ಸಾಲಿಸಿಟರ್ ಜನರಲ್ ಆಗಿ ಮತ್ತೊಮ್ಮೆ ತುಷಾರ್ ಮೆಹ್ತಾ ಮರುನೇಮಕ: ಮೋದಿ-ಶಾ ಜೋಡಿಗೆ ಇವರೇಕೆ ಅನಿವಾರ್ಯ?

ತುಷಾರ್ ಮೆಹ್ತಾ | Photo Credit : PTI
2014 ರಲ್ಲಿ ನರೇಂದ್ರ ಮೋದಿ ಅವರು ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ, ತಮ್ಮೊಂದಿಗೆ ಗುಜರಾತ್ನ ನಂಬಿಕಸ್ಥ ಅಧಿಕಾರಿಗಳನ್ನೂ ಕರೆತಂದಿದ್ದರು. ಅಂದಿನಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅತ್ಯಂತ ವಿಶ್ವಾಸಾರ್ಹ ಕಾನೂನು ಅಧಿಕಾರಿಯಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಹೆಸರು ಮುಂಚೂಣಿಯಲ್ಲಿದೆ.
ಬಿಜೆಪಿ ನೇತೃತ್ವದ ಎನ್ಡಿಎ ಅಧಿಕಾರಕ್ಕೆ ಬಂದಾಗ, 2014 ರಲ್ಲಿ ಮೆಹ್ತಾ ಅವರನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಆಗಿ ನೇಮಿಸಲಾಯಿತು. ಬಳಿಕ ವೇಗವಾಗಿ ಬೆಳೆದ ಅವರು, ಅಕ್ಟೋಬರ್ 2018 ರಲ್ಲಿ ದೇಶದ ಎರಡನೇ ಅತ್ಯುನ್ನತ ಕಾನೂನು ಅಧಿಕಾರಿಯಾದ 'ಸಾಲಿಸಿಟರ್ ಜನರಲ್ ಆಫ್ ಇಂಡಿಯಾ' ಆಗಿ ಅಧಿಕಾರ ವಹಿಸಿಕೊಂಡರು. 2023 ರಲ್ಲಿ ಇವರ ಅಧಿಕಾರಾವಧಿಯನ್ನು ಮತ್ತೊಂದು ಮೂರು ವರ್ಷಗಳ ಅವಧಿಗೆ ವಿಸ್ತರಿಸಲಾಗಿತ್ತು. ಈಗ ಮತ್ತೆ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಇದೇ ಹುದ್ದೆಗೆ ಮರುನೇಮಕ ಮಾಡಲಾಗಿದೆ.
ಇದರೊಂದಿಗೆ ಮೆಹ್ತಾ ಅವರು ಸಾಲಿಸಿಟರ್ ಜನರಲ್ ಆಗಿ ಒಟ್ಟು 11 ವರ್ಷಗಳ ಸುದೀರ್ಘ ಸೇವೆಯನ್ನು ಪೂರೈಸಿದಂತಾಗುತ್ತದೆ. 1950 ರಿಂದ 1963 ರವರೆಗೆ ಬರೋಬ್ಬರಿ 13 ವರ್ಷಗಳ ಕಾಲ ಈ ಹುದ್ದೆಯಲ್ಲಿದ್ದ ಸಿ.ಕೆ. ದಫ್ತರಿ ಅವರ ದಾಖಲೆಗಿಂತ ಮೆಹ್ತಾ ಅವರು ಕೇವಲ ಎರಡು ವರ್ಷಗಳಷ್ಟೇ ಹಿಂದೆ ಇದ್ದಾರೆ.
ಮೆಹ್ತಾ ಅವರು ಮೋದಿ ಸರ್ಕಾರಕ್ಕೆ ಅಷ್ಟೊಂದು ಅನಿವಾರ್ಯವಾಗಲು ಕಾರಣವೇನು?
The print ಜತೆ ಮಾತನಾಡಿದ ಹಿರಿಯ ವಕೀಲರ ಪ್ರಕಾರ, ಮೆಹ್ತಾ ಅವರು ತಮ್ಮ ಜವಾಬ್ದಾರಿಗೆ ತೋರುವ ನಿಷ್ಠೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಾಲಿಸಿಟರ್ ಜನರಲ್ ಅವರ ಮೇಲೆ ಇಟ್ಟಿರುವ ಹಲವು ವರ್ಷಗಳ ನಂಬಿಕೆ, ನ್ಯಾಯಾಲಯದ ಮುಂದೆ "ಸರಿಯಾದ ರಾಜಕೀಯ ನಿಲುವನ್ನು" ಮಂಡಿಸುವ ಮೆಹ್ತಾ ಅವರ ಸಾಮರ್ಥ್ಯ ಮತ್ತು ನ್ಯಾಯಾಲಯದಲ್ಲಿ "ಸರ್ಕಾರದ ಧ್ವನಿ"ಯಾಗಿ ನಿಲ್ಲುವ ಅವರ ಚಾತುರ್ಯವೇ ಇದಕ್ಕೆ ಪ್ರಮುಖ ಕಾರಣಗಳಾಗಿವೆ.
ಮೆಹ್ತಾ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿರುವ, ಹೆಸರು ಹೇಳಲಿಚ್ಛಿಸದ ಹಿರಿಯ ವಕೀಲರೊಬ್ಬರು, "ಅವರು ಭಾರತದ ಇತಿಹಾಸದಲ್ಲೇ ಅತ್ಯಂತ ಪ್ರಭಾವಶಾಲಿ ಸಾಲಿಸಿಟರ್ ಜನರಲ್. ಅವರು ಸರ್ಕಾರಕ್ಕಾಗಿ ಯಶಸ್ವಿಯಾಗಿ ನಿರ್ವಹಿಸಿದ ಪ್ರಮುಖ ಪ್ರಕರಣಗಳ ಸಂಖ್ಯೆ ನಿಜಕ್ಕೂ ನಂಬಲಸಾಧ್ಯವಾದದ್ದು. ಸರ್ಕಾರದ ಕಾನೂನು ಅಧಿಕಾರಿಗಳ ಇತಿಹಾಸದಲ್ಲಿ ಯಾರೊಬ್ಬರೂ ಇಷ್ಟೊಂದು ನಿರಂತರವಾಗಿ ಮತ್ತು ಪದೇ ಪದೇ ಇಂತಹ ಯಶಸ್ಸನ್ನು ತಂದುಕೊಟ್ಟಿಲ್ಲ. ಅವರು ಸರ್ಕಾರದ ಕಾರ್ಯತಂತ್ರದ ಅತ್ಯಂತ ಪ್ರಮುಖ ಭಾಗವಾಗಿದ್ದಾರೆ" ಎಂದಿದ್ದಾರೆ.
2014 ರಿಂದ ಮೆಹ್ತಾ ಅವರು ಹಲವಾರು ಪ್ರಮುಖ ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ಮುಂಚೂಣಿಯಲ್ಲಿ ನಿಂತು ಹೋರಾಡಿದ್ದಾರೆ. ಅವುಗಳಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಆರ್ಟಿಕಲ್ 370 ರದ್ದತಿ, ಚುನಾವಣಾ ಬಾಂಡ್ಗಳ ಪ್ರಕರಣ, 'ವಿಜಯ್ ಮದನ್ಲಾಲ್ ಚೌಧರಿ vs ಯೂನಿಯನ್ ಆಫ್ ಇಂಡಿಯಾ (2022)' ಪ್ರಕರಣದಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆಯ (PMLA) ನಿಬಂಧನೆಗಳಿಗೆ ಸವಾಲು, ರಾಮಜನ್ಮಭೂಮಿ ಹಕ್ಕು ವಿವಾದ, ಕೋವಿಡ್-19 ರೋಗಿಗಳ ಚಿಕಿತ್ಸೆ ಮತ್ತು ಆಸ್ಪತ್ರೆಗಳಲ್ಲಿ ಮೃತದೇಹಗಳನ್ನು ಗೌರವಯುತವಾಗಿ ನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನ ಸ್ವಯಂಪ್ರೇರಿತ ನಡಾವಳಿಗಳು, ರೋಹಿಂಗ್ಯಾ ನಿರಾಶ್ರಿತರನ್ನು ಮ್ಯಾನ್ಮಾರ್ಗೆ ಗಡಿಪಾರು ಮಾಡುವ ಪ್ರಕರಣ, ಆನ್ಲೈನ್ ಮನಿ ಗೇಮಿಂಗ್ ಮೇಲಿನ 28% GSTಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದ ಪ್ರಕರಣ, ವಕ್ಫ್ (ತಿದ್ದುಪಡಿ) ಕಾಯ್ದೆ 2025ರ ಸಾಂವಿಧಾನಿಕ ಸಿಂಧುತ್ವ, ಸಮಾನ ವಿವಾಹ ಹಕ್ಕು (ಮದುವೆ ಸಮಾನತೆ) ಪ್ರಕರಣ, ಆಧಾರ್ ಪ್ರಕರಣ, ಇಡಬ್ಲ್ಯೂಎಸ್ ಮೀಸಲಾತಿ ಪ್ರಕರಣ ಮತ್ತು ಅತ್ಯಂತ ಇತ್ತೀಚಿನ ಟೆಲಿಗ್ರಾಮ್ ಮೆಸೇಜಿಂಗ್ ಆ್ಯಪ್ ಮೇಲಿನ ಸರ್ಕಾರದ ನಿಷೇಧದ ಪ್ರಕರಣಗಳು ಸೇರಿವೆ.
ತಮ್ಮ ಜವಾಬ್ದಾರಿಗೆ ನಿಷ್ಠಾವಂತ
ಅಹಮದಾಬಾದ್ನ ಸರ್ ಎಲ್.ಎ. ಶಾ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಮೆಹ್ತಾ ಅವರ ವೃತ್ತಿಜೀವನ ಆರಂಭವಾಗಿದ್ದು ಹಿರಿಯ ವಕೀಲ ಕೃಷ್ಣಕಾಂತ್ ವಖಾರಿಯಾ ಅವರ ಕಾನೂನು ಕಚೇರಿಯಿಂದ. ಮೆಹ್ತಾ ಅವರೊಂದಿಗೆ ಒಟ್ಟಿಗೆ ಕೆಲಸ ಮಾಡಿರುವ ಗುಜರಾತ್ ಹೈಕೋರ್ಟ್ನ ಹಿರಿಯ ವಕೀಲ ನಿರುಪಮ್ ನಾನಾವತಿ ಅವರು, ಮೆಹ್ತಾ ಅವರನ್ನು ಅಧ್ಯಯನಶೀಲ ಮತ್ತು ಕಠಿಣ ಪರಿಶ್ರಮಿ ವಕೀಲ ಎಂದು ನೆನಪಿಸಿಕೊಳ್ಳುತ್ತಾರೆ.
ನಾನಾವತಿ ಅವರ ಪ್ರಕಾರ, ಮೆಹ್ತಾ ಅವರ ಅತ್ಯಂತ ವಿಶಿಷ್ಟ ಗುಣವೆಂದರೆ ಅವರು ತಮ್ಮ ಜವಾಬ್ದಾರಿಗೆ ನಿಷ್ಠಾವಂತರು.
"ಅವರು ಆ ಪ್ರಕರಣ ಕೈಗೆತ್ತಿಕೊಂಡರೆ ತಮ್ಮ ಕಕ್ಷಿದಾರರಿಗೆ ಗರಿಷ್ಠ ಅನುಕೂಲವಾಗುವ ರೀತಿಯಲ್ಲಿ ಪ್ರಕರಣವನ್ನು ನಡೆಸಿಕೊಡುತ್ತಾರೆ" ಎಂದು ನಾನಾವತಿ ಹೇಳಿದ್ದಾರೆ.
ವಖಾರಿಯಾ ಅವರು ಗುಜರಾತ್ ಕಾಂಗ್ರೆಸ್ನ ಕಾನೂನು ಘಟಕದ ಅಧ್ಯಕ್ಷರಾಗಿದ್ದರು. ಅವರು ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಜೊತೆಗೂ ಗುರುತಿಸಿಕೊಂಡಿದ್ದರು. ಆದರೆ ಈ ರಾಜಕೀಯ ಭಿನ್ನಾಭಿಪ್ರಾಯಗಳು ಅವರ ವೃತ್ತಿಪರ ಸಂಬಂಧಕ್ಕೆ ಎಂದಿಗೂ ಅಡ್ಡಿಯಾಗಲಿಲ್ಲ. ವಾಸ್ತವವಾಗಿ, 2021 ರಲ್ಲಿ ಮೆಹ್ತಾ ಅವರು ವಖಾರಿಯಾ ಅವರನ್ನು ಸನ್ಮಾನಿಸಿದ್ದರು. ಆ ವೇಳೆ ತಮ್ಮ "ಪಿತೃ ಸಮಾನ" ವ್ಯಕ್ತಿಗೆ ಕೃತಜ್ಞತೆ ಸಲ್ಲಿಸಿದ್ದ ಅವರು, ತಮ್ಮ ಎಲ್ಲಾ ಸಾಧನೆಗಳ ಶ್ರೇಯಸ್ಸನ್ನು ಆ ಹಿರಿಯ ವಕೀಲರಿಗೆ ಅರ್ಪಿಸಿದ್ದರು ಎಂದು ನಾನಾವತಿ ಹೇಳಿದ್ದಾರೆ.
2008 ರಲ್ಲಿ ಮೆಹ್ತಾ ಅವರು ಗುಜರಾತ್ನ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡ ನಂತರ, ಅಮಿತ್ ಶಾ ಅವರು ಆರೋಪಿಯಾಗಿದ್ದ ಸೊಹ್ರಾಬುದ್ದೀನ್ ಶೇಖ್ ಎನ್ಕೌಂಟರ್ ಪ್ರಕರಣದಲ್ಲಿ ಗುಜರಾತ್ ಸರ್ಕಾರದ ಪರ ಪ್ರಮುಖ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸಿದರು.
ವಾಸ್ತವವಾಗಿ, ಮೆಹ್ತಾ ಅವರ ಅಧಿಕಾರಾವಧಿಯಲ್ಲಿ ಗುಜರಾತ್ ಸರ್ಕಾರದ ಧೋರಣೆಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಪರಿಶೀಲಿಸಿದ್ದು, ಈ ಪ್ರಕರಣದಲ್ಲಿ ರಾಜ್ಯ ಸರ್ಕಾರವು "ವಿರೋಧಿ ಧೋರಣೆ" ತಳೆದಿದೆ ಎಂದು ಟೀಕಿಸಿತ್ತು. ನಂತರ 2014 ರಲ್ಲಿ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಅಮಿತ್ ಶಾ ಅವರನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿತು.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ಸರ್ಕಾರದ ಮಟ್ಟದಲ್ಲಿ ರೂಪಿಸುವುದರಿಂದ ಹಿಡಿದು, ಸುಪ್ರೀಂ ಕೋರ್ಟ್ನಲ್ಲಿ ಆ ನಿರ್ಧಾರವನ್ನು ಯಶಸ್ವಿಯಾಗಿ ಸಮರ್ಥಿಸಿಕೊಳ್ಳುವವರೆಗೂ ಮುಂಚೂಣಿಯಲ್ಲಿದ್ದ ವ್ಯಕ್ತಿ ಮೆಹ್ತಾ ಎಂದೇ ಹೇಳಲಾಗುತ್ತಿದೆ.
2023 ರಲ್ಲಿ ಸುಪ್ರೀಂ ಕೋರ್ಟ್ ಸಂವಿಧಾನದ ಆರ್ಟಿಕಲ್ 370 ರದ್ದತಿಯನ್ನು ಎತ್ತಿಹಿಡಿದ ನಂತರ, "ಆಗಸ್ಟ್ 5, 2019ಕ್ಕಿಂತ ಮೊದಲು ಸಾಂವಿಧಾನಿಕ ಮತ್ತು ಕಾನೂನು ಮಾರ್ಗಗಳ ಮೂಲಕ ಆರ್ಟಿಕಲ್ 370 ಅನ್ನು ರದ್ದುಗೊಳಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಏಕೈಕ ವಕೀಲ ನಾನಾಗಿದ್ದೆ. ಸಾಂವಿಧಾನಿಕ ಪ್ರಕ್ರಿಯೆಯನ್ನು ಸಮರ್ಥಿಸುವಾಗ ಸಾಂವಿಧಾನಿಕ ಪೀಠದ ಮುಂದೆ ವಾದಗಳನ್ನು ಮುನ್ನಡೆಸಿದ್ದರಿಂದ, ಇದು ನನಗೂ ಒಂದು ಐತಿಹಾಸಿಕ ದಿನವಾಗಿದೆ" ಎಂದು ಮೆಹ್ತಾ ಹೇಳಿದ್ದರು.
ಸರ್ಕಾರದ ಧ್ವನಿ
ಅಕ್ಟೋಬರ್ 2017 ರಲ್ಲಿ ರಂಜಿತ್ ಕುಮಾರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ಸುಮಾರು ಒಂದು ವರ್ಷದ ಕಾಲ ಸಾಲಿಸಿಟರ್ ಜನರಲ್ ಹುದ್ದೆ ಖಾಲಿ ಇತ್ತು. ಆ ನಂತರ, ಅಕ್ಟೋಬರ್ 2018 ರಲ್ಲಿ ಮೆಹ್ತಾ ಅವರನ್ನು ಸಾಲಿಸಿಟರ್ ಜನರಲ್ ಆಗಿ ನೇಮಿಸಲಾಯಿತು.
ಮತ್ತೊಬ್ಬ ಹಿರಿಯ ವಕೀಲರ ಪ್ರಕಾರ, ಆ ಸಮಯದಲ್ಲಿ ಅಂದಿನ ಹೆಚ್ಚುವರಿ ಸಾಲಿಸಿಟರ್ ಜನರಲ್ ಮನಿಂದರ್ ಸಿಂಗ್ ಅವರ ಹೆಸರು ಕೂಡ ಸಾಲಿಸಿಟರ್ ಜನರಲ್ ಹುದ್ದೆಯ ರೇಸ್ನಲ್ಲಿ ಮುಂಚೂಣಿಯಲ್ಲಿತ್ತು. ಆದರೆ ಮೆಹ್ತಾ ಅವರ ಪರವಾಗಿ ನಿರ್ಧಾರ ಹೊರಬೀಳಲು ಪ್ರಮುಖ ಕಾರಣ ಅಮಿತ್ ಶಾ ಅವರು ಮೆಹ್ತಾ ಅವರನ್ನೇ ಬಯಸಿದ್ದರು ಎಂದು The Print ಉಲ್ಲೇಖಿಸಿದೆ.
ಮೆಹ್ತಾ ಅವರು ಭಾರತದ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡ ಅದೇ ದಿನ ಮನಿಂದರ್ ಸಿಂಗ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
ನ್ಯಾಯಾಲಯದ ಒಳಗೆ ಮೆಹ್ತಾ ಅವರ ಧ್ವನಿ ಎಷ್ಟರಮಟ್ಟಿಗೆ ಪ್ರಭಾವಶಾಲಿಯಾಗಿದೆ ಎಂದರೆ, ಅವರು ವಾದ ಮಂಡಿಸುತ್ತಿರುವ ಪ್ರಕರಣವು ಸರ್ಕಾರಕ್ಕೆ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಅವರ ಧ್ವನಿಯೇ ಸ್ಪಷ್ಟಪಡಿಸುತ್ತದೆ ಎಂದು ವಕೀಲರು ಹೇಳುತ್ತಾರೆ.
ತುಷಾರ್ ಮೆಹ್ತಾ ಅವರು ನ್ಯಾಯಾಧೀಶರ ಮುಂದೆ ಸರ್ಕಾರದ ಧ್ವನಿಯಾಗಿ ಅತ್ಯಂತ ಸಮರ್ಥವಾಗಿ ನಿಲ್ಲಬಲ್ಲರು. ಅವರು ನನಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿದ್ದ ಕೆ. ಪರಾಶರನ್ (ಭಾರತದ ಮಾಜಿ ಅಟಾರ್ನಿ ಜನರಲ್) ಅವರಂತಹವರನ್ನು ನೆನಪಿಸುತ್ತಾರೆ. ಅಂದು ಪರಾಶರನ್ ಅವರ ಧ್ವನಿಯೂ ಇಷ್ಟೇ ಪ್ರಭಾವಶಾಲಿಯಾಗಿತ್ತು. ಅವರು ಏನನ್ನಾದರೂ ಹೇಳುತ್ತಿದ್ದಾರೆ ಎಂದರೆ, ಅದು ಸರ್ಕಾರದ ನಿಲುವೇ ಆಗಿರುತ್ತದೆ ಎಂಬುದು ನ್ಯಾಯಾಧೀಶರಿಗೂ ತಿಳಿಯುತ್ತಿತ್ತು" ಎಂದು ಹೆಸರು ಹೇಳಲಿಚ್ಛಿಸದ ಮತ್ತೊಬ್ಬ ಹಿರಿಯ ವಕೀಲರು ಹೇಳಿದ್ದಾರೆ.
"ನ್ಯಾಯಾಲಯದಲ್ಲಿ ಅವರ (ಮೆಹ್ತಾ) ಉಪಸ್ಥಿತಿಯೇ ಆ ಪ್ರಕರಣದ ಗಂಭೀರತೆಯನ್ನು ತೋರಿಸುತ್ತದೆ. ಸರ್ಕಾರ ಅವರ ಮಾತುಗಳನ್ನು ಆಲಿಸುತ್ತದೆ ಎಂಬ ಭಾವನೆ ಎಲ್ಲರಲ್ಲಿದೆ. ದೇಶದ ಅತ್ಯುನ್ನತ ನಾಯಕರೊಂದಿಗೆ ಅವರಿಗೆ ಇರುವ ನಿಕಟ ಸಂಬಂಧ ಎಲ್ಲರಿಗೂ ತಿಳಿದಿರುವಂತದ್ದೇ ಆಗಿದೆ" ಎಂದಿದ್ದಾರೆ ಅವರು.
ಅಮಿತ್ ಶಾ ಮತ್ತು ಮೆಹ್ತಾ ನಡುವಿನ ಸ್ನೇಹವೇನೂ ರಹಸ್ಯವಾಗಿ ಉಳಿದಿಲ್ಲ. ಕೇವಲ ಕಳೆದ ತಿಂಗಳಷ್ಟೇ ಹೊಸದಿಲ್ಲಿಯಲ್ಲಿ ನಡೆದ ಮೆಹ್ತಾ ಅವರು ಬರೆದ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಶಾ ಅವರು ಮುಖ್ಯ ಅತಿಥಿಯಾಗಿದ್ದರು.
ಆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶಾ, "ಇಲ್ಲಿ ನನ್ನ ಭಾಷಣವನ್ನು ತುಷಾರ್ ಮೆಹ್ತಾ ಅವರ ಹಳೆಯ ಸ್ನೇಹಿತನ ಮಾತಿನಂತೆ ನೋಡಲಾಗುವುದಿಲ್ಲ, ಬದಲಿಗೆ ಇದನ್ನು ನ್ಯಾಯಾಲಯ ಮತ್ತು ಸರ್ಕಾರದ ನಡುವಿನ ಸಂಬಂಧವಾಗಿ ನೋಡಲಾಗುತ್ತದೆ" ಎಂದು ತಮಗೆ ಮೊದಲೇ ಎಚ್ಚರಿಸಲಾಗಿತ್ತು ಎಂದಿದ್ದರು.






