಿತವಾಗಿದ್ದವು.
"ಮಧ್ಯಂತರ ಚುನಾವಣೆಯ ಹಿನ್ನಡೆಯ ಫಲಿತಾಂಶಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ನೀತಿಯ ದಿಕ್ಕನ್ನು ಬದಲಾಯಿಸುವುದಿಲ್ಲ. ಏಕೆಂದರೆ ಡೆಮೋಕ್ರಾಟ್ ಗಳು ಮತ್ತು ರಿಪಬ್ಲಿಕನ್ನರು ಇಬ್ಬರೂ ಈಗ ಆರ್ಥಿಕ ರಾಷ್ಟ್ರೀಯತೆ, ದೇಶೀಯ ಉತ್ಪಾದನೆ ಮತ್ತು ಬಲವಾದ ಪೂರೈಕೆ ಜಾಲಗಳನ್ನು ಬೆಂಬಲಿಸುತ್ತಿದ್ದಾರೆ" ಎಂದು ಮಾಜಿ ವ್ಯಾಪಾರ ಅಧಿಕಾರಿ ಹಾಗೂ 'ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್' ಸಂಸ್ಥೆಯ ಸಂಸ್ಥಾಪಕ ಅಜಯ್ ಶ್ರೀವಾಸ್ತವ ತಿಳಿಸಿದ್ದಾರೆ.
►US ಸೆನೆಟ್ ಹೇಗೆ ಕೆಲಸ ಮಾಡುತ್ತದೆ?
ಡೆಮೋಕ್ರಾಟಿಕ್ ಪಕ್ಷದ ಸಂಸದರೂ ಸ್ಥಳೀಯ ಕಾರ್ಮಿಕ ಸಂಘಟನೆಗಳ ಹಿತರಕ್ಷಣೆಗಾಗಿ ರಕ್ಷಣಾತ್ಮಕ ಸುಂಕಗಳನ್ನು ಬೆಂಬಲಿಸುವುದರಿಂದ, ಅಮೆರಿಕದ ಒಟ್ಟಾರೆ ವ್ಯಾಪಾರ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಶ್ರೀವಾಸ್ತವ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಉಲ್ಲೇಖಿಸಿದೆ.
ಸಂಸತ್ತನ್ನು ಹೊರಗಿಟ್ಟು ನಿರ್ಧಾರ ಕೈಗೊಳ್ಳಲು, ಟ್ರಂಪ್ ಕಾರ್ಯಕಾರಿ ಆದೇಶಗಳು, ಖಜಾನೆ ಇಲಾಖೆಯ ನಿರ್ಬಂಧಗಳು ಮತ್ತು USTR ನಿಯಮಗಳನ್ನು ಬಳಸಿಕೊಂಡು 1962ರ ಟ್ರೇಡ್ ಎಕ್ಸ್ಪ್ಯಾನ್ಷನ್ ಆಕ್ಟ್ನ 'ಸೆಕ್ಷನ್ 232' ಹಾಗೂ 'ಸೆಕ್ಷನ್ 301' ಅಡಿಯಲ್ಲಿ ಲಭ್ಯವಿರುವ ಚಾಲ್ತಿಯಲ್ಲಿರುವ ಅಧಿಕಾರಗಳನ್ನೇ ನೆಚ್ಚಿಕೊಳ್ಳುವ ಸಾಧ್ಯತೆಯಿದೆ.
'ಸೆಕ್ಷನ್ 232' ಪ್ರಕಾರ, ಆಮದು ಮಾಡಿಕೊಳ್ಳುವ ವಸ್ತುಗಳ ಪ್ರಮಾಣ ಅಥವಾ ಇತರ ಸನ್ನಿವೇಶಗಳು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುತ್ತವೆ ಎಂದು ಕಂಡುಬಂದಲ್ಲಿ, ಅವುಗಳ ಆಮದಿನ ಮೇಲೆ ನಿರ್ಬಂಧ ಹೇರುವ ಅಧಿಕಾರ ಅಧ್ಯಕ್ಷರಿಗೆ ಇರುತ್ತದೆ.
"ರಷ್ಯಾ, ಚೀನಾ ಮತ್ತು ಇರಾನ್ ವಿರುದ್ಧ ವಿದೇಶಾಂಗ ನೀತಿಯ ಒತ್ತಡಗಳು ವಿಫಲವಾಗಿರುವುದರಿಂದ, ಟ್ರಂಪ್ ಗೆ ಈಗ ಶೀಘ್ರ ಗೆಲುವಿನ ಅಗತ್ಯವಿದೆ. ಹೀಗಾಗಿ, ಅಮೆರಿಕದ ಪ್ರಭಾವವನ್ನು ಸಾಬೀತುಪಡಿಸಲು ಭಾರತದ ಮೇಲೆ ವ್ಯಾಪಾರ ಒಪ್ಪಂದಕ್ಕಾಗಿ ಹೆಚ್ಚಿನ ಒತ್ತಡ ಹೇರುವುದನ್ನು ನಿರೀಕ್ಷಿಸಬಹುದು" ಎಂದು ಶ್ರೀವಾಸ್ತವ ವಿಶ್ಲೇಷಿಸಿದ್ದಾರೆ.
ಸೌಜನ್ಯ: indianexpress.com






