ಹೆರಿಗೆಯ 6 ದಿನಗಳಲ್ಲೇ ಕಚೇರಿಗೆ ಮಗುವಿನೊಂದಿಗೆ ಹಾಜರಾದ ಕರ್ನಾಟಕ ಮೂಲದವರಾದ ವಯನಾಡ್ ಜಿಲ್ಲಾಧಿಕಾರಿ ಮೇಘಶ್ರೀ!

ಜಿಲ್ಲಾಧಿಕಾರಿ ಮೇಘಶ್ರೀ ಡಿಆರ್ | Photo Credit : instagram.com
ಬುಧವಾರದಿಂದ ಮಾತೃತ್ವ ರಜೆಯಲ್ಲಿ ತೆರಳಲಿದ್ದ ಜಿಲ್ಲಾಧಿಕಾರಿ ಮಂಗಳವಾರ ನವಜಾತ ಶಿಶು ಸೇರಿದಂತೆ ಮೂವರು ಮಕ್ಕಳ ಸಮೇತ ಕಚೇರಿಯ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿದ್ದರು.
ಕೇರಳದ ವಯನಾಡ್ ಜಿಲ್ಲೆಯ ಜಿಲ್ಲಾಧಿಕಾರಿ ಮೇಘಶ್ರೀ ಡಿಆರ್ ಅವರಿಗೆ ಅದು ಎಂದಿನಂತೆ ಕೆಲಸದ ದಿನವಾಗಿತ್ತು. ಆಗಸ್ಟ್ 24ರಂದು ಅವರು ತಮ್ಮ ಅಧಿಕೃತ ಕರ್ತವ್ಯಗಳನ್ನು ಪೂರೈಸಿದ ಬಳಿಕ ತೆರಳಿದ್ದು ನೇರವಾಗಿ ಆಸ್ಪತ್ರೆಗೆ! ಹೌದು, ಅಂದು ಅವರು ತಮ್ಮ ಮೂರನೇ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಬೇಕಿತ್ತು.
ಮರುದಿನ ಮೇಘಶ್ರೀ ಮಗಳಿಗೆ ಜನ್ಮ ನೀಡಿದರು. ಕೇವಲ ಆರು ದಿನಗಳ ನಂತರ ಅವರು ಮತ್ತೆ ಕೆಲಸಕ್ಕೆ ಮರಳಿದ್ದಾರೆ. ತಮ್ಮ ಕ್ಯಾಂಪ್ ಕಚೇರಿಯಿಂದ ಜಿಲ್ಲಾಧಿಕಾರಿಯ ಜವಾಬ್ದಾರಿಗಳನ್ನು ನಿರ್ವಹಿಸಲು ಪ್ರಾರಂಭಿಸಿದರು. 2017ರ ಬ್ಯಾಚ್ನ IAS ಅಧಿಕಾರಿಯಾಗಿರುವ ಇವರು ತಮ್ಮ ಉತ್ತರಾಧಿಕಾರಿ ಚೆಲ್ಸಾಸಿನಿ ವಿ. ಅವರಿಗೆ ಬುಧವಾರ ಅಧಿಕಾರ ಹಸ್ತಾಂತರಿಸಿದ ಬಳಿಕ ಅಂತಿಮವಾಗಿ ಎರಡು ತಿಂಗಳ ಮಾತೃತ್ವ ರಜೆಯ ಮೇಲೆ ತೆರಳಲಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೇಘಶ್ರೀ ತಮ್ಮ ನವಜಾತ ಶಿಶು ಸೇರಿದಂತೆ ಮೂವರು ಹೆಣ್ಣು ಮಕ್ಕಳ ಜೊತೆಗೆ ಬೀಳ್ಕೊಡುಗೆ ಸಮಾರಂಭಕ್ಕೆ ಹಾಜರಿದ್ದರು. ಕರ್ತವ್ಯನಿಷ್ಠೆಗೆ ಎಲ್ಲೆಡೆ ಪ್ರಶಂಸೆಗೆ ಪಾತ್ರರಾಗಿದ್ದರೂ, ಮೇಘಶ್ರೀ ಕಚೇರಿಗೆ ಆಗಮಿಸಿರುವುದು ದೊಡ್ಡ ವಿಷಯವೆಂದು ಹೇಳಲು ಬಯಸುವುದಿಲ್ಲ.
“ಹೆರಿಗೆಯ ನಂತರವೂ ಜಿಲ್ಲಾಧಿಕಾರಿಯ ಕರ್ತವ್ಯ ನಿರ್ವಹಿಸುವುದನ್ನು ಮುಂದುವರಿಸುವ ನಿರ್ಧಾರ ವೈಯಕ್ತಿಕವಾಗಿತ್ತು. ಮಾತೃತ್ವ ರಜೆ ತೆಗೆದುಕೊಳ್ಳಲೇಬೇಕೆಂಬ ಕಡ್ಡಾಯ ನಿಯಮವೇನೂ ಇಲ್ಲ. ವ್ಯಕ್ತಿ, ಆರೋಗ್ಯ ಮತ್ತು ಸಂದರ್ಭವನ್ನು ಅವಲಂಬಿಸಿ ನಿರ್ಧಾರ ಕೈಗೊಳ್ಳಬಹುದು” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
ಮೂರನೇ ಬಾರಿಗೆ ತಾಯಿಯಾದ ನಂತರದ ತಮ್ಮ ಅನುಭವ ವಿವರಿಸಿದ ಅವರು, “ಆಗಸ್ಟ್ 25ರಂದು ಹೆರಿಗೆಯಾದ ನಂತರ ಐದು ದಿನಗಳ ಕಾಲ ವಿಶ್ರಾಂತಿ ಪಡೆದಿದ್ದೇನೆ. ಸೆಪ್ಟೆಂಬರ್ 1ರಿಂದ ಜಿಲ್ಲಾಧಿಕಾರಿ ಕ್ಯಾಂಪ್ ಕಚೇರಿಯಿಂದ ಕೆಲಸ ಮಾಡಲು ಪ್ರಾರಂಭಿಸಿದೆ. ಜಿಲ್ಲಾಧಿಕಾರಿಯ ಅನುಮೋದನೆಯ ಅಗತ್ಯವಿರುವ ಅನೇಕ ಕಡತಗಳು ಬಾಕಿ ಇದ್ದವು” ಎಂದು ಹೇಳಿದರು.
ಕಚೇರಿಗೆ ಆಗಮಿಸಿರುವುದಲ್ಲದೆ, ತಾವು ನಿಯಮಿತವಾಗಿ ನಡೆಸುತ್ತಿದ್ದ ‘ಗುಡ್ ಮಾರ್ನಿಂಗ್ ಕಲೆಕ್ಟರ್’ ಕಾರ್ಯಕ್ರಮದ ಭಾಗವಾಗಿ ಕಾಲೇಜು ವಿದ್ಯಾರ್ಥಿಗಳ ಜೊತೆಗಿನ ಆನ್ಲೈನ್ ಸಂವಾದವನ್ನೂ ನಡೆಸಿದರು. ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯವಾಗಿರುವ ಮೇಘಶ್ರೀ ಸ್ವತಃ, “IAS ಅಧಿಕಾರಿ, ಪತ್ನಿ, ತಾಯಿ ಮತ್ತು ಜೀವನದ ಸರಳ ಸಂತೋಷಗಳಲ್ಲಿ ಖುಷಿ ಕಾಣುವ ಹೆಮ್ಮೆಯ ಮಗಳು” ಎಂದು ಪರಿಚಯಿಸಿಕೊಳ್ಳುತ್ತಾರೆ.
ಸೆಪ್ಟೆಂಬರ್ 5ರಂದು ಅವರು ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಅವರು ರ್ಯಾ ಪಿಡ್ ಫೈರ್ ಪ್ರಶ್ನೆಗಳಿಗೆ ಉತ್ತರಿಸುವ ದೃಶ್ಯಗಳಿದ್ದವು. ಸುರಂಗ ಮಾರ್ಗ, ಪ್ರವಾಸೋದ್ಯಮ ಮತ್ತು ಬುಡಕಟ್ಟು ಸಬಲೀಕರಣದಲ್ಲಿ ವಯನಾಡ್ ಜಿಲ್ಲೆಗೆ ಅತಿದೊಡ್ಡ ಬದಲಾವಣೆ ತರುವ ಅಂಶ ಯಾವುದು ಎನ್ನುವ ಪ್ರಶ್ನೆಗೆ ಅವರು, “ಒಂದು ರೀತಿಯಲ್ಲಿ ಎಲ್ಲವೂ ಮುಖ್ಯ. ಅಭಿವೃದ್ಧಿ, ಸಬಲೀಕರಣ ಮತ್ತು ಸಂರಕ್ಷಣೆ ಜೊತೆಗೂಡಿ ಸಾಗಬೇಕು” ಎಂದು ಉತ್ತರಿಸಿದ್ದಾರೆ.
ಕರ್ನಾಟಕದ ಚಿತ್ರದುರ್ಗ ಮೂಲದವರಾಗಿರುವ ಮೇಘಶ್ರೀ 2024ರ ಜುಲೈ 10ರಂದು ವಯನಾಡ್ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಜುಲೈ 30ರಂದು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದ ನಂತರ ನಡೆದ ರಕ್ಷಣಾ ಮತ್ತು ಪರಿಹಾರ ಕಾರ್ಯಗಳ ನೇತೃತ್ವ ವಹಿಸಿದ್ದರು. ಅಂದಿನಿಂದಲೂ ಅವರು ಸಂತ್ರಸ್ತರ ಪುನರ್ವಸತಿ ಮತ್ತು ಹೊಸ ವಸತಿ ಸಮುಚ್ಚಯದ ನಿರ್ಮಾಣ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.






