ಅನುದಾನರಹಿತ ಖಾಸಗಿ ಶಾಲೆಗಳ ಅನಗತ್ಯ ವಿಸ್ತರಣೆ : ರಾಜ್ಯ ಶಿಕ್ಷಣ ನೀತಿ ಆಯೋಗ ಕಳವಳ

ಸಾಂದರ್ಭಿಕ ಚಿತ್ರ Photo: chatgpt
ಬೆಂಗಳೂರು : ಅನುದಾನರಹಿತ ಖಾಸಗಿ ಶಾಲೆಗಳ ಅನಗತ್ಯ ವಿಸ್ತರಣೆಯಾಗುತ್ತಿರುವುದಕ್ಕೆ ರಾಜ್ಯ ಶಿಕ್ಷಣ ನೀತಿ ಆಯೋಗವು ಗಂಭೀರವಾಗಿ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ ಈ ವಿಚಾರದಲ್ಲಿ ರಾಜ್ಯವು ತನ್ನ ಸಾಂವಿಧಾನಿಕ ಬಾಧ್ಯತೆಯಿಂದ ತಪ್ಪಿಸಿಕೊಳ್ಳುತ್ತಿದೆ. ಪ್ರಸ್ತುತ ಶಾಲಾ ವ್ಯವಸ್ಥೆಯಲ್ಲಿನ ಖಾಸಗೀಕರಣದ ಏರಿಕೆ ಪ್ರವೃತ್ತಿಯನ್ನು ಹಿಮ್ಮೆಟ್ಟಿಸಬೇಕು. ರಾಜ್ಯವು ಎಲ್ಲಾ ಮಕ್ಕಳಿಗೆ ಸಮಾನ ಗುಣಮಟ್ಟದ ಉಚಿತ ಮತ್ತು ಕಡ್ಡಾಯ ಶಾಲಾ ಶಿಕ್ಷಣವನ್ನು ಖಾತ್ರಿ ಪಡಿಸಬೇಕು ಎಂದು ಸಲಹೆ ನೀಡಿದೆ.
ಅದಷ್ಟೇ ಅಲ್ಲ ಅನುದಾನರಹಿತವಾಗಿರುವ ಹಲವು ಶಾಲೆಗಳಲ್ಲಿ ಶಿಕ್ಷಕರು ಯಾವುದೇ ಉದ್ಯೋಗ ಭದ್ರತೆ ಇಲ್ಲದೇ ಕಡಿಮೆ ಸಂಬಳಕ್ಕೆ ಕೆಲಸ ಮಾಡಬೇಕಾಗಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಅನುದಾನರಹಿತ ಶಾಲೆಗಳನ್ನು ಕ್ರಮೇಣ ಖಾಸಗಿ ಅನುದಾನಿತ ಸಂಸ್ಥೆಗಳಾಗಿ ಪರಿವರ್ತಿಸಬೇಕು ಎಂದು ಸಲಹೆ ನೀಡಿದೆ.
ಸುಖದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗವು ಸರಕಾರಕ್ಕೆ ವರದಿ ಸಲ್ಲಿಸಿದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ, ಸಾರ್ವತ್ರಿಕ ಶಿಕ್ಷಣದ ವಿವಿಧ ಆಯಾಮಗಳ ಕುರಿತು ಆಯೋಗವು ಚರ್ಚಿಸಿದೆ. ಈ ವರದಿಯನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಲ್ಲಿಸಿತ್ತು. ಈ ವರದಿ ಆಧರಿಸಿ ಅಭಿಪ್ರಾಯ ಕೋರಿದ್ದ ಸಿದ್ದರಾಮಯ್ಯ ಅವರು ಸಚಿವರಿಗೆ ವರದಿಗಳನ್ನು ಕಳಿಸಿದ್ದರು.
ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೂತನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರಾದರೂ ಆಯೋಗವು ನೀಡಿರುವ ಈ ವರದಿಯತ್ತ ಇನ್ನೂ ಕಣ್ಣಾಡಿಸಿಲ್ಲ ಎಂದು ತಿಳಿದು ಬಂದಿದೆ. ಈ ವರದಿಯ ಪ್ರತಿಯು "the-file.in"ಗೆ ಲಭ್ಯವಾಗಿದೆ.
ಸಾಂವಿಧಾನಿಕ ಬದ್ಧತೆಗೆ ನೇರವಾಗಿ ತಡೆ: ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರದಿಂದ ಬೆಂಬಲವನ್ನು ಪಡೆಯುವುದು, ಭೂಮಿ ಪಡೆಯುವುದು, ಪರೀಕ್ಷೆಗಳನ್ನು ನಡೆಸುವುದು ಮತ್ತು ಪ್ರಮಾಣಪತ್ರಗಳನ್ನು ಪಡೆಯುವುದು ಸೇರಿದಂತೆ ಈ ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರದಿಂದ ಬೆಂಬಲವನ್ನು ಪಡೆದರೂ ಸಹ ಇವು ಸ್ಪಷ್ಟವಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಿಂದ ಹೊರಗುಳಿದಿವೆ. ಖಾಸಗಿ ಶಾಲೆಗಳ ಈ ಬದಲಾವಣೆಯ ಪರಿಣಾಮವು ಎಲ್ಲರಿಗೂ ಸಮಾನ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಸಾಂವಿಧಾನಿಕ ಬದ್ಧತೆಗೆ ನೇರವಾಗಿ ತಡೆಯೊಡ್ಡುತ್ತದೆ. ಖಾಸಗಿ ಶಿಕ್ಷಣ ಕ್ಷೇತ್ರದ ಈ ವೇಗದ ಬೆಳವಣಿಗೆ ಮತ್ತು ಇದರಿಂದ ಸೃಷ್ಟಿಯಾದ ಅಸಮಾನತೆಯು ವ್ಯವಸ್ಥೆಯನ್ನು ಕಣಣಿಗೆ ರಾಚುತ್ತಿದ್ದು ಸೂಕ್ತ ನೀತಿ ನಿರೂಪಣೆ ಮೂಲಕ ತುರ್ತು ಪ್ರತಿಕ್ರಿಯೆ ನೀಡುವ ಅಗತ್ಯವಿದೆ ಎಂದು ಆಯೋಗವು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ. ಸೈದ್ಧಾಂತಿಕ ಮಟ್ಟದಲ್ಲಿ ಶಾಲಾ ಶಿಕ್ಷಣದ ಸಾರ್ವಜನಿಕ ಹಿತದೃಷ್ಟಿಯ ಬಗ್ಗೆ ಸ್ಪಷ್ಟವಾದ ಒಮ್ಮತವಿದೆ. ಆದ್ದರಿಂದ ಶಾಲಾ ಶಿಕ್ಷಣದ ಹಕ್ಕನ್ನು ಮಾನ್ಯ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸಂವಿಧಾನವು 6ರಿಂದ 14 ವರ್ಷ ವಯೋಮಾನದ ಮಕ್ಕಳಿಗೆ ಶಿಕ್ಷಣವನ್ನು ಉಚಿತ ಮತ್ತು ಕಡ್ಡಾಯಗೊಳಿಸಿದೆ. ಆದ್ದರಿಂದ ಖಾಸಗಿ ಅನುದಾನರ ರಹಿತ ಶಾಲಾ ಶಿಕ್ಷಣ ವಿಸ್ತರಣೆಯನ್ನು ಕ್ರಮೇಣ ನಿರುತ್ಸಾಹಗೊಳಿಸಬೇಕೆಂದು ಆಯೋಗವು ಶಿಫಾರಸು ಮಾಡಿರುವುದು ವರದಿಯಿಂದ ತಿಳಿದು ಬಂದಿದೆ.
ರಾಜ್ಯ ನಿಯಮಗಳು ಖಾಸಗಿ ಶಾಲೆಗಳು ಎಸ್ಸಿ, ಎಸ್ಟಿ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದನ್ನು ಕಡ್ಡಾಯಗೊಳಿಸಿರುವುದನ್ನು ಗಮನಿಸಬಹುದು. ಈ ನಿಬಂಧನೆಯನ್ನು ಕೂಡ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಅಲ್ಪಸಂಖ್ಯಾತರ ಶಾಲೆಗಳು ಅಲ್ಪಸಂಖ್ಯಾತ ಸಮುದಾಯಗಳಿಂದ ಬಂದ ಆರ್ಥಿಕವಾಗಿ ದುರ್ಬಲವಾಗಿರುವ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಕಡ್ಡಾಯಗೊಳಿಸಬೇಕು ಎಂದು ಶಿಫಾರಸು ಮಾಡಿದೆ.
ನಗರ ಪ್ರದೇಶಗಳಲ್ಲಿ ವಿಶೇಷವಾಗಿ ಹೊಸ ವಸತಿ ಪ್ರದೇಶಗಳಲ್ಲಿ ಬಹುತೇಕ ಸರಕಾರಿ ಶಾಲೆಗಳು ಗಣನೀಯ ದೂರದಲ್ಲಿರುತ್ತವೆ. ರಾಜ್ಯ ಸಾರ್ವಜನಿಕ ಶಾಲೆಗಳ ಸನ್ನಿವೇಶದಲ್ಲಿ ಸರಕಾರಿ ಶಾಲೆಗಳು ಮತ್ತು ಪಿಯು ಕಾಲೇಜುಗಳು ದೂರದಲ್ಲಿದ್ದರೇ ಖಾಸಗಿ ಶಾಲೆಗಳು ಒದಗಿಸುವಂತೆ ಸಾರಿಗೆ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಸರಕಾರವು ಗಮನಹರಿಸಬೇಕು ಎಂದು ಆಯೋಗವು ಗಮನಸೆಳೆದಿದೆ.
ಹಲವು ಶಾಲೆಗಳಲ್ಲಿ ಶಿಕ್ಷಕರು ಯಾವುದೇ ಉದ್ಯೋಗ ಭದ್ರತೆ ಇಲ್ಲದೇ ಕಡಿಮೆ ಸಂಬಳಕ್ಕೆ ಕೆಲಸ ಮಾಡಬೇಕಾಗಿದೆ. ಇದು ಯಾವುದೇ ಪರಿಹಾರ ನೀಡದೇ ಅವರ ಸೇವೆ ಬಳಸಿಕೊಳ್ಳುವುದಕ್ಕೆ ಸಮನಾಗಿದೆ. ಈ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರ ಹಿತಾಸಕ್ತಿಗಳನ್ನು ರಕ್ಷಿಸಲು ಸೂಕ್ತ ನಿಯಮ ಪರಿಚಯಿಸಬೇಕು ಎಂದು ಆಯೋಗವು ಶಿಫಾರಸು ಮಾಡಿದೆ.
ಖಾಸಗಿ ಶಾಲೆಗಳಲ್ಲಿ ದುರ್ಬಲರಿಗೆ ಉಚಿತ ಸೀಟು ಸಿಗಲಿ
ಖಾಸಗಿ ಶಾಲೆಗಳು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮಕ್ಕಳಿಗೆ ಮತ್ತು ಸೌಲಭ್ಯ ವಂಚಿತ ಮಕ್ಕಳಿಗೆ ಶೇಕಡವಾರು ಸೀಟುಗಳನ್ನು ಉಚಿತವಾಗಿ ಒದಗಿಸುವ ಬಾಧ್ಯತೆಯನ್ನು ಹೊಂದಿರುತ್ತದೆ. ಖಾಸಗಿ ಶಾಲೆಗಳು ಬಳಸುವ ಸೌಲಭ್ಯಗಳು ಮತ್ತು ರಿಯಾಯಿತಿಗಳನ್ನು ಮ್ಯಾಪ್ ಮಾಡಲು ಮತ್ತು ಖಾಸಗಿ ಅನುದಾನರಹಿತ ಶಾಲೆಗಳು ಅನುಭವಿಸುವ ಸೌಲಭ್ಯಗಳಿಗೆ ತಕ್ಕಂತೆ ಉಚಿತ ಶಿಕ್ಷಣವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆಯನ್ನು ಸಿದ್ಧಪಡಿಸುವ ಸಲುವಾಗಿಸಮಿತಿಯೊಂದನ್ನು ಸ್ಥಾಪಿಸಬೇಕು ಎಂದು ರಾಜ್ಯ ಶಿಕ್ಷಣ ನೀತಿ ಆಯೋಗವು ಶಿಫಾರಸು ಮಾಡಿದೆ.






