ಅಮೆರಿಕ-ಭಾರತ ವ್ಯಾಪಾರ ಒಪ್ಪಂದದ ಫ್ಯಾಕ್ಟ್ ಶೀಟ್ ನಲ್ಲಿ ಬದಲಾವಣೆ; ಪರಿಷ್ಕೃತ ಆವೃತ್ತಿಯಲ್ಲಿ ಏನೇನಿದೆ?

Photo Credit : AP \ PTI
ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಫ್ಯಾಕ್ಟ್ ಶೀಟ್ ಅನ್ನು ಶ್ವೇತಭವನ ಸೋಮವಾರ ಬಿಡುಗಡೆ ಮಾಡಿತ್ತು. ಉಭಯ ದೇಶಗಳ ನಡುವೆ ಫೆಬ್ರುವರಿ 6ರಂದು ಮಧ್ಯಂತರ ಒಪ್ಪಂದದ ಚೌಕಟ್ಟು ರೂಪುಗೊಂಡಿದ್ದು, ಇದಾದ ಮೂರು ದಿನಗಳಲ್ಲೇ ಫ್ಯಾಕ್ಟ್ ಶೀಟ್ ಬಿಡುಗಡೆಯಾಗಿದೆ.
ಫ್ಯಾಕ್ಟ್ ಶೀಟ್ನ ಆರಂಭಿಕ ಆವೃತ್ತಿಯು ಒಪ್ಪಂದದ ಪ್ರಮುಖ ನಿಯಮಗಳನ್ನು ಹೈಲೈಟ್ ಮಾಡಿತ್ತು. ಇದರಲ್ಲಿ ಭಾರತವು ಅಮೆರಿಕದ ಎಲ್ಲ ಕೈಗಾರಿಕಾ ಸರಕುಗಳು ಹಾಗೂ ಒಣ ಡಿಸ್ಟಿಲರ್ ಧಾನ್ಯಗಳು (DDGs), ಕೆಂಪು ಜೋಳ, ಬೀಜಗಳು, ತಾಜಾ ಮತ್ತು ಸಂಸ್ಕರಿಸಿದ ಹಣ್ಣುಗಳು, “ಕೆಲವು ದ್ವಿದಳ ಧಾನ್ಯಗಳು”, ಸೋಯಾಬೀನ್ ಎಣ್ಣೆ, ವೈನ್ ಮತ್ತು ಸ್ಪಿರಿಟ್ಗಳು ಹಾಗೂ ಹೆಚ್ಚುವರಿ ಉತ್ಪನ್ನಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಯುಎಸ್ ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕಗಳನ್ನು ತೆಗೆದುಹಾಕುತ್ತದೆ ಅಥವಾ ಕಡಿಮೆ ಮಾಡುತ್ತದೆ ಎಂದು ಉಲ್ಲೇಖಿಸಲಾಗಿತ್ತು.
ಮಂಗಳವಾರ (ಫೆಬ್ರವರಿ 10, 2026) ಹೊರಡಿಸಲಾದ ಪರಿಷ್ಕೃತ ಫ್ಯಾಕ್ಟ್ ಶೀಟ್ ದ್ವಿದಳ ಧಾನ್ಯಗಳ ಕುರಿತ ಉಲ್ಲೇಖವನ್ನು ತೆಗೆದುಹಾಕಿದ್ದು, ಭಾರತಕ್ಕೆ ಬಳಸಲಾದ “committed” ಪದವನ್ನು “intends” ಎಂದು ಬದಲಾಯಿಸಿದೆ. ಭಾರತವು ಅಮೆರಿಕದ ಎಲ್ಲಾ ಕೈಗಾರಿಕಾ ಸರಕುಗಳು ಮತ್ತು ಸೊಲ್ಯೂಬಲ್ಸ್ ಜೊತೆಗೆ ಒಣಗಿದ ಧಾನ್ಯಗಳು (DDGs), ಕೆಂಪು ಜೋಳ, ಬೀಜಗಳು, ತಾಜಾ ಮತ್ತು ಸಂಸ್ಕರಿಸಿದ ಹಣ್ಣುಗಳು, ಸೋಯಾಬೀನ್ ಎಣ್ಣೆ, ವೈನ್ ಮತ್ತು ಸ್ಪಿರಿಟ್ಗಳು ಹಾಗೂ ಹೆಚ್ಚುವರಿ ಉತ್ಪನ್ನಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಅಮೆರಿಕದ ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ತೆಗೆದುಹಾಕುತ್ತದೆ ಅಥವಾ ಕಡಿಮೆ ಮಾಡುತ್ತದೆ ಎಂದು ಇದರಲ್ಲಿದೆ.
“ಭಾರತವು ಹೆಚ್ಚಿನ ಅಮೆರಿಕನ್ ಉತ್ಪನ್ನಗಳನ್ನು ಖರೀದಿಸಲು ಮತ್ತು 500 ಶತಕೋಟಿ ಡಾಲರ್ಗಿಂತ ಹೆಚ್ಚಿನ ಅಮೆರಿಕನ್ ಇಂಧನ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಕಲ್ಲಿದ್ದಲು ಹಾಗೂ ಇತರ ಉತ್ಪನ್ನಗಳನ್ನು ಖರೀದಿಸಲು ಉದ್ದೇಶಿಸಿದೆ” ಎಂದು ಪರಿಷ್ಕೃತ ಫ್ಯಾಕ್ಟ್ ಶೀಟ್ ಹೇಳಿದೆ. ವ್ಯಾಪಾರ ಒಪ್ಪಂದದ ಕುರಿತು ಕಳೆದ ವಾರ ಬಿಡುಗಡೆಯಾದ ಜಂಟಿ ಹೇಳಿಕೆಯಲ್ಲಿ ಭಾರತವು ಅಮೆರಿಕದ ಉತ್ಪನ್ನಗಳಿಗೆ ಸುಂಕವನ್ನು ತೆಗೆದುಹಾಕುವ ಅಥವಾ ಕಡಿಮೆ ಮಾಡುವ ವಸ್ತುಗಳಲ್ಲಿ “ದ್ವಿದಳ ಧಾನ್ಯಗಳ” ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. “ಮುಂದಿನ 5 ವರ್ಷಗಳಲ್ಲಿ ಭಾರತವು 500 ಶತಕೋಟಿ ಡಾಲರ್ ಮೌಲ್ಯದ ಅಮೆರಿಕನ್ ಇಂಧನ ಉತ್ಪನ್ನಗಳು, ವಿಮಾನ ಭಾಗಗಳು, ಅಮೂಲ್ಯ ಲೋಹಗಳು, ತಂತ್ರಜ್ಞಾನ ಉತ್ಪನ್ನಗಳು ಮತ್ತು ಕೋಕಿಂಗ್ ಕಲ್ಲಿದ್ದಲನ್ನು ಖರೀದಿಸಲು ಉದ್ದೇಶಿಸಿದೆ” ಎಂದು ಜಂಟಿ ಹೇಳಿಕೆಯಲ್ಲಿ ಹೇಳಲಾಗಿದೆ.
ಫ್ಯಾಕ್ಟ್ ಶೀಟ್ನಲ್ಲಿ ಆಗಿರುವ ಬದಲಾವಣೆಗಳೇನು?
ದ್ವಿದಳ ಧಾನ್ಯಗಳ ಮೇಲಿನ ಸುಂಕಗಳು
ಅಮೆರಿಕ-ಭಾರತ ವ್ಯಾಪಾರ ಒಪ್ಪಂದದ ಫ್ಯಾಕ್ಟ್ ಶೀಟ್ನಲ್ಲಿ ಮಾಡಲಾದ ಪ್ರಮುಖ ಪರಿಷ್ಕರಣೆ ದ್ವಿದಳ ಧಾನ್ಯಗಳ ಮೇಲಿನ ಸುಂಕಗಳಿಗೆ ಸಂಬಂಧಿಸಿದೆ. ಆರಂಭಿಕ ಫ್ಯಾಕ್ಟ್ ಶೀಟ್ ನಲ್ಲಿ ಭಾರತವು ಅಮೆರಿಕದ ಕೆಲವು ದ್ವಿದಳ ಧಾನ್ಯಗಳ ಮೇಲಿನ ಸುಂಕಗಳನ್ನು ಕಡಿಮೆ ಮಾಡುತ್ತದೆ ಅಥವಾ ತೆಗೆದುಹಾಕುತ್ತದೆ ಎಂದು ಉಲ್ಲೇಖಿಸಲಾಗಿತ್ತು.
ಆದರೆ ಪರಿಷ್ಕೃತ ಪ್ಯಾರಾಗ್ರಾಫ್ನಲ್ಲಿ ದ್ವಿದಳ ಧಾನ್ಯಗಳ ಉಲ್ಲೇಖ ಇಲ್ಲ. ಕೃಷಿ ಆಮದುಗಳು, ವಿಶೇಷವಾಗಿ ದ್ವಿದಳ ಧಾನ್ಯಗಳು, ಭಾರತದ ಕೃಷಿ ವಲಯಕ್ಕೆ ಸೂಕ್ಷ್ಮವಾಗಿವೆ. ಭಾರತವು ವಿಶ್ವದ ಅತಿದೊಡ್ಡ ಉತ್ಪಾದಕ (ಜಾಗತಿಕ ಉತ್ಪಾದನೆಯ ಸುಮಾರು 25–28%) ಮತ್ತು ದ್ವಿದಳ ಧಾನ್ಯಗಳ ಪ್ರಮುಖ ಗ್ರಾಹಕವೂ ಆಗಿದೆ. ಕೆಲವು ತಿಂಗಳ ಹಿಂದೆ ವ್ಯಾಪಾರ ಮಾತುಕತೆಗಳಲ್ಲಿನ ಬಿಕ್ಕಟ್ಟಿನ ನಡುವೆ ಅಮೆರಿಕದ ಇಬ್ಬರು ಸೆನೆಟರ್ಗಳು ಟ್ರಂಪ್ ಗೆ ಪತ್ರ ಬರೆದು ಭಾರತವು ಅಮೆರಿಕದ ದ್ವಿದಳ ಧಾನ್ಯಗಳ ಮೇಲಿನ 30% ಆಮದು ಸುಂಕವನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದರು. ನವೆಂಬರ್ 1ರಿಂದ ಜಾರಿಗೆ ಬಂದ ಈ ಸುಂಕವನ್ನು ಕಳೆದ ವರ್ಷ ಟ್ರಂಪ್ ವಿಧಿಸಿದ್ದ 50% ಸುಂಕಗಳಿಗೆ ಪ್ರತೀಕಾರವಾಗಿ ನೋಡಲಾಗಿತ್ತು. ಆದಾಗ್ಯೂ, ಅದನ್ನು ಈಗ ವ್ಯಾಪಾರ ಒಪ್ಪಂದದ ಭಾಗವಾಗಿ 18%ಕ್ಕೆ ಇಳಿಸಲಾಗಿದೆ.
500 ಶತಕೋಟಿ ಡಾಲರ್ ಖರೀದಿ ಪ್ರಸ್ತಾವನೆ
ಫ್ಯಾಕ್ಟ್ ಶೀಟ್ನಲ್ಲಿನ ಎರಡನೇ ಪ್ರಮುಖ ಬದಲಾವಣೆ ಅಮೆರಿಕದಿಂದ ಭಾರತದ ಪ್ರಸ್ತಾವಿತ ಸರಕುಗಳ ಖರೀದಿಗೆ ಸಂಬಂಧಿಸಿದೆ. ಹಿಂದಿನ ಆವೃತ್ತಿಯಲ್ಲಿ ಭಾರತವು ಐದು ವರ್ಷಗಳಲ್ಲಿ ಅಮೆರಿಕದಿಂದ 500 ಶತಕೋಟಿ ಡಾಲರ್ ಮೌಲ್ಯದ ಸರಕು ಮತ್ತು ಸೇವೆಗಳನ್ನು ಖರೀದಿಸಲು “ಬದ್ಧವಾಗಿದೆ” ಎಂದು ಹೇಳಲಾಗಿತ್ತು. ಪರಿಷ್ಕೃತ ಆವೃತ್ತಿಯಲ್ಲಿ “ಬದ್ಧ” ಎಂಬುದನ್ನು “ಉದ್ದೇಶ” ಎಂದು ಬದಲಾಯಿಸಲಾಗಿದೆ.
ಹಿಂದಿನ ಫ್ಯಾಕ್ಟ್ ಶೀಟ್ನಲ್ಲಿ ಕೃಷಿ ಸರಕುಗಳ ಉಲ್ಲೇಖವಿದ್ದರೆ, ಪರಿಷ್ಕೃತ ಆವೃತ್ತಿಯಲ್ಲಿ “ಕೃಷಿ ಸರಕುಗಳು” ಎಂಬ ಉಲ್ಲೇಖವನ್ನು ತೆಗೆದುಹಾಕಲಾಗಿದೆ.
ಡಿಜಿಟಲ್ ಸೇವೆಗಳು
ಫ್ಯಾಕ್ಟ್ ಶೀಟ್ನಲ್ಲಿನ ಮತ್ತೊಂದು ಬದಲಾವಣೆ ಭಾರತದ ಡಿಜಿಟಲ್ ಸೇವಾ ತೆರಿಗೆ (DST)ಗೆ ಸಂಬಂಧಿಸಿದೆ. ಹಿಂದಿನ ಆವೃತ್ತಿಯಲ್ಲಿ ಭಾರತ ತನ್ನ ಡಿಜಿಟಲ್ ಸೇವಾ ತೆರಿಗೆಗಳನ್ನು “ತೆಗೆದುಹಾಕಲಾಗುತ್ತದೆ” ಎಂದು ಉಲ್ಲೇಖಿಸಲಾಗಿತ್ತು. ಭಾರತದ ಅಧಿಕೃತ ಹೇಳಿಕೆಯಲ್ಲಿ ಇದಕ್ಕೆ ಉಲ್ಲೇಖ ಇರದ ಕಾರಣ ಗೊಂದಲ ಉಂಟಾಗಿತ್ತು.
ಈಗ ಶ್ವೇತಭವನ ತನ್ನ ಇತ್ತೀಚಿನ ಆವೃತ್ತಿಯಲ್ಲಿ ಡಿಜಿಟಲ್ ಸರ್ವಿಸ್ ಟ್ಯಾಕ್ಸ್ ತೆಗೆದುಹಾಕಲಾಗುತ್ತದೆ ಎಂಬ ವಾಕ್ಯವನ್ನು ಕೈಬಿಟ್ಟಿದೆ.
ಭಾರತ-ಯುಎಸ್ ತಂತ್ರಜ್ಞಾನ ಸಹಯೋಗ
ಹೊಸದಾಗಿ ಘೋಷಿಸಲಾದ ಮಧ್ಯಂತರ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಎರಡೂ ದೇಶಗಳು ಡಿಜಿಟಲ್ ವ್ಯಾಪಾರ ಮತ್ತು ತಂತ್ರಜ್ಞಾನ ವಲಯದಲ್ಲಿ ಸಹಯೋಗವನ್ನು ಗಾಢಗೊಳಿಸಲು ಮಾರ್ಗಸೂಚಿ ರೂಪಿಸಿವೆ. ಗ್ರಾಫಿಕ್ಸ್ ಪ್ರಾಸೆಸಿಂಗ್ ಯೂನಿಟ್ಗಳು (GPUಗಳು) ಸೇರಿದಂತೆ ಪ್ರಮುಖ ತಂತ್ರಜ್ಞಾನ ಉತ್ಪನ್ನಗಳ ಮೇಲೆ ಗಮನ ಕೇಂದ್ರೀಕರಿಸಲಾಗುತ್ತದೆ.
ಭಾರತ-ಯುಎಸ್ ವ್ಯಾಪಾರ ಪ್ರಮಾಣ
USDA ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, 2024ರಲ್ಲಿ ಭಾರತಕ್ಕೆ ಅಮೆರಿಕದ ಒಟ್ಟು ಕೃಷಿ ಮತ್ತು ಆಹಾರ ರಫ್ತುಗಳು 2.25 ಬಿಲಿಯನ್ ಡಾಲರ್ ಮೌಲ್ಯದ್ದಾಗಿದ್ದು, ವಿಶೇಷವಾಗಿ ಬಾದಾಮಿ ಪ್ರಮುಖವಾಗಿವೆ. ಭಾರತವು 2024ರಲ್ಲಿ ಅಮೆರಿಕದಿಂದ 1.12 ಬಿಲಿಯನ್ ಡಾಲರ್ ಮೌಲ್ಯದ ಬೀಜಗಳನ್ನು ಆಮದು ಮಾಡಿಕೊಂಡಿದೆ. ಇತರ ಆಮದುಗಳಲ್ಲಿ ಎಥೆನಾಲ್, ಹತ್ತಿ, ದ್ವಿದಳ ಧಾನ್ಯಗಳು, ಸಸ್ಯಜನ್ಯ ತೈಲ, ತಾಜಾ ಹಣ್ಣು ಮತ್ತು ಸೋಯಾಬೀನ್ ಎಣ್ಣೆ ಸೇರಿವೆ.
2024ರಲ್ಲಿ ಅಮೆರಿಕಕ್ಕೆ ಭಾರತದ ಕೃಷಿ ಮತ್ತು ಆಹಾರ ರಫ್ತುಗಳು ಸುಮಾರು ಮೂರು ಪಟ್ಟು ಹೆಚ್ಚಾಗಿ 6.2 ಬಿಲಿಯನ್ ಡಾಲರ್ ಆಗಿವೆ. ಸಮುದ್ರ ಉತ್ಪನ್ನಗಳು, ಮಸಾಲೆಗಳು, ಅಕ್ಕಿ ಮತ್ತು ಡೈರಿ ಉತ್ಪನ್ನಗಳು ಇದರಲ್ಲಿ ಸೇರಿವೆ. ಇದು ಭಾರತವು ತನ್ನ ದೇಶೀಯ ಮಾರುಕಟ್ಟೆಯನ್ನು ಮತ್ತಷ್ಟು ತೆರೆಯುವ ವಿಷಯದಲ್ಲಿ ಜಾಗರೂಕತೆಯನ್ನು ವಹಿಸಿರುವುದನ್ನು ಸೂಚಿಸುತ್ತದೆ.






