ಪಶ್ಚಿಮಘಟ್ಟಗಳಲ್ಲಿ ಹೊಸ ಡ್ಯಾಮ್ಸೆಲ್ ಫ್ಲೈ ಪತ್ತೆ

ಸುಮಾರು ನೂರು ವರ್ಷಗಳ ಹಿಂದೆ, ಪ್ರಸಿದ್ಧ ಓಡೊನೇಟಾಲಜಿಸ್ಟ್ ಎಫ್.ಸಿ.ಫ್ರೇಸರ್, ಪಶ್ಚಿಮ ಘಟ್ಟಗಳ ಸಮೀಕ್ಷೆಯ ವೇಳೆ, ಇದೇ ಸಂಪಾಜೆ ಪ್ರದೇಶಕ್ಕೆ ಭೇಟಿ ನೀಡಿದ್ದರು. ಅವರು ಅಪಾರ ಪ್ರಮಾಣದ ಜೀವ ಸಂಕುಲಗಳನ್ನು ಪತ್ತೆ ಹಚ್ಚಿದರೂ ಅವರಿಗೆ ಈ ಪ್ರಭೇದ ಡ್ಯಾಮ್ಸೆಲ್ ಫ್ಲೈ ಅವರ ಗಮನಕ್ಕೆ ಬಂದಿರಲಿಲ್ಲ.
ಹಿಂದಿನ ಸಂಶೋಧಕರು ಆಧುನಿಕ ಪರಿಕರಗಳ ಸೌಕರ್ಯವಿಲ್ಲದೆ, ಅವರ ಮಿತಿಯಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಹೈ-ರೆಸಲ್ಯೂಶನ್ ಸ್ಟೀರಿಯೋ ಮೈಕ್ರೋಸ್ಕೋಪಿ ಮತ್ತು ಡಿಎನ್‌ಎ ಸೀಕ್ವೆನ್ಸಿಂಗ್‌ನಂತಹ ಆಧುನಿಕ ಸಾಧನಗಳು ಫ್ರೇಸರ್‌ನಂತಹ ದಿಗ್ಗಜರು ಗುರುತಿಸಲಾಗದಿದ್ದ ಪ್ರಭೇದಗಳನ್ನು ಪತ್ತೆ ಹಚ್ಚಲು ಸಹಾಯ ಮಾಡಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಉಡುಪಿ: ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಂಡುಬರುವ ಡ್ರಾಗನ್ ಫ್ಲೈ(ಏರೋಪ್ಲೇನ್ ಚಿಟ್ಟೆ) ಹಾಗೂ ಡ್ಯಾಮ್ಸೆಲ್ ಫ್ಲೈಗಳನ್ನು ಒಟ್ಟಾಗಿ ‘ಓಡೋನೆಟ’ಗಳು ಎಂಬುದಾಗಿ ಕರೆಯಲಾಗುತ್ತದೆ. ಇವುಗಳನ್ನು ಅಧ್ಯಯನ ಮಾಡುವವರು ಓಡೊನೇಟಾಲಜಿಸ್ಟ್ ಗಳು. ಭಾರತದ ಓಡೊನೇಟಾಲಜಿಸ್ಟ್‌ಗಳ ತಂಡವೊಂದು ಇತ್ತೀಚೆಗೆ ಪಶ್ಚಿಮ ಘಟ್ಟದಲ್ಲಿ ಹೊಸ ಡ್ಯಾಮ್ಸೆಲ್ ಫ್ಲೈ ಪ್ರಭೇದವನ್ನು ಪತ್ತೆ ಹಚ್ಚಿದೆ.
ಪಶ್ಚಿಮಘಟ್ಟ ಇಡೀ ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ಜೀವ ವೈವಿಧ್ಯವನ್ನು ಹೊಂದಿರುವ ಅತೀ ಸೂಕ್ಷ್ಮ ತಾಣವಾಗಿದೆ. ಅದರಲ್ಲೂ ಕರ್ನಾಟಕದ ಪಶ್ಚಿಮ ಘಟ್ಟಗಳು ಅನೇಕ ಪ್ರಭೇದಗಳ ಹಾಟ್‌ಸ್ಪಾಟ್. ಮಳೆಕಾಡು ಆಗುಂಬೆ ಅತ್ಯಮೂಲ್ಯ ಜೀವವೈವಿಧ್ಯದ ಆಗರವಾಗಿದೆ. ಕೆಲವೊಂದು ಪ್ರಭೇಧಗಳು ಪಶ್ಚಿಮಘಟ್ಟಗಳಲ್ಲಿ ಬಿಟ್ಟರೆ ಜಗತ್ತಿನ ಬೇರೆ ಯಾವ ಪ್ರದೇಶದಲ್ಲೂ ಕಂಡುಬರುವುದಿಲ್ಲ. ಅಂತಹ ಅತೀ ಅಪರೂಪದ ಪ್ರಭೇದಗಳ ಸಾಲಿಗೆ ಈಗ ಹೊಸ ಡ್ಯಾಮ್ಸೆಲ್ ಫ್ಲೈ ಸೇರ್ಪಡೆಗೊಂಡಿದೆ.
ಪ್ರೊಟೊಸ್ಟಿಕ್ಟಾ ಸೂರ್ಯಪ್ರಕಾಶಿ :
ದ.ಕ. ಹಾಗೂ ಕೊಡಗು ಜಿಲ್ಲೆಯ ಗಡಿ ಪ್ರದೇಶವಾಗಿರುವ ಸಂಪಾಜೆ ಮತ್ತು ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಯ ಗಡಿ ಪ್ರದೇಶವಾಗಿರುವ ಆಗುಂಬೆಯ ಪಶ್ಚಿಮ ಘಟ್ಟಗಳ ನಿರ್ದಿಷ್ಟ ಪ್ರದೇಶದಲ್ಲಿ ಈ ಹೊಸ ಪ್ರಭೇದದ ಚಿಟ್ಟೆ ಕಂಡುಬಂದಿದೆ. ಇದಕ್ಕೆ ಸಂಶೋ ಧನಾಕಾರರು ಪ್ರೊಟೊಸ್ಟಿಕ್ಟಾ ಸೂರ್ಯಪ್ರಕಾಶಿ (Protosticta sooryaprakashi) ಎಂದು ಹೆಸರು ಇಟ್ಟಿದ್ದಾರೆ. ಇತ್ತೀಚೆಗೆ ನಿಧನರಾದ ಮಂಗಳೂರಿನ ಸಸ್ಯಶಾಸ್ತ್ರಜ್ಞ ಮತ್ತು ವನ್ಯಜೀವಿ ಸಂರಕ್ಷಣಾ ತಜ್ಞ ಡಾ.ಸೂರ್ಯಪ್ರಕಾಶ್ ಶೆಣೈಯವರ ಹೆಸರನ್ನೇ ಈ ಹೊಸ ಪ್ರಭೇದಕ್ಕೆ ಇಡಲಾಗಿದೆ. ಮಂಗಳೂರಿನ ಪಿಲಿಕುಳದಲ್ಲಿ ಸಸ್ಯಗಳ ಸಂಗ್ರಹಾಲಯ ಸ್ಥಾಪನೆಯಲ್ಲಿ ಡಾ.ಶೆಣೈ ಮಹತ್ತರ ಪಾತ್ರ ವಹಿಸಿದ್ದರು. ವನ್ಯಜೀವಿಗಳ ಆವಾಸಸ್ಥಾನಗಳ ಸಂರಕ್ಷಿಸಲು ಶ್ರಮಿಸುವ ವ್ಯಕ್ತಿಗಳ ಪ್ರಯತ್ನಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಡಾ.ಶೆಣೈಯವರ ಹೆಸರು ಇದಕ್ಕೆ ಇಡಲಾಗಿದೆ ಎಂದು ಸಂಶೋಧಕರ ತಂಡ ತಿಳಿಸಿದೆ.
ಇದು ಪಶ್ಚಿಮ ಘಟ್ಟಗಳಲ್ಲಿನ ಅತ್ಯಂತ ಕುತೂಹಲಕಾರಿಯಾದ ಜೀವವರ್ಗಗಳಲ್ಲಿ ಒಂದಾದ ‘ಪ್ರೊಟೊಸ್ಟಿಕ್ಟಾ ಸ್ಯಾಂಗುನಾಸ್ಟಿಗ್ಮಾ’ ಎಂಬ ಜಾತಿಗೆ ಸೇರಿದ್ದಾಗಿದೆ. ಇದು ನೇರೋ ಎಂಡೆಮಿಕ್(ಅತಿ ಸೀಮಿತ ವಿಸ್ತಾರದಲ್ಲೇ ಕಂಡುಬರುವ) ಪ್ರಭೇದವಾಗಿದ್ದು, ಪಶ್ಚಿಮ ಘಟ್ಟಗಳ ಸಣ್ಣ ಭೌಗೋಳಿಕ ವ್ಯಾಪ್ತಿಯಲ್ಲಿ ಮಾತ್ರ ಕಾಣಸಿಗುತ್ತದೆ. ಇದರ ಇಂಗ್ಲಿಷ್ ಹೆಸರು Kodagu Shadowdamsel (ಕೊಡಗು ಶ್ಯಾಡೋಡ್ಯಾಮ್ಸೆಲ್) ಎಂದು ಕರೆಯಲಾಗಿದೆ.
ಕೇರಳ ಕೃಷಿ ವಿಶ್ವವಿದ್ಯಾನಿಲಯದ ವನ್ಯಜೀವಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ವಿವೇಕ್ ಚಂದ್ರನ್, ಬೆಂಗಳೂರಿನ ಇಂಡಿಯನ್ ಫೌಂಡೇಶನ್ ಫಾರ್ ಬಟರ್‌ಫ್ಲೈಸ್ ಸಂಸ್ಥೆಯ ವನ್ಯಜೀವಿ ತಜ್ಞ ಡಾ.ದತ್ತ ಪ್ರಸಾದ್ ಸಾವಂತ್, ಪುಣೆ ಎಂಐಟಿ ವಿಶ್ವಶಾಂತಿ ವಿ.ವಿ.ಯ ವನ್ಯಜೀವಿ ವಿಭಾಗದ ಡಾ.ಪಂಕಜ್ ಕೋಪರ್ಡೆ, ಬೆಂಗಳೂರಿನ ನ್ಯಾಶನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್ ಪ್ರಾಧ್ಯಾಪಕ, ವನ್ಯಜೀವಿ ತಜ್ಞ ಡಾ.ಕೃಷ್ಣಮೇಖ್ ಕುಂಟೆ, ಕಣ್ಣೂರು ಸರಕಾರಿ ಕಾಲೇಜು ವಿಜ್ಞಾನ ಪ್ರಾಧ್ಯಾಪಕರಾದ ಮುಹಮ್ಮದ್ ಹನೀಫ್, ಮೈಮೂನತ್ ಬೀವಿಯವರನ್ನು ಒಳಗೊಂಡ ತಂಡ ಈ ಅಧ್ಯಯನ ನಡೆಸಿದೆ.
ಗಮನ ಸೆಳೆಯುವ ವೈಶಿಷ್ಟ್ಯಗಳು :
ಪ್ರೊಟೊಸ್ಟಿಕ್ಟಾ ಎಂಬುದು ಏಶ್ಯದ ಉಷ್ಣವಲಯದ ಅರಣ್ಯ ಗಳಲ್ಲಿ ಕಂಡುಬರುವ ಮತ್ತು ನೆರಳನ್ನು ಇಷ್ಟ ಪಡುವ ಸಣ್ಣ ಹಾಗೂ ಸೊಗಸಾದ ಡ್ಯಾಮ್ಸೆಲ್ ಫ್ಲೈ ಜಾತಿಯಾಗಿದೆ. ಇದೀಗ ಹೊಸದಾಗಿ ಪತ್ತೆಯಾದ ಪ್ರಭೇದವು ಪ್ರೊಟೊಸ್ಟಿಕ್ಟಾ ಸ್ಯಾಂಗುನಾಸ್ಟಿಗ್ಮಾ ಜಾತಿಯಲ್ಲಿ ಅತ್ಯಂತ ಚಿಕ್ಕ ಸದಸ್ಯ ಆಗಿದೆ.
ಈ ಹೊಸ ಡ್ಯಾಮ್ಸೆಲ್ ಫ್ಲೈ ತನ್ನ ದೇಹದ ಮುಂಭಾಗದ ಭಾಗದಲ್ಲಿ (ಪ್ರೋಥೋರಾಕ್ಸ್) ಇರುವ ನೀಲಿ-ಬಿಳಿ ಗುರುತಿನಿಂದ ಇತರ ಪ್ರಭೇದಗಳಿಂತ ಸ್ಪಷ್ಟವಾಗಿ ಭಿನ್ನವಾಗಿದೆ. ಈ ಗುರುತು ಇದೇ ಜಾತಿಯ ಇತರ ಪ್ರಭೇದಗಳಲ್ಲಿ ಕಾಣಿಸುವುದಿಲ್ಲ. ಅಲ್ಲದೆ ಇದರ ಜನನಾಂಗದ ತುದಿ ಬಾತುಕೋಳಿಯ ತಲೆ ಆಕಾರದಲ್ಲಿರುವುದು ಮತ್ತು ವಿಶಿಷ್ಟವಾದ ಕೌಡಲ್ ಅಪ್ಪೆಂಡೇಜಸ್ (ಹಿಂಬದಿ ಅಂಗಗಳು) ಇರುವುದರಿಂದ ಇದು ಸಮೀಪ ಸಂಬಂಧಿ ಪ್ರಭೇದಗಳಿಂದ ಸ್ಪಷ್ಟವಾಗಿ ಬೇರೆಯೇ ಆಗಿದೆ.
ಈ ಪ್ರಭೇದವು ಯಾವುದೇ ಮೀಸಲು ಅರಣ್ಯದಲ್ಲಿ ಕಂಡು ಬಂದಿಲ್ಲ. ಸಾಮಾನ್ಯ ಅರಣ್ಯ ಭಾಗ, ನದಿ ತೀರದ ಪ್ರದೇಶಗಳಲ್ಲಿ ಪತ್ತೆಯಾಗಿರುವುದು ಮಹತ್ವದ್ದಾಗಿದೆ ಎನ್ನುತ್ತಾರೆ ಸಂಶೋಧಕರು.







