ಅಮೆರಿಕ ನೇತೃತ್ವದ Pax Silica ಗುಂಪಿನ ಸದಸ್ಯತ್ವದಿಂದ ಭಾರತಕ್ಕೇನು ಪ್ರಯೋಜನ?

Photo Credit : NDTV
ಕೃತಕ ಬುದ್ಧಿಮತ್ತೆ (AI) ಯುಗದಲ್ಲಿ ಜಾಗತಿಕ ಸಿಲಿಕಾನ್ ಪೂರೈಕೆ ಸರಪಳಿಯನ್ನು ಭದ್ರಪಡಿಸುವ ಗುರಿಯನ್ನು ಹೊಂದಿರುವ ಅಮೆರಿಕ ನೇತೃತ್ವದ ಕಾರ್ಯತಂತ್ರದ ಉಪಕ್ರಮವಾದ ಪ್ಯಾಕ್ಸ್ ಸಿಲಿಕಾದ ಸದಸ್ಯರಾಗಲು ಭಾರತವನ್ನು ಮುಂದಿನ ತಿಂಗಳು ಆಹ್ವಾನಿಸಲಾಗುವುದು ಎಂದು ಅಮೆರಿಕದ ಹೊಸ ರಾಯಭಾರಿ ಸೆರ್ಗಿಯೊ ಗೋರ್ ಸೋಮವಾರ ಹೇಳಿದ್ದಾರೆ. ಪ್ರಸ್ತಾವಿತ ಉಪಕ್ರಮವು 2022ರ ಖನಿಜ ಭದ್ರತಾ ಪಾಲುದಾರಿಕೆ ಹಾಗೂ ಇತ್ತೀಚಿನ ಕ್ವಾಡ್ ಕ್ರಿಟಿಕಲ್ ಮಿನರಲ್ಸ್ ಇನಿಶಿಯೇಟಿವ್ ನಂತಹ ಅಮೆರಿಕ ನೇತೃತ್ವದ ಪ್ರಯತ್ನಗಳನ್ನು ಅನುಸರಿಸುತ್ತದೆ. ಹಲವು ಉದ್ದಿಮೆಗಳಿಗೆ ಅಗತ್ಯವಿರುವ ಸಿಲಿಕಾನ್ ಧಾತುವಿನ ತಡೆರಹಿತ ಪೂರೈಕೆಯನ್ನು ಉದ್ದೇಶಿಸಿ ಅಮೆರಿಕ ಸೇರಿದಂತೆ ಒಂಬತ್ತು ದೇಶಗಳು ಒಪ್ಪಂದ ಮಾಡಿಕೊಂಡಿವೆ. ಅಮೆರಿಕ, ಜಪಾನ್, ಸಿಂಗಪುರ, ನೆದರ್ಲ್ಯಾಂಡ್ಸ್, ಬ್ರಿಟನ್, ಇಸ್ರೇಲ್, ಯುಎಇ, ದಕ್ಷಿಣ ಕೊರಿಯಾ ಮತ್ತು ಆಸ್ಟ್ರೇಲಿಯಾ ಪ್ಯಾಕ್ಸ್ ಸಿಲಿಕಾ ಗುಂಪಿನ ಸದಸ್ಯ ರಾಷ್ಟ್ರಗಳಾಗಿವೆ.
ಪ್ಯಾಕ್ಸ್ ಸಿಲಿಕಾ ಎಂದರೇನು?
ಪ್ಯಾಕ್ಸ್ ಸಿಲಿಕಾ ಎಂಬುದು AIಗೆ ಅಗತ್ಯವಿರುವ ಮೂಲಸೌಕರ್ಯವನ್ನು ಬಲಪಡಿಸಲು ಹಾಗೂ ಸಿಲಿಕಾನ್ ಮತ್ತು ಸಂಬಂಧಿತ ವಸ್ತುಗಳಿಗೆ ದೃಢವಾದ ಜಾಗತಿಕ ಪೂರೈಕೆ ಸರಪಳಿಯನ್ನು ನಿರ್ಮಿಸಲು ವಿಶ್ವಾಸಾರ್ಹ ಪಾಲುದಾರ ರಾಷ್ಟ್ರಗಳನ್ನು ಗುರುತಿಸುವ ಅಮೆರಿಕ ಸರ್ಕಾರದ ಪ್ರಯತ್ನವಾಗಿದೆ. ‘ಪ್ಯಾಕ್ಸ್’ ಎಂದರೆ ಲ್ಯಾಟಿನ್ ಭಾಷೆಯಲ್ಲಿ ‘ಶಾಂತಿ’ ಎಂದರ್ಥ. ‘ಸಿಲಿಕಾ’ ಎಂಬುದು ಸೆಮಿಕಂಡಕ್ಟರ್ ಚಿಪ್ಗಳಲ್ಲಿ ಮೂಲ ವಸ್ತುವಾದ ಸಿಲಿಕಾನ್ ತಯಾರಿಕೆಗೆ ಬಳಸುವ ಸಂಸ್ಕರಿತ ಸಂಯುಕ್ತವನ್ನು ಸೂಚಿಸುತ್ತದೆ. ಅಮೆರಿಕ ಸರ್ಕಾರದ ಪ್ರಕಾರ, ನಿರ್ಣಾಯಕ ಖನಿಜಗಳು, ಸೆಮಿಕಂಡಕ್ಟರ್ ಸಾಮರ್ಥ್ಯ, AI ನವೀನತೆ ಹಾಗೂ ಕೈಗಾರಿಕಾ ಪರಿಸರ ವ್ಯವಸ್ಥೆಗಳವರೆಗೆ ಪ್ರತಿಯೊಂದು ರಾಷ್ಟ್ರವು “ವಿಭಿನ್ನ ಸಾಮರ್ಥ್ಯಗಳನ್ನು” ಕೊಡುಗೆ ನೀಡುವ ನಿರೀಕ್ಷೆಯಿದೆ.
ಆಸ್ಟ್ರೇಲಿಯಾದ ಪಾತ್ರವು ಈ ತರ್ಕವನ್ನು ವಿವರಿಸುತ್ತದೆ. 2023ರಲ್ಲಿ ದೇಶವು ವಿಶ್ವದ ಅತಿದೊಡ್ಡ ಲಿಥಿಯಂ ಉತ್ಪಾದಕ ರಾಷ್ಟ್ರವಾಗಿತ್ತು. OECD (ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ) ದತ್ತಾಂಶದ ಪ್ರಕಾರ, ಬ್ಯಾಟರಿಗಳಲ್ಲಿ ಬಳಸುವ ಲಿಥಿಯಂ ಖನಿಜದ ಜಾಗತಿಕ ಪೂರೈಕೆಯ ಅರ್ಧದಷ್ಟು ಪಾಲು ಆಸ್ಟ್ರೇಲಿಯಾದಲ್ಲಿದೆ.
ಈ ದೇಶಗಳು ಒಟ್ಟಾಗಿ ಜಾಗತಿಕ AI ಪೂರೈಕೆ ಸರಪಳಿಯನ್ನು ಬಲಪಡಿಸುವ ಪ್ರಮುಖ ಕಂಪೆನಿಗಳು ಮತ್ತು ಹೂಡಿಕೆದಾರರ ನೆಲೆಯಾಗಿವೆ. ಅವುಗಳಲ್ಲಿ ಸೋನಿ, ಹಿಟಾಚಿ, ಫ್ಯೂಜಿಟ್ಸು, ಸ್ಯಾಮ್ಸಂಗ್, ಎಸ್ಕೆ ಹೈನಿಕ್ಸ್, ಟೆಮಾಸೆಕ್, ಡೀಪ್ಮೈಂಡ್, ಎಂಜಿಎಕ್ಸ್, ರಿಯೊ ಟಿಂಟೊ ಮತ್ತು ಎಎಸ್ಎಂಎಲ್ ಸೇರಿವೆ. ತಂತ್ರಜ್ಞಾನ, ಕಂಪ್ಯೂಟಿಂಗ್ ಹಾಗೂ ಅವುಗಳನ್ನು ಸಕ್ರಿಯಗೊಳಿಸುವ ಖನಿಜಗಳು 21ನೇ ಶತಮಾನದಲ್ಲಿ ಆರ್ಥಿಕ ಮತ್ತು ಕಾರ್ಯತಂತ್ರದ ಶಕ್ತಿಯನ್ನು ರೂಪಿಸುತ್ತವೆ ಎಂಬ ದೃಷ್ಟಿಕೋನದ ಮೇಲೆ ಈ ಉಪಕ್ರಮವನ್ನು ರೂಪಿಸಲಾಗಿದೆ.
ಅಮೆರಿಕ ಪ್ಯಾಕ್ಸ್ ಸಿಲಿಕಾ ಮೈತ್ರಿಕೂಟವನ್ನು ಏಕೆ ರಚಿಸಿದೆ?
“20ನೇ ಶತಮಾನವು ತೈಲ ಮತ್ತು ಉಕ್ಕಿನ ಮೇಲೆ ಸಾಗಿದರೆ, 21ನೇ ಶತಮಾನವು ಕಂಪ್ಯೂಟರ್ಗಳು ಹಾಗೂ ಅವನ್ನು ಪೋಷಿಸುವ ಖನಿಜಗಳ ಮೇಲೆ ನಡೆಯುತ್ತದೆ” ಎಂದು ಅಮೆರಿಕದ ಆರ್ಥಿಕ ವ್ಯವಹಾರಗಳ ಅಧೀನ ಕಾರ್ಯದರ್ಶಿ ಜಾಕೋಬ್ ಹೆಲ್ಬರ್ಗ್ ಹೇಳಿದ್ದಾರೆ. ಹೆಲ್ಬರ್ಗ್ ಈ ಉಪಕ್ರಮವನ್ನು ಮುನ್ನಡೆಸುತ್ತಿದ್ದಾರೆ. ನಿರ್ಣಾಯಕ ಖನಿಜಗಳ ಹೊರತೆಗೆಯುವಿಕೆಯನ್ನು ನಿಯಂತ್ರಿಸುವ AI ಚಾಲಿತ ಜಗತ್ತಿನಲ್ಲಿ, ಪೂರೈಕೆ ಸರಪಳಿ ಹಾಗೂ ತಂತ್ರಜ್ಞಾನ ಪರಿಸರ ವ್ಯವಸ್ಥೆಯು ನಿರ್ವಿವಾದ ನಾಯಕನಾಗಲಿದೆ. ನಿರ್ಣಾಯಕ ಖನಿಜಗಳ ಹೊರತೆಗೆಯುವಿಕೆಯಲ್ಲಿ ಚೀನಾ ಜಗತ್ತನ್ನು ಮುನ್ನಡೆಸುತ್ತಿರುವುದರಿಂದ, ವಿಶ್ವಾಸಾರ್ಹ ಪಾಲುದಾರರೊಂದಿಗೆ ಪರ್ಯಾಯ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು ಅಮೆರಿಕ ಈ ಮೈತ್ರಿಕೂಟವನ್ನು ರೂಪಿಸಿದೆ.
ಭಾರತಕ್ಕೆ ಪ್ಯಾಕ್ಸ್ ಸಿಲಿಕಾ ಏಕೆ ಮುಖ್ಯ?
ಭಾರತಕ್ಕೆ AI ಮತ್ತು ಅಡ್ವಾನ್ಸ್ಡ್ ಕಂಪ್ಯೂಟಿಂಗ್ ಅನ್ನು ಬೆಂಬಲಿಸುವ ಭವಿಷ್ಯದ ಪೂರೈಕೆ ಸರಪಳಿಗಳನ್ನು ರೂಪಿಸುವಲ್ಲಿ ಪ್ಯಾಕ್ಸ್ ಸಿಲಿಕಾದಲ್ಲಿ ಭಾಗವಹಿಸುವುದು ಮಹತ್ವದ್ದಾಗಿದೆ. ನಿರ್ಣಾಯಕ ಖನಿಜ ಭದ್ರತೆಯ ಮೇಲೆ ಕೇಂದ್ರೀಕರಿಸುವ ಪ್ಯಾಕ್ಸ್ ಸಿಲಿಕಾ ಮಾದರಿಯ ಗುಂಪುಗಳ ಭಾಗವಾಗುವುದು ಭಾರತಕ್ಕೆ ಅಗತ್ಯವಾಗಿದೆ. ಕಾರ್ಯತಂತ್ರದ ದೃಷ್ಟಿಯಿಂದ ಈ ಪ್ರಮುಖ ವಿಷಯಗಳಲ್ಲಿ ಭಾರತ ಭಾಗಿಯಾಗಬೇಕು ಎಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ಯಾಕ್ಸ್ ಸಿಲಿಕಾ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಸ್. ಕೃಷ್ಣನ್ ಹೇಳಿದ್ದಾರೆ.
AI ಹಾಗೂ ಸೆಮಿಕಂಡಕ್ಟರ್ಗಳ ಕುರಿತು ಭಾರತದ ಅಸ್ತಿತ್ವದಲ್ಲಿರುವ ನೀತಿಗಳು ಪ್ಯಾಕ್ಸ್ ಸಿಲಿಕಾದ ಗುರಿಗಳೊಂದಿಗೆ ನಿಕಟವಾಗಿ ಹೊಂದಿಕೆಯಾಗುತ್ತವೆ. 2024ರಲ್ಲಿ ಐದು ವರ್ಷಗಳಿಗೆ ₹10,372 ಕೋಟಿ ವೆಚ್ಚದಲ್ಲಿ ಅನುಮೋದಿಸಲಾದ ಭಾರತ AI ಮಿಷನ್, ಕೃತಕ ಬುದ್ಧಿಮತ್ತೆಯನ್ನು ಪ್ರಜಾಪ್ರಭುತ್ವಗೊಳಿಸಲು, ಸ್ಟಾರ್ಟ್ಅಪ್ಗಳನ್ನು ಬೆಂಬಲಿಸಲು ಮತ್ತು ಭಾರತೀಯ ಭಾಷೆಗಳಿಗೆ ಮೂಲಭೂತ ಮಾದರಿಗಳನ್ನು ನಿರ್ಮಿಸಲು ಉದ್ದೇಶಿಸಿದೆ.
ಭಾರತ ಸೆಮಿಕಂಡಕ್ಟರ್ ಮಿಷನ್ ಇನ್ನೊಂದು ದೊಡ್ಡ ಪ್ರಯತ್ನವಾಗಿದ್ದು, ದೇಶವನ್ನು ಚಿಪ್ ಉತ್ಪಾದನಾ ಕೇಂದ್ರವಾಗಿಸಲು 2021ರಲ್ಲಿ 76,000 ಕೋಟಿ ರೂ. ಮೀಸಲಿಡಲಾಗಿದೆ.
2024ರ ನಾಸ್ಕಾಮ್–ಜಿನ್ನೋವ್ ವರದಿ ಪ್ರಕಾರ, ದೇಶದಲ್ಲಿ 2,975ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCCs) ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ವಿಶ್ವದ ಅತಿದೊಡ್ಡ ಪಾಲು ಭಾರತದಲ್ಲಿದೆ. 2024ರ ಹಣಕಾಸು ವರ್ಷದ ವೇಳೆಗೆ GCCಗಳು ಸುಮಾರು 1.9 ಮಿಲಿಯನ್ ವೃತ್ತಿಪರರನ್ನು ಉದ್ಯೋಗಕ್ಕೆ ಸೇರಿಸಿಕೊಂಡಿವೆ ಎಂದು 2024–25ರ ಆರ್ಥಿಕ ಸಮೀಕ್ಷೆ ತಿಳಿಸಿದೆ.
ಪ್ಯಾಕ್ಸ್ ಸಿಲಿಕಾದಲ್ಲಿ ಭಾರತದ ಉಪಸ್ಥಿತಿ ತಂತ್ರಜ್ಞಾನ ವಲಯಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇದರೊಂದಿಗೆ ಆಮದು ಅವಲಂಬನೆ ಇನ್ನಷ್ಟು ಹೆಚ್ಚುವ ಸಾಧ್ಯತೆಯೂ ಇದೆ. ಅಮೆರಿಕ ನೇತೃತ್ವದ ಈ ಉಪಕ್ರಮದ ಭಾಗವಾಗಿರುವ ದೇಶಗಳು AI ಮತ್ತು ಸೆಮಿಕಂಡಕ್ಟರ್ ಪೂರೈಕೆ ಸರಪಳಿಯಲ್ಲಿ ಅಗ್ರಸ್ಥಾನದಲ್ಲಿವೆ. ಉದಾಹರಣೆಗೆ, ಸೆಮಿಕಂಡಕ್ಟರ್ ಚಿಪ್ಗಳ ವಿನ್ಯಾಸ ಮತ್ತು ಐಪಿ ಕ್ಷೇತ್ರದಲ್ಲಿ ಅಮೆರಿಕ ಮುಂಚೂಣಿಯಲ್ಲಿದೆ. ಚಿಪ್ಗಳನ್ನು ಮುದ್ರಿಸಲು ಬಳಸುವ ಲಿಥೋಗ್ರಫಿ ಯಂತ್ರಗಳಿಗಾಗಿ ನೆದರ್ಲ್ಯಾಂಡ್ಸ್ ಅತ್ಯಗತ್ಯ ರಾಷ್ಟ್ರವಾಗಿದೆ.
ಡಿಸೆಂಬರ್ನಲ್ಲಿ ಭಾರತೀಯ AI ಮೂಲಸೌಕರ್ಯದಲ್ಲಿ ಅಮೆರಿಕದ ಕಂಪೆನಿಗಳು ಮಹತ್ತರ ಹೂಡಿಕೆಗಳನ್ನು ಮಾಡಿವೆ. ಕಳೆದ ವರ್ಷ ಮೈಕ್ರೋಸಾಫ್ಟ್ ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ ತನ್ನ AI ಮೂಲಸೌಕರ್ಯ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಸಾಮರ್ಥ್ಯ ವಿಸ್ತರಣೆಗೆ $17.5 ಬಿಲಿಯನ್ ಹೂಡಿಕೆ ಮಾಡುವ ಯೋಜನೆಯನ್ನು ಪ್ರಕಟಿಸಿತು. ಕಳೆದ ತಿಂಗಳು ಆಂಧ್ರಪ್ರದೇಶದಲ್ಲಿ AI ಡೇಟಾ ಸೆಂಟರ್ ಸ್ಥಾಪನೆಗಾಗಿ ಐದು ವರ್ಷಗಳಲ್ಲಿ $15 ಬಿಲಿಯನ್ಗಿಂತ ಹೆಚ್ಚು ಹೂಡಿಕೆ ಮಾಡುವುದಾಗಿ ಗೂಗಲ್ ಘೋಷಿಸಿದೆ. ಇದು ದೇಶದಲ್ಲಿ ಇದುವರೆಗಿನ ಅದರ ಅತಿದೊಡ್ಡ ಹೂಡಿಕೆಯಾಗಿದೆ. ಈ ಯೋಜನೆಗೆ ಮೂಲಸೌಕರ್ಯ ನಿರ್ಮಿಸಲು ತಂತ್ರಜ್ಞಾನ ದೈತ್ಯ ಕಂಪೆನಿ ಅದಾನಿ ಗ್ರೂಪ್ ಹಾಗೂ ಏರ್ಟೆಲ್ ಜೊತೆ ಪಾಲುದಾರಿಕೆಗೆ ಮುಂದಾಗಿದ್ದು, ಹೊಸ ಅಂತರರಾಷ್ಟ್ರೀಯ ಸಬ್ಸೀ ಗೇಟ್ವೇ ನಿರ್ಮಾಣವೂ ಇದರಲ್ಲಿ ಸೇರಿದೆ.
ಪ್ಯಾಕ್ಸ್ ಸಿಲಿಕಾದಿಂದ ಭಾರತ ಹೇಗೆ ಪ್ರಯೋಜನ ಪಡೆಯಬಹುದು?
ಕೇಂದ್ರ ಸರ್ಕಾರದ ಪ್ರಕಾರ, ಸೆಮಿಕಂಡಕ್ಟರ್ ಉತ್ಪಾದನೆಗೆ ಬಳಸುವ ಅಪರೂಪದ ಭೂ ಖನಿಜಗಳ ಅತಿದೊಡ್ಡ ನಿಕ್ಷೇಪ ಚೀನಾದಲ್ಲಿದೆ. ಭಾರತವು ತನ್ನ ದೇಶೀಯ ಕೈಗಾರಿಕೆಗಳನ್ನು ನಿರ್ವಹಿಸಲು ಆಮದುಗಳ ಮೇಲೆ ಅವಲಂಬಿತವಾಗಿದೆ. 2024–25 ಹಣಕಾಸು ವರ್ಷದಲ್ಲಿ ಭಾರತವು ಸುಮಾರು 54,000–57,000 ಟನ್ ಅಪರೂಪದ ಭೂ ಖನಿಜಗಳನ್ನು ಆಮದು ಮಾಡಿಕೊಂಡಿದ್ದು, ಅದರಲ್ಲಿ ಶೇಕಡಾ 93ರಷ್ಟು ಚೀನಾದಿಂದ ಬಂದಿವೆ. ಇದರಿಂದ ಅಪರೂಪದ ಭೂ ಖನಿಜಗಳ ರಫ್ತಿನ ಮೇಲಿನ ಚೀನಾದ ನಿರ್ಬಂಧಗಳಿಗೆ ಭಾರತ ಗುರಿಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ಚೀನಾ ಆರು ತಿಂಗಳ ಕಾಲ ರಫ್ತು ಸ್ಥಗಿತಗೊಳಿಸಿದ್ದರಿಂದ ಭಾರತೀಯ ವಾಹನ ಉದ್ಯಮಕ್ಕೆ ಹೊಡೆತ ಬಿದ್ದಿತ್ತು.
ಚೀನಾದ ಆಮದುಗಳ ಮೇಲಿನ ಭಾರತದ ಅವಲಂಬನೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ದೇಶೀಯವಾಗಿ ಈ ನಿರ್ಣಾಯಕ ಖನಿಜಗಳ ಪರಿಶೋಧನೆ, ಗಣಿಗಾರಿಕೆ ಮತ್ತು ಸಂಸ್ಕರಣೆಯನ್ನು ಹೆಚ್ಚಿಸಲು ಭಾರತ ರಾಷ್ಟ್ರೀಯ ನಿರ್ಣಾಯಕ ಖನಿಜ ಮಿಷನ್ (NCMM) ಅನ್ನು ಆರಂಭಿಸಿದೆ. ಪ್ಯಾಕ್ಸ್ ಸಿಲಿಕಾಗೆ ಸೇರುವುದರಿಂದ ಆಸ್ಟ್ರೇಲಿಯಾದಿಂದ ಖನಿಜ ಆಮದು ಮಾಡಿಕೊಳ್ಳುವ ಅವಕಾಶ ಭಾರತಕ್ಕೆ ಲಭಿಸಬಹುದು. ಜೊತೆಗೆ ಜಪಾನ್ ಹಾಗೂ ನೆದರ್ಲ್ಯಾಂಡ್ಸ್ನೊಂದಿಗೆ ಪಾಲುದಾರಿಕೆಯಿಂದ ಹೂಡಿಕೆ ಮತ್ತು ತಂತ್ರಜ್ಞಾನ ವರ್ಗಾವಣೆಯನ್ನೂ ಸುಗಮಗೊಳಿಸುವ ಸಾಧ್ಯತೆ ಇದೆ.







