ವಿಪತ್ತು ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಪಾವತಿಯಾಗದ ಪರಿಹಾರ

ಬೆಂಗಳೂರು, ಡಿ.28: ವಿಪತ್ತು ಪೀಡಿತ ಪ್ರದೇಶಗಳ ಬಾಧಿತ ಜನರ ಗುಂಪಿಗೆ ಪರಿಹಾರ ಪಾವತಿ ಮಾಡಿರುವ ಸರಕಾರವು, ಕೆಲವರಿಗೆ ಪರಿಹಾರ ಪಾವತಿಸಿಲ್ಲ. ಈಗಾಗಲೇ ಮಾಡಿರುವ ಈ ಪಾವತಿಗಳಿಗೆ ದೃಢೀಕರಣವನ್ನೂ ಮಾಡಿಲ್ಲ. ಹಾಗೆಯೇ ರಾಜ್ಯದ ಹಲವು ತಾಲೂಕುಗಳು ಪಾವತಿಗಳಿಗೆ ಸಂಬಂಧಿಸಿದಂತೆ ಮತ್ತು ಪಾವತಿಸದೇ ಹಿಂದಿರುಗಿದ ಚೆಕ್‌ಗಳ ಲೆಕ್ಕವನ್ನೂ ಇಟ್ಟಿಲ್ಲ.
ಅದೇ ರೀತಿ ವಿಪತ್ತು ನಿಧಿಗೆ ಬಿಡುಗಡೆಯಾಗಿರುವ ಮೊತ್ತಕ್ಕೆ ಸಂಬಂಧಿಸಿದಂತೆ ಜಿಲ್ಲಾ ಖಾತೆಗಳು ಮತ್ತು ತಾಲೂಕು ಖಾತೆಗಳಲ್ಲಿ ಅಪಾರ ವ್ಯತ್ಯಾಸ ಕಂಡು ಬಂದಿದೆ. ಬೆಳಗಾವಿ ಜಿಲ್ಲೆಯೊಂದರಲ್ಲೇ ಒಟ್ಟಾರೆ ರೂ. 50.84 ಕೋಟಿಯಷ್ಟು ವ್ಯತ್ಯಾಸ ಕಂಡು ಬಂದಿದೆ.
ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ಬೆಳಗಾವಿಯಲ್ಲಿ ನಡೆದಿದ್ದ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿರುವ ವರದಿಯು ಕರ್ನಾಟಕದಲ್ಲಿ ವಿಪತ್ತು ಕಾರ್ಯನಿರ್ವಹಣೆಯಲ್ಲಿ ಭಾರೀ ಪ್ರಮಾಣದ ಹಣಕಾಸು ಅವ್ಯವಹಾರಗಳ ವಿವಿಧ ಮುಖಗಳನ್ನು ತೆರೆದಿಟ್ಟಿದೆ. ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣದ ವರ್ಗಾವಣೆ ಮತ್ತಿತರ ಬಾಬ್ತುಗಳಿಗೆ ಸಂಬಂಧಿಸಿದಂತೆ ದಾಖಲೆಗಳೇ ಲಭ್ಯವಿಲ್ಲದಿರುವುದು ತಾಲೂಕುಗಳ ವಹಿವಾಟುಗಳನ್ನು ದೃಢಪಡಿಸುವುದು ಲೆಕ್ಕ ಪರಿಶೋಧನೆಗೂ ಕಷ್ಟಕರವಾಗಿತ್ತು. ಹಣಕಾಸಿನ ಈ ದುರಾಡಳಿತದ ಬಗ್ಗೆ ಸಿಎಜಿ ನೀಡಿರುವ ವರದಿಯು, ರಾಜ್ಯ ವಿಪತ್ತು ಕಾರ್ಯಪಡೆಯ ಅನುದಾನ ಬಳಕೆಯಲ್ಲಿಯೇ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿರುವುದನ್ನು ಮೇಲ್ನೋಟಕ್ಕೆ ಸಾಬೀತುಪಡಿಸಿದೆ.
ಹೀಗೆ ಕೋಟಿ ಕೋಟಿಯಷ್ಟು ಹಣವನ್ನು ಬಿಡುಗಡೆ ಮಾಡಿದ್ದರೂ ಸಹ ಹಲವು ತಹಶೀಲ್ದಾರ್‌ಗಳು ಯಾವುದೇ ದಾಖಲೆಗಳನ್ನೂಸಿಎಜಿಗೆ ಹಾಜರುಪಡಿಸಿಲ್ಲ. ನಗದು ಪುಸ್ತಕ ನಿರ್ವಹಣೆ ಮತ್ತು ಬ್ಯಾಂಕ್ ಖಾತೆಗಳ ನಿರ್ವಹಣೆಯಲ್ಲಿಯೂ ಹಲವು ಅಕ್ರಮಗಳು ನಡೆದಿವೆ ಎಂದು ಸಿಎಜಿಯು ಬಹಿರಂಗಗೊಳಿಸಿದೆ.
ನಗದು ಪುಸ್ತಕ ನಿರ್ವಹಣೆಯಲ್ಲಿ ಅಕ್ರಮಗಳು
ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಅನೇಕ ತಾಲೂಕುಗಳು ನಗದು ಪುಸ್ತಕಗಳನ್ನು ನಿರ್ವಹಿಸಿಲ್ಲ ಮತ್ತು ಅವುಗಳನ್ನು ನವೀಕರಿಸಿಲ್ಲ. ನಿರ್ವಹಿಸಲಾಗಿರುವ ನಗದು ಪುಸ್ತಕಗಳಲ್ಲಿನ ನಮೂದುಗಳು ಸಹ ಅನುಚಿತವಾಗಿವೆ. ಪಾವತಿಗಳ ನಿರೂಪಣೆಯನ್ನು ದಾಖಲಿಸಿಲ್ಲ. ಒಂದೇ ನಮೂನೆಯಲ್ಲಿ ಜನರ ಗುಂಪಿಗೆ ಪಾವತಿ, ದೃಢೀಕರಿಸದ ಪಾವತಿಗಳು, ಪಾವತಿಸದೇ ಹಿಂದಿರುಗಿದ ಚೆಕ್‌ಗಳ ಲೆಕ್ಕವಿಲ್ಲ.
ಬ್ಯಾಂಕ್ ಖಾತೆಯ ಪಾಸ್ ಶೀಟ್‌ನಲ್ಲಿನ ನಮೂದುಗಳ ಆಧಾರದ ಮೇಲೆ ನಗದು ಪುಸ್ತಕಗಳನ್ನು ಬರೆಯಲಾಗಿದೆ ಎಂದು ಅನೇಕ ಛಾಯಾಚಿತ್ರಗಳು ಸಾಬೀತುಪಡಿಸುತ್ತದೆ. ಆದರೆ ಪಾವತಿಗಾಗಿ ಚೆಕ್‌ಗಳನ್ನು ಡ್ರಾ ಮಾಡಿದಾಗೆಲ್ಲ ಈ ಲೋಪಗಳ ಹಿನ್ನೆಲೆಯಲ್ಲಿ, ನಕಲಿ ಫಲಾನುಭವಿಗಳಿಗೆ ಮೋಸದ ಪಾವತಿಗಳಾಗಿವೆಯೇ ಎಂಬುದನ್ನು ಸಹ ಲೆಕ್ಕ ಪರಿಶೋಧನೆಯಲ್ಲಿ ಸಿಎಜಿಗೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಹೀಗಾಗಿ ಈ ವಿಷಯವನ್ನು ವಿವರವಾಗಿ ತನಿಖೆ ನಡೆಸಬೇಕಾಗಿದೆ ಎಂದು ಸಿಎಜಿಯು ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.
ಅಸಮರ್ಪಕ ನಿರ್ವಹಣೆ ಎಲ್ಲೆಲ್ಲಿ?
ಬೆಳಗಾವಿಯ ಅಥಣಿ ತಹಶೀಲ್ದಾರ್ ಕಚೇರಿಯಲ್ಲಿ 2019ರ ಜುಲೈ 19ರಿಂದ 2023ರ ಮಾರ್ಚ್‌ವರೆಗೆ ನಗದು ಪುಸ್ತಕವನ್ನು ಬರೆದಿಲ್ಲ. ಮೂಡಲಗಿ ತಹಶೀಲ್ದಾರ್ 2018-19ರಿಂದ 2022-23ರವರೆಗೆ, ನಿಪ್ಪಾಣಿ ತಹಶೀಲ್ದಾರ್ 2021ರ ಮಾರ್ಚ್ 25ರಿಂದ 2023ರ ಮಾರ್ಚ್ 31ವರೆಗೆ ನಗದು ಪುಸ್ತಕವನ್ನು ಬರೆದಿಲ್ಲ. ಚಿಕ್ಕಬಳ್ಳಾಪುರದ ಚಿಂತಾಮಣಿ ತಹಶೀಲ್ದಾರ್ 2021ರ ನವೆಂಬರ್‌ವರೆಗೆ ನಗದು ಪುಸ್ತಕವನ್ನು ನಿರ್ವಹಿಸಿಲ್ಲ. ಬಾಗೇಪಲ್ಲಿ ತಹಶೀಲ್ದಾರ್ 2021ರ ಡಿಸೆಂಬರ್‌ವರೆಗೆ, ಗೌರಿಬಿದನೂರಿನ ತಹಶೀಲ್ದಾರ್ 2019ರ ಮೇ ವರೆಗೆ, ಗುಡಿಬಂಡೆ ತಹಶೀಲ್ದಾರ್ 2020ರ ಡಿಸೆಂಬರ್‌ವರೆಗೆ, ಶಿಡ್ಲಘಟ್ಟ ಹಾಗೂ ಚಿಕ್ಕಬಳ್ಳಾಪುರ ತಹಶೀಲ್ದಾರ್ 2017-18ನೇ ಸಾಲಿನವರೆಗೆ ನಗದು ಪುಸ್ತಕವನ್ನೇ ನಿರ್ವಹಿಸಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಿದೆ.
ಬಂಟ್ವಾಳದಲ್ಲಿ 7.03 ಕೋಟಿ ಏನಾಯಿತು?
ದಕ್ಷಿಣ ಕನ್ನಡದ ಸುಳ್ಯ ತಹಶೀಲ್ದಾರ್ 2021-22ರವರೆಗೆ ನಗದು ಪುಸ್ತಕವನ್ನು ನಿರ್ವಹಿಸಿರಲಿಲ್ಲ. ಮೂಡುಬಿದಿರೆ ತಹಶೀಲ್ದಾರ್ 2018-19ರವರೆಗೆ, ಕಡಬ ಮತ್ತು ಬೆಳ್ತಂಗಡಿ ತಹಶೀಲ್ದಾರ್ ಅವರು 2020-21ರವರೆಗೆ ನಗದು ಪುಸ್ತಕವನ್ನು ನಿರ್ವಹಿಸಿಲ್ಲ. ಅಲ್ಲದೇ 2017ರಿಂದ 2023ರವರೆಗೆ ಬಂಟ್ವಾಳಕ್ಕೆ 7.03 ಕೋಟಿ ರುಪಾಯಿಗಳನ್ನು ವಿಪತ್ತು ನಿರ್ವಹಣೆ ನಿಧಿಗೆ ಬಿಡುಗಡೆ ಮಾಡಲಾಗಿತ್ತು. ಆದರೆ ಬಂಟ್ವಾಳದ ತಹಶೀಲ್ದಾರ್, ಈ ನಿಧಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನೂ ಸಿಎಜಿಗೆ ಹಾಜರುಪಡಿಸಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ಅಧಿಕಾರಿಗಳು ಬ್ಯಾಂಕ್ ಪಾಸ್ ಶೀಟ್‌ಗಳ ನಮೂದುಗಳ ಆಧಾರದ ಮೇಲೆ ನಗದು ಪುಸ್ತಕವನ್ನು ಬರೆದಿದ್ದಾರೆಯೇ ಹೊರತು ವಹಿವಾಟು ನಡೆದಾಗ ಬರೆದಿಲ್ಲ. ಎಲ್ಲಾ ತಾಲೂಕುಗಳಲ್ಲಿ ಫಲಾನುಭವಿಯ ಹೆಸರು ಮತ್ತು ಮೊತ್ತವನ್ನು ಹೊರತುಪಡಿಸಿ ನಗದು ಪುಸ್ತಕದ ನಮೂದುಗಳು ಪಾವತಿಗಳ ಸರಿಯಾದ ನಿರೂಪಣೆಯನ್ನೇ ಒಳಗೊಂಡಿಲ್ಲ.
ಬ್ಯಾಂಕ್ ಖಾತೆಗಳ ನಿರ್ವಹಣೆಯಲ್ಲೂ ಅಕ್ರಮ
ಬೆಳಗಾವಿ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾವೇರಿ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯ ಒಟ್ಟು 23 ತಾಲೂಕುಗಳಲ್ಲಿನ ಬ್ಯಾಂಕ್ ಖಾತೆಗಳಲ್ಲೂ ವಿವಿಧ ರೀತಿಯ ಅಕ್ರಮಗಳು ನಡೆದಿವೆ ಎಂದು ಸಿಎಜಿಯು ಲೆಕ್ಕ ಪರಿಶೋಧನೆ ವೇಳೆ ಪತ್ತೆ ಹಚ್ಚಿದೆ.
ಈ ಎಲ್ಲಾ ತಾಲೂಕುಗಳು ಹೆಚ್‌ಡಿಎಫ್‌ಸಿ, ಆಕ್ಸಿಸ್, ಯೆಸ್ ಮತ್ತು ಐಸಿಐಸಿಐ ಬ್ಯಾಂಕ್‌ಗಳಲ್ಲಿ 77 ಖಾತೆಗಳನ್ನು ತೆರೆದಿವೆ. ಈ ಎಲ್ಲಾ ಖಾತೆಗಳನ್ನು ಸಿಎಜಿಯು ಪರಿಶೀಲನೆ ಮತ್ತು ಲೆಕ್ಕ ತಪಾಸಣೆ ನಡೆಸಿದೆ. ಸರಕಾರ ಮತ್ತು ಸಕ್ಷಮ ಪ್ರಾಧಿಕಾರಗಳ
ಅನುಮತಿ ಇಲ್ಲದೆಯೇ ಬ್ಯಾಂಕ್‌ಗಳಲ್ಲಿ ಖಾತೆ ತೆರೆದು 2017ರಲ್ಲಿ ಸರಕಾರವು ಹೊರಡಿಸಿರುವ ಅಧಿಸೂಚನೆ ಉಲ್ಲಂಘಿಸಿರುವುದನ್ನು ಪತ್ತೆ ಹಚ್ಚಿದೆ.
1.37 ಕೋಟಿ ಬಿಡುಗಡೆಗೆ ಆದೇಶಗಳೇ ಲಭ್ಯವಿಲ್ಲ
2017-18ನೇ ಸಾಲಿಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಸಾಗರ ತಾಲೂಕಿಗೆ 1.37 ಕೋಟಿ ರೂ. ಬಿಡುಗಡೆ ಮಾಡಿದ್ದರು. ಆದರೆ ಲೆಕ್ಕ ಪರಿಶೋಧನೆಗೆ ಒದಗಿಸಿದ್ದ ನಗದು ಪುಸ್ತಕ ಮತ್ತು ತಾಲೂಕಿನ ಬ್ಯಾಂಕ್ ಖಾತೆಯಲ್ಲಿ ಅದು ಪತ್ತೆಯಾಗಲಿಲ್ಲ. ಲೆಕ್ಕ ಪರಿಶೋಧನೆ ವಿಚಾರಿಸಿದ ತಹಶೀಲ್ದಾರ್ ಅವರು ಹೊಸ ಬ್ಯಾಂಕ್ ಖಾತೆಯ ವಿವರವನ್ನು ಸಲ್ಲಿಸಿದ್ದರು. ಶಿವಮೊಗ್ಗ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಮೊತ್ತವನ್ನು ಬಿಡುಗಡೆ ಮಾಡಿರುವಂತೆ ತೋರಿಸಿದೆ. ಆದರೂ ಸಹ ಬಿಡುಗಡೆ ಆದೇಶಗಳು ಜ್ಞಾಪನ ಪತ್ರಗಳ ವಿವರಗಳು ಲೆಕ್ಕ ಪರಿಶೋಧನೆಗೆ ಲಭ್ಯವಾಗಿಲ್ಲ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ಹಾಗೆಯೇ ಶಿವಮೊಗ್ಗ ಜಿಲ್ಲಾಧಿಕಾರಿ 2020ರ ಜನವರಿ 28ರ ಆದೇಶದ ಮೂಲಕ ಶಿವಮೊಗ್ಗ ತಾಲೂಕಿಗೆ 50 ಲಕ್ಷ ರೂ. ಬಿಡುಗಡೆ ಮಾಡಿದ್ದರು. ಆದರೆ ಇದನ್ನು ನಗದು ಪುಸ್ತಕದಲ್ಲಿ ತೋರಿಸಿಲ್ಲ. ಇದರಿಂದ ರಸೀತಿ ಮತ್ತು ತಹಶೀಲ್ದಾರ್ ಹತ್ತಿರ ಇರುವ ಅಂತಿಮ ಶಿಲ್ಕು ಕಡಿಮೆ ತೋರಿಸಿರುವುದು ಸಿಎಜಿ ವರದಿಯಿಂದ ಕಂಡು ಬಂದಿದೆ.
ವೋಚರ್ ಪ್ರತಿ ಒದಗಿಸದ ತಹಶೀಲ್ದಾರ್
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಹಣ ದುರುಪಯೋಗವಾಗಿದೆ. ಇಲ್ಲಿನ ತಾಲೂಕು ಕಚೇರಿಯಲ್ಲಿ ನಗದು ಪುಸ್ತಕ ನಿರ್ವಹಿಸಿಲ್ಲ. ನಿಧಿ ಬಳಕೆಯನ್ನು ಖಚಿತಪಡಿಸಲು ಕಚೇರಿ ಜ್ಞಾಪಕ ಪತ್ರಗಳು, ವೋಚರ್‌ಗಳ ಪ್ರತಿಗಳನ್ನು ಒದಗಿಸಿಲ್ಲ. ಇದರಿಂದಾಗಿ ಲೆಕ್ಕ ಪರಿಶೋಧನೆಗೆ ನಿಧಿ ಬಳಕೆಯ ಬಗ್ಗೆ ಭರವಸೆ ನೀಡುವುದು ಕಷ್ಟವಾಗಿತ್ತು ಎಂದು ಸಿಎಜಿಯು ವಿಶ್ಲೇಷಿಸಿದೆ. ಹೀಗಾಗಿ ಚಿಂತಾಮಣಿ ತಾಲೂಕು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ವೆಚ್ಚದ ಬಗ್ಗೆ ವಿಶೇಷ ತನಿಖೆ ನಡೆಸಬೇಕು ಎಂದು ಸಿಎಜಿಯು ಇದೇ ವರದಿಯಲ್ಲಿ ಶಿಫಾರಸು ಮಾಡಿದೆ.
ಬೆಳಗಾವಿಯಲ್ಲಿ 50.84 ಕೋಟಿಯಷ್ಟು ವ್ಯತ್ಯಾಸ
ಬೆಳಗಾವಿ ಜಿಲ್ಲೆಯ ತಾಲೂಕುಗಳಲ್ಲಿನ ಬ್ಯಾಂಕ್ ಖಾತೆಗಳಲ್ಲಿಯೂ ವ್ಯತ್ಯಾಸಗಳು ಕಂಡು ಬಂದಿವೆ. 2017-18ರಿಂದ 2021-22ರ ಅವಧಿಗೆ ಜಿಲ್ಲೆ ಮತ್ತು ತಾಲೂಕುಗಳ ಲೆಕ್ಕಪತ್ರಗಳಿಗೂ ನಿಧಿ ಬಿಡುಗಡೆಯಲ್ಲಿ ವ್ಯತ್ಯಾಸಗಳಿದ್ದವು. ಇದರ ಒಟ್ಟಾರೆ ವ್ಯತ್ಯಾಸದ ಮೊತ್ತ ರೂ. 50.84 ಕೋಟಿಯಷ್ಟಿದೆ.







