ಕೇರಳದ ವಯನಾಡ್ ಸಂತ್ರಸ್ತರಿಗೆ ರೂ 299 ಕೋಟಿ ವೆಚ್ಚದಲ್ಲಿ ಟೌನ್ಶಿಪ್ ನಿರ್ಮಾಣ

Photo Credit : X \ @pinarayivijayan
ಟೌನ್ಶಿಪ್ನಲ್ಲಿ 410 ಮನೆಗಳು ಬರಲಿದ್ದು, ಸಂತ್ರಸ್ತರಿಗೆ ಗೌರವಯುತ ಜೀವನ ನಡೆಸಲು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒಳಗೊಂಡಿದೆ.
ವಯನಾಡ್ನ ಕಲ್ಪೆಟ್ಟಾದಲ್ಲಿ ಭೂಕುಸಿತದ ದುರಂತದ ಸಂತ್ರಸ್ತರಿಗೆ ಹೊಸ ಜೀವನದ ಭರವಸೆ ದೊರೆತಿದೆ. ಪುನರ್ವಸತಿ ಯೋಜನೆಯಡಿ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಮೊದಲನೇ ಹಂತವಾಗಿ ಮಾರ್ಚ್ 1ರಂದು ರವಿವಾರ 178 ಮನೆಗಳನ್ನು ಸರ್ಕಾರ ಹಸ್ತಾಂತರಿಸಿದೆ.
2024ರ ಜುಲೈ 30ರಂದು ವಯನಾಡ್ನ ಮೇಪ್ಪಾಡಿ ಪಂಚಾಯತ್ನ ಮುಂಡಕ್ಕೈ ಮತ್ತು ಚೂರಲ್ಮಲ ಪ್ರದೇಶದಲ್ಲಿ ಭೂಕುಸಿತ ಸಂಭವಿದ್ದರಿಂದ 350ಕ್ಕೂ ಅಧಿಕ ಮನೆಗಳು ಕೊಚ್ಚಿ ಹೋಗಿದ್ದವು. ಸಂತ್ರಸ್ತ ಕುಟುಂಬಗಳಿಗೆ ಕಲ್ಪೆಟ್ಟ ಬೈಪಾಸ್ ಬಳಿಯ ಎಲ್ಸ್ಟನ್ ಎಸ್ಟೇಟ್ ಪ್ರದೇಶದಲ್ಲಿ ‘ಟೌನ್ಶಿಪ್’ ನಿರ್ಮಿಸಲಾಗುತ್ತಿದೆ.
64.4 ಎಕರೆ ಪ್ರದೇಶದಲ್ಲಿ 351 ಕೋಟಿ ರೂ. ವೆಚ್ಚದಲ್ಲಿ 400ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗುತ್ತಿದೆ. ಮಾರ್ಚ್ 1ರಂದು 178 ಮನೆಗಳನ್ನು ಹಸ್ತಾಂತರಿಸಲಾಗಿದ್ದು, ಶೀಘ್ರವೇ ಉಳಿದ ಮನೆಗಳು ಸಿದ್ಧವಾಗಲಿವೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
A historic moment for Kerala as we fulfil our promise to Wayanad. Tomorrow, we dedicate Phase I of the world-class township, providing 178 families with a new beginning after the Mundakkai-Chooralmala landslides. This is a testament to our unity and unwavering resolve to rebuild.… pic.twitter.com/oFxUp6byk7
— Pinarayi Vijayan (@pinarayivijayan) February 28, 2026
ವಯನಾಡ್ನ ಪ್ರದೇಶ ಮತ್ತು ವಾತಾವರಣವನ್ನು ಗಮನದಲ್ಲಿರಿಸಿ ಟೌನ್ಶಿಪ್ ನಿರ್ಮಾಣ ಮಾಡಲಾಗಿದೆ. ಪ್ರತಿಯೊಂದು ಮನೆಯೂ 1000 ಚದರ ಅಡಿಗಳಿವೆ. ಮಾಲೀಕರು ಅಗತ್ಯವಿದ್ದಲ್ಲಿ ಇನ್ನೊಂದು ಮಹಡಿಯನ್ನು ನಿರ್ಮಿಸಲು ಸಾಧ್ಯವಾಗುವಂತೆ ಅಡಿಪಾಯ ಹಾಕಿ ಮನೆಗಳನ್ನು ನಿರ್ಮಿಸಲಾಗಿದೆ. ಪ್ರತಿ ಮನೆಗಳಲ್ಲಿ ಒಂದು ಮಾಸ್ಟರ್ ಸಹಿತ 3 ಬೆಡ್ರೂಂಗಳು, ಒಂದು ಹಾಲ್, ಅಡುಗೆ ಕೋಣೆ ಅದಕ್ಕೆ ಹೊಂದಿಕೊಂಡಂತೆ ಸ್ಟೋರ್ ರೂಂ, ಶೌಚಾಲಯ, ಸಿಟ್ಔಟ್ ಒಳಗೊಂಡಿದೆ.
ಪ್ರತಿ ಮನೆಯಲ್ಲಿ ಹಾಸಿಗೆಗಳು, ಕಬೋರ್ಡ್ಗಳು, ಡೈನಿಂಗ್ ಟೇಬಲ್, ಕುರ್ಚಿಗಳು, ಎಲ್ಇಡಿ ಲೈಟಿಂಗ್ ಮತ್ತು ಇಂಧನ ದಕ್ಷತೆಯ ಬಿಎಲ್ಡಿಸಿ ಸೀಲಿಂಗ್ ಫ್ಯಾನ್ಗಳಿವೆ. ಅಲ್ಲದೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಡಿವೈಎಫ್ಐನಿಂದ ಎಲ್ಇಡಿ ಟಿವಿಗಳನ್ನು ವಿತರಿಸಲಾಗಿದೆ.
ಈ ಟೌನ್ಶಿಪ್ನಲ್ಲಿ 410 ಮನೆಗಳು ಬರಲಿದ್ದು, ಸಂತ್ರಸ್ತರಿಗೆ ಗೌರವಯುತ ಜೀವನ ನಡೆಸಲು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒಳಗೊಂಡಿರುತ್ತವೆ ಎಂದು ಅವರು ತಿಳಿಸಿದ್ದಾರೆ.
ಮೊದಲ ಹಂತದಲ್ಲಿ 178 ಮನೆಗಳ ಹಸ್ತಾಂತರ
ಮೊದಲ ಹಂತದಲ್ಲಿ 178 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಅವುಗಳ ಹಂಚಿಕೆ ಮಾಡಲಾಗಿದೆ. ಪ್ರತಿ ಮನೆಯು 1000 ಚದರ ಅಡಿ ವಿಸ್ತೀರ್ಣ ಹೊಂದಿದ್ದು, 7 ಸೆಂಟ್ ಜಮೀನಿನಲ್ಲಿ ನಿರ್ಮಿಸಲಾಗಿದೆ. ಈ ಮನೆ ಮತ್ತು ಜಮೀನಿನ ಮಾಲಕತ್ವವನ್ನು ಫಲಾನುಭವಿಗಳಿಗೆ ನೀಡಲಾಗಿದೆ.
ಪ್ರತಿ ಮನೆಯ ಮೇಲ್ಛಾವಣಿಯಲ್ಲಿ ನೆಟ್ ಮೀಟರಿಂಗ್ ವ್ಯವಸ್ಥೆಯಡಿ 2 ಕಿಲೋವ್ಯಾಟ್ ಸೌರ ವಿದ್ಯುತ್ ಘಟಕವನ್ನು ಅಳವಡಿಸಲಾಗಿರುವುದರಿಂದ ವಿದ್ಯುತ್ ವೆಚ್ಚ ಕಡಿಮೆಯಾಗಲಿದೆ. ಎರಡನೇ ಹಂತದ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಇದರೊಂದಿಗೆ ಒಟ್ಟು 410 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಜತೆಗೆ ಮೂಲಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
ದುರಂತದ ನಂತರದ ಸೌಲಭ್ಯ
ದುರಂತದಲ್ಲಿ 298 ಮಂದಿ ಮೃತಪಟ್ಟಿದ್ದಾರೆ. 59 ಮನೆಗಳು ಸಂಪೂರ್ಣವಾಗಿ ನಾಶವಾಗಿತ್ತು. ಉಳಿದ ನೂರಾರು ಮನೆಗಳು ನೆಲೆಸಲು ಯೋಗ್ಯವಿಲ್ಲದ ಸ್ಥಿತಿಗೆ ಬಂದು ತಲುಪಿತ್ತು. ತಕ್ಷಣವೇ ಸರ್ಕಾರ ಕ್ರಮ ಕೈಗೊಂಡು 728 ಕುಟುಂಬದ 2569 ಮಂದಿಯನ್ನು 17 ಪರಿಹಾರ ಶಿಬಿರಗಳಲ್ಲಿ ನೆಲೆಸಲು ಅನುಕೂಲ ಮಾಡಿಕೊಟ್ಟಿತ್ತು. ಸುದೀರ್ಘಕಾಲದ ಶಿಬಿರದ ಜೀವನವನ್ನು ಪರಿಗಣಿಸಿ ಸರ್ಕಾರ ಟೌನ್ಶಿಪ್ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಂಡಿತ್ತು. ದುರಂತದ ನಂತರ 752 ಕುಟುಂಬದ ಒಬ್ಬ ಸದಸ್ಯರಿಗೆ ಮಾಸಿಕ 9000 ರೂ. ಮತ್ತು 507 ಕುಟುಂಬಗಳಿಗೆ ಮಾಸಿಕ 18,000 ರೂ.ಗಳನ್ನು ಜೀವನೋಪಾಯದ ಅನುದಾನವಾಗಿ ನೀಡಲಾಗಿದೆ. ಇಬ್ಬರೂ ಪೋಷಕರನ್ನು ಕಳೆದುಕೊಂಡಿರುವ 21 ಮಕ್ಕಳಿಗೆ 2.10 ಕೋಟಿ ರೂ. ಸಹಾಯ ನೀಡಲಾಗಿದೆ. 858 ಕುಟುಂಬಗಳಿಗೆ ಈಗಲೂ ಮಾಸಿಕ ಆಹಾರದ ಕೂಪನ್ ಆಗಿ 1000 ರೂ.ಗಳನ್ನು ನೀಡಲಾಗುತ್ತಿದೆ.
ಹಣಕಾಸಿನ ನೆರವು ಮತ್ತು ಕಾನೂನು ಭದ್ರತೆ
• 555 ಸಂತ್ರಸ್ತ ಕುಟುಂಬಗಳ 18.75 ಕೋಟಿ ರೂ. ಬ್ಯಾಂಕ್ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಿದೆ.
• ಹೊಸ ಮನೆಗೆ ಸ್ಥಳಾಂತರಕ್ಕೆ ಮೊದಲು, ಸಂತ್ರಸ್ತ ಕುಟುಂಬಗಳಿಗೆ ಮಾಸಿಕ ಬಾಡಿಗೆ ವೆಚ್ಚಕ್ಕಾಗಿ 6000 ರೂ. ಮತ್ತು ಜೀವನ ನಿರ್ವಹಣೆಗಾಗಿ 18,000 ರೂ., 1 ಸಾವಿರ ರೂ. ಮೌಲ್ಯದ ಫುಡ್ ಕೂಪನ್ ನೀಡಲಾಗುತ್ತಿತ್ತು.
• ನಿವಾಸಿಗಳು ವಾಸ್ತವ್ಯ ಆರಂಭಿಸಿದ ದಿನಾಂಕದಿಂದ ಮೂರು ತಿಂಗಳು ಕಾಲ ವಿದ್ಯುತ್ ಮತ್ತು ನೀರಿನ ಬಿಲ್ಗಳಿಂದ ವಿನಾಯಿತಿ ನೀಡಲಾಗಿದೆ.
• ದುರಂತದ ಸಮಯದಲ್ಲಿ ದಾಖಲೆ ನಾಶವಾಗಿರುವುದರಿಂದ ಅವುಗಳ (ದಾಖಲೆಗಳ) ಮರು ವಿತರಣಾ ಶುಲ್ಕವನ್ನು ಮನ್ನಾ ಮಾಡಲಾಗಿದೆ.
• ಫಲಾನುಭವಿಗಳಿಗೆ ಆಧಾರ್ ಕಾರ್ಡ್ಗಳು, ರೇಷನ್ ಕಾರ್ಡ್ಗಳು, ಮತದಾರರ ಚೀಟಿಗಳು ಮತ್ತು ಶೈಕ್ಷಣಿಕ ಪ್ರಮಾಣಪತ್ರಗಳನ್ನು ಮರು ವಿತರಿಸಲಾಗಿದೆ. ಪ್ರತಿ ಕುಟುಂಭಕ್ಕೂ ಪಟ್ಟಾ (ಭೂ ದಾಖಲೆ) ಹಸ್ತಾಂತರಿಸಲಾಗಿದೆ. ಇದಕ್ಕೆ ತಗಲುವ ವೆಚ್ಚವನ್ನು ಸರ್ಕಾರವೇ ಭರಿಸಿದೆ.






