ಯುಎಇ–ಭಾರತದ ನಡುವೆ ಡಿಜಿಟಲ್ ರಾಯಭಾರ ಕಚೇರಿ ಸ್ಥಾಪನೆಗೆ ಪ್ರಸ್ತಾಪ; ಈ ಕಚೇರಿ ಹೇಗೆ ಕಾರ್ಯನಿರ್ವಹಿಸುತ್ತದೆ?

Photo Credit : X/PMO via ANI
ಯುನೈಟೆಡ್ ಅರಬ್ ಎಮಿರೇಟ್ಸ್ನ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸೋಮವಾರ ಭಾರತಕ್ಕೆ ಭೇಟಿ ನೀಡಿದ್ದರು. ಕೇವಲ ಮೂರುವರೆ ಗಂಟೆಗಳ ಭಾರತದ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಅವರು, ರಕ್ಷಣಾ ವಲಯ ಸೇರಿದಂತೆ ಬೃಹತ್ ವ್ಯಾಪಾರ ಒಪ್ಪಂದಗಳ ಕುರಿತು ಚರ್ಚಿಸಿದ್ದಾರೆ. ಮಾತುಕತೆಯಲ್ಲಿ ಭಾರತ ಮತ್ತು ಯುಎಇ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ವಿಸ್ತೃತ ಕಾರ್ಯಸೂಚಿಯನ್ನು ನಿಗದಿಪಡಿಸಲಾಗಿದೆ. ಉಭಯ ದೇಶಗಳು 2032ರವರೆಗೆ ಪ್ರತಿ ವರ್ಷ ಸುಮಾರು 200 ಬಿಲಿಯನ್ ಅಮೆರಿಕನ್ ಡಾಲರ್ ವ್ಯಾಪಾರ ನಡೆಸುವ ಗುರಿ ಹೊಂದಿವೆ. ಇದೇ ವೇಳೆ, ಯುಎಇ ಮತ್ತು ಭಾರತದ ನಡುವೆ ‘ಡಿಜಿಟಲ್ ರಾಯಭಾರ ಕಚೇರಿಗಳನ್ನು’ (Digital Embassies) ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸಲು ಉಭಯ ನಾಯಕರು ತಮ್ಮ ತಂಡಗಳಿಗೆ ಸೂಚಿಸಿದ್ದಾರೆ.
ಏನಿದು ಡಿಜಿಟಲ್ ರಾಯಭಾರ ಕಚೇರಿ?
ಮಾಹಿತಿ ರಾಯಭಾರ ಕಚೇರಿ ಅಥವಾ ಡೇಟಾ ರಾಯಭಾರ ಕಚೇರಿ ಎಂದೂ ಕರೆಯಲಾಗುವ ಡಿಜಿಟಲ್ ರಾಯಭಾರ ಕಚೇರಿ, ಮೂಲತಃ ಒಂದು ರಾಷ್ಟ್ರದ ಭೌಗೋಳಿಕ ಗಡಿಗಳನ್ನು ಮೀರಿ, ಆ ದೇಶದ ಮಾಲೀಕತ್ವದಲ್ಲಿರುವ ಪ್ರಮುಖ ಡೇಟಾವನ್ನು ಸುರಕ್ಷಿತವಾಗಿ ಸಂಗ್ರಹಿಸುವ ವ್ಯವಸ್ಥೆಯಾಗಿದೆ. ದತ್ತಾಂಶ ರಾಯಭಾರ ಕಚೇರಿಯಲ್ಲಿ ನಿರ್ಣಾಯಕ ಡಿಜಿಟಲ್ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಸೈಬರ್ ದಾಳಿಗಳು, ನೈಸರ್ಗಿಕ ವಿಕೋಪಗಳು ಅಥವಾ ಭೌಗೋಳಿಕ-ರಾಜಕೀಯ ಸಂಘರ್ಷಗಳ ಸಂದರ್ಭದಲ್ಲಿ ಡಿಜಿಟಲ್ ನಿರಂತರತೆ ಮತ್ತು ಸಾರ್ವಭೌಮತ್ವವನ್ನು ಖಚಿತಪಡಿಸುವುದೇ ಇದರ ಪ್ರಮುಖ ಉದ್ದೇಶ.
ಇದು ದೇಶದ ಡಿಜಿಟಲ್ ಮೂಲಸೌಕರ್ಯದ ವಿಸ್ತರಣೆಯಾಗಿ ಕಾರ್ಯನಿರ್ವಹಿಸುತ್ತದೆ. ವಿಶ್ವಾಸಾರ್ಹ ಆತಿಥೇಯ ರಾಷ್ಟ್ರದಲ್ಲಿ ನಿರ್ಣಾಯಕ ಡೇಟಾಬೇಸ್ಗಳ ಬ್ಯಾಕಪ್ಗಳನ್ನು ಹೊಂದಿರುವುದರಿಂದ, ಸ್ವದೇಶದಲ್ಲಿ ಭೌತಿಕ ಪ್ರವೇಶ ಅಸಾಧ್ಯವಾದ ಸಂದರ್ಭದಲ್ಲಿಯೂ ಸರ್ಕಾರಗಳು ಅಗತ್ಯ ಸೇವೆಗಳನ್ನು ಮುಂದುವರಿಸಬಹುದು. ಇದನ್ನು ಸೈಬರ್ ದಾಳಿಗಳಿಂದ ರಕ್ಷಿತವಾಗಿರಿಸುವಂತೆ ವಿನ್ಯಾಸಗೊಳಿಸಲಾಗುತ್ತದೆ. ಭಾರತದ ದತ್ತಾಂಶ ಭದ್ರತಾ ಮಂಡಳಿಯ ಪ್ರಕಾರ, ಡಿಜಿಟಲ್ ರಾಯಭಾರ ಕಚೇರಿಯು ವಿದೇಶಗಳಲ್ಲಿ ಸರ್ಕಾರಿ ಸ್ವಾಮ್ಯದ ಸರ್ವರ್ಗಳನ್ನು ಬಳಸಿಕೊಂಡು ರಾಷ್ಟ್ರದ ಕ್ಲೌಡ್ ಕಂಪ್ಯೂಟಿಂಗ್ ಮೂಲಸೌಕರ್ಯದ ವಿಸ್ತರಣೆಯಾಗಿದೆ.
ಡಿಜಿಟಲ್ ರಾಯಭಾರ ಕಚೇರಿ ಆತಿಥೇಯ ದೇಶದ ಭೌಗೋಳಿಕ ವ್ಯಾಪ್ತಿಯೊಳಗಿದ್ದರೂ, ಆ ಡೇಟಾದ ಮೇಲಿನ ಪ್ರವೇಶ ಮತ್ತು ನಿಯಂತ್ರಣ ಸಂಪೂರ್ಣವಾಗಿ ಮೂಲ ದೇಶಕ್ಕೇ ಸೇರಿರುತ್ತದೆ. ಈ ದತ್ತಾಂಶವು ಆತಿಥೇಯ ದೇಶದ ನ್ಯಾಯವ್ಯಾಪ್ತಿಗೆ ಒಳಪಡುವುದಿಲ್ಲ.
ಭಾರತ ಮತ್ತು ಅಬುಧಾಬಿ ತಮ್ಮ ತಮ್ಮ ಭೂಪ್ರದೇಶಗಳಲ್ಲಿ ಪರಸ್ಪರ ದತ್ತಾಂಶ ಕೇಂದ್ರಗಳನ್ನು ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿವೆ. ಭಾರತಕ್ಕೆ ಸಂಬಂಧಿಸಿದಂತೆ, ಯುಎಇ ಪ್ರದೇಶದಲ್ಲಿ ಡಿಜಿಟಲ್ ಬ್ಯಾಕಪ್ ಮಾಡಲಿರುವ ದತ್ತಾಂಶದಲ್ಲಿ ನಿರ್ಣಾಯಕ ಹಣಕಾಸು ಮಾಹಿತಿ ಮತ್ತು ಸಾರ್ವಜನಿಕ ದಾಖಲೆಗಳು ಸೇರಿರಬಹುದು. ಈ ರೀತಿ ಸಂಗ್ರಹಿಸಲಾದ ದತ್ತಾಂಶಕ್ಕೆ ಆ ದೇಶ ಮತ್ತು ಅದರ ಅಧಿಕೃತ ಪ್ರತಿನಿಧಿಗಳಿಗೆ ಮಾತ್ರ ಪ್ರವೇಶವಿರುತ್ತದೆ.
ಪರಸ್ಪರ ಗುರುತಿಸಲ್ಪಟ್ಟ ಸಾರ್ವಭೌಮತ್ವ ವ್ಯವಸ್ಥೆಗಳ ಅಡಿಯಲ್ಲಿ ಡಿಜಿಟಲ್ ರಾಯಭಾರ ಕಚೇರಿಗಳನ್ನು ಸ್ಥಾಪಿಸುವ ಸಾಧ್ಯತೆಯನ್ನು ಎರಡೂ ದೇಶಗಳು ಅನ್ವೇಷಿಸಲಿವೆ ಎಂದು ವಿದೇಶಾಂಗ ಸಚಿವಾಲಯ (MEA) ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಈ ಪ್ರಸ್ತಾವನೆ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ, ಇದರಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆ ಮತ್ತು ಕಾರ್ಯತಂತ್ರದ ಮೌಲ್ಯ ಹೊಂದಿರುವ ದತ್ತಾಂಶವನ್ನು ಮಾತ್ರ ಒಳಗೊಳ್ಳಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದು ಜಾಗತಿಕವಾಗಿ ಕೆಲ ದೇಶಗಳಲ್ಲಿ ಯಶಸ್ಸು ಕಂಡಿರುವ ಹೊಸ ತಂತ್ರಜ್ಞಾನವಾಗಿದ್ದು, ಭಾರತಕ್ಕೆ ಇದು ಹೊಸ ಅನುಭವ. ಇದನ್ನು ಕಾರ್ಯಗತಗೊಳಿಸಲು ಸ್ಪಷ್ಟ ನಿಯಂತ್ರಕ ಚೌಕಟ್ಟು ಅಗತ್ಯವಿದೆ ಎಂದೂ ಅವರು ಹೇಳಿದ್ದಾರೆ.
2017ರಲ್ಲಿ ಎಸ್ಟೋನಿಯಾ ದೇಶವು ಲಕ್ಸೆಂಬರ್ಗ್ ಜೊತೆ ಒಪ್ಪಂದ ಮಾಡಿಕೊಂಡ ಬಳಿಕ ವಿಶ್ವದ ಮೊದಲ ದತ್ತಾಂಶ ರಾಯಭಾರ ಕಚೇರಿ ಸ್ಥಾಪನೆಯಾಯಿತು. 2021ರಲ್ಲಿ ಮೊನಾಕೊ ತನ್ನ ಇ-ರಾಯಭಾರ ಕಚೇರಿಯನ್ನು ಲಕ್ಸೆಂಬರ್ಗ್ನಲ್ಲಿ ಸ್ಥಾಪಿಸಿತು.
ಸರಳವಾಗಿ ಹೇಳುವುದಾದರೆ, ದತ್ತಾಂಶ ರಾಯಭಾರ ಕಚೇರಿ ಎಂದರೆ ಒಂದು ದೇಶದ ಡೇಟಾವನ್ನು ಮತ್ತೊಂದು ದೇಶದಲ್ಲಿ, ಆದರೆ ಅದರ ಸ್ವಂತ ಅಧಿಕಾರ ವ್ಯಾಪ್ತಿಯಲ್ಲಿಯೇ ಸಂಗ್ರಹಿಸುವ ಸರ್ವರ್ಗಳ ಸಮೂಹ. ಈ ಆರ್ಕೈವ್ಗಳು ಅತ್ಯಂತ ಸುರಕ್ಷಿತವಾಗಿದ್ದು, ತಿರುಚುವ ಸಾಧ್ಯತೆ ಇರುವುದಿಲ್ಲ.
2023–24ರ ಬಜೆಟ್ನಲ್ಲಿ, ಇತರ ರಾಷ್ಟ್ರಗಳಿಗೆ ತಡೆರಹಿತ ಡಿಜಿಟಲ್ ವರ್ಗಾವಣೆ ಮತ್ತು ನಿರಂತರತೆಯನ್ನು ಸುಗಮಗೊಳಿಸುವ ಉದ್ದೇಶದಿಂದ ದೇಶದಲ್ಲಿ ದತ್ತಾಂಶ ರಾಯಭಾರ ಕಚೇರಿಗಳನ್ನು ಸ್ಥಾಪಿಸುವ ಪ್ರಸ್ತಾಪವನ್ನು ಸರ್ಕಾರ ಮಾಡಿದೆ. ಈ ನಿಟ್ಟಿನಲ್ಲಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು, ವಿದೇಶಿ ರಾಷ್ಟ್ರಗಳು ಹಾಗೂ ಅಂತರರಾಷ್ಟ್ರೀಯ ಕಂಪನಿಗಳು ಭಾರತೀಯ ಭೂಪ್ರದೇಶದೊಳಗೆ ದತ್ತಾಂಶ ರಾಯಭಾರ ಕಚೇರಿಗಳನ್ನು ಸ್ಥಾಪಿಸಲು ಅನುಕೂಲವಾಗುವ ನೀತಿಯನ್ನು ರೂಪಿಸುವ ಕಾರ್ಯದಲ್ಲಿ ತೊಡಗಿದೆ ಎಂದು ತಿಳಿದುಬಂದಿದೆ. ಪ್ರಸ್ತಾವಿತ ನೀತಿಯ ಪ್ರಕಾರ, ಈ ರಾಯಭಾರ ಕಚೇರಿಗಳಲ್ಲಿರುವ ದತ್ತಾಂಶಕ್ಕೆ ರಾಜತಾಂತ್ರಿಕ ರಕ್ಷಣೆ ದೊರೆಯಲಿದ್ದು, ಭಾರತೀಯ ಕಾನೂನುಗಳ ರಕ್ಷಣೆ ಸಹ ಇರಲಿದೆ.
ತಂತ್ರಜ್ಞಾನ ಮತ್ತು AI ಕ್ಷೇತ್ರದಲ್ಲಿ ಭಾರತ–ಯುಎಇ ಸಹಯೋಗ
ಡಿಜಿಟಲ್ ರಾಯಭಾರ ಕಚೇರಿಗಳ ಜೊತೆಗೆ, ಕೃತಕ ಬುದ್ಧಿಮತ್ತೆ (AI) ಮತ್ತು ಹೊಸ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸುವ ಮೂಲಕ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯ ಕ್ಷೇತ್ರಗಳಲ್ಲಿ ಉಭಯ ದೇಶಗಳ ಸಹಕಾರವನ್ನು ಬಲಪಡಿಸುವುದಾಗಿ ಸರ್ಕಾರ ತಿಳಿಸಿದೆ. ಭಾರತದಲ್ಲಿ ಸೂಪರ್ಕಂಪ್ಯೂಟಿಂಗ್ ಕ್ಲಸ್ಟರ್ಗಳನ್ನು ರಚಿಸುವುದು ಹಾಗೂ ಡೇಟಾ ಕೇಂದ್ರಗಳ ಸಾಮರ್ಥ್ಯವನ್ನು ವೃದ್ಧಿಸುವ ಕುರಿತೂ ಒಟ್ಟಾಗಿ ಕೆಲಸ ಮಾಡಲು ಉಭಯ ದೇಶಗಳು ಒಪ್ಪಿಕೊಂಡಿವೆ. ಈ ಪಾಲುದಾರಿಕೆ ಡಿಜಿಟಲ್ ಮೂಲಸೌಕರ್ಯ ಕ್ಷೇತ್ರದಲ್ಲಿ ಆಳವಾದ ಕಾರ್ಯತಂತ್ರದ ಜೋಡಣೆಯನ್ನು ಪ್ರತಿಬಿಂಬಿಸುತ್ತದೆ. 2026ರ ಫೆಬ್ರವರಿಯಲ್ಲಿ ಭಾರತದಲ್ಲಿ ನಡೆಯಲಿರುವ AI ಇಂಪ್ಯಾಕ್ಟ್ ಶೃಂಗಸಭೆಗೆ ಯುಎಇ ಅಧ್ಯಕ್ಷರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಸುರಕ್ಷಿತ ಡಿಜಿಟಲ್ ರಾಯಭಾರ ಕಚೇರಿಗಳನ್ನು ಸ್ಥಾಪಿಸಲು ಆಹ್ವಾನ
ಭಾರತವು ತನ್ನ ಭೂಪ್ರದೇಶದೊಳಗೆ ಡಿಜಿಟಲ್ ರಾಯಭಾರ ಕಚೇರಿಗಳನ್ನು ಸ್ಥಾಪಿಸಲು ಇತರ ರಾಷ್ಟ್ರಗಳನ್ನು ಆಹ್ವಾನಿಸುತ್ತಿದ್ದು, ಯುಎಇ ಮೊದಲ ದೇಶವಾಗುವ ಸಾಧ್ಯತೆಯಿದೆ. ಈ ಉದ್ದೇಶಕ್ಕಾಗಿ ಪ್ರಸ್ತಾವಿತ ಸ್ಥಳವೆಂದರೆ ಗುಜರಾತ್ನ ಗಿಫ್ಟ್ ಸಿಟಿ. ಇಲ್ಲಿ ಅತ್ಯಾಧುನಿಕ ಹಾಗೂ ಹೆಚ್ಚು ನಿಯಂತ್ರಿತ ದತ್ತಾಂಶ ಸೌಲಭ್ಯಗಳಿಗಾಗಿ ಸೂಕ್ತವಾದ ಮೂಲಸೌಕರ್ಯವಿದೆ ಎಂದು MEA ತಿಳಿಸಿದೆ. ಈ ರಾಯಭಾರ ಕಚೇರಿಗಳು ಕಾನೂನುಬದ್ಧವಾಗಿ ರಕ್ಷಿತವಾಗಿದ್ದು, ಭೌತಿಕವಾಗಿ ಅತ್ಯಂತ ಸುರಕ್ಷಿತವಾಗಿರಲಿವೆ ಮತ್ತು ವಿದೇಶಿ ಸರ್ಕಾರಗಳ ದತ್ತಾಂಶ ಸಂಗ್ರಹಣೆಯ ಅಗತ್ಯಗಳನ್ನು ಪೂರೈಸಲಿವೆ. ಇವುಗಳಿಗೆ ರಾಜತಾಂತ್ರಿಕ ರಕ್ಷಣೆಯೂ ದೊರೆಯಲಿದೆ.
ಈ ಕ್ರಮವು ಭಾರತವನ್ನು ಜಾಗತಿಕ ಡಿಜಿಟಲ್ ಮೂಲಸೌಕರ್ಯ ಕೇಂದ್ರವಾಗಿ ರೂಪಿಸುವ ಸಾಧ್ಯತೆ ಹೊಂದಿದ್ದು, ದೇಶದ ಕಾರ್ಯತಂತ್ರದ ಮತ್ತು ತಾಂತ್ರಿಕ ಪ್ರಭಾವವನ್ನು ಹೆಚ್ಚಿಸುತ್ತದೆ. ರಾಷ್ಟ್ರೀಯ ಮಹತ್ವ ಮತ್ತು ಕಾರ್ಯತಂತ್ರದ ಮೌಲ್ಯ ಹೊಂದಿರುವ ದತ್ತಾಂಶ ಸಂಗ್ರಹವಾಗುವುದರಿಂದ, ಈ ಸೌಲಭ್ಯಗಳ ಸ್ಥಾಪನೆಗೆ ಕಟ್ಟುನಿಟ್ಟಾದ ನಿಯಂತ್ರಕ ಮೇಲ್ವಿಚಾರಣೆ ಅಗತ್ಯವಿದೆ. ಈ ರಾಯಭಾರ ಕಚೇರಿಗಳಲ್ಲಿರುವ ದತ್ತಾಂಶವು ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಆತಿಥೇಯ ದೇಶದ ಯಾವುದೇ ಹಸ್ತಕ್ಷೇಪಕ್ಕೆ ಒಳಪಡುವುದಿಲ್ಲ ಎಂದು ವಿಕ್ರಮ್ ಮಿಸ್ತ್ರಿ ಸ್ಪಷ್ಟಪಡಿಸಿದ್ದಾರೆ.







