Uttarakhand SIR : ಮುಸ್ಲಿಂ ಮತದಾರರ ವಿರುದ್ಧ ‘ನಕಲಿ’ ಆಕ್ಷೇಪಣೆಗಳನ್ನು ಸೃಷ್ಟಿಸಿದ ಬಿಜೆಪಿ ಏಜೆಂಟರು
► ಅಶ್ವಿನ್ ಕುಮಾರ್ ಸಿಂಗ್ ಮತ್ತು ಬಸಂತ್ ಕುಮಾರ್ - newslaundry. com ವರದಿ

Photo Credit: newslaundry
ಉತ್ತರಾಖಂಡದ ಝಬ್ರೇರಾ ವಿಧಾನಸಭಾ ಕ್ಷೇತ್ರದಲ್ಲಿ ಕರಡು ಮತದಾರರ ಪಟ್ಟಿಗೆ ಸಲ್ಲಿಕೆಯಾಗಿದ್ದ 1,657 ಆಕ್ಷೇಪಣೆಗಳಲ್ಲಿ ತಮ್ಮ ಹೆಸರುಗಳನ್ನು ಅರ್ಜಿದಾರರೆಂದು ಉಲ್ಲೇಖಿಸಲಾಗಿತ್ತು. ಆದರೆ, ತಾವು ಯಾವುದೇ ಆಕ್ಷೇಪಣೆ ಸಲ್ಲಿಸಿಲ್ಲ ಹಾಗೂ ತಮ್ಮ ಗುರುತನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು 35 ಜನರು ಹೇಳಿದ್ದಾರೆ. ಈ ಆಕ್ಷೇಪಣೆಗಳಲ್ಲಿ ಹೆಚ್ಚಿನವು ಮುಸ್ಲಿಂ ಮತದಾರರನ್ನೇ ಗುರಿಯಾಗಿಸಿಕೊಂಡಿದ್ದವು.
ಆಗಸ್ಟ್ 18 ಮತ್ತು 19ರಂದು ಹರಿದ್ವಾರ ಜಿಲ್ಲಾಡಳಿತಕ್ಕೆ ಸಲ್ಲಿಸಿದ ಪ್ರಮಾಣಪತ್ರಗಳಲ್ಲಿ, ‘ಅಪರಿಚಿತ ವ್ಯಕ್ತಿಯೊಬ್ಬರು’ ತಮ್ಮ ಹೆಸರು, ಇಪಿಐಸಿ (EPIC) ಸಂಖ್ಯೆ ಮತ್ತು ನಕಲಿ ಸಹಿಯನ್ನು ಬಳಸಿ ಮತದಾರರ ಹೆಸರು ತೆಗೆದುಹಾಕುವಂತೆ ಕೋರುವ ‘ಫಾರ್ಮ್ 7’ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಈ 35 ಜನರು ಹೇಳಿದ್ದಾರೆ ಎಂದು ‘newslaundry’ ವರದಿ ಮಾಡಿದೆ.
ವಿಶೇಷವೆಂದರೆ, ಈ 35 ಜನರಲ್ಲಿ 31 ಜನರು ಬಿಜೆಪಿಯ ಬಿಎಲ್ಎ-2 (BLA-2) ಏಜೆಂಟರಾಗಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ವೇಳೆಯಲ್ಲಿ ಚುನಾವಣಾ ಆಯೋಗದಿಂದ ನೇಮಕಗೊಳ್ಳುವ ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಕೆಲಸ ಮಾಡಲು ಪಕ್ಷವು ನಿರ್ದಿಷ್ಟ ಮತಗಟ್ಟೆಗೆ ನೇಮಿಸುವ ತಳಮಟ್ಟದ ಪ್ರತಿನಿಧಿಯನ್ನು ಬೂತ್ ಮಟ್ಟದ ಏಜೆಂಟ್-2 (BLA-2) ಎಂದು ಕರೆಯಲಾಗುತ್ತದೆ. ಝಬ್ರೇರಾದಲ್ಲಿ ಬಿಜೆಪಿಗೆ 151 ಬಿಎಲ್ಎ-2ಗಳಿದ್ದು, ಸುಶೀಲ್ ತ್ಯಾಗಿ ಬಿಎಲ್ಎ-1 ಆಗಿ ನೇತೃತ್ವ ವಹಿಸಿದ್ದಾರೆ. ಆದರೆ, ಈ ಘಟನೆಯ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿರುವ ತ್ಯಾಗಿ, “ಇದು ಹಳೆಯ ವಿಷಯ” ಎಂದು ಹೇಳಿದ್ದಾರೆ.
ಝಬ್ರೇರಾ ಕ್ಷೇತ್ರದ ಆಕ್ಷೇಪಣೆಗಳ ಹಿಂಪಡೆಯುವಿಕೆಗಳು ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಮತ್ತೊಂದು ಮಾದರಿಯನ್ನು ಬಹಿರಂಗಪಡಿಸಿವೆ. ಉತ್ತರಾಖಂಡದಾದ್ಯಂತ ಅತಿ ಹೆಚ್ಚು ಫಾರ್ಮ್ 7 ಅರ್ಜಿ ಸಲ್ಲಿಸಿದವರ ಕುರಿತು ‘newslaundry’ ನಡೆಸಿದ ಹಿಂದಿನ ತನಿಖೆಯಲ್ಲಿ, ಪಟ್ಟಿಯಿಂದ ತೆಗೆದುಹಾಕಲು ಕೋರಿದ ಹೆಚ್ಚಿನ ಹೆಸರುಗಳು ಮುಸ್ಲಿಂ ಮತದಾರರದ್ದಾಗಿದ್ದವು ಎಂದು ತಿಳಿದುಬಂದಿತ್ತು.
ಆಗಸ್ಟ್ 13ರಂದು ಮುಕ್ತಾಯಗೊಂಡ ಹಕ್ಕು ಮತ್ತು ಆಕ್ಷೇಪಣೆಗಳ ಹಂತದಲ್ಲಿ ಈ ಅರ್ಜಿಗಳು ಸಲ್ಲಿಕೆಯಾಗಿದ್ದವು. ಸೆಪ್ಟೆಂಬರ್ 11ರವರೆಗೆ ನೋಟಿಸ್ ನೀಡಲು ಅವಕಾಶವಿದ್ದು, ಸೆಪ್ಟೆಂಬರ್ 15ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ. ಜುಲೈ 14ರಂದು ಚುನಾವಣಾ ಆಯೋಗವು 71.3 ಲಕ್ಷ ಹೆಸರುಗಳಿರುವ ಕರಡು ಪಟ್ಟಿಯನ್ನು ಪ್ರಕಟಿಸಿತ್ತು. ಇದಕ್ಕೂ ಮೊದಲು ಮತದಾರರ ಸಂಖ್ಯೆ 79.6 ಲಕ್ಷ ಇತ್ತು.
ಹಾಗಾದರೆ ಈ ಅರ್ಜಿಗಳನ್ನು ಸಲ್ಲಿಸಿದ್ದು ಯಾರು? ಈ ವಿಷಯದ ಕುರಿತು ಯಾವುದೇ ತನಿಖೆ ನಡೆಸಲು ಚುನಾವಣಾ ಅಧಿಕಾರಿಗಳು ಮುಂದಾಗಿಲ್ಲ. ಬದಲಿಗೆ, ಯಾರ ಹೆಸರಿನಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆಯೋ ಅವರೇ ತನಿಖೆಗೆ ಕೋರಬೇಕು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಝಬ್ರೇರಾ ಇಆರ್ಒ ದೇವೇಂದ್ರ ಸಿಂಗ್ ನೇಗಿ, ಆರಂಭದಲ್ಲಿ ಆಕ್ಷೇಪಣೆ ಸಲ್ಲಿಸಿದ್ದವರು ನಂತರ ಅವುಗಳನ್ನು ಹಿಂಪಡೆಯಲು ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ‘newslaundry’ಗೆ ತಿಳಿಸಿದರು. “ಅವರು ಆಕ್ಷೇಪಣೆಗಳನ್ನು ಹಿಂಪಡೆಯಲು ಕೋರಿರುವುದರಿಂದ, ಅವರು ಸಲ್ಲಿಸಿದ ಆಕ್ಷೇಪಣೆಗಳನ್ನು ರದ್ದುಗೊಳಿಸಲಾಗಿದೆ. ಯಾರ ವಿರುದ್ಧ ಆಕ್ಷೇಪಣೆ ಸಲ್ಲಿಸಲಾಗಿತ್ತೋ ಆ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವುದಿಲ್ಲ” ಎಂದು ನೇಗಿ ಹೇಳಿದ್ದಾರೆ.
ಹೆಸರು ಮತ್ತು ಇಪಿಐಸಿ (EPIC) ವಿವರಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪದ ಕುರಿತು ಚುನಾವಣಾ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆಯೇ ಎಂದು ಕೇಳಿದಾಗ, ದೂರುದಾರರ ಮೇಲೆಯೇ ಆ ಜವಾಬ್ದಾರಿಯಿದೆ ಎಂದು ನೇಗಿ ತಿಳಿಸಿದರು. “ತಮ್ಮ ಹೆಸರನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಅವರು ನಂಬಿದರೆ, ಅವರು ಎಫ್ಐಆರ್ ದಾಖಲಿಸಬೇಕು. ಪೊಲೀಸರು ಈ ವಿಷಯವನ್ನು ತನಿಖೆ ಮಾಡುತ್ತಾರೆ. ಚುನಾವಣಾ ಆಯೋಗವು ಯಾವುದೇ ತನಿಖೆಗೆ ಆದೇಶಿಸುವುದಿಲ್ಲ” ಎಂದಿದ್ದಾರೆ ಅವರು.
ಆದರೆ, ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸಾ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂತಹ ಪ್ರಕರಣಗಳು ಸಂಭವಿಸಿದಾಗ ಚುನಾವಣಾ ಅಧಿಕಾರಿಗಳೇ ಸ್ವತಃ ತನಿಖೆ ನಡೆಸಬೇಕು ಎಂದು ಅವರು ಹೇಳಿದ್ದಾರೆ. “ತನಿಖೆಯ ವೇಳೆ ಆಕ್ಷೇಪಣೆಗಳನ್ನು ವಂಚನೆಯಿಂದ ಸಲ್ಲಿಸಲಾಗಿದೆ ಎಂದು ಕಂಡುಬಂದರೆ, ಆ ಆಕ್ಷೇಪಣೆಗಳನ್ನು ಸಲ್ಲಿಸಿಲ್ಲ ಎಂದೇ ಪರಿಗಣಿಸಬೇಕು ಮತ್ತು ಮುಂದಿನ ತನಿಖೆಗಾಗಿ ಪೊಲೀಸರಿಗೆ ವಂಚನೆ ಪ್ರಕರಣದ ದೂರು ನೀಡಬೇಕು” ಎಂದು ಲಾವಾಸಾ ತಿಳಿಸಿದ್ದಾರೆ.
ಝಬ್ರೇರಾ ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರವಾಗಿದ್ದು, ಇಲ್ಲಿ ಶೇ. 32ರಷ್ಟು ಮುಸ್ಲಿಂ ಮತದಾರರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯು ಬಿಜೆಪಿಯನ್ನು 8,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು.
ಝಬ್ರೇರಾದ ಅಫಿಡವಿಟ್ ಗಳಲ್ಲಿ ಏನಿದೆ?
ಚುನಾವಣಾ ಇಲಾಖೆಯ ಫಾರ್ಮ್ 10 ದಾಖಲೆಗಳ ಪ್ರಕಾರ, ಝಬ್ರೇರಾದಲ್ಲಿ 4,099 ಫಾರ್ಮ್ 7 ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ 1,657 (ಸುಮಾರು ಶೇ. 40ರಷ್ಟು) ಅರ್ಜಿಗಳು ಕೇವಲ 35 ವ್ಯಕ್ತಿಗಳ ಹೆಸರಿನಲ್ಲಿ ಸಲ್ಲಿಕೆಯಾಗಿದ್ದು, ಅದರಲ್ಲಿ 31 ಜನರು ಬಿಜೆಪಿಯ ಬಿಎಲ್ಎ-2 (BLA-2) ಏಜೆಂಟರಾಗಿದ್ದಾರೆ. ಹೆಸರು ತೆಗೆದುಹಾಕಲು ಸಲ್ಲಿಸಿದ ಬಹುತೇಕ ಆಕ್ಷೇಪಣೆಗಳಲ್ಲಿ “ಗೈರುಹಾಜರಿ”, “ಈಗಾಗಲೇ ಸ್ಥಳಾಂತರಗೊಂಡಿದ್ದಾರೆ” ಅಥವಾ “ಗೈರುಹಾಜರಿ/ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ” ಎಂಬ ಕಾರಣಗಳನ್ನು ನೀಡಲಾಗಿತ್ತು.
ಅರ್ಜಿ ಹಿಂಪಡೆದ ಬಿಜೆಪಿ ಬಿಎಲ್ಎ-2 ಏಜೆಂಟರಲ್ಲಿ ಝಬ್ರೇರಾದ ನಾಗ್ಲಾ ಕುಬ್ದಾ ಬೂತ್ನ 56 ವರ್ಷದ ನಿವಾಸಿ ಮಂಗೇರಾಮ್ ಸಿರೋಹಿ ಕೂಡ ಒಬ್ಬರು. ಝಬ್ರೇರಾ ಇಆರ್ಒಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ, ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಲು ತಮ್ಮ ಹೆಸರು, ಇಪಿಐಸಿ ಸಂಖ್ಯೆ ಮತ್ತು ಸಹಿಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಸಿರೋಹಿ ಹೇಳಿದ್ದಾರೆ. ಅಲ್ಲದೆ, “ನಾನು ಈ ಆಕ್ಷೇಪಣೆಗಳನ್ನು ಸಲ್ಲಿಸದಿರುವುದರಿಂದ, ಇವುಗಳಿಗೆ ಸಂಬಂಧಿಸಿದ ಯಾವುದೇ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ” ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
‘newslaundry’ ಜೊತೆ ಮಾತನಾಡಿದ ಅವರು, ಬಿಎಲ್ಒ ಕರೆ ಮಾಡಿದ ನಂತರವೇ ತಮಗೆ ಈ ಆಕ್ಷೇಪಣೆಗಳ ಬಗ್ಗೆ ತಿಳಿಯಿತು ಎಂದು ಹೇಳಿದರು. “ಬಿಎಲ್ಒ ಕರೆ ಮಾಡಿ ನಾನು ಆಕ್ಷೇಪಣೆ ಸಲ್ಲಿಸಿರುವುದಾಗಿ ಹೇಳಿದರು. ಆಗ ನಮಗೆ ವಿಷಯ ತಿಳಿಯಿತು. ನಾನು ಯಾವುದೇ ಫಾರ್ಮ್ 7 ಅರ್ಜಿ ಸಲ್ಲಿಸಿಲ್ಲ ಅಥವಾ ಯಾರ ಹೆಸರಿಗೂ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ಬಿಎಲ್ಒಗೆ ತಿಳಿಸಿದೆ. ನನಗೆ ಈ ಜನರು ಯಾರೂ ಗೊತ್ತೇ ಇಲ್ಲ. ನನಗೆ ಗೊತ್ತಿಲ್ಲದ ವ್ಯಕ್ತಿಯ ವಿರುದ್ಧ ನಾನು ಏಕೆ ಆಕ್ಷೇಪಣೆ ಸಲ್ಲಿಸಲಿ? ನನಗೆ ತಿಳಿದಿದ್ದರೆ ಬಹುಶಃ ಆಕ್ಷೇಪಿಸಬಹುದಿತ್ತು. ಬಿಎಲ್ಒ ಕರೆ ಬಂದ ನಂತರ, ನಾನು ಯಾವುದೇ ಆಕ್ಷೇಪಣೆ ಸಲ್ಲಿಸಿಲ್ಲ ಎಂದು ನಿರಾಕರಿಸಿ ಅಫಿಡವಿಟ್ ಸಲ್ಲಿಸಿದೆ” ಎಂದು ಅವರು ಹೇಳಿದರು.
ತಮ್ಮ ಇಪಿಐಸಿ ಸಂಖ್ಯೆ ಮತ್ತು ಸಹಿಯನ್ನು ಯಾರು ಬಳಸಿದ್ದಾರೆಂಬುದರ ಬಗ್ಗೆ ಯಾವುದೇ ಕಲ್ಪನೆಯಿಲ್ಲ ಎಂದು ಸಿರೋಹಿ ಹೇಳಿದ್ದಾರೆ. “ಆದರೆ, ಇದನ್ನು ಮಾಡಿದವರು ನನಗೆ ಆಪ್ತರಾಗಿರಬೇಕು ಮತ್ತು ಇಂತಹ ವಿವರಗಳನ್ನು ತಿಳಿದಿರುವವರಾಗಿರಬೇಕು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಗುರುತಿನ ದುರುಪಯೋಗದ ವಿರುದ್ಧ ದೂರು ನೀಡುತ್ತೀರಾ ಎಂದು ಕೇಳಿದಾಗ, “ದೂರು ನೀಡುವುದಿಲ್ಲ. ನಾನು ಈಗಾಗಲೇ ಅಫಿಡವಿಟ್ ಸಲ್ಲಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.
ಆಕ್ಷೇಪಣೆ ಸಲ್ಲಿಸಿದ ಬಿಎಲ್ಎ-2 ಏಜೆಂಟರಲ್ಲಿ 75 ವರ್ಷದ ಸ್ಥಳೀಯ ನಿವಾಸಿ ನಕಾಲಿ ರಾಮ್ ಕೂಡ ಒಬ್ಬರಾಗಿದ್ದು, ಇವರ ಹೆಸರಿನಲ್ಲಿದ್ದ ಅರ್ಜಿಯಲ್ಲಿ 31 ಹೆಸರುಗಳಿಗೆ ಆಕ್ಷೇಪ ವ್ಯಕ್ತಪಡಿಸಲಾಗಿತ್ತು.
ನಕಾಲಿ ರಾಮ್ ಅವರು ‘newslaundry’ ಜೊತೆ ಮಾತನಾಡಿ, “ಮತದಾರರ ಪಟ್ಟಿಯಿಂದ ಯಾರ ಹೆಸರನ್ನೂ ತೆಗೆದುಹಾಕಲು ನಾನು ಯಾವುದೇ ಅರ್ಜಿ ಸಲ್ಲಿಸಿಲ್ಲ. ನಾನು ಬಿಸ್ತಿಪುರದಲ್ಲಿ ವಾಸಿಸುತ್ತಿದ್ದೇನೆ. ಆಕ್ಷೇಪಣೆಗೆ ಒಳಗಾದವರು ಬೂತ್ ಸಂಖ್ಯೆ 7ರ ವ್ಯಾಪ್ತಿಗೆ ಪಡುವ ಹರ್ಜೋಲಿ ಮತ್ತು ಅಕ್ಬರ್ಪುರ ಗ್ರಾಮಗಳಿಗೆ ಸೇರಿದವರಾಗಿದ್ದು, ನನಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಸಂತ್ರಸ್ತರು ನನ್ನ ಹಿರಿಯ ಮಗನಿಗೆ ಕರೆ ಮಾಡಿದಾಗ ಮಾತ್ರ ನನಗೆ ಈ ವಿಷಯ ತಿಳಿಯಿತು. ಆ ಸಮಯದಲ್ಲಿ ನಾನು ಅನಾರೋಗ್ಯದಿಂದ ಮಲಗಿದ್ದೆ. ನನ್ನನ್ನು ಬಿಎಲ್ಎ-2 ಆಗಿ ಮಾಡಲು ನನ್ನ ಗುರುತಿನ ಚೀಟಿಯನ್ನು ನೀಡಿದ್ದೆ, ಆದರೆ ನನ್ನ ಅರಿವಿಲ್ಲದೆ ಅದನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ನಂತರ, ಸ್ಥಳೀಯ ಪ್ರಧಾನ್ ಅವರು ತಹಸೀಲ್ನಲ್ಲಿ ಅಫಿಡವಿಟ್ ಸಿದ್ಧಪಡಿಸಿ ಕೊಟ್ಟರು. ನನ್ನ ದಾಖಲೆಗಳನ್ನು ವಂಚನೆಯಿಂದ ಬಳಸಲಾಗಿದೆ ಎಂದು ಅದರಲ್ಲಿ ತಿಳಿಸಲಾಗಿತ್ತು. ನಾನು ಅದಕ್ಕೆ ಸಹಿ ಮಾಡಿದೆ. ನಾನು ಸತ್ಯದ ಪರವಾಗಿದ್ದೇನೆ. ನನ್ನ ವಯಸ್ಸು ಮತ್ತು ಕ್ಷೀಣಿಸುತ್ತಿರುವ ಕಣ್ಣಿನ ದೃಷ್ಟಿಯಿಂದಾಗಿ, ನಾನು ಈ ಜವಾಬ್ದಾರಿಯಿಂದ ಕೆಳಗಿಳಿಯುತ್ತಿದ್ದೇನೆ” ಎಂದು ಹೇಳಿದರು.
ಮತದಾರರ ಹೆಸರುಗಳ ವಿರುದ್ಧ ಆಕ್ಷೇಪಣೆ ಸಲ್ಲಿಸಿದ್ದ ಬಿಜೆಪಿ ಬಿಎಲ್ಎ-2 ಏಜೆಂಟರು ಈಗ ಆ ಆಕ್ಷೇಪಣೆಗಳನ್ನು ನಿರಾಕರಿಸಿ ಅಥವಾ ಹಿಂಪಡೆದು ಅಫಿಡವಿಟ್ ಏಕೆ ಸಲ್ಲಿಸುತ್ತಿದ್ದಾರೆ ಎಂದು ರೂರ್ಕಿ ಬಿಜೆಪಿ ಜಿಲ್ಲಾಧ್ಯಕ್ಷೆ ಡಾ. ಮಧು ಸಿಂಗ್ ಅವರನ್ನು ‘newslaundry’ ಪ್ರಶ್ನಿಸಿತು. “ಅವರು ಬೆದರಿಕೆಗೆ ಒಳಗಾಗಿರಬಹುದು, ಅದಕ್ಕಾಗಿಯೇ ಅವರು ಅಫಿಡವಿಟ್ ಸಲ್ಲಿಸಿರಬಹುದು” ಎಂಬುದು ಅವರ ಉತ್ತರ.
ತಾವು ಮೊದಲು ಸಲ್ಲಿಸಿದ ಆಕ್ಷೇಪಣೆಗಳನ್ನೇ ಅವರು ಏಕೆ ನಿರಾಕರಿಸುತ್ತಿದ್ದಾರೆ ಎಂದು ಕೇಳಿದಾಗ, “ನನಗೆ ಆ ಬಗ್ಗೆ ಕಲ್ಪನೆಯಿಲ್ಲ. ಕೆಲವು ಜನರು ಈ ರೀತಿ ಮಾಡಿರಬಹುದು” ಎಂದಿದ್ದಾರೆ ಸಿಂಗ್.
ಇನ್ನೂ, ಈ 35 ಜನರಲ್ಲಿ ಹರ್ಜೋಲಿ ಝೋಜಾ ಬೂತ್ನ ನಿವಾಸಿ 47 ವರ್ಷದ ಹುಸೇನ್ ಅಹ್ಮದ್ ಅವರಂತಹ ಕೆಲವರೂ ಇದ್ದಾರೆ. ಅಹ್ಮದ್ ಅವರು ಫಾರ್ಮ್ 7 ಮೂಲಕ 36 ಹೆಸರುಗಳ ವಿರುದ್ಧ ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದು ದಾಖಲಾಗಿತ್ತು. ಆದರೆ, ಆಗಸ್ಟ್ 18ರಂದು ಅವರು ಅಫಿಡವಿಟ್ ಸಲ್ಲಿಸಿ, ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಲು ತಮ್ಮ ಹೆಸರು, ಇಪಿಐಸಿ ಸಂಖ್ಯೆ ಮತ್ತು ಸಹಿಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
‘newslaundry’ ಅಹ್ಮದ್ ಅವರನ್ನು ಸಂಪರ್ಕಿಸಿದಾಗ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳಿಗೆ ಏಕೆ ಆಕ್ಷೇಪ ವ್ಯಕ್ತಪಡಿಸಿದ್ದೀರಿ ಎಂದು ಕೇಳಲು ಜನರು ತಮ್ಮ ಬಳಿಗೆ ಬಂದಿದ್ದರು. ಆಗ ಅವರಿಗೆ ಫಾರ್ಮ್ 7 ಅರ್ಜಿಗಳ ಬಗ್ಗೆ ತಿಳಿಯಿತು. ಚುನಾವಣಾ ಆಯೋಗದಿಂದ ತಮಗೆ ಯಾವುದೇ ನೋಟಿಸ್ ಬಂದಿರಲಿಲ್ಲ ಎಂದು ಅವರು ಹೇಳಿದರು.
ಆಗಸ್ಟ್ 18ರಂದು ಅಹ್ಮದ್ ಅವರು ಪ್ರಮಾಣಪತ್ರ ಸಲ್ಲಿಸಿ, ತಾವು ಯಾರ ಹೆಸರಿಗೂ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನಾನು ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ನಾನು ಝಬ್ರೇರಾ ಕ್ಷೇತ್ರದಲ್ಲೇ ಜನಿಸಿದವನು ಮತ್ತು ನನ್ನ ಹೆಸರನ್ನು ಯಾರು ಬಳಸಿದ್ದಾರೆಂಬುದು ನನಗೆ ಗೊತ್ತಿಲ್ಲ. ಆದರೆ ಸೆಪ್ಟೆಂಬರ್ 3ರಂದು ವಿಚಾರಣೆಗೆ ಹಾಜರಾಗುವಂತೆ ಎಸ್ಡಿಎಂ ಕಚೇರಿಯಿಂದ ನನಗೆ ಸಂದೇಶ ಬಂದಿದೆ” ಎಂದು ಅವರು ತಿಳಿಸಿದರು.
ಕೋತ್ವಾಲ್ ಆಲಂಪುರ ಬೂತ್ನ ನಿವಾಸಿ ಅಶೋಕ್ ಪನ್ವಾರ್ 194 ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ದಾಖಲಾಗಿದೆ. ಆಗಸ್ಟ್ 18ರಂದು ಹರಿದ್ವಾರ ಜಿಲ್ಲಾ ಚುನಾವಣಾಧಿಕಾರಿಗೆ ಸಲ್ಲಿಸಿದ ಅಫಿಡವಿಟ್ನಲ್ಲಿ, ತಾವು ಯಾವುದೇ ಮತದಾರರ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿಲ್ಲ ಹಾಗೂ ತಮ್ಮ ಇಪಿಐಸಿ ಸಂಖ್ಯೆ ಮತ್ತು ನಕಲಿ ಸಹಿಯನ್ನು ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ.
ಅದೇ ಕ್ಷೇತ್ರದ ಶೀತಲಪುರ ಬೂತ್ನ ಮುಕರ್ರಮ್ ಎಂಬುವವರು 109 ಹೆಸರುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತೋರಿಸಲಾಗಿದೆ. ಅವರು ಕೂಡ ಅಫಿಡವಿಟ್ ಸಲ್ಲಿಸಿ, ತಾವು ಯಾವುದೇ ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಿಲ್ಲ ಹಾಗೂ ತಮ್ಮ ಇಪಿಐಸಿ ಸಂಖ್ಯೆ ಮತ್ತು ಸಹಿಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ದೀಪಕ್ ಕುಮಾರ್ ಹೆಸರಿನಲ್ಲಿ 121 ಹೆಸರುಗಳಿಗೆ, ಶುಭಂ ಚೌಧರಿ ಮತ್ತು ರಾಜೀವ್ ತ್ಯಾಗಿ ಹೆಸರಿನಲ್ಲಿ ತಲಾ 118 ಹೆಸರುಗಳಿಗೆ ಹಾಗೂ ಸಾಗರ್ ಕುಮಾರ್ ಹೆಸರಿನಲ್ಲಿ 108 ಹೆಸರುಗಳಿಗೆ ಆಕ್ಷೇಪಣೆ ದಾಖಲಾಗಿದೆ. ಇವರೆಲ್ಲರೂ ಅಫಿಡವಿಟ್ ಸಲ್ಲಿಸಿ, ತಾವು ಈ ಫಾರ್ಮ್ಗಳನ್ನು ಭರ್ತಿ ಮಾಡಿಲ್ಲ ಅಥವಾ ಸಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೋಮಿನ್ ಎಂಬ ವ್ಯಕ್ತಿಯ ಹೆಸರಿನಲ್ಲಿ 60 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವೆಲ್ಲವೂ ಆಗಸ್ಟ್ 11ರಂದು ಸಲ್ಲಿಕೆಯಾಗಿವೆ ಎಂದು ಮುಖ್ಯ ಚುನಾವಣಾಧಿಕಾರಿಯ ವೆಬ್ಸೈಟ್ನಲ್ಲಿ ತೋರಿಸಲಾಗಿದೆ. ಆಗಸ್ಟ್ 19ರಂದು ಮೋಮಿನ್ ಅಫಿಡವಿಟ್ ಸಲ್ಲಿಸಿ: “ನಾನು ಫಾರ್ಮ್-7 ಮೂಲಕ ಯಾವುದೇ ಮತದಾರನ ಮತದ ವಿರುದ್ಧ ಯಾವುದೇ ಆಕ್ಷೇಪಣೆಯನ್ನು ಸಲ್ಲಿಸಿಲ್ಲ. ಅಪರಿಚಿತ ವ್ಯಕ್ತಿಯೊಬ್ಬರು ನನ್ನ ಹೆಸರು, ಇಪಿಐಸಿ ಐಡಿ ಮತ್ತು ನಕಲಿ ಸಹಿಯನ್ನು ಬಳಸಿ ಫಾರ್ಮ್-7 ಮೂಲಕ ಸುಳ್ಳು ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ” ಎಂದು ತಿಳಿಸಿದ್ದಾರೆ.
ಈ ಆಕ್ಷೇಪಣೆಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ ಹಾಗೂ ಇವುಗಳ ವಿಚಾರಣೆಗೆ ನಾನು ಹಾಜರಾಗುವುದಿಲ್ಲ ಎಂದು ಮೋಮಿನ್ ತಮ್ಮ ಅಫಿಡವಿಟ್ನಲ್ಲಿ ಸೇರಿಸಿದ್ದಾರೆ. ಸಂಬಂಧಪಟ್ಟ ಮತದಾರರಿಗೆ ತೊಂದರೆಯಾಗದಂತೆ ಮತ್ತು ಅವರ ಮತದಾನದ ಹಕ್ಕಿಗೆ ಧಕ್ಕೆಯಾಗದಂತೆ ಈ ಆಕ್ಷೇಪಣೆಗಳನ್ನು ತಕ್ಷಣವೇ ರದ್ದುಗೊಳಿಸಬೇಕು ಅಥವಾ ತಿರಸ್ಕರಿಸಬೇಕು ಎಂದು ಅವರು ಕೋರಿದ್ದಾರೆ.
36ನೇ ಅರ್ಜಿದಾರನ ‘ತಪ್ಪು’ ಮತ್ತು ಅದೇ ಮಾದರಿಯ ಭಾಗವಾದ ಶಾಸಕರು
ಝಬ್ರೇರಾದಲ್ಲಿ ಅತಿ ಹೆಚ್ಚು ಆಕ್ಷೇಪಣೆ ಸಲ್ಲಿಸಿದ 36ನೇ ವ್ಯಕ್ತಿ ವಿಭಿನ್ನ ಹಾದಿ ತುಳಿದಿದ್ದಾರೆ. ಇಬ್ರಾಹಿಂಪುರ ದೇಹ್ ನ ಬೂತ್ ಸಂಖ್ಯೆ 82ರ ಬಹುತೇಕ ಹೆಸರುಗಳು ಸೇರಿದಂತೆ ಒಟ್ಟು 164 ಹೆಸರುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಅಂಕಿತ್ ಕುಮಾರ್, ತಾವು ಈ ಅರ್ಜಿಗಳನ್ನು ಸಲ್ಲಿಸಿರುವುದನ್ನು ಅಫಿಡವಿಟ್ನಲ್ಲಿ ಒಪ್ಪಿಕೊಂಡಿದ್ದಾರೆ ಹಾಗೂ “ಆಕಸ್ಮಿಕವಾಗಿ ಆದ ತಪ್ಪಿನಿಂದ” ಹೀಗೆ ಮಾಡಿದ್ದಾಗಿ ತಿಳಿಸಿದ್ದಾರೆ. ತಮ್ಮ ಪಟ್ಟಿಯಲ್ಲಿದ್ದ ಮತದಾರರು ಆ ಪ್ರದೇಶದ ಅಧಿಕೃತ ನಿವಾಸಿಗಳಾಗಿದ್ದು, ಅವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಉಳಿಯುವುದಕ್ಕೆ ತಮ್ಮದೇನೂ ಆಕ್ಷೇಪವಿಲ್ಲ ಎಂದು ಅವರು ಹೇಳಿದ್ದಾರೆ. ತಮ್ಮ ಎಲ್ಲಾ ಆಕ್ಷೇಪಣೆಗಳನ್ನು ತಕ್ಷಣದಿಂದಲೇ ರದ್ದುಗೊಳಿಸಬೇಕು, ತಾವು ಯಾವುದೇ ವಿಚಾರಣೆಗೆ ಹಾಜರಾಗುವುದಿಲ್ಲ ಹಾಗೂ ಯಾರದೇ ಒತ್ತಡ, ಬೆದರಿಕೆ ಅಥವಾ ಪ್ರಚೋದನೆ ಇಲ್ಲದೆ ಸ್ವಯಂಪ್ರೇರಿತವಾಗಿ ಈ ಅಫಿಡವಿಟ್ ಸಲ್ಲಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಈ 164 ಹೆಸರುಗಳಲ್ಲಿ 36 ವರ್ಷದ ಡಾ. ಶಹಾದತ್ ಹಾಗೂ ಅವರ ಕುಟುಂಬದ ಮೂವರು ಸದಸ್ಯರ ಹೆಸರುಗಳೂ ಸೇರಿದ್ದವು. “ನನ್ನ ಮತ್ತು ನನ್ನ ಕುಟುಂಬದ ಇತರ ಸದಸ್ಯರ ಹೆಸರುಗಳ ವಿರುದ್ಧ ಆಕ್ಷೇಪಣೆ ಸಲ್ಲಿಸಿರುವುದು ತಿಳಿದಾಗ, ನಾವು ಆಕ್ಷೇಪಣೆ ಸಲ್ಲಿಸಿದ ವ್ಯಕ್ತಿಯನ್ನು ಸಂಪರ್ಕಿಸಿದೆವು. ಅದು ತಮ್ಮಿಂದಾದ ತಪ್ಪು ಎಂದು ಅವರು ನಮಗೆ ಹೇಳಿದರು. ನಂತರ ಅವರು ಈ ತಪ್ಪಿನ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿ ಅಫಿಡವಿಟ್ ಸಲ್ಲಿಸಿದರು. ನಮಗೆ ಇದುವರೆಗೆ ಚುನಾವಣಾ ಆಯೋಗದಿಂದ ಯಾವುದೇ ನೋಟಿಸ್ ಬಂದಿಲ್ಲ” ಎಂದು ಅವರು ತಿಳಿಸಿರುವುದಾಗಿ ‘ನ್ಯೂಸ್ಲಾಂಡ್ರಿ’ ವರದಿ ಉಲ್ಲೇಖಿಸಿದೆ.
ಅಂಕಿತ್ ಕುಮಾರ್ ಹೆಸರಿಸಿದ್ದವರಲ್ಲಿ 40 ವರ್ಷದ ಮುರ್ಸದ್ ಅಲಿ ಕೂಡ ಒಬ್ಬರು. “ಆಕ್ಷೇಪಣೆ ಸಲ್ಲಿಸಿದ ವ್ಯಕ್ತಿಯೇ ಅದು ತಪ್ಪು ಎಂದು ಹೇಳಿ ಅಫಿಡವಿಟ್ ಸಲ್ಲಿಸಿದ್ದಾರೆ. ನಂತರ ನಾವು ಬಿಎಲ್ಒ (BLO) ಮತ್ತು ಎಸ್ಐಆರ್ (SIR) ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತಿರುವ ತಹಸೀಲ್ದಾರ್ ಅವರನ್ನು ಸಂಪರ್ಕಿಸಿದೆವು. ಆಕ್ಷೇಪಣೆ ಸಲ್ಲಿಸಿದ ವ್ಯಕ್ತಿಯೇ ಅದನ್ನು ಹಿಂಪಡೆದಿರುವುದರಿಂದ ಆಕ್ಷೇಪಣೆ ರದ್ದಾಗಿದೆ ಎಂದು ಅವರು ನಮಗೆ ತಿಳಿಸಿದರು. ನಮಗೆ ಇದುವರೆಗೆ ಯಾವುದೇ ನೋಟಿಸ್ ಬಂದಿಲ್ಲ” ಎಂದು ಅವರು ಹೇಳಿದರು.
ಪ್ರತಿಕ್ರಿಯೆಗಾಗಿ ಅಂಕಿತ್ ಕುಮಾರ್ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ‘newslaundry’ ವರದಿ ಹೇಳಿದೆ.
ಈ ನಡುವೆ, ಹರಿದ್ವಾರದ ಪಿರಾನ್ ಕಲಿಯಾರ್ ಕ್ಷೇತ್ರದಲ್ಲಿ ಹಾಲಿ ಶಾಸಕರೊಬ್ಬರ ಹೆಸರೇ ಪಟ್ಟಿಯಿಂದ ತೆಗೆದುಹಾಕುವ ಪಟ್ಟಿಯಲ್ಲಿ ಕಂಡುಬಂದಿದೆ. ಪಿರಾನ್ ಕಲಿಯಾರ್ನ ಕಾಂಗ್ರೆಸ್ ಶಾಸಕ ಫುರ್ಕಾನ್ ಅಹ್ಮದ್ ಅವರ ಹೆಸರನ್ನು ಮೊಹಮ್ಮದ್ ಫುರ್ಕಾನ್ ಎಂಬುವವರ ಹೆಸರಿನಲ್ಲಿ ಸಲ್ಲಿಕೆಯಾದ ಫಾರ್ಮ್ 7 ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಇದಕ್ಕೆ “ಗೈರುಹಾಜರಿ ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ” ಎಂಬ ಕಾರಣ ನೀಡಲಾಗಿತ್ತು. ಶಾಸಕರು ಅವರನ್ನು ಸಂಪರ್ಕಿಸಿದಾಗ, ತಾವು ಇಂತಹ ಯಾವುದೇ ಆಕ್ಷೇಪಣೆ ಸಲ್ಲಿಸಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.
ಫಾರ್ಮ್ 10 ಮೂಲಕ ತಮಗೆ ಈ ಆಕ್ಷೇಪಣೆಯ ಬಗ್ಗೆ ತಿಳಿಯಿತು ಎಂದು ಫುರ್ಕಾನ್ ಅಹ್ಮದ್ ಹೇಳಿದರು. “ನನಗೆ ಚುನಾವಣಾ ಆಯೋಗದಿಂದ ಯಾವುದೇ ನೋಟಿಸ್ ಬಂದಿಲ್ಲ” ಎಂದು ಅವರು ‘newslaundry’ಗೆ ತಿಳಿಸಿದ್ದಾರೆ.
ನಂತರ ಮೊಹಮ್ಮದ್ ಫುರ್ಕಾನ್ ಅಫಿಡವಿಟ್ ಒಂದನ್ನು ಸಲ್ಲಿಸಿ, “ಎಸ್ಐಆರ್ ಪ್ರಕ್ರಿಯೆಯಲ್ಲಿ ಯಾರೋ ನನ್ನ ಹೆಸರಿನಲ್ಲಿ ಆಕ್ಷೇಪಣೆ ಸಲ್ಲಿಸಿದ್ದಾರೆ, ಇದು ನನ್ನ ಗಮನಕ್ಕೆ ಬಂದಿಲ್ಲ. ಫುರ್ಕಾನ್ ಅಹ್ಮದ್ ಅಥವಾ ಯಾವುದೇ ವ್ಯಕ್ತಿ ಪಿರಾನ್ ಕಲಿಯಾರ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರಾಗುವ ಬಗ್ಗೆ ನಾನು ಯಾವುದೇ ಆಕ್ಷೇಪಣೆ ಎತ್ತಿಲ್ಲ. ಯಾರಾದರೂ ನನ್ನ ಹೆಸರು ಬಳಸಿ ಆಕ್ಷೇಪಣೆ ಸಲ್ಲಿಸಿದ್ದರೆ ಅದು ಅಮಾನ್ಯ” ಎಂದು ಸ್ಪಷ್ಟಪಡಿಸಿದ್ದಾರೆ.
ಇಂತಹ ಅಫಿಡವಿಟ್ಗಳು ಒಂದೇ ಮಾದರಿಯ ಚಟುವಟಿಕೆಯನ್ನು ಎತ್ತಿ ತೋರಿಸುತ್ತವೆ. ಕಳೆದ ವರ್ಷ ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಸಂಘಟಿತ ಕಾರ್ಯಾಚರಣೆಯ ಭಾಗವಾಗಿ ಫಾರ್ಮ್ 7 ಅರ್ಜಿಗಳನ್ನು ಬಳಸಿ 6,018 ಮತದಾರರನ್ನು ಗುರಿಯಾಗಿಸಲಾಗಿತ್ತು ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಆಳಂದದಲ್ಲಿ ಆನ್ಲೈನ್ ಫಾರ್ಮ್ಗಳ ಮೂಲಕ 6,000ಕ್ಕೂ ಹೆಚ್ಚು ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ಯತ್ನಿಸಿದ ಪ್ರಕರಣದ ವಿವರಗಳನ್ನು ಕೋರಿ ಕರ್ನಾಟಕ ಸಿಐಡಿ ಚುನಾವಣಾ ಆಯೋಗಕ್ಕೆ 18 ಪತ್ರಗಳನ್ನು ಬರೆದಿತ್ತು ಎಂದು ಅವರು ಹೇಳಿದ್ದರು.
2023ರ ಫೆಬ್ರವರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್. ಪಾಟೀಲ್ ಅವರು ಮತದಾರರಿಗೆ ತಿಳಿಯದಂತೆ ತಮ್ಮ ಕ್ಷೇತ್ರದಲ್ಲಿ ಮತದಾರರ ಹೆಸರು ತೆಗೆದುಹಾಕಲು ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದನ್ನು ‘the hindu’ ಈ ಹಿಂದೆ ವರದಿ ಮಾಡಿತ್ತು. ಬೂತ್ ಮಟ್ಟದ ಅಧಿಕಾರಿಯೊಬ್ಬರಿಗೆ ತಮ್ಮ ಸಹೋದರನ ಮತವನ್ನು ತೆಗೆದುಹಾಕಲು ಕೋರುವ ಫಾರ್ಮ್ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಅದೇ ಗ್ರಾಮದ ಮತ್ತೊಬ್ಬ ಮತದಾರರ ಹೆಸರಿನಲ್ಲಿ ಈ ಫಾರ್ಮ್ ಸಲ್ಲಿಕೆಯಾಗಿತ್ತು ಹಾಗೂ ಅವರಿಗೆ ಈ ವಿಷಯವೇ ತಿಳಿದಿರಲಿಲ್ಲ.
ದಿಲ್ಲಿಯಲ್ಲಿ 2025ರ ವಿಧಾನಸಭಾ ಚುನಾವಣೆಗೆ ಮುನ್ನ, ಹೊಸದಿಲ್ಲಿ ಕ್ಷೇತ್ರದಲ್ಲಿ ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ತೆಗೆದುಹಾಕುವ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿತ್ತು. ಜನವರಿಯಲ್ಲಿ ನಡೆದ ವಿಚಾರಣೆ ವೇಳೆ, ಆಕ್ಷೇಪಣೆ ಸಲ್ಲಿಸಿದವರ ಪಟ್ಟಿಯಲ್ಲಿದ್ದ 11 ಜನರು ತಮ್ಮ ಹೆಸರಿನಲ್ಲಿ ಅರ್ಜಿ ಸಲ್ಲಿಸಿರುವುದನ್ನು ನಿರಾಕರಿಸಿದ್ದರು. ತಮ್ಮ ಗುರುತನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಪಕ್ಷ ಆರೋಪಿಸಿತ್ತು.
ಝಬ್ರೇರಾ ಪ್ರಕರಣದ ಬಗ್ಗೆ ನಿಯಮಗಳು ಏನು ಹೇಳುತ್ತವೆ?
ಝಬ್ರೇರಾದ 35 ಅರ್ಜಿದಾರರು ಸಲ್ಲಿಸಿದ್ದ ಆಕ್ಷೇಪಣೆಗಳಲ್ಲಿ ಹೆಸರಿಸಲಾದ ಮತದಾರರಲ್ಲಿ ಎಷ್ಟು ಜನರಿಗೆ ಈ ಪ್ರಮಾಣಪತ್ರಗಳು ಸಲ್ಲಿಕೆಯಾಗುವ ಮೊದಲು ನೋಟಿಸ್ ತಲುಪಿತ್ತು ಎಂಬುದು ಸ್ಪಷ್ಟವಾಗಿಲ್ಲ.
1960ರ ಮತದಾರರ ನೋಂದಣಿ ನಿಯಮಾವಳಿಯ ಪ್ರಕಾರ, ಫಾರ್ಮ್ 7 ಆಕ್ಷೇಪಣೆ ಸಲ್ಲಿಕೆಯಾದ ನಂತರ ನಿರ್ದಿಷ್ಟ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ. ನಿಯಮ 19(1)(ಬಿ)(ii)ರ ಅಡಿಯಲ್ಲಿ, ಆಕ್ಷೇಪಣೆಯನ್ನು ತಕ್ಷಣವೇ ವಜಾಗೊಳಿಸದಿದ್ದರೆ, ಚುನಾವಣಾ ನೋಂದಣಿ ಅಧಿಕಾರಿ ಆಕ್ಷೇಪಣೆ ಸಲ್ಲಿಸಿದವರಿಗೆ ‘ಫಾರ್ಮ್ 13’ರಲ್ಲಿ ನೋಟಿಸ್ ನೀಡಬೇಕು. ಆಮೇಲೆ ಯಾರ ಹೆಸರುಗಳನ್ನು ತೆಗೆದುಹಾಕಲು ಕೋರಲಾಗಿದೆಯೋ ಆ ಮತದಾರರಿಗೆ ‘ಫಾರ್ಮ್ 14’ರಲ್ಲಿ ಪ್ರತ್ಯೇಕ ನೋಟಿಸ್ ನೀಡಿ ವಿಚಾರಣೆಯ ದಿನಾಂಕ, ಸಮಯ ಮತ್ತು ಸ್ಥಳವನ್ನು ಉಲ್ಲೇಖಿಸಬೇಕು.
ನಂತರ ನಿಯಮ 20ರ ಪ್ರಕಾರ, ಇಆರ್ಒ ಸಂಕ್ಷಿಪ್ತ ವಿಚಾರಣೆ ನಡೆಸಿ ಅಂತಿಮ ನಿರ್ಧಾರವನ್ನು ದಾಖಲಿಸಬೇಕು. ವಿಚಾರಣೆಯಲ್ಲಿ ಹಾಜರಾಗಲು ಮತ್ತು ತಮ್ಮ ವಾದ ಮಂಡಿಸಲು ಎರಡೂ ಕಡೆಯವರಿಗೆ ಹಕ್ಕಿರುತ್ತದೆ. ಇಆರ್ಒಗೆ ಇಬ್ಬರಲ್ಲಿ ಯಾರನ್ನಾದರೂ ಖುದ್ದಾಗಿ ಹಾಜರಾಗಲು ಅಥವಾ ಪ್ರಮಾಣಪೂರ್ವಕವಾಗಿ ಸಾಕ್ಷ್ಯ ನೀಡಲು ಸೂಚಿಸುವ ಅಧಿಕಾರವಿರುತ್ತದೆ.
ಚುನಾವಣಾ ಆಯೋಗದ 2023ರ ಮತದಾರರ ಪಟ್ಟಿ ಕೈಪಿಡಿಯ ಪಾಯಿಂಟ್ 11.3.6(iii)ರ ಪ್ರಕಾರ, ಮುಖ್ಯ ಚುನಾವಣಾಧಿಕಾರಿಯ ವೆಬ್ಸೈಟ್ನಲ್ಲಿ ಹಾಗೂ ಇಆರ್ಒ ಮತ್ತು ಮತಗಟ್ಟೆಯ ನೋಟಿಸ್ ಬೋರ್ಡ್ಗಳಲ್ಲಿ ಪಟ್ಟಿ ಪ್ರಕಟವಾಗಿ 7 ದಿನಗಳು ಪೂರ್ಣಗೊಂಡ ನಂತರವೇ ಇಆರ್ಒ ಆಕ್ಷೇಪಣೆಗಳನ್ನು ಪರಿಶೀಲಿಸಬಹುದು. ಮತದಾರರು ಮೃತಪಟ್ಟ ಪ್ರಕರಣಗಳನ್ನು ಹೊರತುಪಡಿಸಿ, ಉಳಿದ ಪ್ರಕರಣಗಳಲ್ಲಿ ಪಟ್ಟಿಯಿಂದ ಹೆಸರು ತೆಗೆದುಹಾಕಲು ಸೂಚಿಸಲಾದ ಮತದಾರರಿಗೆ ಖುದ್ದಾಗಿ ನೋಟಿಸ್ ತಲುಪಿಸುವುದು ಕಡ್ಡಾಯವಾಗಿದೆ.
ಝಬ್ರೇರಾದಂತಹ ಪ್ರಕರಣಗಳಲ್ಲಿ, ಅಂದರೆ ತಮ್ಮ ಗುರುತಿನ ವಿವರಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆಕ್ಷೇಪಣೆ ಸಲ್ಲಿಸಿದವರೇ ನಂತರ ಹೇಳಿಕೊಂಡರೆ ಏನು ಮಾಡಬೇಕು ಎಂಬುದರ ಕುರಿತು ನಿಯಮಗಳಲ್ಲಿ ಸ್ಪಷ್ಟತೆಯಿಲ್ಲ. ಆದರೆ, ಬೇಕೆಂದೇ ಸುಳ್ಳು ಮಾಹಿತಿ ನೀಡುವುದರ ಬಗ್ಗೆ ನಿಯಮ ಸ್ಪಷ್ಟವಾಗಿದೆ. ಫಾರ್ಮ್ 7ರ ಕೆಳಭಾಗದಲ್ಲಿರುವ ಟಿಪ್ಪಣಿಯ ಪ್ರಕಾರ, “ಸುಳ್ಳು ಎಂದು ತಿಳಿದಿದ್ದರೂ ಅಥವಾ ನಂಬಿದ್ದರೂ ಸಹ ಸುಳ್ಳು ಹೇಳಿಕೆ ಅಥವಾ ಪ್ರಮಾಣಪತ್ರ ನೀಡುವ ಯಾವುದೇ ವ್ಯಕ್ತಿಯು” 1950ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 31ರ ಅಡಿಯಲ್ಲಿ ಶಿಕ್ಷೆಗೆ ಅರ್ಹನಾಗಿರುತ್ತಾನೆ.
ಖತೀಮಾ ಇಆರ್ಒ ತುಷಾರ್ ಸೈನಿ ಮಾತನಾಡಿ, ಆಕ್ಷೇಪಣೆ ಸಲ್ಲಿಸಿದ ವ್ಯಕ್ತಿಯೇ ಸ್ವಯಂಪ್ರೇರಿತನಾಗಿ ಫಾರ್ಮ್ 7 ಆಕ್ಷೇಪಣೆಯನ್ನು ಹಿಂಪಡೆಯಲು ಅಫಿಡವಿಟ್ ಸಲ್ಲಿಸಿದಾಗ, ಆ ಆಕ್ಷೇಪಣೆಯು “ಅಸಿಂಧುವಾಗುತ್ತದೆ ಮತ್ತು ರದ್ದಾಗುತ್ತದೆ” ಎಂದು ತಿಳಿಸಿದರು. ವಿಚಾರಣೆಗೆ ಹಾಜರಾಗದ ಆಕ್ಷೇಪಣೆದಾರರ ಕುರಿತು ಪ್ರತಿಕ್ರಿಯಿಸಿದ ಅವರು, “ತಾವು ಆಕ್ಷೇಪಿಸಿದ ಹೆಸರಿನ ವಿರುದ್ಧದ ಸಾಕ್ಷ್ಯವನ್ನು ನಿರೂಪಿಸುವುದು ಆಕ್ಷೇಪಣೆ ಸಲ್ಲಿಸಿದವರ ಜವಾಬ್ದಾರಿಯಾಗಿದೆ” ಎಂದು ಹೇಳಿದರು.
ಹರಿದ್ವಾರದ ಇತರ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ವಿಚಾರಣೆಗಳನ್ನು ಗಮನಿಸಿದರೆ ಇದು ನಿಜವೆಂದು ತೋರುವುದಿಲ್ಲ, ಏಕೆಂದರೆ ಅನೇಕ ಆಕ್ಷೇಪಣೆದಾರರು ಚುನಾವಣಾ ಅಧಿಕಾರಿಗಳ ಮುಂದೆ ನಡೆಯುವ ವಿಚಾರಣೆಗಳಿಗೆ ಹಾಜರಾಗುತ್ತಿಲ್ಲ.
ಆಕ್ಷೇಪಣೆದಾರರಿಲ್ಲದ ವಿಚಾರಣೆಗಳು
ಹರಿದ್ವಾರದ ಮಂಗಳೌರ್ ವಿಧಾನಸಭಾ ಕ್ಷೇತ್ರದಲ್ಲಿ, ಶುಭಂ ಎಂಬ ವ್ಯಕ್ತಿ ತಮ್ಮ ಹೆಸರಿನ ವಿರುದ್ಧ ಸಲ್ಲಿಸಿದ್ದ ಆಕ್ಷೇಪಣೆಯ ವಿವರಗಳನ್ನು ಕೋರಿ ಮಸ್ರೂರ್ ಅವರು ಜಿಲ್ಲಾ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದರು. ಆಗಸ್ಟ್ 17ರಂದು ಬೆಳಿಗ್ಗೆ 11 ಗಂಟೆಗೆ ರೂರ್ಕಿ ತಹಸೀಲ್ ಆವರಣದಲ್ಲಿ ನಡೆಯುವ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸಮನ್ಸ್ ನೀಡಲಾಗಿತ್ತು. ಶುಭಂ ಎಂಬ ವ್ಯಕ್ತಿಯ ಹೆಸರು ಕೇಳಿರದ ಮಸ್ರೂರ್, ನೋಟಿಸ್ ನೋಡಿ ಆಶ್ಚರ್ಯಗೊಂಡರೂ ವಿಚಾರಣೆಗೆ ತೆರಳಿದರು. ಅಲ್ಲಿ ತಹಸೀಲ್ ಕಚೇರಿಯಲ್ಲಿ 200ಕ್ಕೂ ಹೆಚ್ಚು ಜನರು ನೆರೆದಿದ್ದರು. ತಮ್ಮ ಸರದಿ ಬಂದಾಗ ಆಕ್ಷೇಪಣೆ ಸಲ್ಲಿಸಿದ್ದ ಶುಭಂ ಹಾಜರಿರಲಿಲ್ಲ. ಅವರ ಇಬ್ಬರು ಸಹೋದರರಿಗೂ ಇದೇ ಅನುಭವವಾಯಿತು. ತಮ್ಮ ಬೂತ್ನ 50ಕ್ಕೂ ಹೆಚ್ಚು ಜನರಿಗೆ ಪರಿಚಯವೇ ಇಲ್ಲದ ವ್ಯಕ್ತಿಗಳಿಂದ ಇದೇ ರೀತಿಯ ಆಕ್ಷೇಪಣೆ ನೋಟಿಸ್ಗಳು ಬಂದಿವೆ ಹಾಗೂ ಮತದಾರರು ದಾಖಲೆಗಳೊಂದಿಗೆ ಬಂದಾಗ ಆಕ್ಷೇಪಣೆದಾರರು ಸ್ಥಳದಲ್ಲೇ ಇರುವುದಿಲ್ಲ ಎಂದು ಮಸ್ರೂರ್ ಹೇಳಿದ್ದಾರೆ.
ಮಂಗಳೌರ್ ಇಆರ್ಒ ಅವರು ಶುಭಂ ಮತ್ತು ಮಸ್ರೂರ್ ಇಬ್ಬರಿಗೂ ನೀಡಿದ್ದ ಫಾರ್ಮ್ 13 ಮತ್ತು ಫಾರ್ಮ್ 14 ನೋಟಿಸ್ಗಳನ್ನು ‘ನ್ಯೂಸ್ಲಾಂಡ್ರಿ’ ಪರಿಶೀಲಿಸಿದೆ. ವಿಚಾರಣೆಗೆ ಮಸ್ರೂರ್ ಮಾತ್ರ ಹಾಜರಾಗಿದ್ದರು. ಪ್ರತಿಕ್ರಿಯೆಗಾಗಿ ಶುಭಂ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.
ಹರಿದ್ವಾರದ ಬಾಜ್ಪುರ ವಿಧಾನಸಭಾ ಕ್ಷೇತ್ರದಲ್ಲೂ ಇದೇ ಮಾದರಿ ಮರುಕಳಿಸಿತು. ಮಂಗಳವಾರ ಫಾರ್ಮ್ 7 ವಿಚಾರಣೆಗೆ 270ಕ್ಕೂ ಹೆಚ್ಚು ಜನರನ್ನು ಕರೆಯಲಾಗಿತ್ತು. ಕಾಂಗ್ರೆಸ್ ನಾಯಕ ಹಾಗೂ ನಗರ ಪಂಚಾಯತ್ ಅಧ್ಯಕ್ಷ ರಿಝ್ವಾನ್ ನೀಡಿರುವ ಮಾಹಿತಿಯಂತೆ, ಸುಮಾರು 270 ಮತದಾರರು ಹಾಜರಾಗಿದ್ದರೆ, ಒಬ್ಬನೇ ಒಬ್ಬ ಆಕ್ಷೇಪಣೆದಾರನೂ ಬರಲಿಲ್ಲ. ತಮ್ಮ ಪತ್ನಿ ಹಾಗೂ ಹಲವಾರು ಕೌನ್ಸಿಲರ್ಗಳ ಹೆಸರುಗಳಿಗೆ ಆಕ್ಷೇಪಣೆ ಎತ್ತಲಾಗಿತ್ತು ಎಂದು ರಿಝ್ವಾನ್ ತಿಳಿಸಿದ್ದಾರೆ. “ನಾವು ನಮ್ಮ ದಾಖಲೆಗಳನ್ನು ಮರುಸಲ್ಲಿಸಿ ವಾದ ಮಂಡಿಸಿದ್ದೇವೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಇಆರ್ಒ ಭರವಸೆ ನೀಡಿದ್ದಾರೆ” ಎಂದು ಅವರು ಹೇಳಿದರು.
ಬಾಜ್ಪುರದ ಬಿಜೆಪಿ ಕೌನ್ಸಿಲರ್ ಶಂಶಾದ್ ಬೀ ಅವರ ಹೆಸರೂ ಆಕ್ಷೇಪಣೆ ಪಟ್ಟಿಯಲ್ಲಿದೆ. “ನನ್ನ ಪತ್ನಿಯ ಹೆಸರಿಗೆ ಯಾರು ಆಕ್ಷೇಪಣೆ ಸಲ್ಲಿಸಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಆದರೆ, ನಾವು ನಮ್ಮ ದಾಖಲೆಗಳನ್ನು ಇಆರ್ಒ ಮುಂದೆ ಸಲ್ಲಿಸಿ ವಿಷಯ ತಿಳಿಸಿದ್ದೇವೆ” ಎಂದು ಅವರ ಪತಿ ಪರ್ವೇಝ್ ಆಲಂ ‘newslaundry’ಗೆ ತಿಳಿಸಿದ್ದಾರೆ. ಸಿಇಒ ವೆಬ್ಸೈಟ್ನ ಫಾರ್ಮ್ 10 ದಾಖಲೆಗಳ ಪ್ರಕಾರ, ಲೇಖ್ರಾಜ್ ಸಿಂಗ್ ಎಂಬುವವರ ಹೆಸರಿನಲ್ಲಿ ಅವರ ವಿರುದ್ಧ ಆಕ್ಷೇಪಣೆ ಸಲ್ಲಿಕೆಯಾಗಿತ್ತು. ಪ್ರತಿಕ್ರಿಯೆಗಾಗಿ ಸಿಂಗ್ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.
ಉತ್ತರಾಖಂಡ ಬಿಜೆಪಿ ವಕ್ತಾರ ವಿನೋದ್ ಚಮೋಲಿ ಮಾತನಾಡಿ, ಆಕ್ಷೇಪಣೆಗಳು ಸಾಮಾನ್ಯ ಚುನಾವಣಾ ಪ್ರಕ್ರಿಯೆಯ ಭಾಗವಾಗಿದ್ದು, ಮತದಾರರ ಪಟ್ಟಿ ನೋಟಿಸ್ಗಳಿಗೆ ಉತ್ತರವಾಗಿ ಪ್ರಸಿದ್ಧ ಸಾರ್ವಜನಿಕ ವ್ಯಕ್ತಿಗಳಿಗೂ ದಾಖಲೆ ಸಲ್ಲಿಸಲು ಸೂಚಿಸಲಾಗಿದೆ. ತಮ್ಮ ಪಕ್ಷವು ಕೋಮು ಬಹಿಷ್ಕಾರದ ನೀತಿಯ ಮೇಲೆ ಕಾರ್ಯನಿರ್ವಹಿಸುವುದಿಲ್ಲ ಎಂದಿದ್ದಾರೆ.
ಹರಿದ್ವಾರ ಜಿಲ್ಲಾ ಚುನಾವಣಾಧಿಕಾರಿ ಮಯೂರ್ ದೀಕ್ಷಿತ್ ಅವರಿಗೆ ಮಾಡಿದ ದೂರವಾಣಿ ಕರೆಗಳಿಗೆ ಯಾವುದೇ ಉತ್ತರ ಸಿಗಲಿಲ್ಲ. ‘newslaundry’ ಅವರಿಗೆ ಹಾಗೂ ಉತ್ತರಾಖಂಡ ಸಿಇಒಗೆ ಪ್ರಶ್ನೆಗಳನ್ನು ಕಳುಹಿಸಿದೆ. ವರದಿ ಪ್ರಕಟವಾಗುವವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಸೌಜನ್ಯ: newslaundry.com






