ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು UGCಯ ಹೊಸ ನಿಯಮ: ಪರ–ವಿರೋಧ ಚರ್ಚೆ ಮತ್ತು ಪ್ರತಿಭಟನೆ

Screen geab : X \ @Benarasiyaa
ಎರಡು ವಾರಗಳ ಹಿಂದೆ, ದೇಶದ ಉನ್ನತ ಶಿಕ್ಷಣದ ನಿಯಂತ್ರಕ ಸಂಸ್ಥೆಯಾದ ವಿಶ್ವವಿದ್ಯಾಲಯ ಅನುದಾನ ಆಯೋಗ (UGC), ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಎದುರಿಸಲು ಹೊಸ ನಿಯಮಗಳನ್ನು ಪ್ರಕಟಿಸಿತು. 2019 ಮತ್ತು 2016ರಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೇಮುಲಾ ಮತ್ತು ಪಾಯಲ್ ತಡ್ವಿ ಅವರ ತಾಯಂದಿರು ಸಲ್ಲಿಸಿದ ಅರ್ಜಿಗಳ ಮೇಲೆ ಸುಪ್ರೀಂ ಕೋರ್ಟ್ ಹಸ್ತಕ್ಷೇಪದ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ಈ ನಿಯಮಗಳು 2012ರಲ್ಲಿ UGC ಮೊದಲ ಬಾರಿಗೆ ಹೊರಡಿಸಿದ್ದ ಸಮಾನತೆಯ ನಿಯಮಗಳ ನವೀಕೃತ ಆವೃತ್ತಿಯಾಗಿವೆ. ಇವು ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಮೇಲೆ “ಕಿರುಕುಳ”ಕ್ಕೆ ಕಾರಣವಾಗಬಹುದು ಎಂದು ಒಂದು ವರ್ಗದ ಜನರು ವಾದಿಸುತ್ತಿದ್ದಾರೆ. ಉತ್ತರ ಪ್ರದೇಶದ ಬಿಜೆಪಿ ಪದಾಧಿಕಾರಿಗಳು ಮತ್ತು ಬರೇಲಿ ನಗರದ ಮ್ಯಾಜಿಸ್ಟ್ರೇಟ್ ಅವರು ಈ ನಿಯಮಗಳನ್ನು ವಿರೋಧಿಸಿ ರಾಜೀನಾಮೆ ನೀಡಿದ್ದಾರೆ.
►ಹೊಸ UGC ನಿಯಮಗಳು
ಜನವರಿ 13ರಂದು UGC, ವಿಶ್ವವಿದ್ಯಾಲಯ ಅನುದಾನ ಆಯೋಗ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಅಧಿಸೂಚನೆ ಹೊರಡಿಸಿದೆ. ಧರ್ಮ, ಲಿಂಗ, ಜಾತಿ ಅಥವಾ ಅಂಗವೈಕಲ್ಯ ಸೇರಿದಂತೆ ವಿವಿಧ ಆಧಾರಗಳ ಮೇಲೆ ಕಾಲೇಜುಗಳಲ್ಲಿ ನಡೆಯುವ ತಾರತಮ್ಯವನ್ನು ಕೊನೆಗೊಳಿಸುವುದು ಇದರ ಗುರಿಯಾಗಿದೆ. ಇದು ವಿಶೇಷವಾಗಿ ಅಂಚಿನಲ್ಲಿರುವ ಅಥವಾ ಅನನುಕೂಲಕರ ಹಿನ್ನೆಲೆಯ ವಿದ್ಯಾರ್ಥಿಗಳನ್ನು ರಕ್ಷಿಸುವ ಉದ್ದೇಶ ಹೊಂದಿದೆ. ಈ ಮೂಲಕ ಉನ್ನತ ಶಿಕ್ಷಣವನ್ನು ನ್ಯಾಯಯುತವಾಗಿಯೂ ಎಲ್ಲರನ್ನೂ ಒಳಗೊಂಡಂತೆಯೂ ಮಾಡುವ ಆಶಯ ಈ ನಿಯಮಗಳಲ್ಲಿದೆ.
ಈ ನಿಯಮಗಳು 2012ರಿಂದ ಜಾರಿಯಲ್ಲಿದ್ದ ಅದೇ ಹೆಸರಿನ UGC (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳನ್ನು ಬದಲಾಯಿಸುತ್ತವೆ. ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುವ ಈ ಹೊಸ ನಿಯಮಗಳು, ತಾರತಮ್ಯ ಸಂಬಂಧಿತ ದೂರುಗಳನ್ನು ಸಲ್ಲಿಸಲು ಮತ್ತು ಪರಿಹರಿಸಲು ಸ್ಪಷ್ಟವಾದ ರಚನೆ ಮತ್ತು ಕಾರ್ಯವಿಧಾನವನ್ನು ನಿಗದಿಪಡಿಸುತ್ತವೆ.
►ಈ ನಿಯಮಗಳನ್ನು ಹೇಗೆ ಜಾರಿಗೆ ತರಲಾಗುತ್ತದೆ?
ಈ ನಿಯಮಗಳ ಉದ್ದೇಶವನ್ನು ಕಾರ್ಯಗತಗೊಳಿಸಲು, ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯು ಸಮಾನ ಅವಕಾಶ ಕೇಂದ್ರ, ಸಮಾನತೆಯ ಸಮಿತಿ ಮತ್ತು ಸಮಾನತೆ ತಂಡಗಳನ್ನು ಹೊಂದಿರುವುದು ಕಡ್ಡಾಯವಾಗಿದೆ.
►ಸಮಾನ ಅವಕಾಶ ಕೇಂದ್ರ:
ಸಮಾನ ಅವಕಾಶ ಕೇಂದ್ರ (ಇಒಸಿ) ಅನನುಕೂಲ ಗುಂಪುಗಳಿಗೆ ಸಂಬಂಧಿಸಿದ ನೀತಿಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ. ಅಗತ್ಯವಿದ್ದಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಕಾನೂನು ನೆರವು ಒದಗಿಸಲು ಸಹಾಯ ಮಾಡುತ್ತದೆ. ಸಮಾನ ಅವಕಾಶ ಕೇಂದ್ರದಲ್ಲಿ ಸಂಸ್ಥೆಯ ಐದು ಅಧ್ಯಾಪಕ ಸದಸ್ಯರು ಇರಬೇಕು. ಈ ಐದು ಸದಸ್ಯರಿಗೆ ಯಾವುದೇ ವರ್ಗದ ಮೀಸಲಾತಿ ಅನ್ವಯಿಸುವುದಿಲ್ಲ. ಒಂದು ಕಾಲೇಜಿನಲ್ಲಿ ಕನಿಷ್ಠ ಐದು ಅಧ್ಯಾಪಕ ಸದಸ್ಯರು ಇಲ್ಲದಿದ್ದಲ್ಲಿ, ಆ ಕಾಲೇಜು ಸಂಯೋಜಿತವಾಗಿರುವ ವಿಶ್ವವಿದ್ಯಾಲಯದ ಇಒಸಿ ಅದರ ಕಾರ್ಯಗಳನ್ನು ನಿರ್ವಹಿಸಬೇಕು ಎಂದು ನಿಯಮಗಳು ಹೇಳುತ್ತವೆ.
►ಸಮಾನತೆಯ ಸಮಿತಿ:
ಸಮಾನ ಅವಕಾಶ ಕೇಂದ್ರದ ಅಡಿಯಲ್ಲಿ ಸಂಸ್ಥೆಯ ಮುಖ್ಯಸ್ಥರ ಅಧ್ಯಕ್ಷತೆಯಲ್ಲಿ ಹತ್ತು ಸದಸ್ಯರ ಸಮಾನತೆಯ ಸಮಿತಿಯನ್ನು ರಚಿಸಬೇಕು. ಈ ಸಮಿತಿಯ ಐದು ಸದಸ್ಯರು ಮೀಸಲು ವರ್ಗಗಳಿಂದ ಬಂದಿರಬೇಕು. ಅಂದರೆ ಇತರ ಹಿಂದುಳಿದ ವರ್ಗಗಳು, ಅಂಗವಿಕಲ ವ್ಯಕ್ತಿಗಳು, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಮಹಿಳೆಯರು. ದೂರುಗಳು ಬಂದಲ್ಲಿ, 24 ಗಂಟೆಗಳ ಒಳಗೆ ಸಭೆ ಸೇರಿ 15 ದಿನಗಳೊಳಗೆ ಸಂಸ್ಥೆಯ ಮುಖ್ಯಸ್ಥರಿಗೆ ವರದಿಯನ್ನು ಸಲ್ಲಿಸಬೇಕು. ಪ್ರತಿಯಾಗಿ, ಸಂಸ್ಥೆಯ ಮುಖ್ಯಸ್ಥರು ಏಳು ದಿನಗಳೊಳಗೆ ಅಗತ್ಯ ಕ್ರಮ ಕೈಗೊಳ್ಳಬೇಕು.
►ಸಮಾನತೆ ತಂಡ:
ಕ್ಯಾಂಪಸ್ನಲ್ಲಿ ಎಚ್ಚರ ವಹಿಸಿ ತಾರತಮ್ಯವನ್ನು ತಡೆಗಟ್ಟುವ ಉದ್ದೇಶದಿಂದ ಸಮಾನತೆ ತಂಡಗಳನ್ನು ರಚಿಸಬೇಕು. ಇವು ಚಲನಶೀಲವಾಗಿರಬೇಕು ಹಾಗೂ ದುರ್ಬಲ ಪ್ರದೇಶಗಳಿಗೆ ನಿಯಮಿತವಾಗಿ ಭೇಟಿ ನೀಡಬೇಕು. ತಾರತಮ್ಯದ ಘಟನೆಗಳನ್ನು ವರದಿ ಮಾಡಲು ಸಂಸ್ಥೆಗಳು 24 ಗಂಟೆಗಳ ‘ಈಕ್ವಿಟಿ ಸಹಾಯವಾಣಿ’ಯನ್ನೂ ಹೊಂದಿರಬೇಕು. ಈ ತಂಡಗಳು ಸಮಾನತೆಯ ರಾಯಭಾರಿಗಳನ್ನು ನೇಮಿಸಬೇಕು.
►ಈ ನಿಯಮಗಳು 2012ರ ನಿಯಮಗಳಿಗಿಂತ ಹೇಗೆ ಭಿನ್ನ?
2012ರ ನಿಯಮಗಳು ಹೆಚ್ಚಿನವಾಗಿ ಸಲಹಾತ್ಮಕ ಸ್ವರೂಪದ್ದಾಗಿದ್ದವು. ತಾರತಮ್ಯ ಅಥವಾ ಕಿರುಕುಳದ ಸ್ವರೂಪಕ್ಕೆ ಅನುಗುಣವಾಗಿ ಶಿಕ್ಷೆ ವಿಧಿಸಬೇಕು ಎಂದು ಅದರಲ್ಲಿ ಹೇಳಲಾಗಿತ್ತು. ಆದರೆ ನಿಯಮಗಳನ್ನು ಪಾಲಿಸದ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರ UGCಗೆ ಇರಲಿಲ್ಲ.
ಹೊಸ ನಿಯಮಗಳು, ರಾಷ್ಟ್ರೀಯ ಮಟ್ಟದ ಮೇಲ್ವಿಚಾರಣಾ ಸಮಿತಿಯ ಮೂಲಕ ಅವುಗಳ ಅನುಷ್ಠಾನವನ್ನು ನಿಗಾ ವಹಿಸಲು UGCಗೆ ಸ್ಪಷ್ಟವಾದ ವ್ಯವಸ್ಥೆಯನ್ನು ಒದಗಿಸುತ್ತವೆ. ನಿಯಮಗಳನ್ನು ಪಾಲಿಸದ ಸಂಸ್ಥೆಗಳು ಕ್ರಮವನ್ನು ಎದುರಿಸಬೇಕಾಗುತ್ತದೆ. UGC ಆಯೋಗದ ಯೋಜನೆಗಳಲ್ಲಿ ಭಾಗವಹಿಸುವುದು, ಪದವಿ ಹಾಗೂ ಆನ್ಲೈನ್ ಕಾರ್ಯಕ್ರಮಗಳನ್ನು ನಡೆಸುವುದು ನಿಷೇಧವಾಗಬಹುದು. ಜೊತೆಗೆ, ಕೇಂದ್ರ ಅನುದಾನ ಪಡೆಯಲು ಅರ್ಹ ಸಂಸ್ಥೆಗಳ ಪಟ್ಟಿಯಿಂದ ಅವುಗಳನ್ನು ತೆಗೆದುಹಾಕುವ ಸಾಧ್ಯತೆಯೂ ಇದೆ.
ಹಿಂದಿನ ನಿಯಮಗಳು ಸಂಸ್ಥೆಗಳಲ್ಲಿ ಸಮಾನ ಅವಕಾಶ ಸೆಲ್ ರಚಿಸಲು ಅವಕಾಶ ನೀಡಿದ್ದರೂ, ತಾರತಮ್ಯದ ಘಟನೆಯ ಸಂದರ್ಭದಲ್ಲಿ ಅವುಗಳ ಸಂಯೋಜನೆ ಮತ್ತು ಅನುಸರಿಸಬೇಕಾದ ಕಾರ್ಯವಿಧಾನವನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸಿರಲಿಲ್ಲ.
ಅದರಲ್ಲಿ ತಾರತಮ್ಯ ವಿರೋಧಿ ಅಧಿಕಾರಿಯ ನೇಮಕ ಕಡ್ಡಾಯವಾಗಿತ್ತು. ತಾರತಮ್ಯ ವಿರೋಧಿ ಅಧಿಕಾರಿಯ ಯಾವುದೇ ನಿರ್ಧಾರದ ವಿರುದ್ಧ ಸಂಸ್ಥೆಯ ಮುಖ್ಯಸ್ಥರ ಮುಂದೆ ಮೇಲ್ಮನವಿ ಸಲ್ಲಿಸುವ ಅವಕಾಶವೂ ಇತ್ತು. ಆದರೆ ಹೊಸ ನಿಯಮಗಳು ದೂರುಗಳನ್ನು ಸಲ್ಲಿಸುವುದು ಮತ್ತು ಅವುಗಳ ವಿಲೇವಾರಿ ಕಾರ್ಯವಿಧಾನಗಳ ಕುರಿತು ವಿವರವಾದ ನಿಬಂಧನೆಗಳನ್ನು ಹೊಂದಿವೆ.
2012ರ ಆವೃತ್ತಿಯಲ್ಲಿ ನಿಯಮಗಳಲ್ಲಿ ಎಲ್ಲಿಯೂ ಒಬಿಸಿ ಬಗ್ಗೆ ಉಲ್ಲೇಖ ಇರಲಿಲ್ಲ. ಅದು “ಯಾವುದೇ ಉನ್ನತ ಶಿಕ್ಷಣ ಸಂಸ್ಥೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ವಿರುದ್ಧ ತಾರತಮ್ಯ ಮಾಡಬಾರದು” ಎಂದು ಮಾತ್ರ ಹೇಳಿದೆ.
►ಹೊಸ ನಿಯಮಗಳು ಕಳೆದ ವರ್ಷ ಬಿಡುಗಡೆಯಾದ ಆರಂಭಿಕ ಕರಡು ನಿಯಮಗಳಿಗಿಂತ ಹೇಗೆ ಭಿನ್ನವಾಗಿವೆ?
ಕರಡು ನಿಯಮಗಳನ್ನು ಸಾರ್ವಜನಿಕಗೊಳಿಸಿದ ನಂತರ, ಅದರ ಕೆಲವು ವಿಭಾಗಗಳ ಬಗ್ಗೆ ಕಳವಳ ವ್ಯಕ್ತಪಡಿಸಲಾಯಿತು. ಹೀಗಾಗಿ ಅಂತಿಮ ಆವೃತ್ತಿಯಲ್ಲಿ ಕೆಲವು ಬದಲಾವಣೆಗಳನ್ನು ಸೇರಿಸಲಾಗಿದೆ.
ಉದಾಹರಣೆಗೆ, ಅಖಿಲ ಭಾರತ ಒಬಿಸಿ ವಿದ್ಯಾರ್ಥಿ ಸಂಘವು ಕರಡು ನಿಯಮಗಳಲ್ಲಿ ಸಮಾನತಾ ಸಮಿತಿಗಳಲ್ಲೂ ಹಾಗೂ ‘ಜಾತಿ ತಾರತಮ್ಯ’ದ ವ್ಯಾಖ್ಯಾನದಲ್ಲೂ ಒಬಿಸಿಗಳನ್ನು ಹೊರಗಿಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು.
ಈ ತಿಂಗಳ ಆರಂಭದಲ್ಲಿ ಅಧಿಸೂಚನೆ ಹೊರಡಿಸಲಾದ ಅಂತಿಮ ಆವೃತ್ತಿಯಲ್ಲಿ ಜಾತಿ ತಾರತಮ್ಯದ ವ್ಯಾಖ್ಯಾನಕ್ಕೆ ಒಬಿಸಿ ವರ್ಗವನ್ನೂ ಸೇರಿಸಲಾಗಿದೆ. “ಜಾತಿ ಆಧಾರಿತ ತಾರತಮ್ಯ ಎಂದರೆ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ಸದಸ್ಯರ ವಿರುದ್ಧ ಜಾತಿ ಅಥವಾ ಬುಡಕಟ್ಟು ಆಧಾರದ ಮೇಲೆ ಮಾತ್ರ ನಡೆಯುವ ತಾರತಮ್ಯ” ಎಂದು ಅಂತಿಮ ನಿಯಮಗಳು ಹೇಳುತ್ತವೆ. ಸಮಾನತಾ ಸಮಿತಿಯಲ್ಲಿ ಒಬಿಸಿಗಳ ಪ್ರಾತಿನಿಧ್ಯವನ್ನೂ ಅಂತಿಮ ಆವೃತ್ತಿ ಒದಗಿಸಿದೆ. ಕರಡು ನಿಯಮಗಳಲ್ಲಿ ಮಾತ್ರ ಎಸ್ಟಿ ಮತ್ತು ಎಸ್ಸಿ ವರ್ಗದಿಂದ ಕನಿಷ್ಠ ಒಬ್ಬ ಸದಸ್ಯರನ್ನು ಹೊಂದಿರಬೇಕು ಹಾಗೂ ಕನಿಷ್ಠ ಒಬ್ಬ ಮಹಿಳೆಯನ್ನು ಸೇರಿಸಬೇಕೆಂದು ಸೂಚಿಸಲಾಗಿತ್ತು.
ಅಂತಿಮ ನಿಯಮಗಳು ಕರಡಿನಲ್ಲಿ ಸೇರಿಸಲಾಗಿದ್ದ ‘ಸುಳ್ಳು ದೂರುಗಳು’ ಎಂಬ ವಿಭಾಗವನ್ನೂ ಕೈಬಿಟ್ಟಿವೆ. “ತಾರತಮ್ಯದ ಸುಳ್ಳು ದೂರುಗಳ” ಸಂದರ್ಭಗಳಲ್ಲಿ ದಂಡ ಅಥವಾ ಶಿಸ್ತಿನ ಕ್ರಮಗಳನ್ನು ವಿಧಿಸಲು ಕರಡು ನಿಯಮಗಳು ಅವಕಾಶ ನೀಡಿದ್ದವು.
ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ನೇತೃತ್ವದ ಶಿಕ್ಷಣದ ಸಂಸದೀಯ ಸ್ಥಾಯಿ ಸಮಿತಿಯು ಕಳೆದ ತಿಂಗಳು ಸಂಸತ್ತಿಗೆ ಸಲ್ಲಿಸಿದ ವರದಿಯಲ್ಲಿ, ಕರಡು ನಿಯಮಗಳು “ಜಾತಿ ಆಧಾರಿತ ಕಿರುಕುಳದ ವ್ಯಾಖ್ಯಾನದಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ವಿದ್ಯಾರ್ಥಿಗಳು ಮತ್ತು ಇತರ ಪಾಲುದಾರರ ಮೇಲಿನ ಕಿರುಕುಳವನ್ನೂ ಸ್ಪಷ್ಟವಾಗಿ ಸೇರಿಸಬೇಕು” ಎಂದು ಶಿಫಾರಸು ಮಾಡಿತ್ತು.
►ಈ ನಿಯಮಗಳನ್ನು ತರಲು ಕಾರಣ
2019 ಮತ್ತು 2016ರಲ್ಲಿ ಜಾತಿ ಆಧಾರಿತ ತಾರತಮ್ಯದಿಂದ ಆತ್ಮಹತ್ಯೆ ಮಾಡಿಕೊಂಡ ಪಾಯಲ್ ತಡ್ವಿ ಮತ್ತು ರೋಹಿತ್ ವೇಮುಲಾ ಅವರ ತಾಯಂದಿರು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ 2019ರ ಅರ್ಜಿಯ ನಂತರ ಈ ನಿಯಮಗಳನ್ನು ತರಲಾಗಿದೆ. ಅರ್ಜಿದಾರರಾದ ಅಬೇದಾ ಸಲೀಂ ತಡ್ವಿ ಮತ್ತು ರಾಧಿಕಾ ವೇಮುಲಾ ಅವರು 2012ರ ಸಮಾನತಾ ನಿಯಮಗಳ ಅನುಷ್ಠಾನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದೃಢವಾದ ತಾರತಮ್ಯ ವಿರೋಧಿ ಕಾರ್ಯವಿಧಾನಗಳನ್ನು ಜಾರಿಗೊಳಿಸುವಂತೆ ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಸುಪ್ರೀಂ ಕೋರ್ಟ್ ಪೀಠವು ಜನವರಿ 3, 2025ರಂದು ನಿಯಮಗಳು ಕೇವಲ ಸಾಂಕೇತಿಕವಾಗಿರಬಾರದು ಎಂದು ಸ್ಪಷ್ಟಪಡಿಸಿತ್ತು.
ಹೊಸ ಸಮಾನತಾ ನಿಯಮಗಳ ಕರಡನ್ನು ಫೆಬ್ರವರಿ 2025ರಲ್ಲಿ ಪ್ರತಿಕ್ರಿಯೆಗಾಗಿ ಸಾರ್ವಜನಿಕಗೊಳಿಸಲಾಯಿತು. ಕಳೆದ ವರ್ಷ ಏಪ್ರಿಲ್ನಲ್ಲಿ, UGC ನಿಯಮಗಳನ್ನು ಅಂತಿಮಗೊಳಿಸಿ ಅಧಿಸೂಚನೆ ಮಾಡುವ ಮೂಲಕ ಮುಂದುವರಿಯಬಹುದು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿತ್ತು.
►ವಿವಾದವೇನು?
ವಿದ್ಯಾರ್ಥಿಗಳ ಒಂದು ವರ್ಗ ಹಾಗೂ ಲಕ್ನೋದಲ್ಲಿರುವ ಬಿಜೆಪಿ ಪದಾಧಿಕಾರಿಗಳು ಈ ನಿಯಮಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ನಿಯಮಗಳು ಸಾಮಾನ್ಯ ವರ್ಗದ ವಿದ್ಯಾರ್ಥಿಗಳ “ಕಿರುಕುಳ”ಕ್ಕೆ ಕಾರಣವಾಗಬಹುದು ಹಾಗೂ ಜಾತಿಯ ಆಧಾರದ ಮೇಲೆ ವಿಭಜನೆಗಳನ್ನು ಉಂಟುಮಾಡಬಹುದು ಎಂದು ಅವರು ಆರೋಪಿಸಿದ್ದಾರೆ.
UGC ಪ್ರಧಾನ ಕಚೇರಿಯ ಹೊರಗೆ “ಸವರ್ಣ ಸೇನೆ” ನೇತೃತ್ವದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಮೇಲೆ ಈ ನಿಯಮಗಳು ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದರೆ, ಪ್ರತಿಭಟನೆಗಳನ್ನು ಹಿಂತೆಗೆದುಕೊಳ್ಳುವುದಾಗಿ “ಸವರ್ಣ ಸೇನೆ”ಯ ಸಹ-ಸಂಸ್ಥಾಪಕ ಶಿವಂ ಸಿಂಗ್ ಹೇಳಿದ್ದಾರೆ.
ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಅಥವಾ ಮೀಸಲು ವರ್ಗದ ಅಭ್ಯರ್ಥಿಗಳನ್ನು ಹೊರತುಪಡಿಸಿ ಇತರರು, ಹೊಸ ನಿಯಮಗಳಲ್ಲಿ ತಮ್ಮಿಗೆ ಸ್ಪಷ್ಟ ನಿಬಂಧನೆ ಇಲ್ಲದ ಕಾರಣ ದೂರುಗಳನ್ನು ಸಲ್ಲಿಸಲು ಸಾಧ್ಯವಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಮೀಸಲಾತಿ ವರ್ಗಗಳಿಂದ ದೂರುಗಳು ಹೆಚ್ಚಾಗಬಹುದು ಎಂಬ ನಂಬಿಕೆ ಇರುವುದರಿಂದ, ಈ ನಿಯಮಗಳು ಸಮಾನತೆಯನ್ನು ಉತ್ತೇಜಿಸುವ ಬದಲು ಅಸಮಾನತೆಯನ್ನು ಹೆಚ್ಚಿಸಬಹುದು ಎಂದು ಅವರು ಹೇಳಿದ್ದಾರೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ದೂರು ಸಲ್ಲಿಸಲು ನಿಯಮಗಳು ಸ್ಪಷ್ಟ ಕಾರ್ಯವಿಧಾನವನ್ನು ಒದಗಿಸುವುದಿಲ್ಲ ಎಂದು ಕೂಡ ಆರೋಪಿಸಿದ್ದಾರೆ. ಜಾತಿ ತಾರತಮ್ಯದ ದೂರುಗಳು 2016–17ರಲ್ಲಿ ಸುಮಾರು 173 ಪ್ರಕರಣಗಳಿಂದ 2023–24 ಶೈಕ್ಷಣಿಕ ವರ್ಷದಲ್ಲಿ 350ಕ್ಕೂ ಹೆಚ್ಚು ಪ್ರಕರಣಗಳಿಗೆ ಏರಿಕೆಯಾಗಿರುವುದನ್ನು ತೋರಿಸುವ ಡೇಟಾವನ್ನು ಉಲ್ಲೇಖಿಸಿ, ಈ ನಿಯಮಗಳು ಅಸಮಾನತೆಯನ್ನು ಹೆಚ್ಚಿಸಬಹುದು ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟಿದ್ದಾರೆ.
ಉತ್ತರ ಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪೋಸ್ಟ್–ಡಾಕ್ಟರೇಟ್ ಸಂಶೋಧಕ ಮೃತ್ಯುಂಜಯ್ ತಿವಾರಿ ಅವರು, ವಿಶ್ವವಿದ್ಯಾಲಯ ಅನುದಾನ ಆಯೋಗದ ನಿಯಮಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ.
ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ, ಈ ನಿಯಮಗಳನ್ನು ಹಿಂತೆಗೆದುಕೊಳ್ಳಬೇಕು ಅಥವಾ ಅಗತ್ಯವಿದ್ದಲ್ಲಿ ತಿದ್ದುಪಡಿ ಮಾಡಬೇಕು ಎಂದು ಹೇಳಿದ್ದಾರೆ. “ಕಾನೂನು ಎಲ್ಲರನ್ನೂ ಸಮಾನವಾಗಿ ಏಕೆ ರಕ್ಷಿಸುವುದಿಲ್ಲ? ಹಾಗಾದರೆ ಕಾನೂನಿನ ಅನುಷ್ಠಾನದಲ್ಲಿ ಈ ತಾರತಮ್ಯ ಏಕೆ? ಸುಳ್ಳು ಆರೋಪಗಳ ಸಂದರ್ಭದಲ್ಲಿ ಏನಾಗುತ್ತದೆ? ಅಪರಾಧವನ್ನು ಹೇಗೆ ನಿರ್ಧರಿಸಲಾಗುತ್ತದೆ? ಪದಗಳು, ಕಾರ್ಯಗಳು ಅಥವಾ ಗ್ರಹಿಕೆಗಳ ಮೂಲಕ ತಾರತಮ್ಯವನ್ನು ಹೇಗೆ ವ್ಯಾಖ್ಯಾನಿಸಬೇಕು?” ಎಂದು ಅವರು ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶದ ಭಾರತೀಯ ಜನತಾ ಪಕ್ಷದ ಎಂಎಲ್ಸಿ ದೇವೇಂದ್ರ ಪ್ರತಾಪ್ ಸಿಂಗ್ ಅವರು UGCಗೆ ಪತ್ರ ಬರೆದಿದ್ದು, ದಲಿತರು ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ವಿರುದ್ಧ ನಡೆಯುವ ತಾರತಮ್ಯವನ್ನು ತಡೆಯುವ ಬಗ್ಗೆ ಕಾಳಜಿ ವಹಿಸಬೇಕು. ಆದರೆ ಅದಕ್ಕಾಗಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳನ್ನು ಅಸುರಕ್ಷಿತರಾಗಿಸುವಂತಾಗಬಾರದು ಎಂದು ಅವರು ಹೇಳಿದ್ದಾರೆ.
ಉತ್ತರಾಖಂಡದ ನೈನಿತಾಲ್ ನಲ್ಲಿರುವ ಕುಮೌನ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘವು UGCಗೆ ಪತ್ರ ಬರೆದು, ಈ ನಿಯಮಗಳು ನೈಸರ್ಗಿಕ ನ್ಯಾಯದ ತತ್ವಕ್ಕೆ ವಿರುದ್ಧವಾಗಿವೆ ಎಂದು ಹೇಳಿದೆ. ವಿಶ್ವವಿದ್ಯಾಲಯದ ಉಪಕುಲಪತಿಗಳ ಮೂಲಕ ಸಲ್ಲಿಸಿದ ತಮ್ಮ ಪತ್ರದಲ್ಲಿ, ವಿದ್ಯಾರ್ಥಿ ಸಂಘವು ಈ ನಿಯಮಗಳು ವಿಶ್ವವಿದ್ಯಾಲಯ ಕ್ಯಾಂಪಸ್ಗಳಲ್ಲಿ “ಸಮತೋಲನ”ವನ್ನು ಕಳೆದುಕೊಳ್ಳುವಂತೆ ಮಾಡುತ್ತವೆ ಎಂದು ತಿಳಿಸಿದೆ. ಇವು “ಭಯ ಮತ್ತು ಅಪನಂಬಿಕೆಯ” ವಾತಾವರಣವನ್ನು ಸೃಷ್ಟಿಸಬಹುದು; ಇದರಿಂದ ನಿಯಮಗಳ “ದುರುಪಯೋಗ”ಕ್ಕೆ ದಾರಿ ಮಾಡಿಕೊಡಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
►ಬರೇಲಿ ನಗರ ಮ್ಯಾಜಿಸ್ಟ್ರೇಟ್ ರಾಜೀನಾಮೆ
UGC ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ ನಿಯಮಗಳು ಹಾಗೂ ಇತರ ಸರ್ಕಾರಿ ಕ್ರಮಗಳು ಜಾತಿ ಆಧಾರಿತ ಅಶಾಂತಿಯನ್ನು ಹೆಚ್ಚಿಸಬಹುದು ಎಂದು ಹೇಳಿ, ಬರೇಲಿ ನಗರ ಮ್ಯಾಜಿಸ್ಟ್ರೇಟ್ ಅಲಂಕಾರ್ ಅಗ್ನಿಹೋತ್ರಿ ಅವರು ಸೋಮವಾರ ರಾಜೀನಾಮೆ ನೀಡಿದ್ದಾರೆ. UGCಯ ಹೊಸ ನಿಯಮಗಳನ್ನು “ಕರಾಳ ಕಾನೂನು” ಎಂದು ಬಣ್ಣಿಸಿದ ಅಗ್ನಿಹೋತ್ರಿ, ಅವು ಕಾಲೇಜುಗಳ ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡುತ್ತಿವೆ ಎಂದು ಆರೋಪಿಸಿ, ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದರು.
ರಾಜೀನಾಮೆ ನಂತರ ಉತ್ತರ ಪ್ರದೇಶ ಸರ್ಕಾರ ಅಲಂಕಾರ್ ಅಗ್ನಿಹೋತ್ರಿ ಅವರನ್ನು ಅಮಾನತುಗೊಳಿಸಿ, ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದೆ. ಜನವರಿ 26ರಂದು ರಾಜ್ಯ ಸರ್ಕಾರ ಹೊರಡಿಸಿದ ಅಧಿಕೃತ ಆದೇಶದಲ್ಲಿ, ಬರೇಲಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಲ್ಲಿಸಿದ ವರದಿಯ ಆಧಾರದಲ್ಲಿ ಅಗ್ನಿಹೋತ್ರಿ ಅವರು ಪ್ರಾಥಮಿಕವಾಗಿ ತಪ್ಪಿತಸ್ಥರೆಂದು ಕಂಡುಬಂದಿದ್ದಾರೆ ಎಂದು ಹೇಳಲಾಗಿದೆ. ಆದ್ದರಿಂದ ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸಿ, ತನಿಖೆ ನಡೆಸಲು ಬರೇಲಿ ವಿಭಾಗದ ಆಯುಕ್ತರನ್ನು ವಿಚಾರಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
►ಮೋದಿಗೆ ಮತ ನೀಡಲ್ಲ’
Residents of Rajput dominated Salawa village Uttar Pradesh's Meerut pledge to not vote for Modi government till the UGC regulation 2026 is withdrawn. pic.twitter.com/PTv1BszIhX
— Piyush Rai (@Benarasiyaa) January 27, 2026
ಮೀರತ್ ಜಿಲ್ಲೆಯ ರಜಪೂತ ಪ್ರಾಬಲ್ಯದ ಪ್ರದೇಶವಾದ ಸಲಾವ ಗ್ರಾಮದ ನಿವಾಸಿಗಳು, UGC ಸಮಾನತೆಯ ನಿಯಮಗಳು–2026 ಅನ್ನು ಹಿಂತೆಗೆದುಕೊಳ್ಳುವವರೆಗೆ ಮೋದಿ ನೇತೃತ್ವದ ಸರ್ಕಾರಕ್ಕೆ ಮತ ಹಾಕುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ, ಗ್ರಾಮಸ್ಥರು ಕೈಗಳನ್ನು ಮುಂದೆ ಚಾಚಿ, UGC ನಿಯಮಗಳ ಕುರಿತು ತಮ್ಮ ಕಳವಳಗಳನ್ನು ಪರಿಹರಿಸದ ಹೊರತು ಪ್ರಸ್ತುತ ಸರ್ಕಾರವನ್ನು ಬೆಂಬಲಿಸುವುದಿಲ್ಲ ಎಂದು ಸಾಮೂಹಿಕವಾಗಿ ಪ್ರತಿಜ್ಞೆ ಮಾಡುತ್ತಿರುವುದು ಕಾಣುತ್ತದೆ. ಆದರೆ ಈ ಪ್ರತಿಜ್ಞೆಯ ಕುರಿತು ಸ್ಥಳೀಯ ಆಡಳಿತ ಅಥವಾ ರಾಜಕೀಯ ಪ್ರತಿನಿಧಿಗಳಿಂದ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
►ಸರ್ಕಾರ ಏನು ಹೇಳಿದೆ?
ಹೊಸಾಗಿ ಅಧಿಸೂಚಿಸಲಾದ UGC ನಿಯಮಗಳ ಕುರಿತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ವ್ಯಾಪಕ ಪ್ರತಿಭಟನೆ ಹಾಗೂ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಈ ನಿಯಮಗಳನ್ನು ಸಂವಿಧಾನಿಕ ಚೌಕಟ್ಟಿನೊಳಗೆ ಹಾಗೂ ಸುಪ್ರೀಂ ಕೋರ್ಟ್ನ ಮೇಲ್ವಿಚಾರಣೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಭರವಸೆ ನೀಡಿದ್ದಾರೆ.
“ಈ ಸಂಪೂರ್ಣ ಪ್ರಕ್ರಿಯೆ ಸಂವಿಧಾನದ ಚೌಕಟ್ಟಿನೊಳಗೇ ಇದೆ ಮತ್ತು ಸುಪ್ರೀಂ ಕೋರ್ಟ್ನ ಮೇಲ್ವಿಚಾರಣೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಯಾರಿಗೂ ಯಾವುದೇ ಅನ್ಯಾಯವಾಗುವುದಿಲ್ಲ. ಯಾರೂ ಈ ಕಾನೂನನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ,” ಎಂದು ಪ್ರಧಾನ್ ಹೇಳಿದ್ದಾರೆ.







