ಇರಾನ್ ಜೊತೆ ಇತರ ದೇಶಗಳು ವ್ಯಾಪಾರ ಮಾಡುವುದನ್ನು ತಡೆಯಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಸಾಧ್ಯವೇ?

ಡೊನಾಲ್ಡ್ ಟ್ರಂಪ್ | Photo Credit : PTI
ಇರಾನ್ ಮೇಲಿನ ಒತ್ತಡವನ್ನು ಹೆಚ್ಚಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆ ದೇಶದ ವಿರುದ್ಧ ‘ಅತ್ಯಂತ ಭೀಕರ ಆರ್ಥಿಕ ಕಾರ್ಯಾಚರಣೆ’ ನಡೆಸುವುದಾಗಿ ಘೋಷಿಸಿದ್ದಾರೆ. ಎರಡೂ ದೇಶಗಳ ನಡುವಿನ ಸಂಘರ್ಷವನ್ನು ಅಂತ್ಯಗೊಳಿಸಲು ನಡೆಯುತ್ತಿರುವ ಮಾತುಕತೆಗಳು ಮುರಿದುಬಿದ್ದ ಬೆನ್ನಲ್ಲೇ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.
ಬುಧವಾರ ತಮ್ಮ ‘ಟ್ರೂತ್ ಸೋಶಿಯಲ್’ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಒಪ್ಪಂದ ಮಾಡಿಕೊಳ್ಳುವ ಅವಕಾಶವನ್ನು ಇರಾನ್ ‘ಬಳಸಿಕೊಳ್ಳಲು ವಿಫಲವಾಗಿದೆ’. ಹೀಗಾಗಿ ಆ ದೇಶವು ‘ಅಭೂತಪೂರ್ವ ಮಟ್ಟದ ಆರ್ಥಿಕ ಯುದ್ಧ ಮತ್ತು ದಿಗ್ಬಂಧನವನ್ನು’ ಎದುರಿಸಲಿದೆ ಎಂದು ಬೆದರಿಕೆ ಹಾಕಿದ್ದಾರೆ.
ಇರಾನ್ ಜೊತೆ ವ್ಯಾಪಾರ ವಹಿವಾಟು ನಡೆಸುವ ಯಾವುದೇ ದೇಶದ ವಿರುದ್ಧ ನಿರ್ಬಂಧಗಳನ್ನು ಹೇರುವುದಾಗಿಯೂ ಅವರು ಎಚ್ಚರಿಸಿದ್ದಾರೆ.
“ತಮ್ಮ ಹಣಕಾಸು ಸಂಸ್ಥೆಗಳು, ಉದ್ಯಮಗಳು, ವಿಮಾನ ನಿಲ್ದಾಣಗಳು ಅಥವಾ ಸರ್ಕಾರಿ ಸಂಸ್ಥೆಗಳ ಮೂಲಕ ಇರಾನ್ ಗೆ ಯಾವುದೇ ರೀತಿಯ ನೆರವು ನೀಡಲು ಅನುಮತಿಸುವ ಯಾವುದೇ ದೇಶವಾದರೂ ಸರಿ, ಅದು ‘ಅಪಾರ ಆರ್ಥಿಕ ಪರಿಣಾಮಗಳನ್ನು’ ಎದುರಿಸಬೇಕಾಗುತ್ತದೆ. ತೈಲ ಕಳ್ಳಸಾಗಣೆ, ಸ್ವ್ಯಾಪ್ ಲೈನ್ಗಳು (ಕರೆನ್ಸಿ ವಿನಿಮಯ ವ್ಯವಸ್ಥೆ), ನಗದು ವರ್ಗಾವಣೆ, ವಿನಿಮಯ ಕೇಂದ್ರಗಳು, ಹಡಗು ನೋಂದಣಿ, ನಕಲಿ ಕಂಪೆನಿಗಳು—ಇವೆಲ್ಲವೂ ತಕ್ಷಣವೇ ನಿಲ್ಲಬೇಕು. ನೀವು ಯಾರೆಂಬುದು ನಿಮಗೆ ತಿಳಿದಿದೆ. ಇದು ಆರ್ಥಿಕ ಮಟ್ಟದ ಬೃಹತ್ ಸಮರವಾಗಲಿದ್ದು, ಇರಾನ್ ಬೆದರಿಕೆಯನ್ನು ಒಂಟಿಯಾಗಿಸಿ ಸೋಲಿಸಲು ನಮ್ಮ ಎಲ್ಲಾ ಮಿತ್ರರಾಷ್ಟ್ರಗಳು ಅಮೆರಿಕದೊಂದಿಗೆ ನಿಲ್ಲಬೇಕಿದೆ” ಎಂದು ಅವರು ಬರೆದುಕೊಂಡಿದ್ದಾರೆ.
ಆರ್ಥಿಕ ನಿರ್ಬಂಧಗಳ ಕುರಿತಾದ ಟ್ರಂಪ್ ಅವರ ಹೊಸ ಬೆದರಿಕೆಯನ್ನು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ತಳ್ಳಿಹಾಕಿದ್ದಾರೆ. ಇದನ್ನು “ಅಮೆರಿಕದ ಸ್ವಂತ ಬಿಕ್ಕಟ್ಟಿನಿಂದ ಗಮನ ಹರಿಸುವ ತಂತ್ರ: ಅಭೂತಪೂರ್ವ ಸಾಲ ಮತ್ತು ಏರುತ್ತಿರುವ ಬಡ್ಡಿ ವೆಚ್ಚಗಳು” ಎಂದು ಕರೆದಿದ್ದಾರೆ.
“ವಿಫಲವಾದ ನೀತಿಗಳನ್ನೇ ಮತ್ತೆ ಮುಂದುವರಿಸುವುದು ಮತ್ತಷ್ಟು ಸೋಲನ್ನು ಮತ್ತು ಇರಾನಿಯನ್ನರ ಶತ್ರುತ್ವವನ್ನು ಮಾತ್ರ ತರಲಿದೆ. ಅಮೆರಿಕದ ಆರ್ಥಿಕ ಭಯೋತ್ಪಾದನೆಯು ಜಾಗತಿಕ ಅರ್ಥವ್ಯವಸ್ಥೆ ಮತ್ತು ಪ್ರಪಂಚದಾದ್ಯಂತದ ಸಾರ್ವಭೌಮತ್ವಕ್ಕೆ ಬೆದರಿಕೆಯಾಗಿದೆ” ಎಂದು ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇರಾನ್ ನ ಸರ್ಕಾರಿ ಮಾಧ್ಯಮಗಳು ಸಹ ಟ್ರಂಪ್ ಅವರ ಈ ಘೋಷಣೆಯನ್ನು ಹೊಸದೇನೂ ಅಲ್ಲ ಎಂದು ತಳ್ಳಿಹಾಕಿವೆ.
ಅಮೆರಿಕ ಅಧ್ಯಕ್ಷರ ಹೇಳಿಕೆಗಳು “ಮಿಲಿಟರಿ ಆಕ್ರಮಣದ ವೈಫಲ್ಯದ” ಪರಿಣಾಮ ಎಂದು ಇರಾನ್ ನ ಸರ್ಕಾರಿ ಪ್ರಸಾರ ಸಂಸ್ಥೆ IRIB ಹೇಳಿದ್ದರೆ, ಈ ಘೋಷಣೆಯು “ಹೊಸ ಬೆಳವಣಿಗೆಯೇನೂ ಅಲ್ಲ” ಎಂದು ಸುದ್ದಿ ಸಂಸ್ಥೆ ‘ತಸ್ನಿಮ್’ ತಿಳಿಸಿದೆ. ಅಮೆರಿಕ ಹಲವು ವರ್ಷಗಳಿಂದ ಇರಾನ್ ಜೊತೆಗಿನ ಯಾವುದೇ ಹಣಕಾಸು ಮತ್ತು ಆರ್ಥಿಕ ನಂಟುಗಳನ್ನು ತಡೆಯಲು ಪ್ರಯತ್ನಿಸುತ್ತಿದೆ. ಆದರೆ ಇರಾನ್ ಈ ನಿಯಂತ್ರಣಗಳನ್ನು ಹೇಗೆ ಮೀರಿ ಸಾಗಬೇಕು ಎಂಬುದನ್ನು ಕರಗತ ಮಾಡಿಕೊಂಡಿದೆ ಎಂದು ಅದು ಹೇಳಿದೆ.
ಇದರ ಮಧ್ಯೆಯೇ, ಈ ವಾರ ಇರಾನ್ ಪಡೆಗಳು ತಮ್ಮ ಪ್ರಾದೇಶಿಕ ವ್ಯಾಪ್ತಿಯ ಮೇಲೆ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿವೆ ಎಂದು ಆರೋಪಿಸಿರುವ ಯುನೈಟೆಡ್ ಅರಬ್ ಎಮಿರೇಟ್ಸ್, ಬುಧವಾರ ಇರಾನ್ ವಿರುದ್ಧ ಸುದೀರ್ಘ ಅವಧಿಯ ವ್ಯಾಪಾರ ನಿಷೇಧವನ್ನು ಘೋಷಿಸಿದೆ. ಆದರೆ ಇರಾನ್ ಈ ಆರೋಪಗಳನ್ನು ನಿರಾಕರಿಸಿದೆ.
ಇದಲ್ಲದೆ, ತಝಿಕಿಸ್ತಾನ್ ಮತ್ತು ಇರಾನ್ ನಡುವೆ ದುಶಾನ್ಬೆಗೆ ಇರಾನ್ ನಿಂದ ತೈಲ ರಫ್ತು ಮಾಡಲು ಅನುವು ಮಾಡಿಕೊಡುವ ಒಪ್ಪಂದವೊಂದು ಈ ವಾರ ಅಂತಿಮಗೊಂಡಿದೆ.
ಹಾಗಿದ್ದರೆ, ಇತರ ದೇಶಗಳು ಇರಾನ್ ಜೊತೆ ವ್ಯಾಪಾರ ಮಾಡುವುದನ್ನು ತಡೆಯಲು ಟ್ರಂಪ್ ಗೆ ನಿಜವಾಗಿಯೂ ಸಾಧ್ಯವೇ?
►ಇರಾನ್ ಏನೆಲ್ಲಾ ರಫ್ತು ಮಾಡುತ್ತದೆ? ಅದರ ಪಾಲುದಾರರು ಯಾರು?
ಇರಾನ್ ‘ಒಪೆಕ್’ (OPEC) ತೈಲ ಉತ್ಪಾದಕ ದೇಶಗಳ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದ್ದು, ತೈಲವೇ ಅದರ ಪ್ರಮುಖ ರಫ್ತು ವಸ್ತುವಾಗಿದೆ.
ಯುದ್ಧ ಪ್ರಾರಂಭವಾಗುವ ಮೊದಲು ಇರಾನ್ ದಿನಕ್ಕೆ ಸುಮಾರು 13 ರಿಂದ 15 ಲಕ್ಷ ಬ್ಯಾರಲ್ ಕಚ್ಚಾ ತೈಲವನ್ನು ರಫ್ತು ಮಾಡುತ್ತಿತ್ತು. ಇದರಿಂದ ಫೆಬ್ರವರಿ ಆರಂಭದಲ್ಲಿ ದಿನಕ್ಕೆ ಸುಮಾರು 11.5 ಕೋಟಿ ಡಾಲರ್ (ಅಥವಾ ತಿಂಗಳಿಗೆ 3.45 ಶತಕೋಟಿ ಡಾಲರ್) ಆದಾಯ ಗಳಿಸುತ್ತಿತ್ತು. ಆದರೆ ಮೇ ತಿಂಗಳಲ್ಲಿ ಕಚ್ಚಾ ತೈಲ ರಫ್ತು ಕಳೆದ ಆರು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ, ಅಂದರೆ ದಿನಕ್ಕೆ 3 ಲಕ್ಷ ಬ್ಯಾರಲ್ ಗಿಂತಲೂ ಕೆಳಗೆ ಕುಸಿಯಿತು. ಇರಾನ್ ಬಂದರುಗಳ ಮೇಲೆ ಅಮೆರಿಕದ ನೌಕಾಪಡೆಯು ದಿಗ್ಬಂಧನ ಹೇರಿರುವುದು ಇರಾನ್ ನ ಪ್ರಮುಖ ಆದಾಯದ ಮೂಲಕ್ಕೆ ಹೊಡೆತ ನೀಡಿದೆ.
ಮತ್ತೊಂದೆಡೆ, ಇರಾನ್ ತೈಲದ ಮೇಲೆ ಅಮೆರಿಕ ಮತ್ತೆ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ ಎಂದು ಅಲ್ಲಿನ ಹಣಕಾಸು ಸಚಿವಾಲಯ ಮಂಗಳವಾರ ಘೋಷಿಸಿದೆ.
ಹಾರ್ಮುಜ್ ಜಲಸಂಧಿ ಬಂದ್ ಆದ ಹಿನ್ನೆಲೆಯಲ್ಲಿ ಉಂಟಾದ ಇಂಧನ ಬಿಕ್ಕಟ್ಟನ್ನು ಶಮನಗೊಳಿಸಲು, ಸಮುದ್ರದಲ್ಲಿ ಈಗಾಗಲೇ ಸರಕು ಸಾಗಣೆಯಲ್ಲಿದ್ದ ತೈಲ ಹಡಗುಗಳ ಮೇಲಿನ ನಿರ್ಬಂಧಗಳನ್ನು ಟ್ರಂಪ್ ತಾತ್ಕಾಲಿಕವಾಗಿ ಸಡಿಲಗೊಳಿಸಿದ್ದರು. ಅಮೆರಿಕ ಮತ್ತು ಇರಾನ್ ನಡುವೆ ಜೂನ್ ನಲ್ಲಿ ನಡೆದ ತಿಳುವಳಿಕಾ ಒಪ್ಪಂದದ ಭಾಗವಾಗಿ, ಶಾಂತಿ ಮಾತುಕತೆಗಳ ಸಮಯದಲ್ಲಿ ಇರಾನ್ ಕಚ್ಚಾ ತೈಲ ಮಾರಾಟ ಮಾಡಲು ಅಮೆರಿಕ 60 ದಿನಗಳ ಪೂರ್ಣ ವಿನಾಯಿತಿ ನೀಡಿತ್ತು. ಈ ಅವಧಿಯು ಆಗಸ್ಟ್ 21ಕ್ಕೆ ಮುಕ್ತಾಯಗೊಂಡಿದೆ.
ಯುದ್ಧ ಮತ್ತು ನಿರ್ಬಂಧಗಳ ಕಾರಣದಿಂದಾಗಿ ದೇಶದ ತೈಲ ರಫ್ತು ಕುಸಿದಿದೆ, ಆದರೆ ಆದಾಯದ ನಷ್ಟವನ್ನು ಸರಿದೂಗಿಸಲು ಅಧಿಕಾರ ವರ್ಗವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಇರಾನ್ ನ ಕೇಂದ್ರೀಯ ಬ್ಯಾಂಕ್ ಗವರ್ನರ್ ಅಬ್ದುಲ್ ನಾಸರ್ ಹೆಮ್ಮತಿ ಬುಧವಾರ ತಿಳಿಸಿದ್ದಾರೆ.
ಇರಾನ್ ನ ಹಣಕಾಸು ವರ್ಷ ಮಾರ್ಚ್ 21ರಿಂದ ಪ್ರಾರಂಭವಾಗಿದ್ದು, ಆಗಸ್ಟ್ 16ರವರೆಗಿನ ತೈಲೇತರ ರಫ್ತು ಮೌಲ್ಯ ಸುಮಾರು 15 ಶತಕೋಟಿ ಡಾಲರ್ ತಲುಪಿದೆ ಮತ್ತು ಆಮದು 17 ಶತಕೋಟಿ ಡಾಲರ್ನಷ್ಟಿದೆ ಎಂದು ಇರಾನ್ ಸುಂಕ ಆಡಳಿತದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ವರ್ಷಕ್ಕೆ ಹೋಲಿಸಿದರೆ ವ್ಯಾಪಾರ ವಹಿವಾಟು ಶೇಕಡಾ 24ರಷ್ಟು ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ, ಅಂದರೆ ಮಾರ್ಚ್ 2025ರಿಂದ ಜನವರಿ 2026ರವರೆಗೆ ಇರಾನ್ ನ ಒಟ್ಟು ತೈಲೇತರ ವ್ಯಾಪಾರ ಮೌಲ್ಯ 94 ಶತಕೋಟಿ ಡಾಲರ್ ನಷ್ಟಿತ್ತು.
ವಿಶ್ವ ಬ್ಯಾಂಕ್ ನ ಇತ್ತೀಚಿನ ಡೇಟಾ ಪ್ರಕಾರ ಯುಎಇ, ಚೀನಾ, ಭಾರತ, ತುರ್ಕಿಯೆ ಮತ್ತು ಜರ್ಮನಿ ಇರಾನ್ ನ ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳಾಗಿವೆ. ಇವುಗಳಲ್ಲಿ ಯುಎಇ ಈ ವಾರ ಇರಾನ್ ವಿರುದ್ಧ ಸುದೀರ್ಘ ಅವಧಿಯ ವ್ಯಾಪಾರ ನಿಷೇಧವನ್ನು ಘೋಷಿಸಿದೆ.
ವಾಷಿಂಗ್ಟನ್ ಇರಾನ್ ಮೇಲೆ ಎಲ್ಲಾ ರೀತಿಯಲ್ಲೂ ಒತ್ತಡ ಹೇರುತ್ತಿದೆ. 14 ನಿರ್ಬಂಧಗಳ ಪ್ಯಾಕೇಜ್ಗಳ ಮೂಲಕ ಇರಾನ್ ತೈಲ ರಫ್ತನ್ನು ಶೂನ್ಯಕ್ಕೆ ತಳ್ಳಲು ‘ಗರಿಷ್ಠ ಒತ್ತಡ’ ತಂತ್ರ ರೂಪಿಸಲಾಗಿದೆ. ಜೊತೆಗೆ ಇರಾನ್ ಜೊತೆ ವ್ಯಾಪಾರ ನಡೆಸುವ ಯಾವುದೇ ದೇಶದ ಮೇಲೆ ಶೇಕಡಾ 25ರಷ್ಟು ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಮಿಡಲ್ ಈಸ್ಟ್ ಕೌನ್ಸಿಲ್ ಆನ್ ಗ್ಲೋಬಲ್ ಅಫೇರ್ಸ್ನ ಹಿರಿಯ ಸಹೋದ್ಯೋಗಿ ಫ್ರೆಡರಿಕ್ ಶ್ನೇಡರ್ ಹೇಳಿರುವುದಾಗಿ ಅಲ್ ಜಝೀರಾ ವರದಿ ಉಲ್ಲೇಖಿಸಿದೆ.
ಅಮೆರಿಕದ ನಿರ್ಬಂಧಗಳು ಕೇವಲ ಸ್ವತಂತ್ರವಾಗಿ ಇರಾನ್ ಮೇಲೆ ಯಾವಾಗಲೂ ಸಂಪೂರ್ಣ ಪರಿಣಾಮ ಬೀರಲು ಸಾಧ್ಯವಾಗಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಹಿಂದೆ, “ಇರಾನ್ ನ ಕಚ್ಚಾ ತೈಲ ರಫ್ತು ದಿನಕ್ಕೆ ಸುಮಾರು 17 ಲಕ್ಷ ಬ್ಯಾರಲ್ ಗಳಷ್ಟು ಸಾರ್ವಕಾಲಿಕ ದಾಖಲೆ ಬರೆದಿತ್ತು. ಅದರಲ್ಲಿ ಹೆಚ್ಚಿನ ಭಾಗವನ್ನು ಚೀನಾವೇ ಖರೀದಿಸಿತ್ತು. ನಿರ್ಬಂಧಗಳು ಇರಾನ್ ಜೊತೆಗಿನ ವ್ಯಾಪಾರದ ವೆಚ್ಚವನ್ನು ಹೆಚ್ಚಿಸುತ್ತವೆಯೇ ಹೊರತು ಅದನ್ನು ಸಂಪೂರ್ಣವಾಗಿ ಕೊನೆಗೊಳಿಸಲು ಸಾಧ್ಯವಿಲ್ಲ” ಎಂದು Aljazeera ಜತೆ ಮಾತನಾಡಿದ ಶ್ನೇಡರ್ ತಿಳಿಸಿದ್ದಾರೆ.
ಮೇ ತಿಂಗಳಲ್ಲಿ ಚೀನಾ ತನ್ನ ದೇಶದ ಕಂಪೆನಿಗಳು ಅಮೆರಿಕದ ನಿರ್ಬಂಧಗಳಿಗೆ ಬದ್ಧವಾಗಿರುವುದನ್ನು ತಡೆದಿದೆ. ಈ ತಡೆಯಾಜ್ಞೆ ಕಾಯ್ದೆಯನ್ನು ಚೀನಾ ಬಳಸಿಕೊಂಡಿರುವುದು ಇದೇ ಮೊದಲು. ತುರ್ಕಿಯೆ ಮತ್ತು ಪಾಕಿಸ್ತಾನಗಳು ವ್ಯಾಪಾರವನ್ನು ಮುಂದುವರಿಸಿವೆ. 2018ರಿಂದಲೂ ಅಮೆರಿಕದ ಇರಾನ್ ವಿರೋಧಿ ನಿರ್ಬಂಧಗಳಿಗೆ ಸೇರ್ಪಡೆಯಾಗುವುದಿಲ್ಲ ಎಂಬುದು ತುರ್ಕಿಯೆಯ ನಿಲುವಾಗಿದೆ. ಈಗ ಯುಎಇ ಹೊಸ ವ್ಯಾಪಾರ ನಿಷೇಧ ಹೇರಿರುವುದರಿಂದ, ಇದು ಖಂಡಿತವಾಗಿಯೂ ತೀವ್ರ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ.
ಹಾರ್ಮುಜ್ ಜಲಸಂಧಿ ಬಂದ್ ಆಗಿರುವುದರಿಂದ ಎಮಿರಾಟಿ ವ್ಯಾಪಾರ ಕುಸಿದಿದೆ. ಪ್ರಸ್ತುತ ಭೌತಿಕ ಸರಕು ಸಾಗಣೆ ಅಷ್ಟು ಪ್ರಸ್ತುತವೆನಿಸುವುದಿಲ್ಲ ಮತ್ತು ಹಣಕಾಸಿನ ಹರಿವನ್ನು ಮೇಲ್ವಿಚಾರಣೆ ಮಾಡುವುದು ಸವಾಲಾಗಿದೆ ಎಂದಿದ್ದಾರೆ ಅವರು.
ಇರಾನ್ ತನ್ನ ಪ್ರಮುಖ ಪಾಲುದಾರರೊಂದಿಗೆ ಹೊಂದಿರುವ ವ್ಯಾಪಾರದ ವಿವರ ಹೀಗಿದೆ:
►ಚೀನಾ
ಚೀನಾ ದೇಶವು ಇರಾನ್ ನ ಅತ್ಯಂತ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವೆಂದು ಪರಿಗಣಿಸಲಾಗಿದೆ. ಎರಡೂ ದೇಶಗಳ ನಡುವಿನ ವಾರ್ಷಿಕ ದ್ವಿಪಕ್ಷೀಯ ವ್ಯಾಪಾರ ಮೌಲ್ಯ 10 ಶತಕೋಟಿಯಿಂದ 41 ಶತಕೋಟಿ ಡಾಲರ್ ನಡುವೆ ಇದೆ ಎಂದು ಅಂದಾಜಿಸಲಾಗಿದೆ. ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳ ಕಾರಣದಿಂದಾಗಿ ಚೀನಾದ ಅಧಿಕೃತ ದತ್ತಾಂಶಗಳಲ್ಲಿ ಇರಾನ್ ವ್ಯಾಪಾರದ ವಿವರಗಳು ಲಭ್ಯವಿಲ್ಲದಿರುವುದರಿಂದ, ನಿಖರವಾದ ಸಂಖ್ಯೆಯನ್ನು ದೃಢೀಕರಿಸುವುದು ಕಷ್ಟ.
ತೈಲ ವಿಶ್ಲೇಷಣಾ ಸಂಸ್ಥೆ ‘ಕ್ಲೆಪ್ಲರ್’ ಪ್ರಕಾರ, ತೈಲವು ಚೀನಾದ ಪ್ರಮುಖ ಆಮದು ವಸ್ತುವಾಗಿದೆ. 2025ರಲ್ಲಿ ಇರಾನ್ ರಫ್ತು ಮಾಡಿದ ಶೇಕಡಾ 80ಕ್ಕಿಂತ ಹೆಚ್ಚು ತೈಲವನ್ನು ಬೀಜಿಂಗ್ ಖರೀದಿಸಿದೆ ಎನ್ನಲಾಗಿದೆ. ಟ್ರ್ಯಾಕಿಂಗ್ ಸಾಧನಗಳನ್ನು ಆಫ್ ಮಾಡುವ ಮೂಲಕ ಮತ್ತು ಸುಳ್ಳು ಧ್ವಜಗಳನ್ನು ಬಳಸುವ ಮೂಲಕ ಅಮೆರಿಕದ ನಿರ್ಬಂಧಗಳಿಂದ ತಪ್ಪಿಸಿಕೊಳ್ಳುವ ‘ಶ್ಯಾಡೋ ಫ್ಲೀಟ್ಸ್’ ಮೂಲಕವೇ ಈ ವ್ಯಾಪಾರ ಹೆಚ್ಚಾಗಿ ನಡೆದಿದೆ.
►ಇರಾಕ್
ಫೆಬ್ರವರಿ ಕೊನೆಯಲ್ಲಿ ಯುದ್ಧ ಪ್ರಾರಂಭವಾಗುವ ಮೊದಲು, ಇರಾನ್ ವರ್ಷಕ್ಕೆ 12 ಶತಕೋಟಿ ಡಾಲರ್ ಮೌಲ್ಯದ ಸರಕು ಮತ್ತು ಸೇವೆಗಳನ್ನು ಇರಾಕ್ಗೆ ರಫ್ತು ಮಾಡುತ್ತಿತ್ತು. ಇದರಲ್ಲಿ ಗ್ಯಾಸ್ ಮತ್ತು ವಿದ್ಯುತ್ ಸೇರಿದಂತೆ 4 ಶತಕೋಟಿ ಡಾಲರ್ ಮೌಲ್ಯದ ಸರಕುಗಳು ನೇರವಾಗಿ ಇರಾಕ್ ಸರ್ಕಾರಕ್ಕೆ ಹಾಗೂ 8 ಶತಕೋಟಿ ಡಾಲರ್ ಮೌಲ್ಯದ ಸರಕುಗಳು ಖಾಸಗಿ ವಲಯಕ್ಕೆ ಸರಬರಾಜಾಗುತ್ತಿದ್ದವು ಎಂದು ಹೆಮ್ಮತಿ ತಿಳಿಸಿದ್ದಾರೆ.
ಇರಾನ್ ಗೆ ಪಾವತಿಸಬೇಕಾದ ಬಾಕಿ ಹಣವನ್ನು ತೀರಿಸುವುದಾಗಿ ಇರಾಕ್ ಭರವಸೆ ನೀಡಿದೆ. ಹಾರ್ಮುಜ್ ಜಲಸಂಧಿ ಬಂದ್ ಆಗಿರುವುದರಿಂದ ಮತ್ತು ತನ್ನದೇ ತೈಲ ಆದಾಯಕ್ಕೆ ಅಡಚಣೆಯುಂಟಾಗಿರುವುದರಿಂದ ಬಾಗ್ದಾದ್ ಕೂಡ ಸಂಕಷ್ಟ ಎದುರಿಸುತ್ತಿದೆ ಎಂದು ಹೆಮ್ಮತಿ ಉಲ್ಲೇಖಿಸಿದ್ದಾರೆ.
►ಭಾರತ
ಭಾರತ ಕೂಡ ಇರಾನ್ ನ ಪ್ರಮುಖ ವ್ಯಾಪಾರ ಪಾಲುದಾರ ದೇಶಗಳಲ್ಲಿ ಒಂದಾಗಿದೆ. ಭಾರತದ ವಾಣಿಜ್ಯ ಸಚಿವಾಲಯದ ಪ್ರಕಾರ, 2025ರಲ್ಲಿ ಇರಾನ್ ಜೊತೆಗಿನ ಭಾರತದ ಒಟ್ಟು ದ್ವಿಪಕ್ಷೀಯ ವ್ಯಾಪಾರ ಮೌಲ್ಯ ಸುಮಾರು 1.6 ಶತಕೋಟಿ ಡಾಲರ್ನಷ್ಟಿತ್ತು. ಬಾಸ್ಮತಿ ಅಕ್ಕಿ, ಹಣ್ಣುಗಳು, ತರಕಾರಿಗಳು, ಔಷಧಗಳು ಮತ್ತು ಇತರೆ ಫಾರ್ಮಾಸ್ಯುಟಿಕಲ್ ಉತ್ಪನ್ನಗಳು ಭಾರತದಿಂದ ಇರಾನ್ ಗೆ ರಫ್ತಾಗುವ ಪ್ರಮುಖ ವಸ್ತುಗಳಾಗಿವೆ. ಡ್ರೈಫ್ರೂಟ್ಸ್, ಬೀಜಗಳು, ಸಾವಯವ ರಾಸಾಯನಿಕಗಳು, ಖನಿಜಗಳು ಮತ್ತು ಪೆಟ್ರೋಕೆಮಿಕಲ್ ಉತ್ಪನ್ನಗಳು ಇರಾನ್ನಿಂದ ಆಮದಾಗುತ್ತವೆ.
2019ರಲ್ಲಿ ಇರಾನ್ ತೈಲದ ಮೇಲೆ ಅಮೆರಿಕ ಹೊಸ ನಿರ್ಬಂಧಗಳನ್ನು ಹೇರಿದ ನಂತರ ಭಾರತ ಇರಾನ್ನಿಂದ ತೈಲ ಆಮದನ್ನು ಸ್ಥಗಿತಗೊಳಿಸಿತ್ತು. ಟ್ರಂಪ್ ಅವರ ಇತ್ತೀಚಿನ ಎಚ್ಚರಿಕೆಯು, ಭಾರತವು ಇರಾನ್ ಜೊತೆಗಿನ ತನ್ನ ವ್ಯಾಪಾರ ವಹಿವಾಟನ್ನು ಇನ್ನಷ್ಟು ಕಡಿಮೆ ಮಾಡಬಹುದು ಎಂಬುದನ್ನು ಸೂಚಿಸುತ್ತದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
►ಯುನೈಟೆಡ್ ಅರಬ್ ಎಮಿರೇಟ್ಸ್
ಯುಎಇ ಕೂಡ ಇರಾನ್ ಗೆ ಅತ್ಯಂತ ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ.
ಆರ್ಥಿಕ ವಿಶ್ಲೇಷಣಾ ಸಂಸ್ಥೆ ‘ಒಬ್ಸರ್ವೇಟರಿ ಆಫ್ ಎಕನಾಮಿಕ್ ಕಾಂಪ್ಲೆಕ್ಸಿಟಿ’ (OEC) ನೀಡಿದ ಇತ್ತೀಚಿನ ಡೇಟಾ ಪ್ರಕಾರ, 2023ರಲ್ಲಿ ಯುಎಇ ಮತ್ತು ಇರಾನ್ ನಡುವೆ ನಡೆದ ಅಧಿಕೃತ ಸರಕು ವ್ಯಾಪಾರ ಮೌಲ್ಯ 6.2 ಶತಕೋಟಿ ಡಾಲರ್ನಷ್ಟಿತ್ತು.
ಯುಎಇಯಿಂದ ಇರಾನ್ ಗೆ ಸುಮಾರು 5.8 ಶತಕೋಟಿ ಡಾಲರ್ ಮೌಲ್ಯದ ರಫ್ತು ನಡೆದಿದ್ದರೆ, ಪ್ರತಿಯಾಗಿ ಇರಾನ್ನಿಂದ ಸುಮಾರು 450 ಮಿಲಿಯನ್ ಡಾಲರ್ ಮೌಲ್ಯದ ಸರಕುಗಳು ಆಮದಾಗಿದ್ದವು.
ಆ ವರ್ಷ ಇರಾನ್, ಯುಎಇಯಿಂದ 2.81 ಶತಕೋಟಿ ಡಾಲರ್ ಮೌಲ್ಯದ ಮೊಬೈಲ್ ಫೋನ್ಗಳನ್ನು ಆಮದು ಮಾಡಿಕೊಂಡಿತ್ತು. ಕಂಪ್ಯೂಟರ್ಗಳು, ತಂಬಾಕು ಮತ್ತು ಬೀಜಗಳು ಇರಾನ್ ಆಮದು ಮಾಡಿಕೊಂಡ ಇತರ ಪ್ರಮುಖ ವಸ್ತುಗಳಾಗಿದ್ದವು. ಅದೇ ವರ್ಷ ಇರಾನ್, ಯುಎಇಗೆ ಬೀಜಗಳು, ಹಣ್ಣುಗಳು, ಸಾಂಬಾರ ಪದಾರ್ಥಗಳು, ಜಲಚರಗಳು ಮತ್ತು ಕಟ್ಟಡ ನಿರ್ಮಾಣದ ಕಲ್ಲುಗಳನ್ನು ರಫ್ತು ಮಾಡಿತ್ತು.
ಎರಡೂ ದೇಶಗಳ ನಡುವಿನ ಅಧಿಕೃತ ವ್ಯಾಪಾರದ ಜೊತೆಗೆ, ಜಾಗತಿಕ ಆರ್ಥಿಕ ನಿರ್ಬಂಧಗಳನ್ನು ಮೀರಿ ವ್ಯವಹರಿಸಲು ಇರಾನ್ ಗೆ ಯುಎಇ ದೀರ್ಘಕಾಲದಿಂದ ಪ್ರಮುಖ ಅನೌಪಚಾರಿಕ ವ್ಯಾಪಾರ ಕೇಂದ್ರವಾಗಿ ನೆರವಾಗಿದೆ.
ಬುಧವಾರ, ಇರಾನ್ ಪಡೆಗಳು ತಮ್ಮ ಪ್ರಾದೇಶಿಕ ವ್ಯಾಪ್ತಿಯ ಮೇಲೆ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿವೆ ಎಂದು ಆರೋಪಿಸಿ ಯುಎಇ, ಇರಾನ್ ವಿರುದ್ಧ ಸುದೀರ್ಘ ಅವಧಿಯ ವ್ಯಾಪಾರ ನಿಷೇಧವನ್ನು ಘೋಷಿಸಿದೆ. ಪ್ರಮುಖ ಆಮದುಗಳು ಮತ್ತು ಹಣಕಾಸು ಮಾರುಕಟ್ಟೆಗಳ ಪ್ರವೇಶಕ್ಕಾಗಿ ಇರಾನ್ ತನ್ನ ನೆರೆಹೊರೆಯ ದೇಶವನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವುದರಿಂದ ಯುಎಇಯ ಈ ನಿರ್ಧಾರ ಅತ್ಯಂತ ಮಹತ್ವದ್ದಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
►ತುರ್ಕಿಯೆ
ಕ್ಷೇತ್ರೀಯ ಮತ್ತು ಅಧಿಕೃತ ಡೇಟಾ ಪ್ರಕಾರ, 2025ರಲ್ಲಿ ತುರ್ಕಿಯೆಯಿಂದ ಇರಾನ್ ಗೆ ನಡೆದ ರಫ್ತು ಮೌಲ್ಯ 2.3 ಶತಕೋಟಿ ಡಾಲರ್ ನಷ್ಟಿತ್ತು. ಅದೇ ವರ್ಷದ 11 ತಿಂಗಳುಗಳಲ್ಲಿ ಇರಾನ್ನಿಂದ 2.2 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಯುದ್ಧ ಪ್ರಾರಂಭವಾದಾಗಿನಿಂದ ಎರಡೂ ದೇಶಗಳ ನಡುವಿನ ವ್ಯಾಪಾರ ವಹಿವಾಟು ಕುಸಿದಿದೆ.
ಆಗಸ್ಟ್ 15ರಂದು Aljazeera ಜೊತೆ ಮಾತನಾಡಿದ ತುರ್ಕಿಯೆ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್, ಹಾರ್ಮುಜ್ ಜಲಸಂಧಿಯನ್ನು ಮರುಪರಿಶೀಲಿಸಿ ತೆರೆಯುವುದು ಅಂಕಾರಾಗೆ (ತುರ್ಕಿಯೆ) ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದ್ದರು.
►ಜರ್ಮನಿ
ಯುರೋಪಿಯನ್ ಯೂನಿಯನ್ ನಲ್ಲಿ ಜರ್ಮನಿಯು ಇರಾನ್ ನ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ. ಜರ್ಮನಿ ಟ್ರೇಡ್ & ಇನ್ವೆಸ್ಟ್ ಸಂಸ್ಥೆಯ ಡೇಟಾ ಪ್ರಕಾರ, 2025ರ ಮೊದಲ 11 ತಿಂಗಳುಗಳಲ್ಲಿ ಇರಾನ್ನಿಂದ ಜರ್ಮನಿಗೆ ನಡೆದ ರಫ್ತು ಮೌಲ್ಯ ಸುಮಾರು 21.7 ಕೋಟಿ ಯುರೋ (25.36 ಕೋಟಿ ಡಾಲರ್) ತಲುಪಿತ್ತು. ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 1.7ರಷ್ಟು ಹೆಚ್ಚಳ ಕಂಡಿತ್ತು. ಆದರೆ, ಇದೇ ಅವಧಿಯಲ್ಲಿ ಇರಾನ್ ಗೆ ಜರ್ಮನಿಯ ರಫ್ತು ಶೇಕಡಾ 25ರಷ್ಟು ಕುಸಿದು 87.1 ಕೋಟಿ ಯುರೋಗೆ (1.02 ಶತಕೋಟಿ ಡಾಲರ್) ತಲುಪಿತ್ತು.
ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ ಮತ್ತು ಉಕ್ರೇನ್ ವಿರುದ್ಧದ ರಷ್ಯಾ ಯುದ್ಧಕ್ಕೆ ಇರಾನ್ ಬೆಂಬಲ ನೀಡಿದ್ದನ್ನು ಖಂಡಿಸಿ ಯುರೋಪಿಯನ್ ಒಕ್ಕೂಟ ಜನವರಿಯಲ್ಲಿ ಹೊಸ ನಿರ್ಬಂಧಗಳನ್ನು ಹೇರಿದ ನಂತರ, ಇರಾನ್ ಜೊತೆಗಿನ ಅದರ ಒಟ್ಟಾರೆ ವ್ಯಾಪಾರ ಕುಸಿದಿದೆ.
►ರಷ್ಯಾ
ಅಮೆರಿಕವು 2018ರಲ್ಲಿ ಒಬಾಮಾ ಅವಧಿಯ 2015ರ ಇರಾನ್ ಪರಮಾಣು ಒಪ್ಪಂದದಿಂದ ಹೊರಬಂದು ಟೆಹ್ರಾನ್ ಮೇಲೆ ವ್ಯಾಪಕ ನಿರ್ಬಂಧಗಳನ್ನು ಹೇರಿದ ನಂತರ ರಷ್ಯಾ ಮತ್ತು ಇರಾನ್ ನಡುವಿನ ಆರ್ಥಿಕ ಬಾಂಧವ್ಯ ಮತ್ತಷ್ಟು ಗಟ್ಟಿಯಾಯಿತು.
“ಕಳೆದ ವರ್ಷ (2024) ವ್ಯಾಪಾರ ವಹಿವಾಟು 4.8 ಶತಕೋಟಿ ಡಾಲರ್ ತಲುಪಿತ್ತು. ಆದರೆ ನಮ್ಮ ಪರಸ್ಪರ ವ್ಯಾಪಾರದ ಸಾಮರ್ಥ್ಯ ಇದಕ್ಕಿಂತಲೂ ಹೆಚ್ಚಿದೆ ಎಂದು ನಾವು ನಂಬುತ್ತೇವೆ” ಎಂದು ರಷ್ಯಾದ ಇಂಧನ ಸಚಿವ ಸೆರ್ಗೆಯ್ ಟ್ಸಿವಿಲ್ಯೋವ್ 2025ರಲ್ಲಿ ಮಾಸ್ಕೋ ಮತ್ತು ಟೆಹ್ರಾನ್ ನಡುವಿನ ಅಂತರ್ ಸರ್ಕಾರಿ ಆಯೋಗದ ಸಭೆಯಲ್ಲಿ ಹೇಳಿದ್ದರು.
2018ರಿಂದೀಚೆಗೆ ದ್ವಿಪಕ್ಷೀಯ ವ್ಯಾಪಾರವು ಶೇಕಡಾ 16ರಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ. ರಷ್ಯಾದಿಂದ ಇರಾನ್ ಗೆ ಧಾನ್ಯಗಳು, ಲೋಹಗಳು, ಯಂತ್ರೋಪಕರಣಗಳು ಮತ್ತು ಕೈಗಾರಿಕಾ ಸರಕುಗಳ ರಫ್ತು ಹೆಚ್ಚಿರುವುದು ಇದಕ್ಕೆ ಮುಖ್ಯ ಕಾರಣ. ಇರಾನ್ನಿಂದ ರಷ್ಯಾಗೆ ಕೃಷಿ ಉತ್ಪನ್ನಗಳು, ಆಹಾರ ಪದಾರ್ಥಗಳು, ಪೆಟ್ರೋಕೆಮಿಕಲ್ಸ್ ಮತ್ತು ಮಿಲಿಟರಿ ಉಪಕರಣಗಳು ರಫ್ತಾಗುತ್ತವೆ.
ಇರಾನ್ ರಷ್ಯಾಗೆ ಕಡಿಮೆ ವೆಚ್ಚದ ಶಾಹೆದ್ (Shahed) ಡ್ರೋನ್ ಗಳನ್ನು ಪೂರೈಸಿದೆ. ರಷ್ಯಾ ಇವುಗಳನ್ನು ಪರಿಷ್ಕರಿಸಿ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಬಳಸುತ್ತಿದೆ.
ಅಮೆರಿಕ ಜೊತೆಗಿನ ಯುದ್ಧದ ನಂತರ ಪ್ರಮುಖ ಪಾಲುದಾರರೊಂದಿಗಿನ ವ್ಯಾಪಾರ ಕುಸಿದಿರುವುದರಿಂದ, ಇರಾನ್ ಇನ್ನುಮುಂದೆ ಗಲ್ಫ್ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು. ಭವಿಷ್ಯದಲ್ಲಿ ತಜ್ಞರ ಪ್ರಕಾರ, ರಷ್ಯಾವನ್ನು ಸಂಪರ್ಕಿಸುವ ರೈಲ್ವೆ ಜಾಲ, ಕ್ಯಾಸ್ಪಿಯನ್ ಬಂದರುಗಳು ಮತ್ತು ನಿರ್ಬಂಧಗಳ ಅವಧಿಯ ವ್ಯಾಪಾರ ಜಾಲಗಳನ್ನೇ ಟೆಹ್ರಾನ್ ಹೆಚ್ಚು ನೆಚ್ಚಿಕೊಳ್ಳುವ ಸಾಧ್ಯತೆಯಿದೆ.
►ಇತರ ದೇಶಗಳು ಇರಾನ್ ಜೊತೆಗಿನ ವ್ಯಾಪಾರವನ್ನು ಕೊನೆಗೊಳಿಸುವಂತೆ ಮಾಡಲು ಟ್ರಂಪ್ ಗೆ ಸಾಧ್ಯವೇ?
ಇದನ್ನು ಅವರು ಹೇಗೆ ಮಾಡುತ್ತಾರೆ ಎಂಬುದನ್ನು ಟ್ರಂಪ್ ವಿವರಿಸಿಲ್ಲ. ಇರಾನ್ ತೈಲದ ಮೇಲೆ ಅಮೆರಿಕ ಈಗಾಗಲೇ ಹೇರಿರುವ ನಿರ್ಬಂಧಗಳನ್ನು ಹೊರತುಪಡಿಸಿ, ಅವರ ಆಡಳಿತವು ಮುಂದೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ಊಹಿಸುವುದು ಕಷ್ಟ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅನುಮೋದನೆಯಿಲ್ಲದೆ ಯಾವುದೇ ದೇಶಕ್ಕೂ ಇರಾನ್ ಅಥವಾ ಇತರ ಯಾವುದೇ ದೇಶದ ಜೊತೆಗಿನ ವ್ಯಾಪಾರದ ಮೇಲೆ ಸಂಪೂರ್ಣ ನಿಷೇಧ ಹೇರುವ ಅಧಿಕಾರವಿಲ್ಲ ಎಂದು ಸಾರ್ವಜನಿಕ ಅಂತರರಾಷ್ಟ್ರೀಯ ಮತ್ತು ವ್ಯಾಪಾರ ಕಾನೂನು ತಜ್ಞ ಶಂತನು ಸಿಂಗ್ ತಿಳಿಸಿದ್ದಾರೆ.
“ಅಮೆರಿಕದ ಕಾನೂನಿನ ಅಡಿಯಲ್ಲಿ ಅಲ್ಲಿನ ಅಧ್ಯಕ್ಷರಿಗೆ ಇರುವ ಅಧಿಕಾರವೆಂದರೆ, ಇರಾನ್ ಜೊತೆಗಿನ ಅಂತರರಾಷ್ಟ್ರೀಯ ವ್ಯಾಪಾರಕ್ಕಾಗಿ ಅಮೆರಿಕದ ಹಣಕಾಸು ಸಂಸ್ಥೆಗಳ ಬಳಕೆಯನ್ನು ತಡೆಯುವ ಏಕಪಕ್ಷೀಯ ನಿರ್ಬಂಧಗಳನ್ನು ಹೇರುವುದು ಮಾತ್ರ. ಅದನ್ನು ಅವರು ಹಿಂದೆ ಕೂಡ ಮಾಡಿದ್ದಾರೆ” ಎಂದು ಅವರು Aljazeeraಗೆ ಹೇಳಿದ್ದಾರೆ.
ಖತಾರ್ನ ಜಾರ್ಜ್ಟೌನ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪಾಲ್ ಮುಸ್ಗ್ರೇವ್ ಅಲ್ ಜಝೀರಾ ಜೊತೆ ಮಾತನಾಡಿ, ಇರಾನ್ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ “ಆರ್ಥಿಕ ಪರಿಣಾಮಗಳನ್ನು” ಹೇರುವುದು ಟ್ರಂಪ್ ಗೆ “ಅತ್ಯಂತ ಕಷ್ಟಕರವಾಗಲಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ವಾಷಿಂಗ್ಟನ್ ಡಿಸಿಯಿಂದ ವರದಿ ಮಾಡಿರುವ Aljazeeraದ ಮೈಕ್ ಹನ್ನಾ, ಐದು ತಿಂಗಳಿನಿಂದ ನಡೆಯುತ್ತಿರುವ ಸಂಘರ್ಷವು ಪ್ರಸ್ತುತ ಸ್ಥಗಿತಗೊಂಡಿರುವುದಕ್ಕೆ ಟ್ರಂಪ್ ಅವರ ಈ ಇತ್ತೀಚಿನ ನಡೆ “ಅಸಮಾಧಾನದ ಹಂತವನ್ನು” ತೋರಿಸುತ್ತದೆ ಎಂದು ಹೇಳಿದ್ದಾರೆ.
ಈ ಘೋಷಣೆಯು ಇರಾನ್ ಅಧಿಕಾರಿಗಳಿಗೆ “ಮತ್ತೊಂದು ಬೆದರಿಕೆಯ ಕೂಗಿನಂತೆ” ಕಾಣಿಸಬಹುದು ಎಂದು ಹನ್ನಾ ಅಭಿಪ್ರಾಯಪಟ್ಟಿದ್ದಾರೆ.
“ಅವರ ನಿಜವಾದ ಗುರಿ ಈ ಸಂಘರ್ಷವನ್ನು ಸತತವಾಗಿ ವಿರೋಧಿಸುತ್ತಿರುವ ಅಮೆರಿಕದ ಸಾರ್ವಜನಿಕರೇ ಇರಬಹುದು” ಅಂತಾರೆ ಹನ್ನಾ. “ಇರಾನ್ ವಿರುದ್ಧದ ಆರ್ಥಿಕ ಕಾರ್ಯಾಚರಣೆಯನ್ನು ಬಲಪಡಿಸುವ ಈ ನಿರ್ದಿಷ್ಟ ನಡೆಯ ಪರಿಣಾಮಕಾರಿಯಾದ ಸಾಧ್ಯತೆಗಳನ್ನು ಅಳೆಯಲು ನಮ್ಮ ಬಳಿ ಯಾವುದೇ ನಿರ್ದಿಷ್ಟ ವಿವರಗಳಿಲ್ಲ. ಈ ಸತ್ಯದ ಹೊರತಾಗಿಯೂ, ಇದನ್ನು ಸಾರ್ವಜನಿಕ ವಲಯದಲ್ಲಿ ಬಲವಾದ ನಿಲುವು ಎಂದು ಭಾವಿಸಬೇಕೆಂಬ ಉದ್ದೇಶದಿಂದ ಅವರು ಈ ನಿರ್ಧಾರ ತಳೆದಿದ್ದಾರೆ” ಎಂದು ಅವರು ಹೇಳಿದ್ದಾರೆ.
►ಇರಾನ್ ಕೈಗೊಳ್ಳಬಹುದಾದ ಕ್ರಮಗಳೇನು?
ಇರಾನ್ ನ ಕಾನೂನು ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳ ಉಪ ವಿದೇಶಾಂಗ ಸಚಿವ ಕಾಜೆಮ್ ಗರಿಬಾಬಾಡಿ, ವಾಷಿಂಗ್ಟನ್ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಕೆಲವು “ತಪ್ಪು ಲೆಕ್ಕಾಚಾರಗಳು” ನಡೆದಿವೆ ಎಂದು ಹೇಳಿದ್ದಾರೆ.
ಅದನ್ನು ಮುಚ್ಚಿಹಾಕಲು ಅವರು ಪ್ರತಿ ಬಾರಿಯೂ ತಮಗೇ ದೊಡ್ಡ ನಷ್ಟ ಮಾಡಿಕೊಳ್ಳುವ ಅನಿವಾರ್ಯತೆಯಲ್ಲಿದ್ದಾರೆ ಎಂದು ಇರಾನ್ ಅಧಿಕಾರಿ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ. “ಸೈನಿಕ ಯುದ್ಧವು ಕೆಲಸ ಮಾಡಲಿಲ್ಲ, ಹೀಗಾಗಿ ಈಗ ಅವರು ತಮ್ಮ ಮುಂದಿನ ವೈಫಲ್ಯಕ್ಕೆ ‘ಆರ್ಥಿಕ ಯುದ್ಧ’ ಎಂದು ಹೆಸರಿಟ್ಟಿದ್ದಾರೆ” ಎಂದಿದ್ದಾರೆ.
►ಮಿಲಿಟರಿ ಕ್ರಮ
ಇಂಟರ್ನ್ಯಾಷನಲ್ ಕ್ರೈಸಿಸ್ ಗ್ರೂಪ್ನ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ವಿಭಾಗದ ಉಪ ನಿರ್ದೇಶಕ ಅಲಿ ವೈಜ್, ಇರಾನ್ ಗೆ ಆರ್ಥಿಕ ಸಂಕಷ್ಟ ಹೆಚ್ಚಾದರೆ, ಅದು ಅಮೆರಿಕದ ನೌಕಾಪಡೆಯ ದಿಗ್ಬಂಧನವನ್ನು ಬಲಪ್ರಯೋಗದ ಮೂಲಕ ಮುರಿಯಲು ಮುಂದಾಗಬಹುದು ಎಂದು ಹೇಳಿದ್ದಾರೆ.
“ಆರ್ಥಿಕ ಯುದ್ಧವು ಪ್ರತ್ಯಕ್ಷ ಯುದ್ಧಕ್ಕೆ ಪರ್ಯಾಯ ಎಂದು ಟ್ರಂಪ್ ನಂಬಿದ್ದಾರೆ. ಅದುವೇ ಯುದ್ಧಕ್ಕೆ ಮುನ್ನುಡಿ” ಎಂದು ಅವರು ಅಲ್ ಜಝೀರಾಗೆ ತಿಳಿಸಿದ್ದಾರೆ.
ಜೋರ್ಡಾನ್ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಸಂಬಂಧಗಳ ಪ್ರಾಧ್ಯಾಪಕ ಹಸನ್ ಬಾರಾರಿ ಕೂಡ ಇರಾನ್ ಮೇಲಿನ ಅಮೆರಿಕದ ಪ್ರಭಾವಕ್ಕೆ ಮಿತಿಗಳಿವೆ ಎಂದು ವಾದಿಸಿದ್ದಾರೆ.
ಇರಾನ್ ನ ಸಾಮಾನ್ಯ ಜನರ ಮೇಲೆ ಅಮೆರಿಕದ ನಡೆಯ ಪ್ರಾಮುಖ್ಯತೆ ಮತ್ತು ಅಪಾಯವನ್ನು ನಾವು ಕಡೆಗಣಿಸಲು ಸಾಧ್ಯವಿಲ್ಲ. ಕನಿಷ್ಠ ಕಾರ್ಯತಂತ್ರದ ಮಟ್ಟದಲ್ಲಾದರೂ ಅಮೆರಿಕಕ್ಕೆ ಸಮಾನವಾಗಿ ಹೊರಹೊಮ್ಮಬೇಕೆಂಬ ಇರಾನಿಯನ್ನರ ಬಯಕೆಯನ್ನು ನಾವು ಅಲಕ್ಷಿಸುವಂತಿಲ್ಲ ಎಂದು ಬಾರಾರಿ ಹೇಳಿದ್ದಾರೆ.
►ಬ್ರಿಕ್ಸ್ ಸಂಸ್ಥೆಯ ಸದಸ್ಯತ್ವ
ಯುದ್ಧ ಮುಂದುವರಿದಂತೆ, ದೇಶವು ‘ಬ್ರಿಕ್ಸ್’ ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ಗೆ ಸೇರ್ಪಡೆಯಾಗಲು ಸಿದ್ಧವಾಗಿದೆ ಎಂದು ಇರಾನ್ ನ ಕೇಂದ್ರೀಯ ಬ್ಯಾಂಕ್ ಮುಖ್ಯಸ್ಥರು ಕಳೆದ ವಾರ ಘೋಷಿಸಿದ್ದರು. ಈ ಬ್ಯಾಂಕ್ ಸೇರುವುದರಿಂದ ದೇಶದ ಅರ್ಥವ್ಯವಸ್ಥೆಯನ್ನು ಹೆಚ್ಚಿನ ಅಂತರರಾಷ್ಟ್ರೀಯ ಹಣಕಾಸು ನೆರವಿಗೆ ಮುಕ್ತಗೊಳಿಸಲು ಸಹಾಯವಾಗಲಿದೆ.
‘ಬ್ರಿಕ್ಸ್’ ಪ್ರಮುಖ ಉದಯೋನ್ಮುಖ ಅರ್ಥವ್ಯವಸ್ಥೆಗಳ ಒಕ್ಕೂಟವಾಗಿದೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾಗಳ ಹೆಸರಿನ ಮೊದಲಕ್ಷರಗಳಿಂದ ಈ ಹೆಸರು ಬಂದಿದೆ. 2006ರಲ್ಲಿ ಸ್ಥಾಪನೆಗೊಂಡ ನಂತರ, ಇದು ಇರಾನ್, ಈಜಿಪ್ಟ್, ಇಥಿಯೋಪಿಯಾ, ಸೌದಿ ಅರೇಬಿಯಾ, ಯುಎಇ ಮತ್ತು ಇಂಡೋನೇಷ್ಯಾಗಳನ್ನು ತನ್ನೊಳಗೆ ಸೇರಿಸಿಕೊಂಡು ವಿಸ್ತರಿಸಿದೆ. ಟ್ರಂಪ್ ಹಿಂದೆ ಈ ಒಕ್ಕೂಟವನ್ನು “ಅಮೆರಿಕ ವಿರೋಧಿ” ಎಂದು ಕರೆದಿದ್ದರು.
ಯುದ್ಧವು ತನ್ನ ಹಲವು ಸದಸ್ಯ ರಾಷ್ಟ್ರಗಳ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಉಂಟಾಗಿರುವ ಆಂತರಿಕ ಭಿನ್ನಾಭಿಪ್ರಾಯಗಳ ಮಧ್ಯೆ, ಪ್ರಮುಖ ಅಭಿವೃದ್ಧಿಶೀಲ ಅರ್ಥವ್ಯವಸ್ಥೆಗಳ ‘ಬ್ರಿಕ್ಸ್’ ಒಕ್ಕೂಟವು ಇರಾನ್ ಮೇಲಿನ ಅಮೆರಿಕದ ಯುದ್ಧದ ಕುರಿತು ಜಂಟಿ ಹೇಳಿಕೆ ನೀಡಲು ಇದುವರೆಗೆ ವಿಫಲವಾಗಿದೆ.
►ಹೊಸ ವ್ಯಾಪಾರ ಒಪ್ಪಂದಗಳು
ಮತ್ತೊಂದೆಡೆ, ಇರಾನ್ ತಝಿಕಿಸ್ತಾನ್ನಂತಹ ದೇಶಗಳೊಂದಿಗೆ ತನ್ನ ದ್ವಿಪಕ್ಷೀಯ ಒಪ್ಪಂದಗಳನ್ನು ಬಲಪಡಿಸುತ್ತಿದೆ.
ಶನಿವಾರದಂದು, ದುಶಾನ್ಬೆಗೆ ಇರಾನ್ನಿಂದ ತೈಲ ರಫ್ತು ಮಾಡಲು ಅನುವು ಮಾಡಿಕೊಡುವ ಒಪ್ಪಂದವನ್ನು ತಜಿಕಿಸ್ತಾನ್ ಮತ್ತು ಇರಾನ್ ಅಂತಿಮಗೊಳಿಸಿವೆ.
ಸೌಜನ್ಯ: Aljazeera.com






