ಯುಪಿಐ ಪಾವತಿ ವೇಳೆ ತಪ್ಪಿ ಬೇರೆಯವರ ಸಂಖ್ಯೆಗೆ ಹಣ ವರ್ಗಾವಣೆ ಆಗಿದೆಯೇ? ಇಲ್ಲಿದೆ ಪರಿಹಾರ

ಸಾಂದರ್ಭಿಕ ಚಿತ್ರ | Photo Credit : freepik.com
ತಪ್ಪು ಸಂಖ್ಯೆಗೆ ಹಣ ಕಳುಹಿಸಿರುವುದು, ವ್ಯವಹಾರ ವಿಫಲವಾಗಿರುವುದು, ಪಿನ್ ಸಮಸ್ಯೆಯಾದಾಗ ದೂರು ಸಲ್ಲಿಸಿದಲ್ಲಿ 3-5 ಕಾರ್ಯಕಾರಿ ದಿನಗಳಲ್ಲಿ ನಿಮ್ಮ ಸಮಸ್ಯೆ ಪರಿಹಾರವಾಗಿಬಿಡುತ್ತದೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎರಡು ವಾರದ ಹಿಂದೆ ಒಂದು ದೂರು ದಾಖಲಾಗಿದೆ. ವೈದ್ಯಕೀಯ ತುರ್ತುಗಾಗಿ ಒಬ್ಬರು ರೂ. 19,000 ಫೋನ್ ಪೇ ಮಾಡಿದ್ದರು. ಆದರೆ ಆ ಹಣ ಅವರ ಸಂಬಂಧಿಕರಾದ ರಾಜಸ್ಥಾನದ ಲಕ್ಷ್ಮೀಚಂದ್ರಿಗೆ ಹೋಗುವ ಬದಲಾಗಿ ಉಜಿರೆಯ ಉದ್ಯಮಿಗೆ ಹೋಗಿತ್ತು. ಉದ್ಯಮಿ ಹಣ ಮರಳಿ ಕೊಡಲು ನಿರಾಕರಿಸಿದರು. ಹೀಗಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು?
ತ್ವರಿತ ವಿಧಾನವಾಗಿರುವ ಯುಪಿಐ ಪಾವತಿ
ಡಿಜಿಟಲ್ ಪಾವತಿಯ ಬಳಕೆಗಳು ಹೆಚ್ಚಾಗುತ್ತಿರುವಾಗ ಯುಪಿಐ ಪಾವತಿ ಭಾರತದಲ್ಲಿ ಸರಳ ವ್ಯವಹಾರಗಳಿಗೆ ತ್ವರಿತ ವಿಧಾನವಾಗಿರುತ್ತದೆ. ಆದರೆ ಯುಪಿಐ ವ್ಯವಹಾರದಲ್ಲಿ ತಪ್ಪಿ ಬೇರೆಯವರ ಸಂಖ್ಯೆಗೆ ಹಣ ವರ್ಗಾವಣೆ ಮಾಡಿದಲ್ಲಿ ಏನಾಗುತ್ತದೆ? ಕಳುಹಿಸಿದವರಿಗೆ ಮತ್ತು ಸ್ವೀಕರಿಸುವವರಿಗೆ ದೊಡ್ಡ ನಷ್ಟವಾಗಿಬಿಡುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಕುಂದುಕೊರತೆ ಆಲಿಸುವ ಸಹಾಯವಾಣಿ ಸಂಖ್ಯೆಯನ್ನು ಸರಕಾರ ನೀಡಿದೆ.
ಯುಪಿಐ ಮೂಲಕ ತಪ್ಪಿ ಇನ್ಯಾರಿಗೋ ಹಣ ಕಳುಹಿಸಿದ್ದೀರಾ? ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI)ದ 24/7 ಸಹಾಯವಾಣಿಗೆ 48 ಗಂಟೆಗಳ ಒಳಗೆ ದೂರು ಸಲ್ಲಿಸಬೇಕು. ಯುಪಿಐ ಸಮಸ್ಯೆಗಳಿಗೆ NPCI ವೆಬ್ತಾಣದ ಮೂಲಕ ಆನ್ಲೈನ್ ಮೂಲಕ ದೂರು ಸಲ್ಲಿಕೆಯ ಅವಕಾಶವೂ ಇದೆ. ತಪ್ಪು ಸಂಖ್ಯೆಗೆ ಹಣ ಕಳುಹಿಸಿರುವುದು, ವ್ಯವಹಾರ ವಿಫಲವಾಗಿರುವುದು, ಪಿನ್ ಸಮಸ್ಯೆಯಾದಾಗ ದೂರು ಸಲ್ಲಿಸಿದಲ್ಲಿ 3-5 ಕಾರ್ಯಕಾರಿ ದಿನಗಳಲ್ಲಿ ನಿಮ್ಮ ಸಮಸ್ಯೆ ಪರಿಹಾರವಾಗಿಬಿಡುತ್ತದೆ.
ತಪ್ಪು ಸಂಖ್ಯೆಗೆ ಯುಪಿಐ ಪಾವತಿಯೆ? ಇಲ್ಲಿದೆ ಪರಿಹಾರ ಸಂಖ್ಯೆ
ಯಾರಾದರೂ ತಪ್ಪು ಸಂಖ್ಯೆಗೆ ಯುಪಿಐ ವ್ಯವಹಾರ ಮಾಡಿರುವುದು ಅಥವಾ ಪಾವತಿ ಸಮಸ್ಯೆಗಳನ್ನು ಎದುರಿಸಿದಲ್ಲಿ, ಅಧಿಕೃತ NPCI ನ ಯುಪಿಐ ದೂರು ಸಂಖ್ಯೆ 1800-120-1740 ಅನ್ನು ಸಂಪರ್ಕಿಸಬಹುದು. ಆದರೆ ಈ ದೂರನ್ನು ವ್ಯವಹಾರವಾದ 48 ಗಂಟೆಗಳ ಒಳಗೆ ಸಲ್ಲಿಸಬೇಕಾಗುತ್ತದೆ. ಈ ಸಹಾಯವಾಣಿ 24/7 ಲಭ್ಯವಿರುತ್ತದೆ. ಬಳಕೆದಾರರು ಯಾವಾಗ ಬೇಕಾದರೂ ಈ ಸಂಖ್ಯೆಗೆ ದೂರು ಸಲ್ಲಿಸಬಹುದು.
ನಿಖರವಾಗಿ ವಿಷಯವನ್ನು ಬರೆದಲ್ಲಿ ದೂರನ್ನು ಸುಗಮವಾಗಿ ಮತ್ತು ಸಮರ್ಥವಾಗಿ ಪರಿಹರಿಸಬಹುದು. ವ್ಯವಹಾರ ವಿಫಲವಾದಾಗ, ಪಿನ್ ಸಮಸ್ಯೆಯಾದಾಗ ಅಥವಾ ಅಸಮರ್ಪಕ ಪಾವತಿ ಮಾಡಿದಾಗ ಬಳಕೆದಾರರು ಈ ಸಂಖ್ಯೆಗೆ ದೂರು ಸಲ್ಲಿಸಬಹುದು.
ಆನ್ಲೈನ್ನಲ್ಲಿ ಯುಪಿಐ ವ್ಯವಹಾರದ ದೂರು ಸಲ್ಲಿಸುವುದು ಹೇಗೆ?
NPCIಗೆ ಕರೆ ಮಾಡುವ ಹೊರತಾಗಿ ಅಧಿಕೃತ ವೆಬ್ತಾಣದ ಮೂಲಕ ಆನ್ಲೈನ್ನಲ್ಲಿ ದೂರು ಸಲ್ಲಿಸಬಹುದು. ಆನ್ಲೈನ್ನಲ್ಲಿ ವಿವರವಾಗಿ ದೂರು ಸಲ್ಲಿಸುವುದರಿಂದ ದೂರಿನ ಕುರಿತಾಗಿ ಕೈಗೊಂಡ ಕ್ರಮವನ್ನು ತಿಳಿದುಕೊಳ್ಳಲು ಸುಗಮವಾಗುತ್ತದೆ. ಅದಕ್ಕಾಗಿ ಎನ್ಪಿಸಿಐ ವೆಬ್ತಾಣದಲ್ಲಿ https://www.npci.org.in/upi-complaint ದೂರು ಸಲ್ಲಿಸಬಹುದು.
NPCI ವೆಬ್ತಾಣಕ್ಕೆ ಹೋದರೆ ‘ಕಸ್ಟಮರ್’ ವಿಭಾಗಕ್ಕೆ ಹೋಗಿ ಅಲ್ಲಿ ‘ಗೆಟ್ ಹೆಲ್ಪ್’ ವಿಭಾಗಕ್ಕೆ ಹೋಗಬೇಕು. ಅದರಲ್ಲಿ ‘ಯುಪಿಐ ಕಂಪ್ಲೇಂಟ್’ ಅನ್ನು ಕ್ಲಿಕ್ ಮಾಡಿ ದೂರು ಸಲ್ಲಿಸಬಹುದು. ಅಲ್ಲಿ ‘ಕಂಪ್ಲೇಂಟ್ ವಿಧ’ ಕ್ಲಿಕ್ ಮಾಡಿ, ‘ವ್ಯವಹಾರ ಕುರಿತ ವಿವರ’ದಲ್ಲಿ ನಿಮ್ಮ ಆಯ್ಕೆಯನ್ನು ಸಲ್ಲಿಸಲು ಅವಕಾಶವಿದೆ.







