ಆಕ್ರಮಿತ ವೆಸ್ಟ್ ಬ್ಯಾಂಕ್ನ ಇಸ್ರೇಲಿ ವಸಾಹತುಗಳ ಸರಕುಗಳ ಮೇಲೆ ಬ್ರಿಟನ್ ನಿಷೇಧ; ಏನೇನು ನಿಷೇಧಕ್ಕೊಳಗಾಗಿವೆ ?

ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಎಡ್ ಮಿಲಿಬ್ಯಾಂಡ್ - Photo Credit : AFP
ಆಕ್ರಮಿತ ವೆಸ್ಟ್ ಬ್ಯಾಂಕ್ನಲ್ಲಿರುವ ಅಕ್ರಮ ಇಸ್ರೇಲಿ ವಸಾಹತುಗಳಲ್ಲಿ ತಯಾರಾಗುವ ಎಲ್ಲಾ ಸರಕುಗಳ ಆಮದನ್ನು ನಿಷೇಧಿಸುವುದಾಗಿ ಯುಕೆ ಘೋಷಿಸಿದೆ. ಕಳೆದ ವರ್ಷ ಫೆಲೆಸ್ತೀನ್ ರಾಷ್ಟ್ರಕ್ಕೆ ಐತಿಹಾಸಿಕ ಮಾನ್ಯತೆ ನೀಡಿದ ನಂತರ ಲಂಡನ್ ಕೈಗೊಂಡ ಅತ್ಯಂತ ಪ್ರಮುಖ ರಾಜತಾಂತ್ರಿಕ ನಿರ್ಧಾರ ಇದಾಗಿದೆ.
ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಎಡ್ ಮಿಲಿಬ್ಯಾಂಡ್, ಇಸ್ರೇಲ್ ಫೆಲೆಸ್ತೀನ್ನಲ್ಲಿ "ಜನಾಂಗೀಯ ನಿರ್ಮೂಲನೆ" ನಡೆಸುತ್ತಿದೆ ಎಂದು ಆರೋಪಿಸಿದರು. ಆಕ್ರಮಿತ ವೆಸ್ಟ್ ಬ್ಯಾಂಕ್ನಲ್ಲಿ ವೇಗವಾಗಿ ವಿಸ್ತರಿಸುತ್ತಿರುವ ಇಸ್ರೇಲಿ ವಸಾಹತುಗಳು ಕಾನೂನುಬಾಹಿರ ಎಂಬುದು ಬ್ರಿಟನ್ನ ಅಧಿಕೃತ ನೀತಿಯಾಗಿದೆ. ನಮ್ಮ ಅಂಗಡಿಗಳಲ್ಲಿ ವಸಾಹತುಗಳ ಉತ್ಪನ್ನಗಳನ್ನು ಸ್ವೀಕರಿಸುವ ಮೂಲಕ ನಾವು ಆಕ್ರಮಣವನ್ನು ಬೆಂಬಲಿಸುವುದನ್ನು ಬ್ರಿಟನ್ ಜನತೆ ಬಯಸುವುದಿಲ್ಲ ಎಂದು ಹೇಳಿದ ಅವರು ಇಸ್ರೇಲ್ಗೆ ಶಸ್ತ್ರಾಸ್ತ್ರ ಮಾರಾಟದ ಮೇಲೆಯೂ ಕಠಿಣ ನಿರ್ಬಂಧಗಳನ್ನು ಘೋಷಿಸಿದ್ದಾರೆ.
ಈ ಭಾಷಣದ ಬೆನ್ನಲ್ಲೇ ಇಸ್ರೇಲ್ ನಾಲ್ಕು ಪ್ರತಿಕ್ರಮಗಳನ್ನು ಘೋಷಿಸಿದ್ದು, ಬ್ರಿಟನ್ನ 12 ಸಂಸದರ ಪ್ರವೇಶವನ್ನು ನಿಷೇಧಿಸಿದೆ ಹಾಗೂ ಜೆರುಸಲೇಂನಲ್ಲಿರುವ ಬ್ರಿಟಿಷ್ ಕಾನ್ಸುಲೇಟ್ ಅನ್ನು ಮುಚ್ಚಿದೆ.
ಆಕ್ರಮಿತ ವೆಸ್ಟ್ ಬ್ಯಾಂಕ್ನಲ್ಲಿ ಫೆಲೆಸ್ತೀನ್ ಸಮುದಾಯಗಳ ಮೇಲೆ ಇಸ್ರೇಲಿ ವಸಾಹತುಗಾರರ ದಾಳಿಗಳು ತೀವ್ರಗೊಳ್ಳುತ್ತಿರುವ ಹಾಗೂ ವಿವಾದಾತ್ಮಕ ವಸಾಹತು ವಿಸ್ತರಣೆಗಳು ಹೆಚ್ಚುತ್ತಿರುವ ಬೆನ್ನಲ್ಲೇ ಬ್ರಿಟನ್ ಈ ವ್ಯಾಪಾರ ನಿಷೇಧ ನಿರ್ಧಾರ ಕೈಗೊಂಡಿದೆ. ಈ ಬೆಳವಣಿಗೆಯು ಯುರೋಪ್ ಮಟ್ಟದಲ್ಲಿ ವ್ಯಾಪಾರ ನಿರ್ಬಂಧ ಹೇರುವ ಕುರಿತು ಬ್ರಿಟನ್ ನೇತೃತ್ವದ ಚರ್ಚೆಗೆ ಹಾದಿ ಮಾಡಿಕೊಟ್ಟಿದೆ.
ಮಿಲಿಬ್ಯಾಂಡ್ ಅವರ ಭಾಷಣದ ನಂತರ, ದ್ವಿ-ರಾಷ್ಟ್ರ ಪರಿಹಾರವನ್ನು ಬೆಂಬಲಿಸಿ 12 ದೇಶಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ. ಅಲ್ಲದೆ ಅಕ್ರಮ ಇಸ್ರೇಲಿ ವಸಾಹತುಗಳೊಂದಿಗಿನ ವ್ಯಾಪಾರದ ಮೇಲೆ ತಮ್ಮದೇ ಆದ ನಿರ್ಬಂಧಗಳನ್ನು ಹೇರುವ ಉದ್ದೇಶವನ್ನು ಪ್ರಕಟಿಸಿವೆ.
ಫ್ರಾನ್ಸ್, ಬ್ರಿಟನ್, ಕೆನಡಾ, ಡೆನ್ಮಾರ್ಕ್, ಸ್ಪೇನ್, ಫಿನ್ಲ್ಯಾಂಡ್, ಐರ್ಲೆಂಡ್, ಐಸ್ಲ್ಯಾಂಡ್, ನಾರ್ವೆ, ಪೋಲೆಂಡ್, ಪೋರ್ಚುಗಲ್ ಮತ್ತು ಸ್ವೀಡನ್ ದೇಶಗಳು ವಸಾಹತುಗಳ ವಿಸ್ತರಣೆಯನ್ನು ತಕ್ಷಣವೇ ನಿಲ್ಲಿಸುವಂತೆ ಇಸ್ರೇಲ್ ಸರ್ಕಾರಕ್ಕೆ ಆಗ್ರಹಿಸಿವೆ.
ಸಂಸತ್ತಿನಲ್ಲಿ ಮಿಲಿಬ್ಯಾಂಡ್ ಹೇಳಿದ್ದೇನು?
ಮಂಗಳವಾರದ ಪ್ರಕಟಣೆಗೂ ಮುನ್ನ ಮಾತನಾಡಿದ ಮಿಲಿಬ್ಯಾಂಡ್, ಹೊಸ ವ್ಯಾಪಾರ ನಿಷೇಧಗಳು ಮತ್ತು ನಿರ್ಬಂಧಗಳು ಇಸ್ರೇಲ್ ಕುರಿತಾದ ಬ್ರಿಟನ್ನ ನೀತಿಯಲ್ಲಿ "ಸಂಪೂರ್ಣ ಬದಲಾವಣೆ" ತರಲಿವೆ. ಇದು ಫೆಲೆಸ್ತೀನ್ನಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಕೇವಲ ಪ್ರಶ್ನಿಸುವುದಷ್ಟೇ ಅಲ್ಲ, ಅದರ ವಿರುದ್ಧ ಕ್ರಮ ಕೈಗೊಳ್ಳುವ ಹಾದಿಯಾಗಿದೆ ಎಂದು ಹೇಳಿದರು.
ಈ ನಿರ್ಬಂಧಗಳು ಅಕ್ರಮ ವಸಾಹತುಗಳು ಮತ್ತು ವಸಾಹತು ವಿಸ್ತರಣೆಯನ್ನು ಗುರಿಯಾಗಿಸಿಕೊಂಡಿವೆಯೇ ಹೊರತು ಇಸ್ರೇಲ್ ದೇಶವನ್ನಲ್ಲ ಎಂದು ಅವರು ಸ್ಪಷ್ಟಪಡಿಸಿದರು.
"ವಸಾಹತುಗಳ ವಿಸ್ತರಣೆಯನ್ನು ತಡೆಯಲು ಮತ್ತು ಮುಖ್ಯವಾಗಿ E1 ಪ್ರದೇಶದ ಅಭಿವೃದ್ಧಿಯನ್ನು ತಡೆಯಲು ಪ್ರಸ್ತುತ ಇರುವ ಮಾನವ ಹಕ್ಕುಗಳ ನಿಯಮಾವಳಿಗಳನ್ನು ವಿಸ್ತರಿಸಲಾಗುವುದು . ವೆಸ್ಟ್ ಬ್ಯಾಂಕ್ನಲ್ಲಿ ಪ್ರಸ್ತಾವಿತ ವಸಾಹತು ಪ್ರದೇಶವಾಗಿರುವ E1, ಫೆಲೆಸ್ತೀನ್ ಭೂಪ್ರದೇಶವನ್ನು ಎರಡು ಭಾಗಗಳಾಗಿ ವಿಭಜಿಸಲಿದ್ದು, ದ್ವಿ-ರಾಷ್ಟ್ರ ಪರಿಹಾರದ ಭರವಸೆಯನ್ನು ಅಂತ್ಯಗೊಳಿಸಲಿದೆ ಎಂದು ಅವರು ಹೇಳಿದ್ದಾರೆ.
ಇಸ್ರೇಲ್ ಬೆಂಬಲದ ಭಾಗವಾಗಿ, ಲೆಬನಾನ್ನ ಹಿಜ್ಬುಲ್ಲಾ ಸಂಘಟನೆಯ ಹಣಕಾಸು ಘಟಕವಾದ 'ಅಲ್-ಖರ್ದ್ ಅಲ್-ಹಸನ್' ಮೇಲೆ ಹೊಸ ನಿರ್ಬಂಧಗಳನ್ನು ಮಿಲಿಬ್ಯಾಂಡ್ ಘೋಷಿಸಿದರು. ಯುರೋಪಿಯನ್ ಯೂನಿಯನ್ ಮತ್ತು ಅಮೆರಿಕದ ಹಾದಿಯಲ್ಲೇ ಬ್ರಿಟನ್ ಸಹ ಇರಾನ್ ಮೇಲೆ ಮರು ನಿರ್ಬಂಧ ವಿಧಿಸಲಿದೆ ಎಂದು ಅವರು ಹೇಳಿದ್ದಾರೆ.
ವೆಸ್ಟ್ ಬ್ಯಾಂಕ್ ಭಾಗಗಳಲ್ಲಿ ವಸಾಹತುಗಾರರು ನಡೆಸುತ್ತಿರುವ ಹಿಂಸಾಚಾರವು 'ಜನಾಂಗೀಯ ನಿರ್ಮೂಲನೆ'ಗೆ ಸಮನಾಗಿದೆ ಎಂಬುದನ್ನು ಬ್ರಿಟನ್ ಸರ್ಕಾರ ಒಪ್ಪಿಕೊಳ್ಳುತ್ತದೆ ಎಂದ ಅವರು, ಈ ಕೃತ್ಯ ಎಸಗುತ್ತಿರುವವರನ್ನು 'ವಸಾಹತುಗಾರ ಭಯೋತ್ಪಾದಕರು' ಎಂದು ಕರೆಯುವ ಮೂಲಕ ಖಂಡಿಸಿದರು. ಫೆಲೆಸ್ತೀನ್ ಜನರ ಮೇಲಿನ ಹಿಂಸಾಚಾರ ಮತ್ತು ಬೆದರಿಕೆಗಳನ್ನು ಇಸ್ರೇಲ್ ಸರ್ಕಾರ ಕಣ್ಣುಮುಚ್ಚಿ ನೋಡುತ್ತಿದೆ ಎಂದು ಅವರು ಆರೋಪಿಸಿದರು.
ಫೆಲೆಸ್ತೀನ್ಗೆ ಸಂಬಂಧಿಸಿದಂತೆ ದ್ವಿ-ರಾಷ್ಟ್ರ ಪರಿಹಾರಕ್ಕೆ ಬ್ರಿಟನ್ ಬದ್ಧವಾಗಿದೆ ಎಂದು ಪುನರುಚ್ಚರಿಸಿದ ಮಿಲಿಬ್ಯಾಂಡ್, ಫೆಲೆಸ್ತೀನ್ ದೇಶದ ಪರಿಕಲ್ಪನೆಯನ್ನೇ ಅಂತ್ಯಗೊಳಿಸಲು ಕರೆ ನೀಡಿದ್ದ ಇಸ್ರೇಲ್ ಹಣಕಾಸು ಸಚಿವ ಬೆಜಾಲೆಲ್ ಸ್ಮೋಟ್ರಿಚ್ ಅವರಂತಹ ರಾಜಕಾರಣಿಗಳ ಹೇಳಿಕೆಗಳನ್ನು ತೀವ್ರವಾಗಿ ಟೀಕಿಸಿದರು.
ಸ್ವತಃ ಯಹೂದಿಯಾಗಿರುವ ಮಿಲಿಬ್ಯಾಂಡ್, ಬ್ರಿಟನ್ನಲ್ಲಿ ಹೆಚ್ಚುತ್ತಿರುವ ಯಹೂದಿ ವಿರೋಧಿ ಧೋರಣೆಯ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ. ಬ್ರಿಟನ್ ಸರ್ಕಾರದ ಈ ನಿರ್ಧಾರಗಳು ಇಸ್ರೇಲ್ ಸರ್ಕಾರದ ವಿರುದ್ಧವಾಗಿವೆಯೇ ಹೊರತು ಇಸ್ರೇಲಿ ಜನರ ವಿರುದ್ಧವಲ್ಲ. ಇಸ್ರೇಲ್ ಸರ್ಕಾರದ ಕೃತ್ಯಗಳಿಗಾಗಿ ಬ್ರಿಟನ್ನಲ್ಲಿರುವ ಯಹೂದಿ ಜನರನ್ನು ಗುರಿಯಾಗಿಸುವುದು ಸ್ಪಷ್ಟವಾಗಿ ಯಹೂದಿ ವಿರೋಧಿ ಧೋರಣೆಯಾಗಿದೆ ಎಂದಿದ್ದಾರೆ ಅವರು.
ಬ್ರಿಟನ್ "ದೇಶದಲ್ಲೂ ಮತ್ತು ವಿಶ್ವದಲ್ಲೂ ತನ್ನ ಮೌಲ್ಯಗಳನ್ನು ಎತ್ತಿಹಿಡಿಯುವ, ಎಲ್ಲೇ ಶೋಷಣೆ ಮತ್ತು ಸಂಕಟಗಳು ಎದುರಾದರೂ ಅದರ ವಿರುದ್ಧ ಹೋರಾಡುವ ಹಾಗೂ ಸರಿಯಾದ್ದಕ್ಕಾಗಿ ಧ್ವನಿ ಎತ್ತುವ ದೇಶವಾಗಿದೆ" ಎಂದು ಅವರು ತಿಳಿಸಿದರು.
► ಏನೇನು ನಿಷೇಧಕ್ಕೊಳಗಾಗಿವೆ?
ವೆಸ್ಟ್ ಬ್ಯಾಂಕ್ನ ಅಕ್ರಮ ಇಸ್ರೇಲಿ ವಸಾಹತುಗಳಿಂದ ಬರುವ ಎಲ್ಲಾ ಸರಕುಗಳ ಆಮದಿನ ಮೇಲೆ ನಿಷೇಧ.
ವಸಾಹತು ವಿಸ್ತರಣೆಗೆ ನಿರ್ಮಾಣ, ಮೂಲಸೌಕರ್ಯ, ಹಣಕಾಸು ಅಥವಾ ರಿಯಲ್ ಎಸ್ಟೇಟ್ ನೆರವು ನೀಡುವ ಎಲ್ಲಾ ಸಂಸ್ಥೆಗಳು, ಉದ್ಯಮಗಳು ಮತ್ತು ವ್ಯಕ್ತಿಗಳ ಮೇಲೆ ನಿರ್ಬಂಧ.
ವೆಸ್ಟ್ ಬ್ಯಾಂಕ್ನ ಅಕ್ರಮ ವಸಾಹತುಗಳಲ್ಲಿನ ಆಸ್ತಿಗಳ ಮಾರಾಟಕ್ಕೆ ಸಂಬಂಧಿಸಿದಂತೆ ಬ್ರಿಟನ್ನಲ್ಲಿ ಜಾಹೀರಾತು ನೀಡುವುದಕ್ಕೆ ಸಂಪೂರ್ಣ ನಿಷೇಧ.
ಫೆಲೆಸ್ತೀನಿಯರ ವಿರುದ್ಧದ ಹಿಂಸಾಚಾರಕ್ಕೆ ಬೆಂಬಲ ನೀಡಿದ ಅಥವಾ ಪ್ರಚೋದಿಸಿದ ತೀವ್ರಗಾಮಿ ವಸಾಹತುಗಾರರ ಮೇಲೆ ನಿರ್ಬಂಧ.
ಆಕ್ರಮಣಕಾರಿ ಚಟುವಟಿಕೆಗಳಿಗೆ ನೇರ ನೆರವು ನೀಡುವ ಆಯುಧಗಳು ಮತ್ತು ಇತರ ರಫ್ತುಗಳಿಗೆ ಸಂಬಂಧಿಸಿದ ಎಲ್ಲಾ ಹೊಸ ರಫ್ತು ಪರವಾನಗಿಗಳನ್ನು ತಿರಸ್ಕರಿಸಲಾಗುವುದು. ಗಾಝಾದಲ್ಲಿ ಇಸ್ರೇಲ್ ಸೈನ್ಯ ಬಳಸುವ 30ಕ್ಕೂ ಹೆಚ್ಚು ಶಸ್ತ್ರಾಸ್ತ್ರ ಪರವಾನಗಿಗಳನ್ನು ಬ್ರಿಟನ್ ಈಗಾಗಲೇ ಅಮಾನತುಗೊಳಿಸಿದೆ. ಆಕ್ರಮಣ ಮುಂದುವರಿಯುವವರೆಗೆ ಈ ಶಸ್ತ್ರಾಸ್ತ್ರ ರಫ್ತು ನಿಷೇಧ ಜಾರಿಯಲ್ಲಿರಲಿದೆ ಎಂದು ಮಿಲಿಬ್ಯಾಂಡ್ ಹೇಳಿದ್ದಾರೆ.
► ವಿನಾಯಿತಿ ಪಡೆದ ಸರಕುಗಳು
ಇಸ್ರೇಲ್ನಿಂದ ನೇರವಾಗಿ ಬರುವ ಉತ್ಪನ್ನಗಳು ಮತ್ತು ಸೇವೆಗಳು.
► ವಸಾಹತುಗಳೊಂದಿಗೆ ಬ್ರಿಟನ್ ಎಷ್ಟು ವ್ಯಾಪಾರ ನಡೆಸುತ್ತದೆ?
ಇಸ್ರೇಲ್ಗೆ ಬ್ರಿಟನ್ ಪ್ರಮುಖ ವ್ಯಾಪಾರ ಪಾಲುದಾರ ದೇಶವಾಗಿದೆ.
ಹೌಸ್ ಆಫ್ ಕಾಮನ್ಸ್ ಅಂಕಿಅಂಶಗಳ ಪ್ರಕಾರ, 2025 ರಲ್ಲಿ ಬ್ರಿಟನ್ ಮತ್ತು ಇಸ್ರೇಲ್ ನಡುವಿನ ಒಟ್ಟು ವ್ಯಾಪಾರ 6 ಬಿಲಿಯನ್ ಪೌಂಡ್ (8.1 ಶತಕೋಟಿ ಡಾಲರ್ ) ತಲುಪಿದೆ. ಇದರಲ್ಲಿ ವಸಾಹತುಗಳಲ್ಲಿ ತಯಾರಾದ ಸರಕುಗಳ ನಿಖರ ಪ್ರಮಾಣವನ್ನು ಅಂದಾಜಿಸುವುದು ಕಷ್ಟವಾದರೂ, 2025 ರಲ್ಲಿ ಆಕ್ರಮಿತ ಪ್ರದೇಶದಿಂದ ಸುಮಾರು 38 ಮಿಲಿಯನ್ ಪೌಂಡ್ (51.4 ಮಿಲಿಯನ್ ಡಾಲರ್ ) ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಸಂಸತ್ತಿನ ದಾಖಲೆಗಳು ತೋರಿಸುತ್ತವೆ.
ಅಮೂಲ್ಯ ರತ್ನಗಳು ಮತ್ತು ಲೋಹಗಳು, ತಾಂತ್ರಿಕ ಹಾಗೂ ವೈದ್ಯಕೀಯ ಉಪಕರಣಗಳು, ಪ್ಲಾಸ್ಟಿಕ್, ಯಂತ್ರೋಪಕರಣಗಳು ಮತ್ತು ಹಣ್ಣುಗಳು ಸೇರಿದಂತೆ ತಾಜಾ ಕೃಷಿ ಉತ್ಪನ್ನಗಳು ಇಸ್ರೇಲ್ನಿಂದ ಆಮದಾಗುವ ಪ್ರಮುಖ ಸರಕುಗಳಾಗಿವೆ. ಪ್ರತಿಯಾಗಿ ಬ್ರಿಟನ್ ಡ್ರೋನ್ಗಳು, ಹೆಲಿಕಾಪ್ಟರ್ಗಳು ಮತ್ತು ವಿಮಾನ ಭಾಗಗಳು ಸೇರಿದಂತೆ ರಕ್ಷಣಾ ಉಪಕರಣಗಳನ್ನು ರಫ್ತು ಮಾಡುತ್ತದೆ.
2024 ರಲ್ಲಿ ಗಾಝಾದಲ್ಲಿನ ಮಿಲಿಟರಿ ಕಾರ್ಯಾಚರಣೆಯ ಕಾರಣಕ್ಕೆ ಇಸ್ರೇಲ್ಗೆ ನೀಡಲಾಗಿದ್ದ ಸುಮಾರು 30 ಶಸ್ತ್ರಾಸ್ತ್ರ ರಫ್ತು ಪರವಾನಗಿಗಳನ್ನು ಬ್ರಿಟನ್ ರದ್ದು ಮಾಡಿತ್ತು. ಎಫ್-35 ಯುದ್ಧ ವಿಮಾನಗಳ ಬಿಡಿಭಾಗಗಳಿಗೆ ವಿನಾಯಿತಿ ನೀಡಲಾಗಿದ್ದು, ಇಸ್ರೇಲ್ ಅಮೆರಿಕದಂತಹ ಇತರ ಪಾಲುದಾರರ ಮೂಲಕ ಅವುಗಳನ್ನು ಪಡೆಯಬಹುದಾಗಿದೆ.
ಉಚಿತ ವ್ಯಾಪಾರ ಒಪ್ಪಂದದಡಿ ಬರುವ ಇಸ್ರೇಲಿ ಉತ್ಪನ್ನಗಳು ಮತ್ತು ಈ ಸೌಲಭ್ಯಕ್ಕೆ ಅರ್ಹವಲ್ಲದ ವಸಾಹತು ಉತ್ಪನ್ನಗಳ ನಡುವೆ ವ್ಯತ್ಯಾಸ ಗುರುತಿಸಲು ಬ್ರಿಟನ್ ದೀರ್ಘಕಾಲದಿಂದ ಯತ್ನಿಸುತ್ತಿದೆ.
ಸಡಿಲಿತ ತೆರಿಗೆ ದರಗಳ ಪ್ರಯೋಜನ ಪಡೆಯಲು, ತಮಗಾಗಿ ಬರುವ ಸರಕುಗಳು ಇಸ್ರೇಲ್ನಲ್ಲಿ ಎಲ್ಲಿ ತಯಾರಾಗಿವೆ ಮತ್ತು "ಜೂನ್ 1967 ರಿಂದ ಇಸ್ರೇಲ್ ನಿಯಂತ್ರಣಕ್ಕೆ ಬಂದ ಪ್ರದೇಶಗಳಲ್ಲಿ" ತಯಾರಾಗಿಲ್ಲ ಎಂಬುದನ್ನು ತೋರಿಸುವ ದಾಖಲೆಗಳನ್ನು ಆಮದುದಾರರು ಬ್ರಿಟನ್ ಕಸ್ಟಮ್ಸ್ಗೆ ಸಲ್ಲಿಸಬೇಕಾಗುತ್ತದೆ.
ಇಸ್ರೇಲಿ ವಸಾಹತುಗಳಿಂದ ಬರುವ ಉತ್ಪನ್ನಗಳನ್ನು ಬ್ರಿಟನ್ ಪ್ರವೇಶಿಸುವ ಮೊದಲು ಹೇಗೆ ಲೇಬಲ್ ಮಾಡಬೇಕು ಎಂಬುದರ ಕುರಿತು ಮಾರ್ಗಸೂಚಿಗಳನ್ನು ತರಲಾಗಿದೆ. ಆಕ್ರಮಿತ ಫೆಲೆಸ್ತೀನ್ ಪ್ರದೇಶದಲ್ಲಿ ತಯಾರಾದ ಸರಕುಗಳನ್ನು "ಇಸ್ರೇಲ್ನಲ್ಲಿ ತಯಾರಾಗಿದೆ" ಎಂದು ತಪ್ಪಾಗಿ ಲೇಬಲ್ ಮಾಡಲಾಗುತ್ತಿದೆ ಎಂಬ ಆತಂಕಗಳೂ ಇವೆ.
2025 ಮೇ ತಿಂಗಳಲ್ಲಿ, ಡಿಜಿಟಲ್ ವ್ಯಾಪಾರ ಮತ್ತು ಇತರ ಕ್ಷೇತ್ರಗಳನ್ನು ಒಳಗೊಳ್ಳುವಂತೆ ವ್ಯಾಪಾರ ಒಪ್ಪಂದವನ್ನು ಆಧುನಿಕಗೊಳಿಸುವ ಚರ್ಚೆಗಳನ್ನು ಬ್ರಿಟನ್ ರದ್ದು ಮಾಡಿತ್ತು.
► ಇದರರ್ಥ ಬ್ರಿಟನ್ ಇಸ್ರೇಲ್ಗೆ ನೀಡುತ್ತಿರುವ ಬೆಂಬಲವನ್ನು ಹಿಂಪಡೆಯುತ್ತಿದೆಯೇ?
ಇಲ್ಲ. ಸಂಸತ್ತಿನಲ್ಲಿ ಮಾತನಾಡಿದ ಮಿಲಿಬ್ಯಾಂಡ್, ಈ ಕ್ರಮಗಳನ್ನು ಇಸ್ರೇಲಿ ಜನರ ವಿರುದ್ಧ ಕೈಗೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಬ್ರಿಟಿಷ್ ಜನರು ಇಸ್ರೇಲಿ ಜನರೊಂದಿಗೆ "ದೃಢವಾದ ಸಂಬಂಧ" ಹೊಂದಿದ್ದಾರೆ . ನಮ್ಮ ಭಿನ್ನಾಭಿಪ್ರಾಯ ಇಸ್ರೇಲ್ ಜನರೊಂದಿಗಲ್ಲ, ಬದಲಿಗೆ ಅಲ್ಲಿನ "ಸರ್ಕಾರದ ನಡವಳಿಕೆಯೊಂದಿಗೆ" ಇದೆ. "ನಾನು ಬಹಿಷ್ಕಾರ, ಹೂಡಿಕೆ ಹಿಂಪಡೆಯುವಿಕೆ ಮತ್ತು ನಿರ್ಬಂಧಗಳ ಚಳವಳಿಯನ್ನು ಸಂಪೂರ್ಣವಾಗಿ ವಿರೋಧಿಸುತ್ತೇನೆ" ಎಂದು ಅವರು ತಿಳಿಸಿದರು.
2023 ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯು ಇಸ್ರೇಲ್ ಎದುರಿಸುತ್ತಿರುವ ಗಂಭೀರ ಬೆದರಿಕೆಗಳನ್ನು ತೋರಿಸುತ್ತದೆ ಎಂದು ಅವರು ಹೇಳಿದರು. ಲೆಬನಾನ್ನಲ್ಲಿರುವ ಇರಾನ್ ಬೆಂಬಲಿತ ಹಿಜ್ಬುಲ್ಲಾ ವಿರುದ್ಧ ಹೊಸ ನಿರ್ಬಂಧಗಳನ್ನು ವಿಧಿಸುತ್ತಿರುವುದಾಗಿ ಹಾಗೂ ಇರಾನ್ ಮೇಲೆಯೂ ಮರು ನಿರ್ಬಂಧ ಹೇರುತ್ತಿರುವುದಾಗಿ ಘೋಷಿಸಿದರು.
"ಇಸ್ರೇಲ್ನ ಅಸ್ತಿತ್ವದ ಹಕ್ಕನ್ನು ಪ್ರಶ್ನಿಸುವವರಿಗೆ" ಉತ್ತರಿಸಿದ ಅವರು, ನಿಮ್ಮ ನಿಲುವು ತಪ್ಪು, ಅದನ್ನು ನಾವು ಸಾರ್ವಜನಿಕವಾಗಿ ಖಂಡಿಸುತ್ತೇವೆ. ಗಾಝಾದಲ್ಲಿ ಹಮಾಸ್ ತನ್ನ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಒಪ್ಪಿಸಬೇಕು. ಗಾಝಾದ ಭವಿಷ್ಯದ ಆಡಳಿತದಲ್ಲಿ ಹಮಾಸ್ ಯಾವುದೇ ಪಾತ್ರ ವಹಿಸುವಂತಿಲ್ಲ" ಎಂದಿದ್ದಾರೆ.
ಇಸ್ರೇಲ್ಗೆ ಭಯವಿಲ್ಲದೆ ಜೀವಿಸುವ ಹಕ್ಕಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದ್ದಾರೆ.
ತಮ್ಮ ಯಹೂದಿ ಹಿನ್ನೆಲೆಯ ಬಗ್ಗೆ "ಹೆಮ್ಮೆಯಿದೆ" ಎಂದ ಮಿಲಿಬ್ಯಾಂಡ್, ಇಸ್ರೇಲ್ ದೇಶಕ್ಕೆ ತಾವು ನೀಡುವ ಬೆಂಬಲಕ್ಕೂ, ಫೆಲೆಸ್ತೀನ್ಗೆ ನೀಡಿರುವ ಬೆಂಬಲಕ್ಕೂ ಯಾವುದೇ "ವಿರೋಧಾಭಾಸವಿಲ್ಲ" ಎಂದಿದ್ದಾರೆ.
► ಇಸ್ರೇಲ್ ಪ್ರತಿಕ್ರಿಯೆ ಹೇಗಿದೆ?
ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಬ್ರಿಟನ್ ವಿರುದ್ಧ ನಾಲ್ಕು ಪ್ರತಿಕ್ರಮಗಳನ್ನು ಘೋಷಿಸಿದ್ದಾರೆ. ಜೆರುಸಲೇಂನಲ್ಲಿರುವ ಬ್ರಿಟಿಷ್ ಕಾನ್ಸುಲೇಟ್ ಅನ್ನು ಇಸ್ರೇಲ್ ಮುಚ್ಚುತ್ತಿದೆ.
ದಕ್ಷಿಣ ಇಸ್ರೇಲ್ನ ಕಿರಿಯಾತ್ ಗತ್ನಲ್ಲಿರುವ ಅಂತರರಾಷ್ಟ್ರೀಯ ಗಾಝಾ ನೆರವು ಕೇಂದ್ರದಿಂದ ಬ್ರಿಟನ್ ಪ್ರತಿನಿಧಿಗಳನ್ನು ತೆರವುಗೊಳಿಸಲಾಗುವುದು.
ವೆಸ್ಟ್ ಬ್ಯಾಂಕ್ನಲ್ಲಿ ಫೆಲೆಸ್ತೀನ್ ಅಥಾರಿಟಿ ಪಡೆಗಳಿಗೆ ಬ್ರಿಟನ್ ನೀಡುತ್ತಿದ್ದ ತರಬೇತಿಯನ್ನು ಅಂತ್ಯಗೊಳಿಸಲಾಗುವುದು.
ಬ್ರಿಟನ್ನ 12 ಸಂಸದರಿಗೆ ಇಸ್ರೇಲ್ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.
ಚುನಾವಣೆ ಹತ್ತಿರವಿರುವಾಗ ಈ ಪ್ರಕಟಣೆ ಹೊರಡಿಸುವ ಮೂಲಕ ಬ್ರಿಟನ್ ಸರ್ಕಾರವು ಇಸ್ರೇಲ್ನ ಅಕ್ಟೋಬರ್ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲು ಯತ್ನಿಸುತ್ತಿದೆ ಎಂದು ಸಾರ್ ಆರೋಪಿಸಿದ್ದಾರೆ. "ನಮ್ಮ ನೆಲದ ಹೃದಯಭಾಗದಲ್ಲಿ" ಫೆಲೆಸ್ತೀನ್ ರಾಷ್ಟ್ರ ರಚನೆಯಾಗುವುದನ್ನು ಇಸ್ರೇಲ್ ಸಾರ್ವಜನಿಕರು ಬಲವಾಗಿ ವಿರೋಧಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಪ್ರತೀಕಾರವಾಗಿ ಬ್ರಿಟನ್ನ ಕಡಲಾಚೆಯ ಪ್ರದೇಶವಾದ ಫಾಕ್ಲೆಂಡ್ಸ್ ಮೇಲಿನ ಅರ್ಜೆಂಟೀನಾದ ಸಾರ್ವಭೌಮತ್ವವನ್ನು ಇಸ್ರೇಲ್ ಗುರುತಿಸಬೇಕು ಎಂದು ರಾಷ್ಟ್ರೀಯ ಭದ್ರತಾ ಸಚಿವ ಇಟಾಮರ್ ಬೆನ್-ಗ್ವಿರ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಲ್ಲಿ ಒತ್ತಾಯಿಸಿದ್ದಾರೆ. ಬ್ರಿಟಿಷ್ ರಾಯಭಾರಿಯನ್ನು ಉಚ್ಚಾಟಿಸುವಂತೆ ಹಣಕಾಸು ಸಚಿವ ಸ್ಮೋಟ್ರಿಚ್ ಕರೆ ನೀಡಿದ್ದಾರೆ.
► ಅಮೆರಿಕದ ಪ್ರತಿಕ್ರಿಯೆ ಹೇಗಿದೆ?
ಬ್ರಿಟನ್ ಪ್ರಧಾನಿ ಸೋಮವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ, ದ್ವಿ-ರಾಷ್ಟ್ರ ಪರಿಹಾರದ ಅಗತ್ಯವನ್ನು ಒತ್ತಿಹೇಳಿದ್ದಾರೆ ಎಂದು ಬ್ರಿಟಿಷ್ ಮಾಧ್ಯಮಗಳು ವರದಿ ಮಾಡಿವೆ. ಹೊಸ ನಿಷೇಧದ ಕುರಿತು ಟ್ರಂಪ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇಸ್ರೇಲ್ನಲ್ಲಿರುವ ಅಮೆರಿಕ ರಾಯಭಾರಿ ಮೈಕ್ ಹಕಬೀ ಬ್ರಿಟನ್ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದು, ಅದನ್ನು "ಯಹೂದಿ ದ್ವೇಷ" ಎಂದು ಕರೆದಿದ್ದಾರೆ. ಯಾವುದೇ ರೀತಿಯ ನಿರ್ಬಂಧ ಅಥವಾ ವ್ಯಾಪಾರ ನಿಷೇಧವು ಯಹೂದಿ ಜನರ ವಿರುದ್ಧದ ತಾರತಮ್ಯವಾಗಿದೆ ಎಂದಿದ್ದಾರೆ ಅವರು.
ಬ್ರಿಟನ್ನಲ್ಲಿ ಬಳಕೆಯಾಗುವ ಶೇಕಡಾ 25 ರಷ್ಟು ಔಷಧಗಳು ಇಸ್ರೇಲ್ನಲ್ಲಿ ತಯಾರಾಗುತ್ತವೆ. ಅಮೆರಿಕ ಪ್ರತೀಕಾರ ತೀರಿಸಿಕೊಂಡರೆ ಅಮೆರಿಕದಲ್ಲಿರುವ ಬ್ರಿಟಿಷ್ ಉದ್ಯಮಗಳು ದೊಡ್ಡ ಮಟ್ಟದ ನಷ್ಟ ಎದುರಿಸಬೇಕಾಗುತ್ತದೆ ಎಂದು ಹಕಬೀ ಪ್ರತಿಪಾದಿಸಿದ್ದಾರೆ.
ಫ್ಲೋರಿಡಾದ ರಿಪಬ್ಲಿಕನ್ ಸಂಸದ ರ್ಯಾಂಡಿ ಫೈನ್ ಬ್ರಿಟಿಷ್ ಕಂಪನಿಗಳಿಗೆ ಫ್ಲೋರಿಡಾದಲ್ಲಿ ನಿಷೇಧ ಹೇರಬಹುದು ಎಂದು ಎಚ್ಚರಿಸಿದ್ದಾರೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮಾತನಾಡಿ, "ಗಾಝಾದ ಶಾಂತಿ ಯೋಜನೆಯಲ್ಲಿ ಪ್ರಗತಿ ಸಾಧಿಸುವ ನಮ್ಮ ಸಾಮರ್ಥ್ಯದ ಮೇಲೆ ಇದು ಪರಿಣಾಮ ಬೀರುತ್ತದೆ. ಬ್ರಿಟನ್ ಮಾಡಿದಂತೆ ನಾವು ಖಂಡಿತವಾಗಿಯೂ ಮಾಡುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
► ಇತರ ಪ್ರತಿಕ್ರಿಯೆಗಳು ಹೇಗಿವೆ?
ಬ್ರಿಟನ್ಗೆ ಫೆಲೆಸ್ತೀನ್ ರಾಯಭಾರಿಯಾಗಿರುವ ಹುಸಮ್ ಝೊಮ್ರೋಟ್ ಮಾತನಾಡಿ, ನಿರ್ಬಂಧಗಳು ಮತ್ತು ವ್ಯಾಪಾರ ನಿಷೇಧ ಹೇರುವ ಬ್ರಿಟನ್ ನಿರ್ಧಾರ "ದೀರ್ಘಕಾಲದಿಂದ ಬಾಕಿಯಿತ್ತು". ಇದು "ಬ್ರಿಟನ್-ಫೆಲೆಸ್ತೀನ್ ಸಂಬಂಧಗಳಲ್ಲಿ ಹೊಸ ತಿರುವು" ಎಂದು ಬಣ್ಣಿಸಿದ್ದಾರೆ.
"ಇಂದು ಬ್ರಿಟನ್ ಕೇವಲ ಖಂಡಿಸುವುದನ್ನು ಬಿಟ್ಟು ಕ್ರಮ ಕೈಗೊಳ್ಳುವತ್ತ, ಬರೀ ಮಾತುಗಳ ಬದಲು ಕಾರ್ಯದ ಬಗ್ಗೆ ಹೆಜ್ಜೆ ಇಡಲು ಆರಂಭಿಸಿದೆ" ಎಂದು ಅವರು ಎಕ್ಸ್ ನಲ್ಲಿ ಬರೆದಿದ್ದಾರೆ.
ಮಾನವ ಹಕ್ಕುಗಳ ಸಂಘಟನೆಗಳು ಸಹ ಈ ನಿರ್ಧಾರವನ್ನು ಸ್ವಾಗತಿಸಿವೆ.
ಆಮದು ನಿಷೇಧ ಮತ್ತು ನಿರ್ಬಂಧಗಳು "ಬ್ರಿಟನ್ ನೀತಿಯಲ್ಲಿ ದೀರ್ಘಕಾಲದಿಂದ ನಿರೀಕ್ಷಿತವಾಗಿದ್ದ ಧನಾತ್ಮಕ ಬದಲಾವಣೆ" ಎಂದು ಹ್ಯೂಮನ್ ರೈಟ್ಸ್ ವಾಚ್ ಹೇಳಿದೆ.
ಈ ಹೊಸ ಕ್ರಮಗಳು "ಅಗತ್ಯವಿರುವ ಬಹುದೊಡ್ಡ ಬದಲಾವಣೆಯಾಗಬಹುದು" ಎಂದು ಆಮ್ನೆಸ್ಟಿ ಇಂಟರ್ನ್ಯಾಷನಲ್ ಯುಕೆ ತಿಳಿಸಿದೆ.
ಮಿಲಿಬ್ಯಾಂಡ್ ಅವರ ಭಾಷಣದ ನಂತರ, ಬ್ರಿಟನ್ನ ಯಹೂದಿ ಸಂಸ್ಥೆಗಳನ್ನು ಪ್ರತಿನಿಧಿಸುವ 'ಜ್ಯೂಯಿಶ್ ಲೀಡರ್ಶಿಪ್ ಕೌನ್ಸಿಲ್', ಸರ್ಕಾರ "ಬ್ರಿಟಿಷ್ ಯಹೂದಿಗಳನ್ನು ಹೆಚ್ಚು ಅಪಾಯಕ್ಕೆ ಸಿಲುಕಿಸುತ್ತಿದೆ" ಎಂದು ಆರೋಪಿಸಿದೆ.
ಸರ್ಕಾರದ ಈ ಕ್ರಮ "ಅತ್ಯಂತ ಜವಾಬ್ದಾರಿ ರಹಿತ" ಎಂದಿದು ಕೌನ್ಸಿಲ್ ಹೇಳಿದೆ.
ಬ್ರಿಟನ್ನ ಮುಖ್ಯ ರಬ್ಬಿ ಎಫ್ರೇಮ್ ಮಿರ್ವಿಸ್, ಇದು "ಬ್ರಿಟಿಷ್ ಯಹೂದಿಗಳಿಗೆ ನಿಜಕ್ಕೂ ಕಪ್ಪು ದಿನ" ಎಂದು ಪ್ರತಿಕ್ರಿಯಿಸಿದ್ದು, ಇದರ ಪರಿಣಾಮವಾಗಿ ಅವರು ತೀವ್ರಗಾಮಿ ದಾಳಿಗಳ ಹೆಚ್ಚಿನ ಬೆದರಿಕೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
"ನಮ್ಮಲ್ಲಿ ಹಲವರು ವ್ಯಕ್ತಪಡಿಸಿದ ತೀವ್ರ ಕಳವಳಗಳನ್ನು ನಿರ್ಲಕ್ಷಿಸಲು ಇಂದು ನಮ್ಮ ಸರ್ಕಾರ ನಿರ್ಧರಿಸಿದೆ. ಈ ಕ್ರಮಗಳು ತಡೆಯಲು ಯತ್ನಿಸುತ್ತಿರುವ ತೀವ್ರವಾದವನ್ನು ಮತ್ತಷ್ಟು ಬಲಪಡಿಸಲು ಮಾತ್ರ ನೆರವಾಗಲಿವೆ" ಎಂದು ಅವರು ಎಕ್ಸ್ನಲ್ಲಿ ಬರೆದಿದ್ದಾರೆ.
► ಈ ನಿಷೇಧದ ಯಾಕಾಗಿ?
ಮಾಜಿ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ಅವಧಿಯಲ್ಲಿ, ಗಾಝಾ ಮೇಲಿನ ಇಸ್ರೇಲ್ನ ಭೀಕರ ಯುದ್ಧ ಮತ್ತು ಆಕ್ರಮಿತ ವೆಸ್ಟ್ ಬ್ಯಾಂಕ್ನ ಫೆಲೆಸ್ತೀನ್ ಸಮುದಾಯಗಳ ಮೇಲಿನ ದಾಳಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದಕ್ಕಾಗಿ ಬ್ರಿಟನ್ನ ಲೇಬರ್ ಪಾರ್ಟಿ ತೀವ್ರ ವಿಮರ್ಶೆಗೆ ಒಳಗಾಗಿತ್ತು. ನೂತನ ಪ್ರಧಾನಿ ಆಂಡಿ ಬರ್ನ್ಹ್ಯಾಮ್ ಅಧಿಕಾರ ವಹಿಸಿಕೊಂಡಾಗ ಈ ತಪ್ಪನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದರು.
ಆದರೆ, ಇಸ್ರೇಲಿ ವಸಾಹತು ಉತ್ಪನ್ನಗಳ ಮೇಲಿನ ಪ್ರಸ್ತುತ ನಿಷೇಧವು ಬ್ರಿಟನ್-ಇಸ್ರೇಲ್ ನಡುವಿನ ಒಟ್ಟು ವ್ಯಾಪಾರದ ಶೇಕಡಾ 1 ಕ್ಕಿಂತ ಕಡಿಮೆಯಾಗಿದೆ.
ಬ್ರಿಟನ್ನಲ್ಲಿ ಫೆಲೆಸ್ತೀನಿಯರ ಹಕ್ಕುಗಳಿಗಾಗಿ ಶ್ರಮಿಸುವ 'ಬ್ರಿಟಿಷ್ ಫೆಲೆಸ್ತೀನಿಯನ್ ಕಮಿಟಿ'ಯ ಮಧ್ಯಂತರ ನಿರ್ದೇಶಕಿ ಝೆನಾ ಅಘಾ ಅಲ್ ಜಝೀರಾದೊಂದಿಗೆ ಮಾತನಾಡಿ, ಈ ಕ್ರಮವು ಅತ್ಯಂತ "ಕನಿಷ್ಠ ಮಟ್ಟದ್ದು" ಎಂದು ಹೇಳಿದ್ದಾರೆ.
"ಅಂತರರಾಷ್ಟ್ರೀಯ ಕಾನೂನು ಚೌಕಟ್ಟಿಗೆ ಬದ್ಧವಾಗಿರುವ ಯಾವುದೇ ಸರ್ಕಾರದಿಂದ ನಾವು ನಿರೀಕ್ಷಿಸುವ ಮೂಲಭೂತ ಕ್ರಮಗಳು ಇವಾಗಿವೆ. ಹಾಗಾಗಿ ಇದನ್ನು ಸಂಭ್ರಮಿಸುವ ಅಗತ್ಯವಿಲ್ಲ. ಆದರೂ, ಹಿಂದಿನ ಸರ್ಕಾರ ಮಾಡದಿರುವುದನ್ನು ಈ ಸರ್ಕಾರ ಮಾಡಿದೆ, ಆ ಮಟ್ಟಿಗೆ ಇದನ್ನು ಸ್ವಾಗತಿಸಬೇಕು" ಎಂದು ಅವರು ತಿಳಿಸಿದ್ದಾರೆ.
ಈ ನಿಷೇಧದ ಸರಿಯಾದ ಅನುಷ್ಠಾನ ಅತ್ಯಂತ ನಿರ್ಣಾಯಕ ಎಂದು ಹಕ್ಕುಗಳ ಹೋರಾಟಗಾರರು ಪ್ರತಿಪಾದಿಸುತ್ತಾರೆ.
ಇಸ್ರೇಲ್ ಜೊತೆಗಿನ ವ್ಯಾಪಾರ ನಿಷೇಧಕ್ಕಾಗಿ ದೀರ್ಘಕಾಲದಿಂದ ಒತ್ತಾಯಿಸುತ್ತಿರುವ 'ಕೌನ್ಸಿಲ್ ಫಾರ್ ಅರಬ್-ಬ್ರಿಟಿಷ್ ಅಂಡರ್ಸ್ಟ್ಯಾಂಡಿಂಗ್' ಸಂಸ್ಥೆಯ ಕ್ರಿಸ್ ಡಾಯ್ಲ್ ಮಾತನಾಡಿ, ವಸಾಹತುಗಳ ಉತ್ಪನ್ನಗಳನ್ನು ಇಸ್ರೇಲ್ನ ಉತ್ಪನ್ನಗಳೆಂದು ತಪ್ಪಾಗಿ ಲೇಬಲ್ ಮಾಡದಂತೆ ನೋಡಿಕೊಳ್ಳುವುದು ಮುಖ್ಯ ಎಂದಿದ್ದಾರೆ. ಜೊತೆಗೆ ವಸಾಹತುಗಳಲ್ಲಿನ ಎಲ್ಲಾ ಹೂಡಿಕೆಗಳು ಮತ್ತು ಹಣಕಾಸು ಸೇವೆಗಳ ಮೇಲೆಯೂ ನಿಷೇಧ ಹೇರಬೇಕೆಂದು ಅವರು ಆಗ್ರಹಿಸಿದ್ದಾರೆ.
"ಆಕ್ರಮಿತ ಪ್ರದೇಶದಲ್ಲಿ, ಫೆಲೆಸ್ತೀನಿಯರ ಭೂಮಿ ಮತ್ತು ಸಂಪನ್ಮೂಲಗಳನ್ನು ಕಸಿದುಕೊಂಡು ನಿರ್ಮಿಸಲಾದ ಈ ವಸಾಹತುಗಳೊಂದಿಗೆ ವ್ಯಾಪಾರ ನಡೆಸಲು ಮೊದಲಿನಿಂದಲೂ ಅವಕಾಶ ನೀಡಬಾರದಿತ್ತು" ಎಂದು ಡಾಯ್ಲ್ ಹೇಳಿದ್ದಾರೆ.
"ಬ್ರಿಟನ್ ಮೊದಲ ಬಾರಿಗೆ ಅಕ್ರಮ ವಸಾಹತುಗಳ ವಿರುದ್ಧ ಗಂಭೀರ ಕ್ರಮ ಕೈಗೊಳ್ಳುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇದು ದೀರ್ಘಕಾಲದಿಂದ ಬಾಕಿಯಿತ್ತು. ಥ್ಯಾಚರ್, ಬ್ಲೇರ್ ಮತ್ತು ಕ್ಯಾಮರಾನ್ ಸೇರಿದಂತೆ ಹಿಂದಿನ ಪ್ರಧಾನಿಗಳೆಲ್ಲರೂ ವಸಾಹತುಗಳು ಕಾನೂನುಬಾಹಿರ ಮತ್ತು ಶಾಂತಿಗೆ ಅಡಚಣೆ ಎಂದು ಹೇಳುತ್ತಲೇ ಬಂದಿದ್ದರು, ಆದರೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದು ಇತರ ಯುರೋಪಿಯನ್ ದೇಶಗಳೂ ಇದೇ ಹಾದಿ ತುಳಿಯಲು ಪ್ರೇರಣೆಯಾಗಬೇಕು. ಯುರೋಪಿಯನ್ ಯೂನಿಯನ್ ಇಸ್ರೇಲ್ನ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿರುವುದರಿಂದ, ಜಂಟಿಯಾಗಿ ಕೈಗೊಳ್ಳುವ ಇಂತಹ ಕ್ರಮಗಳು ದೊಡ್ಡ ಮಟ್ಟದ ಬದಲಾವಣೆ ತರಲಿವೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಫೆಲೆಸ್ತೀನ್ನಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧ ಅಪರಾಧಗಳ ತೀವ್ರತೆಯನ್ನು ಗಮನಿಸಿದರೆ, "ಇಸ್ರೇಲ್ ತನ್ನ ವಸಾಹತು ವಿಸ್ತರಣೆಯನ್ನು ನಿಲ್ಲಿಸದಿದ್ದಲ್ಲಿ ಬ್ರಿಟನ್ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಾಗಿರಬೇಕು" ಎಂದಿದ್ದಾರೆ ಡಾಯ್ಲ್.
ಕೃಪೆ: aljazeera.com






