UP ಬೆನ್ನಲ್ಲೇ ಕರ್ನಾಟಕದಲ್ಲೂ ಮತದಾರರ ಪಟ್ಟಿ ಎಡವಟ್ಟು: 2 ಅರ್ಜಿಗೆ 5 ವೋಟರ್ ಐಡಿ ಸೃಷ್ಟಿ, ಚುನಾವಣಾ ಆಯೋಗದ ಸಾಫ್ಟ್ವೇರ್ ವೈಫಲ್ಯ ಬಯಲಿಗೆ

ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಒಂದೇ ಹೆಸರಿನ ವ್ಯಕ್ತಿಗೆ ಐದು ಪ್ರತ್ಯೇಕ ಮತದಾರರ ಗುರುತಿನ ಚೀಟಿಗಳು (EPIC) ವಿತರಣೆಯಾಗಿರುವ ಗಂಭೀರ ಲೋಪ ಬೆಳಕಿಗೆ ಬಂದಿದೆ.
ಕರಡು ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಸಂತೋಷ್ ಕುಮಾರ್ ಭಾರ್ತಿಯಾ (63) ಎಂಬುವರು ಹೆಸರು ನೋಂದಣಿಗಾಗಿ ನಮೂನೆ-6ರ ಅಡಿಯಲ್ಲಿ ಎರಡು ಬಾರಿ ಅರ್ಜಿ ಸಲ್ಲಿಸಿದ್ದರು. ಆದರೆ, ರಾಜ್ಯ ಮುಖ್ಯ ಚುನಾವಣಾಧಿಕಾರಿ (CEO) ಕಚೇರಿಯ ವ್ಯವಸ್ಥೆಯು ಅವರಿಗೆ ಐದು ವಿಭಿನ್ನ ಸಂಖ್ಯೆಗಳ ಗುರುತಿನ ಚೀಟಿಗಳನ್ನು ಸೃಷ್ಟಿಸಿ ಅಂತಿಮ ಪಟ್ಟಿಗೆ ಸೇರಿಸಿದೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಒಂದೇ ಹೆಸರು, ತಂದೆಯ ಹೆಸರು ಹಾಗೂ ವಯಸ್ಸನ್ನು ಒಳಗೊಂಡಿರುವ ಈ ದಾಖಲೆಗಳನ್ನು ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಮುಹಮ್ಮದ್ ಝುಬೇರ್ ಅವರು ಚುನಾವಣಾ ಆಯೋಗದ ಪೋರ್ಟಲ್ ಆಧಾರದಲ್ಲಿ ಬಹಿರಂಗಪಡಿಸಿದ್ದಾರೆ.
ಈ ಹಿಂದೆ ಉತ್ತರ ಪ್ರದೇಶದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲೂ ಇಂತಹದ್ದೇ ವ್ಯವಸ್ಥಿತ ಲೋಪಗಳನ್ನು ಝುಬೇರ್ ದಾಖಲೆ ಸಮೇತ ಬಯಲಿಗೆಳೆದಿದ್ದರು. ಅಲ್ಲಿನ ಅಲಿಗಢದಲ್ಲಿ ಸುಂದರ್ ಎಂಬಾತ ಎರಡು ಅರ್ಜಿಗಳನ್ನು ಸಲ್ಲಿಸಿದ್ದರೂ ನಾಲ್ಕು ಗುರುತಿನ ಚೀಟಿಗಳು ಜಾರಿಯಾಗಿದ್ದವು. ಆರಂಭದಲ್ಲಿ ಈ ಆರೋಪವನ್ನು ತಳ್ಳಿಹಾಕಿ ಎಚ್ಚರಿಕೆ ನೀಡಿದ್ದ ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿಣ್ವಾ, ದಾಖಲೆಗಳು ತಪ್ಪನ್ನು ಸಾಬೀತುಪಡಿಸಿದ ಬಳಿಕ ಲೋಪವನ್ನು ಒಪ್ಪಿಕೊಂಡು ‘ಡಿಯರ್ ಶ್ರೀ ಝುಬೇರ್’ ಎಂದು ಸಂಬೋಧಿಸಿ ಧನ್ಯವಾದ ತಿಳಿಸಿದ್ದರು.
ಬುಲಂದ್ಶಹರ್ನ ಚಾಚೋಯಿ ಗ್ರಾಮದಲ್ಲಿ 17 ವ್ಯಕ್ತಿಗಳ ಹೆಸರಿನಲ್ಲಿ 34 ಕಾರ್ಡ್ ಗಳು ಸೃಷ್ಟಿಯಾಗಿದ್ದವು. ಮುಸ್ಲಿಂ ಮತದಾರರ ಹೆಸರುಗಳನ್ನು ಕೈಬಿಡಲು ನಮೂನೆ-7ರ ದುರ್ಬಳಕೆ ನಡೆದಿರುವುದನ್ನೂ ಅಲ್ಲಿ ಸಾಕ್ಷ್ಯ ಸಮೇತ ಪ್ರಶ್ನಿಸಲಾಗಿತ್ತು.
ಉತ್ತರ ಪ್ರದೇಶದ ಬೆನ್ನಲ್ಲೇ ಕರ್ನಾಟಕದಲ್ಲೂ ಇಂತಹ ಪ್ರಮಾದ ಮರುಕಳಿಸಿರುವುದು ಚುನಾವಣಾ ಆಯೋಗ ಬಳಸುವ ಸಾಫ್ಟ್ವೇರ್ ಮತ್ತು ತಳಮಟ್ಟದ ಪರಿಶೀಲನಾ ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ವಾದಿಸುತ್ತಿದ್ದಾರೆ.
ಒಬ್ಬ ವ್ಯಕ್ತಿ ಎರಡು ಬಾರಿ ಅರ್ಜಿ ಸಲ್ಲಿಸಿದಾಗ ಐದು ಗುರುತಿನ ಚೀಟಿಗಳು ಸೃಷ್ಟಿಯಾಗುವುದು ಕೇವಲ ಅರ್ಜಿದಾರರ ತಪ್ಪಲ್ಲ; ತಂತ್ರಜ್ಞಾನದಲ್ಲಿನ ನಕಲು ಪತ್ತೆಹಚ್ಚುವ (De-duplication) ಫಿಲ್ಟರ್ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬುದಕ್ಕೆ ಇದು ಪುರಾವೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಬೂತ್ ಮಟ್ಟದ ಅಧಿಕಾರಿಗಳ (BLO) ಭೌತಿಕ ಪರಿಶೀಲನೆಯಿಲ್ಲದೆ ಅಂತಿಮ ಪಟ್ಟಿ ಪ್ರಕಟವಾಗುತ್ತಿರುವುದು ರಾಜ್ಯಾದ್ಯಂತ ಸಾವಿರಾರು ನಕಲಿ ನಮೂದುಗಳು ನುಸುಳಿರುವ ಬಲವಾದ ಸಂಶಯವನ್ನು ಹುಟ್ಟುಹಾಕಿದೆ.
ಮತದಾರರ ಪಟ್ಟಿಯ ನಿಖರತೆಯನ್ನು ಮರುಪರಿಶೀಲಿಸಿ, ಸಾಫ್ಟ್ವೇರ್ ದೋಷಗಳನ್ನು ತಕ್ಷಣ ಸರಿಪಡಿಸದಿದ್ದರೆ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಗೆ ಧಕ್ಕೆ ಉಂಟಾಗಲಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.






