ಅಮೆರಿಕ ವಿಶ್ವದ ಅತಿ ದೊಡ್ಡ ತೈಲ ಉತ್ಪಾದಕ ದೇಶವಾಗಿದ್ದರೂ ಅದಕ್ಕೆ ವೆನೆಝುವೆಲಾದ ಕಚ್ಚಾ ತೈಲ ಏಕೆ ಬೇಕು?
►ಸುಕಲ್ಪ್ ಶರ್ಮಾ - indianexpress. com ವರದಿ

ಸಾಂದರ್ಭಿಕ ಚಿತ್ರ | Photo Credit : magnific
ದಕ್ಷಿಣ ಅಮೆರಿಕದ ವೆನೆಝುವೆಲಾ ದೇಶದ ಜೊತೆಗಿನ ಒಪ್ಪಂದದ ಅಡಿಯಲ್ಲಿ, ಅಲ್ಲಿನ 65 ಶತಕೋಟಿ ಬ್ಯಾರೆಲ್ ಗೂ ಹೆಚ್ಚಿನ ತೈಲ, ಅಂದರೆ ಒಟ್ಟು ಸಂಗ್ರಹದ ಶೇಕಡಾ 20ರಷ್ಟು ಭಾಗದ ಮೇಲಿನ ಹೆಚ್ಚಿನ ನಿಯಂತ್ರಣವನ್ನು ತಾವು ಪಡೆಯುವುದಾಗಿ ಅಮೆರಿಕ ಹೇಳಿದೆ.
ವೆನೆಝುವೆಲಾ ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಮಾಣದ ತೈಲ ಸಂಗ್ರಹವನ್ನು (ಅಂದಾಜು 300 ಶತಕೋಟಿ ಬ್ಯಾರೆಲ್) ಹೊಂದಿದೆ. ಆದರೆ ಜಗತ್ತು ಬಳಸುವ ಒಟ್ಟು ಕಚ್ಚಾ ತೈಲದಲ್ಲಿ ಶೇಕಡಾ 1ರಷ್ಟನ್ನು ಮಾತ್ರ ಇದು ಉತ್ಪಾದಿಸಿ ಮಾರಾಟ ಮಾಡುತ್ತದೆ. ಜನವರಿಯಲ್ಲಿ ವೆನೆಝುವೆಲಾದ ಅಧ್ಯಕ್ಷ ನಿಕೋಲಸ್ ಮಾಡುರೊ ಅವರನ್ನು ಅಮೆರಿಕ ಬಂಧಿಸಿದ ನಂತರ, ಕರಾಕಸ್ ನ ತೈಲ ಕ್ಷೇತ್ರದ ನಿಯಂತ್ರಣವನ್ನು ವಾಷಿಂಗ್ಟನ್ ವಹಿಸಿಕೊಳ್ಳಲಿದೆ ಮತ್ತು ಅಮೆರಿಕದ ಪ್ರಮುಖ ಕಂಪೆನಿಗಳು ವೆನೆಝುವೆಲಾದ ತೈಲ ಉದ್ಯಮಕ್ಕೆ ಕೋಟ್ಯಂತರ ಡಾಲರ್ ಹೂಡಿಕೆ ಮಾಡಲಿವೆ ಎಂದು ಟ್ರಂಪ್ ಘೋಷಿಸಿದ್ದರು.
ಇಷ್ಟು ತಿಂಗಳುಗಳ ನಂತರ ಅವರ ಇಚ್ಛೆ ಈಡೇರುತ್ತಿರುವಂತೆ ಕಾಣುತ್ತಿದೆ. ಈ ಘೋಷಣೆಯು ಅಮೆರಿಕದ ಬಂಡವಾಳ ಹಾಗೂ ತಂತ್ರಜ್ಞಾನವನ್ನು ವೆನೆಝುವೆಲಾದ ಬೃಹತ್ ಆದರೆ ಹದಗೆಟ್ಟಿರುವ ತೈಲ ಉತ್ಪಾದನಾ ಮೂಲಸೌಕರ್ಯದೊಂದಿಗೆ ಸಂಯೋಜಿಸುವ ಮಹತ್ವಾಕಾಂಕ್ಷೆಯ ಯತ್ನವಾಗಿದೆ.
ಅಮೆರಿಕ ಪ್ರಪಂಚದಲ್ಲೇ ಅತಿ ದೊಡ್ಡ ತೈಲ ಉತ್ಪಾದಕ ದೇಶವಾಗಿದೆ. ಕಪ್ಪು ಚಿನ್ನದ ಪ್ರಮುಖ ರಫ್ತುದಾರ ಕೂಡ ಹೌದು. ಹೀಗಿದ್ದರೂ ವೆನೆಝುವೆಲಾದ ಕಚ್ಚಾ ತೈಲದ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಲು ಅದು ಏಕೆ ಬಯಸುತ್ತಿದೆ?
ಕೆಲವು ಕಾರಣಗಳು ಸ್ಪಷ್ಟವಾಗಿವೆ. ಇಂಧನ ಮಾರುಕಟ್ಟೆಯಲ್ಲಿ ಆಧಿಪತ್ಯ ಸಾಧಿಸುವುದು, ಹಾರ್ಮುಝ್ ಜಲಸಂಧಿಯ ಬಿಕ್ಕಟ್ಟಿನ ನಡುವೆ ಅಂತರರಾಷ್ಟ್ರೀಯ ತೈಲ ಬೆಲೆಗಳನ್ನು ತಗ್ಗಿಸುವುದು ಮತ್ತು ತೈಲ ಸಂಗ್ರಹವನ್ನು ಹೆಚ್ಚಿಸುವುದು. ಇದರ ಜೊತೆಗೆ ಪ್ರಮುಖ ಕಾರಣವೆಂದರೆ ವೆನೆಝುವೆಲಾ ತೈಲದ ಸ್ವರೂಪ. ಇದು ಅತ್ಯಂತ ಗಟ್ಟಿ, ಅಂಟಂಟಾದ ಮತ್ತು ಹುಳಿ ಇರುವ ಕಚ್ಚಾ ತೈಲವಾಗಿದೆ.
►ದೊಡ್ಡ ಘೋಷಣೆ, ಅಪೂರ್ಣ ವಿವರಗಳು
ಪ್ರಸ್ತುತ ಹಂತದಲ್ಲಿ, ಅಮೆರಿಕ–ವೆನೆಝುವೆಲಾ ಒಪ್ಪಂದದ ನಿಖರವಾದ ಕಾನೂನು ಮತ್ತು ವಾಣಿಜ್ಯ ರೂಪರೇಖೆಗಳು ಇನ್ನೂ ಸ್ಪಷ್ಟವಾಗಿಲ್ಲ. ವೆನೆಝುವೆಲಾದ 65 ಶತಕೋಟಿ ಬ್ಯಾರೆಲ್ ತೈಲ ಸಂಗ್ರಹದ ಮೇಲೆ ಅಮೆರಿಕ ಪರಿಣಾಮಕಾರಿಯಾಗಿ ಹೆಚ್ಚಿನ ನಿಯಂತ್ರಣ ಪಡೆಯಲಿದೆ ಎಂದು ಟ್ರಂಪ್ ಹೇಳಿದ್ದರೆ, ವೆನೆಝುವೆಲಾ ಈ ಒಪ್ಪಂದವನ್ನು ತನ್ನ ಪೆಟ್ರೋಲಿಯಂ ಉದ್ಯಮವನ್ನು ಪುನಶ್ಚೇತನಗೊಳಿಸುವ ಪ್ರಮುಖ ಹೂಡಿಕೆ ಯೋಜನೆ ಎಂದು ಬಿಂಬಿಸಿದೆ.
ಕೆಲವು ಅಂತರರಾಷ್ಟ್ರೀಯ ಮಾಧ್ಯಮಗಳ ವರದಿಗಳ ಪ್ರಕಾರ, ಈ ಒಪ್ಪಂದದ ಅಡಿಯಲ್ಲಿ ಹೊಸ ಖಾಸಗಿ ಕಂಪೆನಿಯೊಂದನ್ನು ರಚಿಸುವ ಸಾಧ್ಯತೆಯಿದೆ. ಇದರಲ್ಲಿ ಅಮೆರಿಕದ ಪಾಲುದಾರರು ಶೇಕಡಾ 55ರಷ್ಟು ಕಾರ್ಯಾಚರಣೆಯ ಪಾಲು ಹೊಂದಿರಲಿದ್ದಾರೆ. ಈ ಕಂಪೆನಿಯು 17 ತೈಲ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲಿದ್ದು, ಅಮೆರಿಕದ ಖರೀದಿದಾರರು ಮೂಲ ವೆಚ್ಚದಲ್ಲೇ ತೈಲವನ್ನು ಖರೀದಿಸಲಿದ್ದಾರೆ. ಇನ್ನೊಂದೆಡೆ, ವೆನೆಝುವೆಲಾ ಸರ್ಕಾರವು ಈ ಯೋಜನೆಯಿಂದ 100 ಶತಕೋಟಿ ಡಾಲರ್ನಷ್ಟು ಖಾಸಗಿ ಹೂಡಿಕೆ ಮತ್ತು 209 ಶತಕೋಟಿ ಡಾಲರ್ ಗೂ ಹೆಚ್ಚು ತೆರಿಗೆ ಆದಾಯ ಬರಬಹುದು ಎಂದು ಅಂದಾಜಿಸಿದೆ.
ವೆನೆಝುವೆಲಾ ಐತಿಹಾಸಿಕವಾಗಿ ತನ್ನ ತೈಲ ಉದ್ಯಮದ ಮೇಲೆ ಸಂಪೂರ್ಣ ಸರ್ಕಾರಿ ನಿಯಂತ್ರಣವನ್ನು ಕಾಯ್ದುಕೊಂಡು ಬಂದಿದೆ. ವಿದೇಶಿ ಕಂಪೆನಿಗಳಿಗೆ ತೈಲ ಉತ್ಪಾದನಾ ಆಸ್ತಿಗಳ ಮೇಲೆ ಹೆಚ್ಚಿನ ಮಾಲೀಕತ್ವ ಅಥವಾ ಕಾರ್ಯಾಚರಣೆಯ ನಿಯಂತ್ರಣ ನೀಡುವುದು ರಾಜಕೀಯವಾಗಿ ವಿವಾದಕ್ಕೆ ಕಾರಣವಾಗುವ ಸಾಧ್ಯತೆಯಿದೆ.
ಮತ್ತೊಂದೆಡೆ, ದೀರ್ಘಾವಧಿಯ ತೈಲ ಒಪ್ಪಂದಗಳನ್ನು ಮಾಡಿಕೊಳ್ಳಲು ವೆನೆಝುವೆಲಾದ ಮಧ್ಯಂತರ ಸರ್ಕಾರಕ್ಕೆ ಅಧಿಕಾರವಿದೆಯೇ ಎಂಬ ಪ್ರಶ್ನೆಗಳೂ ಎದ್ದಿವೆ. ಅಮೆರಿಕದ ಕಂಪೆನಿಗಳಿಗೆ ನಿಯಂತ್ರಣ ನೀಡುವ ಯಾವುದೇ ಒಪ್ಪಂದದ ವಿರುದ್ಧ ವೆನೆಝುವೆಲಾದ ವಿರೋಧ ಪಕ್ಷದ ನಾಯಕರು ಈಗಾಗಲೇ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಹೀಗಾಗಿ, ಹೊಸ ಒಪ್ಪಂದದ ಕಾನೂನು ಚೌಕಟ್ಟು ಅತ್ಯಂತ ನಿರ್ಣಾಯಕವಾಗಲಿದೆ. ಅಮೆರಿಕದ ಪ್ರಮುಖ ತೈಲ ಕಂಪೆನಿಗಳಿಗೆ ‘ಉತ್ಪಾದನಾ ಹಂಚಿಕೆ ಒಪ್ಪಂದಗಳನ್ನು’ ನೀಡುವುದು ಒಂದು ವಿಷಯವಾದರೆ, ತೈಲ ಕ್ಷೇತ್ರಗಳ ಮೇಲಿನ ದೀರ್ಘಾವಧಿಯ ಗುತ್ತಿಗೆ ಅಥವಾ ಸಂಪೂರ್ಣ ಬಹುಸಂಖ್ಯಾತ ಪಾಲುದಾರಿಕೆಯನ್ನು ನೀಡುವುದು ಮತ್ತೊಂದು ವಿಚಾರವಾಗಿದೆ.
►ಅಮೆರಿಕಕ್ಕೆ ವೆನೆಝುವೆಲಾದ ತೈಲ ಏಕೆ ಬೇಕು?
ವಿವಿಧ ಪ್ರಕಾರದ ಕಚ್ಚಾ ತೈಲಗಳ ಗುಣಮಟ್ಟದಲ್ಲಿ ವ್ಯತ್ಯಾಸವಿರುವುದರಿಂದ, ಪ್ರಾಯೋಗಿಕವಾಗಿ ಎಲ್ಲಾ ಕಚ್ಚಾ ತೈಲಗಳು ಒಂದೇ ರೀತಿಯದ್ದಾಗಿರುವುದಿಲ್ಲ. ಸಂಸ್ಕರಣಾಗಾರಗಳ ವಿನ್ಯಾಸಕ್ಕೆ ಯಾವ ಮಾದರಿಯ ಕಚ್ಚಾ ತೈಲವು ಅಗತ್ಯ ಪ್ರಮಾಣದಲ್ಲಿ ಸುಲಭವಾಗಿ ಸಿಗುತ್ತದೆ ಎಂಬುದು ಪ್ರಮುಖ ಅಂಶವಾಗುತ್ತದೆ.
ಅಮೆರಿಕದ ಆಸಕ್ತಿಗೆ ಪ್ರಮುಖ ಕಾರಣ ವೆನೆಝುವೆಲಾದ ತೈಲದ ಗುಣಮಟ್ಟ.
ವೆನೆಝುವೆಲಾದ ಹೆಚ್ಚಿನ ಕಚ್ಚಾ ತೈಲವನ್ನು ‘Heavy Sour’ ಎಂದು ವರ್ಗೀಕರಿಸಲಾಗಿದೆ. ಇದು ಹಗುರವಾದ ತೈಲಕ್ಕಿಂತ ಹೆಚ್ಚು ದಪ್ಪ ಮತ್ತು ಸಾಂದ್ರವಾಗಿರುವುದರಿಂದ ‘ಹೆವಿ’ ಎಂದೂ, ಗಂಧಕದ ಪ್ರಮಾಣ ಹೆಚ್ಚಿರುವುದರಿಂದ ‘ಹುಳಿ’ ಎಂದೂ ಹೇಳಲಾಗುತ್ತದೆ.
ಇದಕ್ಕೆ ತದ್ವಿರುದ್ಧವಾಗಿ, ಅಮೆರಿಕ ಉತ್ಪಾದಿಸುವ ಹೆಚ್ಚಿನ ತೈಲವು ‘Light’ ಮತ್ತು ‘Sweet’ ಆಗಿದೆ. ಅಂದರೆ, ಇದು ತೆಳ್ಳಗಿರುತ್ತದೆ ಮತ್ತು ಇದರಲ್ಲಿ ಗಂಧಕದ ಪ್ರಮಾಣ ಕಡಿಮೆಯಿರುತ್ತದೆ.
ಅಮೆರಿಕದ ತೈಲ ಸಂಸ್ಕರಣಾ ಮೂಲಸೌಕರ್ಯಗಳು, ವಿಶೇಷವಾಗಿ ಅಮೆರಿಕದ ಗಲ್ಫ್ ಕರಾವಳಿಯಲ್ಲಿರುವ ಸಂಸ್ಕರಣಾಗಾರಗಳು, ಲ್ಯಾಟಿನ್ ಅಮೆರಿಕ ಮತ್ತು ಕೆನಡಾದಿಂದ ಬರುವ ‘Heavy’ ಕಚ್ಚಾ ತೈಲವನ್ನು ಸಂಸ್ಕರಿಸಲು ವಿಶೇಷವಾಗಿ ವಿನ್ಯಾಸಗೊಳಿಸಲ್ಪಟ್ಟಿವೆ.
ಇರಾನ್ ಮತ್ತು ರಷ್ಯಾದಂತಹ ‘Heavy’ ಕಚ್ಚಾ ತೈಲದ ಬೃಹತ್ ಸಂಗ್ರಹ ಹೊಂದಿರುವ ಇತರ ದೇಶಗಳ ಜೊತೆ ಅಮೆರಿಕ ಉತ್ತಮ ಬಾಂಧವ್ಯ ಹೊಂದಿಲ್ಲ. ಈ ವರ್ಷದ ಜನವರಿಯವರೆಗೂ ವೆನೆಝುವೆಲಾದ ವಿಚಾರದಲ್ಲೂ ಇದೇ ಪರಿಸ್ಥಿತಿಯಿತ್ತು.
ಆದ್ದರಿಂದ, ಅಮೆರಿಕವು ತನ್ನದೇ ಆದ ‘Light Sweet’ ತೈಲವನ್ನು ಅಪಾರ ಪ್ರಮಾಣದಲ್ಲಿ ರಫ್ತು ಮಾಡುತ್ತಿದ್ದರೂ, ತನ್ನ ಸಂಸ್ಕರಣಾಗಾರಗಳನ್ನು ನಡೆಸಲು ‘Heavy Sour’ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.
ಅಮೆರಿಕ ಉತ್ಪಾದಿಸುವ ತೈಲಕ್ಕೂ ಮತ್ತು ಅದು ಸಂಸ್ಕರಿಸುವ ತೈಲಕ್ಕೂ ಇರುವ ಈ ವ್ಯತ್ಯಾಸಕ್ಕೆ ಕಾರಣವೇನು? ಅದನ್ನು ತಿಳಿಯಲು ನಾವು ಕೆಲವು ದಶಕಗಳ ಹಿಂದಿನ ಇತಿಹಾಸವನ್ನು ನೋಡಬೇಕಾಗುತ್ತದೆ.
►ಅಮೆರಿಕದ ತೈಲ ಸಂಸ್ಕರಣಾ ಮೂಲಸೌಕರ್ಯ
ಅಮೆರಿಕದ ಗಲ್ಫ್ ಕರಾವಳಿಯಲ್ಲಿರುವ ಹೆಚ್ಚಿನ ತೈಲ ಸಂಸ್ಕರಣಾಗಾರಗಳನ್ನು ಕಳೆದ ಶತಮಾನದಲ್ಲಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಅಮೆರಿಕಕ್ಕೆ ‘Heavy Sour’ ಮಾದರಿಯ ಕಚ್ಚಾ ತೈಲವೇ ಸುಲಭವಾಗಿ ಸಿಗುತ್ತಿತ್ತು. ದೇಶದ ಒಳಗಿನ ಸಾಂಪ್ರದಾಯಿಕ ತೈಲ ಕ್ಷೇತ್ರಗಳಿಂದ ಹಾಗೂ ನಂತರದ ದಿನಗಳಲ್ಲಿ ವೆನೆಝುವೆಲಾ, ಮೆಕ್ಸಿಕೋ ಮತ್ತು ಕೆನಡಾದಂತಹ ನೆರೆಯ ದೇಶಗಳಿಂದ ಇದು ಪೂರೈಕೆಯಾಗುತ್ತಿತ್ತು.
ಕಳೆದ ಶತಮಾನದ ಬಹುಪಾಲು ಅವಧಿಯಲ್ಲಿ ಅಮೆರಿಕದ ಪ್ರಮುಖ ತೈಲ ಕಂಪೆನಿಗಳು ವೆನೆಝುವೆಲಾದ ತೈಲ ಉದ್ಯಮದಲ್ಲಿ ಕೋಟ್ಯಂತರ ಡಾಲರ್ ಹೂಡಿಕೆ ಮಾಡಿದ್ದವು. ಇದು ಕರಾಕಸ್ ನ ‘Heavy Sour’ ಕಚ್ಚಾ ತೈಲವನ್ನು ಅಮೆರಿಕದ ಸಂಸ್ಕರಣಾಗಾರಗಳಿಗೆ ಪೂರೈಸಲು ನೆರವಾಯಿತು.
►ವೆನೆಝುವೆಲಾದಲ್ಲಿ ಬೃಹತ್ ತೈಲ ಸಂಗ್ರಹವಿದ್ದರೂ ಉತ್ಪಾದನೆ ತೀರ ಕಡಿಮೆ
ನಂತರದ ಶತಮಾನದಲ್ಲಿ ಹೊಸ ಕೊರೆಯುವಿಕೆ ಮತ್ತು ‘ಫ್ರ್ಯಾಕಿಂಗ್’ ತಂತ್ರಜ್ಞಾನಗಳು ಶೇಲ್ ಬಂಡೆಗಳಲ್ಲಿ ಸಿಲುಕಿದ್ದ ಅಪಾರ ಪ್ರಮಾಣದ ತೈಲವನ್ನು ಹೊರತೆಗೆಯಲು ನೆರವಾದವು. ಇದರಿಂದ ದೇಶೀಯ ತೈಲ ಉತ್ಪಾದನೆ ಏಕಾಏಕಿ ಹೆಚ್ಚಾಯಿತು. ಇದನ್ನು ಅಮೆರಿಕದ ‘ಶೇಲ್ ತೈಲ ಕ್ರಾಂತಿ’ ಎಂದು ಕರೆಯಲಾಗುತ್ತದೆ.
►ಹಾಗಿದ್ದರೆ ಅಮೆರಿಕ ಹೊಸ ಸಂಸ್ಕರಣಾಗಾರಗಳನ್ನು ಏಕೆ ನಿರ್ಮಿಸಲಿಲ್ಲ ಅಥವಾ ಹಳೆಯವುಗಳನ್ನು ಏಕೆ ಬದಲಾಯಿಸಲಿಲ್ಲ?
ಸಂಸ್ಕರಣಾಗಾರಗಳನ್ನು ಸ್ಥಾಪಿಸುವುದು, ವಿಶೇಷವಾಗಿ ‘Heavy’ ಕಚ್ಚಾ ತೈಲವನ್ನು ಸಂಸ್ಕರಿಸುವ ಜಟಿಲ ವ್ಯವಸ್ಥೆಯನ್ನು ನಿರ್ಮಿಸುವುದು, ಅಪಾರ ಬಂಡವಾಳ ಅಗತ್ಯವಿರುವ ಕೆಲಸವಾಗಿದೆ. ಅವುಗಳ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಾಯಿಸುವುದು ಆರ್ಥಿಕವಾಗಿ ಲಾಭದಾಯಕವಲ್ಲ.
ಆದ್ದರಿಂದ, ಸಂಸ್ಕರಣಾಗಾರವು ಗರಿಷ್ಠ ಸಾಮರ್ಥ್ಯ ಮತ್ತು ದಕ್ಷತೆಯಿಂದ ಕೆಲಸ ಮಾಡಲು, ಅದನ್ನು ಮೂಲತಃ ಯಾವ ಮಾದರಿಯ ತೈಲಕ್ಕಾಗಿ ವಿನ್ಯಾಸಗೊಳಿಸಲಾಗಿದೆಯೋ ಅದನ್ನೇ ಪೂರೈಸುವುದು ಮುಖ್ಯವಾಗುತ್ತದೆ. ವೆನೆಝುವೆಲಾದ ಕಚ್ಚಾ ತೈಲದ ಮೇಲೆ ಅಮೆರಿಕ ಆಸಕ್ತಿ ಹೊಂದಲು ಇದು ಪ್ರಮುಖ ಕಾರಣವಾಗಿದೆ.
ಇದರ ಜೊತೆಗೆ ಭೌಗೋಳಿಕ ರಾಜಕೀಯ ಕಾರಣಗಳೂ ಇವೆ. ಇರಾನ್ ವಿರುದ್ಧದ ಯುದ್ಧದ ನಂತರ, ಇರಾನ್ ‘ಹಾರ್ಮುಝ್ ಜಲಸಂಧಿ’ಯ ಮೂಲಕ ನಡೆಯುತ್ತಿದ್ದ ತೈಲ ಪೂರೈಕೆಯನ್ನು ತಡೆಹಿಡಿಯಿತು. ಶಾಂತಿಯುತ ದಿನಗಳಲ್ಲಿ ಪ್ರಪಂಚದ ಐದನೇ ಒಂದು ಭಾಗದಷ್ಟು ಇಂಧನ ಸಾರಿಗೆ ಈ ಕಿರಿದಾದ ಜಲಸಂಧಿಯ ಮೂಲಕವೇ ನಡೆಯುತ್ತಿತ್ತು. ಈ ಬಿಕ್ಕಟ್ಟಿನ ನಂತರ ಟ್ರಂಪ್ ಆಡಳಿತವು ತನಗೆ ಹತ್ತಿರವಿರುವ ಮತ್ತು ನಂಬಿಕಸ್ಥ ತೈಲ ಮೂಲವನ್ನು ಹೊಂದಲು ಬಯಸಿದೆ.
ವೆನೆಝುವೆಲಾ ಐತಿಹಾಸಿಕವಾಗಿ ಅಮೆರಿಕಕ್ಕೆ ಬೃಹತ್ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಪೂರೈಸುತ್ತಿತ್ತು. ಈ ಎಲ್ಲ ಪರಿಸ್ಥಿತಿಗಳು ಬದಲಾಗಿದ್ದು ಹೇಗೆ?
►ವೆನೆಝುವೆಲಾ–ಅಮೆರಿಕ ತೈಲ ಬಾಂಧವ್ಯ
2000ರ ದಶಕದ ಆರಂಭದವರೆಗೂ ವೆನೆಝುವೆಲಾ ಅಮೆರಿಕಕ್ಕೆ ಕಚ್ಚಾ ತೈಲದ ಪ್ರಮುಖ ಮೂಲವಾಗಿತ್ತು. ಅಮೆರಿಕದ ಪ್ರಮುಖ ತೈಲ ಕಂಪೆನಿಗಳು ವೆನೆಝುವೆಲಾದ ತೈಲ ವಲಯದಲ್ಲಿ ಹೆಚ್ಚಿನ ಆಧಿಪತ್ಯ ಸಾಧಿಸಿದ್ದವು. ನಂತರದ ದಿನಗಳಲ್ಲಿ ಹ್ಯೂಗೋ ಚಾವೇಜ್ ಅವರ ಆಡಳಿತದಲ್ಲಿ ತೈಲ ಉದ್ಯಮದ ಮೇಲೆ ಸರ್ಕಾರದ ನಿಯಂತ್ರಣ ಹೆಚ್ಚಾಯಿತು. ಪರಿಣಾಮವಾಗಿ ದೇಶದ ತೈಲ ಉತ್ಪಾದನೆ ಮತ್ತು ರಫ್ತು ಕುಸಿಯಲು ತೊಡಗಿತು. ಆಸ್ತಿಗಳ ರಾಷ್ಟ್ರೀಕರಣದ ಕಾರಣದಿಂದ ಎಕ್ಸಾನ್ ಮೊಬಿಲ್ ಮತ್ತು ಕೊನೊಕೊಫಿಲಿಪ್ಸ್ ನಂತಹ ಅಮೆರಿಕದ ತೈಲ ದೈತ್ಯ ಕಂಪೆನಿಗಳು 2007ರಲ್ಲಿ ವೆನೆಝುವೆಲಾದಿಂದ ಹೊರಬಂದವು. ದೇಶದ ಸರ್ಕಾರಿ ತೈಲ ಕಂಪೆನಿಯು ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ಬಳಲತೊಡಗಿತು.
ಈ ಅವಧಿಯಲ್ಲಿ ತೀವ್ರ ಬಂಡವಾಳದ ಅಭಾವದಿಂದಾಗಿ ವೆನೆಝುವೆಲಾದ ತೈಲ ಮೂಲಸೌಕರ್ಯಗಳು ಹದಗೆಟ್ಟವು. ವಾಷಿಂಗ್ಟನ್ ಮತ್ತು ಸಮಾಜವಾದಿ ಹಾದಿಯಲ್ಲಿದ್ದ ಕರಾಕಸ್ ನಡುವಿನ ಬಾಂಧವ್ಯವೂ ವರ್ಷಗಳು ಕಳೆದಂತೆ ಮತ್ತಷ್ಟು ಕ್ಷೀಣಿಸಿತು. 1990ರ ದಶಕದ ಅಂತ್ಯದಲ್ಲಿ ವೆನೆಝುವೆಲಾ ಪ್ರತಿದಿನ 20 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಅಮೆರಿಕಕ್ಕೆ ರಫ್ತು ಮಾಡುತ್ತಿತ್ತು ಮತ್ತು ಅದರ ಒಟ್ಟು ತೈಲ ರಫ್ತಿನಲ್ಲಿ ಅಮೆರಿಕವೇ ಅರ್ಧಕ್ಕಿಂತ ಹೆಚ್ಚು ಪಾಲು ಹೊಂದಿತ್ತು. ಆದರೆ 2018ರ ವೇಳೆಗೆ ಅಮೆರಿಕಕ್ಕೆ ಆಗುತ್ತಿದ್ದ ತೈಲ ಆಮದು ಈ ಗರಿಷ್ಠ ಪ್ರಮಾಣದ ನಾಲ್ಕನೇ ಒಂದು ಭಾಗಕ್ಕೆ ಕುಸಿಯಿತು.
►ಅಮೆರಿಕಕ್ಕೆ ಎದುರಾಗಿರುವ ಸವಾಲುಗಳು
ವೆನೆಝುವೆಲಾ ವಿಶ್ವದ ಒಟ್ಟು ತೈಲ ಸಂಗ್ರಹದ ಐದನೇ ಒಂದು ಭಾಗವನ್ನು ಹೊಂದಿದ್ದರೂ, ಜಾಗತಿಕ ಉತ್ಪಾದನೆಯಲ್ಲಿ ಶೇಕಡಾ 1ಕ್ಕಿಂತ ಕಡಿಮೆ ತೈಲವನ್ನು ಮಾತ್ರ ಉತ್ಪಾದಿಸುತ್ತದೆ. ಈ ಶತಮಾನದ ಆರಂಭದಲ್ಲಿದ್ದ ತೈಲ ಉತ್ಪಾದನೆಗೆ ಹೋಲಿಸಿದರೆ, ಪ್ರಸ್ತುತ ವೆನೆಝುವೆಲಾದ ಉತ್ಪಾದನೆ ಕೇವಲ ಮೂರನೇ ಒಂದು ಭಾಗದಷ್ಟಿದೆ. ವೆನೆಝುವೆಲಾದ ತೈಲ ಉದ್ಯಮದ ಬಗ್ಗೆ ಟ್ರಂಪ್ ಪ್ರದರ್ಶಿಸುತ್ತಿರುವ ತೀವ್ರ ಆಶಾವಾದದ ನಡುವೆಯೂ, ಉತ್ಪಾದನೆಯನ್ನು ಮತ್ತೆ ಹೆಚ್ಚಿಸುವುದು ಸುಲಭದ ಮಾತಲ್ಲ.
ನಾರ್ವೆ ಮೂಲದ ಇಂಧನ ಸಂಶೋಧನಾ ಸಂಸ್ಥೆ ‘ರೈಸ್ಟಾಡ್ ಎನರ್ಜಿ’ ಜನವರಿಯಲ್ಲಿ ಅಂದಾಜಿಸಿದಂತೆ, 2026ರಲ್ಲೇ ಹೊಸ ಹೂಡಿಕೆ ಪ್ರಕ್ರಿಯೆ ಆರಂಭವಾದರೂ ವೆನೆಝುವೆಲಾದ ತೈಲ ಉತ್ಪಾದನೆಯು 1990ರ ದಶಕದ ಹಂತಕ್ಕೆ ತಲುಪಲು 2040ರವರೆಗೆ ಸಮಯ ಬೇಕಾಗುತ್ತದೆ. ಇದು ಸಾಧ್ಯವಾಗಬೇಕಾದರೆ ಮುಂದಿನ 15 ವರ್ಷಗಳಲ್ಲಿ 180 ಶತಕೋಟಿ ಡಾಲರ್ ಗೂ ಹೆಚ್ಚು ಹೂಡಿಕೆ ಮಾಡಬೇಕಾಗುತ್ತದೆ.
ವೆನೆಝುವೆಲಾದ ಮೇಲಿನ ಅಮೆರಿಕದ ನಿರ್ಬಂಧಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದರ ತೈಲ ಪೂರೈಕೆಯನ್ನು ತೀವ್ರವಾಗಿ ಕಡಿತಗೊಳಿಸಿದಾಗ, ಚೀನಾ ಅದರ ಪ್ರಮುಖ ಗ್ರಾಹಕ ದೇಶವಾಯಿತು. ಕಳೆದ ಎರಡು ದಶಕಗಳಲ್ಲಿ ಚೀನಾ ಅಮೆರಿಕದ ಕಂಪೆನಿಗಳು ಬಿಟ್ಟುಹೋದ ಜಾಗವನ್ನು ಭರ್ತಿ ಮಾಡಿತು. ತೈಲ ಕ್ಷೇತ್ರವೂ ಸೇರಿದಂತೆ ವೆನೆಝುವೆಲಾದಲ್ಲಿ ಕೋಟ್ಯಂತರ ಡಾಲರ್ ಹೂಡಿಕೆ ಮಾಡಿತು. ರಷ್ಯಾ ಕೂಡ ವೆನೆಝುವೆಲಾದ ಪೆಟ್ರೋಲಿಯಂ ಉದ್ಯಮದಲ್ಲಿ ಭಾರೀ ಹೂಡಿಕೆ ಮಾಡಿದೆ.
ವಾಷಿಂಗ್ಟನ್ ಮತ್ತು ಕರಾಕಸ್ ನಡುವಿನ ಒಪ್ಪಂದವು ಭೌಗೋಳಿಕ ರಾಜಕೀಯವಾಗಿ ಪ್ರಾಮುಖ್ಯತೆ ಪಡೆಯುವುದು ಇಲ್ಲೇ. ವೆನೆಝುವೆಲಾದಲ್ಲಿ ಚೀನಾ ಮತ್ತು ರಷ್ಯಾ ಮಾಡಿರುವ ಭಾರೀ ಹೂಡಿಕೆಯ ಭವಿಷ್ಯ ಈಗ ಅನಿಶ್ಚಿತವಾಗಿದೆ. ಈ ಹಿನ್ನೆಲೆಯಲ್ಲಿ, ವೆನೆಝುವೆಲಾದ ತೈಲ ಕ್ಷೇತ್ರವನ್ನು ವಹಿಸಿಕೊಳ್ಳುವುದಾಗಿ ಟ್ರಂಪ್ ನೀಡಿರುವ ಹೇಳಿಕೆಯನ್ನು ಅಮೆರಿಕ ಖಂಡದಲ್ಲಿ ಚೀನಾ ಮತ್ತು ರಷ್ಯಾದ ಪ್ರಭಾವವನ್ನು ಕಡಿಮೆ ಮಾಡುವ ವಾಷಿಂಗ್ಟನ್ ನ ಪ್ರಯತ್ನವಾಗಿಯೂ ನೋಡಬಹುದು.
ಈ ಒಪ್ಪಂದವು ವೆನೆಝುವೆಲಾ ಮತ್ತೆ ಅಮೆರಿಕದತ್ತ ಒಲವು ತೋರಲು ಆರಂಭಿಕ ಹಂತವಾಗಬಹುದು. ದಶಕಗಳಿಂದ ವೆನೆಝುವೆಲಾ ಲ್ಯಾಟಿನ್ ಅಮೆರಿಕದಲ್ಲಿ ವಾಷಿಂಗ್ಟನ್ ನ ಪ್ರಬಲ ವಿರೋಧಿಗಳಲ್ಲಿ ಒಂದಾಗಿತ್ತು, ಮತ್ತು ಅದರ ತೈಲ ಉದ್ಯಮವು ಚೀನಾ, ರಷ್ಯಾ ಹಾಗೂ ಅಮೆರಿಕದ ಇತರ ಎದುರಾಳಿ ದೇಶಗಳ ಜೊತೆಗಿನ ಬಾಂಧವ್ಯದೊಂದಿಗೆ ಬೆಸೆದುಕೊಂಡಿತ್ತು.
ಸೌಜನ್ಯ: indianexpress.com






