ಒಂದು ಹೇಳಿಕೆಗಾಗಿ ಶಿಕ್ಷಕನ ಉದ್ಯೋಗವನ್ನೇ ಕಿತ್ತುಕೊಂಡ Unacademy
► ಒಂದು ಪ್ರಬಂಧಕ್ಕಾಗಿ ರಾಜೀನಾಮೆ ಕೊಡಬೇಕಾಯ್ತು ಪ್ರೊಫೆಸರ್ !
ಅವಿದ್ಯಾವಂತರು ಎಂಬ ಪದ ಕೇಳಿಸಿದರೆ ಸಾಕು, ಈ ಸರಕಾರದಲ್ಲಿರುವವರು ತಮ್ಮ ಹೆಗಲು ಮುಟ್ಟಿ ನೋಡಿಕೊಳ್ಳುವುದೇಕೆ?
ವಿದ್ಯಾವಂತರೆಂದರೆ ಅದಕ್ಕೆ ಈ ಪರಿ ದ್ವೇಷ ಏಕೆ ?. ನಿಜವಾದ ವಿಶ್ವವಿದ್ಯಾಲಯಗಳು, ಶೈಕ್ಷಣಿಕ ಸಂಸ್ಥೆಗಳು ಎಂದರೆ ಇವರಿಗೆ ಇಷ್ಟೊಂದು ಅಸಹಿಷ್ಣುತೆ ಏಕಿದೆ ?. ಕೊನೆಗೆ ಸುಳ್ಳು ಹಾಗು ದ್ವೇಷ ಹರಡುವ ವಾಟ್ಸ್ ಆಪ್ ಯುನಿವರ್ಸಿಟಿ ಮಾತ್ರ ಉಳೀಬೇಕು. ನಿಜವಾಗಿ ಶಿಕ್ಷಣ ಕೊಡುವ ವಿವಿಗಳು ಯಾವುದೂ ಇರಲೇಬಾರದು ಅನ್ನೋದು ಇವರ ಇರಾದೆಯೇ ?
ಈ ಗಂಭೀರ ಪ್ರಶ್ನೆಗಳನ್ನು ವಿವರವಾಗಿ ಚರ್ಚಿಸುವ ಮುಂಚೆ ಒಂದು ಸುದ್ದಿಯ ಬಗ್ಗೆ ನೋಡೋಣ. ಸುದ್ದಿ ಏನೆಂದರೆ, ಅನ್ಅಕಾಡೆಮಿ ಎಂಬ ಖ್ಯಾತ ಎಜುಟೆಕ್ ಪ್ಲಾಟ್ಫಾರ್ಮ್ ತನ್ನ ಶಿಕ್ಷಕರೊಬ್ಬರನ್ನು ಕೆಲಸದಿಂದ ತೆಗೆದುಹಾಕಿದೆ. ಆತ ಮಾಡಿರುವ ಮಹಾ ಅಪರಾಧ ಏನು ಗೊತ್ತೇ ? " ಇನ್ನು ಮುಂದೆ ವಿದ್ಯಾವಂತರಿಗೆ ಮತಹಾಕಿ" ಎಂದು ಆ ಶಿಕ್ಷಕ ತನ್ನ ವಿದ್ಯಾರ್ಥಿಗಳಿಗೆ ಹೇಳಿದ್ದರು. ಅಷ್ಟೇ, ಆತ ಕೆಲಸ ಕಳೆದುಕೊಳ್ಳುವುದಕ್ಕೆ ಕಾರಣವಾಗಿದೆ.
ಸ್ವಲ್ಪ ಗಮನಿಸಿ ನೋಡಿದರೆ ಗೊತ್ತಾಗುವ ಮರ್ಮವೇನೆಂದರೆ, ಇದಕ್ಕೊಂದು ರಾಜಕೀಯ ಸ್ವರೂಪವಿದೆ. ಶಿಕ್ಷಕ ನೇರವಾಗಿ ಬಿಜೆಪಿಯನ್ನು ಎದುರು ಹಾಕಿಕೊಂಡರು ಮತ್ತು ಅವರು ಕೆಲಸದಲ್ಲಿದ್ದ ಅನ್ಅಕಾಡೆಮಿ ಸಂಸ್ಥೆಯ ಸಂಸ್ಥಾಪಕರು ಬಿಜೆಪಿ ಭಕ್ತಪಡೆಯ ಭಾಗವೇ ಆಗಿರುವವರು.
ಮೊದಲು, ವಿವಾದವೇನು ಎಂಬುದನ್ನು ಸ್ವಲ್ಪ ವಿವರವಾಗಿ ಗಮನಿಸೋಣ. ಅನ್ಅಕಾಡೆಮಿಯಿಂದ ಈಗ ವಜಾಗೊಂಡಿರುವ ಶಿಕ್ಷಕ ಕರಣ್ ಸಾಂಗ್ವಾನ್. ಕೆಲ ದಿನಗಳ ಹಿಂದೆ ಅವರು, ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿದ್ದಾಗ ಪ್ರಾಸಂಗಿಕವಾಗಿ, " ಇನ್ನು ಮುಂದಾದರೂ ವಿದ್ಯಾವಂತ ಅಭ್ಯರ್ಥಿಗಳಿಗೆ ಮತಹಾಕಿ" ಎಂದು ಕೇಳಿಕೊಂಡಿದ್ದರು.
ಭಾರತೀಯ ದಂಡ ಸಂಹಿತೆ(ಐಪಿಸಿ), ಅಪರಾಧ ದಂಡ ಸಂಹಿತಾ ಪ್ರಕ್ರಿಯೆ(ಸಿಆರ್ಪಿಸಿ) ಹಾಗೂ ಇಂಡಿಯನ್ ಎವಿಡೆನ್ಸ್ ಆಕ್ಟ್ ಬದಲಾಗಿ ಹೊಸ ಕಾನೂನುಗಳನ್ನು ಜಾರಿಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಂಡಿಸಿದ ಮೂರು ಮಸೂದೆಗಳ ವಿಚಾರವಾಗಿ ಶಿಕ್ಷಕ ಕರಣ್ ಸಾಂಗ್ವಾನ್ ಚರ್ಚಿಸುತ್ತಿದ್ದರು.
ಅದರ ಬಗ್ಗೆ ಹೇಳುತ್ತ, "ಕ್ರಿಮಿನಲ್ ಕಾಯ್ದೆಗಳ ಬಗ್ಗೆ ತಾವು ಕಷ್ಟಪಟ್ಟು ಮಾಡಿಟ್ಟುಕೊಂಡಿದ್ದ ಟಿಪ್ಪಣಿಗಳೆಲ್ಲ ವ್ಯರ್ಥವಾದವು. ನನಗೆ ನಗಬೇಕೊ ಅಳಬೇಕೊ ಅರ್ಥವಾಗುತ್ತಿಲ್ಲ" ಎಂದು ಕಮೆಂಟ್ ಮಾಡಿದ್ದಾರೆ. "ಇನ್ನು ಮುಂದಾದರೂ ವಿದ್ಯಾವಂತರಿಗೆ, ವಿಷಯಗಳನ್ನು ಅರ್ಥ ಮಾಡಿಕೊಳ್ಳಬಲ್ಲವರಿಗೆ ಮತ ಹಾಕಿ. ಬರೀ ಹೆಸರು ಬದಲಿಸುವುದಷ್ಟೇ ಗೊತ್ತಿರುವವರನ್ನು ಆರಿಸಬೇಡಿ" ಎಂದಿದ್ದಾರೆ ಕರಣ್ ಸಾಂಗ್ವಾನ್.
ಬಿಜೆಪಿ ಮಂದಿ ಉರಿದುಬೀಳುವುದಕ್ಕೆ ಇಷ್ಟು ಸಾಕಾಗಿತ್ತು. ಇದಕ್ಕಿಂತ ಹೆಚ್ಚಾಗಿ, ಈ ಅನ್ಅಕಾಡೆಮಿ ಸಂಸ್ಥಾಪಕರು ಕೂಡ ಅದೇ ವಂದಿಮಾಗಧ ಪಡೆಯವರೇ ಆಗಿರುವುದರಿಂದ, ತಕ್ಷಣ ಶಿಕ್ಷಕನ ತಲೆದಂಡವಾಗಿದೆ. ಕರಣ್ ಸಾಂಗ್ವಾನ್ ಅವರು ಒಪ್ಪಂದ ಉಲ್ಲಂಘಿಸಿದ್ದಾರೆ. ಹಾಗಾಗಿ ಅವರನ್ನು ವಜಾಗೊಳಿಸಲಾಗಿದೆ ಎಂದು ಅನ್ಅಕಾಡೆಮಿ ಸಹಸಂಸ್ಥಾಪಕ ರೋಮನ್ ಸೈನಿ ಹೇಳಿದ್ದಾರೆ.
"ನಮ್ಮದು ಗುಣಮಟ್ಟದ ಶಿಕ್ಷಣ ನೀಡಲು ಬದ್ಧವಾಗಿರುವ ವೇದಿಕೆ. ನಮ್ಮಲ್ಲಿ ಶಿಕ್ಷಕರಿಗೆ ಕಟ್ಟುನಿಟ್ಟಿನ ನಿಯಮಗಳಿವೆ. ತರಗತಿಯಲ್ಲಿ ವೈಯಕ್ತಿಕ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತಿಲ್ಲ. ಏಕೆಂದರೆ ಅವು ತಪ್ಪು ರೀತಿಯಲ್ಲಿ ಪ್ರಭಾವ ಬೀರಬಹುದು. ಪ್ರಸ್ತುತ ಪರಿಸ್ಥಿತಿಯಲ್ಲಿ, ಸಾಂಗ್ವಾನ್ ಅವರು ನಮ್ಮ ಅಕಾಡೆಮಿಯ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಈ ಕ್ರಮ ಕೈಗೊಂಡಿದ್ದೇವೆ " ಎಂಬುದು ರೋಮನ್ ಸೈನಿ ಸ್ಪಷ್ಟನೆ. ಈ ರೋಮನ್ ಸೈನಿಯಾಗಲಿ, ಅನ್ಅಕಾಡಮಿಯ ಸಂಸ್ಥಾಪಕ ಗೌರವ್ ಮುಂಜಲ್ ಆಗಲಿ ಏನು ಅನ್ನೋದನ್ನು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೇತ್ ಬಹಿರಂಗಪಡಿಸಿದ್ದಾರೆ.
ನೋಟು ರದ್ದತಿಯನ್ನು "ಭ್ರಷ್ಟರ ಮೇಲಿನ ಸರ್ಜಿಕಲ್ ಸ್ಟ್ರೈಕ್" ಎಂದು ರೋಮನ್ ಸೈನಿ ಎಂಬ ಈ ಮನುಷ್ಯ ಹಾಡಿಹೊಗಳಿದ್ದನ್ನು ಆತನ ಹಳೆಯ ಟ್ವೀಟ್ಗಳ ಸ್ಕ್ರೀನ್ ಶಾಟ್ಗಳನ್ನು ಪೋಸ್ಟ್ ಮಾಡುವ ಮೂಲಕ ಸುಪ್ರಿಯಾ ಬಯಲಿಗೆ ತಂದಿದ್ದಾರೆ. ಅಲ್ಲದೆ, ಅನ್ಅಕಾಡಮಿ ಸಂಸ್ಥಾಪಕ ಗೌರವ್ ಮುಂಜಲ್, ಪ್ರಧಾನಿ ನರೇಂದ್ರ ಮೋದಿ ಜೊತೆ ತೆಗೆದುಕೊಂಡಿದ್ದ ಸೆಲ್ಫಿಯನ್ನೂ ಸುಪ್ರಿಯಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ಧಾರೆ.
"ತಾವೇ ಯಾರದೋ ಒತ್ತಡದಲ್ಲಿ ದಯನೀಯ ಸ್ಥಿತಿಯಲ್ಲಿದ್ದು ಹೆದರುತ್ತಿರುವವರು ಅತಿರೇಕಗಳನ್ನು ಎದುರಿಸಬಲ್ಲ ಭವಿಷ್ಯದ ನಾಗರಿಕರನ್ನು ಹೇಗೆ ಬೆಳೆಸಿಯಾರು" ಎಂದು ಪ್ರಶ್ನಿಸಿರುವ ಸುಪ್ರಿಯಾ , "ಧೈರ್ಯ, ದಿಟ್ಟತನವಿಲ್ಲದ ಇಂಥ ಜನ ಶೈಕ್ಷಣಿಕ ಸಂಸ್ಥೆಯನ್ನು ನಡೆಸುತ್ತಿರೋದು ನೋಡಿದರೆ ದುಃಖವಾಗುತ್ತದೆ " ಎಂದಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ, ಶಿಕ್ಷಕರನ್ನು ವಜಾಗೊಳಿಸಿರುವ ಅನ್ಅಕಾಡೆಮಿ ಕ್ರಮಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. " ವಿದ್ಯಾವಂತ ವ್ಯಕ್ತಿಗೆ ಮತ ನೀಡುವಂತೆ ಜನರನ್ನು ಕೇಳುವುದು ಅಪರಾಧವೇ " ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. "ಯಾರಾದರೂ ಅನಕ್ಷರಸ್ಥರಾಗಿದ್ದರೆ, ವೈಯಕ್ತಿಕವಾಗಿ ನಾನು ಅವರನ್ನು ಗೌರವಿಸುತ್ತೇನೆ. ಆದರೆ ಸಾರ್ವಜನಿಕ ಪ್ರತಿನಿಧಿಗಳು ಅನಕ್ಷರಸ್ಥರಾಗಿರಲು ಸಾಧ್ಯವಿಲ್ಲ. ಇದು ವಿಜ್ಞಾನ ಮತ್ತು ತಂತ್ರಜ್ಞಾನದ ಯುಗ. ಅನಕ್ಷರಸ್ಥ ಸಾರ್ವಜನಿಕ ಪ್ರತಿನಿಧಿಗಳು 21ನೇ ಶತಮಾನದ ಆಧುನಿಕ ಭಾರತವನ್ನು ಎಂದಿಗೂ ನಿರ್ಮಿಸಲಾರರು" ಎಂದು ಕೇಜ್ರಿವಾಲ್ ಎಕ್ಸ್ನಲ್ಲಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಬಹಳ ಚರ್ಚೆಯಾಗುತ್ತಿದೆ. ಕೆಲವರು, ಶಿಕ್ಷಣದ ನೆಪದಲ್ಲಿ ಸಾಂಗ್ವಾನ್ ರಾಜಕೀಯ ಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರೆ, ಬಿಜೆಪಿ ಕಡೆಯ ಕೆಲವರು ಮೋದಿ ವಿರೋಧಿ ಅಜೆಂಡ ಇದಾಗಿದೆ ಎಂದು ಆರೋಪಿಸಿದ್ದಾರೆ. ಸಾಂಗ್ವಾನ್ ಯಾರ ಹೆಸರನ್ನೂ ಹೇಳಿರಲಿಲ್ಲ. ಯಾವುದೇ ಪಕ್ಷವನ್ನೂ ಉಲ್ಲೇಖಿಸಿರಲಿಲ್ಲ. ಆದರೂ ಅವರ ಹೇಳಿಕೆ ಮೋದಿ ವಿರುದ್ಧವೇ ಆಗಿದೆ ಎಂದು ಬಿಜೆಪಿಯವರು ಅಂದುಕೊಂಡಿರುವ ಹಾಗಿದೆ ಎಂಬ ಟೀಕೆಗಳೂ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿವೆ.
ಹೀಗಾಗಿ, ಸಾಂಗ್ವಾನ್ ಅವರನ್ನು ವಜಾಗೊಳಿಸುವಂತೆ ಬಿಜೆಪಿ ನಾಯಕರು ಹೇರಿದ ಒತ್ತಡಕ್ಕೆ ಅನ್ಅಕಾಡೆಮಿ ಮಣಿದಿದೆ ಎಂದು ಹೇಳಲಾಗುತ್ತಿದೆ.
ಇದೆಲ್ಲದರ ನಡುವೆ, ತಮ್ಮ ಕುರಿತ ವಿವಾದಕ್ಕೆ ಪ್ರತಿಕ್ರಿಯಿಸಿರುವ ಸಾಂಗ್ವಾನ್, ಈ ವಿವಾದ ಕುರಿತು ಪೂರ್ತಿ ವಿವರಗಳನ್ನು ಇವತ್ತು ರಾತ್ರಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.
ಕಳೆದ ಕೆಲ ದಿನಗಳಿಂದ, ನನ್ನನ್ನು ವಿವಾದದಲ್ಲಿ ಸಿಲುಕಿಸಿರುವ ವೀಡಿಯೊ ವೈರಲ್ ಆಗಿದೆ. ಆ ವಿವಾದದಿಂದಾಗಿ, ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ನನ್ನ ಹಲವಾರು ವಿದ್ಯಾರ್ಥಿಗಳು ತೊಂದರೆ ಪಡುವಂತಾಗಿದೆ. ಅವರ ಜೊತೆ ನಾನು ಕೂಡ ಇದರ ಪರಿಣಾಮ ಎದುರಿಸಬೇಕಾಗಿದೆ ಎಂದಿದ್ಧಾರೆ.
ಕರಣ್ ಸಾಂಗ್ವಾನ್ ಬಗ್ಗೆ ಕೆಲ ವಿವರಗಳನ್ನು ನೋಡುವುದಾದರೆ, ಅನ್ಅಕಾಡೆಮಿಯಲ್ಲಿನ ಪ್ರೊಫೈಲ್ ಪ್ರಕಾರ, ಅವರು ಶಿಮ್ಲಾದ ರಾಷ್ಟ್ರೀಯ ಕಾನೂನು ವಿವಿಯಲ್ಲಿ ಓದಿದವರು. ಹಿಸಾರ್‌ನ ಸಿ.ಆರ್. ಕಾನೂನು ಕಾಲೇಜಿನಲ್ಲಿ ಒಂದು ವರ್ಷ ಕೆಲಸ ಮಾಡಿದ್ದರು. ಫೆಬ್ರವರಿ 2020ರಿಂದ ಅನ್ಅಕಾಡೆಮಿಯಲ್ಲಿ ಶಿಕ್ಷಕರಾಗಿದ್ದರು ಮತ್ತು ಅಲ್ಲಿ ಅವರಿಗೆ 14,000 ಫಾಲೋವರ್ಸ್ ಇದ್ದಾರೆ. ಲೀಗಲ್ ಪಾಠಶಾಲಾ ಎಂಬ ಯೂಟ್ಯೂಬ್ ಚಾನೆಲ್ಲನ್ನೂ ಅವರು ನಡೆಸುತ್ತಿದ್ದು, 45,000 ಚಂದಾದಾರರಿದ್ದಾರೆ. ಕ್ರಿಮಿನಲ್ ಕಾನೂನುಗಳಲ್ಲಿ LL.M ಪದವೀಧರರಾಗಿರುವ ಸಾಂಗ್ವಾನ್, ನ್ಯಾಯಾಂಗ ಪ್ರವೇಶ ಪರೀಕ್ಷೆಗಳಿಗೆ ಸಂಬಂಧಿಸಿದ ಹಲವಾರು ಕೋರ್ಸ್‌ಗಳನ್ನು ಕಲಿಸುತ್ತಾರೆ.
ಈಗ, ವಿವಾದದ ಕೇಂದ್ರಬಿಂದುವಾಗಿರುವ ಸಾಂಗ್ವಾನ್ ಕೆಲಸ ಕಳೆದುಕೊಂಡಿದ್ದಾರೆ. ಅಷ್ಟರ ಮಟ್ಟಿಗೆ, ಇದು ಸದ್ಯಕ್ಕೆ, ಸತ್ಯವನ್ನು ಮತ್ತು ಟೀಕೆಗಳನ್ನು ಎದುರಿಸಲಾದವರ ಗೆಲುವು ಎಂದು ಹೇಳಬಹುದು. ಒಬ್ಬ ಶಿಕ್ಷಕನಾಗಿ ಅವರು ತಮ್ಮ ಕಷ್ಟವನ್ನು ಹೇಳಿಕೊಳ್ಳುತ್ತ, ಅವಿದ್ಯಾವಂತರಿಗೆ ಮತ ಹಾಕಬೇಡಿ ಎಂದರಾದರೂ, ಅದು ಬೀರಿರುವ ಪರಿಣಾಮಗಳು ಮಾತ್ರ ರಾಜಕೀಯ ಸ್ವರೂಪದವಾಗಿವೆ.
ಇನ್ನೊಂದೆಡೆ, ಈ ಮಾತುಗಳನ್ನು ಅವರು ಹೇಳಿದ್ದು ಹೊಸ ಕಾನೂನುಗಳಿಗೆ ಸಂಬಂಧಿಸಿದ ಮಸೂದೆಗಳ ಬಗ್ಗೆ ಚರ್ಚಿಸುತ್ತಿದ್ದಾಗ. ಅಲ್ಲಿಗೆ, ಬಿಜೆಪಿ ನಂ,1 ಮತ್ತು ನಂ.2 ನಾಯಕರನ್ನೇ ಗುರಿಯಾಗಿಸಿ ಮಾತನಾಡಿದರು ಎಂದು ಬಿಜೆಪಿಯವರು ಉರಿದುಬೀಳುವ ಹಾಗಾಯಿತು. ಕೆಲ ದಿನಗಳ ಹಿಂದಷ್ಟೇ ಮೋದಿ ವಿದ್ಯಾರ್ಹತೆ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿತ್ತು. ಅದರ ಬಿಸಿ ಇರುವಾಗಲೇ, ಇನ್ನು ಮುಂದಾದರೂ ವಿದ್ಯಾವಂತರಿಗೆ ಮತ ಹಾಕುವಂತೆ ಸಾಂಗ್ವಾನ್ ಹೇಳಿದ್ದು ಬಿಜೆಪಿಯ ಗಾಯಕ್ಕೆ ಉಪ್ಪು ಸವರಿದಂತಾಯಿತೆ ?
ಇದಲ್ಲದೆ, ಕಳೆದೊಂಬತ್ತು ವರ್ಷಗಳಲ್ಲಿ ಬಿಜೆಪಿ ಸರ್ಕಾರ ನಿಯಮಿತವಾಗಿ ಮಾಡುತ್ತ ಬಂದಿರುವುದು ಹೆಸರುಗಳನ್ನು ಬದಲಿಸುವ ಕೆಲಸವನ್ನು ಮಾತ್ರ. ಸ್ಥಳಗಳ ಹೆಸರು, ಸಂಸ್ಥೆಗಳ ಹೆಸರು, ಯೋಜನೆಗಳ ಹೆಸರು, ಸ್ಟೇಡಿಯಂನ ಹೆಸರು, ಕಡೆಗೆ ತಾನಿಟ್ಟ ಹೆಸರನ್ನೂ ಬದಲಿಸಿ ಬದಲಿಸಿ ಪ್ರಚಾರ ಪಡೆಯುವುದು ಈ ಸರ್ಕಾರಕ್ಕೊಂದು ಚಾಳಿಯೇ ಆಗಿಬಿಟ್ಟಿದೆ.
ಈಗ ಮೂರು ಕಾನೂನುಗಳನ್ನು ವಸಾಹತು ಕಾಲದವು ಎನ್ನುತ್ತಾ ಬದಲಾವಣೆಗೆ ಹೊರಟಿರುವ ಸರ್ಕಾರ, ದೇಶದ್ರೋಹ ಎಂಬುದನ್ನು ಅಪರಾಧಗಳ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಹೇಳಿದ್ದರೂ, ಅದನ್ನು ಇನ್ನೊಂದು ಹೆಸರು ಮತ್ತು ಇನ್ನೊಂದು ರೂಪದಲ್ಲಿ ಸಂಹಿತೆಯಲ್ಲಿ ಸೇರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಮೇಲ್ನೋಟಕ್ಕೆ ಕಾನೂನುಗಳ ಹೆಸರು ಬದಲಿಸುವ ಕೆಲಸವಂತೂ ಆಗಿದೆ. ಇದಕ್ಕಾಗಿಯೇ ಸಾಂಗ್ವಾನ್, ಕೇವಲ ಹೆಸರು ಬದಲಿಸುವುದಷ್ಟೇ ಗೊತ್ತಿರುವವರನ್ನು ಆರಿಸುವುದು ಬೇಡ ಎಂದಿದ್ದು. ಯಥಾಪ್ರಕಾರ, ಭಿನ್ನ ದನಿಗಳನ್ನು ನಿಗ್ರಹಿಸುವ ಕೆಲಸವೊಂದು ಸಾಂಗ್ವಾನ್ ವಿಚಾರದಲ್ಲಿಯೂ ನಡೆದಿದೆ. ಬಾಗಿಲು ಬೇರೆಯಾದರೂ, ನಿಗ್ರಹಿಸುವ ಯತ್ನದ ಮೂಲ ಮಾತ್ರ ಅದೇ.
ಇದೇ ಸಂದರ್ಭದಲ್ಲಿ ಅಶೋಕ ವಿಶ್ವವಿದ್ಯಾಲಯದಲ್ಲೂ ಒಂದು ವಿವಾದ ಭಾರೀ ಸುದ್ದಿಯಾಗುತ್ತಿದೆ. ಅಲ್ಲಿನ ಅರ್ಥಶಾಸ್ತ್ರದ ಸಹಾಯಕ ಅಧ್ಯಾಪಕ ಸಭ್ಯಸಾಚಿ ದಾಸ್ ಅವರು ಒಂದು ಅಧ್ಯಯನ ಪ್ರಬಂಧ ಮಂಡಿಸಿದ್ದರು. ಕಳೆದ ಲೋಕಸಭಾ ಚುನಾವಣೆಗೆ ಸಂಬಂಧಿತ ಮಾಹಿತಿ ಹಾಗು ಅಂಕಿ ಅಂಶಗಳನ್ನು ಆಳವಾಗಿ ಅಧ್ಯಯನ ಮಾಡಿ ಸಿದ್ಧಪಡಿಸಿರುವ ಪ್ರಬಂಧ ಅದು. ಅದರಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಚುನಾವಣೆಯನ್ನು ತಿರುಚಲಾಗಿರುವ ಸಾಧ್ಯತೆಗಳ ಬಗ್ಗೆ ಹೇಳಲಾಗಿತ್ತು.
ಅಷ್ಟೇ ಆಗಿದ್ದು. ಕೇಂದ್ರ ಸರಕಾರ ಹಾಗು ಬಿಜೆಪಿ ಅಶೋಕ ವಿವಿ ಮೇಲೆ ಮುಗಿಬಿತ್ತು. ಆ ವಿವಿಯ ಆಡಳಿತ ಮಂಡಳಿ ಮೇಲೆ ಭಾರೀ ಒತ್ತಡ ಹೇರಲಾಯಿತು. ಕೊನೆಗೆ ಸಭ್ಯಸಾಚಿ ದಾಸ್ ಸ್ವತಃ ರಾಜೀನಾಮೆ ಕೊಡುವ ಹಾಗೆ ಮಾಡಲಾಯಿತು. ಅದನ್ನು ಕೂಡಲೇ ವಿವಿ ಅಂಗೀಕಾರವೂ ಮಾಡಿ ಬಿಟ್ಟಿತು.
ಆದರೆ ಯಾವಾಗಲೂ ಇಂತಹ ವಿಷಯಗಳಲ್ಲಿ ಮೌನವಾಗಿ ಆಟ ನೋಡುವ ಅಧ್ಯಾಪಕ ವೃಂದ ಈ ಬಾರಿ ಏಕೋ ಏನೋ ... ಇದು ತೀರಾ ಅತಿಯಾಯಿತು ಎಂದು ಸಿಡಿದೆದ್ದಿದೆ. ಸಭ್ಯಸಾಚಿ ರಾಜೀನಾಮೆ ಬೆನ್ನಿಗೆ ಅಲ್ಲಿನ ಪ್ರೊಫೆಸರ್ ಗಳು ಒಬ್ಬೊಬ್ಬರೇ ಬಂಡಾಯ ಸಾರಿದ್ದಾರೆ. ಅಧ್ಯಾಪಕರಿಗೆ ಇಷ್ಟೂ ಸ್ವಾತಂತ್ರ್ಯ ಇಲ್ಲದಿದ್ದರೆ ಇಲ್ಲಿ ಬೋಧನೆ ಮಾಡೋದು ಅಸಾಧ್ಯ, ಸಭ್ಯಸಾಚಿ ಅವರನ್ನು ಕೂಡಲೇ ಮತ್ತೆ ಸೇವೆಗೆ ವಾಪಸ್ ಕರೀಬೇಕು, ಇಲ್ಲದಿದ್ದರೆ ನಾವೂ ರಾಜೀನಾಮೆ ಕೊಡ್ತೀವಿ ಎಂದು ವಿವಿ ಆಡಳಿತ ಮಂಡಳಿಗೆ ತಾಕೀತು ಮಾಡಿದ್ದಾರೆ. ಸಭ್ಯಸಾಚಿ ಅವರನ್ನು ವಾಪಸ್ ಕರೆಯದಿದ್ದರೆ ನಾವೂ ಬರೋದಿಲ್ಲ ಎಂದು ದೊಡ್ಡ ಸಂಖ್ಯೆಯ ಪ್ರಾಧ್ಯಾಪಕರು ಬಂಡೆದ್ದಿದ್ದಾರೆ. ಇದು ಅನಿರೀಕ್ಷಿತ ಆದರೆ ಸ್ವಾಗತಾರ್ಹ ಬೆಳವಣಿಗೆ.
ಅತ್ತ ಕೇವಲ ಅಭಿಪ್ರಾಯ ಹೇಳಿದ್ದಕ್ಕೆ ಶಿಕ್ಷಕನನ್ನು ವಜಾ ಮಾಡಿರುವ ಅನ್ ಅಕಾಡೆಮಿ ವಿರುದ್ಧವೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಯಾವಾಗಲೂ ದ್ವೇಷ, ಅಸಹಿಷ್ಣುತೆ ಕಾರುವ ಟ್ರೋಲ್ ಗಳೇ ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುತ್ತಾರೆ, ಎಲ್ಲೆಡೆ ಅವರದ್ದೇ ಆಟ. ಆದರೆ ಈ ಬಾರಿ ಅದಕ್ಕೆ ಉಲ್ಟಾ ಬೆಳವಣಿಗೆಯಾಗಿದೆ. ಕರಣ್ ಸಾಂಗ್ವಾನ್ ವಜಾ ವಿರುದ್ಧ ಭಾರೀ ಪ್ರತಿಭಟನೆ ವ್ಯಕ್ತವಾಗಿದೆ. ಅವರನ್ನು ಮತ್ತೆ ಸೇವೆಗೆ ವಾಪಸ್ ಕರೆಯದಿದ್ದರೆ ನಾವು ಅನ್ ಅಕಾಡೆಮಿ ಸೇವೆಯನ್ನು ಬಿಡುತ್ತೇವೆ ಎಂದು ಜನರು ಹೇಳುತ್ತಿದ್ದಾರೆ. ಒಂದು ವರದಿಯ ಪ್ರಕಾರ ಈಗಾಗಲೇ ಅನ್ ಅಕಾಡೆಮಿಯ ಆ್ಯಪ್ ಅನ್ನು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಪ್ರತಿಭಟನೆಯ ರೂಪದಲ್ಲಿ ಅನ್ ಇನ್ಸ್ಟಾಲ್ ಮಾಡಿದ್ದಾರೆ.
ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆ ಅಂದ್ರೆ ಐಡಿಯಾಗಳ, ಅಭಿಪ್ರಾಯಗಳ, ಚಿಂತನೆಗಳ ಮೂಲ. ಸಂವಾದ, ವಾಗ್ವಾದ, ಟೀಕೆ ಟಿಪ್ಪಣಿ, ಚರ್ಚೆ ಅದರ ಪ್ರಾಥಮಿಕ ಅಂಶ. ಅದಿಲ್ಲದಿದ್ದರೆ ವಿವಿ ಎಂಬುದಕ್ಕೆ ಅರ್ಥವೇ ಇಲ್ಲ. ಆದರೆ ಈಗಿರುವ ಸರಕಾರ ಹಾಗು ಅದನ್ನು ನಡೆಸುವವರಿಗೂ ಸಂವಾದ, ಟೀಕೆ ಟಿಪ್ಪಣಿಗಳಿಗೂ ದೂರ ದೂರದ ಸಂಬಂಧವೂ ಇಲ್ಲ. ಅವರಿಗೆ ಆರೋಗ್ಯಕರ ಚರ್ಚೆ, ಅಭಿಪ್ರಾಯ ವಿನಿಮಯ, ಮುಕ್ತ ಸಂವಾದ - ಇವುಗಳೆಂದರೆ ಭಾರೀ ಅಲರ್ಜಿ. ಅವರಿಗೆ ಏನಿದ್ದರೂ ಸುಪ್ರೀಂ ಲೀಡರ್ ಬಂದು ತಮ್ಮ ಮನ್ ಕೀ ಬಾತ್ ಹೇಳುತ್ತಾರೆ. ಅದಕ್ಕೆ ಎಲ್ಲರೂ ತಲೆಯಾಡಿಸಬೇಕು. ಅಷ್ಟೇ. ಅವರಿಗೆ ಇಷ್ಟವಾಗೋದು ವಾಟ್ಸ್ ಆಪ್ ಯುನಿವರ್ಸಿಟಿ ಮಾತ್ರ. ಅಲ್ಲೇನಿದ್ದರೂ ಅವರದೇ ಆಟ.
ಹಾಗಾಗಿ ಇಲ್ಲೀಗ ಮುಕ್ತ ಅಭಿಪ್ರಾಯ ಮಂಡನೆಗೂ ಸಂಚಕಾರ ಬಂದಿರುವ ಪರಿಸ್ಥಿತಿ ಉಂಟಾಗಿದೆ. ಈ ದೇಶದಲ್ಲಿ ರಾಜಕಾರಣ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ನಡುವಿನ ತಿಕ್ಕಾಟ ಮುಗಿಯುತ್ತಿಲ್ಲ. ಯಾಕೆಂದರೆ, ಅಧಿಕಾರಸ್ಥರಿಗೆ ಆಲಿಸುವ ವ್ಯವಧಾನವೂ ಇಲ್ಲ. ಟೀಕೆಗಳನ್ನು ಸ್ವೀಕರಿಸುವ ಸಹಿಷ್ಣುತೆ ಅಥವಾ ಸ್ಥೈರ್ಯವೂ ಇಲ್ಲ. ಟೀಕೆಗಳ ಎದುರು, ಸತ್ಯದ ಎದುರು ಬೆಚ್ಚಿಬೀಳುವ ಇವರಿಗೆ, ತಮ್ಮೆದುರು ನಿಲ್ಲುವವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದು ಮಾತ್ರ ಗೊತ್ತು. ಪ್ರತೀಕಾರವೇ ರಾಜಕಾರಣವಲ್ಲ, ಮತ್ತದು ಹೆಚ್ಚು ಕಾಲದ್ದೂ ಅಲ್ಲ ಎನ್ನುವುದು, ಅಧಿಕಾರದ ಅಮಲಿನಲ್ಲಿ ಇರುವವರಿಗೆ ಅರ್ಥವಾಗುವುದೂ ಸಾಧ್ಯವಿಲ್ಲ.







