ಇರಾನ್ ವಿರುದ್ಧ ಅತ್ಯಂತ ಕಠಿಣ ನಿರ್ಬಂಧಗಳ ಎಚ್ಚರಿಕೆ ನೀಡಿದ ಅಮೆರಿಕ: ಇಲ್ಲಿವರೆಗೆ ಏನೇನಾಯ್ತು?
ಇರಾನ್ ಪ್ರತಿಕ್ರಿಯೆ ಏನು?; ಇಲ್ಲಿದೆ ಮಾಹಿತಿ...

Photo Credit : aljazeera.com
ಇರಾನ್ ಮೇಲಿನ ಯುದ್ಧವನ್ನು ಅಂತ್ಯಗೊಳಿಸುವ ದ್ವಿಪಕ್ಷೀಯ ಮಾತುಕತೆಗಳು ಹಳಿ ತಪ್ಪಿವೆ. ಈ ಬೆನ್ನಲ್ಲೇ ಟೆಹ್ರಾನ್ ಮೇಲೆ 'ಅಭೂತಪೂರ್ವ' ಆರ್ಥಿಕ ಒತ್ತಡ ಹೇರಲು ಅಮೆರಿಕ ಮುಂದಾಗಿದೆ.
ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಜೊತೆ ವ್ಯಾಪಾರ ವಹಿವಾಟು ನಡೆಸುವ ಯಾವುದೇ ದೇಶದ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು. ಇದರ ಬೆನ್ನಲ್ಲೇ ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಮಾತನಾಡಿ, ಹೊಸ ಸರಣಿ ಆರ್ಥಿಕ ನಿರ್ಬಂಧಗಳು ಇರಾನ್ ಸರ್ಕಾರವನ್ನು "ಸಂಪೂರ್ಣ ಪತನವಾಗುವಂತೆ" ಮಾಡಲಿವೆ ಎಂದು ಹೇಳಿದ್ದು, ಇತರ ದೇಶಗಳೂ ಈ ಪ್ರಯತ್ನಕ್ಕೆ ಕೈಜೋಡಿಸುವಂತೆ ಕರೆ ನೀಡಿದ್ದಾರೆ.
ಶನಿವಾರ ಈ ಕುರಿತು ಪ್ರತಿಕ್ರಿಯಿಸಿರುವ ಟೆಹ್ರಾನ್, ಅಮೆರಿಕದೊಂದಿಗೆ ಸೇರಿ ತನ್ನ ವಿರುದ್ಧ ಆರ್ಥಿಕ ನಿರ್ಬಂಧ ವಿಧಿಸುವ ಯಾವುದೇ ದೇಶದ ವಿರುದ್ಧ ತೀವ್ರ ತಿರುಗೇಟು ನೀಡುವುದಾಗಿ ಬೆದರಿಕೆ ಹಾಕಿದೆ.
ಅಮೆರಿಕ ಯೋಜಿಸುತ್ತಿರುವ ಮುಂದಿನ ಕ್ರಮಗಳು ಹಾಗೂ ಇರಾನ್ ನೀಡಬಹುದಾದ ಪ್ರತ್ಯುತ್ತರದ ಕುರಿತ ಪ್ರಮುಖ ವಿವರಗಳು ಇಲ್ಲಿವೆ.
ಇರಾನ್ ವಿರುದ್ಧ ಅಮೆರಿಕ ಒಡ್ಡುತ್ತಿರುವ ಹೊಸ ಬೆದರಿಕೆಗಳೇನು?
ಫೆಬ್ರವರಿಯಲ್ಲಿ ಯುದ್ಧ ಆರಂಭವಾದಾಗಿನಿಂದಲೂ ಟ್ರಂಪ್ ಆಡಳಿತವು "ಆಪರೇಷನ್ ಎಕನಾಮಿಕ್ ಫ್ಯೂರಿ" ಹೆಸರಿನಲ್ಲಿ ಇರಾನ್ ವಿರುದ್ಧ ಆರ್ಥಿಕ ಒತ್ತಡ ತರುವ ಅಭಿಯಾನ ನಡೆಸುತ್ತಿದೆ.
ಮುಖ್ಯವಾಗಿ, ಇರಾನ್ ತೈಲ ರಫ್ತು ಮಾಡುವುದನ್ನು ತಡೆಯಲು ಅದರ ಬಂದರುಗಳ ಮೇಲೆ ಅಮೆರಿಕ ಪ್ರಸ್ತುತ ನೌಕಾ ದಿಗ್ಬಂಧನ ಹೇರಿದೆ. ಅಲ್ಲದೆ, ಇರಾನ್ಗೆ ತೈಲ ಮಾರಾಟ ಮಾಡಲು ನೆರವಾಗುತ್ತಿರುವ ಕಂಪನಿಗಳು, ಮಧ್ಯವರ್ತಿಗಳು ಹಾಗೂ ಟ್ಯಾಂಕರ್ಗಳನ್ನು ಗುರಿಯಾಗಿಸಿಕೊಂಡಿದೆ.
ಇರಾನ್ಗೆ ಇಂಧನ ರಫ್ತಿನಿಂದ ಬರುವ ಆದಾಯವನ್ನು ತಡೆಯಲು ಅದರ ತೈಲ, ಹಡಗು ಮತ್ತು ಹಣಕಾಸು ವಲಯಗಳ ಮೇಲೆ ಈಗಾಗಲೇ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಇದೀಗ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಅಮೆರಿಕ ಹೇಳಿದೆ.
ಬುಧವಾರ ತಮ್ಮ 'ಟ್ರೂತ್ ಸೋಷಿಯಲ್' ಖಾತೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಇರಾನ್ ವಿರುದ್ಧ "ಅತ್ಯಂತ ಕಠಿಣ ಆರ್ಥಿಕ ಕಾರ್ಯಾಚರಣೆ" ನಡೆಸುವುದಾಗಿ ಘೋಷಿಸಿದ್ದಾರೆ.
ಒಪ್ಪಂದ ಮಾಡಿಕೊಳ್ಳುವ ಅವಕಾಶವನ್ನು ಇರಾನ್ "ಬಳಸಿಕೊಳ್ಳುವಲ್ಲಿ ವಿಫಲವಾಗಿದೆ". ಹೀಗಾಗಿ ಅದು "ಅಭೂತಪೂರ್ವ ಮಟ್ಟದ ಆರ್ಥಿಕ ಯುದ್ಧ ಮತ್ತು ಪ್ರತ್ಯೇಕತೆಯನ್ನು" ಎದುರಿಸಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ಇರಾನ್ ಜೊತೆ ವ್ಯವಹಾರ ನಡೆಸುವ ಯಾವುದೇ ದೇಶದ ವಿರುದ್ಧವೂ ನಿರ್ಬಂಧ ವಿಧಿಸುವುದಾಗಿ ಅವರು ಎಚ್ಚರಿಸಿದ್ದಾರೆ.
"ಯಾವುದೇ ದೇಶವು ತನ್ನ ಹಣಕಾಸು ಸಂಸ್ಥೆಗಳು, ಉದ್ಯಮಗಳು, ವಿಮಾನ ನಿಲ್ದಾಣಗಳು ಅಥವಾ ಸರ್ಕಾರಿ ಸಂಸ್ಥೆಗಳ ಮೂಲಕ ಇರಾನ್ಗೆ ಯಾವುದೇ ರೀತಿಯ ನೆರವು ನೀಡಿದರೆ, ಆ ದೇಶವೇ ಭಾರೀ ಆರ್ಥಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ" ಎಂದು ಅವರು ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ.
"ತೈಲ ಕಳ್ಳಸಾಗಣೆ, ಕರೆನ್ಸಿ ವಿನಿಮಯ ಒಪ್ಪಂದಗಳು, ನಗದು ವರ್ಗಾವಣೆ, ಎಕ್ಸ್ಚೇಂಜ್ ಹೌಸ್ಗಳು, ಹಡಗುಗಳ ನೋಂದಣಿ, ನಕಲಿ ಕಂಪನಿಗಳು ಇವೆಲ್ಲವೂ ತಕ್ಷಣವೇ ನಿಲ್ಲಬೇಕು. ನೀವು ಯಾರು ಎಂದು ನಿಮಗೆ ತಿಳಿದಿದೆ. ಇದು ಆರ್ಥಿಕ ರಂಗದ ಬೃಹತ್ ಸಮರವಾಗಲಿದೆ . ಇರಾನ್ ಬೆದರಿಕೆಯನ್ನು ಮಟ್ಟಹಾಕಲು ಮತ್ತು ಸೋಲಿಸಲು ಅಮೆರಿಕದ ಜೊತೆ ನಮ್ಮೆಲ್ಲಾ ಮಿತ್ರರಾಷ್ಟ್ರಗಳು ಕೈಜೋಡಿಸಬೇಕಿದೆ." ಎಂದಿದ್ದಾರೆ ಅವರು.
ಟ್ರಂಪ್ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಬಂದ ಮರುದಿನ, ಅಂದರೆ ಕಳೆದ ವಾರದ ಗುರುವಾರ ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, 'ಸಿಎನ್ಬಿಸಿ' ನ್ಯೂಸ್ ಏಜೆನ್ಸಿಗೆ ನೀಡಿರುವ ಸಂದರ್ಶನದಲ್ಲಿ ಅಮೆರಿಕವು ಇರಾನ್ ವಿರುದ್ಧ "ಇತಿಹಾಸದಲ್ಲೇ ಅತ್ಯಂತ ಕಠಿಣ ನಿರ್ಬಂಧಗಳನ್ನು" ಹೇರಲಿದೆ ಎಂದಿದ್ದಾರೆ.
ಇದು ದ್ವಿಮುಖ ಪ್ರಹಾರ. ನಾವು ಈಗಾಗಲೇ (ಇರಾನ್ ವಿರುದ್ಧ) ನೌಕಾ ದಿಗ್ಬಂಧನ ಹೇರಿದ್ದೇವೆ ಮತ್ತು ಈಗ ಇತಿಹಾಸದಲ್ಲೇ ಅತ್ಯಂತ ಕಠಿಣ ನಿರ್ಬಂಧಗಳನ್ನು ತರಲಿದ್ದೇವೆ. ಇದು ಇರಾನ್ನಲ್ಲಿ ಯಶಸ್ವಿಯಾಗಲಿದೆ ಮತ್ತು ನಾವು ಈ ಆಡಳಿತವನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡಲಿದ್ದೇವೆ ಎಂದು ಬೆಸೆಂಟ್ ಹೇಳಿದ್ದಾರೆ.
ಇರಾನ್ ಜೊತೆಗಿನ ವ್ಯಾಪಾರ ವಹಿವಾಟನ್ನು ಮುಂದುವರಿಸಿದರೆ ಅಂತರರಾಷ್ಟ್ರೀಯ ಸಮುದಾಯದ ದೇಶಗಳೂ ಕೂಡ ಆರ್ಥಿಕ ಶಿಸ್ತುಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಇದೇ ವೇಳೆ ಎಚ್ಚರಿಸಿದ್ದಾರೆ.
"ನಾವು ಅವರ ಬಳಿ ಹೋಗಿ, 'ನೀವು ನಮ್ಮೊಂದಿಗಿದ್ದೀರೋ ಅಥವಾ ನಮ್ಮ ವಿರುದ್ಧವಾಗಿದ್ದೀರೋ' ಎಂದು ನೇರವಾಗಿ ಹೇಳುತ್ತೇವೆ. ಹಣ ರವಾನೆ, ತೈಲ ಖರೀದಿ ಅಥವಾ ಸಮುದ್ರ ಮಾರ್ಗದ ಹಡಗು ಸಾರಿಗೆ ಮೂಲಕ ನೀವು ಇರಾನ್ ಜೊತೆ ವ್ಯಾಪಾರ ಮಾಡಲು ಬಯಸಿದರೆ, ಅಮೆರಿಕ ಹಣಕಾಸು ಇಲಾಖೆ ಹಾಗೂ ಅಮೆರಿಕ ಸರ್ಕಾರವು ನಿಮ್ಮ ವಿರುದ್ಧ ತನ್ನ ಸಂಪೂರ್ಣ ಶಕ್ತಿಯನ್ನು ಬಳಸಿ ಕ್ರಮ ಕೈಗೊಳ್ಳಲಿದೆ" ಎಂದಿದ್ದಾರೆ ಬೆಸೆಂಟ್.
ಅಮೆರಿಕದ ಈ ತಂತ್ರವನ್ನು ಅವರು "ವಿಶ್ವದ ಇತಿಹಾಸದಲ್ಲೇ ಅತಿ ದೊಡ್ಡ ಸಂಯೋಜಿತ ಆರ್ಥಿಕ ದಿಗ್ಬಂಧನ" ಎಂದಿದ್ದಾರೆ.
"ನಮ್ಮ ಮಿತ್ರರಾಷ್ಟ್ರಗಳು ಹಾಗೂ ವಿಶ್ವದ ಇತರ ದೇಶಗಳು ಈಗ ನಿರ್ಧಾರ ಕೈಗೊಳ್ಳುವ ಸಮಯ ಬಂದಿದೆ" ಎಂದು ಬೆಸೆಂಟ್ ಹೇಳಿದ್ದಾರೆ.
ಇರಾನ್ ಪ್ರತಿಕ್ರಿಯೆ ಹೇಗಿದೆ?
ಅಮೆರಿಕ ಜಾರಿಗೆ ತರಲು ಉದ್ದೇಶಿಸಿರುವ ಹೊಸ ನಿರ್ಬಂಧಗಳನ್ನು, ಮುಖ್ಯವಾಗಿ ಇತರ ದೇಶಗಳ ವಿರುದ್ಧದ ಆರ್ಥಿಕ ಕ್ರಮಗಳನ್ನು ಇರಾನ್ ಖಂಡಿಸಿದ್ದು, ಇದು "ಸಾರ್ವಭೌಮತ್ವದ ಸಂಪೂರ್ಣ ನಾಶ" ಎಂದಿದೆ.
ಶನಿವಾರ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘಾಯಿ, ಅಮೆರಿಕದ ಈ ಪ್ರಕಟಣೆಯು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ವಿರುದ್ಧ "ತನ್ನದೇ ಸಾರ್ವಭೌಮತ್ವವನ್ನು ಬಲವಂತವಾಗಿ ಹೇರುವ ಯತ್ನ" ಎಂದಿದ್ದಾರೆ.
ಇರಾನ್ ಜೊತೆಗಿನ ವಹಿವಾಟನ್ನು ರದ್ದುಗೊಳಿಸುವಂತೆ ಯಾವುದೇ ದೇಶವೂ ವಿದೇಶಿ ಬ್ಯಾಂಕುಗಳು, ಉದ್ಯಮಗಳು ಅಥವಾ ವಿಮಾನ ನಿಲ್ದಾಣಗಳ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
"ಇದರ ಅಂತಿಮ ಪರಿಣಾಮವೆಂದರೆ ವಿಶ್ವಸಂಸ್ಥೆಯ ತತ್ವಗಳ ಆಧಾರದ ಮೇಲೆ ನಿಂತಿರುವ ರಾಷ್ಟ್ರಗಳ ಸಾರ್ವಭೌಮತ್ವದ ಸಂಪೂರ್ಣ ನಾಶ. ಇದು ಮತ್ತೆ ಹಳೆಯ ಕಾಲದ ಪೂರ್ಣ ಪ್ರಮಾಣದ ವಸಾಹತುಶಾಹಿಗೆ ಮರಳುವ ದಾರಿಯಾಗಿದೆ ಎಂದು ಬಘಾಯಿ ತಿಳಿಸಿದ್ದಾರೆ.
ಇರಾನ್ ದಶಕಗಳಿಂದ ಅಮೆರಿಕದ ನಿರ್ಬಂಧಗಳನ್ನು ಎದುರಿಸುತ್ತಿದೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮಗಳು ಉಲ್ಲೇಖಿಸಿವೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಮಾತನಾಡಿ, ಈ ಹೊಸ ಕ್ರಮಗಳು "ಖಂಡಿತವಾಗಿಯೂ ವಿಫಲವಾಗಲಿವೆ" ಎಂದಿದ್ದಾರೆ.
2012ರ ನಿರ್ಬಂಧಗಳ ಕುರಿತು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮಾಡಿದ್ದ ಟ್ವೀಟ್ನ ಸ್ಕ್ರೀನ್ಶಾಟ್ ಹಂಚಿಕೊಂಡಿರುವ ಅರಾಘ್ಚಿ, "ನಾವು ಈ ಸಿನಿಮಾವನ್ನು ಮುಂಚೆಯೇ ನೋಡಿದ್ದೇವೆ. ವಿಷಯ ಒಂದೇ, ಬೆದರಿಕೆ ಹಾಕುವ ವ್ಯಕ್ತಿಗಳು ಮಾತ್ರ ಬೇರೆ," ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಅಮೆರಿಕದ ಬೇಡಿಕೆಗಳಿಗೆ ಒಪ್ಪುವ ದೇಶಗಳನ್ನು ಇರಾನ್ ಗುರಿಯಾಗಿಸಬಹುದೇ?
ಶನಿವಾರ ಪ್ರತಿಕ್ರಿಯಿಸಿದ್ದ ಟೆಹ್ರಾನ್, ಅಮೆರಿಕದೊಂದಿಗೆ ಸೇರಿ ತನ್ನ ವಿರುದ್ಧ ಆರ್ಥಿಕ ನಿರ್ಬಂಧ ವಿಧಿಸುವ ಯಾವುದೇ ದೇಶದ ವಿರುದ್ಧವೂ ತೀವ್ರ ತಿರುಗೇಟು ನೀಡುವುದಾಗಿ ಬೆದರಿಕೆ ಹಾಕಿದೆ. ಇರಾನ್ನ ಉನ್ನತ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಮೊಹ್ಸೆನ್ ರೆಜಾಯಿ ಸರ್ಕಾರಿ ಪ್ರಸಾರ ಸಂಸ್ಥೆ 'ಐಆರ್ಐಬಿ' ಜೊತೆ ಮಾತನಾಡಿ, ಅಮೆರಿಕದ "ಆರ್ಥಿಕ ಯುದ್ಧ"ದಲ್ಲಿ ಭಾಗಿಯಾಗದಂತೆ ನೆರೆಹೊರೆಯ ದೇಶಗಳು ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ. "ನಮ್ಮ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಲು ಭಾಗಿಯಾಗುವ ಯಾವುದೇ ದೇಶವನ್ನು ಶತ್ರು ಎಂದು ಪರಿಗಣಿಸಲಾಗುವುದು," ಎಂದು ಅವರು ಹೇಳಿದ್ದು, ಭೀಕರ ಪ್ರತೀಕಾರದ ಎಚ್ಚರಿಕೆ ನೀಡಿದ್ದಾರೆ.
ತಮ್ಮ ತಂತ್ರಜ್ಞಾನ ಹಾಗೂ ಯೋಜನೆಗಳನ್ನು ಮೂರು ಹಂತಗಳಲ್ಲಿ ಜಾರಿಗೆ ತರುವುದಾಗಿ ರೆಜಾಯಿ ವಿವರಿಸಿದ್ದಾರೆ. ಮೊದಲ ಹಂತವಾಗಿ ಉದ್ವಿಗ್ನತೆಯನ್ನು ಶಮನಗೊಳಿಸಲು ಮಾತುಕತೆ ನಡೆಸಲಾಗುವುದು ಎಂದಿದ್ದಾರೆ ಅವರು.
"ನಾವು ಮೊದಲಿಗೆ ಅವರೊಂದಿಗೆ ಮಾತುಕತೆ ನಡೆಸುತ್ತೇವೆ. ಅವರ ಬಳಿ ಚರ್ಚಿಸಿ, ಅಮೆರಿಕದಿಂದ ದೂರವಿರುವಂತೆ ತಿಳಿಸುತ್ತೇವೆ. ಆದರೆ ಅವರು ನಮ್ಮ ಮಾತು ಕೇಳದಿದ್ದರೆ, ನಾವು ದಾಳಿ ನಡೆಸುತ್ತೇವೆ. ಆ ದೇಶದ ಹಿತಾಸಕ್ತಿಗಳನ್ನು ಗುರಿಯಾಗಿಸಿಕೊಳ್ಳುತ್ತೇವೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಷ್ಟೇ ಅಲ್ಲದೆ, ಟ್ರಂಪ್ ಅವರ ಆರ್ಥಿಕ ಯುದ್ಧದಲ್ಲಿ ಭಾಗಿಯಾದರೆ ಗಲ್ಫ್ ಪ್ರದೇಶದಿಂದ "ಒಂದು ಹನಿ ತೈಲವೂ ಹೊರಹೋಗಲು ಬಿಡುವುದಿಲ್ಲ" ಎಂದು ರೆಜಾಯಿ ನೆರೆಹೊರೆಯ ದೇಶಗಳಿಗೆ ಎಚ್ಚರಿಸಿದ್ದಾರೆ. ಸಾಮಾನ್ಯವಾಗಿ ಜಾಗತಿಕ ತೈಲ ಮತ್ತು ಅನಿಲ ರಫ್ತಿನ ಐದನೇ ಒಂದು ಭಾಗ ಹಾದುಹೋಗುವ ಹಾರ್ಮುಝ್ ಜಲಸಂಧಿಯನ್ನು ಹೊರತುಪಡಿಸಿ, ಪರ್ಯಾಯ ಮಾರ್ಗಗಳ ಮೂಲಕವೂ ರಫ್ತು ಮಾಡಲು ಬಿಡುವುದಿಲ್ಲ ಎಂದಿದ್ದಾರೆ.
ಫೆಬ್ರವರಿ 28 ರಂದು ಯುದ್ಧ ಪ್ರಾರಂಭವಾದಂದಿನಿಂದ ಇರಾನ್ ಈಗಾಗಲೇ ಈ ಪ್ರದೇಶದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳು, ಮೂಲಸೌಕರ್ಯಗಳು ಮತ್ತು ನಾಗರಿಕ ಪ್ರದೇಶಗಳ ಮೇಲೆ ದಾಳಿಗಳನ್ನು ನಡೆಸಿದೆ.
ಬಹ್ರೇನ್, ಕುವೈತ್, ಖತರ್, ಸೌದಿ ಅರೇಬಿಯಾ ಮತ್ತು ಯುಎಇ ಸೇರಿದಂತೆ ಮಧ್ಯಪ್ರಾಚ್ಯ ಹಾಗೂ ಉತ್ತರ ಆಫ್ರಿಕಾದ ಹತ್ತಕ್ಕೂ ಹೆಚ್ಚು ಪ್ರದೇಶಗಳಲ್ಲಿ ಅಮೆರಿಕ ಮಿಲಿಟರಿ ನೆಲೆಗಳನ್ನು ಹೊಂದಿದೆ. ಜೊತೆಗೆ ಜೋರ್ಡಾನ್ ಸೇರಿದಂತೆ ಈ ಇಡೀ ಪ್ರದೇಶದಲ್ಲಿ ಸಾವಿರಾರು ಅಮೆರಿಕನ್ ಸೈನಿಕರು ನಿಯೋಜಿತಗೊಂಡಿದ್ದಾರೆ.
ನೆದರ್ಲ್ಯಾಂಡ್ಸ್ನ 'ಕ್ಲಿಂಗೆಂಡೇಲ್ ಸಂಸ್ಥೆ'ಯ ಇರಾನ್ ವಿಷಯಗಳ ಸಂಶೋಧಕ ಹಮೀದ್ರೇಝಾ ಅಝಿಝಿ ಶನಿವಾರ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, "ದಾಳಿಗೆ ಸಿದ್ಧತೆ ನಡೆಸುವ ಮುನ್ಸೂಚನೆ ಸಿಕ್ಕರೂ ಇರಾನ್ ಪ್ರತಿಕ್ರಿಯಿಸಬಹುದು ಎಂಬ ಸಂದೇಶ ನೀಡುವ ಮೂಲಕ ಟೆಹ್ರಾನ್ ಆರಂಭಿಕ ಹಂತದಲ್ಲೇ ತಡೆಗೋಡೆ ನಿರ್ಮಿಸಲು ಯತ್ನಿಸುತ್ತಿರುವಂತೆ ತೋರುತ್ತಿದೆ" ಎಂದಿದ್ದಾರೆ.
ಇರಾನ್ನ ಹೊಸ "ಆಕ್ರಮಣಕಾರಿ ಸಿದ್ಧಾಂತ"ದಲ್ಲಿ ಎರಡು ಅಂಶಗಳು ಹೊರಹೊಮ್ಮುತ್ತಿವೆ. ಮೊದಲನೆಯದ್ದು ಬರಬಹುದಾದ ಭವಿಷ್ಯದ ಬೆದರಿಕೆಯನ್ನು ಮೊದಲೇ ತಡೆಯುವುದು , ಎರಡನೆಯದ್ದು, ಯಾವುದೇ ದಾಳಿ ನಡೆದರೂ ಅದಕ್ಕೆ ಅತ್ಯಂತ ತೀವ್ರವಾದ ಪ್ರತೀಕಾರ ತೀರಿಸಿಕೊಳ್ಳುವುದು ಎಂದು ಅಝಿಝಿ ಹೇಳಿದ್ದಾರೆ
ಟ್ರಂಪ್ ಅವರ ಬೇಡಿಕೆಗಳಿಗೆ ಇತರ ದೇಶಗಳು ಹೇಗೆ ಪ್ರತಿಕ್ರಿಯಿಸಿವೆ?
ಟ್ರಂಪ್ ಅವರ ಬೆದರಿಕೆಗಳಿಗೆ ಚೀನಾ ವಿರೋಧ ವ್ಯಕ್ತಪಡಿಸಿದೆ. ಆಗಸ್ಟ್ 20ರಂದು ಬೀಜಿಂಗ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ನಿರ್ಬಂಧಗಳನ್ನು ಹೇರುವುದು ಮತ್ತು ಒತ್ತಡ ತರುವುದು ಸಮಸ್ಯೆಯನ್ನು ಪರಿಹರಿಸಲು ನೆರವಾಗುವುದಿಲ್ಲ ಎಂದಿದ್ದಾರೆ.
ಸಂಬಂಧಪಟ್ಟ ಎಲ್ಲರೂ ಜವಾಬ್ದಾರಿಯುತ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ರಾಜತಾಂತ್ರಿಕ ಹಾಗೂ ರಾಜಕೀಯ ಮಾರ್ಗಗಳ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಚೀನಾ ಕರೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಇರಾನ್ನ ನೆರೆಹೊರೆಯ ಹಾಗೂ ಅಮೆರಿಕದ ಮಿತ್ರರಾಷ್ಟ್ರಗಳಾಗಿರುವ ಗಲ್ಫ್ ದೇಶಗಳು, ಯುದ್ಧದ ನಡುವೆ ಸಿಲುಕಿಕೊಳ್ಳುತ್ತಿವೆ. ಹೀಗಾಗಿ, ಇರಾನ್ಗೆ ಮತ್ತಷ್ಟು ಆರ್ಥಿಕ ಬೆದರಿಕೆ ಒಡ್ಡುವಲ್ಲಿ ಇವೆಲ್ಲವೂ ಅಮೆರಿಕ ಜೊತೆ ಕೈಜೋಡಿಸುತ್ತವೆಯೇ ಎಂಬುದು ಸ್ಪಷ್ಟವಾಗಿಲ್ಲ.
ಇರಾನ್ ತನ್ನ ಪಡೆಗಳ ಮೇಲೆ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ಆರೋಪಿಸಿ ಯುಎಇ ಕಳೆದ ವಾರ ಇರಾನ್ ವಿರುದ್ಧ ಅನಿರ್ದಿಷ್ಟಾವಧಿ ವ್ಯಾಪಾರ ನಿಷೇಧವನ್ನು ಘೋಷಿಸಿತು. ಆದರೆ, ಟೆಹ್ರಾನ್ ಈ ಆರೋಪವನ್ನು ನಿರಾಕರಿಸಿದೆ. ಇರಾನ್ ತನ್ನ ಪ್ರಮುಖ ಆಮದುಗಳು ಹಾಗೂ ತೈಲ ಮಾರಾಟ ಮಾಡುವ ಹಣಕಾಸು ಸೇವೆಗಳಿಗಾಗಿ ಯುಎಇಯನ್ನೇ ನೆಚ್ಚಿಕೊಂಡಿದೆ ಎಂದು ನಂಬಲಾಗಿದೆ.
ಇರಾನ್ ಸರ್ಕಾರ ಪತನವಾದರೆ ಎದುರಾಗಬಹುದಾದ ಅರಾಜಕತೆಗೆ ಅನೇಕ ಗಲ್ಫ್ ರಾಷ್ಟ್ರಗಳು ಭಯಪಡುತ್ತಿವೆ ಎಂದು ವಿಶ್ಲೇಷಕರು 'ಅಲ್ ಜಝೀರಾ'ಗೆ ತಿಳಿಸಿದ್ದಾರೆ. ರಾಜತಾಂತ್ರಿಕತೆಯ ಮೇಲಿನ ಪ್ರಾದೇಶಿಕ ನಂಬಿಕೆ ಕಡಿಮೆಯಿದ್ದರೂ, ಮತ್ತೊಂದು ಸುದೀರ್ಘ ಯುದ್ಧವನ್ನು ಭರಿಸಲು ಯಾವುದೇ ದೇಶ ಸಿದ್ಧವಿಲ್ಲ ಎಂದು ಅವರು ಹೇಳಿದ್ದಾರೆ.
"ಅಂತಿಮವಾಗಿ ಗಲ್ಫ್ ದೇಶಗಳು ಭೌಗೋಳಿಕತೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಅವು ಇರಾನ್ ಜೊತೆಯಲ್ಲೇ ವಾಸಿಸಬೇಕು ಮತ್ತು ಕೆಲಸ ಮಾಡಬೇಕಾಗುತ್ತದೆ" ಎಂದು ಲಂಕ್ಯಾಸ್ಟರ್ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಸಂಬಂಧಗಳ ಪ್ರಾಧ್ಯಾಪಕ ಸೈಮನ್ ಮೇಬನ್ ಕಳೆದ ತಿಂಗಳು 'ಅಲ್ ಜಝೀರಾ'ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
"ಇರಾನ್ ಸರ್ಕಾರದ ಪತನದಿಂದ ಉಂಟಾಗುವ ಅಸ್ಥಿರತೆಯನ್ನು ಅವು ಬಯಸುವುದಿಲ್ಲ. ಸರ್ಕಾರವನ್ನು ಪತನಗೊಳಿಸಲು ಅಲ್ಲ, ಬದಲಿಗೆ ಇರಾನ್ನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ಮೂಲಭೂತವಾದಿ ಅಂಶಗಳನ್ನು ದುರ್ಬಲಗೊಳಿಸಲು ಕೆಲವು ಗಲ್ಫ್ ರಾಷ್ಟ್ರಗಳು ಬಲವಾದ ದಾಳಿಗಳಿಗೆ ಒತ್ತಾಯಿಸಿವೆ ಎಂದು ನಾನು ಭಾವಿಸುತ್ತೇನೆ." ಎಂದಿದ್ದಾರೆ ಅವರು.
ಅಮೆರಿಕದ ಕ್ರಮಗಳಿಂದ ಇರಾನ್ ಅನ್ನು ಚೀನಾ ಮತ್ತು ರಷ್ಯಾ ರಕ್ಷಿಸಬಲ್ಲವೇ?
ಇರಾನ್ ಜೊತೆ ವ್ಯಾಪಾರ ವಹಿವಾಟು ಮುಂದುವರಿಸುವ ಯಾವುದೇ ದೇಶದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಬೆದರಿಕೆ ಹಾಕಿದ್ದರೂ, ಇರಾನ್ನ ಪ್ರಮುಖ ವ್ಯಾಪಾರಿ ಪಾಲುದಾರರಾದ ಚೀನಾ ಮತ್ತು ರಷ್ಯಾ ಮೇಲೆ ಟ್ರಂಪ್ ಅವರ ಪ್ರಭಾವ ನಿಯಮಿತವಾಗಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.
ಖತರ್ನ ಜಾರ್ಜ್ಟೌನ್ ವಿಶ್ವವಿದ್ಯಾಲಯದ ಸರ್ಕಾರಿ ವಿಭಾಗದ ಸಹ ಪ್ರಾಧ್ಯಾಪಕ ಪೌಲ್ ಮಸ್ಗ್ರೇವ್ ಕಳೆದ ವಾರ 'ಅಲ್ ಜಝೀರಾ'ಗೆ ನೀಡಿರುವ ಹೇಳಿಕೆಯಲ್ಲಿ, ಟ್ರಂಪ್ ತಮ್ಮ ಈ ಒತ್ತಡದ ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದು "ಬಹಳ ಕಷ್ಟಕರವಾಗಲಿದೆ" ಎಂದಿದ್ದಾರೆ.
"ಸಾಮಾನ್ಯವಾಗಿ ಬಹುಪಕ್ಷೀಯ ಸಮನ್ವಯತೆಯಿಂದ ಜಾರಿಯಾಗುವಂತಹ ಸಂಯೋಜಿತ ನಿರ್ಬಂಧಗಳನ್ನು ಟ್ರಂಪ್ ಏಕಪಕ್ಷೀಯವಾಗಿ ಹೇರಲು ಯತ್ನಿಸುತ್ತಿದ್ದಾರೆ. ಅಂದರೆ ಚೀನಾ, ರಷ್ಯಾ ಸೇರಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪಿ5 (ಖಾಯಂ 5) ಸದಸ್ಯ ದೇಶಗಳನ್ನು ಒಪ್ಪಿಸುವುದು ಅವರಿಗೆ ಅತ್ಯಗತ್ಯವಾಗಿದೆ" ಎಂದು ಮಸ್ಗ್ರೇವ್ ತಿಳಿಸಿದ್ದಾರೆ
ಚೀನಾ ಮತ್ತು ರಷ್ಯಾದ ಹಲವು ವಲಯಗಳು ಅಮೆರಿಕದ ಹಣಕಾಸು ವ್ಯವಸ್ಥೆಯ ಮೇಲೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಅವಲಂಬಿತವಾಗಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.
ಚೀನಾದ ಹೆಚ್ಚಿನ ತೈಲ ಸಂಸ್ಕರಣಾಗಾರಗಳು ಈ ವಲಯದಲ್ಲಿ ಸೇರಿವೆ. 'ಕ್ಲೆಪರ್' ಎಂಬ ವಿಶ್ಲೇಷಣಾ ಸಂಸ್ಥೆಯ ಪ್ರಕಾರ, 2025 ರಲ್ಲಿ ಇರಾನ್ ರಫ್ತು ಮಾಡಿದ ತೈಲದ ಶೇಕಡಾ 80 ರಷ್ಟನ್ನು ಚೀನಾ ಖರೀದಿಸಿದೆ. ಮಲೇಷ್ಯಾ ಕರಾವಳಿಯಲ್ಲಿ ಹಡಗಿನಿಂದ ಹಡಗಿಗೆ ಇರಾನ್ ತೈಲವನ್ನು ವರ್ಗಾಯಿಸುತ್ತಿರುವುದಕ್ಕೆ ಸಾಕ್ಷ್ಯಗಳು ಸಿಕ್ಕಿದ್ದು, ಇರಾನ್ ತೈಲ ವ್ಯಾಪಾರ ಹೇಗೆ ಮುಂದುವರಿಯುತ್ತಿದೆ ಎಂಬುದನ್ನು ಇದು ತೋರಿಸುತ್ತದೆ.
ಅಮೆರಿಕ ಹಣಕಾಸು ಇಲಾಖೆ ಎಚ್ಚರಿಸಿದಂತೆ, ಇರಾನ್ನ ಹಣಕಾಸು ವ್ಯವಹಾರಗಳನ್ನು ನಿರ್ವಹಿಸುವ ಪ್ರಮುಖ ಚೀನೀ ಬ್ಯಾಂಕ್ಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದರೆ ಚೀನಾ ಕೂಡ ಪ್ರತ್ಯುತ್ತರ ನೀಡಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ.
"ಟ್ರಂಪ್ ಚೀನಾದೊಂದಿಗಿನ ಸಂಬಂಧವನ್ನು ಸ್ಥಿರಗೊಳಿಸಲು ಬಯಸುತ್ತಿದ್ದಾರೆ. ಹೀಗಾಗಿ ಬೀಜಿಂಗ್ ಕೂಡ ವಾಷಿಂಗ್ಟನ್ ಜೊತೆ ತಾತ್ಕಾಲಿಕ ಕದನ ವಿರಾಮವನ್ನು ಹೊಂದುವ ಗುರಿ ಹೊಂದಿದೆ" ಎಂದು ಚಾಥಮ್ ಹೌಸ್ ಥಿಂಕ್ ಟ್ಯಾಂಕ್ನ ಚೀನಾ, ಏಷ್ಯಾ ಪೆಸಿಫಿಕ್ ಕಾರ್ಯಕ್ರಮದ ಹಿರಿಯ ಸಂಶೋಧಕಿ ಯು ಜೀ 'ಅಲ್ ಜಝೀರಾ'ಗೆ ತಿಳಿಸಿದ್ದಾರೆ.
ಚೀನಾಗೆ ಹೋಲಿಸಿದರೆ ಇರಾನ್ಗೆ ರಷ್ಯಾ ಸಣ್ಣ ವ್ಯಾಪಾರಿ ಪಾಲುದಾರನಾಗಿದ್ದರೂ ಪಾಶ್ಚಿಮಾತ್ಯ ಮಾರ್ಗಗಳನ್ನು ತಪ್ಪಿಸಲು ರಷ್ಯಾ ಮತ್ತು ಟೆಹ್ರಾನ್ ವರ್ಷಗಳಿಂದ ಪ್ರಮುಖ ವಾಣಿಜ್ಯ ಮತ್ತು ಮಿಲಿಟರಿ ಬಾಂಧವ್ಯಗಳನ್ನು ವೃದ್ಧಿಸಿಕೊಂಡಿವೆ. ಮುಖ್ಯವಾಗಿ, ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಬಳಸಲು ಇರಾನ್ ರಷ್ಯಾಗೆ 'ಶಾಹೆದ್' ಡ್ರೋನ್ಗಳನ್ನು ಪೂರೈಸಿದೆ.
ಕೃಪೆ: aljazeera.com






