ವಾಟ್ಸ್ ಆ್ಯಪ್ ಅಪಪ್ರಚಾರ ಕರಾವಳಿಯಲ್ಲಿ ಹಿಂದುತ್ವದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದು ಹೇಗೆ ?

Photo credit: Samyukta Lakshmi/The Washington Post
► ಫಾಝಿಲ್ ಕೊಲೆಗೆ ಹೇಗೆ ಕಾರಣವಾಯಿತು ವಾಟ್ಸ್ ಆ್ಯಪ್ ದ್ವೇಷ ಪ್ರಚಾರ ?
► ಯಶ್ಪಾಲ್ ಸುವರ್ಣ ಇಮೇಜ್ ಬದಲಾಯಿಸಲು ವಾಟ್ಸ್ ಆ್ಯಪ್ ಆರ್ಮಿ ಕೆಲಸ ಮಾಡಿದ್ದು ಹೇಗೆ ?
ಹೊಸದಿಲ್ಲಿ: ‘ದಿ ವಾಷಿಂಗ್ಟನ್ ಪೋಸ್ಟ್’ನ ಇತ್ತೀಚಿನ ವರದಿಯೊಂದರಲ್ಲಿ ಭಾರತೀಯ ರಾಜಕೀಯ ಸನ್ನಿವೇಶದ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮವನ್ನು ಪರಿಶೀಲಿಸಲಾಗಿದ್ದು, ಮೇ ತಿಂಗಳಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅವುಗಳ ಪಾತ್ರದ ಮೇಲೆ ಗಮನವನ್ನು ಕೇಂದ್ರೀಕರಿಸಲಾಗಿದೆ. ಬಿಜೆಪಿ ಮತ್ತು ಸಂಯೋಜಿತ ಹಿಂದುತ್ವವಾದಿ ಗುಂಪುಗಳು ತಮ್ಮ ರಾಜಕೀಯ ಅಜೆಂಡಾವನ್ನು ಮುಂದೊತ್ತಲು ವಾಟ್ಸ್ಆ್ಯಪ್ನಂತಹ ಪ್ಲ್ಯಾಟ್ಫಾರ್ಮ್ಗಳನ್ನು ಹೇಗೆ ಬಳಸಿಕೊಂಡಿದ್ದವು ಎನ್ನುವುದನ್ನು ಸೆ.26ರಂದು ಪ್ರಕಟಗೊಂಡ ಲೇಖನವು ಬಹಿರಂಗಗೊಳಿಸಿದೆ.
ಆರಂಭದಲ್ಲಿ ಈ ವಾಟ್ಸ್ಆ್ಯಪ್ ಸಂದೇಶಗಳು ಚುನಾವಣಾ ಪ್ರಚಾರದಲ್ಲಿ ಮಾಮೂಲಾಗಿ ಎತ್ತಲಾಗುವ ಮೂಲಸೌಕರ್ಯ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳು ಸೇರಿದಂತೆ ಧನಾತ್ಮಕ ನಿರೂಪಣೆಗಳನ್ನು ರವಾನಿಸಿದ್ದವು. ಆದರೆ ಮೇ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಗಾಢ ತಿರುವು ಪಡೆದುಕೊಂಡಿದ್ದ ಸಂದೇಶಗಳು ಧಾರ್ಮಿಕ ಹಿಂಸಾಚಾರ ಮತ್ತು ಹಿಂದೂ ಹುಡುಗಿಯರ ಮೇಲೆ ಉಗ್ರವಾದಿ ಗುಂಪುಗಳ ಪ್ರಭಾವವನ್ನು ಚರ್ಚಿಸಿದ್ದವು.
ಮಂಗಳೂರು ಹೊರವಲಯದಲ್ಲಿ ವಾಸವಿದ್ದ ಬ್ಯಾಂಕ್ ಉದ್ಯೋಗಿ ಸಚಿನ್ ಪಾಟೀಲ್ ಪ್ರತಿದಿನ ಆರು ವಾಟ್ಸ್ಆ್ಯಪ್ ಗುಂಪುಗಳಲ್ಲಿ ಬಿಜೆಪಿಗೆ ಮತ ನೀಡುವಂತೆ ನಿರಂತರವಾಗಿ ನೆನಪಿಸುವ ಸುಮಾರು 120 ಸಂದೇಶಗಳನ್ನು ಸ್ವೀಕರಿಸಿದ್ದರು ಎಂದು ವಾಷಿಂಗ್ಟನ್ ಪೋಸ್ಟ್ ಗೆ ತಿಳಿಸಿದ್ದಾರೆ.
18 ಕೋಟಿಯಷ್ಟು ವಿಶಾಲ ಸದಸ್ಯತ್ವಗಳನ್ನು ಹೊಂದಿರುವ ಬಿಜೆಪಿಯು ವಿಭಜಕ ಮತ್ತು ತನ್ನ ಹಿಂದುತ್ವವಾದಿ ಅಜೆಂಡಾಕ್ಕೆ ಅನುಗುಣವಾದ ಸುಳ್ಳು ವಿಷಯಗಳನ್ನು ಹರಡಲು ಸಾಮಾಜಿಕ ಮಾಧ್ಯಮಗಳನ್ನು, ನಿರ್ದಿಷ್ಟವಾಗಿ ಅಮೆರಿಕ ಮೂಲದ ಪ್ಲ್ಯಾಟ್ಫಾರ್ಮ್ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿತ್ತು.
ಭಾರತದಲ್ಲಿಯ ದ್ವೇಷಭಾಷಣಗಳು ಮತ್ತು ತಪ್ಪು ಮಾಹಿತಿಗಳ ಕುರಿತು ಕಳವಳಗಳು ಹಾಗೂ ಇಂತಹ ವಿಷಯಗಳಿಗೆ ಕಡಿವಾಣ ಹಾಕುವಲ್ಲಿ ಸಿಲಿಕಾನ್ ವ್ಯಾಲಿಯ ದೈತ್ಯ ಪ್ಲ್ಯಾಟ್ಫಾರ್ಮ್ಗಳು ಎದುರಿಸುತ್ತಿರುವ ಸವಾಲುಗಳನ್ನೂ ವರದಿಯು ಪ್ರಸ್ತಾಪಿಸಿದೆ.
ಅಲ್ಲದೆ, ಪ್ರಧಾನಿ ನರೇಂದ್ರ ಮೋದಿಯವರ ಅಧಿಕಾರ ಬಲವರ್ಧನೆ ಕುರಿತು ಕಳವಳಗಳ ಹೊರತಾಗಿಯೂ ಬೈಡನ್ ಆಡಳಿತವು ಚೀನಾವನ್ನು ಹದ್ದುಬಸ್ತಿನಲ್ಲಿಡಲು ಭಾರತದ ಓಲೈಕೆಯಲ್ಲಿ ತೊಡಗಿರುವುದನ್ನೂ ವರದಿಯು ಚರ್ಚಿಸಿದೆ. ಸಿಖ್ ಪ್ರತ್ಯೇಕತಾವಾದಿಯೋರ್ವನ ರಾಜಕೀಯ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ ಕೆನಡಾದ ಆರೋಪಗಳಂತಹ ಇತ್ತೀಚಿನ ಬೆಳವಣಿಗೆಗಳು ಭಾರತದೊಂದಿಗೆ ಪಾಶ್ಚಾತ್ಯ ದೇಶಗಳ ಸಂಬಂಧಗಳ ಕುರಿತು ಪ್ರಶ್ನೆಗಳನ್ನೆತ್ತಿವೆ.
ಕರ್ನಾಟಕ ಚುನಾವಣೆಗಳ ಸಂದರ್ಭದಲ್ಲಿ ವ್ಯಾಪಕ ತನಿಖೆಗಳನ್ನು ನಡೆಸಿದ್ದ ‘ದಿ ವಾಷಿಂಗ್ಟನ್ ಪೋಸ್ಟ್’ ಬಿಜೆಪಿಯ ಸಂದೇಶ ರವಾನೆ ಕಾರ್ಯವಿಧಾನ ಮತ್ತು ಅದರ ಹಿಂದಿನ ಕಾರ್ಯಕರ್ತರ ಕುರಿತು ಒಳನೋಟಗಳನ್ನು ಒದಗಿಸಿದೆ. ಭಾರತದ ಬಹುಸಂಖ್ಯಾತ ಹಿಂದುಗಳ ಕಳವಳಗಳನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಅವರ ಕಾರ್ಯತಂತ್ರಗಳು ಮತ್ತು ಅವರಿಂದ ವಾಟ್ಸ್ಆ್ಯಪ್ ಗುಂಪುಗಳಾದ್ಯಂತ ವಿಷಯಗಳನ್ನು ಹರಡಲು 150,000 ಸಾಮಾಜಿಕ ಮಾಧ್ಯಮ ಕಾರ್ಯಕರ್ತರ ವ್ಯಾಪಕ ಜಾಲದ ಬಳಕೆಯನ್ನು ವರದಿಯು ಬಹಿರಂಗಗೊಳಿಸಿದೆ.
ಬಿಜೆಪಿ ತನ್ನ ಸಾಧನೆಗಳನ್ನು ಎತ್ತಿ ತೋರಿಸುವ ಮತ್ತು ತನ್ನ ಮುಖ್ಯ ರಾಜಕೀಯ ಪ್ರತಿಸ್ಪರ್ಧಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಸಂದೇಶಗಳನ್ನು ಕೋಟ್ಯಂತರ ಜನರ ಮೊಬೈಲ್ ಸಾಧನಗಳಿಗೆ ನೇರವಾಗಿ ತಲುಪಿಸಲು ವ್ಯಾಪಕ ಮೆಸೇಜಿಂಗ್ ಮೂಲಸೌಕರ್ಯವನ್ನು ಸಜ್ಜುಗೊಳಿಸಿಕೊಂಡಿತ್ತು.
ಆದರೆ, ಪಕ್ಷದ ಅಧಿಕೃತ ಆನ್ಲೈನ್ ಪ್ರಯತ್ನಗಳ ಜೊತೆಗೆ ಬಿಜೆಪಿ ಸದಸ್ಯರು, ಪ್ರಚಾರ ಕಾರ್ಯತಂತ್ರಜ್ಞರು ಮತ್ತು ಪಕ್ಷದ ಬೆಂಬಲಿಗರೊಂದಿಗೆ ವ್ಯಾಪಕ ಸಂದರ್ಶನಗಳಲ್ಲಿ ಬಹಿರಂಗಗೊಂಡಂತೆ ಗುಪ್ತ ಪ್ರಚಾರ ವ್ಯವಸ್ಥೆಯೊಂದು ಕಾರ್ಯಾಚರಿಸಿತ್ತು. ವಾಟ್ಸ್ಆ್ಯಪ್ನಲ್ಲಿ ಕ್ಷಿಪ್ರವಾಗಿ ಗಮನವನ್ನು ಸೆಳೆಯಲು ಪ್ರಚೋದನಾತ್ಮಕ ಪೋಸ್ಟ್ಗಳನ್ನು ವಿನ್ಯಾಸಗೊಳಿಸುವಲ್ಲಿ ಪರಿಣತಿ ಹೊಂದಿದ್ದ ‘ಥರ್ಡ್ ಪಾರ್ಟಿ’ ಅಥವಾ ‘ಟ್ರೋಲ್’ ಪೇಜ್ಗಳನ್ನು ನಿರ್ವಹಿಸುವ ಕಂಟೆಂಟ್ ಕ್ರಿಯೇಟರ್ಗಳ ಸಹಭಾಗಿತ್ವವನ್ನು ಈ ಗುಪ್ತ ಕಾರ್ಯಾಚರಣೆಯು ಒಳಗೊಂಡಿತ್ತು. ಈ ಪೋಸ್ಟ್ಗಳು ಹೆಚ್ಚಾಗಿ, ಜನಸಂಖ್ಯೆಯಲ್ಲಿ ಶೇ.14ರಷ್ಟಿರುವ ಮುಸ್ಲಿಂ ಅಲ್ಪಸಂಖ್ಯಾತರು ಬಹುಸಂಖ್ಯಾತ ಹಿಂದುಗಳಿಗೆ ಬೆದರಿಕೆಯನ್ನು ಒಡ್ಡುತ್ತಿರುವ ದೇಶವನ್ನಾಗಿ ಭಾರತವನ್ನು ಬಿಂಬಿಸುವ ಸುಳ್ಳು ನಿರೂಪಣೆಯನ್ನು ಮುಂದಿಡುತ್ತಿದ್ದು, ಹಿಂದು ಬಹುಸಂಖ್ಯಾತರ ವಿರುದ್ಧ ನಿಂದನೆ ಮತ್ತು ಹಿಂಸಾಚಾರದಲ್ಲಿ ಜಾತ್ಯತೀತ ಮತ್ತು ಉದಾರವಾದಿ ಕಾಂಗ್ರೆಸ್ ಪಕ್ಷವು ಶಾಮೀಲಾಗಿದೆ ಎಂದು ಈ ಸುಳ್ಳು ನಿರೂಪಣೆಗಳು ಬಿಂಬಿಸಿದ್ದವು ಎನ್ನುವುದನ್ನು ವರದಿಯು ಎತ್ತಿ ತೋರಿಸಿದೆ. ನ್ಯಾಯ ಮತ್ತು ಸುರಕ್ಷತೆಯನ್ನು ಖಚಿತಪಡಿಸಲು ಬಿಜೆಪಿಗೆ ಮತ ನೀಡುವುದು ಏಕೈಕ ಮಾರ್ಗವಾಗಿದೆ ಎನ್ನುವುದು ಸೂಚ್ಯ ಸಂದೇಶವಾಗಿತ್ತು.
ಭಾರತವು ಪ್ರಸಕ್ತ 50 ಕೋಟಿಗೂ ಅಧಿಕ ಬಳಕೆದಾರರೊಂದಿಗೆ ಅತ್ಯಂತ ದೊಡ್ಡ ವಾಟ್ಸ್ಆ್ಯಪ್ ಮಾರುಕಟ್ಟೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ ಎಂದು ವರದಿಯು ಉಲ್ಲೇಖಿಸಿದೆ. ಧ್ರುವೀಕರಣಕ್ಕೆ ಕುಮ್ಮಕ್ಕು ನೀಡುವ ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ವಾಟ್ಸ್ಆ್ಯಪ್ನ ಸಾಮರ್ಥ್ಯವನ್ನು ಸಾಮಾಜಿಕ ಮಾಧ್ಯಮ ಸಂಶೋಧಕರು, ಸರಕಾರಿ ಅಧಿಕಾರಿಗಳು ಮತ್ತು ಸ್ವತಃ ವಾಟ್ಸ್ಆ್ಯಪ್ ಗುರುತಿಸಿವೆ. ಆದಾಗ್ಯೂ ಬಿಜೆಪಿಯ ಆಂತರಿಕ ವಾಟ್ಸ್ಆ್ಯಪ್ ಜಾಲವು ರಾಜಕೀಯ ಪಂಡಿತರು ಮತ್ತು ಪ್ರತಿಪಕ್ಷಗಳಿಗೆ ನಿಗೂಢವಾಗಿಯೇ ಉಳಿದುಕೊಂಡಿದ್ದು, ಇದು ಪಕ್ಷದ ಡಿಜಿಟಲ್ ಯಶಸ್ಸನ್ನು ಪ್ರತಿಬಿಂಬಿಸುವುದನ್ನು ಸವಾಲಿನ ಕಾರ್ಯವನ್ನಾಗಿಸಿದೆ.
ಭಾರತೀಯ ರಾಜಕೀಯದಲ್ಲಿ ವಾಟ್ಸ್ಆ್ಯಪ್ ಪಾತ್ರವನ್ನು ಅಧ್ಯಯನ ಮಾಡಿರುವ ರಟ್ಜೆರ್ಸ್ ವಿವಿಯ ಪ್ರೊಫೆಸರ್ ಕಿರನ್ ಗರಿಮೆಲ್ಲಾರ ಪ್ರಕಾರ, ಇತರ ಭಾರತೀಯ ರಾಜಕೀಯ ಪಕ್ಷಗಳು ಮತ್ತು ಬ್ರೆಝಿಲ್ನಂತಹ ದೇಶಗಳು ಇಂಥದೇ ಕಾರ್ಯತಂತ್ರಗಳನ್ನು ಪ್ರಯತ್ನಿಸಿವೆ. ಆದರೆ, ದೊಡ್ಡ ಮಟ್ಟದಲ್ಲಿ ವಾಟ್ಸ್ಆ್ಯಪ್ ಬಳಕೆ ಕರಗತ ಮಾಡಿಕೊಳ್ಳುವಲ್ಲಿ ಬಿಜೆಪಿಯೇ ಎಲ್ಲರಿಗಿಂತ ಮುಂದಿದೆ. ಮತ್ತು ಅದರ ಕಾರ್ಯಾಚರಣೆ ಹೊರಗಿನ ಯಾರಿಗೂ ಗೊತ್ತೇ ಆಗದಷ್ಟು ಅಭೇದ್ಯವಾಗಿದೆ.
ಕರಾವಳಿ ಕರ್ನಾಟಕದಲ್ಲಿ ವ್ಯಾಪಕವಾಗಿ ಪ್ರಸಾರಗೊಂಡಿದ್ದ ಧ್ರುವೀಕರಣ ವಾಟ್ಸ್ಆ್ಯಪ್ ಪೋಸ್ಟ್ಗಳನ್ನು ಸೃಷ್ಟಿಸಿದ್ದ ‘ಅಸ್ತ್ರ’ದ ಪ್ರಭಾವಶಾಲಿ ಪಾತ್ರವನ್ನು ವರದಿಯು ಎತ್ತಿ ತೋರಿಸಿದೆ. ರ್ಯಾಲಿಗಳಲ್ಲಿ ಈ ಅಸ್ತ್ರ ಹೆಚ್ಚಾಗಿ ಕಾಣಿಸಿಕೊಳ್ಳದಿದ್ದರೂ ಸ್ಥಳೀಯ ಬಿಜೆಪಿ ಅಭ್ಯರ್ಥಿಗಳು ತಮ್ಮ ಪ್ರಚಾರ ಸಂದರ್ಭಗಳಲ್ಲಿ ಆತನ ಬೆಂಬಲವನ್ನು ಕೋರಿದ್ದರು. ಅಸ್ತ್ರದ ಉಗ್ರವಾದಿ ಆನ್ಲೈನ್ ಉಪಸ್ಥಿತಿಯು ಮುಸ್ಲಿಮರತ್ತ ಅತಿಯಾದ ಮಧ್ಯಮ ಧೋರಣೆಯನ್ನು ಹೊಂದಿರುವ ಬಗ್ಗೆ ಬಿಜೆಪಿ ನಾಯಕರು ಎಚ್ಚರಿಕೆಯಿಂದ ಇರುವಂತೆ ಮಾಡಿತ್ತು.
ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ಸುದೀಪ್ ಶೆಟ್ಟಿ ಅವರು ‘ಅಸ್ತ್ರ’ದಂತಹ ವ್ಯಕ್ತಿಗಳನ್ನು ಅಧಿಕೃತ ಬಿಜೆಪಿ ಖಾತೆಗಳನ್ನು ಮೀರಿಸುವ ‘ರಹಸ್ಯ ಶಸ್ತ್ರಾಸ್ತ್ರಗಳು’ ಎಂದು ಉಲ್ಲೇಖಿಸುವ ಮೂಲಕ ಅವರ ಮಹತ್ವಕ್ಕೆ ಒತ್ತು ನೀಡಿದರು.
ಸುನಿಲ್ ಪೂಜಾರಿ ಅಲಿಯಾಸ್ ‘ಅಸ್ತ್ರ’ ತನ್ನ ಕಚೇರಿಯಲ್ಲಿ (Photo credit: Samyukta Lakshmi/The Washington Post)
ಅರಬಿ ಸಮುದ್ರ ಮತ್ತು ಪಶ್ಚಿಮ ಘಟ್ಟಗಳಿಂದ ಆವೃತ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳು ಉನ್ನತ ವಿವಿಗಳು ಮತ್ತು ಐತಿಹಾಸಿಕ ದೇವಸ್ಥಾನಗಳ ನೆಲೆಬೀಡಾಗಿರುವ ಹೆಗ್ಗಳಿಕೆಯನ್ನು ಹೊಂದಿವೆ. ಜನಾಂಗೀಯ ಮತ್ತು ಸಾಂಸ್ಕೃತಿಕ ವೈವಿಧ್ಯವನ್ನು ಹೊಂದಿದ್ದರೂ ಸಂಪ್ರದಾಯವಾದಿ, ಶ್ರೀಮಂತವಾಗಿರುವ ಹಾಗೂ ಧಾರ್ಮಿಕ ಸಂಘರ್ಷಗಳ ಹಾಟ್ಬೆಡ್ ಆಗಿರುವ ಕರಾವಳಿಯು ಯಾವಾಗಲೂ ರಾಜ್ಯದ ಇತರ ಪ್ರದೇಶಗಳಿಗಿಂತ ಭಿನ್ನವಾಗಿದೆ.
1980ರ ದಶಕದಲ್ಲಿ ಹಿಂದುತ್ವವಾದಿ ಗುಂಪುಗಳೊಂದಿಗೆ ಗುರುತಿಸಿಕೊಂಡಿರುವ ಆರೆಸ್ಸೆಸ್ ಮುನ್ನೆಲೆಗೆ ಬಂದಿತ್ತು. ಸಾಮಾಜಿಕ ಕಾರ್ಯಕ್ರಮಗಳನ್ನು ಆರಂಭಿಸಿದ ಅದು ಬಿಜೆಪಿಗಾಗಿ ರಾಜಕೀಯ ಪ್ರತಿಭೆಗಳನ್ನು ಪೋಷಿಸಿತ್ತು ಮತ್ತು ಹಿಂದುತ್ವ ಸಿದ್ಧಾಂತವನ್ನು ಉತ್ತೇಜಿಸಿತ್ತು. ಈ ಪ್ರಭಾವವು ಗೋ ಕಳ್ಳಸಾಗಣೆಯ ಆರೋಪದಲ್ಲಿ ಮುಸ್ಲಿಮರನ್ನು ಎದುರಿಸುವಲ್ಲಿ ಮತ್ತು ಅವರ ಮೇಲೆ ಹಲ್ಲೆ ನಡೆಸುವಲ್ಲಿ, ಅಂತರ್ಧರ್ಮೀಯ ಪ್ರತ್ಯೇಕತೆಯನ್ನು ಪ್ರತಿಪಾದಿಸುವಲ್ಲಿ ಮತ್ತು ಆಗಾಗ್ಗೆ ‘ಲವ್ ಜಿಹಾದ್’ನ್ನು ಉಲ್ಲೇಖಿಸಿ ಮುಸ್ಲಿಮ್ ಕಾರ್ಯಕರ್ತರ ಸಂಘಟನೆಗಳೊಂದಿಗೆ ಘರ್ಷಣೆ ನಡೆಸುವಲ್ಲಿ ಹೆಸರುವಾಸಿಯಾಗಿರುವ ಬಜರಂಗ ದಳದಂತಹ ಕಟ್ಟರ್ವಾದಿ ಗುಂಪುಗಳಿಗೆ ವಿಸ್ತರಿಸಿತ್ತು.
ಯುವಜನರು ಬೀದಿಗಿಳಿಯುತ್ತಿದ್ದಂತೆ ರಾಜಕೀಯ ಪಕ್ಷಗಳು ಚುನಾವಣೆಗಳಲ್ಲಿ ತೀವ್ರ ಹಣಾಹಣಿಯಲ್ಲಿ ತೊಡಗಿದ್ದವು. ಕಳೆದ ಏಳು ವರ್ಷಗಳಿಂದಲೂ ಎರಡು ಪ್ರಮುಖ ರಾಜಕೀಯ ಪಕ್ಷಗಳಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್ ವಾಟ್ಸ್ಆ್ಯಪ್ನಲ್ಲಿ ತಮ್ಮ ರಾಜಕೀಯ ಪ್ರಚಾರವನ್ನು ನಡೆಸುತ್ತಿವೆ. ಕಾಂಗ್ರೆಸ್ ಮುಸ್ಲಿಮ್ ಮತದಾರರನ್ನು ಓಲೈಸಿತ್ತಾದರೂ ಅದರ ನಾಯಕತ್ವವು ಪ್ರಾಥಮಿಕವಾಗಿ ಹಿಂದೂ ಆಗಿದೆ.
ಮಂಗಳೂರಿನಲ್ಲಿ ಬಿಜೆಪಿಯ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ಅಜಿತ್ ಕುಮಾರ್ ಉಳ್ಳಾಲ ಅವರು ನಗರದಲ್ಲಿಯ ಪಕ್ಷದ ಕಚೇರಿಯಿಂದ ಹುರುಪಿನ ಪ್ರಯತ್ನಗಳ ನೇತೃತ್ವ ವಹಿಸಿದ್ದರು. 59ರ ಹರೆಯದ ಉಳ್ಳಾಲ 15 ಲಕ್ಷ ಜನಸಂಖ್ಯೆ ಹೊಂದಿರುವ ಕರಾವಳಿ ಕರ್ನಾಟಕ ಪ್ರದೇಶಕ್ಕಾಗಿ ಒಂಭತ್ತು ಸ್ವಯಂಸೇವಕರ ಸಾಮಾಜಿಕ ಮಾಧ್ಯಮ ತಂಡದ ಉಸ್ತುವಾರಿಯನ್ನು ವಹಿಸಿದ್ದರು. ಈ ತಂಡವು ಓರ್ವ ಕಾಪಿರೈಟರ್ ಮತ್ತು ಗಮನ ಸೆಳೆಯುವ ಪಿಕ್ಚರ್ ಪೋಸ್ಟ್ಗಳನ್ನು ರಚಿಸಿದ್ದ ಮೂವರು ಗ್ರಾಫಿಕ್ ಡಿಸೈನರ್ಗಳನ್ನು ಒಳಗೊಂಡಿತ್ತು. ಈ ತಂಡವು ವಾಟ್ಸ್ಆ್ಯಪ್ನಲ್ಲಿ ಶೇರ್ ಮಾಡಿಕೊಳ್ಳುವ ತನ್ನ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ.
ಅಜಿತ್ ಕುಮಾರ್ ಉಳ್ಳಾಲ (Photo credit: Samyukta Lakshmi/The Washington Post)
ವಾಟ್ಸ್ಆ್ಯಪ್ ಗುಂಪುಗಳಿಗೆ ಜನರನ್ನು ಸೇರಿಸಲು ಮತದಾರರ ನೋಂದಣಿ ಡಾಟಾವನ್ನು ಮನೆ ಮನೆಗೆ ಮಾಹಿತಿಯೊಂದಿಗೆ ಸಂಯೋಜಿಸುವ ಮೂಲಕ ಸ್ವಯಂಸೇವಕ ಕ್ಷೇತ್ರ ಕಾರ್ಯಕರ್ತರು ಬಿಜೆಪಿಯ ವಾಟ್ಸ್ಆ್ಯಪ್ ಪ್ರಚಾರದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಪ್ರದೇಶದಲ್ಲಿ ಬಿಜೆಪಿಯ ಸಾಮಾಜಿಕ ವಿಭಾಗದ ಮಾಜಿ ಮುಖ್ಯಸ್ಥ ವಿನೋದ ಕೃಷ್ಣಮೂರ್ತಿಯವರ ಪ್ರಕಾರ ಬಿಜೆಪಿಯು ರಾಜ್ಯದಲ್ಲಿ ಚುನಾವಣೆಗಾಗಿ ವಾಟ್ಸ್ಆ್ಯಪ್ ಚಟುವಟಿಕೆಗಳನ್ನು ನಿರ್ವಹಿಸಲು ಒಟ್ಟು 150,000 ಕಾರ್ಯಕರ್ತರನ್ನು ನಿಯೋಜಿಸಿತ್ತು.
ವೈಯಕ್ತಿಕವಾಗಿ 200 ವಾಟ್ಸ್ಆ್ಯಪ್ ಗುಂಪುಗಳಲ್ಲಿರುವ ಅಜಿತ್ ಕುಮಾರ್ ಅವರು ಹೊಸ ಪೋಸ್ಟ್ಗಳು ಒಂದು ಗಂಟೆಯೊಳಗೆ ತನ್ನ ಕರಾವಳಿ ಜಿಲ್ಲೆಯ ಸಾವಿರಾರು ನಿವಾಸಿಗಳಿಗೆ ತಲುಪಬೇಕು ಎಂದು ನಿರೀಕ್ಷಿಸಿದ್ದರು. ಮೊಬೈಲ್ ಫೋನ್ ಹೊಂದಿರುವ ಪ್ರತಿಯೊಬ್ಬ ಬಿಜೆಪಿ ಸ್ವಯಂಸೇವಕ ಸಾಮಾಜಿಕ ಮಾಧ್ಯಮ ಯೋಧನ ಪಾತ್ರವನ್ನು ನಿರ್ವಹಿಸುವುದಕ್ಕೆ ಅವರು ಒತ್ತು ನೀಡಿದ್ದರು.
2016ರಲ್ಲಿ ರಿಲಯನ್ಸ್ ಜಿಯೋ ದೂರಸಂಪರ್ಕ ವಲಯವನ್ನು ಪ್ರವೇಶಿಸಿದ ಬಳಿಕ ರಾಜಕೀಯ ಸಂವಹನದಲ್ಲಿ ಪರಿವರ್ತನೆ ಆರಂಭಗೊಂಡಿತ್ತು. ರಿಲಯನ್ಸ್ ನೂತನ ಗ್ರಾಹಕರಿಗೆ ಅನಿಯಮಿತ ಉಚಿತ ಡಾಟಾ ಕೊಡುಗೆಯನ್ನು ನೀಡುವ ಮೂಲಕ ಬೆಲೆ ಸಮರಕ್ಕೆ ನಾಂದಿ ಹಾಡಿತ್ತು. ಇದು ಮೂರು ವರ್ಷಗಳಲ್ಲಿ ಭಾರತವನ್ನು ಜಾಗತಿಕವಾಗಿ ಅತ್ಯಂತ ದುಬಾರಿ ಡಾಟಾ ಮಾರುಕಟ್ಟೆಯಿಂದ ಅತ್ಯಂತ ಅಗ್ಗದ ಡಾಟಾ ಮಾರುಕಟ್ಟೆಯನ್ನಾಗಿ ಪರಿವರ್ತಿಸಿತ್ತು.
ದಶಕದ ಉತ್ತರಾರ್ಧದಲ್ಲಿ ಬಿಜೆಪಿ ಪದಾಧಿಕಾರಿಗಳು ಫೋನ್ ನಂಬರ್ಗಳ ಬೃಹತ್ ಡಾಟಾಬೇಸ್ಗಳ ಸಂಗ್ರಹಣೆ ಮತ್ತು ಸಂದೇಶಗಳನ್ನು ರವಾನಿಸುವ ತಮ್ಮ ಪ್ರಯತ್ನಗಳನ್ನು ಸುಗಮಗೊಳಿಸುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದರು. ಆಂತರಿಕ ಪ್ರಸ್ತುತಿಯಲ್ಲಿ ಬಹಿರಂಗಗೊಂಡಂತೆ ಗುಜರಾತಿನಲ್ಲಿ ಚುನಾವಣೆಗಳ ಸಂದರ್ಭದಲ್ಲಿ ಸಾವಿರಾರು ಸ್ವೀಕೃತಿದಾರರಿಗೆ ದಾಳಿಯ ಜಾಹೀರಾತುಗಳ ಸುಲಭ ವಿತರಣೆಗಾಗಿ ವಾಟ್ಸ್ಆ್ಯಪ್ ವೆಬ್ ಇಂಟರ್ಫೇಸ್ ಅನ್ನು ಬಳಸಿಕೊಳ್ಳಲು ಪೈಥಾನ್ ಕೋಡ್-ಆಧಾರಿತ ಸಾಫ್ಟ್ವೇರ್ನ್ನು ಉಪಯೋಗಿಸಿತ್ತು.
ಗುಂಪು ಹಿಂಸಾಚಾರ ಮತ್ತು ಇತರ ದುರಂತ ಘಟನೆಗಳಿಗೆ ಕಾರಣವಾಗಿದ್ದ ವೇಗವಾಗಿ ಹರಡುವ ವದಂತಿಗಳ ಪ್ರಸರಣವನ್ನು ತಡೆಯುವ ಪ್ರಯತ್ನವಾಗಿ 2018ರಲ್ಲಿ ವಾಟ್ಸ್ಆ್ಯಪ್ನ ಇಂಜಿನಿಯರ್ಗಳು ಭಾರತದಲ್ಲಿ ನೂತನ ಮೆಸೇಜ್ ಫಾರ್ವರ್ಡಿಂಗ್ ಮಿತಿಯನ್ನು ಪರಿಚಯಿಸಿದ್ದರು. ಸಮೂಹ ಸಂದೇಶ ರವಾನೆಗೆ ಕಡಿವಾಣ ಹಾಕಲು ತಾಂತ್ರಿಕ ಬದಲಾವಣೆಗಳನ್ನೂ ವಾಟ್ಸ್ಆ್ಯಪ್ ಜಾರಿಗೊಳಿಸಿತ್ತು.
ಮಾಜಿ ಪ್ರಚಾರ ವ್ಯವಸ್ಥಾಪಕರೋರ್ವರು ಹೇಳಿರುವಂತೆ ಬಿಜೆಪಿಯ ಯಶಸ್ಸಿಗೆ ವಿಶೇಷ ತಂತ್ರಜ್ಞಾನಕ್ಕಿಂತ ಸಾಂಸ್ಥಿಕ ಶಿಸ್ತು ಮತ್ತು ದೈಹಿಕ ಶ್ರಮ ಮುಖ್ಯ ಕಾರಣವಾಗಿತ್ತು.
2020ರಲ್ಲಿ ನಡೆಸಿದ ಆಂತರಿಕ ಕ್ಷೇತ್ರ ಅಧ್ಯಯನವೊಂದು ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಮುಸ್ಲಿಮರನ್ನು ಪ್ರಮುಖ ಗುರಿಯಾಗಿಸಿಕೊಂಡು ಸಂಘರ್ಷ,ದ್ವೇಷ ಮತ್ತು ಹಿಂಸೆಯನ್ನು ಉತ್ತೇಜಿಸುವ ಕಂಟೆಂಟ್ಗಳನ್ನು ಭಾರತೀಯ ವಾಟ್ಸ್ಆ್ಯಪ್ ಬಳಕೆದಾರರು ಆಗಾಗ್ಗೆ ಎದುರಿಸಿದ್ದರು ಎನ್ನುವುದನ್ನು ಬೆಳಕಿಗೆ ತಂದಿತ್ತು. ಈ ಆಂತರಿಕ ಅಧ್ಯಯನವು ಮುಂಬರುವ ಚುನಾವಣೆಗಳಲ್ಲಿ ಮುಸ್ಲಿಮ್ ವಿರೋಧಿ ವಾಗಾಡಂಬರದ ಸಾದ್ಯತೆಯ ಎಚ್ಚರಿಕೆಯನ್ನು ನೀಡಿತ್ತು. ಆದಾಗ್ಯೂ,ಮಾಜಿ ಮೆಟಾ ಉದ್ಯೋಗಿ ಹೇಳಿರುವಂತೆ ಕಂಪನಿಯು ಆಂತರಿಕ ಅರಿವನ್ನು ಹೊಂದಿದ್ದರೂ ಖಾಸಗಿ ಪ್ಲ್ಯಾಟ್ಫಾರ್ಮ್ನ ಮೇಲೆ ನಿಗಾಯಿರಿಸಲು ಪರಿಣಾಮಕಾರಿ ಪರಿಹಾರ ಕಂಡುಬಂದಿಲ್ಲ.
ವಾಟ್ಸ್ಆ್ಯಪ್ನಲ್ಲಿ ವಿಭಜಿತ ರಾಜಕೀಯ ಕಂಟೆಂಟ್ಗಳನ್ನು ನಿಗ್ರಹಿಸಲು ಮೆಟಾದ ಕ್ರಮಗಳ ಕುರಿತು ಪ್ರಶ್ನೆಗಳಿಗೆ ಉತ್ತರಿಸಿದ ಮೆಟಾ ವಕ್ತಾರರಾದ ಬಿಪಾಶಾ ಚಕ್ರವರ್ತಿ ಅವರು, ಸ್ವಯಂಚಾಲಿತ ಸಾಮೂಹಿಕ ಸಂದೇಶಗಳನ್ನು ತಡೆಯಲು ಮೆಸೇಜ್ ಫಾರ್ವರ್ಡಿಂಗ್ಗೆ ಮಿತಿ ಹಾಕುವುದು ಮತ್ತು ಸ್ಪಾಮ್ ಪತ್ತೆ ತಂತ್ರಜ್ಞಾನವನ್ನು ಬಳಸುವಂತಹ ಕ್ರಮಗಳನ್ನು ಉಲ್ಲೇಖಿಸಿದರು. ಕರ್ನಾಟಕದಲ್ಲಿ ಆನ್ಲೈನ್ ಪ್ರಚಾರಗಳ ಜಾಗ್ರತಿ ಕುರಿತಂತೆ ಚಕ್ರವರ್ತಿ ವಾಟ್ಸ್ಆ್ಯಪ್ನ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ಗೆ ಒತ್ತು ನೀಡಿದರು. ಹೆಚ್ಚು ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.
ಚುನಾವಣಾ ಪ್ರಚಾರ ಆರಂಭಗೊಂಡಾಗ ಅಜಿತ್ ಕುಮಾರ್ ಅವರು ‘ದಿ ವಾಷಿಂಗ್ಟನ್ ಪೋಸ್ಟ್’ನ್ನು ತನ್ನ ವಾಟ್ಸ್ಆ್ಯಪ್ ಗ್ರೂಪ್ಗಳಲ್ಲೊಂದಕ್ಕೆ ಸೇರಿಸಿದ್ದರು ಮತ್ತು ಪ್ರಾಥಮಿಕವಾಗಿ ಸರಕಾರದ ಸಾಧನೆಗಳು ಮತ್ತು ಸಾರ್ವಜನಿಕ ಸೇವೆಗಳ ಕುರಿತು ಸಾಂಪ್ರದಾಯಿಕ ಪ್ರಚಾರ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದರು. ಆದಾಗ್ಯೂ ಚುನಾವಣೆಯ ದಿನಾಂಕ ಸಮೀಪಿಸುತ್ತಿದ್ದಂತೆ ಪ್ರಚಾರದ ಧ್ವನಿಯು ನಾಟಕೀಯವಾಗಿ ಬದಲಾಗಿತ್ತು. ವಾಟ್ಸ್ಆ್ಯಪ್ ಗುಂಪುಗಳು ಪ್ರಚೋದನಕಾರಿ ಪೋಸ್ಟ್ಗಳು ಮತ್ತು ಧಾರ್ಮಿಕ ಪಕ್ಷಪಾತಕ್ಕೆ ಮನವಿಗಳಿಂದ ತುಂಬಿಹೋಗಿದ್ದವು. ಅಜಿತ್ ಕುಮಾರ್ ಅವರು ಈ ಬದಲಾವಣೆಯನ್ನು ಅಂತಿಮ ಓವರ್ಗಳಲ್ಲಿ ದೊಡ್ಡ ಹೊಡೆತಗಳನ್ನು ಬಾರಿಸುವ ಕ್ರಿಕೆಟ್ ಕಾರ್ಯತಂತ್ರಕ್ಕೆ ಹೋಲಿಸಿದರು.
ಗ್ರೂಪ್ನಲ್ಲಿಯ ಪೋಸ್ಟ್ಗಳಲ್ಲೊಂದು ಕಾಂಗ್ರೆಸ್ ರಾಜಕಾರಣಿಗಳನ್ನು ಹಿಂದೂಗಳ ವಿರುದ್ಧ ಹಿಂಸಾಚಾರವನ್ನು ಆರೋಪಿಸಿ ಆಗಾಗ್ಗೆ ಟೀಕೆಗೆ ಗುರಿಯಾಗುತ್ತಿರುವ 18ನೇ ಶತಮಾನದ ಮುಸ್ಲಿಮ್ ದೊರೆ ಟಿಪ್ಪು ಸುಲ್ತಾನರಿಗೆ ಹೋಲಿಸಿತ್ತು. ಇನ್ನೊಂದು ಪೋಸ್ಟ್ ಮಾರ್ಚ್ನಲ್ಲಿ ಮುಸ್ಲಿಮ್ ವ್ಯಕ್ತಿಯನ್ನು ಥಳಿಸಿ ಹತ್ಯೆಗೈದ ಆರೋಪದಲ್ಲಿ ಬಂಧಿಸಲ್ಪಟ್ಟ ಹಿಂದು ಗೋರಕ್ಷಕನೋರ್ವನನ್ನು ‘ಒಳಸಂಚಿನ ಬಲಿಪಶು ’ಎಂದು ಚಿತ್ರಿಸಿತ್ತು.
ಅಜಿತ್ ಕುಮಾರ್ ರ ಸಹಾಯಕ ಅಕ್ಷಯ ಆಳ್ವಾ ಹೇಳುವಂತೆ ಬಿಜೆಪಿ ಪದಾಧಿಕಾರಿಗಳು ಸಕ್ರಿಯವಾಗಿ ಹರಡಿದ್ದ ಇಂತಹ ಪ್ರಚೋದನಕಾರಿ ಕಂಟೆಂಟ್ಗಳನ್ನು ಸ್ವತಃ ಅವರೇ ರಚಿಸಿರಲಿಲ್ಲ. ಕೆಲವು ಸಂದೇಶಗಳನ್ನು ಪಕ್ಷವು ನೇರವಾಗಿ ಅನುಮೋದಿಸಿರಲಿಕ್ಕಿಲ್ಲ, ಆದಾಗ್ಯೂ ಅವು ಟ್ರೋಲ್ ಪೇಜ್ಗಳಿಂದ ಪ್ರಸಾರಗೊಂಡಿದ್ದವು.
ಎಪ್ರಿಲ್ನಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳು ಅಧಿಕೃತವಾಗಿ ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸುತ್ತಿದ್ದಂತೆ ಸುನಿಲ್ ಪೂಜಾರಿ ಅಲಿಯಾಸ್ ‘ಅಸ್ತ್ರ’ ನಾಲ್ವರ ತಂಡವೊಂದನ್ನು ಮುನ್ನಡೆಸಿದ್ದರು. ಮೂರು ಆ್ಯಂಡ್ರಾಯ್ಡ್ ಪೋನ್ಗಳನ್ನು ಬಳಸುತ್ತಿದ್ದ ಪೂಜಾರಿಗೆ ಅಸ್ತ್ರ ಲೋಗೊವನ್ನು ಒಳಗೊಂಡ ಇಮೇಜ್ ಪೋಸ್ಟ್ಗಳ ನಿರಂತರ ಹರಿಯುವಿಕೆಯನ್ನು ಸೃಷ್ಟಿಸುವ ಮತ್ತು ಅವುಗಳನ್ನು 30 ವಾಟ್ಸ್ಆ್ಯಪ್ ಗುಂಪುಗಳಿಗೆ ಪ್ರಸರಿಸುವ ಹೊಣೆಯನ್ನು ವಹಿಸಲಾಗಿತ್ತು.
ಅಸ್ತ್ರ ಇತ್ತೀಚಿಗೆ ಹಲವಾರು ವೈರಲ್ ಯಶಸ್ಸುಗಳನ್ನು ಸಾಧಿಸಿದೆ. ಪೂಜಾರಿ ಚುನಾವಣೆಯನ್ನು ರಾಷ್ಟ್ರವಾದಿಗಳು (ಬಿಜೆಪಿ) ಮತ್ತು ಭಯೋತ್ಪಾದಕರ (ಕಾಂಗ್ರೆಸ್) ನಡುವಿನ ಯುದ್ಧವನ್ನಾಗಿ ರೂಪಿಸಿದ್ದರು. ಚುನಾವಣೆಯ ಮೇಲೆ ಪ್ರಭಾವ ಬೀರಬಲ್ಲ ಪ್ರಮುಖ ಮತದಾರ ಸಮುದಾಯವೊಂದು ಆರಾಧಿಸುವ ದೇವಿಯ ವಿಗ್ರಹವನ್ನು ಮುಸ್ಲಿಮ್ ವ್ಯಕ್ತಿಯೋರ್ವ ಸ್ಪರ್ಶಿಸುತ್ತಿರುವಂತೆ ಬಿಂಬಿಸುವ ಚಿತ್ರವೊಂದನ್ನು ಅವರು ಪ್ರಸಾರ ಮಾಡಿದ್ದರು. ಇದರ ಜೊತೆಗೆ ಸ್ಥಳೀಯ ಕಾಂಗ್ರೆಸ್ ಅಭ್ಯರ್ಥಿಯೋರ್ವರ ಭಾಷಣವನ್ನು ಅದು ಮುಸ್ಲಿಮ್ ಆಡಳಿತಗಾರರನ್ನು ಹೊಗಳುತ್ತಿರುವಂತೆ ತಪ್ಪಾಗಿ ಬಿಂಬಿಸಲು ಎಡಿಟ್ ಮಾಡಿದ್ದನ್ನು ಪೂಜಾರಿ ಒಪ್ಪಿಕೊಂಡಿದ್ದಾರೆ.
ಅಸ್ತ್ರ ಪೋಸ್ಟ್ಗಳಿಂದ ತಾನು ಲಾಭವನ್ನು ಮಾಡಿಕೊಂಡಿಲ್ಲ ಎಂದು ಪೂಜಾರಿ ಸ್ಪಷ್ಟಪಡಿಸಿದರು, ಆದರೆ ಅವರ ಸಾಮಾಜಿಕ ಮಾಧ್ಯಮ ಪ್ರಯತ್ನಗಳಿಂದಾಗಿ ಅವರ ಪ್ರಭಾವವು ಗಣನೀಯವಾಗಿ ಏರಿಕೆಯಾಗಿತ್ತು. 10ನೇ ತರಗತಿಗೇ ಶಾಲೆಯನ್ನು ತೊರೆದಿದ್ದರೂ, ಮೊದಲಿನ ನಿಯಮಿತ ಉದ್ಯೋಗವಿಲ್ಲದಿದ್ದರೂ ಪೂಜಾರಿ ವಿಶಿಷ್ಟ ಮಟ್ಟದ ಪ್ರಭಾವವನ್ನು ಗಳಿಸಿಕೊಂಡಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಗಳು ಅಸ್ತ್ರ ಪೋಸ್ಟ್ಗಳನ್ನು ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡಿದ್ದರು ಮತ್ತು ಪೂಜಾರಿ ಹೇಳಿರುವಂತೆ ಇತರ ಹಿರಿಯ ಸರಕಾರಿ ಅಧಿಕಾರಿಗಳು ಮತ್ತು ಪಕ್ಷದ ಪದಾಧಿಕಾರಿಗಳಿಂದ ಕರೆಗಳನ್ನು ಅವರು ಸ್ವೀಕರಿಸಿದ್ದರು.
ಎಪ್ರಿಲ್ನಲ್ಲಿ ರಾಜ್ಯ ಬಿಜೆಪಿ ನಾಯಕತ್ವವು ಸ್ಥಳೀಯ ಉದ್ಯಮಿ ಮತ್ತು ವಿವಾದಾತ್ಮಕ ಇತಿಹಾಸವನ್ನು ಹೊಂದಿರುವ ಯಶ್ಪಾಲ್ ಸುವರ್ಣರನ್ನು ರಾಜ್ಯ ವಿಧಾನಸಭಾ ಚುನಾವಣೆಗೆ ಉಡುಪಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವ ಮೂಲಕ ಅನಿರೀಕ್ಷಿತ ಹೆಜ್ಜೆಯನ್ನಿರಿಸಿತ್ತು. 2005ರಲ್ಲಿ ಬಜರಂಗ ದಳದ ಸ್ಥಳೀಯ ನಾಯಕನಾಗಿ ಯಶ್ಪಾಲ್ ಸುವರ್ಣ ಗೋವುಗಳನ್ನು ಸಾಗಿಸುತ್ತಿದ್ದ ಇಬ್ಬರು ಮುಸ್ಲಿಮ್ ವ್ಯಕ್ತಿಗಳನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದ ಘಟನೆಯ ಪ್ರಮುಖ ಆರೋಪಿಯಾಗಿ ಕುಖ್ಯಾತಿ ಗಳಿಸಿದ್ದರು.
ಯಶ್ಪಾಲ್ ಸುವರ್ಣ (Photo credit: Samyukta Lakshmi/The Washington Post)
ಆರಂಭದಲ್ಲಿ ಸುವರ್ಣರ ಇಮೇಜ್ನ್ನು ಹೆಚ್ಚಿಸಲು ಮತ್ತು ಅವರ ‘ವಿನಮ್ರತೆ’ಗೆ ಒತ್ತು ನೀಡಲು ವಾಟ್ಸ್ಆ್ಯಪ್ನ್ನು ಬಳಸಿಕೊಳ್ಳಲು ಅವರ ಪ್ರಚಾರ ತಂಡವು ಆರಂಭದಲ್ಲಿ ಉದ್ದೇಶಿಸಿತ್ತು. ಆದರೆ ಸುವರ್ಣರ ಆಪ್ತ ಸಹಾಯಕ ಯತೀಶಗೆ ಅನುಮಾನಗಳಿದ್ದವು ಮತ್ತು ಅಸ್ತ್ರದಿಂದ ಸಲಹೆಯನ್ನು ಕೋರಿದ್ದರು.
ಸಾಮಾಜಿಕ ಮಾಧ್ಯಮ ತಂತ್ರಗಾರ ಪೂಜಾರಿ ಈ ವಿಧಾನದ ವಿರುದ್ಧ ಸಲಹೆ ನೀಡಿದ್ದರು. ಮತದಾರರಲ್ಲಿ ಗಣನೀಯ ಪಾಲು ಹೆಚ್ಚು ಸಮರ್ಥ ಅಭ್ಯರ್ಥಿಯ ಬಗ್ಗೆ ಒಲವು ಹೊಂದಿರುವ ಯುವಜನರದ್ದಾಗಿದೆ ಎಂದು ಅವರು ವಾದಿಸಿದ್ದರು. ಇದಲ್ಲದೆ ಕಾಂಗ್ರೆಸ್ ಪಕ್ಷವು ತಾನು ಅಧಿಕಾರಕ್ಕೆ ಬಂದರೆ ಬಜರಂಗ ದಳವನ್ನು ನಿಷೇಧಿಸುವ ಸುಳಿವನ್ನು ನೀಡಿತ್ತು. ಪರಿಣಾಮವಾಗಿ ಸುವರ್ಣರ ತಂಡವು ಬಜರಂಗ ದಳವು ಗುರುತಿಸಿಕೊಂಡಿರುವ ದೇವತೆ ಬಜರಂಗಬಲಿಯ ಭವ್ಯ ಚಿತ್ರದೊಂದಿಗೆ ಸುವರ್ಣರನ್ನು ತೋರಿಸುವ ಪ್ರಬಲ ಪೋಸ್ಟ್ಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಮತ್ತು ಸುಮಾರು 1,000 ವಾಟ್ಸ್ಆ್ಯಪ್ ಗುಂಪುಗಳೊಂದಿಗೆ ಅವರ ನಂಟನ್ನು ಎತ್ತಿ ತೋರಿಸುವ ಮೂಲಕ ತನ್ನ ಕಾರ್ಯತಂತ್ರವನ್ನು ಬದಲಿಸಿಕೊಂಡಿತ್ತು.
ವರದಿಯ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಯ ಪ್ರಚಾರ ಅಭಿಯಾನವನ್ನು ಹೆಚ್ಚಿಸಲು ಕೋಮು ಘಟನೆಗಳನ್ನು ಬಳಸಿಕೊಳ್ಳುವಲ್ಲಿ ಪೂಜಾರಿ ಸಕ್ರಿಯ ಪಾತ್ರವನ್ನು ಹೊಂದಿದ್ದರು. ಇಂತಹ ಒಂದು ಘಟನೆಯು ಕಳೆದ ವರ್ಷ ಪ್ರದೇಶವನ್ನು ತಲ್ಲಣಗೊಳಿಸಿದ್ದ ಸರಣಿ ಕೋಮು ಹತ್ಯೆಗಳನ್ನು ಒಳಗೊಂಡಿತ್ತು.
2022ರಲ್ಲಿ ಬಜರಂಗ ದಳದ ಸದಸ್ಯರೊಂದಿಗೆ ಜಗಳದಲ್ಲಿ ಮಸೂದ್ ಎಂಬ ಯುವಕನೊಬ್ಬ ಕೊಲ್ಲಲ್ಪಟ್ಟಿದ್ದ. ತನಿಖಾ ಸಂಸ್ಥೆಗಳ ಪ್ರಕಾರ ಈ ಹತ್ಯೆಗೆ ಪ್ರತೀಕಾರವಾಗಿ ಮುಸ್ಲಿಂ ಗುಂಪೊಂದರ ಸ್ಥಳೀಯ ಸದಸ್ಯರು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ನ ಕೊಲೆ ಮಾಡಿದ್ದರು.
ತಕ್ಷಣ ' ಅಸ್ತ್ರ' ಹೆಸರಿನಲ್ಲಿ ಸುನಿಲ್ ಪೂಜಾರಿ ಮತ್ತು ಇತರ ಹಲವಾರು ಬಲಪಂಥೀಯ ಪ್ರಭಾವಿಗಳು ಬಿಜೆಪಿ ಕಾರ್ಯಕರ್ತನ ಸಾವಿಗೆ ಪ್ರತೀಕಾರ ಕೋರುವ ಕಂಟೆಂಟ್ನ್ನು ವ್ಯಾಪಕವಾಗಿ ಹರಡಿದ್ದರು.
ಮುಹಮ್ಮದ್ ಫಾಝಿಲ್ (Photo credit: Samyukta Lakshmi/The Washington Post)
ಕೆಲವು ದಿನಗಳ ಬಳಿಕ, ಜು.28ರಂದು ನಾಲ್ವರು ಮುಸುಕುಧಾರಿ ವ್ಯಕ್ತಿಗಳು ಸುರತ್ಕಲ್ ಸಮೀಪದ ಜನನಿಬಿಡ ಪ್ರದೇಶದಲ್ಲಿ ಮುಹಮ್ಮದ್ ಫಾಝಿಲ್ (23)ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಪೊಲೀಸರು ತಿಳಿಸಿರುವಂತೆ ಫಾಝಿಲ್ ವಿರುದ್ಧ ಹಂತಕರಿಗೆ ಯಾವುದೇ ವೈಯಕ್ತಿಕ ದ್ವೇಷವಿರಲಿಲ್ಲ, ಆತ ಮುಸ್ಲಿಂ ಎಂಬ ಏಕಮಾತ್ರ ಕಾರಣದಿಂದ ಹತ್ಯೆ ಮಾಡಲಾಗಿತ್ತು.
ವಿಹಿಂಪ ನಾಯಕ ಶರಣ್ ಪಂಪ್ ವೆಲ್ ಬಜರಂಗ ದಳದ ರ್ಯಾಲಿಯೊಂದರಲ್ಲಿ ಫಾಝಿಲ್ ಹತ್ಯೆ ಪ್ರತೀಕಾರದ ಕೃತ್ಯವಾಗಿತ್ತು ಎಂದು ಬಹಿರಂಗವಾಗಿ ಘೋಷಿಸಿದ್ದ.. ಈ ಹಿಂಸಾಚಾರವನ್ನು ಪ್ರಚೋದಿಸುವಲ್ಲಿ ವಾಟ್ಸ್ಆ್ಯಪ್ನಲ್ಲಿಯ ಕಾವೇರಿದ ಚರ್ಚೆಗಳು ಎಷ್ಟರ ಮಟ್ಟಿಗೆ ಪಾತ್ರವನ್ನು ವಹಿಸಿದ್ದವು ಎನ್ನುವುದು ಅಸ್ಪಷ್ಟವಾಗಿಯೇ ಉಳಿದಿದೆ ಎಂದು ವರದಿಯು ಉಲ್ಲೇಖಿಸಿದೆ.
ವಾಟ್ಸ್ಆ್ಯಪ್ನಲ್ಲಿ ವ್ಯಕ್ತವಾಗಿದ್ದ ಸಿಟ್ಟು ಹಿಂಸಾಚಾರದಲ್ಲಿ ಪ್ರಮಖ ಪಾತ್ರವನ್ನು ವಹಿಸಿತ್ತು ಎನ್ನುವುದನ್ನು ಒಪ್ಪಿಕೊಂಡ ಪೂಜಾರಿ, ಹಿಂದೂ ಧರ್ಮದ ಹೆಸರಿನಲ್ಲಿ ಹಿಂಸಾಚಾರವನ್ನು ತಾನು ಸಮರ್ಥಿಸುತ್ತೇನೆ ಎಂದು ಹೇಳಿದರು.
ಇದೇ ರೀತಿ ಪ್ರಭಾವಿ ರಾಷ್ಟ್ರಧರ್ಮ ಟ್ರೋಲ್ ಪೇಜ್ನ ನಿರ್ವಾಹಕ ಸಂತೋಷ ಕೆಂಚಾಂಬಾ ಅವರು, ಸೇಡಿನ ಹತ್ಯೆಗಳನ್ನು ಪ್ರತಿಪಾದಿಸಿದ್ದನ್ನು ಒಪ್ಪಿಕೊಂಡಿದ್ದಾರೆ. ಇದು ಭಾರತವನ್ನು ಮುಸ್ಲಿಮರು ವ್ಯಾಖ್ಯಾನಿತ ಪಾತ್ರವನ್ನು ಹೊಂದಿರುವ ಹಿಂದು ರಾಷ್ಟ್ರವನ್ನಾಗಿ ಪರಿವರ್ತಿಸುವ ಗುರಿಯೊಂದಿಗೆ ಆನ್ಲೈನ್ ಕಾರ್ಯಕರ್ತರು ಅನುಸರಿಸುತ್ತಿರುವ ‘ನಾಗರಿಕತೆಯ ಯುದ್ಧ’ದ ಭಾಗವಾಗಿದೆ ಎಂದು ಅವರು ವಿವರಿಸಿದರು.
ಎಪ್ರಿಲ್ ನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಪೂಜಾರಿ ವಾಟ್ಸ್ ಆಪ್ ನಲ್ಲಿ ಆಧಾರರಹಿತ ಸುದ್ದಿ, ಮಾಹಿತಿಗಳನ್ನು ಹರಡುವುದನ್ನು ಮುಂದುವರಿಸಿದ್ದ. ಕಾಂಗ್ರೆಸ್ ಬೆಂಬಲದಿಂದ ಮುಸ್ಲಿಮರು ಹಲವಾರು ಹಿಂದೂ ಕಾರ್ಯಕರ್ತರನ್ನು ಕೊಲೆಗಳನ್ನು ಮಾಡಿದ್ದಾರೆ ಎಂದು ಆರೋಪಿಸುವ ಮೆಸೇಜ್ ಗಳನ್ನು ಹರಡುತ್ತಿದ್ದ.
ಈ ವರದಿಯಲ್ಲಿ ಈಗಾಗಲೇ ಹೇಳಿದಂತೆ ಇಂತಹ ಚುನಾವಣಾ ಪೂರ್ವ ಮೆಸೇಜುಗಳನ್ನು ಪಡೆಯುತ್ತಿದ್ದವರಲ್ಲಿ ಒಬ್ಬ ಬ್ಯಾಂಕ್ ಉದ್ಯೋಗಿ ಪಾಟೀಲ್. ಫಾಝಿಲ್ ಕೊಲೆಯಾದ ಸ್ಥಳದ ಸಮೀಪದಲ್ಲೇ ತನ್ನ ಮಿತ್ರರ ಜೊತೆ ಮಾತನಾಡುತ್ತಿದ್ದ ಫಾಝಿಲ್ ಶಾಲಾ ದಿನಗಳಿಂದಲೇ ತನಗೆ ಪರಿಚಿತ ಎಂದು ನೆನಪಿಸಿಕೊಂಡರು.
ಪಾಟೀಲ್ ಪ್ರಕಾರ, ಅವರು ಬೆಳೆದು ಬಂದಿರುವ ವಾತಾವರಣದಲ್ಲಿ ಅವರಿಗೆ ಎಂದೂ ಫಾಝಿಲ್ ಆಗಲಿ ಬೇರೆ ಮುಸ್ಲಿಮರಾಗಲಿ ಬೆದರಿಕೆಯಾಗಿ ಕಂಡಿರಲಿಲ್ಲ. ಆದರೆ ಕಳೆದ ಐದು ವರ್ಷಗಳಿಂದ ಮುಸ್ಲಿಮರು ಬಹಳ ಅಪಾಯಕಾರಿ ಎಂದು ಬಿಂಬಿಸುವ ಮೆಸೇಜುಗಳೇ ಹೆಚ್ಚು ಬರುತ್ತಿದ್ದುದು ಆತನನ್ನು ಚಿಂತೆಗೀಡು ಮಾಡಿತ್ತು. ಹಿಂದೂಗಳಿಗೆ ತೊಂದರೆ ಉಂಟು ಮಾಡುವಮುಸ್ಲಿಂ ಉಗ್ರರು ಕಳಿಸಿದ್ದು ಎನ್ನಲಾದ ವಾಯ್ಸ್ ಮೆಸೇಜುಗಳು ಆತನಿಗೆ ಬರುತ್ತಿದ್ದವು. ಮೇ ತಿಂಗಳಲ್ಲಿ ಚುನಾವಣೆ ಸಮೀಪಿಸುವಾಗ ರಾಜ್ಯದಲ್ಲಿ ಕಾಂಗ್ರೆಸ್ ಬಂದರೆ ಹಿಂಸಾಚಾರ ಶುರುವಾಗುತ್ತದೆ ಎಂಬ ಮೆಸೇಜುಗಳು ಬರಲಾರಂಭಿಸಿದವು.
ವರದಿಯ ಪ್ರಕಾರ, ಸುದ್ದಿಗಾಗಿ ಕೇವಲ ವಾಟ್ಸ್ ಆಪ್ ಅನ್ನು ಮಾತ್ರ ನೆಚ್ಚಿಕೊಂಡಿದ್ದ ಪಾಟೀಲ್ ಹಾಗು ಅವರ ಮಿತ್ರರು " ಹಿಂದೂಗಳು ಅಪಾಯದಲ್ಲಿದ್ದಾರೆ ' ಎಂಬ ತೀರ್ಮಾನಕ್ಕೆ ಬಂದರು.
ಚುನಾವಣಾ ಪ್ರಚಾರಕ್ಕೆ ಬಂದ ಮೋದಿಯವರೂ ಮೊದಲು ಆರ್ಥಿಕತೆ ಬಗ್ಗೆ ಮಾತಾಡಿದರೂ ಕೊನೆಗೆ ಇವಿಎಂ ಬಟನ್ ಒತ್ತುವಾಗ ಕಾಂಗ್ರೆಸ್ ವಿರುದ್ಧ ಜೈ ಬಜರಂಗಬಲಿ ಎಂದು ಘೋಷಣೆ ಕೂಗಿ ಎಂದು ಹೇಳಿ ಜನರನ್ನು ಇನ್ನಷ್ಟು ಪ್ರಚೋದಿಸಿದರು.
ಆದರೆ ಕೊನೆಗೂ ರಾಜ್ಯದಲ್ಲಿ ಬಿಜೆಪಿ ಸೋತಿತು. ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಆದರೆ ಪೂಜಾರಿ, ಉಳ್ಳಾಲ್ ಮತ್ತಿತರರು ನಡೆಸಿದ ಅಪಪ್ರಚಾರದ ಫಲವಾಗಿ ಕರಾವಳಿಯಲ್ಲಿ ಬಿಜೆಪಿಗೆ ಅತ್ಯುತ್ತಮ ಫಲಿತಾಂಶ ಬಂತು. ಅಲ್ಲಿನ ಹದಿಮೂರರಲ್ಲಿ ಕೇವಲ ಒಂದು ಸ್ಥಾನ ಮಾತ್ರ ಕಾಂಗ್ರೆಸ್ ಗೆ ಹೋಯಿತು.
ಈಗ ಬಿಜೆಪಿಗೆ ಮತ ಹಾಕಿದ ಪಾಟೀಲ್ ಗೆ ಕಾಂಗ್ರೆಸ್ ಸರ್ಕಾರ ಇರುವಾಗ ಹಿಂದೂಗಳಿಗೆ ಅಪಾಯ ಬರಬಹುದೇ ಎಂಬ ಭಯ ಶುರುವಾಗಿದೆ.
ಈಗಲೂ ಪೂಜಾರಿ ಹೊಸ ಕಾಂಗ್ರೆಸ್ ಸರ್ಕಾರವನ್ನು ಟಿಪ್ಪು ಸುಲ್ತಾನ್ ಗೆ ಹೋಲಿಸುವುದನ್ನು ಮತ್ತು ಹಿಂಸಾಚಾರದ ಬಗ್ಗೆ ಎಚ್ಚರಿಸುವ ಕಂಟೆಂಟ್ ಗಳನ್ನು ಪೋಸ್ಟ್ ಮಾಡುವುದನ್ನು ಮುಂದುವರಿಸಿದ್ದಾನೆ. ಆದರೆ ಕಾಂಗ್ರೆಸ್ ಸರಕಾರದ ಪೊಲೀಸರು ಕ್ರಮ ಕೈಗೊಳ್ಳಬಹುದೇ ಎಂಬ ಭಯವೂ ಆತನಿಗಿದೆ. ಸದ್ಯಕ್ಕೆ ಮುಸ್ಲಿಮರು ಗೆದ್ದಿದ್ದಾರೆ ಎಂದು ಹೇಳುವ ಪೂಜಾರಿ ಅಪಪ್ರಚಾರ ಹರಡುವ ಆತನ ಕೆಲಸವನ್ನು ಮುಂದುವರೆಸಿದ್ದಾನೆ.
ವಾಷಿಂಗ್ಟನ್ ಪೋಸ್ಟ್ ನ ಭಾರತ ಬ್ಯುರೋ ಮುಖ್ಯಸ್ಥ ಜೆರ್ರಿ ಶಿಹ್ ಬರೆದಿರುವ ವಿಶೇಷ ತನಿಖಾ ವರದಿಗೆ ಮೋಹಿತ್ ರಾವ್ ಮತ್ತು ಶಮ್ಸ್ ಇರ್ಫಾನ್ ಅವರು ಮಾಹಿತಿ ಒದಗಿಸಿದ್ದಾರೆ.
ವಾಷಿಂಗ್ಟನ್ ಪೋಸ್ಟ್ ವಿಶೇಷ ತನಿಖಾ ವರದಿಯ ಲಿಂಕ್ ಇಲ್ಲಿದೆ: https://wapo.st/3t8Pgqh







