ಮಾನವ ಕಳ್ಳಸಾಗಣೆಯಲ್ಲಿ ರಕ್ಷಿಸಲ್ಪಟ್ಟವರಿಗಾಗಿ ಸುಪ್ರೀಂ ಕೋರ್ಟ್ 'ಸಂತ್ರಸ್ತರ ರಕ್ಷಣಾ ಯೋಜನೆ' ರೂಪಿಸಿದ್ದು ಏಕೆ?

ಸುಪ್ರೀಂ ಕೋರ್ಟ್
ವಾಣಿಜ್ಯ ಮತ್ತು ಲೈಂಗಿಕ ಶೋಷಣೆಗಾಗಿ ನಡೆಯುವ ಕಳ್ಳಸಾಗಣೆಯಲ್ಲಿನ ಸಂತ್ರಸ್ತರ "ಮೂಲಭೂತ ಹಕ್ಕುಗಳಿಗೆ ಪ್ರಸ್ತುತ ಇರುವ ಕಾನೂನಿನ ಕೊರತೆಯು ಗಂಭೀರವಾಗಿ ಧಕ್ಕೆ ತರುತ್ತಿದೆ" ಎಂಬುದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಕಳೆದ ತಿಂಗಳು 'ಸಂತ್ರಸ್ತರ ರಕ್ಷಣಾ ಯೋಜನೆ'ಯನ್ನು ರೂಪಿಸುವ ಮೂಲಕ "ವಿವರವಾದ ನಿರ್ದೇಶನಗಳನ್ನು ನೀಡುವುದನ್ನು ಬಿಟ್ಟು ತನಗೆ ಬೇರೆ ಆಯ್ಕೆಯಿರಲಿಲ್ಲ" ಎಂದು ಹೇಳಿದೆ.
ವಾಣಿಜ್ಯ ಮತ್ತು ಲೈಂಗಿಕ ಶೋಷಣೆಯ ಸಂತ್ರಸ್ತರ ರಕ್ಷಣೆ ಮತ್ತು ಪುನರ್ವಸತಿ ಕುರಿತು ಸಂಸತ್ತು ಹೊಸ ಕಾನೂನನ್ನು ರೂಪಿಸುವವರೆಗೆ ಈ ಯೋಜನೆ ಜಾರಿಯಲ್ಲಿರಲಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹದೇವನ್ ಅವರನ್ನೊಳಗೊಂಡ ಪೀಠವು, "ಸಂತ್ರಸ್ತರು ಎದುರಿಸುತ್ತಿರುವ ಎಲ್ಲಾ ಕಷ್ಟ-ಕಾರ್ಪಣ್ಯಗಳಿಗೆ ಕೇವಲ ಒಂದೇ ಯೋಜನೆ ಸಂಪೂರ್ಣ ಪರಿಹಾರವಾಗಲು ಸಾಧ್ಯವಿಲ್ಲ ಎಂಬ ಅರಿವು ನಮಗಿದೆ. ಇಲ್ಲಿ ನಮ್ಮ ಪ್ರಯತ್ನವು ಸಂತ್ರಸ್ತರನ್ನು ಕೇಂದ್ರಬಿಂದುವಾಗಿಸುವ ಮತ್ತು ಅವರ ಅಗತ್ಯಗಳಿಗೆ ಆದ್ಯತೆ ನೀಡುವ ಗುರಿಯನ್ನು ಹೊಂದಿರಬೇಕು. ಸಂತ್ರಸ್ತರನ್ನು ಕೇವಲ ಅಸಹಾಯಕರಾಗಿ ನೋಡದೆ, ಅವರ ಸಬಲೀಕರಣದ ಅಗತ್ಯವಿರುವ ವ್ಯಕ್ತಿಗಳಾಗಿ ಗುರುತಿಸುವ ಪ್ರಯತ್ನ ಇದಾಗಬೇಕು" ಎಂದು ಹೇಳಿದೆ.
"ಯಾವಾಗಲೂ ಅವರಿಗೆ ಸೇರಬೇಕಾಗಿದ್ದ ಗೌರವ ಮತ್ತು ಘನತೆಯನ್ನು ಈ ನ್ಯಾಯಾಲಯವು ಅವರಿಗೆ ಒದಗಿಸಿಕೊಡುತ್ತದೆ ಎನ್ನುವ ಬದ್ಧತೆಯನ್ನು ಇದು ಸಂತ್ರಸ್ತರಿಗೆ ಮನವರಿಕೆ ಮಾಡಿಕೊಡಬೇಕು" ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ
ಈ ಕಾನೂನು ಹೋರಾಟದ ಹಿನ್ನೆಲೆಯು 2004ರಲ್ಲಿ ದಾಖಲಾದ ಅರ್ಜಿಯೊಂದನ್ನು ಆಧರಿಸಿದೆ. ಹೈದರಾಬಾದ್ ಮೂಲದ ಮಾನವ ಕಳ್ಳಸಾಗಣೆ ವಿರೋಧಿ ಸಂಸ್ಥೆಯಾದ 'ಪ್ರಜ್ವಲ' ಈ ಅರ್ಜಿಯನ್ನು ಸಲ್ಲಿಸಿತ್ತು. ವಾಣಿಜ್ಯ ಲೈಂಗಿಕ ಶೋಷಣೆಗೆ ಒಳಗಾದವರನ್ನು "ಸಂತ್ರಸ್ತರು ಅಥವಾ ಬದುಕುಳಿದವರು" ಎಂದು ಪರಿಗಣಿಸುವ ಬದಲು "ಅಪರಾಧಿಗಳು" ಎಂಬಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಅದು ವಾದಿಸಿತ್ತು. ಅಲ್ಲದೆ, ಸಮಗ್ರ 'ಸಂತ್ರಸ್ತರ ರಕ್ಷಣಾ ಯೋಜನೆ' ಇಲ್ಲದಿರುವುದರಿಂದ ರಕ್ಷಣೆ ಹಾಗೂ ಪುನರ್ವಸತಿ ಕಾರ್ಯಗಳು ನಿಷ್ಪರಿಣಾಮಕಾರಿಯಾಗುತ್ತಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಡಿಸೆಂಬರ್ 2015ರಲ್ಲಿ, ಸಂಘಟಿತ ಅಪರಾಧ ತನಿಖಾ ಸಂಸ್ಥೆ (ಒಸಿಐಎ) ಸ್ಥಾಪಿಸಲು ಮತ್ತು ಸಮಗ್ರ ಮಾನವ ಕಳ್ಳಸಾಗಣೆ ವಿರೋಧಿ ಕಾನೂನನ್ನು ರೂಪಿಸಲು ಅಂತರ-ಸಚಿವಾಲಯ ಸಮಿತಿಯನ್ನು ರಚಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂಬುದನ್ನು ಗಮನಿಸಿ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ವಿಲೇವಾರಿ ಮಾಡಿತ್ತು. 2016ರ ಸೆಪ್ಟೆಂಬರ್ ವೇಳೆಗೆ ಒಸಿಐಎ ಸ್ಥಾಪನೆಯಾಗಿ, ಅದೇ ವರ್ಷದ ಡಿಸೆಂಬರ್ ವೇಳೆಗೆ ಅದು ಕಾರ್ಯಾರಂಭ ಮಾಡಬಹುದು ಎಂದು ನ್ಯಾಯಾಲಯ ಆಶಿಸಿತ್ತು.
ಆದರೆ, ಈ ಎರಡೂ ಪ್ರಸ್ತಾಪಗಳು ಜಾರಿಗೆ ಬರಲೇ ಇಲ್ಲ. 2016, 2017, 2018 ಮತ್ತು 2021ರಲ್ಲಿ ಕಳ್ಳಸಾಗಣೆ ವಿರೋಧಿ ಮಸೂದೆಗಳ ಕರಡನ್ನು ಸಿದ್ಧಪಡಿಸಲಾಯಿತಾದರೂ, ಅವುಗಳಲ್ಲಿ ಯಾವುದೂ ಕಾನೂನಿನ ರೂಪ ಪಡೆಯಲಿಲ್ಲ. 2018ರ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತಾದರೂ, 16ನೇ ಲೋಕಸಭೆಯ ವಿಸರ್ಜನೆಯೊಂದಿಗೆ ಅದು ರದ್ದಾಯಿತು.
ಅಂತಿಮವಾಗಿ ಒಸಿಐಎ ಸ್ಥಾಪನೆಯ ಪ್ರಸ್ತಾಪವನ್ನು ಕೈಬಿಡಲಾಯಿತು. ಅದರ ಬದಲಿಗೆ ಕೇಂದ್ರ ಸರ್ಕಾರವು 2019ರಲ್ಲಿ ಎನ್ಐಎ ಕಾಯ್ದೆಗೆ ತಿದ್ದುಪಡಿ ತಂದು, ರಾಷ್ಟ್ರೀಯ ತನಿಖಾ ಸಂಸ್ಥೆಗೆ ಮಾನವ ಕಳ್ಳಸಾಗಣೆ ಅಪರಾಧಗಳ ತನಿಖೆಯ ಜವಾಬ್ದಾರಿಯನ್ನು ವಹಿಸಿತು. ಹೀಗಾಗಿ, 2015ರ ಆದೇಶದ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂದು ಆರೋಪಿಸಿ 'ಪ್ರಜ್ವಲ' ಸಂಸ್ಥೆಯು 2022ರಲ್ಲಿ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ವ್ಯಕ್ತಿಯ ಘನತೆ ಮತ್ತು ಪುನರ್ವಸತಿ ಕುರಿತು
ವ್ಯಕ್ತಿಯ ಘನತೆಯ ಬಗ್ಗೆ ಮಾತನಾಡಿದ ಪೀಠವು, ಪ್ರತಿಯೊಬ್ಬ ವ್ಯಕ್ತಿಯೂ ಕೇವಲ ತಾವು ಮನುಷ್ಯರಾಗಿದ್ದಾರೆ ಎಂಬ ಕಾರಣಕ್ಕಾಗಿಯೇ ಘನತೆಯನ್ನು ಹೊಂದಿರುತ್ತಾರೆ ಎಂದು ಹೇಳಿತು. ಮಾನವ ಕಳ್ಳಸಾಗಣೆಯು ಈ ಹಕ್ಕನ್ನು ನೇರವಾಗಿ ಉಲ್ಲಂಘಿಸುತ್ತದೆ. ಏಕೆಂದರೆ, "ಇಡೀ ಕಳ್ಳಸಾಗಣೆ ಪ್ರಕ್ರಿಯೆಯು ಅವರ ಮಾನವೀಯತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಅವರನ್ನು ಕೇವಲ ವಸ್ತುಗಳಂತೆ ಪರಿಗಣಿಸಿ ನಡೆಯುತ್ತದೆ" ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿತು.
"ಘನತೆಯಿಂದ ಬದುಕುವ ಹಕ್ಕು ಎಂಬುದು ಒಂದು ಸ್ಥಿರವಾದ ಸ್ಥಿತಿಯಲ್ಲ. ಒಬ್ಬ ವ್ಯಕ್ತಿಯು ಬದುಕುವ ಸುತ್ತಮುತ್ತಲಿನ ಸಂದರ್ಭಗಳು ಅದನ್ನು ನಿರ್ಧರಿಸುತ್ತವೆ" ಎಂದು ನ್ಯಾಯಾಲಯ ಹೇಳಿದೆ. ಒಬ್ಬ ವ್ಯಕ್ತಿಯು ತನ್ನದೇ ಆದ ಇಚ್ಛೆಯ ಅನುಸಾರ ಬದುಕಬೇಕಾದರೆ, ಆತನಿಗೆ ಸ್ವತಂತ್ರ ಜೀವನೋಪಾಯ ಮತ್ತು ಆದಾಯದ ಮೂಲವಿರಬೇಕು. ಇದರ ಕೊರತೆಯೇ ಅವರನ್ನು ಕಳ್ಳಸಾಗಣೆಕೋರರ ಸುಲಭದ ತುತ್ತಾಗುವಂತೆ ಮಾಡುತ್ತದೆ. ಇಂತಹ ಆರ್ಥಿಕ ಮತ್ತು ಸಾಮಾಜಿಕ ವಂಚನೆಯು ಕೇವಲ ಅವರ ಘನತೆಯನ್ನು ಕುಗ್ಗಿಸುವುದಷ್ಟೇ ಅಲ್ಲದೆ, "ಅವರ ಘನತೆಯನ್ನು ಸಂಪೂರ್ಣವಾಗಿ ಹರಣ ಮಾಡುವಂತಹ ಪರಿಸ್ಥಿತಿಯನ್ನು ನಿರ್ಮಿಸುತ್ತದೆ" ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ವಾಣಿಜ್ಯ ಲೈಂಗಿಕ ಶೋಷಣೆಗೆ ಒಳಗಾದ ಸಂತ್ರಸ್ತರು "ಸಮಾಜದಲ್ಲಿ ತೀವ್ರ ಕಳಂಕವನ್ನು ಎದುರಿಸಬೇಕಾಗುತ್ತದೆ". ಅವರ ನೋವು ಮತ್ತು ಗುರುತನ್ನು ಸಮಾಜ ಒಪ್ಪಿಕೊಳ್ಳಬೇಕು. ಆದರೆ ಇಲ್ಲಿ ಅವರ ವ್ಯಕ್ತಿತ್ವದ ಘನತೆಯೇ ಮೂಲಭೂತವಾಗಿ ಧಕ್ಕೆಗೊಳಗಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಇನ್ನು ಪುನರ್ವಸತಿಯ ಕುರಿತು ಮಾತನಾಡಿದ ನ್ಯಾಯಾಲಯ, ಇಂತಹ ಸಂತ್ರಸ್ತರು ಪುನರ್ವಸತಿ ಪಡೆಯಲು ಸಾಂವಿಧಾನಿಕ ಹಕ್ಕನ್ನು ಹೊಂದಿದ್ದಾರೆ. ಇದು ಸಂವಿಧಾನದ 21ನೇ ವಿಧಿ (ಜೀವಿಸುವ ಹಕ್ಕು) ಮತ್ತು 23ನೇ ವಿಧಿಯಿಂದ ಲಭ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿತು. ಸಂವಿಧಾನದ 23ನೇ ವಿಧಿಯ ಪ್ರಕಾರ, "ಮಾನವ ಕಳ್ಳಸಾಗಣೆ, ಬಲವಂತದ ದುಡಿಮೆ ಮತ್ತು ಇಂತಹ ಇತರ ಯಾವುದೇ ರೀತಿಯ ಬಲವಂತದ ಶ್ರಮವನ್ನು ನಿಷೇಧಿಸಲಾಗಿದೆ. ಈ ನಿಯಮದ ಉಲ್ಲಂಘನೆಯು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ."
ಸುಪ್ರೀಂ ಕೋರ್ಟ್ ತನ್ನ ಈ ತೀರ್ಪಿಗೆ 1984ರ ಐತಿಹಾಸಿಕ 'ಬಂಧುವಾ ಮುಕ್ತಿ ಮೋರ್ಚಾ' ಮತ್ತು 'ನೀರಜಾ ಚೌಧರಿ' ಪ್ರಕರಣಗಳ ತೀರ್ಪುಗಳನ್ನು ಆಧಾರವಾಗಿಟ್ಟುಕೊಂಡಿದೆ. ಆ ತೀರ್ಪುಗಳಲ್ಲಿ, ಜೀತದಾಳುಗಳನ್ನು ಕೇವಲ ಗುರುತಿಸಿ ಮುಕ್ತಗೊಳಿಸಿದರೆ ಸಾಲದು, ಅವರಿಗೆ ಪುನರ್ವಸತಿ ಕಲ್ಪಿಸುವುದು ಅಷ್ಟೇ ಮುಖ್ಯ ಎಂದು ಹೇಳಲಾಗಿತ್ತು. ಇದನ್ನು ಉಲ್ಲೇಖಿಸಿದ ಪೀಠವು, "ಈ ನಿಯಮವು ಕೇವಲ ಜೀತದಾಳುಗಳಿಗೆ ಮಾತ್ರ ಅನ್ವಯಿಸುತ್ತದೆ, ವಾಣಿಜ್ಯ ಲೈಂಗಿಕ ಶೋಷಣೆಗೆ ತುತ್ತಾದವರಿಗೆ ಅನ್ವಯಿಸುವುದಿಲ್ಲ ಎಂದು ಹೇಳಲು ಕಾನೂನಿನಲ್ಲಾಗಲಿ ಅಥವಾ ತರ್ಕದಲ್ಲಾಗಲಿ ಯಾವುದೇ ಆಧಾರವಿಲ್ಲ. ಇಬ್ಬರೂ ಶೋಷಣೆಯ ವ್ಯವಸ್ಥೆಗೆ ಬಲಿಯಾದವರೇ ಆಗಿದ್ದು, ಇಬ್ಬರಿಗೂ ಸಂವಿಧಾನದ 23ನೇ ವಿಧಿಯ ರಕ್ಷಣೆಯಿದೆ. ಇವರ ನಡುವೆ ತಾರತಮ್ಯ ಮಾಡುವುದು ಹಳೆಯ ತೀರ್ಪುಗಳ ಆಶಯಕ್ಕೆ ದ್ರೋಹ ಬಗೆದಂತೆ ಆಗುತ್ತದೆ" ಎಂದು ಸ್ಪಷ್ಟಪಡಿಸಿತು.
"ಕೇವಲ ಅಪರಾಧಿಗೆ ಶಿಕ್ಷೆ ವಿಧಿಸುವುದು ಮಾತ್ರ ನಮ್ಮ ಗುರಿಯಾಗಬಾರದು. ಅದರೊಂದಿಗೆ ಸಂತ್ರಸ್ತರ ಹಕ್ಕುಗಳನ್ನು ಖಾತರಿಪಡಿಸಿ, ಅವುಗಳನ್ನು ಒದಗಿಸುವ ಮೂಲಕ ಅವರ ಸಬಲೀಕರಣ ಮಾಡುವುದು ಕೂಡ ನಮ್ಮ ಮುಖ್ಯ ಉದ್ದೇಶವಾಗಿದೆ" ಎಂದು ನ್ಯಾಯಾಲಯ ಹೇಳಿದೆ.
ಸೆಕ್ಷನ್ 17: ಸಮಸ್ಯೆ ಮತ್ತು ಸಮ್ಮತಿ
ದಾಳಿಯ ಸಂದರ್ಭದಲ್ಲಿ ವೇಶ್ಯಾಗೃಹದಿಂದ ವ್ಯಕ್ತಿಯೊಬ್ಬರನ್ನು ಹೊರತಂದ ಅಥವಾ ರಕ್ಷಿಸಿದ ನಂತರ ಕೈಗೊಳ್ಳಬೇಕಾದ ಕ್ರಮಗಳನ್ನು ನಿಯಂತ್ರಿಸುವ 'ಅನೈತಿಕ ಕಳ್ಳಸಾಗಣೆ (ತಡೆ) ಕಾಯ್ದೆ' (ಐಟಿಪಿಎ), 1956ರ ಸೆಕ್ಷನ್ 17 ಅನ್ನು ನ್ಯಾಯಪೀಠವು ಕೂಲಂಕಷವಾಗಿ ಪರಿಶೀಲಿಸಿತು.
ವೇಶ್ಯಾವಾಟಿಕೆಗೆ ಬಲವಂತವಾಗಿ ಕಳ್ಳಸಾಗಣೆ ಮಾಡಲ್ಪಟ್ಟ ಮಹಿಳೆಯರು, ಮೊದಲು ಕಳ್ಳಸಾಗಣೆಗೆ ಒಳಗಾಗಿ ನಂತರ ಸ್ವಯಂಪ್ರೇರಿತರಾಗಿ ಲೈಂಗಿಕ ವೃತ್ತಿಯಲ್ಲಿ ಮುಂದುವರಿದವರು ಮತ್ತು ಮೊದಲಿನಿಂದಲೂ ಸ್ವಯಂಪ್ರೇರಿತರಾಗಿ ಈ ವೃತ್ತಿಗೆ ಬಂದವರು ಹೀಗೆ ಎಲ್ಲರನ್ನೂ ಪ್ರಸ್ತುತ ಕಾನೂನಿನ ನಿಬಂಧನೆಯು ಒಂದೇ ತಕ್ಕಡಿಯಲ್ಲಿಟ್ಟು ನೋಡುತ್ತದೆ ಎಂಬುದನ್ನು ಪೀಠವು ಗಮನಿಸಿತು. ಇಂತಹ "ಎಲ್ಲರಿಗೂ ಒಂದೇ ನಿಯಮ ಅನ್ವಯಿಸುವ ಧೋರಣೆ"ಯು "ಉಲ್ಟಾ ಪರಿಣಾಮ ಬೀರಬಹುದು" ಮತ್ತು "ಅವರ ಹಕ್ಕುಗಳು ಹಾಗೂ ಘನತೆಯನ್ನು ಉಲ್ಲಂಘಿಸಬಹುದು" ಎಂದು ಕೋರ್ಟ್ ಹೇಳಿದೆ.
ಇದರ ಬೆನ್ನಲ್ಲೇ ನ್ಯಾಯಾಲಯ ಎರಡು ಪ್ರಮುಖ ನಿರ್ದೇಶನಗಳನ್ನು ನೀಡಿತು. ಮೊದಲನೆಯದಾಗಿ, ಸ್ವಯಂಪ್ರೇರಿತ ವಯಸ್ಕ ಲೈಂಗಿಕ ಕಾರ್ಯಕರ್ತರನ್ನು ಗುರುತಿಸಲು ಮ್ಯಾಜಿಸ್ಟ್ರೇಟ್ಗಳು ಮೊದಲು ತನಿಖೆ ಅಥವಾ ವಿಚಾರಣೆ ನಡೆಸಬೇಕು. ಏಕೆಂದರೆ ಇಂತವರ ವಿಷಯದಲ್ಲಿ 'ರಕ್ಷಣೆ' ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಎರಡನೆಯದಾಗಿ, ಸಂತ್ರಸ್ತರನ್ನು ರಕ್ಷಣಾ ಗೃಹಗಳಲ್ಲಿ ಇರಿಸಬೇಕೇ ಅಥವಾ ಅವರ ಕುಟುಂಬದೊಂದಿಗೆ ಮತ್ತೆ ಸೇರಿಸಬೇಕೇ ಎಂಬ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವರ 'ಸಮ್ಮತಿ'ಯೇ "ಪ್ರಾಥಮಿಕ ಮತ್ತು ಪ್ರಮುಖ ಮಾನದಂಡ" ಆಗಿರಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿತು.
'The Indian Express' ಪತ್ರಿಕೆಯೊಂದಿಗೆ ಮಾತನಾಡಿದ ಬೆಂಗಳೂರಿನ 'ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ'ಯ ಸಾಮಾಜಿಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ದೆಬಾಂಗನಾ ಚಟರ್ಜಿ ಅವರು, ಸ್ವಯಂಪ್ರೇರಿತ ಮತ್ತು ಬಲವಂತದ ಲೈಂಗಿಕ ವೃತ್ತಿಯ ನಡುವೆ ನ್ಯಾಯಾಲಯವು ಮಾಡಿರುವ ಈ ವ್ಯತ್ಯಾಸವು ವಾಸ್ತವದಲ್ಲಿ ಅಷ್ಟಾಗಿ ಹೊಂದಿಕೆಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಲವು ಬಾರಿ ನಾವು ಅವರೊಂದಿಗೆ ಮಾತನಾಡಿದಾಗ, ಆರಂಭದಲ್ಲಿ ತಾವು ಸ್ವಇಚ್ಛೆಯಿಂದ ಈ ವೃತ್ತಿಗೆ ಬರಲಿಲ್ಲ, ಅದು ತಮ್ಮ ಆಯ್ಕೆಯಾಗಿರಲಿಲ್ಲ ಎಂದು ಅವರು ಹೇಳುತ್ತಾರೆ. ಆದರೆ, ಸುಮಾರು 5 ಅಥವಾ 10 ವರ್ಷಗಳ ಕಾಲ ವೇಶ್ಯಾಗೃಹದಲ್ಲೇ ಕಳೆದ ನಂತರ, ಅದೇ ಅವರ ಜೀವನದ ಭಾಗವಾಗಿಬಿಡುತ್ತದೆ ಎಂದು ಅವರು ವಿವರಿಸಿದ್ದಾರೆ.
ನ್ಯಾಯಾಲಯವು ಈ ವಿಷಯವನ್ನು ಅಧಿಕೃತವಾಗಿ ಗುರುತಿಸಿರುವುದೇ ಒಂದು ಅರ್ಥಪೂರ್ಣ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ. ಈ ತೀರ್ಪು ಪೊಲೀಸರ ದೌರ್ಜನ್ಯ ಅಥವಾ ದಬ್ಬಾಳಿಕೆಯಿಂದ ಈ ಮಹಿಳೆಯರನ್ನು "ರಕ್ಷಿಸುವ ಒಂದು ಸುರಕ್ಷಾ ಕವಚವಾಗಿ" ಕೆಲಸ ಮಾಡಬಹುದು. "ಲೈಂಗಿಕ ವೃತ್ತಿಗಂಟಿರುವ ಸಾಮಾಜಿಕ ಕಳಂಕವನ್ನು ಒಂದು ಮಟ್ಟಿಗೆ ದೂರ ಮಾಡಲು ಮತ್ತು ಈ ಬಗ್ಗೆ ಮುಕ್ತವಾಗಿ ಚರ್ಚಿಸಲು ಈ ಮಾನ್ಯತೆ ಸಹಕಾರಿಯಾಗಲಿದೆ" ಎಂದು ಅವರು ತಿಳಿಸಿದ್ದಾರೆ.
ಆದರೆ ಪ್ರಾಯೋಗಿಕವಾಗಿ ನೋಡುವುದಾದರೆ, ಈ ಒಪ್ಪಿಗೆ ಅಥವಾ ಸಮ್ಮತಿ ಎಂಬುದು "ಭೀಕರ ಸಾಮಾಜಿಕ ಮತ್ತು ವ್ಯವಸ್ಥಿತ ಪರಿಸ್ಥಿತಿಗಳ" ನಡುವೆ ಸಿಲುಕಿರುತ್ತದೆ. ಇಂಥ ಪರಿಸ್ಥಿತಿಯಲ್ಲಿ ಯಾವುದು ಸ್ವಯಂಪ್ರೇರಿತ ಎಂಬುದನ್ನು ಸ್ಪಷ್ಟವಾಗಿ ನಿರ್ಧರಿಸುವುದು ಕಷ್ಟವಾಗುತ್ತದೆ. "ನಿಖರವಾಗಿ 'ಸ್ವಯಂಪ್ರೇರಿತ' ಎಂದರೆ ಏನು ಎಂಬುದರ ಸ್ಪಷ್ಟ ಚಿತ್ರಣವಿಲ್ಲದಿದ್ದರೆ, ಇದನ್ನು ಅರ್ಥೈಸಿಕೊಳ್ಳುವುದು ಅಥವಾ ಪತ್ತೆ ಹಚ್ಚುವುದು ನಿಜಕ್ಕೂ ತೀರಾ ಕಷ್ಟದ ಕೆಲಸ" ಎಂದು ಅವರು ಹೇಳಿದ್ದಾರೆ.
ಸಂತ್ರಸ್ತರ ರಕ್ಷಣಾ ಯೋಜನೆ
ಪುನರ್ವಸತಿ ಪಡೆಯುವ ಸಾಂವಿಧಾನಿಕ ಹಕ್ಕನ್ನು ಮಾನ್ಯ ಮಾಡುವುದರ ಜೊತೆಗೆ, ಸುಪ್ರೀಂ ಕೋರ್ಟ್ ರಕ್ಷಣೆಯಿಂದ ಹಿಡಿದು ಸಮಾಜದ ಮುಖ್ಯವಾಹಿನಿಗೆ ಮರುಸೇರ್ಪಡೆಗೊಳಿಸುವವರೆಗಿನ ಪ್ರತಿಯೊಂದು ಹಂತವನ್ನು ಒಳಗೊಂಡ ವಿವರವಾದ 'ಸಂತ್ರಸ್ತರ ರಕ್ಷಣಾ ಯೋಜನೆ'ಯನ್ನು ರೂಪಿಸಿದೆ. ಈ ಯೋಜನೆಯ ಪ್ರಕಾರ, ಸಂತ್ರಸ್ತರನ್ನು ಅಪರಾಧಿಗಳಂತೆ ನಡೆಸಿಕೊಳ್ಳಬಾರದು. ಅವರ "ಸ್ವತಂತ್ರ ಮತ್ತು ಪೂರ್ಣ ತಿಳುವಳಿಕೆಯ ಸಮ್ಮತಿ" ಇಲ್ಲದೆ ಸಾಮಾನ್ಯವಾಗಿ ಪುನರ್ವಸತಿಯನ್ನು ಅವರ ಮೇಲೆ ಹೇರುವಂತಿಲ್ಲ.
ಮಾನವ ಕಳ್ಳಸಾಗಣೆ ವಿರೋಧಿ ಘಟಕಗಳನ್ನು ಬಲಪಡಿಸಲು, ಇವುಗಳ ನೇತೃತ್ವವನ್ನು ಡಿವೈಎಸ್ಪಿ ದರ್ಜೆಯ ಅಧಿಕಾರಿಗಳಿಗೆ ವಹಿಸಬೇಕು ಎಂದು ಪೀಠವು ಆದೇಶಿಸಿದೆ. ಕಳ್ಳಸಾಗಣೆ ಪ್ರಕರಣಗಳ ದಾಖಲಾತಿ ಹಾಗೂ ತನಿಖೆಗಾಗಿ ಈ ಘಟಕಗಳನ್ನು ಪೊಲೀಸ್ ಠಾಣೆಗಳೆಂದು ಪರಿಗಣಿಸಬೇಕು ಎಂದು ತಿಳಿಸಿದೆ. ಕಳ್ಳಸಾಗಣೆದಾರರು ಮತ್ತು ಸಂತ್ರಸ್ತರ ಡೇಟಾಬೇಸ್ ನಿರ್ವಹಿಸುವುದು, ರಕ್ಷಣಾ ಕಾರ್ಯಾಚರಣೆಗಳನ್ನು ಸಂಯೋಜಿಸುವುದು ಹಾಗೂ ಸಾಮಾಜಿಕ ಕಾರ್ಯಕರ್ತರು, ಮಕ್ಕಳ ಕಲ್ಯಾಣ ಅಧಿಕಾರಿಗಳು ಮತ್ತು ಇತರ ಇಲಾಖೆಗಳೊಂದಿಗೆ ಒಟ್ಟಾಗಿ ಕೆಲಸ ಮಾಡುವ ಜವಾಬ್ದಾರಿಯನ್ನು ಈ ಘಟಕಗಳಿಗೆ ವಹಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಸಂತ್ರಸ್ತರನ್ನು ಬಂಧಿಸಬಾರದು, ಅವರ ಮೇಲೆ ಯಾವುದೇ ರೀತಿಯ ಮೌಖಿಕ ಅಥವಾ ದೈಹಿಕ ದೌರ್ಜನ್ಯ ಎಸಗಬಾರದು. ಅವರ ಗುರುತು ಬಹಿರಂಗವಾಗುವ ರೀತಿಯಲ್ಲಿ ಅವರ ಫೋಟೊ ತೆಗೆಯುವುದು ಅಥವಾ ವಿಡಿಯೊ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ. ಮಕ್ಕಳು, ತೃತೀಯಲಿಂಗಿ ವ್ಯಕ್ತಿಗಳು, ವಿಕಲಚೇತನರು ಮತ್ತು ಮಾನಸಿಕ ಅಸ್ವಸ್ಥತೆಯುಳ್ಳವರ ಬಗ್ಗೆ ವಿಶೇಷ ಗಮನ ಹರಿಸುವಂತೆಯೂ ನ್ಯಾಯಾಲಯ ನಿರ್ದೇಶನ ನೀಡಿದೆ.
ರಕ್ಷಣೆಯ ನಂತರದ ಕ್ರಮಗಳು
ಠಾಣೆಯಲ್ಲಿ ಇರಿಸುವಂತಿಲ್ಲ: ರಕ್ಷಿಸಲ್ಪಟ್ಟ ಸಂತ್ರಸ್ತರನ್ನು ಲಾಕಪ್ಗಳಲ್ಲಿ ಇರಿಸುವಂತಿಲ್ಲ ಅಥವಾ ರಾತ್ರಿಯಿಡೀ ಪೊಲೀಸ್ ಠಾಣೆಯಲ್ಲಿ ಕೂಡಿಡುವಂತಿಲ್ಲ.
ತಕ್ಷಣದ ಸೌಲಭ್ಯ: ಅವರಿಗೆ ತಕ್ಷಣವೇ ಉಚಿತ ಕಾನೂನು ನೆರವು, ವೈದ್ಯಕೀಯ ಆರೈಕೆ ಮತ್ತು ಕೌನ್ಸೆಲಿಂಗ್ ಒದಗಿಸಬೇಕು. ಯಾವುದೇ ವಿಳಂಬವಿಲ್ಲದೆ ಸೂಕ್ತ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
ಮ್ಯಾಜಿಸ್ಟ್ರೇಟ್ಗಳ ಪಾತ್ರ: ದೀರ್ಘಕಾಲೀನ ವಶ ಅಥವಾ ಪುನರ್ವಸತಿ ಕ್ರಮಗಳಿಗೆ ಆದೇಶಿಸುವ ಮುನ್ನ, ಮ್ಯಾಜಿಸ್ಟ್ರೇಟ್ಗಳು ಸಂತ್ರಸ್ತರ ಅಹವಾಲನ್ನು ಆಲಿಸಬೇಕು. ಅಗತ್ಯವೆನಿಸಿದರೆ, ವಯಸ್ಕ ಮಹಿಳೆಯು ಸ್ವಇಚ್ಛೆಯಿಂದ ಲೈಂಗಿಕ ವೃತ್ತಿಯಲ್ಲಿ ತೊಡಗಿದ್ದಾರೆಯೇ ಎಂಬುದರ ಕುರಿತು ತನಿಖೆ ನಡೆಸಬೇಕು.
ಸಮ್ಮತಿಗೆ ಆದ್ಯತೆ: ಸುರಕ್ಷತೆ ಅಥವಾ ಬಲವಂತದ ಬಗ್ಗೆ ಗಂಭೀರ ದಾಖಲಿತ ಆತಂಕಗಳಿರುವುದನ್ನು ಹೊರತುಪಡಿಸಿ, ಇಡೀ ಪ್ರಕ್ರಿಯೆಯುದ್ದಕ್ಕೂ ಸಂತ್ರಸ್ತರ ಸಮ್ಮತಿಯೇ ಪ್ರಮುಖ ಮಾನದಂಡವಾಗಿರುತ್ತದೆ.
ರಕ್ಷಣಾ ಗೃಹಗಳ ನಿರ್ವಹಣೆ
ರಕ್ಷಣಾ ಗೃಹಗಳಲ್ಲಿ ಇರಿಸಲಾಗುವ ಸಂತ್ರಸ್ತರಿಗಾಗಿ ಕೆಲಸ ಮಾಡುವ ಈ ಸಂಸ್ಥೆಗಳು ಜೈಲುಗಳಂತೆ ಇರಬಾರದು ಎಂದು ನ್ಯಾಯಾಲಯ ಹೇಳಿದೆ. ಬದುಕುಳಿದ ಪ್ರತಿಯೊಬ್ಬರಿಗೂ ಒಬ್ಬ ಪ್ರಕರಣ ನಿರ್ವಹಣಾಧಿಕಾರಿಯನ್ನು ನಿಯೋಜಿಸಬೇಕು. ಅವರ ಆರೋಗ್ಯ ರಕ್ಷಣೆ, ಕೌನ್ಸೆಲಿಂಗ್, ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯದ ಬೆಂಬಲ ಮತ್ತು ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ಒಳಗೊಂಡ ವೈಯಕ್ತಿಕ ಆರೈಕೆ ಯೋಜನೆಯನ್ನು ಸಿದ್ಧಪಡಿಸಬೇಕು.
ಸಂತ್ರಸ್ತರಿಗೆ ಬ್ಯಾಂಕ್ ಖಾತೆಗಳನ್ನು ತೆರೆಯುವುದು, ಪುನರ್ವಸತಿ ಯೋಜನೆಗಳ ಕಾಲಕಾಲಕ್ಕೆ ಪರಿಶೀಲನೆ, ಕಾನೂನು ಸಹಾಯ ಮತ್ತು ರಕ್ಷಣಾ ಗೃಹಗಳ ಒಳಗಿನ ದೌರ್ಜನ್ಯಗಳ ಬಗ್ಗೆ ದೂರು ನೀಡಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವುದನ್ನು ಈ ಯೋಜನೆ ಕಡ್ಡಾಯಗೊಳಿಸಿದೆ.
ಸ್ವಯಂಪ್ರೇರಿತವಾಗಿ ವೇಶ್ಯಾವಾಟಿಕೆಯಲ್ಲಿ ತೊಡಗಿರುವ ವಯಸ್ಕ ಮಹಿಳೆಯರು ಬಯಸಿದಲ್ಲಿ ಪುನರ್ವಸತಿ ಸೌಲಭ್ಯವನ್ನು ಪಡೆಯಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪುನರ್ವಸತಿ ಕಾರ್ಯಕ್ರಮಗಳು ಹೆಚ್ಚಾಗಿ ವಿಫಲವಾಗಲು ಕಾರಣವೇನೆಂದರೆ, ಸಂತ್ರಸ್ತರು ನಿಜವಾಗಿ ಏನನ್ನು ಬಯಸುತ್ತಾರೆ ಎಂಬುದರ ಆಧಾರದ ಮೇಲೆ ರೂಪಿಸುವ ಬದಲು, ಸಂಸ್ಥೆಗಳ ಹಳೆಯ ಆಲೋಚನೆಗಳ ಆಧಾರದ ಮೇಲೆ ಸಿದ್ಧಪಡಿಸಲಾಗುತ್ತದೆ ಎಂದು ಪ್ರೊಫೆಸರ್ ದೆಬಾಂಗನಾ ಚಟರ್ಜಿ ಅಭಿಪ್ರಾಯಪಟ್ಟಿದ್ದಾರೆ.
"ಅನೇಕ ಮಹಿಳೆಯರು ತಮ್ಮ ಮಕ್ಕಳ ಶಿಕ್ಷಣ, ಬ್ಯೂಟಿಷಿಯನ್ ಕೋರ್ಸ್ ಅಥವಾ ವೃತ್ತಿಪರ ತರಬೇತಿ ಹಾಗೂ ಸಣ್ಣ ಉದ್ಯಮವನ್ನು ಪ್ರಾರಂಭಿಸಲು ಆರ್ಥಿಕ ನೆರವಿನಂತಹ ಪ್ರಾಯೋಗಿಕ ಬೆಂಬಲವನ್ನು ಬಯಸುತ್ತಾರೆ. ಇಂತಹ ಜಾಗಗಳಲ್ಲಿ ಪುನರ್ವಸತಿ ಕಾರ್ಯಕ್ರಮಗಳು ನಿಜವಾಗಿ ಕೆಲಸ ಮಾಡಬೇಕಾಗಿದೆ. ಅದರ ಬದಲಿಗೆ ಅವರನ್ನು ಯಾವುದೋ ಒಂದು ನಿರ್ದಿಷ್ಟ ರಕ್ಷಣಾ ಗೃಹದಲ್ಲಿ ಕೂಡಿಡುವುದರಿಂದ ಪ್ರಯೋಜನವಿಲ್ಲ. ಕೆಲವೊಮ್ಮೆ ಆ ರಕ್ಷಣಾ ಗೃಹಗಳೇ ಮತ್ತೊಂದು ಶೋಷಣೆಯ ತಾಣಗಳಾಗಿ ಬದಲಾಗುತ್ತವೆ" ಎಂದು ಅವರು ಹೇಳಿದ್ದಾರೆ.
ಸಂಘಟಿತ ಅಪರಾಧ ತನಿಖಾ ಸಂಸ್ಥೆ
ಸಂಘಟಿತ ಅಪರಾಧ ತನಿಖಾ ಸಂಸ್ಥೆ (ಒಸಿಐಎ) ಸ್ಥಾಪನೆಯ ಪ್ರಸ್ತಾಪವನ್ನು ಸುಪ್ರೀಂ ಕೋರ್ಟ್ ಪೀಠವು ತಿರಸ್ಕರಿಸಿದೆ. ಆದರೆ, ಪ್ರಸ್ತುತ ಜಾರಿಯಲ್ಲಿರುವ ಐಟಿಪಿಎ ಕಾಯ್ದೆಯ ಸೆಕ್ಷನ್ 7, 8 ಮತ್ತು 20ಕ್ಕೆ ತಿದ್ದುಪಡಿ ತರಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ. ಈ ಸೆಕ್ಷನ್ಗಳು ಸದ್ಯದ ಪರಿಸ್ಥಿತಿಯಲ್ಲಿ ಮಾನವ ಕಳ್ಳಸಾಗಣೆಗೆ ತುತ್ತಾದ ಸಂತ್ರಸ್ತರೇ ಕಾನೂನು ಕ್ರಮ ಅಥವಾ ಶಿಕ್ಷೆಗೆ ಒಳಗಾಗುವಂತೆ ಮಾಡುತ್ತವೆ.
ರಕ್ಷಣಾ ಗೃಹಗಳಲ್ಲಿ ಸಂತ್ರಸ್ತರನ್ನು ನಿರ್ದಿಷ್ಟ ಅವಧಿಯವರೆಗೆ ಕಡ್ಡಾಯವಾಗಿ ಬಂಧನದಲ್ಲಿಡುವ ನಿಯಮದ ಕುರಿತು ಸಂಸತ್ತು ಮರುಚಿಂತನೆ ನಡೆಸಬೇಕು ಎಂದು ಪೀಠ ಹೇಳಿದೆ. ಇದೇ ವೇಳೆ, "ಲೈಂಗಿಕ ವೃತ್ತಿಯನ್ನೇ ಒಂದು ಹಕ್ಕು ಎಂದು ಮಾನ್ಯ ಮಾಡದೆಯೂ, ಲೈಂಗಿಕ ಕಾರ್ಯಕರ್ತರ ಹಕ್ಕುಗಳನ್ನು ರಕ್ಷಿಸಲು ಸಾಧ್ಯವಿದೆ" ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಸ್ವಯಂಪ್ರೇರಿತ ವಯಸ್ಕ ಲೈಂಗಿಕ ಕಾರ್ಯಕರ್ತರ ಹಕ್ಕುಗಳನ್ನು ಗುರುತಿಸುವಂತೆ ಮತ್ತು ಮಾನವ ಕಳ್ಳಸಾಗಣೆ ತಡೆಗೆ ಒಂದು ಸಮಗ್ರ ಹಾಗೂ ಪ್ರತ್ಯೇಕ ಕಾನೂನನ್ನು ರೂಪಿಸುವಂತೆ ಸಂಸತ್ತಿಗೆ ಸೂಚಿಸಿದೆ.






