ಯುದ್ಧ ಮತ್ತು ತಾಪಮಾನದ ಬಿಸಿ: ಗೋಧಿ ಬೆಲೆ ದಿಢೀರ್ ಏರಿಕೆಯಾಗುತ್ತಿರುವುದೇಕೆ?
ಎಡ್ನಾ ಮೊಹಮ್ಮದ್ - Aljazeera. com ವರದಿ

ಸಾಂದರ್ಭಿಕ ಚಿತ್ರ | Photo Credit : magnific.com
ರಷ್ಯಾ-ಉಕ್ರೇನ್ ಯುದ್ಧ ಮುಂದುವರಿದಂತೆ ಕಪ್ಪು ಸಮುದ್ರದ (ಬ್ಲಾಕ್ ಸೀ) ಮೂಲದ ರಫ್ತಿಗೆ ಅಡಚಣೆಯಾಗಿದೆ. ಇದರ ಜೊತೆಗೆ ಬದಲಾಗುತ್ತಿರುವ ಹವಾಮಾನದಿಂದಾಗಿ ಸಂಭವಿಸುತ್ತಿರುವ ಭೀಕರ ಬರ ಗೋಧಿ ಉತ್ಪಾದನೆಯನ್ನು ತೀವ್ರವಾಗಿ ಕುಗ್ಗಿಸಿದೆ. ಈ ಕಾರಣಗಳಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.
ಕಳೆದ ಒಂದು ತಿಂಗಳಿನಿಂದ ರಷ್ಯಾ ಮತ್ತು ಉಕ್ರೇನ್ ಕಪ್ಪು ಸಮುದ್ರದಲ್ಲಿರುವ ಪರಸ್ಪರರ ಧಾನ್ಯ ಟರ್ಮಿನಲ್ಗಳ ಮೇಲೆ ದಾಳಿಯನ್ನು ಚುರುಕುಗೊಳಿಸಿವೆ. ರಷ್ಯಾ ವಿಶ್ವದ ಅತಿ ದೊಡ್ಡ ಗೋಧಿ ರಫ್ತುದಾರ ದೇಶವಾಗಿದ್ದರೆ, ಉಕ್ರೇನ್ ವಿಶ್ವದ ಪ್ರಮುಖ 10 ಧಾನ್ಯ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿದೆ. ಈ ಸಾಲು ಸಾಲು ದಾಳಿಗಳು ಜಾಗತಿಕ ಗೋಧಿ ಮತ್ತು ಧಾನ್ಯ ಪೂರೈಕೆಯ ಮೇಲೆ ತೀವ್ರ ಪರಿಣಾಮ ಬೀರಿವೆ.
ಧಾನ್ಯ ಮಾರುಕಟ್ಟೆಯ ಜಾಗತಿಕ ಮಾನದಂಡವಾಗಿರುವ ಚಿಕಾಗೋ ಗೋಧಿ ಫ್ಯೂಚರ್ಸ್ ಬೆಲೆಯು ಶುಕ್ರವಾರ ಮೂರು ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ನಂತರ ಸೋಮವಾರ ಅಂತರರಾಷ್ಟ್ರೀಯ ಕಾಲಮಾನ ಬೆಳಗಿನ ಜಾವ 2 ಗಂಟೆಯ ವೇಳೆಗೆ ಶೇಕಡಾ 0.54ರಷ್ಟು ಸಣ್ಣ ಕುಸಿತ ಕಂಡು ಬುಷೆಲ್ ಗೆ 7.79 ಡಾಲರ್ ಗೆ ತಲುಪಿದೆ. ಅಜೋವ್ ಸಮುದ್ರ ಮತ್ತು ಕಪ್ಪು ಸಮುದ್ರದ ಜಲಾನಯನ ಪ್ರದೇಶಗಳಲ್ಲಿ ಬಂದರುಗಳ ಮುಚ್ಚುವಿಕೆ ಹಾಗೂ ನೌಕಾಯಾನಕ್ಕೆ ಅಡಚಣೆ ಉಂಟಾಗಿ, ಜಮೀನುಗಳಲ್ಲಿ ಕೃಷಿ ಉತ್ಪನ್ನಗಳು ಕೊಳೆಯುವಂತಾಗಿದೆ. ಈ ಹಿನ್ನೆಲೆಯಲ್ಲಿ ರಷ್ಯಾದ ರೋಸ್ಟೋವ್ ಪ್ರದೇಶದ ಅಧಿಕಾರಿಗಳು ಶುಕ್ರವಾರ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಮತ್ತೊಂದೆಡೆ, ತಾಪಮಾನದ ಏರಿಕೆ ಮತ್ತು ಮಳೆಯ ಅಭಾವವು ದಕ್ಷಿಣ ಆಫ್ರಿಕಾದ ಸ್ವಾರ್ಟ್ಲ್ಯಾಂಡ್ನಲ್ಲಿ ಈ ವರ್ಷದ ಗೋಧಿ ಇಳುವರಿಯನ್ನು ಕುಗ್ಗಿಸುವ ಭೀತಿ ಒಡ್ಡಿದೆ. ಈ ಪ್ರದೇಶವು ದೇಶದ ಒಟ್ಟು ಗೋಧಿ ಉತ್ಪಾದನೆಯ ಸುಮಾರು ಶೇಕಡಾ 20ರಷ್ಟನ್ನು ಪೂರೈಸುತ್ತದೆ.
►ಧಾನ್ಯ ಬೆಲೆಗಳ ಮೇಲೆ ರಷ್ಯಾ-ಉಕ್ರೇನ್ ಯುದ್ಧ ಬೀರುತ್ತಿರುವ ಪ್ರಭಾವವೇನು?
ಕಳೆದ ಒಂದು ತಿಂಗಳಿನಿಂದ ರಷ್ಯಾ-ಉಕ್ರೇನ್ ಸಂಘರ್ಷದ ನಡುವೆ ಬಂದರುಗಳು, ನೌಕೆಗಳು ಹಾಗೂ ಧಾನ್ಯ ಸಂಗ್ರಹಣಾ ಕೇಂದ್ರಗಳ ಮೇಲೆ ನಡೆದ ದಾಳಿಗಳು ಸರಕು ಸಾಗಣೆಗೆ ತೀವ್ರ ಅಡಚಣೆ ಉಂಟುಮಾಡಿದ್ದು, ರಫ್ತು ಉತ್ತುಂಗದಲ್ಲಿದ್ದ ಸಮಯದಲ್ಲಿ ಸರಕುಗಳ ಸಾಗಣೆಯನ್ನು ಮುಂದೂಡುವಂತೆ ಅಥವಾ ರದ್ದುಗೊಳಿಸುವಂತೆ ಹಡಗು ಸಂಸ್ಥೆಗಳಿಗೆ ಒತ್ತಡ ಹೇರಿವೆ.
ರಷ್ಯಾದ ಕ್ಷಿಪಣಿ ದಾಳಿಗಳು ಉಕ್ರೇನ್ ನ ಧಾನ್ಯ ರಫ್ತಿನ ಮೇಲೆ ತೀವ್ರ ಹೊಡೆತ ನೀಡಿದ್ದರೆ, ಅತ್ತ ಅಜೋವ್ ಸಮುದ್ರದಲ್ಲಿ ಉಕ್ರೇನ್ ನಡೆಸಿದ ಡ್ರೋನ್ ದಾಳಿಗಳು ರಷ್ಯಾದ ಧಾನ್ಯ ಮತ್ತು ಗೋಧಿ ರಫ್ತನ್ನೂ ಗಣನೀಯವಾಗಿ ಕುಗ್ಗಿಸಿವೆ. ಇದೇ ವೇಳೆ ರಷ್ಯಾದ ನೊವೊರೊಸ್ಸಿಸ್ಕ್ ಮತ್ತು ತಮಾನ್ ಬಂದರುಗಳ ಮೇಲಿನ ದಾಳಿಗಳು ಕಪ್ಪು ಸಮುದ್ರದ ಬಂದರುಗಳಿಂದ ಸರಕು ಸಾಗಣೆ ವೆಚ್ಚವನ್ನು ತೀವ್ರವಾಗಿ ಹೆಚ್ಚಿಸಿವೆ.
ಉಕ್ರೇನ್ ನ ಮೂಲಸೌಕರ್ಯ ಸಚಿವಾಲಯದ ಮಾಹಿತಿಯಂತೆ, ಜುಲೈ ತಿಂಗಳಿನಲ್ಲಿ ಉಕ್ರೇನ್ ನ ಬಂದರುಗಳಲ್ಲಿನ ನೌಕೆಗಳ ಮೇಲೆ 35, ಸಮುದ್ರದಲ್ಲಿದ್ದ ನೌಕೆಗಳ ಮೇಲೆ 22 ಹಾಗೂ ಬಂದರು ಮೂಲಸೌಕರ್ಯಗಳ ಮೇಲೆ 67 ರಷ್ಯನ್ ದಾಳಿಗಳು ನಡೆದಿವೆ. 2025ರ ಇಡೀ ವರ್ಷದಲ್ಲಿ ಸಂಭವಿಸಿದ ಒಟ್ಟು ನೌಕಾ ದಾಳಿಗಳ ಸಂಖ್ಯೆ ಕೇವಲ 14 ಆಗಿತ್ತು.
ಇತ್ತೀಚಿನ ರಷ್ಯಾದ ವೈಮಾನಿಕ ದಾಳಿಗಳು ಚಿಲ್ಲರೆ ಮಾರಾಟಗಾರರ ಶೇಕಡಾ 90ರಷ್ಟು ಆಹಾರ ಸರಬರಾಜು ಜಾಲವನ್ನು ಧ್ವಂಸಗೊಳಿಸಿವೆ ಎಂದು ಕೈವ್ನ ಕೃಷಿ ಸಚಿವರು ಶುಕ್ರವಾರ ತಿಳಿಸಿದ್ದಾರೆ. ಗೋಧಿ ಸಾಗಣೆ ತಡೆಯಲ್ಪಟ್ಟಿರುವುದರಿಂದ ಬೆಲೆಗಳು ತೀವ್ರವಾಗಿ ಏರಿಕೆಯಾಗಿದ್ದು, ಜಾಗತಿಕವಾಗಿ ಆಹಾರ ಅಭದ್ರತೆಯ ಆತಂಕವನ್ನು ಹೆಚ್ಚಿಸಿವೆ.
ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ (IFPRI) ಸಂಶೋಧಕ ಜೋ ಗ್ಲೌಬರ್ ಅವರ ಪ್ರಕಾರ, ಪ್ರಸ್ತುತ ಬಿಕ್ಕಟ್ಟು ಗೋಧಿ ಉತ್ಪಾದನೆಯ ಕೊರತೆಗಿಂತಲೂ ಹೆಚ್ಚಾಗಿ, ಅದನ್ನು ಗ್ರಾಹಕರು ಮತ್ತು ಖರೀದಿದಾರರಿಗೆ ತಲುಪಿಸುವ ವೆಚ್ಚಕ್ಕೆ ಸಂಬಂಧಿಸಿದ್ದಾಗಿದೆ.
"ರಷ್ಯಾ ಮತ್ತು ಉಕ್ರೇನ್ ನಲ್ಲಿ ಯಥೇಚ್ಛವಾಗಿ ಗೋಧಿ ದಾಸ್ತಾನಿದೆ. ಕೊನೆಗೆ ಆ ಗೋಧಿ ಮಾರುಕಟ್ಟೆಗೆ ತಲುಪಲಿದೆಯಾದರೂ, ಪ್ರಸ್ತುತ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗುತ್ತಿಲ್ಲ. ಅಥವಾ ಅತ್ಯಂತ ಹೆಚ್ಚಿನ ವೆಚ್ಚದಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಹೀಗಾಗಿ ಗೋಧಿ ಬೆಲೆಯಲ್ಲಿ ಈ ಏರಿಕೆ ಪ್ರತಿಫಲಿಸುತ್ತಿದೆ. ಜಗತ್ತಿನಲ್ಲಿ ಗೋಧಿಯ ಅಭಾವವಿಲ್ಲ, ಸಮಸ್ಯೆಯಿರುವುದು ಅದರ ಕೈಗೆಟುಕುವ ಬೆಲೆಯಲ್ಲಿ" ಎಂದು ಅವರು ಅಲ್ ಜಝೀರಾಗೆ ತಿಳಿಸಿದ್ದಾರೆ.
ವಿಶ್ವದ ಅತಿ ದೊಡ್ಡ ಗೋಧಿ ಆಮದುದಾರ ದೇಶವಾಗಿರುವ ಈಜಿಪ್ಟ್, ಸಾಮಾನ್ಯವಾಗಿ ಗೋಧಿ ಆಮದಿಗೆ ವರ್ಷಕ್ಕೆ ಸುಮಾರು 3 ಶತಕೋಟಿ ಡಾಲರ್ ವೆಚ್ಚ ಮಾಡುತ್ತದೆ. 2026ರ ಮೊದಲಾರ್ಧದಲ್ಲಿ ಈಜಿಪ್ಟ್ ತನ್ನ ಒಟ್ಟು ಗೋಧಿ ಆಮದಿನ ಶೇಕಡಾ 82ಕ್ಕೂ ಹೆಚ್ಚಿನ ಪಾಲನ್ನು ರಷ್ಯಾ ಮತ್ತು ಉಕ್ರೇನ್ ನಿಂದಲೇ ಪಡೆದುಕೊಂಡಿತ್ತು.
ಆರ್ಥಿಕ ಸಂಕೀರ್ಣತೆಯ ವೀಕ್ಷಣಾಲಯದ ಪ್ರಕಾರ, ಏಷ್ಯಾದ ಎರಡನೇ ಅತಿ ದೊಡ್ಡ ಗೋಧಿ ಆಮದುದಾರ ದೇಶವಾದ ಇಂಡೋನೇಷ್ಯಾ 2023 ಮತ್ತು 2024ರ ನಡುವೆ ಉಕ್ರೇನ್ ನಿಂದ 36.1 ಕೋಟಿ ಡಾಲರ್ ಹಾಗೂ ರಷ್ಯಾದಿಂದ 10.2 ಕೋಟಿ ಡಾಲರ್ ಮೌಲ್ಯದ ಗೋಧಿಯನ್ನು ಆಮದು ಮಾಡಿಕೊಂಡಿತ್ತು. ಇಂಡೋನೇಷ್ಯಾ ಸಾಮಾನ್ಯವಾಗಿ ತನ್ನ ಅಗತ್ಯದ ಶೇಕಡಾ 15ರಿಂದ 20ರಷ್ಟು ಗೋಧಿಯನ್ನು ಈ ಎರಡೂ ದೇಶಗಳಿಂದ ಖರೀದಿಸುತ್ತದೆ.
ಈ ಕುರಿತು ಕಳೆದ ವಾರ ರಾಯಿಟರ್ಸ್ಗೆ ಪ್ರತಿಕ್ರಿಯಿಸಿದ ಇಂಡೋನೇಷ್ಯಾದ ಫ್ಲೋರ್ ಮಿಲರ್ಸ್ ಅಸೋಸಿಯೇಷನ್ ಅಧಿಕಾರಿಯೊಬ್ಬರು, "ಪ್ರಸ್ತುತ ಇರುವ ದಾಸ್ತಾನು ತಕ್ಷಣದ ಆಹಾರ ಅಗತ್ಯಗಳನ್ನು ಪೂರೈಸಬಲ್ಲದು. ಆದರೆ ನಮ್ಮಲ್ಲಿ ಹೆಚ್ಚುವರಿ ದಾಸ್ತಾನಿಲ್ಲ. ರಷ್ಯಾ ಮತ್ತು ಉಕ್ರೇನ್ ನಿಂದ ಸರಕುಗಳು ರವಾನೆಯಾಗದಿದ್ದಲ್ಲಿ ನಾವು ಬಲ್ಗೇರಿಯಾ, ಆಸ್ಟ್ರೇಲಿಯಾ, ರೊಮೇನಿಯಾ ಮತ್ತು ಅರ್ಜೆಂಟೀನಾದಂತಹ ಪರ್ಯಾಯ ದೇಶಗಳತ್ತ ಮುಖ ಮಾಡಬೇಕಾಗುತ್ತದೆ" ಎಂದು ತಿಳಿಸಿದ್ದಾರೆ.
►ಹವಾಮಾನ ವೈಪರೀತ್ಯ ಈ ಬಿಕ್ಕಟ್ಟಿಗೆ ಹೇಗೆ ಕಾರಣವಾಗಿದೆ?
ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧದ ಜೊತೆಗೆ, ಭೀಕರ ಬರಗಾಲ ಮತ್ತು ಒಣ ಹವಾಮಾನವು ಗೋಧಿ ಉತ್ಪಾದನೆಗೆ ದೊಡ್ಡ ಹೊಡೆತ ನೀಡಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ.
ವಿಶ್ವದ ಪ್ರಮುಖ ಗೋಧಿ ರಫ್ತುದಾರ ರಾಷ್ಟ್ರಗಳಲ್ಲಿ ಒಂದಾದ ಅಮೆರಿಕದ ಕೃಷಿ ಸಚಿವಾಲಯದ ಜುಲೈ 1ರ ವರದಿಯ ಪ್ರಕಾರ, "ಅಮೆರಿಕದಲ್ಲಿ ಈ ಬಾರಿ ಎಕರೆಗೆ 46.7 ಬುಷೆಲ್ ಇಳುವರಿಯಷ್ಟೇ ನಿರೀಕ್ಷಿಸಲಾಗಿದೆ. ಇದು ಕಳೆದ ತಿಂಗಳ ಅಂದಾಜಿಗಿಂತ 0.1 ಬುಷೆಲ್ ಹಾಗೂ ಕಳೆದ ವರ್ಷದ ಸರಾಸರಿ ಇಳುವರಿಯಾಗಿದ್ದ (ಎಕರೆಗೆ 54.9 ಬುಷೆಲ್) ಪ್ರಮಾಣಕ್ಕಿಂತ 8.2 ಬುಷೆಲ್ ಕಡಿಮೆಯಾಗಿದೆ."
"ಒಂದು ವೇಳೆ ಈ ಅಂದಾಜು ನಿಜವಾದರೆ, 2015ರ ನಂತರ ಅಮೆರಿಕ ದಾಖಲಿಸುವ ಅತ್ಯಂತ ಕಡಿಮೆ ಇಳುವರಿ ಇದಾಗಲಿದೆ" ಎಂದು ಸಚಿವಾಲಯ ತಿಳಿಸಿದೆ.
ಆಗಸ್ಟ್ 14ರಂದು ನವೀಕರಿಸಿದ ವರದಿಯಲ್ಲಿ, "ಈ ವರ್ಷದ ಕಡಿಮೆ ಇಳುವರಿಗೆ ಅಮೆರಿಕದಲ್ಲಿ ಗೋಧಿ ಬೆಳೆಯುವ ಪ್ರದೇಶ ಕ್ಷೀಣಿಸಿರುವುದು ಹಾಗೂ 'ಗ್ರೇಟ್ ಪ್ಲೇನ್ಸ್' ರಾಜ್ಯಗಳಲ್ಲಿ ಹಾರ್ಡ್ ರೆಡ್ ವಿಂಟರ್ ಗೋಧಿ ಉತ್ಪಾದನೆಯ ಮೇಲೆ ಉಂಟಾದ ತೀವ್ರ ಬರಗಾಲದ ಪ್ರಭಾವವೇ ಕಾರಣ. ದೇಶದ ಒಟ್ಟು ಗೋಧಿ ಪೂರೈಕೆಯು ಕಳೆದ ವರ್ಷಕ್ಕಿಂತ ಶೇಕಡಾ 13ರಷ್ಟು ಕುಸಿಯುವ ಅಂದಾಜಿದೆ. ಆರಂಭಿಕ ದಾಸ್ತಾನು ಹೆಚ್ಚಿದ್ದರಿಂದ ಈ ಕೊರತೆಯ ಬಿಸಿ ಕೊಂಚ ಕಡಿಮೆಯಾಗಿದೆ" ಎಂದು ವಿವರಿಸಲಾಗಿದೆ.
ವಿಶ್ವದ ಆರನೇ ಅತಿ ದೊಡ್ಡ ಗೋಧಿ ಉತ್ಪಾದಕ ದೇಶವಾದ ಕೆನಡಾದ ಕುರಿತು ವರದಿ ನೀಡಿರುವ ಅಮೆರಿಕದ ಕೃಷಿ ಸಚಿವಾಲಯ, 2026-2027ರ ಉತ್ಪಾದನಾ ವರ್ಷದಲ್ಲಿ ಒಟ್ಟು ಉತ್ಪಾದನೆಯು 3.46 ಕೋಟಿ ಮೆಟ್ರಿಕ್ ಟನ್ ಆಗಿರಲಿದೆ ಎಂದು ಅಂದಾಜಿಸಿದೆ. ಬಿತ್ತನೆ ಪ್ರದೇಶ ಕಡಿಮೆಯಾಗಿರುವುದು ಮತ್ತು ಇಳುವರಿ ಕುಸಿದಿರುವುದರಿಂದ ಇದು ಸಹ ಕಳೆದ ವರ್ಷಕ್ಕಿಂತ ಶೇಕಡಾ 13ರಷ್ಟು ಕಡಿಮೆಯಾಗಿದೆ.
ಕಳೆದ ಮೂರು ತಿಂಗಳುಗಳಲ್ಲಿ ಯುರೋಪಿಯನ್ ದೇಶಗಳನ್ನು ತಟ್ಟಿದ ತೀವ್ರ ಶಾಖದ ಅಲೆಯು ಆ ಭಾಗದಲ್ಲಿ ಗೋಧಿ ಉತ್ಪಾದನೆಯನ್ನು ತಗ್ಗಿಸಿದೆ. ಯುರೋಪಿನ ಧಾನ್ಯಗಳ ವಾಣಿಜ್ಯ ಮಂಡಳಿಯ ಪ್ರಕಾರ, ಅತಿಯಾದ ಬಿಸಿಲಿನ ಕಾರಣದಿಂದ 2026ರಲ್ಲಿ ಧಾನ್ಯಗಳ ಇಳುವರಿಯು ಸುಮಾರು 90 ಲಕ್ಷ ಟನ್ಗಳಷ್ಟು ಕುಸಿದು 28.6 ಕೋಟಿ ಟನ್ಗಳಿಗೆ ತಲುಪುವ ನಿರೀಕ್ಷೆಯಿದೆ.
ಜುಲೈ ವರದಿಯಲ್ಲಿ ಸಂಸ್ಥೆಯು, "ದಕ್ಷಿಣ ಫ್ರಾನ್ಸ್ ಮತ್ತು ಹಂಗೇರಿಯಲ್ಲಿ ಶಾಖದ ಅಲೆಯು ಜೋಳದ ಪರಾಗಸ್ಪರ್ಶದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ. ಯುರೋಪಿಯನ್ ಯೂನಿಯನ್ ನ ಇತರ ಭಾಗಗಳಲ್ಲಿಯೂ ಬಿಸಿಲು ಹೆಚ್ಚಾಗುವ ಮುನ್ಸೂಚನೆ ಇರುವುದರಿಂದ ಹೆಚ್ಚಿನ ಹಾನಿಯಾಗುವ ಭೀತಿಯಿದೆ" ಎಂದು ಎಚ್ಚರಿಸಿದೆ.
ಎಲ್ ನಿನೋ ಹವಾಮಾನ ವೈಪರೀತ್ಯವು ಈ ವರ್ಷ ದಕ್ಷಿಣ ಗೋಳಾರ್ಧದಲ್ಲಿ ವಾಡಿಕೆಗಿಂತ ಹೆಚ್ಚು ಶುಷ್ಕ ವಾತಾವರಣ ಸೃಷ್ಟಿಸುವ ಸಾಧ್ಯತೆಯಿದೆ. ಪರಿಣಾಮವಾಗಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾಗಳು ಭೀಕರ ಬರಗಾಲವನ್ನು ಎದುರಿಸುವ ಭೀತಿಯಲ್ಲಿವೆ.
ಈ ಬಿಕ್ಕಟ್ಟನ್ನು ಶಮನಗೊಳಿಸಲು ಏನು ಮಾಡಬಹುದು?
ರಷ್ಯಾ-ಉಕ್ರೇನ್ ಯುದ್ಧ ಮುಂದುವರಿಯುತ್ತಿರುವಂತೆಯೇ, ಜಾಗತಿಕ ಆಹಾರ ಧಾನ್ಯಗಳ ಬೆಲೆಯನ್ನು ಸ್ಥಿರಗೊಳಿಸಲು ಮತ್ತು ತಗ್ಗಿಸಲು 2022ರ ಜುಲೈನಲ್ಲಿ ಬ್ಲಾಕ್ ಸೀ ಗ್ರೇನ್ ಇನಿಶಿಯೇಟಿವ್ ಮಾಡಿಕೊಳ್ಳಲಾಗಿತ್ತು. ಇದು ಉಕ್ರೇನಿಯನ್ ಬಂದರುಗಳಿಂದ ಧಾನ್ಯ, ಆಹಾರ ಮತ್ತು ರಸಗೊಬ್ಬರಗಳ ಸುರಕ್ಷಿತ ರಫ್ತಿಗೆ ಅವಕಾಶ ಮಾಡಿಕೊಟ್ಟಿತ್ತು.
ಯುರೋಪಿಯನ್ ಯೂನಿಯನ್ ನೀಡಿದ ಮಾಹಿತಿಯಂತೆ, ಈ ಒಪ್ಪಂದ ಜಾರಿಯಲ್ಲಿದ್ದಾಗ ಧಾನ್ಯ ಮತ್ತು ಇತರ ಆಹಾರ ಪದಾರ್ಥಗಳನ್ನು ಹೊತ್ತ 1,000ಕ್ಕೂ ಹೆಚ್ಚು ಹಡಗುಗಳು ಉಕ್ರೇನ್ ನಿಂದ ಹೊರಟಿದ್ದವು. ಆದರೆ, ರಷ್ಯಾ 2023ರ ಜುಲೈನಲ್ಲಿ ಈ ಒಪ್ಪಂದದಿಂದ ಹಿಂದೆ ಸರಿಯಿತು.
ಪ್ರಸ್ತುತ ಬಿಕ್ಕಟ್ಟಿಗೆ ತಕ್ಷಣಕ್ಕೆ ಪರಿಹಾರ ಕಂಡುಕೊಳ್ಳುವುದು ಸುಲಭವಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಧಾನ್ಯಗಳ ಬೆಲೆಯನ್ನು ಇಳಿಸಲು ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳು ತಮ್ಮ ಯುದ್ಧ ತಂತ್ರದಲ್ಲಿ ಪ್ರಮುಖ ಬದಲಾವಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಇನ್ನೊಂದೆಡೆ, ಕೃಷಿ ಕ್ಷೇತ್ರದಲ್ಲಿ ಜಲಾಶಯಗಳ ಮೂಲಕ ನೀರು ನಿರ್ವಹಣೆಯನ್ನು ಉತ್ತಮಪಡಿಸುವುದು, ಬರಪೀಡಿತ ಬೆಳೆಗಳಿಗೆ ನೀರಾವರಿ ಒದಗಿಸುವುದು ಹಾಗೂ ಉತ್ಪಾದನಾ ನಷ್ಟವನ್ನು ತಗ್ಗಿಸುವಂತಹ ಕಟ್ಟುನಿಟ್ಟಿನ ನೀತಿಗಳನ್ನು ಸರ್ಕಾರಗಳು ಜಾರಿಗೆ ತರುವ ಮೂಲಕ ಹವಾಮಾನ ವೈಪರೀತ್ಯದ ಪ್ರಭಾವವನ್ನು ತಗ್ಗಿಸಬಹುದಾಗಿದೆ.
ಉಕ್ರೇನ್ ಮತ್ತು ರಷ್ಯಾದಿಂದ ಧಾನ್ಯಗಳನ್ನು ರಫ್ತು ಮಾಡಲು ಪರ್ಯಾಯ ಮಾರ್ಗಗಳಿವೆಯಾದರೂ ಅವು ವೆಚ್ಚದಾಯಕವಾಗಿವೆ. "ಮತ್ತೊಮ್ಮೆ ಕಪ್ಪು ಸಮುದ್ರ ಧಾನ್ಯ ಉಪಕ್ರಮವನ್ನು ಜಾರಿಗೆ ತರುವುದು ಜಾಗತಿಕ ಗೋಧಿ ಮಾರುಕಟ್ಟೆಯನ್ನು ಶಾಂತಗೊಳಿಸಲು ಹೆಚ್ಚಿನ ನೆರವು ನೀಡುತ್ತದೆ" ಎಂದು ಗ್ಲೌಬರ್ ಅಭಿಪ್ರಾಯಪಟ್ಟಿದ್ದಾರೆ.
ಇತರ ಪ್ರಮುಖ ದೇಶಗಳು ಮುಂಚೂಣಿಗೆ ಬಂದು ಜವಾಬ್ದಾರಿ ವಹಿಸಿಕೊಳ್ಳುವುದು ಈ ಬಿಕ್ಕಟ್ಟಿಗೆ ಮತ್ತೊಂದು ಪರ್ಯಾಯ ಪರಿಹಾರವಾಗಬಹುದು.
ಗ್ಲೌಬರ್ ಅವರ ಪ್ರಕಾರ, 2022ರ ಜಾಗತಿಕ ಧಾನ್ಯ ಬೆಲೆ ಏರಿಕೆಯ ಸಮಯದಲ್ಲಿ ಭಾರತದಂತಹ ಪ್ರಮುಖ ಗೋಧಿ ಉತ್ಪಾದಕ ದೇಶಗಳು ಜಾಗತಿಕ ಪೂರೈಕೆಯ ಕೊರತೆಯನ್ನು ನೀಗಿಸಲು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಿದ್ದವು.
"ಉದಾಹರಣೆಗೆ, ಭಾರತವು 2022ರಲ್ಲಿ ದಾಖಲೆ ಪ್ರಮಾಣದ ಗೋಧಿಯನ್ನು ರಫ್ತು ಮಾಡಿತ್ತು. ಈ ವರ್ಷ ಎಲ್ ನಿನೋ ಮತ್ತು ಇತರ ಹವಾಮಾನ ವೈಪರೀತ್ಯಗಳು ಪ್ರಭಾವ ಬೀರಿರುವುದರಿಂದ ಭಾರತದಿಂದ ಹೆಚ್ಚಿನ ರಫ್ತು ಸಾಧ್ಯತೆ ಸ್ವಲ್ಪ ಕಡಿಮೆ ಇರಬಹುದು, ಆದರೂ ಭಾರತವು ಹೆಚ್ಚುವರಿ ಗೋಧಿಯನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ. 2022ರಲ್ಲಿ ಜಾಗತಿಕ ಗೋಧಿ ಮಾರುಕಟ್ಟೆಯು ಅತ್ಯಂತ ಚೇತೋಹಾರಿ ಸಾಮರ್ಥ್ಯವನ್ನು ಪ್ರದರ್ಶಿಸಿತ್ತು. 2026ರಲ್ಲೂ ಅದೇ ರೀತಿಯ ಸಕಾರಾತ್ಮಕ ವಾತಾವರಣ ನಿರ್ಮಾಣವಾಗಲಿದೆ ಎಂಬ ನಿರೀಕ್ಷೆಯಿದೆ" ಎಂದು ಅವರು ತಿಳಿಸಿದ್ದಾರೆ.






