ಡೊನಾಲ್ಡ್ ಟ್ರಂಪ್ ಸರ್ಕಾರದ ಜನ್ಮಸಿದ್ಧ ಪೌರತ್ವ ಆದೇಶವನ್ನು ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು ಏಕೆ?

ಡೊನಾಲ್ಡ್ ಟ್ರಂಪ್ | Photo Credit : PTI
ಅಮೆರಿಕದಲ್ಲಿ ಜನಿಸುವ ಮಕ್ಕಳಿಗೆ ದೊರೆಯುವ ಜನ್ಮಸಿದ್ಧ ಪೌರತ್ವವನ್ನು (birthright citizenship) ರದ್ದುಗೊಳಿಸುವ ಟ್ರಂಪ್ ಸರ್ಕಾರದ ಕಾರ್ಯಕಾರಿ ಆದೇಶವು ಅಸಂವಿಧಾನಿಕ ಎಂದು ಅಮೆರಿಕದ ಸುಪ್ರೀಂ ಕೋರ್ಟ್ ಮಂಗಳವಾರ (ಜೂನ್ 30) ತೀರ್ಪು ನೀಡಿದೆ. ಪೋಷಕರು ದೇಶದಲ್ಲಿ ಕಾನೂನುಬಾಹಿರವಾಗಿ ಇರಲಿ ಅಥವಾ ತಾತ್ಕಾಲಿಕವಾಗಿ ಇರಲಿ, ಅಮೆರಿಕದ ಮಣ್ಣಿನಲ್ಲಿ ಜನಿಸುವ ಮಕ್ಕಳು ಸಂವಿಧಾನದ 14ನೇ ತಿದ್ದುಪಡಿಯ ಅಡಿಯಲ್ಲಿ ಅಮೆರಿಕದ ಪ್ರಜೆಗಳೇ ಆಗಿರುತ್ತಾರೆ ಎಂಬುದನ್ನು ಕೋರ್ಟ್ ಮತ್ತೊಮ್ಮೆ ದೃಢಪಡಿಸಿದೆ.
6-3ರ ಬಹುಮತದ ತೀರ್ಪಿನಲ್ಲಿ, ಅಂತಹ ಮಕ್ಕಳು ಅಮೆರಿಕದ "ನ್ಯಾಯವ್ಯಾಪ್ತಿಗೆ ಒಳಪಡುವುದಿಲ್ಲ" ಎಂಬ ಸರ್ಕಾರದ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ. ಅಲ್ಲದೆ, ಸರ್ಕಾರದ ಈ ಕಾರ್ಯಕಾರಿ ಆದೇಶವು ಸಂವಿಧಾನದ 'ಪೌರತ್ವ ನಿಯಮ' ಮತ್ತು ಸುಪ್ರೀಂ ಕೋರ್ಟ್ನ ಸುದೀರ್ಘ ಇತಿಹಾಸದ ಪೂರ್ವನಿದರ್ಶನಗಳಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಈ ತೀರ್ಪು ಅಮೆರಿಕ ಅಧ್ಯಕ್ಷರ ಎರಡನೇ ಅವಧಿಯ ವಲಸೆ ನೀತಿಯ ಕಾರ್ಯಸೂಚಿಗೆ ಎದುರಾದ ಅತಿ ದೊಡ್ಡ ಕಾನೂನು ಹಿನ್ನಡೆಯಾಗಿದೆ. ಜೊತೆಗೆ 150 ವರ್ಷಗಳಿಗೂ ಹೆಚ್ಚು ಕಾಲದಿಂದ ಜಾರಿಯಲ್ಲಿರುವ ಸಾಂವಿಧಾನಿಕ ಭರವಸೆಯನ್ನು ಇದು ಪುನರುಚ್ಚರಿಸಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
►ಜನ್ಮಸಿದ್ಧ ಪೌರತ್ವ ಎಂದರೇನು?
ಅಮೆರಿಕ ಸಂವಿಧಾನದ 14ನೇ ತಿದ್ದುಪಡಿಯು ಹೀಗೆ ಹೇಳುತ್ತದೆ: "ಯುನೈಟೆಡ್ ಸ್ಟೇಟ್ಸ್ನಲ್ಲಿ ಜನಿಸಿದ ಅಥವಾ ಪೌರತ್ವ ಪಡೆದ ಮತ್ತು ಅದರ ನ್ಯಾಯವ್ಯಾಪ್ತಿಗೆ ಒಳಪಟ್ಟಿರುವ ಎಲ್ಲಾ ವ್ಯಕ್ತಿಗಳು ಯುನೈಟೆಡ್ ಸ್ಟೇಟ್ಸ್ ಹಾಗೂ ಅವರು ವಾಸಿಸುವ ರಾಜ್ಯದ ಪ್ರಜೆಗಳಾಗಿರುತ್ತಾರೆ."
ಅಮೆರಿಕದ ಅಂತರ್ಯುದ್ಧದ ನಂತರ 1868ರಲ್ಲಿ ಅಂಗೀಕರಿಸಲ್ಪಟ್ಟ ಈ ತಿದ್ದುಪಡಿಯ ಮೂಲ ಉದ್ದೇಶ, ಹಿಂದೆ ಗುಲಾಮರಾಗಿದ್ದವರಿಗೆ ಅಮೆರಿಕದ ಪೌರತ್ವವನ್ನು ಖಾತ್ರಿಪಡಿಸುವುದಾಗಿತ್ತು.
ಅಮೆರಿಕದ ಮಣ್ಣಿನಲ್ಲಿ ಜನಿಸುವ ಪ್ರತಿಯೊಬ್ಬರಿಗೂ ಪೌರತ್ವವನ್ನು ನೀಡುವಂತೆ ನ್ಯಾಯಾಲಯಗಳು ಈ ನಿಯಮವನ್ನು ದೀರ್ಘಕಾಲದಿಂದ ವ್ಯಾಖ್ಯಾನಿಸುತ್ತಾ ಬಂದಿವೆ. ಆದರೆ ಇದಕ್ಕೆ ಎರಡು ಹಳೆಯ ವಿನಾಯಿತಿಗಳಿವೆ:
• ಬೇರೆ ದೇಶಕ್ಕೆ ನಿಷ್ಠರಾಗಿರುವ ರಾಜತಾಂತ್ರಿಕರ ಮಕ್ಕಳು.
• ಯುದ್ಧ ಅಥವಾ ಆಕ್ರಮಣದ ಸಮಯದಲ್ಲಿ ದೇಶದೊಳಗೆ ಇರುವ ಶತ್ರು ರಾಷ್ಟ್ರಗಳ ಪ್ರಜೆಗಳು.
►ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು ಹೇಗೆ?
ಅಮೆರಿಕದಲ್ಲಿ ಜನಿಸುವ ಮಕ್ಕಳ ಪೋಷಕರು ದೇಶದಲ್ಲಿ "ಶಾಶ್ವತ ವಾಸಸ್ಥಾನ" ಹೊಂದಿಲ್ಲದ ಕಾರಣ, ಅವರು ನಿಜವಾದ ಅರ್ಥದಲ್ಲಿ ಅಮೆರಿಕದ "ನ್ಯಾಯವ್ಯಾಪ್ತಿಗೆ ಒಳಪಡುವುದಿಲ್ಲ" ಎಂದು ಸರ್ಕಾರ ವಾದಿಸಿತ್ತು. ಬದಲಿಗೆ, ಆ ಪೋಷಕರು ತಮ್ಮ ತಾಯ್ನಾಡಿಗೆ ಪ್ರಾಥಮಿಕ ನಿಷ್ಠೆಯನ್ನು ಹೊಂದಿರುತ್ತಾರೆ. ಆದ್ದರಿಂದ, ಅವರ ಮಕ್ಕಳು ಅಮೆರಿಕದ ಸಂವಿಧಾನದ ಅಡಿಯಲ್ಲಿ ಸ್ವಯಂಚಾಲಿತವಾಗಿ ಅಮೆರಿಕದ ಪೌರತ್ವ ಪಡೆಯಲು ಅರ್ಹರಲ್ಲ ಎಂದು ಸರ್ಕಾರ ಪ್ರತಿಪಾದಿಸಿತ್ತು.
ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ನೇತೃತ್ವದ ನ್ಯಾಯಾಲಯದ ಐದು ನ್ಯಾಯಾಧೀಶರ ಬಹುಮತವು ಸರ್ಕಾರದ ಈ ವಾದವನ್ನು ತಳ್ಳಿಹಾಕಿತು. "ನ್ಯಾಯವ್ಯಾಪ್ತಿಗೆ ಒಳಪಟ್ಟಿರುವುದು" ಎಂಬ ಪದಗುಚ್ಛವು ಕೇವಲ ದೇಶದ ಗಡಿಯೊಳಗೆ ಇರುವ ಯಾರ ಮೇಲಾದರೂ ತನ್ನ ಕಾನೂನುಗಳನ್ನು ಜಾರಿಗೊಳಿಸುವ ಸರ್ಕಾರದ ಅಧಿಕಾರವನ್ನು ಸೂಚಿಸುತ್ತದೆಯೇ ಹೊರತು, ಅವರ ವಲಸೆ ಸ್ಥಿತಿಯನ್ನಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಈ ತೀರ್ಮಾನಕ್ಕೆ ಬರಲು, ಬಹುಮತದ ನ್ಯಾಯಾಧೀಶರು ಇಂಗ್ಲಿಷ್ ಕಾಮನ್ ಲಾದ 'ಜಸ್ ಸೋಲಿ' (jus soli) ಅಥವಾ 'ಮಣ್ಣಿನ ಹಕ್ಕು' ತತ್ವವನ್ನು ಆಧಾರವಾಗಿಟ್ಟುಕೊಂಡರು. ಇದರ ಪ್ರಕಾರ, ಸಾರ್ವಭೌಮ ರಾಷ್ಟ್ರದ ವ್ಯಾಪ್ತಿಯಲ್ಲಿ ಜನಿಸುವ ಯಾರೇ ಆಗಲಿ, ಆ ರಾಷ್ಟ್ರದ ರಕ್ಷಣೆಗೆ ಪ್ರತಿಯಾಗಿ ಆ ದೇಶಕ್ಕೆ ನಿಷ್ಠರಾಗಿರುತ್ತಾರೆ ಮತ್ತು ಆ ಮೂಲಕ ಅವರು ಜನ್ಮಸಿದ್ಧ ಪ್ರಜೆಯಾಗುತ್ತಾರೆ.
ಈ ತೀರ್ಪು ನ್ಯಾಯಾಲಯದ ಒಳಗೆ ಸಂವಿಧಾನದ ಮೂಲ ಅರ್ಥ ಮತ್ತು ಪೌರತ್ವದ ಇತಿಹಾಸದ ಕುರಿತು ಇರುವ ಆಳವಾದ ಭಿನ್ನಾಭಿಪ್ರಾಯಗಳನ್ನು ಬಹಿರಂಗಪಡಿಸಿದ್ದು; ಹಲವು ಪ್ರತ್ಯೇಕ ಅಭಿಪ್ರಾಯಗಳು ಹೊರಬೀಳಲು ಕಾರಣವಾಗಿದೆ.
ನ್ಯಾಯಮೂರ್ತಿ ಕ್ಲಾರೆನ್ಸ್ ಥಾಮಸ್ ಮತ್ತು ನ್ಯಾಯಮೂರ್ತಿ ನೀಲ್ ಗೋರ್ಸುಚ್ ಅವರು ತೀರ್ಪನ್ನು ವಿರೋಧಿಸಿ ವಾದಿಸಿದರು. ಬಹುಮತದ ನ್ಯಾಯಾಧೀಶರು ಅಮೆರಿಕದ ಸಂಸ್ಥಾಪಕರೇ ತಿರಸ್ಕರಿಸಿದ್ದ ಇಂಗ್ಲೆಂಡ್ನ "ಮಧ್ಯಯುಗೀನ" ನಿಯಮವನ್ನು ಅವಲಂಬಿಸಿದ್ದಾರೆ ಎಂದು ಥಾಮಸ್ ವಾದಿಸಿದರು. ಪೌರತ್ವಕ್ಕೆ ಶಾಶ್ವತ ವಾಸಸ್ಥಾನ ಮತ್ತು ಅಮೆರಿಕಕ್ಕೆ ಸಂಪೂರ್ಣ ನಿಷ್ಠೆ ಅಗತ್ಯ ಎಂದು ಥಾಮಸ್ ಪ್ರತಿಪಾದಿಸಿದರು. ತಾತ್ಕಾಲಿಕ ಸಂದರ್ಶಕರು ಮತ್ತು ಕಾನೂನುಬಾಹಿರ ವಲಸಿಗರು ವಿದೇಶಿ ಶಕ್ತಿಗಳಿಗೆ ಒಳಪಟ್ಟಿರುವುದರಿಂದ ಅವರಲ್ಲಿ ಈ ನಿಷ್ಠೆ ಇರುವುದಿಲ್ಲ ಎಂದ ಅವರು, 14ನೇ ತಿದ್ದುಪಡಿಯ ಮುಖ್ಯ ಉದ್ದೇಶ ಕೇವಲ ಹುಟ್ಟಿದ ಸ್ಥಳದ ಆಧಾರದ ಮೇಲೆ ಸಾರ್ವತ್ರಿಕ ನಿಯಮವನ್ನು ರಚಿಸುವುದಾಗಿರಲಿಲ್ಲ; ಬದಲಿಗೆ ಹಿಂದೆ ಗುಲಾಮರಾಗಿದ್ದವರಿಗೆ ಪೌರತ್ವವನ್ನು ಖಾತ್ರಿಪಡಿಸುವುದಾಗಿತ್ತು ಎಂದು ವಾದಿಸಿದರು.
ನ್ಯಾಯಮೂರ್ತಿ ಸ್ಯಾಮ್ಯುಯೆಲ್ ಅಲಿಟೊ ಕೂಡ ತೀರ್ಪನ್ನು ವಿರೋಧಿಸಿದರು. ಶಾಶ್ವತ ವಾಸಸ್ಥಾನದ ವಾದವನ್ನು ಪುನರುಚ್ಚರಿಸಿದ ಅವರು, ಬಹುಮತದ ಈ ವ್ಯಾಖ್ಯಾನವು ಕಾನೂನುಬಾಹಿರ ವಲಸೆ ಮತ್ತು 'ಬರ್ತ್ ಟೂರಿಸಂ' (ಮಗುವಿಗೆ ಅಮೆರಿಕದ ಪೌರತ್ವ ಸಿಗಲೆಂಬ ಉದ್ದೇಶದಿಂದ ಹೆರಿಗೆಗಾಗಿ ಅಮೆರಿಕಕ್ಕೆ ಪ್ರಯಾಣಿಸುವುದು) ಪ್ರವೃತ್ತಿಗೆ ಉತ್ತೇಜನ ನೀಡುತ್ತದೆ ಎಂದು ಎಚ್ಚರಿಸಿದರು.
ನ್ಯಾಯಮೂರ್ತಿ ನೀಲ್ ಗೋರ್ಸುಚ್ ಅವರು ಪ್ರಕ್ರಿಯೆಯ ಮೇಲೆ ಗಮನಹರಿಸಿ ಪ್ರತ್ಯೇಕ ಭಿನ್ನಮತದ ಅಭಿಪ್ರಾಯವನ್ನು ಬರೆದರು. ಅರ್ಜಿದಾರರು ಈ ಆದೇಶದ ಸಾಂವಿಧಾನಿಕತೆಯನ್ನು ಸಂಪೂರ್ಣವಾಗಿ ಸವಾಲು ಮಾಡಿರುವುದರಿಂದ, ಈ ಕಾರ್ಯಕಾರಿ ಆದೇಶವು ಪ್ರತಿಯೊಂದು ಸಂದರ್ಭದಲ್ಲೂ ಅಸಂವಿಧಾನಿಕ ಎಂಬುದನ್ನು ಅವರು ಸಾಬೀತುಪಡಿಸಬೇಕಿತ್ತು ಎಂದು ವಾದಿಸಿದರು. ಈ ಆದೇಶವು ತಾತ್ಕಾಲಿಕ ಸಂದರ್ಶಕರ ಮಕ್ಕಳಿಗೆ ಸಾಂವಿಧಾನಿಕವಾಗಿ ಅನ್ವಯಿಸಬಹುದು ಎಂದು ತಾವು ನಂಬಿರುವುದರಿಂದ, ಈ ಸವಾಲು ಬಿದ್ದುಹೋಗಬೇಕು ಎಂದು ಅವರು ಹೇಳಿದರು.
ನ್ಯಾಯಮೂರ್ತಿ ಬ್ರೆಟ್ ಕವನಾಗ್ ಅವರು ತೀರ್ಪನ್ನು ಬೆಂಬಲಿಸಿದರಾದರೂ, ನ್ಯಾಯಾಲಯವು ಈ ವಿವಾದವನ್ನು ಸಂವಿಧಾನದ ಬದಲಿಗೆ ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯಡಿ ಇತ್ಯರ್ಥಪಡಿಸಬಹುದಿತ್ತು ಎಂದು ಅಭಿಪ್ರಾಯಪಟ್ಟರು. ಅಲ್ಲದೆ, ಅಮೆರಿಕ ಸಂಸತ್ತು ಪ್ರಸ್ತುತ ಇರುವ ಪೌರತ್ವದ ಚೌಕಟ್ಟನ್ನು ಹಲವು ಬಾರಿ ಬದಲಿಸದೆ ಹಾಗೆಯೇ ಉಳಿಸಿಕೊಂಡಿದೆ ಎಂಬುದನ್ನು ಅವರು ನೆನಪಿಸಿದರು. ನ್ಯಾಯಮೂರ್ತಿ ಕೇತಾಂಜಿ ಬ್ರೌನ್ ಜಾಕ್ಸನ್ ಅವರು ತೀರ್ಪನ್ನು ಬೆಂಬಲಿಸಿ ಬರೆದ ಅಭಿಪ್ರಾಯದಲ್ಲಿ, ವಿರೋಧಿಸಿದ ನ್ಯಾಯಾಧೀಶರ ಐತಿಹಾಸಿಕ ವಾದಗಳನ್ನು ತಿರಸ್ಕರಿಸಿದರು. 14ನೇ ತಿದ್ದುಪಡಿಯು ಅಂತರ್ಯುದ್ಧದ ನಂತರ ವಂಶಾವಳಿಯನ್ನು ಲೆಕ್ಕಿಸದೆ ಪೌರತ್ವದ ಸಾರ್ವತ್ರಿಕ ನಿಯಮವನ್ನು ರಚಿಸುವ ಮೂಲಕ ದೇಶಕ್ಕೆ "ಜಾತಿ-ವಿರೋಧಿ ಮತ್ತು ತಾರತಮ್ಯ-ವಿರೋಧಿ ವ್ಯವಸ್ಥೆಯನ್ನು ಮರುಸ್ಥಾಪಿಸಿದೆ" ಎಂದು ಅವರು ಬರೆದಿದ್ದಾರೆ.
►ಟ್ರಂಪ್ ಜನ್ಮಸಿದ್ಧ ಪೌರತ್ವವನ್ನು ಕೊನೆಗಾಣಿಸಲು ಬಯಸುತ್ತಿರುವುದು ಏಕೆ?
ತಮ್ಮ ಎರಡನೇ ಅವಧಿಯ ಅಧಿಕಾರಾವಧಿ ಆರಂಭವಾದ ಕೆಲವೇ ಗಂಟೆಗಳಲ್ಲಿ, ಅಮೆರಿಕದಲ್ಲಿ ಕಾನೂನುಬಾಹಿರವಾಗಿ ಅಥವಾ ತಾತ್ಕಾಲಿಕವಾಗಿ ವಾಸಿಸುತ್ತಿರುವ ಪೋಷಕರಿಗೆ ಹುಟ್ಟುವ ಮಕ್ಕಳಿಗೆ ಪೌರತ್ವವನ್ನು ನಿರಾಕರಿಸುವ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದರು. ಅಂತಹ ಮಕ್ಕಳು ಅಮೆರಿಕದ "ನ್ಯಾಯವ್ಯಾಪ್ತಿಗೆ ಒಳಪಡುವುದಿಲ್ಲ", ಆದ್ದರಿಂದ ಅವರು 14ನೇ ತಿದ್ದುಪಡಿಯ ಅಡಿಯಲ್ಲಿ ಪೌರತ್ವ ಪಡೆಯಲು ಅರ್ಹರಲ್ಲ ಎಂದು ಈ ಆದೇಶದಲ್ಲಿ ವಾದಿಸಲಾಗಿತ್ತು.
ಡಿಸೆಂಬರ್ 2024ರಲ್ಲಿ ನಡೆದ ಚುನಾವಣಾ ನಂತರದ ತಮ್ಮ ಮೊದಲ ಸಂದರ್ಶನದಲ್ಲಿ ಟ್ರಂಪ್, "ನಾವು ಇದನ್ನು ಕೊನೆಗಾಣಿಸಬೇಕು. ಈ ನಿಯಮ ಹೊಂದಿರುವ ಏಕೈಕ ದೇಶ ನಮ್ಮದೊಂದೇ" ಎಂದು ಹೇಳಿದ್ದರು.
ಆದರೆ ಅವರ ಈ ಹೇಳಿಕೆ ತಪ್ಪಾಗಿದೆ. ಜಗತ್ತಿನ ಕನಿಷ್ಠ 37 ದೇಶಗಳಲ್ಲಿ ತಮ್ಮ ಮಣ್ಣಿನಲ್ಲಿ ಜನಿಸುವ ಯಾರಿಗೇ ಆದರೂ ಪೌರತ್ವವನ್ನು ನೀಡುವ ವ್ಯವಸ್ಥೆ ಇದೆ. ಇವುಗಳಲ್ಲಿ ಹೆಚ್ಚಿನವು ದಕ್ಷಿಣ ಅಮೆರಿಕ ಮತ್ತು ಕೆರಿಬಿಯನ್ ದೇಶಗಳಾಗಿವೆ. ಭಾರತವಾಗಲಿ ಅಥವಾ ಹಲವು ಯುರೋಪಿಯನ್ ರಾಷ್ಟ್ರಗಳಾಗಲಿ ಯಾವುದೇ ಷರತ್ತುಗಳಿಲ್ಲದ ಇಂತಹ ಜನ್ಮಸಿದ್ಧ ಪೌರತ್ವವನ್ನು ನೀಡುವುದಿಲ್ಲ.
ನ್ಯಾಯಾಲಯದ ತೀರ್ಪು ಹೊರಬಿದ್ದ ನಂತರ, ಈ ನಿರ್ಧಾರವು "ನಮ್ಮ ದೇಶಕ್ಕೆ ಒಳಿತಲ್ಲ" ಎಂದು ಕರೆದ ಟ್ರಂಪ್, ಜನ್ಮಸಿದ್ಧ ಪೌರತ್ವವನ್ನು ನಿರ್ಬಂಧಿಸುವ ಪ್ರಯತ್ನಗಳನ್ನು ತಮ್ಮ ಸರ್ಕಾರ ಮುಂದುವರಿಸಲಿದೆ ಎಂದು ಹೇಳಿದರು. ಅಲ್ಲದೆ, ಅಮೆರಿಕ ಸಂಸತ್ತು ಕಾಯ್ದೆಯ ಮೂಲಕ ಈ ತೀರ್ಪನ್ನು ರದ್ದುಗೊಳಿಸಬಹುದು ಎಂದು ಅವರು ಸುಳ್ಳು ಪ್ರತಿಪಾದನೆ ಮಾಡಿದರು.
►ಭಾರತದಲ್ಲಿ ಜನ್ಮಸಿದ್ಧ ಪೌರತ್ವ ಜಾರಿಯಲ್ಲಿದೆಯೇ?
ಪೌರತ್ವವು ಹುಟ್ಟಿನ ಆಧಾರದ ಮೇಲಿರಬೇಕೇ ಅಥವಾ ವಂಶಾವಳಿಯ ಆಧಾರದ ಮೇಲಿರಬೇಕೇ ಎಂದು ನಿರ್ಧರಿಸುವುದು ಭಾರತ ಸಂವಿಧಾನದ ಶಿಲ್ಪಿಗಳ ಮುಂದಿದ್ದ ಪ್ರಮುಖ ಸವಾಲುಗಳಲ್ಲಿ ಒಂದಾಗಿತ್ತು. ಸಂವಿಧಾನ ರಚನಾ ಸಭೆಯ ಕೆಲವು ಸದಸ್ಯರಾದ ಪಿ. ಎಸ್. ದೇಶ್ಮುಖ್ (ಮಹಾರಾಷ್ಟ್ರದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸದಸ್ಯ) ಅವರು ಜನ್ಮಸಿದ್ಧ ಪೌರತ್ವದ ವಿರುದ್ಧ ವಾದ ಮಂಡಿಸುತ್ತಾ, ಇದು "ಭಾರತೀಯ ಪೌರತ್ವವನ್ನು ಜಗತ್ತಿನಲ್ಲೇ ಅತ್ಯಂತ ಅಗ್ಗವಾಗಿಸುತ್ತದೆ" ಎಂದು ಹೇಳಿದ್ದರು.
ಆದರೆ ಬಿ. ಆರ್. ಅಂಬೇಡ್ಕರ್ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಂತಹ ಇತರ ಸದಸ್ಯರು ಜನ್ಮಸಿದ್ಧ ಪೌರತ್ವವನ್ನು ಬೆಂಬಲಿಸಿದರು. ಅಂತಿಮವಾಗಿ ಸಂವಿಧಾನದಲ್ಲಿ ಇದಕ್ಕೆ ಮಾನ್ಯತೆ ನೀಡಲಾಯಿತು. ಸಂವಿಧಾನದ ವಿಧಿ 5ರ ಪ್ರಕಾರ, ಸಂವಿಧಾನ ಜಾರಿಗೆ ಬಂದ ವೇಳೆಗೆ ಭಾರತದ ಭೂಪ್ರದೇಶದಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯೂ ಭಾರತದ ಪ್ರಜೆಯಾಗಿರುತ್ತಾರೆ.
ನಂತರ ಸಂಸತ್ತು ಪೌರತ್ವ ಕಾಯ್ದೆ, 1955 ಅನ್ನು ಜಾರಿಗೆ ತಂದಿತು. ಇದು ಸೆಕ್ಷನ್ 3ರ ಅಡಿಯಲ್ಲಿ 1950ರ ಜನವರಿ 26ರಂದು ಅಥವಾ ಅದರ ನಂತರ ಭಾರತದಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಗೂ ಜನ್ಮಸಿದ್ಧ ಪೌರತ್ವವನ್ನು ನೀಡಿತು. ಭಾರತದ ಪ್ರಜೆಯಲ್ಲದ "ವಿದೇಶಿ ಸಾರ್ವಭೌಮ ಶಕ್ತಿಯ ರಾಯಭಾರಿ"ಗೆ ಜನಿಸಿದ ಮಕ್ಕಳು ಮತ್ತು ಶತ್ರುಗಳ ವಶದಲ್ಲಿರುವ ಪ್ರದೇಶದಲ್ಲಿ "ಶತ್ರು ರಾಷ್ಟ್ರದ ಪ್ರಜೆ"ಗೆ ಜನಿಸಿದ ಮಕ್ಕಳಿಗೆ ಮಾತ್ರ ಇದರಲ್ಲಿ ವಿನಾಯಿತಿ ನೀಡಲಾಗಿತ್ತು.
ಆದರೆ, 1986ರಲ್ಲಿ "ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಕೆಲವು ಆಫ್ರಿಕನ್ ದೇಶಗಳಿಂದ" ವಲಸಿಗರ ಒಳಹರಿವನ್ನು ತಡೆಯಲು ಸಂಸತ್ತು ಈ ಕಾಯ್ದೆಗೆ ತಿದ್ದುಪಡಿ ತಂದಿತು. ಈ ತಿದ್ದುಪಡಿ ಜಾರಿಗೆ ಬಂದ ನಂತರ ಜನಿಸಿದ ಮಕ್ಕಳು, ಅವರ ಪೋಷಕರಲ್ಲಿ ಒಬ್ಬರು ಭಾರತದ ಪ್ರಜೆಯಾಗಿದ್ದರೆ ಮಾತ್ರ ಪೌರತ್ವ ಪಡೆಯಬಹುದು ಎಂಬ ನಿಯಮ ತರಲಾಯಿತು. ಇದು ಭಾರತದಲ್ಲಿ ಜನ್ಮಸಿದ್ಧ ಪೌರತ್ವದ ಅಂತ್ಯಕ್ಕೆ ನಾಂದಿ ಹಾಡಿತು.
2003ರಲ್ಲಿ, ಈ ಕಾಯ್ದೆಗೆ ಮತ್ತೊಮ್ಮೆ ತಿದ್ದುಪಡಿ ತರಲಾಯಿತು. ಇದರ ಪ್ರಕಾರ, ಮಗು ಜನಿಸಿದ ಸಮಯದಲ್ಲಿ ಅದರ ಪೋಷಕರಲ್ಲಿ ಒಬ್ಬರು ಕಾನೂನುಬಾಹಿರ ವಲಸಿಗರಾಗಿದ್ದರೆ, ಆ ಮಗುವಿಗೆ ಹುಟ್ಟಿನಿಂದಲೇ ಪೌರತ್ವ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಲಾಯಿತು.
ಸೌಜನ್ಯ: indianexpress.com






