ವಾರಣಾಸಿಯ ಎರಡು ದೋಣಿ ಪ್ರಕರಣಗಳು, ಎರಡು ಕಾನೂನು ಹಾದಿ: ಐವರು ಹಿಂದೂಗಳಿಗೆ ಒಂದೇ ದಿನದಲ್ಲಿ ಜಾಮೀನು, 14 ಮಂದಿ ಮುಸ್ಲಿಮರಿಗೆ ಎರಡು ತಿಂಗಳು ಜೈಲು

Photo Credit : altnews
ಗಂಗಾನದಿಯಲ್ಲಿ ಸಣ್ಣ ದೋಣಿಯೊಂದರಲ್ಲಿ ಕೋಳಿ ಮಾಂಸ ಬೇಯಿಸುತ್ತಾ ಮತ್ತು ಬಿಯರ್ ಕುಡಿಯುತ್ತಿರುವುದನ್ನು ತೋರಿಸುವ ವೀಡಿಯೋವೊಂದರ ಆಧಾರದ ಮೇಲೆ, ದಶಾಶ್ವಮೇಧ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಕೊಂಡು ಜೂನ್ 23ರಂದು ವಾರಣಾಸಿಯಲ್ಲಿ ಐದು ಜನರನ್ನು ಬಂಧಿಸಿದ್ದರು. ಈ ಐವರೂ ಅದೇ ದಿನ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, FIRನಲ್ಲಿ BNS ಕಾಯ್ದೆಯ ಸೆಕ್ಷನ್ 196(2) ಮತ್ತು 299 ಅನ್ನು ಉಲ್ಲೇಖಿಸಲಾಗಿತ್ತು. ಆದರೆ, ನ್ಯಾಯಾಲಯಕ್ಕೆ ಸಲ್ಲಿಸಲಾದ ಚಲನ್ ನಲ್ಲಿ ಕೇವಲ BNSS ಕಾಯ್ದೆಯ ಸೆಕ್ಷನ್ 170ರ ಅಡಿಯಲ್ಲಿ ಮಾತ್ರ ಬಂಧನವನ್ನು ತೋರಿಸಲಾಗಿತ್ತು.
BNSನ ಸೆಕ್ಷನ್ 196(2) ಮತ್ತು 299ರ ಪ್ರಕಾರ, ಧರ್ಮ ಮುಂತಾದ ಆಧಾರಗಳ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶಪೂರ್ವಕ ಹಾಗೂ ದುರುದ್ದೇಶಪೂರಿತ ಕೃತ್ಯಗಳನ್ನು ಎಸಗುವುದು ಅಪರಾಧವಾಗಿದೆ. ಇನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 170, ಯಾವುದೇ ಒಂದು ಗಂಭೀರ ಅಪರಾಧ ನಡೆಯದಂತೆ ತಡೆಯಲು ವ್ಯಕ್ತಿಗಳನ್ನು ಬಂಧಿಸುವ ಅಧಿಕಾರವನ್ನು ಪೊಲೀಸರಿಗೆ ನೀಡುತ್ತದೆ.
'Alt News' ಜೊತೆ ಮಾತನಾಡಿದ ದಶಾಶ್ವಮೇಧ ಪೊಲೀಸ್ ಠಾಣೆಯ ಎಸ್ಎಚ್ಒ ಸಂತೋಷ್ ಕುಮಾರ್, ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಮುಂದೆ ಸಲ್ಲಿಸಲಾದ ಚಲನ್ ನಲ್ಲಿ, 'ಪೊಲೀಸರು ಸಮಾಧಾನಪಡಿಸಲು ಪದೇ ಪದೇ ಯತ್ನಿಸಿದರೂ ಈ ವ್ಯಕ್ತಿಗಳು ಪ್ರವಾಸಿಗರ ಮೇಲೆ ಕೂಗಾಡುತ್ತಿದ್ದರು. ಇದರಿಂದ ಶಾಂತಿ ಭಂಗ ಉಂಟಾಗುವ ವಾತಾವರಣ ನಿರ್ಮಾಣವಾಗಿತ್ತು' ಎಂದು ಉಲ್ಲೇಖಿಸಿರುವುದನ್ನು ಖಚಿತಪಡಿಸಿದ್ದಾರೆ. ಆದರೆ, FIRನಲ್ಲಿದ್ದ ಸೆಕ್ಷನ್ ಗಳು ಮತ್ತು ದೋಣಿಯಲ್ಲಿ ಚಿಕನ್ ಬೇಯಿಸುತ್ತಿದ್ದ ವೀಡಿಯೋ ಸಾಕ್ಷ್ಯದ ಬಗ್ಗೆ ಚಲನ್ ನಲ್ಲಿ ಏಕೆ ಉಲ್ಲೇಖಿಸಿಲ್ಲ ಎಂದು ಪ್ರಶ್ನಿಸಿದಾಗ, ಅಧಿಕಾರಿ ಹಾರಿಕೆಯ ಉತ್ತರಗಳನ್ನು ನೀಡಿದ್ದಾರೆ.
ಇದಕ್ಕೆ ತದ್ವಿರುದ್ಧವಾಗಿ, ಕೇವಲ ಮೂರು ತಿಂಗಳ ಮುಂಚೆ ಗಂಗಾನದಿಯ ದೋಣಿಯೊಂದರಲ್ಲಿ ಇಫ್ತಾರ್ ವೇಳೆ ಮಾಂಸಾಹಾರ ಸೇವಿಸಿದ ಕಾರಣಕ್ಕಾಗಿ ಬಂಧಿತರಾಗಿದ್ದ 14 ಮಂದಿ ಮುಸ್ಲಿಂ ವ್ಯಕ್ತಿಗಳು, ಅಲಹಾಬಾದ್ ಹೈಕೋರ್ಟ್ನಿಂದ ಜಾಮೀನು ಪಡೆಯುವ ಮುನ್ನ ಎರಡು ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆಯಬೇಕಾಯಿತು. ಅವರ ವಿರುದ್ಧ ಆರಂಭದಲ್ಲಿ BNSನ ಏಳು ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಂತರ ಅವರ ಮೇಲೆ ಕಠಿಣವಾದ BNS ಸೆಕ್ಷನ್ 308(5) (ಕೊಲೆ ಬೆದರಿಕೆ ಅಥವಾ ಗಂಭೀರ ಗಾಯದ ಬೆದರಿಕೆ ಹಾಕಿ ಸುಲಿಗೆ ಮಾಡುವುದು) ಮತ್ತು ಅಶ್ಲೀಲ ವಸ್ತುವನ್ನು ಪ್ರಕಟಿಸುವ ಅಥವಾ ರವಾನಿಸುವ ಐಟಿ ಕಾಯ್ದೆಯ ಸೆಕ್ಷನ್ 67ರ ಅಡಿಯೂ ಆರೋಪ ಹೊರಿಸಲಾಗಿತ್ತು.
►ಜೂನ್ ತಿಂಗಳ ಘಟನೆ: ಎರಡು ಸೆಕ್ಷನ್ಗಳು, ಒಂದೇ ದಿನದಲ್ಲಿ ಜಾಮೀನು
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವೀಡಿಯೋವೊಂದರಲ್ಲಿ, ಚಳಿಗಾಲದ ಉಡುಪು ಧರಿಸಿದ್ದ ಒಂಬತ್ತು ಮಂದಿ ದೋಣಿಯೊಂದರಲ್ಲಿ ಚಿಕನ್ ಬೇಯಿಸುತ್ತಾ, ಮದ್ಯದ ಬಾಟಲಿಗಳನ್ನು ಪ್ರದರ್ಶಿಸುತ್ತಾ, ಇದನ್ನು 'ಪಾರ್ಟಿ' ಎಂದು ಕರೆಯುತ್ತಿರುವುದು ಕಂಡುಬಂದಿತ್ತು. ಇದು ಗಂಗಾನದಿಯಲ್ಲೇ ನಡೆದಿದೆ ಎಂದು ಹೇಳಲಾಗಿದೆ. ಈ ವೀಡಿಯೋ ಅಂತರ್ಜಾಲದಲ್ಲಿ ಮುನ್ನೆಲೆಗೆ ಬರುತ್ತಿದ್ದಂತೆ, ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದ್ದರು. ಒಂಬತ್ತು ಆರೋಪಿಗಳ ಪೈಕಿ ಐವರಾದ ದೀಪಕ್ ಕುಮಾರ್, ಅರುಣ್ ಕುಮಾರ್ ಸಾಹ್ನಿ, ರಾಹುಲ್ ಸಾಹ್ನಿ, ಅಜಯ್ ಸಾಹ್ನಿ ಮತ್ತು ಅನುರಾಗ್ ನಿಶಾದ್ ಅವರನ್ನು ಅದೇ ದಿನ ಬಂಧಿಸಲಾಯಿತು. ಸ್ವಲ್ಪ ಸಮಯದ ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಈ ಕುರಿತು ಜೂನ್ 23ರಂದು ಮುಂಜಾನೆ 2:18ಕ್ಕೆ ದಶಾಶ್ವಮೇಧ ಪೊಲೀಸ್ ಠಾಣೆಯಲ್ಲಿ FIR (ಸಂಖ್ಯೆ 0143/2026) ದಾಖಲಾಗಿರುವುದನ್ನು ಎಸ್ಎಚ್ಒ ಕುಮಾರ್ ಆಲ್ಟ್ ನ್ಯೂಸ್ಗೆ ಖಚಿತಪಡಿಸಿದ್ದಾರೆ. FIR ಪ್ರಕಾರ, ಈ ವ್ಯಕ್ತಿಗಳು "ಪವಿತ್ರ ಗಂಗಾನದಿಯ ತೀರದಲ್ಲಿ ದೋಣಿಯೊಂದರಲ್ಲಿ ಬಿಯರ್/ಮದ್ಯ ಸೇವಿಸುತ್ತಿದ್ದರು ಮತ್ತು ದೋಣಿಯಲ್ಲೇ ಚಿಕನ್ ಬೇಯಿಸುತ್ತಿದ್ದರು." ಈ ಕೃತ್ಯವನ್ನು "ಸಾಮಾಜಿಕ ಮರ್ಯಾದೆ ಮತ್ತು ಸಾರ್ವಜನಿಕ ನಡತೆಗೆ ವಿರುದ್ಧವಾದದ್ದು" ಎಂದು ವಿವರಿಸಲಾಗಿದೆ. ಇದು "ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ" ಎಂದು ಹೇಳಲಾಗಿದೆ.
ಇದರ ಪರಿಣಾಮವಾಗಿ, ಪೊಲೀಸರು ಆರೋಪಿಗಳ ವಿರುದ್ಧ BNSನ ಸೆಕ್ಷನ್ 196(2) (ಧರ್ಮ, ತಳಿ, ಜಾತಿ, ಭಾಷೆ, ಜನ್ಮಸ್ಥಳ, ವಾಸಸ್ಥಳ ಅಥವಾ ಸಮುದಾಯದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸಾಮರಸ್ಯಕ್ಕೆ ಧಕ್ಕೆ ತರುವ ಕೃತ್ಯಗಳನ್ನು ಎಸಗುವುದು) ಮತ್ತು 299 (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
FIRನಾದ್ಯಂತ ಗಂಗಾನದಿಯನ್ನು "ಪವಿತ್ರ ನದಿ" ಎಂದು ಉಲ್ಲೇಖಿಸಲಾಗಿದೆ ಮತ್ತು ಅದರ ತೀರಗಳನ್ನು "ಹಿಂದೂ ಸಮಾಜದ ನಂಬಿಕೆ, ಆರಾಧನೆ, ತಪಸ್ಸು, ಧ್ಯಾನ ಮತ್ತು ಮೋಕ್ಷದ ಕೇಂದ್ರ" ಎಂದು ಬಣ್ಣಿಸಲಾಗಿದೆ. ಈ ದೂರು, ಸದರಿ ಕೃತ್ಯವನ್ನು "ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು, ಸಾಮಾಜಿಕ ದ್ವೇಷವನ್ನು ಉಂಟುಮಾಡಲು ಮತ್ತು ಧಾರ್ಮಿಕ ವಾತಾವರಣವನ್ನು ಕಲುಷಿತಗೊಳಿಸಲು ನಡೆಸಿದ ಪ್ರಯತ್ನ" ಎಂದು ಉಲ್ಲೇಖಿಸಿದೆ.
►FIR ಮತ್ತು ಚಲನ್ ನಲ್ಲಿನ ಆರೋಪಗಳ ನಡುವಿನ ವ್ಯತ್ಯಾಸ
FIRನಲ್ಲಿ ಉಲ್ಲೇಖಿಸಲಾದ ಆರೋಪಗಳು ನ್ಯಾಯಾಲಯಕ್ಕೆ ಸಲ್ಲಿಸಲಾದ ಚಲನ್ ನಲ್ಲಿ ಇರಲಿಲ್ಲ ಎಂದು ಜೂನ್ 24ರಂದು 'the wire' ಮೊದಲು ವರದಿ ಮಾಡಿತ್ತು. FIR ಸಂಪೂರ್ಣವಾಗಿ ದೋಣಿಯೊಂದರಲ್ಲಿ ಮಾಂಸಾಹಾರ ಬೇಯಿಸುತ್ತಾ ಮತ್ತು ಮದ್ಯ ಸೇವಿಸುತ್ತಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದ ವೀಡಿಯೋದ ಬಗ್ಗೆ ಆಗಿತ್ತು. ಆದರೆ ಚಲನ್ ನಲ್ಲಿ ಮಾತ್ರ, ಗಲಾಟೆಯ ನಂತರ ಉಂಟಾಗಬಹುದಾದ ಶಾಂತಿ ಭಂಗವನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಮಾತ್ರ ಈ ಬಂಧನವನ್ನು ಮಾಡಲಾಗಿದೆ ಎಂದು ದಾಖಲಿಸಲಾಗಿತ್ತು.
ಚಲನ್ ಎನ್ನುವುದು ಪೊಲೀಸರು ಪ್ರಕರಣ ದಾಖಲಿಸಿದ ನಂತರ ನ್ಯಾಯಾಲಯಕ್ಕೆ ಸಲ್ಲಿಸುವ ಬಂಧನ ಪತ್ರವಾಗಿದೆ. ಈ ವ್ಯತ್ಯಾಸಕ್ಕೆ ಕಾರಣ ಏನೆಂದು ಕೇಳಿದಾಗ ಎಸ್ಎಚ್ಒ, "ತನಿಖೆ ಇನ್ನೂ ಮುಂದುವರಿಯುತ್ತಿದೆ. ಹೊಸ ಆಧಾರಗಳು ಸಿಕ್ಕಂತೆಲ್ಲಾ ಹೆಚ್ಚುವರಿ ಸೆಕ್ಷನ್ಗಳನ್ನು ಸೇರಿಸಲಾಗುವುದು ಮತ್ತು ಅಂತಿಮ ಚಾರ್ಜ್ಶೀಟ್ ಬಿಡುಗಡೆ ಮಾಡಲಾಗುವುದು" ಎಂದು ಹೇಳಿದರು.
ಬಂಧನ ಅಥವಾ ದೂರಿಗೆ ಇದ್ದ ಮುಖ್ಯ ಕಾರಣವನ್ನು ಚಲನ್ ನಲ್ಲಿ ಏಕೆ ಉಲ್ಲೇಖಿಸಿಲ್ಲ ಎಂದು ಪ್ರಶ್ನಿಸಿದಾಗ, "ವೀಡಿಯೋದಲ್ಲಿ ಆ ವ್ಯಕ್ತಿಗಳು ಜಾಕೆಟ್ ಮತ್ತು ಸ್ವೆಟರ್ಗಳನ್ನು ಧರಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ, ಅಂದರೆ ಇದನ್ನು ಬಹಳ ದಿನಗಳ ಹಿಂದೆ ಚಿತ್ರೀಕರಿಸಲಾಗಿದೆ" ಎಂದು ಅವರು ಉತ್ತರಿಸಿದರು. ಒಮ್ಮೆ ಚಾರ್ಜ್ಶೀಟ್ ಸಲ್ಲಿಕೆಯಾದ ನಂತರ, "ಅವರು ಮತ್ತೊಮ್ಮೆ ಜಾಮೀನಿಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ" ಎಂದು ಸಂತೋಷ್ ಕುಮಾರ್ ಹೇಳಿರುವುದಾಗಿ Alt News ವರದಿ ಉಲ್ಲೇಖಿಸಿದೆ.
ಆದರೆ, ಇಡೀ ಸಂಭಾಷಣೆಯುದ್ದಕ್ಕೂ FIRನಲ್ಲಿ ದಾಖಲಿಸಲಾದ ಕಾರಣಗಳು ಮತ್ತು ಚಲನ್ ನಲ್ಲಿ ಉಲ್ಲೇಖಿಸಲಾದ ಕಾರಣಗಳು ಇಷ್ಟೊಂದು ಭಿನ್ನವಾಗಿರಲು ಕಾರಣ ಏನೆಂಬುದನ್ನು ಎಸ್ಎಚ್ಒ ಸ್ಪಷ್ಟಪಡಿಸಲಿಲ್ಲ.
►ಮಾರ್ಚ್ ತಿಂಗಳ ಘಟನೆ: ಹಲವು ಕಠಿಣ ಸೆಕ್ಷನ್ ಗಳು, ತಿಂಗಳುಗಟ್ಟಲೆ ಜೈಲು
ಒಂದು ಗುಂಪಿನ ಮುಸ್ಲಿಂ ವ್ಯಕ್ತಿಗಳು ಗಂಗಾನದಿಯ ದೋಣಿಯೊಂದರಲ್ಲಿ ಇಫ್ತಾರ್ ನಡೆಸಿದ ವೀಡಿಯೋವೊಂದು ಮುನ್ನೆಲೆಗೆ ಬಂದ ನಂತರ, ಮಾರ್ಚ್ 16ರಂದು ಭಾರತೀಯ ಜನತಾ ಯುವ ಮೋರ್ಚಾ (BJYM) ವಾರಣಾಸಿ ಅಧ್ಯಕ್ಷ ರಜತ್ ಜೈಸ್ವಾಲ್ ದೂರು ದಾಖಲಿಸಿದ್ದರು. ಆ ವ್ಯಕ್ತಿಗಳು ಚಿಕನ್ ಬಿರಿಯಾನಿ ಸೇವಿಸಿದ್ದಾರೆ, ಆಹಾರದ ತ್ಯಾಜ್ಯವನ್ನು ನದಿಗೆ ಎಸೆದಿದ್ದಾರೆ ಹಾಗೂ ಆ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಜೈಸ್ವಾಲ್ ಆರೋಪಿಸಿದ್ದರು.
ಪೊಲೀಸರು ಮಾರ್ಚ್ 17ರಂದು ಆಝಾದ್ ಅಲಿ, ಅಮೀರ್ ಕೈಕಿ, ಡ್ಯಾನಿಶ್ ಸೈಫಿ, ಮೊಹಮ್ಮದ್ ಅಹ್ಮದ್, ನೆಹಾಲ್ ಅಫ್ರಿದಿ, ಮಹಫೂಜ್ ಆಲಂ, ಮೊಹಮ್ಮದ್ ಅನಾಸ್, ಮೊಹಮ್ಮದ್ ಅವ್ವಲ್, ಮೊಹಮ್ಮದ್ ತಹ್ಸೀಮ್, ಮೊಹಮ್ಮದ್ ಅಹ್ಮದ್ ಅಲಿಯಾಸ್ ರಾಜಾ, ಮೊಹಮ್ಮದ್ ನೂರ್ ಇಸ್ಮಾಯಿಲ್, ಮೊಹಮ್ಮದ್ ತೌಸಿಫ್ ಅಹ್ಮದ್, ಮೊಹಮ್ಮದ್ ಫೈಜಾನ್ ಮತ್ತು ಮೊಹಮ್ಮದ್ ಸಮೀರ್ - ಈ 14 ಮಂದಿಯನ್ನು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು, ಸಾರ್ವಜನಿಕ ಉಪದ್ರವ ಮತ್ತು ನೀರನ್ನು ಕಲುಷಿತಗೊಳಿಸುವುದು ಸೇರಿದಂತೆ ಹಲವು ಆರೋಪಗಳ ಅಡಿಯಲ್ಲಿ ಬಂಧಿಸಿದರು. ಎರಡು ದಿನಗಳ ನಂತರ, ಸುಲಿಗೆಯಂತಹ ಮತ್ತಷ್ಟು ಗಂಭೀರ ಆರೋಪಗಳನ್ನು ಸೇರಿಸಲಾಯಿತು. ಇದು ಪ್ರಕರಣದ ಕಾನೂನು ತೀವ್ರತೆಯನ್ನು ಗಣನೀಯವಾಗಿ ಹೆಚ್ಚಿಸಿತು. ಆದರೆ, ಸುಲಿಗೆ ಆರೋಪಗಳನ್ನು ಹೊರಿಸಲು ಇದ್ದ ಆಧಾರಗಳೇನು ಎಂಬುದನ್ನು ಪೊಲೀಸರು ಸ್ಪಷ್ಟಪಡಿಸಿಲ್ಲ ಎಂದು 'Alt News' ಈ ಹಿಂದೆ ವರದಿ ಮಾಡಿತ್ತು.
ಈ ಪ್ರಕರಣದಲ್ಲಿ, ಆರೋಪಿಗಳ ವಿರುದ್ಧ ಆರಂಭದಲ್ಲಿ ಹೊರಿಸಲಾಗಿದ್ದ ಆರೋಪಗಳು ಹೀಗಿವೆ:
BNS ಸೆಕ್ಷನ್ 298 — ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಆರಾಧನಾ ಸ್ಥಳವನ್ನು ಅಪವಿತ್ರಗೊಳಿಸುವುದು
BNS ಸೆಕ್ಷನ್ 299 — ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು
BNS ಸೆಕ್ಷನ್ 196(1)(B) — ಧಾರ್ಮಿಕ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು
BNS ಸೆಕ್ಷನ್ 270 — ಸಾರ್ವಜನಿಕ ಉಪಟಳ
BNS ಸೆಕ್ಷನ್ 279 — ಸಾರ್ವಜನಿಕ ನೀರಿನ ಮೂಲ ಅಥವಾ ಜಲಾಶಯದ ನೀರನ್ನು ಕಲುಷಿತಗೊಳಿಸುವುದು
BNS ಸೆಕ್ಷನ್ 223(B) — ಸರ್ಕಾರಿ ನೌಕರನ ಆದೇಶಕ್ಕೆ ಅವಿಧೇಯತೆ ತೋರುವುದು
ಜಲ (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ, 1974ರ ಸೆಕ್ಷನ್ 24
ತದನಂತರ, ಮಾರ್ಚ್ 19ರಂದು ಗಂಭೀರ ಸ್ವರೂಪದ ಇನ್ನೂ ಎರಡು ಸೆಕ್ಷನ್ಗಳನ್ನು ಸೇರಿಸಲಾಯಿತು:
BNS ಸೆಕ್ಷನ್ 308(5) — ಕೊಲೆ ಬೆದರಿಕೆ ಅಥವಾ ಗಂಭೀರ ಗಾಯದ ಬೆದರಿಕೆ ಹಾಕಿ ಸುಲಿಗೆ ಮಾಡುವುದು
ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 67 — ಅಶ್ಲೀಲ ವಸ್ತುವನ್ನು ಪ್ರಕಟಿಸುವುದು ಅಥವಾ ರವಾನಿಸುವುದು
ಮಾರ್ಚ್ 20ರಂದು, ವಾರಣಾಸಿ ನ್ಯಾಯಾಲಯವು ತನಿಖೆ ಬಾಕಿ ಇರುವ ಕಾರಣ ಎಲ್ಲಾ 14 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಮಾರ್ಚ್ 23ರಂದು ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರು ಅವರ ಮೊದಲ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು. ಇದರ ಬೆನ್ನಲ್ಲೇ, ಎಪ್ರಿಲ್ 1ರಂದು ಸೆಷನ್ಸ್ ನ್ಯಾಯಾಲಯವು ಅವರ ಎರಡನೇ ಜಾಮೀನು ಅರ್ಜಿಯನ್ನೂ ತಿರಸ್ಕರಿಸಿತು.
ಒಂದು ತಿಂಗಳ ನಂತರ, ಅಲಹಾಬಾದ್ ಹೈಕೋರ್ಟ್ ಅಂತಿಮವಾಗಿ ಅವರ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿತು. ಮೇ 15ರಂದು 14 ಆರೋಪಿಗಳ ಪೈಕಿ ಎಂಟು ಜನರಿಗೆ ಜಾಮೀನು ಮಂಜೂರಾಯಿತು. ಬಳಿಕ, ಮೇ 19ರಂದು, ಅಂದರೆ ಅವರು ಬಂಧನಕ್ಕೊಳಗಾದ ಸುಮಾರು ಎರಡು ತಿಂಗಳ ನಂತರ, ಉಳಿದ ಆರು ಆರೋಪಿಗಳೂ ಸಹ ಜಾಮೀನಿನ ಮೇಲೆ ಬಿಡುಗಡೆಯಾದರು.






