ಆಂಧ್ರ ಮೂಲದ ಟೆಲಿಕಾಂ ಕಂಪೆನಿಯಿಂದ ವಿಧಾನ ಸೌಧ ಟೆರೇಸ್ ಅನಧಿಕೃತ ಬಳಕೆ

ಸಾಂದರ್ಭಿಕ ಚಿತ್ರ
ಬೆಂಗಳೂರು : ಟೆಲಿಕಾಂ ಮೂಲಸೌಕರ್ಯ ಕಂಪೆನಿಗಳಲ್ಲಿ ಖ್ಯಾತಿ ಹೊಂದಿರುವ ಆಂಧ್ರ ಪ್ರದೇಶ ಮೂಲದ ವಾಲ್ಗೋ ಇನ್ಫ್ರಾ ಕಂಪೆನಿಯು ಕರ್ನಾಟಕದ ವಿಧಾನಸೌಧ ಟೆರೇಸ್ಅನ್ನು ಕಳೆದ 3 ವರ್ಷಗಳಿಂದಲೂ ಅನಧಿಕೃತವಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ಇದೀಗ ಬಹಿರಂಗವಾಗಿದೆ. ಅಲ್ಲದೇ ಈ ಕಂಪೆನಿಯು ನಿಯಮ ಉಲ್ಲಂಘನೆ ಮಾಡಿದ್ದರೂ ಸಹ ಸರಕಾರವು ಇದುವರೆಗೂ ಒಂದೇ ಒಂದು ಕ್ರಮವನ್ನೂ ಜರುಗಿಸಿಲ್ಲ.
ಕರ್ನಾಟಕ, ಆಂಧ್ರ, ತೆಲಂಗಾಣದ ಮುಖ್ಯಮಂತ್ರಿಗಳು ಸೇರಿದಂತೆ ದೇಶದ ಹಲವು ರಾಜಕಾರಣಿಗಳೊಂದಿಗೆ ಅತ್ಯಂತ ನಿಕಟ ಸಂಪರ್ಕ ಹೊಂದಿರುವ ಶ್ರೀಧರರಾವ್ ಅವರು ಮುಖ್ಯಸ್ಥರಾಗಿರುವ ಈ ಕಂಪೆನಿಯು ವಿಧಾನಸೌಧ ಟೆರೇಸ್ಅನ್ನು ಅನಧಿಕೃತವಾಗಿ ಬಳಸಿಕೊಂಡಿದ್ದರೂ ಲೋಕೋಪಯೋಗಿ ಇಲಾಖೆಯು ಯಾವುದೇ ಕ್ರಮವಹಿಸಿಲ್ಲ.
ಇದಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಕಾರ್ಯದರ್ಶಿಯು ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ಗೆ 2026ರ ಎಪ್ರಿಲ್ 15ರಂದೇ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು "the-file.in"ಗೆ ಲಭ್ಯವಾಗಿದೆ.
ವಿಧಾನಸೌಧದಲ್ಲಿ ಸರಕಾರಕ್ಕೆ ಯಾವುದೇ ಶುಲ್ಕ ವಿಧಿಸದೆ 5G ಸಿಗ್ನಲ್-ಬೂಸ್ಟಿಂಗ್ ಆಂಟೆನಾಗಳನ್ನು ಸ್ಥಾಪಿಸಿತ್ತು. ಇದರಿಂದಾಗಿ ಅಧಿಕಾರಿಗಳು ಮತ್ತು ಸಂದರ್ಶಕರಿಗೆ ಸಂವಹನ ಸುಧಾರಿಸಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೀಗ ಈ ಕಂಪೆನಿಯು ವಿಧಾನಸೌಧದ ಟೆರೇಸ್ ಮೇಲೆ ಮೊಬೈಲ್ ಅಳವಡಿಕೆ ಮಾಡಿದ್ದರೂ ಸಹ ಕರಾರು ಮಾಡಿಕೊಂಡಿಲ್ಲ.
ವಿಧಾನಸೌಧ ಟರೇಸ್ ಅನಧಿಕೃತ ಬಳಕೆ: ವಿಧಾನಸೌಧ ಆವರಣದಲ್ಲಿ ಮೊಬೈಲ್ ಸಿಗ್ನಲ್ ವ್ಯಾಪ್ತಿಯನ್ನು ಹೆಚ್ಚಿಸುವ ಸಂಬಂಧ ವಾಲ್ ಗೋ ಇನ್ಫ್ರಾ ಸಂಸ್ಥೆಯು ವಿಧಾನಸೌಧ ಟೆರೇಸ್ ಮೇಲೆ ಮೊಬೈಲ್ ಟವರ್ ಅಳವಡಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಸರಕಾರವು ಕೆಲವು ಸೂಚನೆಗಳನ್ನು ನೀಡಿತ್ತು. ಅಲ್ಲದೇ ಈ ಸಂಬಂಧ ಸೂಚನಾ ಪತ್ರವನ್ನೂ ನೀಡಿತ್ತು. ಇದಕ್ಕೆ ಸಂಬಂಧಿಸಿದಂತೆ ವಾಲ್ ಗೋ ಇನ್ಫ್ರಾ ಸಂಸ್ಥೆಯು ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ ಎಂಬುದು ಪತ್ರದಿಂದ ತಿಳಿದು ಬಂದಿದೆ.
3 ವರ್ಷಗಳಿಂದ ನೆಲಬಾಡಿಗೆಯೂ ಇಲ್ಲ: ವಿಧಾನಸೌಧದ ಟೆರೇಸ್ ಮೇಲೆ ಮೊಬೈಲ್ ಟವರ್ ಅಳವಡಿಸುವ ಮೂಲಕ ಈ ಕಂಪೆನಿಯು ವಿಧಾನಸೌಧ ಕಟ್ಟಡವನ್ನು ಬಳಸಿಕೊಂಡಿತ್ತು. ಸರಕಾರಿ ಕಟ್ಟಡವನ್ನು ಬಳಕೆ ಮಾಡಿಕೊಂಡಿರುವುದರಿಂದ ನಿಯಮಾನುಸಾರ ನೆಲ ಬಾಡಿಗೆಯನ್ನೂ ನೀಡಬೇಕು. ಆದರೆ ಈ ಕಂಪೆನಿಯು 3 ವರ್ಷಗಳಿಂದಲೂ ನೆಲಬಾಡಿಗೆಯನ್ನೇ ಪಾವತಿಸಿಲ್ಲ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಕಾರ್ಯದರ್ಶಿಯು ಬರೆದಿರುವ ಪತ್ರದಲ್ಲಿ ನೆಲಬಾಡಿಗೆಯ ಮೊತ್ತ ಎಷ್ಟೆಂದು ನಮೂದಿಸಿಲ್ಲ. ಹೀಗಾಗಿ ನೆಲಬಾಡಿಗೆಯ ಮೊತ್ತದ ಬಗ್ಗೆ ಖಚಿತ ಮಾಹಿತಿಯೂ ಇಲ್ಲವಾಗಿದೆ.
ಕರಾರು ಮಾಡಿಕೊಂಡಿಲ್ಲವೇ?: ವಾಲ್ಗೋ ಇನ್ಫ್ರಾ ಕಂಪೆನಿಯು ವಿಧಾನಸೌಧ ಟೆರೇಸ್ ಮೇಲೆ ಪ್ರಾಯೋಗಿಕವಾಗಿ ಅಳವಡಿಸಿರುವ ಟವರ್ಗೆ ಸಂಬಂಧಿಸಿದಂತೆ ಯಾವುದೇ ಕರಾರು ಮಾಡಿಕೊಂಡಿಲ್ಲ. ಬದಲಿಗೆ ಅನಧಿಕೃತವಾಗಿ ಬಳಕೆ ಮಾಡಿಕೊಂಡಿರುವುದು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಪತ್ರದಲ್ಲಿ ಹೇಳಿರುವುದು ತಿಳಿದು ಬಂದಿದೆ.
ಹೀಗಾಗಿ ವಿಧಾನಸೌಧ ಟೆರೇಸ್ ಮೇಲೆ ವಾಲ್ಗೋ ಇನ್ಫ್ರಾ ಕಂಪೆನಿಯು ಸಂಸ್ಥೆಯ ಮೂಲಕ ಅಳವಡಿಸಿರುವ ಮೊಬೈಲ್ ಟವರ್ಗಳನ್ನು ತೆರವುಗೊಳಿಸಬೇಕು,’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ಗೆ ನಿರ್ದೇಶಿಸಿರುವುದು ಪತ್ರದಿಂದ ಗೊತ್ತಾಗಿದೆ. ಆದರೆ 2023ರಿಂದಲೂ ನೆಲ ಬಾಡಿಗೆ ಪಾವತಿಸದೇ ಮೊಬೈಲ್ ಟವರ್ ಅಳವಡಿಸಿರುವ ಈ ಕಂಪೆನಿಯಿಂದ ನೆಲ ಬಾಡಿಗೆ ವಸೂಲಿ ಮಾಡಿದ ನಂತರ ತೆರವುಗೊಳಿಸಬೇಕು ಎಂದು ಪತ್ರದಲ್ಲಿ ಸೂಚಿಸಿಲ್ಲ.
► ಕಂಪೆನಿಯ ಹಿನ್ನೆಲೆ: ವಾಲ್ಗೋ ಇನ್ಫ್ರಾ ಕಂಪೆನಿಯು ಶ್ರೀಧರ್ ರಾವ್ ನೇತೃತ್ವದ ಪ್ರಮುಖ ಟೆಲಿಕಾಂ ಮೂಲಸೌಕರ್ಯ ಕಂಪೆನಿಯಾಗಿದೆ. ಕರ್ನಾಟಕದಲ್ಲಿ ವೊಡಾಫೋನ್ ಐಡಿಯಾದ (Vi) 5ಉ ಸೇವೆಗಳನ್ನು ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದು ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ಒದಗಿಸುತ್ತಿದೆ. ಮೈಸೂರು ವೈದ್ಯಕೀಯ ಕಾಲೇಜಿನಂತಹ ಪ್ರಮುಖ ಸ್ಥಳಗಳಲ್ಲಿ 5G ನೆಟ್ವರ್ಕ್ ಅನ್ನು ಕಂಪೆನಿ ಸ್ಥಾಪಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಲ್ಗೋ ಇನ್ಫ್ರಾ ಸಂಸ್ಥೆಯು ಮೈಸೂರು ವೈದ್ಯಕೀಯ ಕಾಲೇಜಿನ ಶತಮಾನೋತ್ಸವದ ಅಂಗವಾಗಿ ವಾಲ್ಗೋ ಇನ್ಫ್ರಾ ಸಂಸ್ಥೆಯ 5G ನೆಟ್ವರ್ಕ್ ಮತ್ತು ಡೇಟಾ ಸೇವೆಗಳನ್ನು ಉದ್ಘಾಟಿಸಿದ್ದರು.
===============================================================
► ಷರತ್ತು ಉಲ್ಲಂಘನೆ: ವಿಧಾನಸೌಧ ಕಟ್ಟಡದ ಮೇಲೆ ಮೊಬೈಲ್ ಟವರ್ ಅಳವಡಿಸುವ ಸಂಬಂಧ ಈ ಕಂಪೆನಿಗೆ ಸರಕಾರವು ಹಲವು ಷರತ್ತುಗಳನ್ನು ವಿಧಿಸಿತ್ತು. ಈ ಷರತ್ತುಗಳ ಬಗ್ಗೆ ಸರಕಾರವು ಸೂಚನಾ ಪತ್ರಗಳನ್ನು ಕಳುಹಿಸಿತ್ತು. ಆದರೆ ಈ ಯಾವ ಸೂಚನೆ ಪತ್ರಗಳಿಗೆ ಕಂಪೆನಿಯು ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಹೀಗಾಗಿ ಷರತ್ತುಗಳ ಉಲ್ಲಂಘನೆಯಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಕಾರ್ಯದರ್ಶಿಯು ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ಗೆ ಬರೆದಿರುವ ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.






