ವಾಹನಗಳಲ್ಲಿ ಅಕ್ರಮ ಲೈಟ್ ಬಳಕೆ ವಿರುದ್ಧ ಕ್ರಮ: ನಾಲ್ಕು ವರ್ಷಗಳಲ್ಲಿ ಪ್ರಕರಣಗಳು 22 ಪಟ್ಟು ಹೆಚ್ಚಳ

Photo Credit :X
ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು (ಬಿಟಿಪಿ) ಸಾರ್ವಜನಿಕ ಹಾಗೂ ಖಾಸಗಿ ವಾಹನಗಳಲ್ಲಿ ಅನಧಿಕೃತ ಎಲ್ಇಡಿ ಬಾರ್ಗಳು, ಅತಿಪ್ರಖರ ಹೆಡ್ಲೈಟ್ ಗಳು ಮತ್ತು ಕೆಂಪು–ನೀಲಿ ಸ್ಟ್ರೋಬ್ ಲೈಟ್ಗಳ ಬಳಕೆಯನ್ನು ಪತ್ತೆಹಚ್ಚಲು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಈ ಕ್ರಮಗಳ ಹೊರತಾಗಿಯೂ ಅನಧಿಕೃತ ವಾಹನ ದೀಪಗಳ ಬಳಕೆಯ ಪ್ರಕರಣಗಳು ಹೆಚ್ಚುತ್ತಲೇ ಇವೆ.
ವಾಹನಗಳಲ್ಲಿ ಅಕ್ರಮ ಲೈಟ್ ಬಳಕೆ ವಿರುದ್ಧ ಬಿಟಿಪಿ ಜನವರಿ 7ರಿಂದ ಆರಂಭಿಸಿದ ವಿಶೇಷ ಕಾರ್ಯಾಚರಣೆಯಲ್ಲಿ, ನಿಯಮ ಉಲ್ಲಂಘಿಸಿದ ಸಾವಿರಕ್ಕೂ ಹೆಚ್ಚು ವಾಹನ ಸವಾರರ ವಿರುದ್ಧ ಪ್ರಕರಣಗಳು ದಾಖಲಾಗಿವೆ. SUVಗಳಿಂದ ಹಿಡಿದು ಆಟೋರಿಕ್ಷಾಗಳವರೆಗೆ, ಅನುಮತಿಸಲಾದ ವ್ಯಾಟೇಜ್ ಮೀರಿದ ಅಥವಾ ಸೂಚಿಸಲಾದ ಬೆಳಕನ್ನು ಪಾಲಿಸದ ವಾಹನಗಳ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಬಿಟಿಪಿ ದತ್ತಾಂಶವು ಖಾಸಗಿ ವಾಹನಗಳಲ್ಲಿ ಫ್ಲ್ಯಾಶ್ ಲೈಟ್ ಬಳಕೆಯ ಪ್ರವೃತ್ತಿ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. ಕೆಂಪು, ನೀಲಿ ಅಥವಾ ಹಳದಿ ಬಣ್ಣದ ದೀಪಗಳು ರಸ್ತೆಗಳಲ್ಲಿ ಗೊಂದಲ ಉಂಟುಮಾಡುತ್ತಿದ್ದು, ವಿಶೇಷವಾಗಿ ರಾತ್ರಿ ಸಮಯದಲ್ಲಿ ವಾಹನ ಚಾಲನೆಗೆ ಗಂಭೀರ ಅಪಾಯವನ್ನು ತಂದೊಡ್ಡುತ್ತವೆ.
ಅಧಿಕೃತ ಮಾಹಿತಿಯ ಪ್ರಕಾರ, ಪಶ್ಚಿಮ ವಿಭಾಗದಲ್ಲಿ ಇಂತಹ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚು ದಾಖಲಾಗಿದ್ದು, ಇದು ನಗರದಾದ್ಯಂತ ದಾಖಲಾಗಿರುವ ಒಟ್ಟು ಪ್ರಕರಣಗಳ ಅರ್ಧಕ್ಕಿಂತ ಹೆಚ್ಚು ಪಾಲು ಹೊಂದಿದೆ. ಈ ವಿಭಾಗದಲ್ಲಿ ಒಟ್ಟು 5,969 ಪ್ರಕರಣಗಳು ದಾಖಲಾಗಿವೆ. 2020ರಲ್ಲಿ 1,354 ಪ್ರಕರಣಗಳು ದಾಖಲಾಗಿದ್ದರೆ, 2022ರಲ್ಲಿ ಅದು 467ಕ್ಕೆ ಇಳಿದಿತ್ತು. ಇದರಿಂದ ಆ ಅವಧಿಯಲ್ಲಿ ನಿಯಮ ಉಲ್ಲಂಘನೆಗಳಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿತ್ತು.
ಆದರೆ, ಇತ್ತೀಚಿನ ಕಾರ್ಯಾಚರಣೆಯಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರು ಕೇವಲ ಏಳು ದಿನಗಳಲ್ಲಿ 2,263 ಪ್ರಕರಣಗಳನ್ನು ದಾಖಲಿಸಿದ್ದಾರೆ. 2022ರೊಂದಿಗೆ ಹೋಲಿಸಿದರೆ, 2026ರ ವೇಳೆಗೆ ಉಲ್ಲಂಘನೆ ಪ್ರಕರಣಗಳು 2,200 ಶೇಕಡಕ್ಕಿಂತ ಹೆಚ್ಚಾಗಿವೆ. ಅಂದರೆ, ನಾಲ್ಕು ವರ್ಷಗಳ ಹಿಂದಿನ ಹೋಲಿಕೆಯಲ್ಲಿ ಪ್ರಕರಣಗಳು ಸುಮಾರು 22 ಪಟ್ಟು ಹೆಚ್ಚಾಗಿವೆ.
ಪ್ರತಿ ವರ್ಷ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದರೂ, ಅನೇಕ ವಾಹನ ಚಾಲಕರು ತಮ್ಮ ವಾಹನಗಳನ್ನು ಪರಿಶೀಲಿಸಿದ ಅಥವಾ ದಂಡ ವಿಧಿಸಿದ ತಕ್ಷಣವೇ ಅಕ್ರಮ ದೀಪಗಳನ್ನು ಮರುಸ್ಥಾಪಿಸುತ್ತಾರೆ ಎಂದು ಹಿರಿಯ ಸಂಚಾರ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸೂರ್ಯಾಸ್ತದ ನಂತರ ಅಥವಾ ರಾತ್ರಿ ವೇಳೆಯ ರಸ್ತೆ ಸಂಚಾರದಲ್ಲಿ ಅಪಾಯ ಉಂಟುಮಾಡುವ ಅನಧಿಕೃತ ಎಲ್ಇಡಿ ದೀಪಗಳು, ಕಣ್ಣು ಕೋರೈಸುವ ಹೆಡ್ಲೈಟ್ಗಳು ಹಾಗೂ ಬಣ್ಣದ ಫ್ಲ್ಯಾಶ್ ಲೈಟ್ ಗಳನ್ನು ಗುರಿಯಾಗಿಸಿಕೊಂಡು ಈ ಕ್ರಮ ಜರುಗಿಸಲಾಗಿದೆ. ವಾಹನಗಳಲ್ಲಿ ಇಂತಹ ಯಾವುದೇ ಮಾರ್ಪಾಡುಗಳು ಕೇಂದ್ರ ಮೋಟಾರ್ ವಾಹನ ನಿಯಮಗಳನ್ನು (CMVR) ಉಲ್ಲಂಘಿಸುತ್ತವೆ ಎಂದು RTO ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
AIS-130 (ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್) ಅಡಿಯಲ್ಲಿ, ಪ್ರಮಾಣಿತ ಬಿಳಿ LED ಹೆಡ್ಲೈಟ್ಗಳು 4 ರಿಂದ 12 ವ್ಯಾಟ್ಗಳ ನಡುವೆ ಕಾರ್ಯನಿರ್ವಹಿಸಬೇಕು ಹಾಗೂ ಸುಮಾರು 725 ಲ್ಯುಮೆನ್ಗಳ ಪ್ರಕಾಶವನ್ನು ಉತ್ಪಾದಿಸಬೇಕು. ಇದರಿಂದ ಸಮತೋಲನದ ಬೆಳಕು ದೊರಕುತ್ತದೆ. ಆದರೆ ಅನೇಕ ಅಕ್ರಮ ಲೈಟ್ಗಳು 50 ರಿಂದ 100 ವ್ಯಾಟ್ಗಳು ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯ ಹೊಂದಿದ್ದು, ಅತಿದೀಪ್ತಿಯ ಬೆಳಕನ್ನು ಹೊರಸೂಸುತ್ತವೆ. ಇಂತಹ ಬೆಳಕು ರಸ್ತೆ ಸಂಚಾರಕ್ಕೆ ಅಪಾಯಕಾರಿಯಾಗಿದೆ.
ಕಾನೂನು ಪ್ರಮಾಣಿತ ಬಿಳಿ ಅಥವಾ ಹಳದಿ ಹೆಡ್ಲೈಟ್ಗಳನ್ನು ಮಾತ್ರ ಅನುಮತಿಸುತ್ತದೆ. ಆದರೆ ಕೆಲವರು ನೀಲಿ, ಕೆಂಪು ಅಥವಾ ಬಹುಬಣ್ಣದ ಮಿನುಗುವ ದೀಪಗಳನ್ನು ಬಳಸುತ್ತಿದ್ದು, ಇವು ಖಾಸಗಿ ವಾಹನಗಳಿಗೆ ಸಂಪೂರ್ಣವಾಗಿ ನಿಷೇಧಿತವಾಗಿವೆ.
2025ರ ಸುಪ್ರೀಂಕೋರ್ಟ್ ಆದೇಶ
ಅನಧಿಕೃತ ಕೆಂಪು–ನೀಲಿ ಸ್ಟ್ರೋಬ್ ಮಿನುಗುವ ದೀಪಗಳು ಹಾಗೂ ಅಕ್ರಮ ಹೂಟರ್ ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ, ವಶಪಡಿಸಿಕೊಳ್ಳುವಿಕೆ, ಮಾರುಕಟ್ಟೆ ನಿಯಂತ್ರಣ ಕ್ರಮಗಳು ಮತ್ತು ದಂಡಗಳ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ 2025ರಲ್ಲಿ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿತ್ತು.
ವಾಹನಗಳ ಹೆಡ್ಲೈಟ್ ಗಳಿಗೆ ಗರಿಷ್ಠ ಅನುಮತಿಸಲಾದ ಪ್ರಕಾಶ ಮಟ್ಟ ಮತ್ತು ಕಿರಣದ ಕೋನಗಳನ್ನು ಸ್ಪಷ್ಟಪಡಿಸಿ, ಕಟ್ಟುನಿಟ್ಟಿನ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವಂತೆ ರಸ್ತೆ ಸಾರಿಗೆ ಸಚಿವಾಲಯ, ರಾಜ್ಯ ಸಾರಿಗೆ ಇಲಾಖೆಗಳು ಹಾಗೂ ಸಂಚಾರ ಪೊಲೀಸ್ ಅಧಿಕಾರಿಗಳಿಗೆ ನ್ಯಾಯಾಲಯ ಸೂಚನೆ ನೀಡಿತ್ತು.
ಮಿನುಗುವ ಬಿಳಿ ಎಲ್ಇಡಿ ಹೆಡ್ಲೈಟ್ ಗಳು, ಅನಧಿಕೃತ ಕೆಂಪು–ನೀಲಿ ಸ್ಟ್ರೋಬ್ ದೀಪಗಳು ಮತ್ತು ತುರ್ತು ಸೈರನ್ಗಳನ್ನು ಅನುಕರಿಸುವ ಹೂಟರ್ಗಳ ವ್ಯಾಪಕ ಬಳಕೆ ವಾಹನ ಚಾಲನೆಗೆ ಗಂಭೀರ ಅಪಾಯಗಳನ್ನುಂಟುಮಾಡುತ್ತದೆ. ಅಧಿಕೃತ ತುರ್ತು ವಾಹನಗಳಿಗೆ ಮಾತ್ರ ಮೀಸಲಾಗಿರುವ ಕೆಂಪು–ನೀಲಿ ಸ್ಟ್ರೋಬ್ ದೀಪಗಳು ಮಾರುಕಟ್ಟೆಯಲ್ಲಿ ಮುಕ್ತವಾಗಿ ಲಭ್ಯವಿರುವುದರಿಂದ, ಖಾಸಗಿ ವಾಹನಗಳಲ್ಲಿ ದುರುಪಯೋಗವಾಗುತ್ತಿದೆ.
ಇಂತಹ ಬಳಕೆ ಪಾದಚಾರಿಗಳು ಮತ್ತು ರಸ್ತೆ ಬಳಕೆದಾರರಲ್ಲಿ ಭೀತಿ ಹಾಗೂ ಗೊಂದಲವನ್ನು ಉಂಟುಮಾಡುವುದರೊಂದಿಗೆ ಅಪಘಾತಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಸೈರನ್ ತರಹದ ಹೂಟರ್ಗಳ ಅನಧಿಕೃತ ಬಳಕೆ ನಿಜವಾದ ತುರ್ತು ಸೇವೆಗಳ ಕಾರ್ಯಾಚರಣೆಗೆ ಅಡ್ಡಿಪಡಿಸುತ್ತದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿತ್ತು.
ಕಾನೂನು ಏನು ಅನುಮತಿಸುತ್ತದೆ, ಏನು ನಿಷೇಧಿಸುತ್ತದೆ?
ಅಕ್ರಮ ಲೈಟ್ ಅಳವಡಿಕೆಗೆ ಸಂಬಂಧಿಸಿದಂತೆ ವಾಹನದಲ್ಲಿ ಮಾಡುವ ಯಾವುದೇ ಮಾರ್ಪಾಡುಗಳು ಕೇಂದ್ರ ಮೋಟಾರ್ ವಾಹನ ನಿಯಮಗಳ (CMVR) ಅಡಿಯಲ್ಲಿ ಕಾನೂನುಬಾಹಿರವಾಗಿವೆ ಎಂದು ಸಾರಿಗೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವಿಶೇಷವಾಗಿ, ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್ AIS-130, ವಾಹನಗಳಲ್ಲಿ ಬಳಸುವ LED ಬೆಳಕಿನ ಮೂಲಗಳ ಅನುಮೋದನೆ ಮತ್ತು ಕಾರ್ಯಕ್ಷಮತೆಯನ್ನು ನಿಯಂತ್ರಿಸುತ್ತದೆ.
AIS-130 ಮಾನದಂಡಗಳ ಪ್ರಕಾರ, ಪ್ರಮಾಣಿತ ಬಿಳಿ LED ಹೆಡ್ಲ್ಯಾಂಪ್ ಸಾಮಾನ್ಯವಾಗಿ 4 ರಿಂದ 12 ವ್ಯಾಟ್ಗಳ ನಡುವೆ ಕಾರ್ಯನಿರ್ವಹಿಸಬೇಕು ಮತ್ತು ಸುಮಾರು 725 ಲ್ಯುಮೆನ್ಗಳ ಬೆಳಕನ್ನು ನೀಡಬೇಕು. ಈ ಬೆಳಕು ಮುಂದೆ ಬರುತ್ತಿರುವ ವಾಹನಗಳಿಗೆ ಅಡ್ಡಿಯಾಗದೇ ಚಾಲಕನಿಗೆ ಅಗತ್ಯವಾದ ಗೋಚರತೆಯನ್ನು ಒದಗಿಸುತ್ತದೆ.
ಆದರೆ ಅನೇಕ ಅಕ್ರಮ ದೀಪಗಳು 50 ರಿಂದ 100 ವ್ಯಾಟ್ಗಳು ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಲೇಸರ್ ನಂತಹ ಪರಿಣಾಮವನ್ನು ಸೃಷ್ಟಿಸುತ್ತವೆ. ಇದು ಇತರ ವಾಹನ ಚಾಲಕರ ದೃಷ್ಟಿಗೆ ತೀವ್ರ ಕಿರಿಕಿರಿ ಉಂಟುಮಾಡುತ್ತದೆ. ಖಾಸಗಿ ವಾಹನಗಳಿಗೆ ಪ್ರಮಾಣಿತ ಬಿಳಿ ಅಥವಾ ಹಳದಿ ಹೆಡ್ಲೈಟ್ಗಳನ್ನು ಮಾತ್ರ ಕಾನೂನು ಅನುಮತಿಸಿದ್ದು, ನೀಲಿ, ಕೆಂಪು ಅಥವಾ ಬಹುಬಣ್ಣದ ಮಿನುಗುವ ದೀಪಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
12 ವ್ಯಾಟ್ ಬಳಸಬೇಕಾದ ಸ್ಥಳದಲ್ಲಿ 100 ವ್ಯಾಟ್ ದೀಪಗಳನ್ನು ಬಳಸುವುದರಿಂದ ವಾಹನಗಳ ಮುಖಾಮುಖಿ ಡಿಕ್ಕಿಗೆ ಕಾರಣವಾಗುವ ಸಾಧ್ಯತೆ ಇದೆ. “ನಿಮ್ಮ ವಾಹನದ ಅತಿಪ್ರಖರ ಬೆಳಕು ಇನ್ನೊಬ್ಬರ ಜೀವಕ್ಕೆ ಹಾನಿ ಉಂಟುಮಾಡಬಹುದು. ರಾತ್ರಿ ಸಮಯದಲ್ಲಿ ಕಡಿಮೆ ಲೈಟ್ ಬಳಸಿ” ಎಂದು ರಸ್ತೆ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಸ್ಥಳದಲ್ಲೇ ಜಾರಿ ಆದೇಶ
ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸುವುದು, ಸ್ಥಳದಲ್ಲೇ ಅನಧಿಕೃತ ಫಿಟ್ಟಿಂಗ್ ಗಳನ್ನು ತೆರವುಗೊಳಿಸುವುದು ಹಾಗೂ ವಾಹನಗಳಿಂದ ಅಕ್ರಮ ಎಲ್ಇಡಿ ಬಾರ್ಗಳು ಮತ್ತು ಫ್ಲ್ಯಾಶರ್ಗಳನ್ನು ಕೆಡವುವಂತೆ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಕಾರ್ತಿಕ್ ರೆಡ್ಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ದ್ವಿಚಕ್ರ ವಾಹನಗಳು, ಕಾರುಗಳು, ಆಟೋರಿಕ್ಷಾಗಳು ಹಾಗೂ ವಾಣಿಜ್ಯ ಪಿಕ್-ಅಪ್ ವಾಹನಗಳು ಸೇರಿದಂತೆ ಎಲ್ಲಾ ವರ್ಗಗಳ ವಾಹನಗಳಿಗೆ ಈ ಕ್ರಮ ಅನ್ವಯಿಸುತ್ತದೆ. ಪುನರಾವರ್ತಿತ ಅಪರಾಧಿಗಳು ಹೆಚ್ಚಿನ ದಂಡ ಹಾಗೂ ನಿರಂತರ ಮೇಲ್ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.







