ಪಶ್ಚಿಮ ಬಂಗಾಳ ಎಸ್ಐಆರ್ | ಸುಪ್ರೀಂ ಕೋರ್ಟ್ನ ದಾರಿ ತಪ್ಪಿಸಿದ ಚುನಾವಣಾ ಆಯೋಗ: ವರದಿ

PC: PTI
ಪಶ್ಚಿಮ ಬಂಗಾಳದಲ್ಲಿನ ಎಸ್ಐಆರ್ ಪ್ರಕ್ರಿಯೆ ನಿಜಕ್ಕೂ ಗೊಂದಲದ ಗೂಡಾಗಿರುವ ಮಧ್ಯೆ ತಾರ್ಕಿಕ ವ್ಯತ್ಯಾಸ ಎಂಬ ನೆಪದಲ್ಲಿ ಕೋಟ್ಯಂತರ ಜನರಿಗೆ ನೀಡಲಾಗಿರುವ ನೋಟಿಸ್ ಸಂಬಂಧ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ನ ಹಾದಿ ತಪ್ಪಿಸಿದೆ ಎಂದು reporters-collective.in ವರದಿ ಹೇಳಿದೆ.
ಒಂದೂವರೆ ಕೊಟಿ ಮತದಾರರಿಗೆ ತಾರ್ಕಿಕ ವ್ಯತ್ಯಾಸ ಎಂಬ ನೆಪದಲ್ಲಿ ನೀಡಿರುವ ನೋಟಿಸ್ಗಳು ಸ್ವಯಂಚಾಲಿತವಲ್ಲ ಎಂದು ನ್ಯಾಯಾಲಯದೆದುರು ಆಯೋಗ ಹೇಳಿದ್ದರೂ, ದೋಷಪೂರಿತ ಮತ್ತು ಸರಿಯಾಗಿ ಪರಿಶೀಲಿಸದ ಪ್ರಕ್ರಿಯೆ ಮೂಲಕ ನೋಟಿಸ್ ಕಳುಹಿಸಲಾಗಿದೆ. ಅಸೆಂಬ್ಲಿ ಮಟ್ಟದ ಅಧಿಕಾರಿಗಳು ಪ್ರತಿಯೊಂದು ಪ್ರಕರಣವನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರವೇ ಪೌರತ್ವ, ಗುರುತು, ಮತದಾನದ ಹಕ್ಕುಗಳನ್ನು ಸಾಬೀತುಪಡಿಸಲು ನೋಟಿಸ್ಗಳನ್ನು ಕಳುಹಿಸಲಾಗಿದೆ ಎಂದು ಆಯೋಗ ಹೇಳಿಕೊಂಡಿದೆ. ಆದರೆ, ಅವುಗಳು ಯಾಂತ್ರೀಕೃತವಾಗಿ ಕಳಿಸಿದ ನೋಟಿಸ್ಗಳಾಗಿವೆ ಎಂದು ಆಯುಷಿ ಕರ್ ಅವರ ತನಿಖಾ ವರದಿ ಬಹಿರಂಗಪಡಿಸಿದೆ.
ಚುನಾವಣಾ ಆಯೋಗ ಕೇಂದ್ರೀಕೃತ, ದೋಷಪೂರಿತ ಕ್ರಮ ಅನುಸರಿಸಿರುವುದರಿಂದ ಮತ್ತು ನಿಯಮಿತವಾಗಿ ಪರಿಷ್ಕರಿಸದೇ ಇರುವ ಸಾಫ್ಟ್ವೇರ್ ಅನ್ನು ಬಳಸಿರುವುದರಿಂದ ಪಶ್ಚಿಮ ಬಂಗಾಳದ ಅಧಿಕಾರಿಗಳು 20 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ 1.5 ಕೋಟಿ ಮತದಾರರ ಪೌರತ್ವ, ಗುರುತು ಮತ್ತು ಮತದಾನದ ಹಕ್ಕುಗಳನ್ನು ನಿರ್ಧರಿಸಲು ಬೇಕಾಬಿಟ್ಟಿ ವಿಚಾರಣೆ ನಡೆಸುವ ಒತ್ತಡಕ್ಕೆ ಸಿಲುಕಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಆಯೋಗದ ಅಧಿಕೃತ ದಾಖಲೆಗಳು ಮತ್ತು ಆಂತರಿಕ ಡೇಟಾವನ್ನು ಪರಿಶೀಲಿಸಿದ್ದಲ್ಲದೆ, ಅದರ ಸಾಫ್ಟ್ವೇರ್ ಅಪ್ಲಿಕೇಶನ್ಗಳ ಕಾರ್ಯನಿರ್ವಹಣೆಯನ್ನು ಗಮನಿಸಿದ ನಂತರ ರಿಪೋರ್ಟರ್ಸ್ ಕಲೆಕ್ಟಿವ್ ಈ ಸತ್ಯವನ್ನು ಕಂಡುಕೊಂಡಿದೆ.
ಐದು ವಿಧಾನಸಭಾ ಮಟ್ಟದ ಚುನಾವಣಾಧಿಕಾರಿಗಳು, ಆಯೋಗದ ರಾಜ್ಯ ಕಚೇರಿಯ ಮೂಲ ಮತ್ತು ಹಲವಾರು ಬೂತ್ ಮಟ್ಟದ ಅಧಿಕಾರಿಗಳನ್ನು ಮಾತನಾಡಿಸಿರುವುದಾಗಿ ವರದಿ ಹೆಳಿದೆ. ಚುನಾವಣಾ ನೋಂದಣಿ ಅಧಿಕಾರಿಗಳು (ಇಆರ್ಒ) ಎಲ್ಲವನ್ನೂ ಪರಿಶೀಲಿಸಿ ಸಹಿ ಮಾಡಿ ನೋಟಿಸ್ ಕಳಿಸಿದ್ದಾರೆ ಎಂಬುದು ಸತ್ಯಕ್ಕೆ ದೂರವಾದುದಾಗಿದೆ ಎಂದು ಕಂಡುಕೊಂಡಿದ್ದಾಗಿ ವರದಿ ಹೇಳಿದೆ.
ಇಆರ್ಒಗಳು ಕ್ಷೇತ್ರ ಮಟ್ಟದ ಅಧಿಕಾರಿಗಳಾಗಿದ್ದು, ವಿಧಾನಸಭಾ ಕ್ಷೇತ್ರಕ್ಕೆ ಮತದಾರರ ಪಟ್ಟಿ ಸಿದ್ಧಪಡಿಸುವ, ನವೀಕರಿಸುವ ಮತ್ತು ಪರಿಷ್ಕರಿಸುವ ಅಧಿಕಾರ ಮತ್ತು ಹೊಣೆ ಅವರದ್ದಾಗಿದೆ. ನಿಯಮಗಳ ಆಧಾರದ ಮೇಲೆ ಮತದಾರರ ಪಟ್ಟಿಗಳನ್ನು ಅಂತಿಮಗೊಳಿಸುವ ಅಧಿಕಾರ ಇಆರ್ಒಗಳದ್ದಾಗಿದೆ.
ಸುಪ್ರೀಂ ಕೋರ್ಟ್ನ ಮುಂದೆ ಆಯೋಗ ಹೇಳಿರುವುದೇ ಬೇರೆ. ಆದರೆ ಅದಕ್ಕೆ ವಿರುದ್ಧವಾಗಿ, ಪಶ್ಚಿಮ ಬಂಗಾಳದಲ್ಲಿ ಕೇಂದ್ರೀಕೃತ ಮತ್ತು ಪರೀಕ್ಷಿಸದ ಕ್ರಮದ ಮೂಲಕ ತಾರ್ಕಿಕ ವ್ಯತ್ಯಾಸ ಎಂಬ ನೆಪದಲ್ಲಿ ನೋಟಿಸ್ಗಳನ್ನು ಸಾಮೂಹಿಕವಾಗಿ ರಚಿಸಲಾಗಿದೆ ಎಂಬುದನ್ನು ಕಂಡುಕೊಂಡಿರುವುದಾಗಿ ವರದಿ ಹೇಳಿದೆ.
ಪ್ರತಿದಿನ ಸಾವಿರಾರು ಪ್ರಕರಣಗಳನ್ನು ಪರಿಶೀಲಿಸಬೇಕಾದ ಒತ್ತಡದ ಹಿನ್ನೆಲೆಯಲ್ಲಿ ಇಆರ್ಒಗಳು ಆಯೋಗದ ಅನುಮಾನಾಸ್ಪದ ಸಾಫ್ಟ್ ವೇರ್ ಮೂಲಕ ನೋಟಿಸ್ ರಚಿಸಿದ್ದಾರೆ. ಆಯೋಗ 2002ರ ಮತದಾರರ ಪಟ್ಟಿಗಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿತು. ಹೆಚ್ಚಿನ ದಾಖಲೆಗಳು ಬಾಂಗ್ಲಾ(ಬಂಗಳಿ)ದಲ್ಲಿದ್ದವು. ಅವುಗಳನ್ನು ಪರೀಕ್ಷಿಸದ ಸಾಫ್ಟ್ವೇರ್ ಮೂಲಕ ಇಂಗ್ಲಿಷ್ಗೆ ಅನುವಾದಿಸಲಾಯಿತು. ಇದಾದ ಬಳಿಕ ಸಾಫ್ಟ್ವೇರ್ 1.31 ಕೋಟಿಗೂ ಹೆಚ್ಚು ಮತದಾರರನ್ನು ಅನುಮಾನಾಸ್ಪದ ಎಂದು ಗುರುತಿಸಿದೆ ಎಂದು ವರದಿ ಹೇಳಿದೆ.
ಪರಿಷ್ಕರಣಾ ಕಾರ್ಯದ ಮಧ್ಯದಲ್ಲಿಯೇ ಸಾಫ್ಟ್ವೇರ್ ದೋಷಗಳಿಂದ ತುಂಬಿತ್ತು ಎಂಬುದನ್ನು ಪಶ್ಚಿಮ ಬಂಗಾಳದ ಸಿಇಒ ಕಚೇರಿ ಒಪ್ಪಿಕೊಂಡಿರುವುದಾಗಿ ವರದಿ ಉಲ್ಲೇಖಿಸಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ದೊಷಗಳನ್ನು ಕಂಡುಕೊಂಡ ಬಳಿಕ ಪ್ರತಿಯೊಬ್ಬ ಮತದಾರರ ಪ್ರಕರಣವನ್ನೂ ಅಧಿಕಾರಿಗಳು ಸ್ವತಃ ಪರೀಕ್ಷಿಸುವುದು, ದೋಷಗಳನ್ನು ಬಗೆಹರಿಸುವುದು ಅಸಾಧ್ಯದ ಕೆಲಸವಾಗಿತ್ತು.
ತಪ್ಪಾಗುವ ರಿಸ್ಕ್ ತೆಗೆದುಕೊಳ್ಳಲು ಬಯಸದ ಮತ್ತು ಕಡಿಮೆ ಗಡುವಿನೊಳಗೆ ಕೆಲಸ ಪೂರೈಸುವ ಒತ್ತಡದಲ್ಲಿದ್ದ ಸ್ಥಳೀಯ ಚುನಾವಣಾಧಿಕಾರಿಗಳು ವಿವೇಚನೆ ಕೈಬಿಟ್ಟರು. ಕ್ಷೇತ್ರ ಮಟ್ಟದ ಅಧಿಕಾರಿಗಳು ನೋಟಿಸ್ಗಳನ್ನು ಬೃಹತ್ ಪ್ರಮಾಣದಲ್ಲಿ ಮುದ್ರಿಸಲು ಮತ್ತು ನಂತರ ಸಾಮೂಹಿಕವಾಗಿ ಸಹಿ ಮಾಡಲು ಸಾಫ್ಟ್ವೇರ್ ಬಳಸಿದರು. ಹೀಗಾಗಿ, ಸಣ್ಣ ದೋಷವಿದ್ದರೂ ಅಂಥವರಿಗೂ ತಾರ್ಕಿಕ ವ್ಯತ್ಯಾಸ ಎಂಬ ನೆಪದಲ್ಲಿ ನೋಟಿಸ್ ಹೋಗಿದೆ ಎಂಬುದನ್ನು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ, ಅವರೆಲ್ಲರೂ ವಿಚಾರಣೆಗಾಗಿ ಹಾಜರಾಗಬೇಕಾದ ಅನಿವಾರ್ಯತೆ ಇದೆ. ಇಆರ್ಒಗಳು ಸಣ್ಣ ದೋಷಗಳನ್ನು ಪರಿಶೀಲಿಸುವುದು ಮತ್ತು ಕೈಬಿಡುವುದು ಅಸಾಧ್ಯವಾದ ಕೆಲಸವಾಗಿದೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
1.5 ಕೋಟಿಗೂ ಹೆಚ್ಚು ಸಮನ್ಸ್ಗಳನ್ನು ಸಿದ್ಧಪಡಿಸಲಾಗಿದ್ದರೂ, ಅಧಿಕಾರಿಗಳು ಕೇವಲ 95.39 ಲಕ್ಷ ಮತದಾರರನ್ನು ಮಾತ್ರ ತಲುಪಲು ಸಾಧ್ಯವಾಗಿದೆ ಎಂಬುದನ್ನು ಜನವರಿ 24 ರವರೆಗಿನ ಡೇಟಾ ಹೇಳುತ್ತಿರುವುದಾಗಿ ವರದಿ ಹೇಳಿದೆ.
ಜನವರಿ 24ರ ವೇಳೆಗೆ ಕೇವಲ 30 ಲಕ್ಷ ಮತದಾರರು ವಿಚಾರಣೆಗೆ ಹಾಜರಾಗಿದ್ದಾರೆ. ಒಂದು ತಿಂಗಳ ನಂತರ, ಆಯೋಗ ತನ್ನ ಯೋಜಿತ ವಿಚಾರಣೆಗಳಲ್ಲಿ ಕೇವಲ ಶೇ.20 ಅನ್ನು ಪೂರ್ಣಗೊಳಿಸಿದೆ. ಫೆಬ್ರವರಿ 14ರಂದು ಅಂತಿಮ ಪಟ್ಟಿ ಪ್ರಕಟಿಸುವ ಮೊದಲು ಉಳಿದ ಶೇ.80ರಷ್ಟು, ಅಂದರೆ ಸುಮಾರು 1.2 ಕೋಟಿ ಮತದಾರರ ಪರಿಶೀಲನೆ ನಡೆಸಲು ಮೂರು ವಾರಗಳು ಮಾತ್ರ ಉಳಿದಿವೆ.
ಇಲ್ಲಿಯವರೆಗೆ ಪರಿಶೀಲಿಸಲಾದ ಮತದಾರರ ಸಂಖ್ಯೆ ಶೇ.7.24ರಷ್ಟಿದೆ. ಆರಂಭದಲ್ಲಿ 2002-2004ರ ಪಟ್ಟಿಗೆ ಬಹುಪಾಲು ಮತದಾರರನ್ನು ಡಿಜಿಟಲ್ ಲಿಂಕ್ ಮಾಡಲು ಆಯೋಗ ಆಂತರಿಕ ಮ್ಯಾಪಿಂಗ್ ಸಾಫ್ಟ್ವೇರ್ ಅನ್ನು ಸಿದ್ಧಪಡಿಸುತ್ತಿತ್ತು.
ಈ ಡಿಜಿಟಲ್ ಪರಿಶೀಲನೆಯಲ್ಲಿ ತೇರ್ಗಡೆಯಾದವರು ಎಣಿಕೆಗಾಗಿ ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಾಗಿಲ್ಲ ಎನ್ನಲಾಗಿತ್ತು. ಆದರೆ, ಸರಿಯಾದ ಪರಿಶೀಲನೆಗೆ ಒಳಪಟ್ಟಿರದ ಸಾಫ್ಟ್ವೇರ್ ಕಾರಣದಿಂದಾಗಿ ಕೋಟಿಗಟ್ಟಲೆ ಜನರ ಮತದಾನದ ಹಕ್ಕು ಅತಂತ್ರವಾಗುವ ಸ್ಥಿತಿ ಎದುರಾಗಿದೆ.
ಡಿಸೆಂಬರ್ 16ರಂದು ಪ್ರಕಟವಾದ ಪಶ್ಚಿಮ ಬಂಗಾಳದ ಕರಡು ಮತದಾರರ ಪಟ್ಟಿಗಳ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ 32 ಲಕ್ಷಕ್ಕೂ ಹೆಚ್ಚು ಮತದಾರರು ಮ್ಯಾಪ್ ಮಾಡದವರಾಗಿದ್ದರು. ಅಂದರೆ, ಅವರಾಗಲಿ ಅಥವಾ ಅವರ ಪೂರ್ವಜರಾಗಲಿ 2002ರ ಮತದಾರರ ಪಟ್ಟಿಗಳಲ್ಲಿ ಕಾಣಿಸಿಕೊಂಡಿರಲಿಲ್ಲ ಎಂದು ಆಯೋಗ ಗುರುತಿಸಿತ್ತು. ಆದರೆ, ನಂತರ ಸಾಫ್ಟ್ವೇರ್ ಅನ್ನೇ ದೋಷಪೂರಿತ ಎಂದು ಹೇಳಲಾಯಿತು.
2002ರ ಮತದಾರರ ಪಟ್ಟಿಯ ಡಿಜಟಲೀಕರಣದಲ್ಲಿ ದೋಷಗಳಿವೆ ಎಂದು ಡಿಸೆಂಬರ್ 29ರಂದು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಆಯೋಗದ ಪಶ್ಚಿಮ ಬಂಗಾಳ ಕಚೇರಿ ಒಪ್ಪಿಕೊಂಡಿದ್ದಾಗಿ ವರದಿ ಉಲ್ಲೇಖಿಸಿದೆ. ಪರಿಣಾಮವಾಗಿ, ಮ್ಯಾಪ್ ಮಾಡದ ಮತದಾರರನ್ನು ವೈಯಕ್ತಿಕ ವಿಚಾರಣೆಗೆ ಕರೆಸಲು ಚುನಾವಣಾಧಿಕಾರಿಗಳಿಗೆ ಆಯೋಗ ಅವಕಾಶ ನೀಡಿತು. ಮ್ಯಾಪ್ ಮಾಡದವರು ಎಂದು ಗುರುತಿಸುವ ಮೂಲಕ, ಆಯೋಗ ರಾಜ್ಯದ ಮತದಾರರ ಪಟ್ಟಿಗೆ ಮೋಸದಿಂದ ಸೇರಿಸಲಾದ ಅಕ್ರಮ ವಲಸಿಗರು ಸೇರಿದಂತೆ ಸಂಶಯಾಸ್ಪದ ಮತದಾರರನ್ನು ಗುರುತಿಸುವ ಸಾಧ್ಯತೆ ಇದೆಯಾದರೂ, ಬಂಗಾಳದ ಮತದಾರರಲ್ಲಿ ಕೇವಲ ಶೇ.3 ಮಾತ್ರ ಮ್ಯಾಪ್ ಮಾಡದವರು ಎಂದು ಹೇಳಲಾಗಿದೆ.
ಮ್ಯಾಪ್ ಮಾಡಲಾದ ಮತದಾರರಲ್ಲಿ ತಾರ್ಕಿಕ ವ್ಯತ್ಯಾಸಗಳನ್ನು ಕಂಡುಹಿಡಿಯಲು ಈಗ ಅದೇ ಸಾಫ್ಟ್ವೇರ್ ಅನ್ನು ಬಳಸಲಾಗಿದೆ. 2002 ಮತ್ತು 2025ರ ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ನಡುವೆ ಕಾಗುಣಿತ ವ್ಯತ್ಯಾಸಗಳಿದ್ದರೆ, ಆರು ಅಥವಾ ಹೆಚ್ಚಿನ ಮತದಾರರು ಒಂದೇ ಪೂರ್ವಜರಿಗೆ ಸಂಬಂಧಿಸಿದ್ದರೆ ಅಥವಾ ಮತದಾರರು ಮತ್ತು ಪೂರ್ವಜರ ನಡುವಿನ ವಯಸ್ಸಿನ ವ್ಯತ್ಯಾಸ ಆಯೋಗದ ಮಾನದಂಡಗಳಿಗೆ ಹೊಂದದಿದ್ದರೆ ಅಂಥವರನ್ನು ತಾರ್ಕಿಕ ವ್ಯತ್ಯಾಸದ ಅಡಿಯಲ್ಲಿ ಪಟ್ಟಿ ಮಾಡಲಾಗುತ್ತಿದೆ.
ಈಗ 1.31 ಕೋಟಿ ಮತದಾರರು ಇದರ ಅಡಿಯಲ್ಲಿ ಅತಂತ್ರರಾಗಿದ್ದಾರೆ ಮತ್ತು ಇವುಗಳಲ್ಲಿ ಗಂಭೀರ ವ್ಯತ್ಯಾಸಗಳಿಗಿಂತ ಸಣ್ಣಪುಟ್ಟ ದೋಷಗಳಿರುವ ಪ್ರಕರಣಗಳು ಹೆಚ್ಚು ಎಂದು ಬಿಎಲ್ಒಗಳು ಒಪ್ಪಿಕೊಂಡಿದ್ದಾಗಿ ವರದಿ ಹೇಳುತ್ತದೆ.
ಇದು ಸಾಮಾನ್ಯವಾಗಿ ಬಾಂಗ್ಲಾದಿಂದ ಇಂಗ್ಲಿಷ್ಗೆ ಮತದಾರರ ಪಟ್ಟಿಯನ್ನು ಸಾಫ್ಟ್ವೇರ್ ಮೂಲಕ ಬದಲಿಸಿರುವಲ್ಲಿ ಆಗಿರುವ ದೋಷ ಎನ್ನಲಾಗಿದೆ. ಈ ನಡುವೆ, ತಾರ್ಕಿಕ ವ್ಯತ್ಯಾಸಗಳ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಟಿಎಂಸಿ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯಿಸಿರುವ ಆಯೋಗ, ಇಆರ್ಒಗಳು ವಿವೇಚನೆ ಬಳಸಿ ನೋಟಿಸ್ ನೀಡಿದ್ದಾಗಿ ಹೇಳಿದೆ.
ಆದರೆ ವಾಸ್ತವದಲ್ಲಿ ಸೀಮಿತ ಅವಧಿಯಲ್ಲಿ ಇಷ್ಟೊಂದು ನೋಟಿಸ್ ನೀಡುವುದು ಅಸಾಧ್ಯ ಎಂಬುದು ಟಿಎಂಸಿ ವಾದ. ಸಣ್ಣ ದೋಷಗಳನ್ನು ಆಂತರಿಕವಾಗಿ ಪರಿಹರಿಸಲು ಮತ್ತು ಅವರನ್ನು ವಿಚಾರಣೆಗೆ ಕರೆಯದಿರಲು ಸೂಚಿಸಲಾಗಿದೆ ಎಂದು ಆಯೋಗದ ಅಧಿಕಾರಿಗಳು ಹೇಳುತ್ತಿದ್ದರೂ, ವಾಸ್ತವದಲ್ಲಿ ಹಾಗಾಗಿಲ್ಲ. ತಾರ್ಕಿಕ ವ್ಯತ್ಯಾಸ ಎನ್ನಲಾಗಿರುವ ಎಲ್ಲರಿಗೂ ನೋಟಿಸ್ ನೀಡಲಾಗಿದೆ. ಒಂದೇ ಅಕ್ಷರ ವ್ಯತ್ಯಾಸವಾಗಿದ್ದರೂ, ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲ ಎಂದು ಬಿಎಲ್ಒಗಳು ಹೇಳಿರುವುದನ್ನು ವರದಿ ಉಲ್ಲೆಖಿಸಿದೆ.
ಈ ಪರಿಸ್ಥಿತಿ ಈಗ ಪಶ್ಚಿಮ ಬಂಗಾಳದ 1.5 ಕೋಟಿ ಜನರು ತಮ್ಮ ಅಸ್ತಿತ್ವ ಮತ್ತು ಮತದಾನದ ಹಕ್ಕುಗಳನ್ನು ಸಾಬೀತುಪಡಿಸಲು ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ. ಈ ವಿಷಯದಲ್ಲಿ ಆಯೋಗ ಸುಪ್ರೀಂ ಕೋರ್ಟ್ ಅನ್ನು ಹಾದಿ ತಪ್ಪಿಸಿರುವುದು ಸ್ಪಷ್ಟ ಎಂದು ವರದಿ ಹೇಳಿದೆ.







