Gujarat | ಸಫಾರಿ ಪಾರ್ಕ್ ನಲ್ಲಿ ಬೈಕ್ ಗಳಲ್ಲಿ ಕುಳಿತು ಸಿಂಹವನ್ನು ಓಡಿಸುವ ದೃಶ್ಯ ವೈರಲ್; 3 ಅಧಿಕಾರಿಗಳಿಗೆ ದಂಡನೆ

Photo Credit : NDTV
ವೀಡಿಯೋದಲ್ಲಿ ಕಾಣುವ ಸಿಂಹವು ಆವರಣದಿಂದ ಹೊರಗೆ ಹೋಗಿತ್ತು. ಅದನ್ನು ಸಿಬ್ಬಂದಿ ಮತ್ತೆ ಒಳಗೆ ಕರೆತರುವ ಪ್ರಯತ್ನ ಮಾಡುತ್ತಿದ್ದರು. ಪ್ರಾಣಿಗೆ ಕಿರುಕುಳ ನೀಡುವ ಯಾವುದೇ ಉದ್ದೇಶವಿರಲಿಲ್ಲ ಎಂದು ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.
ಗುಜರಾತ್ ನ ಅಮ್ರೇಲಿ ಜಿಲ್ಲೆಯ ಅಂಬಾರ್ಡಿ ಸಫಾರಿ ಪಾರ್ಕ್ ನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಮೋಟಾರ್ ಸೈಕಲ್ಗಳ ಮೂಲಕ ಸಿಂಹವೊಂದನ್ನು ಬೆನ್ನಟ್ಟುತ್ತಿರುವ ದೃಶ್ಯಗಳ ವೀಡಿಯೋ ವೈರಲ್ ಆದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿದೆ. ಇದು ಸಿಂಹಗಳ ನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮೂವರು ವ್ಯಕ್ತಿಗಳು ಪ್ರಾಣಿಯನ್ನು ಬೆನ್ನಟ್ಟಿ, ಬಯಲು ಪ್ರದೇಶದ ಕಡೆಗೆ ಓಡುವಂತೆ ಒತ್ತಾಯಿಸುತ್ತಿರುವುದು ಕಂಡುಬಂದಿದೆ.
ಈ ವೀಡಿಯೋ ವೈರಲ್ ಆದ ಬಳಿಕ ಹೊರಬಿದ್ದ ಮಾಹಿತಿಯ ಪ್ರಕಾರ, ಧಾರಿ ಗಿರ್ ಪೂರ್ವ ವಿಭಾಗದ ಅಂಬಾರ್ಡಿ ಸಫಾರಿ ಪಾರ್ಕ್ ನಲ್ಲಿ ಈ ಘಟನೆ ನಡೆದಿದೆ. ಆನ್ಲೈನ್ ನಲ್ಲಿ ವೈರಲ್ ಆಗಿರುವ ದೃಶ್ಯಗಳಲ್ಲಿ ಬೈಕ್ ಗಳ ಮೇಲಿರುವ ವ್ಯಕ್ತಿಗಳು ಸಿಂಹವೊಂದನ್ನು ಬೆನ್ನಟ್ಟುತ್ತಿರುವುದು ಕಾಣಿಸುತ್ತದೆ. ಸವಾರರೊಬ್ಬರ ಬಳಿ ವಾಕಿ-ಟಾಕಿ ಇರುವುದು ಕಂಡುಬಂದಿದ್ದು, ಇದು ಅರಣ್ಯ ಇಲಾಖೆಯ ಪಾತ್ರದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ. ಅಲ್ಲದೆ, ಅರಣ್ಯ ಇಲಾಖೆಗೆ ಸೇರಿದ ಸರ್ಕಾರಿ ಬೊಲೆರೊ ವಾಹನವೊಂದು ಕೂಡ ಆ ಪ್ರದೇಶದಲ್ಲಿ ಹಾದುಹೋಗಿರುವುದು ವರದಿಯಾಗಿದೆ.
ವೀಡಿಯೋದಲ್ಲಿ ಮೂವರು ವ್ಯಕ್ತಿಗಳು ಮೂರು ಪ್ರತ್ಯೇಕ ಬೈಕ್ ಗಳ ಮೂಲಕ ಸಿಂಹವನ್ನು ಹಿಂಬಾಲಿಸುತ್ತಿರುವುದು ಕಾಣಿಸುತ್ತದೆ. ಮೂಲಗಳ ಪ್ರಕಾರ, ದೀಪಾವಳಿ ರಜಾದಿನಗಳಲ್ಲಿ ಭೇಟಿ ನೀಡಿದ VIP ಅತಿಥಿಗಳಿಗೆ ಸಿಂಹವನ್ನು ಹತ್ತಿರದಿಂದ ತೋರಿಸುವ ವ್ಯವಸ್ಥೆ ಮಾಡಲು ಅರಣ್ಯ ಇಲಾಖೆಯ ಸಿಬ್ಬಂದಿ ಪ್ರಯತ್ನಿಸುತ್ತಿದ್ದರು. ವಿವಿಧ ದಿಕ್ಕುಗಳಿಂದ ಸಿಂಹವನ್ನು ಬೆನ್ನಟ್ಟಿದಾಗ, ಹಠಾತ್ತನೆ ತಿರುಗಿದ ಸಿಂಹವು ತನ್ನನ್ನು ಬೆನ್ನಟ್ಟುತ್ತಿದ್ದವರ ಹಿಂದೆಯೇ ಓಡಿಬಂದಿರುವುದು ಕಂಡುಬಂದಿದೆ.
ವೀಡಿಯೋ ವೈರಲ್ ಆದ ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿ, ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಮೂವರು ಅರಣ್ಯ ಸಿಬ್ಬಂದಿಯನ್ನು ಸೇವೆಯಿಂದ ತೆಗೆದುಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ನಂತರ ನೋಟಿಸ್ ಜಾರಿ ಮಾಡಲಾಗಿದ್ದು, ಹೊರಗುತ್ತಿಗೆ ಆಧಾರದ ಮೇಲಿದ್ದ ಮೂವರು ಸಿಬ್ಬಂದಿಯನ್ನು ಸೇವೆಯಿಂದ ತೆಗೆದುಹಾಕಿರುವುದಾಗಿ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಸಫಾರಿ ಪಾರ್ಕ್ ನಲ್ಲಿರುವ ಸಿಂಹಗಳಿಗೆ ಪ್ರತಿದಿನ ‘ಕ್ರಾಲ’ ಎಂದು ಕರೆಯಲಾಗುವ ಬೇಲಿ ಹಾಕಿದ ನಿರ್ದಿಷ್ಟ ಆವರಣದಲ್ಲಿ ಆಹಾರ ನೀಡಲಾಗುತ್ತದೆ. ವೀಡಿಯೋದಲ್ಲಿ ಕಾಣುವ ಸಿಂಹವು ಆ ಆವರಣದಿಂದ ಹೊರಗೆ ಹೋಗಿತ್ತು. ಅದನ್ನು ಸಿಬ್ಬಂದಿ ಮತ್ತೆ ಒಳಗೆ ಕರೆತರುವ ಪ್ರಯತ್ನ ಮಾಡುತ್ತಿದ್ದರು. ಪ್ರಾಣಿಗೆ ಕಿರುಕುಳ ನೀಡುವ ಯಾವುದೇ ಉದ್ದೇಶವಿರಲಿಲ್ಲ ಎಂದು ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.
ಹಬ್ಬದ ಸಮಯದಲ್ಲಿ ಅಂಬಾರ್ಡಿ ಸಫಾರಿ ಪಾರ್ಕ್ ನಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಿತ್ತು. ರಜಾದಿನಗಳಲ್ಲಿ ಪ್ರವಾಸಿಗರ ನಿರ್ವಹಣೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಅರಣ್ಯ ಸಿಬ್ಬಂದಿ ಸತತ 12 ಗಂಟೆಗಳ ಕಾಲ ಕೆಲಸ ಮಾಡಿದರು ಎಂದು ಅವರು ತಿಳಿಸಿದ್ದಾರೆ.






