ಪಶ್ಚಿಮ ಘಟ್ಟಗಳ ರಕ್ಷಣೆಗೆ ಕೇಂದ್ರದ ಇಎಸ್ಎ ಯೋಜನೆ: ಕರ್ನಾಟಕ ಸೇರಿದಂತೆ 6 ರಾಜ್ಯಗಳು ಇದನ್ನು ವಿರೋಧಿಸುತ್ತಿರುವುದೇಕೆ?

ಸಾಂದರ್ಭಿಕ ಚಿತ್ರ | Photo Credit : NDTV
ಭಾರತದ ಪಶ್ಚಿಮ ಕರಾವಳಿಯುದ್ದಕ್ಕೂ ವ್ಯಾಪಿಸಿರುವ ಸುಮಾರು 1,500 ಕಿಲೋಮೀಟರ್ ಉದ್ದದ ಸಾಲು ಪರ್ವತಗಳಾದ ಪಶ್ಚಿಮ ಘಟ್ಟಗಳು, ಹಿಮಾಲಯದ ನಂತರ ದೇಶದ ಅತ್ಯಂತ ಪ್ರಸಿದ್ಧ ನೈಸರ್ಗಿಕ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿದೆ. ಆದರೆ, ಹಿಮಾಲಯಕ್ಕೆ ಹೋಲಿಸಿದರೆ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಜನಸಂಖ್ಯಾ ಸಾಂದ್ರತೆ ಹೆಚ್ಚಾಗಿದೆ. ಇದು ಭಾರತದ ಪಶ್ಚಿಮ ಕರಾವಳಿಗೆ ಹೊಂದಿಕೊಂಡಿರುವ ರಾಜ್ಯಗಳ ಆರ್ಥಿಕ ಕೇಂದ್ರವಾಗಿದ್ದು, ಪ್ರಸಿದ್ಧ ವಾಣಿಜ್ಯ ಬೆಳೆಗಳ ತವರೂರಾಗಿದೆ.
ಅತ್ಯಂತ ಸೂಕ್ಷ್ಮವಾಗಿರುವ ಈ ಪರಿಸರ ವ್ಯವಸ್ಥೆಯ ಸಂರಕ್ಷಣೆ, ಸುಸ್ಥಿರ ಅಭಿವೃದ್ಧಿ ಮತ್ತು ಕಾನೂನು ರಕ್ಷಣೆಗಾಗಿ ರೂಪಿಸಲಾದ ವಿಶೇಷ ನಿಯಮಾವಳಿಗಳು ಇನ್ನೂ ಜಾರಿಗೆ ಬಂದಿಲ್ಲ. ಘಟ್ಟ ಪ್ರದೇಶಗಳು ಹರಡಿಕೊಂಡಿರುವ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಸೇರಿದಂತೆ ಆರು ರಾಜ್ಯ ಸರ್ಕಾರಗಳ ಆಕ್ಷೇಪಣೆಗಳು ಮತ್ತು ಆತಂಕಗಳೇ ಇದಕ್ಕೆ ಪ್ರಮುಖ ಕಾರಣ.
ಪಶ್ಚಿಮ ಘಟ್ಟಗಳ ಪ್ರದೇಶಕ್ಕೆ ಪ್ರತ್ಯೇಕ ರಕ್ಷಣಾ ನಿಯಮಗಳನ್ನು ಮೊದಲು ಪ್ರಸಿದ್ಧ ಮಾಧವ್ ಗಾಡ್ಗೀಳ್ ನೇತೃತ್ವದ ತಜ್ಞರ ಸಮಿತಿಯು ಶಿಫಾರಸು ಮಾಡಿತ್ತು. ಆ ನಂತರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಾಜಿ ಮುಖ್ಯಸ್ಥ ಕೆ. ಕಸ್ತೂರಿರಂಗನ್ ಅಧ್ಯಕ್ಷತೆಯ ಉನ್ನತ ಮಟ್ಟದ ಕಾರ್ಯಕಾರಿ ಸಮಿತಿಯು ಕೆಲವು ನಿಯಮಗಳನ್ನು ಸೂಚಿಸಿತು.
ಕಸ್ತೂರಿರಂಗನ್ ಸಮಿತಿಯು 2013 ರಲ್ಲಿ ನೀಡಿದ ವರದಿಯ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಒಟ್ಟು 56,825 ಚದರ ಕಿಲೋಮೀಟರ್ ಪ್ರದೇಶವನ್ನು 'ಪರಿಸರ ಸೂಕ್ಷ್ಮ ವಲಯ' (Ecologically Sensitive Area - ESA) ಎಂದು ಗುರುತಿಸಿ ಕರಡು ಅಧಿಸೂಚನೆಯನ್ನು ಹೊರಡಿಸಿತ್ತು. ಆದರೆ, ಈ ವಿಷಯದಲ್ಲಿ ರಾಜ್ಯಗಳ ನಡುವೆ ಒಮ್ಮತ ಮೂಡದ ಕಾರಣ, ಕೇಂದ್ರ ಸರ್ಕಾರವು 2022 ರಲ್ಲಿ ಮತ್ತೊಂದು ಹೊಸ ತಜ್ಞರ ಸಮಿತಿಯನ್ನು ರಚಿಸಿತು. ಪಶ್ಚಿಮ ಘಟ್ಟಗಳ ಸಂರಕ್ಷಣೆ ಮತ್ತು ಆಯಾ ಪ್ರದೇಶಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಈ ಆರು ರಾಜ್ಯಗಳ ಆಕ್ಷೇಪಣೆಗಳನ್ನು ಮರುಪರಿಶೀಲಿಸುವ ಜವಾಬ್ದಾರಿಯನ್ನು ಈ ಸಮಿತಿಗೆ ವಹಿಸಲಾಗಿದೆ.
ಹಿನ್ನೆಲೆ:
ಕಸ್ತೂರಿರಂಗನ್ ಸಮಿತಿಯ ವರದಿಯು ಪಶ್ಚಿಮ ಘಟ್ಟಗಳ ಒಟ್ಟು ವಿಸ್ತೀರ್ಣವನ್ನು 1,64,280 ಚದರ ಕಿಲೋಮೀಟರ್ ಎಂದು ಗುರುತಿಸಿದ್ದರೆ, ಗಾಡ್ಗೀಳ್ ಸಮಿತಿಯು ಇದನ್ನು 1,29,037 ಚದರ ಕಿಲೋಮೀಟರ್ ಎಂದು ಗುರುತಿಸಿತ್ತು. ಇಡೀ ಪಶ್ಚಿಮ ಘಟ್ಟಗಳ ಪ್ರದೇಶವನ್ನು ವಿವಿಧ ವಲಯಗಳ ಕಠಿಣ ನಿರ್ಬಂಧಗಳೊಂದಿಗೆ 'ಇಎಸ್ಎ'ಎಂದು ಘೋಷಿಸಬೇಕೆಂದು ಗಾಡ್ಗೀಳ್ ಸಮಿತಿ ಶಿಫಾರಸು ಮಾಡಿತ್ತು. ಆದರೆ ಕಸ್ತೂರಿರಂಗನ್ ಸಮಿತಿಯು ಇದಕ್ಕಿಂತ ವಿಭಿನ್ನವಾದ ವಿಧಾನವನ್ನು ಅಳವಡಿಸಿಕೊಂಡಿತು.
ಕಸ್ತೂರಿರಂಗನ್ ಸಮಿತಿಯ ವಿಶ್ಲೇಷಣೆಯ ಪ್ರಕಾರ, ಪಶ್ಚಿಮ ಘಟ್ಟಗಳ ಶೇಕಡಾ 60 ರಷ್ಟು ಭಾಗವು ಈಗಾಗಲೇ "ಸಾಂಸ್ಕೃತಿಕ ಭೂದೃಶ್ಯ" ಆಗಿ ಮಾರ್ಪಟ್ಟಿದೆ. ಅಂದರೆ ಈ ಪ್ರದೇಶದಲ್ಲಿ ಜನವಸತಿ, ತೋಟಗಳು ಅಥವಾ ಕೃಷಿ ಚಟುವಟಿಕೆಗಳು ಹೆಚ್ಚಾಗಿವೆ. ಇನ್ನುಳಿದ ಶೇಕಡಾ 40 ರಷ್ಟು ಭಾಗವನ್ನು ಅಂದರೆ ಸುಮಾರು 60,000 ಚದರ ಕಿಲೋಮೀಟರ್ ಪ್ರದೇಶವನ್ನು "ನೈಸರ್ಗಿಕ ಭೂದೃಶ್ಯ" ಎಂದು ವರ್ಗೀಕರಿಸಲಾಗಿದೆ. ಇದು ಉನ್ನತ ಜೈವಿಕ ವೈವಿಧ್ಯತೆ, ಕಡಿಮೆ ಜನಸಾಂದ್ರತೆಯನ್ನು ಹೊಂದಿದ್ದು, ರಾಷ್ಟ್ರೀಯ ಉದ್ಯಾನವನಗಳು, ಹುಲಿ ಮತ್ತು ಆನೆ ಸಂರಕ್ಷಿತ ಪ್ರದೇಶಗಳನ್ನು ಒಳಗೊಂಡಿದೆ.
ಈ 60,000 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಬೇಕು . ಇಲ್ಲಿ ಗಣಿಗಾರಿಕೆ, ಕಲ್ಲು ಕ್ವಾರಿ, ಕೆಂಪು ಪಟ್ಟಿಯ (ಹೆಚ್ಚು ಮಾಲಿನ್ಯಕಾರಕ) ಕೈಗಾರಿಕೆಗಳು, ಉಷ್ಣ ವಿದ್ಯುತ್ ಸ್ಥಾವರಗಳು ಹಾಗೂ ದೊಡ್ಡ ಮಟ್ಟದ ನಿರ್ಮಾಣ ಕಾಮಗಾರಿಗಳು ಮತ್ತು ಟೌನ್ಶಿಪ್ಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಸಮಿತಿ ಪ್ರಸ್ತಾಪಿಸಿತು. ಈ ಹಿಂದೆ ಡಹಾಣು, ಮಹಾಬಲೇಶ್ವರ-ಪಂಚಗಣಿ ಮತ್ತು ಡೂನ್ ಕಣಿವೆಗಳಲ್ಲಿ ಅಲ್ಲಿನ ಜೈವಿಕ ವೈವಿಧ್ಯತೆ ಮತ್ತು ಚಟುವಟಿಕೆಗಳನ್ನು ನಿಯಂತ್ರಿಸುವ ಅಗತ್ಯವನ್ನು ಪರಿಗಣಿಸಿ ಇಎಸ್ಎ ವಲಯಗಳನ್ನು ಘೋಷಿಸಲಾಗಿತ್ತು.
ಅಂದಿನ ಯುಪಿಎ ಸರ್ಕಾರವು ಈ ಶಿಫಾರಸುಗಳನ್ನು ಅಂಗೀಕರಿಸಿತು. ಆದರೆ ಕೈಗಾರಿಕೆಗಳ ಮೇಲಿನ ವ್ಯಾಪಕ ನಿರ್ಬಂಧಗಳ ಬಗ್ಗೆ ರಾಜ್ಯ ಸರ್ಕಾರಗಳು ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, 2013 ಡಿಸೆಂಬರ್ನಲ್ಲಿ ಇಎಸ್ಎ ಗಡಿಗಳನ್ನು ಅಂತಿಮಗೊಳಿಸುವ ಮೊದಲು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಲು ಆರು ರಾಜ್ಯಗಳಿಗೆ ಕಾಲಾವಕಾಶ ನೀಡಿತು.
ನಂತರ, 2014 ಮಾರ್ಚ್ನಲ್ಲಿ ಕೇಂದ್ರ ಸರ್ಕಾರವು 56,825.7 ಚದರ ಕಿಲೋಮೀಟರ್ ಪ್ರದೇಶವನ್ನು ಇಎಸ್ಎ ಎಂದು ಗುರುತಿಸಿ ಕರಡು ಅಧಿಸೂಚನೆಯನ್ನು ಹೊರಡಿಸಿತು. ಕೇರಳ ಸರ್ಕಾರವು ತನ್ನದೇ ಆದ ಜಮೀನು ಪರಿಶೀಲನೆ ನಡೆಸಿ ಸಲ್ಲಿಸಿದ ವರದಿಯ ಆಧಾರದ ಮೇಲೆ, ಈ ವ್ಯಾಪ್ತಿಯಿಂದ ಹಲವು ಕೃಷಿ ಭೂಮಿಗಳು, ತೋಟಗಳು, ತೋಟಗಾರಿಕೆ ಪ್ಲಾಟ್ಗಳು ಮತ್ತು ವಸತಿ ಪ್ರದೇಶಗಳನ್ನು ಹೊರಗಿಡುವಂತೆ ಕೋರಿತು. ಇದರಿಂದಾಗಿ ಇಎಸ್ಎ ಒಟ್ಟು ಪ್ರದೇಶವು 3,000 ಚದರ ಕಿಲೋಮೀಟರ್ಗಿಂತಲೂ ಹೆಚ್ಚು ಕಡಿಮೆಯಾಯಿತು.
2014 ರಿಂದ ಈವರೆಗೆ ಕರಡು ಅಧಿಸೂಚನೆಯನ್ನು ಆರು ಬಾರಿ ನವೀಕರಿಸಿ ಹೊರಡಿಸಲಾಗಿದೆ. ಇವುಗಳಲ್ಲಿ ಇತ್ತೀಚಿನದನ್ನು 2024 ಜುಲೈ 31 ರಂದು ಹೊರಡಿಸಲಾಗಿದ್ದು, ಇದು 2026 ಜುಲೈ ಅಂತ್ಯದವರೆಗೆ ಚಾಲ್ತಿಯಲ್ಲಿರುತ್ತದೆ. ಈ ಇತ್ತೀಚಿನ ಅಧಿಸೂಚನೆಯಲ್ಲಿ ಹಿಂದಿನವುಗಳಿಗಿಂತ ಒಂದು ಸಣ್ಣ ಆದರೆ ಪ್ರಮುಖ ಬದಲಾವಣೆಯನ್ನು ಮಾಡಲಾಗಿದೆ. ಅದರಂತೆ, ಇಎಸ್ಎ ಗಡಿ ಗುರುತಿಸುವಿಕೆಯನ್ನು ಹಂತ ಹಂತವಾಗಿ ರಾಜ್ಯವಾರು ಪ್ರತ್ಯೇಕವಾಗಿ ಅಥವಾ ಒಟ್ಟಾಗಿ ಒಂದೇ ಅಧಿಸೂಚನೆಯ ಮೂಲಕ ಅಂತಿಮಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಒಮ್ಮತಕ್ಕೆ ಬಂದಿರುವ ರಾಜ್ಯಗಳಲ್ಲಿ ಇಎಸ್ಎ ಘೋಷಣೆಯನ್ನು ತಡೆಹಿಡಿಯಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪ್ರತಿ ಬಾರಿಯೂ ಕರಡು ಅಧಿಸೂಚನೆಯನ್ನು ಮತ್ತೆ ಹೊರಡಿಸಿದಾಗ, ಪರಿಸರ ಸಚಿವಾಲಯವು ಅಂತಿಮ ಇಎಸ್ಎ ವ್ಯಾಪ್ತಿಗೆ ರಾಜ್ಯ ಸರ್ಕಾರಗಳ ಒಪ್ಪಿಗೆ ಪಡೆಯಲು ಪ್ರಯತ್ನಿಸುತ್ತಿದೆ. ಆದರೆ ರಾಜ್ಯಗಳ ಹೊಸ ಬೇಡಿಕೆಗಳು ಅಥವಾ ಬಗೆಹರಿಯದ ವಿವಾದಗಳಿಂದಾಗಿ ಈ ಪ್ರಕ್ರಿಯೆಯು ಪ್ರತಿ ಬಾರಿಯೂ ಹಳ್ಳ ಹಿಡಿಯುತ್ತಿದೆ.
►ಭಾಗಶಃ ಪರಿಹಾರದತ್ತ ಹೆಜ್ಜೆ
ಪರಿಸರ ಸಚಿವಾಲಯದ ಅರಣ್ಯ ವಿಭಾಗದ ಮಾಜಿ ಮಹಾನಿರ್ದೇಶಕ ಸಂಜಯ್ ಕುಮಾರ್ ನೇತೃತ್ವದಲ್ಲಿ 2022 ರಲ್ಲಿ ನೇಮಕಗೊಂಡ ತಜ್ಞರ ಸಮಿತಿಯು ರಾಜ್ಯ ಸರ್ಕಾರಗಳೊಂದಿಗೆ ಹಲವು ಸಭೆಗಳನ್ನು ನಡೆಸಿದೆ. ಕೇರಳವನ್ನು ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳಿಗೆ ಇದು ಖುದ್ದು ಭೇಟಿ ನೀಡಿದೆ. ಉಪಗ್ರಹ ಚಿತ್ರಗಳು ಮತ್ತು ರಾಜ್ಯ ಸರ್ಕಾರಗಳು ಒದಗಿಸಿದ ಮಾಹಿತಿಯ ಆಧಾರದ ಮೇಲೆ ಗ್ರಾಮ ಮಟ್ಟದ ದತ್ತಾಂಶ, ಹೆಸರುಗಳು ಮತ್ತು ಕಂದಾಯ ವಿವರಗಳನ್ನು ತಾಳೆ ಹಾಕುವುದು ಸಮಿತಿಯು ಬಗೆಹರಿಸಲು ಯತ್ನಿಸುತ್ತಿರುವ ಪ್ರಮುಖ ಸವಾಲಾಗಿದೆ ಎಂದು ಮೂಲಗಳು ತಿಳಿಸಿವೆ.
ಘಟ್ಟಗಳ ರಕ್ಷಣೆಗಾಗಿ ಈ ಆರು ರಾಜ್ಯಗಳಿಗೆ ಕೆಲವು ಹಣಕಾಸಿನ ಪ್ರೋತ್ಸಾಹಕಗಳನ್ನು ನೀಡುವ ಬಗ್ಗೆಯೂ ಸಮಿತಿ ಆಲೋಚಿಸುತ್ತಿದ್ದು, ಈ ಕುರಿತು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿರುವ ತನ್ನ ಅಂತಿಮ ವರದಿಯಲ್ಲಿ ಶಿಫಾರಸು ಮಾಡುವ ಸಾಧ್ಯತೆಯಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವುದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರದಿಂದ ಧನಸಹಾಯ ಪಡೆಯಲು ಆರು ರಾಜ್ಯಗಳು ಒಟ್ಟಾಗಿ ಮಾತುಕತೆ ನಡೆಸಬೇಕು ಎಂದು ಕಸ್ತೂರಿರಂಗನ್ ಸಮಿತಿಯು ಈ ಹಿಂದೆ ಶಿಫಾರಸು ಮಾಡಿತ್ತು. ಇದರೊಂದಿಗೆ ಪರಿಸರ ವ್ಯವಸ್ಥೆಯ ಸೇವೆಗಳಿಗಾಗಿ ಹಣಕಾಸು ವ್ಯವಸ್ಥೆ ಮಾಡುವಂತೆಯೂ ಅದು ತಿಳಿಸಿತ್ತು.
ಪರಿಹಾರ ಕಂಡುಕೊಳ್ಳುವಲ್ಲಿ ಪ್ರಗತಿಯಾಗುತ್ತಿದ್ದರೂ, ರಾಜ್ಯಗಳು ಇಎಸ್ಎ ವ್ಯಾಪ್ತಿಯನ್ನು ಮತ್ತಷ್ಟು ಕಡಿಮೆ ಮಾಡಲು ಪ್ರಸ್ತಾಪಿಸಿವೆ. ತಜ್ಞರ ಸಮಿತಿಯು ತನ್ನ ಅಂತಿಮ ವರದಿಯಲ್ಲಿ ಈ ಕಡಿತಕ್ಕೆ ಒಪ್ಪಿಗೆ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಕೇರಳ ಮತ್ತು ಕರ್ನಾಟಕದಲ್ಲಿ ಈ ವಿಷಯದಲ್ಲಿ ಒಮ್ಮತ ಮೂಡುವುದು ಇನ್ನೂ ದೂರದ ಮಾತಾಗಿದೆ. ಕರ್ನಾಟಕವು ಕಸ್ತೂರಿರಂಗನ್ ಸಮಿತಿಯ ಶಿಫಾರಸುಗಳನ್ನು ಸಂಪೂರ್ಣವಾಗಿ ತಿರಸ್ಕರಿಸುವ ತನ್ನ ನಿಲುವಿಗೆ ಬದ್ಧವಾಗಿದೆ. ಮತ್ತೊಂದೆಡೆ, ಕೇರಳ ಸರ್ಕಾರವು ಈ ಹಿಂದೆ ಗುರುತಿಸಲಾಗಿದ್ದ 9,993.7 ಚದರ ಕಿಲೋಮೀಟರ್ ಪ್ರದೇಶವನ್ನು ಮತ್ತೊಂದು 1,000 ಚದರ ಕಿಲೋಮೀಟರ್ನಷ್ಟು ಕಡಿಮೆ ಮಾಡಲು ಕೋರಿದೆ. ತೋಟಗಳು ಮತ್ತು ಕೃಷಿ ಚಟುವಟಿಕೆಗಳ ಕಾರಣದಿಂದಾಗಿ, ಅದರಲ್ಲೂ ವಿಶೇಷವಾಗಿ ಏಲಕ್ಕಿ ಬೆಳೆಯುವ ಬೆಟ್ಟ ಪ್ರದೇಶಗಳಿರುವ ಇಡುಕ್ಕಿಯ ಗ್ರಾಮಗಳನ್ನು ಈ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಅದು ವಾದಿಸುತ್ತಿದೆ.
ವಿಶ್ವಾಸಾರ್ಹ ಮೂಲಗಳ ಪ್ರಕಾರ, ಮಹಾರಾಷ್ಟ್ರ ಸರ್ಕಾರವು ಕರಡು ಅಧಿಸೂಚನೆಯಲ್ಲಿ ಗುರುತಿಸಲಾಗಿದ್ದ 2,133 ಗ್ರಾಮಗಳ ಪೈಕಿ 378 ಗ್ರಾಮಗಳನ್ನು ಕೈಬಿಡುವಂತೆ ಕೋರಿದೆ. ಕೈಗಾರಿಕೆಗಳು, ಗಣಿಗಾರಿಕೆ ಮತ್ತು ಕೆಲವು ಗ್ರಾಮಗಳು ಪರಿಸರ ಸೂಕ್ಷ್ಮ ವಲಯದಿಂದ ದೂರವಿರುವ ಕಾರಣ ನೀಡಿ ಆ ಗ್ರಾಮಗಳನ್ನು ಹೊರಗಿಡುವಂತೆ ರಾಜ್ಯವು ವಾದಿಸಿದೆ.
ಪಶ್ಚಿಮ ಘಟ್ಟಗಳ ರಕ್ಷಣೆ ಏಕೆ ಅಗತ್ಯ?:
ಭೂಫಲಕಗಳ ಚಲನೆ , ಜ್ವಾಲಾಮುಖಿ ಸ್ಫೋಟ ಮತ್ತು ವರ್ಷಗಳ ಕಾಲ ಸವೆತದಂತಹ ಕಾರಣಗಳಿಂದ ಪಶ್ಚಿಮ ಘಟ್ಟಗಳು ರೂಪಗೊಂಡಿವೆ. ಪಾಲಕ್ಕಾಡ್ ಕಣಿವೆಯನ್ನು ಹೊರತುಪಡಿಸಿ ಸಾಲಾಗಿ ಹರಡಿರುವ ಈ ಪರ್ವತ ಶ್ರೇಣಿಯು ಜೀವವೈವಿಧ್ಯತೆಯ ನಿಧಿಯಾಗಿದೆ. ಇಲ್ಲಿ ಮಾತ್ರ ಕಂಡುಬರುವ ನೂರಾರು ಸಸ್ಯ ಹಾಗೂ ಪ್ರಾಣಿ ಪ್ರಬೇಧಗಳಿಗೆ ಇದು ಆಶ್ರಯ ತಾಣವಾಗಿದ್ದು, ವಿಶ್ವದ ಎಂಟು ಅತ್ಯಂತ ಪ್ರಮುಖ ಜೀವವೈವಿಧ್ಯತೆಯ ತಾಣಗಳಲ್ಲಿ ಒಂದಾಗಿದೆ.
ಈ ಘಟ್ಟಗಳ ಭೌಗೋಳಿಕ ರಚನೆಯು ಮುಂಗಾರು ಮಾರುತಗಳನ್ನು ತಡೆಯುವ ಮೂಲಕ ಮಳೆಯನ್ನು ನಿಯಂತ್ರಿಸುತ್ತದೆ. ಇದರಿಂದಾಗಿ ಘಟ್ಟದ ಕರಾವಳಿ ಭಾಗದಲ್ಲಿ ಸಮೃದ್ಧ ಮಳೆಯಾಗುತ್ತದೆ. ಈ ಹೇರಳವಾದ ಮಳೆ ಮತ್ತು ದಟ್ಟವಾದ ಕಾಡುಗಳು ನದಿಗಳ ಉಗಮಕ್ಕೆ ಕಾರಣವಾಗಿದ್ದು, ಗೋದಾವರಿ, ಕೃಷ್ಣಾ, ಕಾವೇರಿ, ಪೆರಿಯಾರ್ ಸೇರಿದಂತೆ ಹಲವಾರು ನದಿಗಳಿಗೆ ಜೀವ ತುಂಬಿವೆ. ಈ ನದಿಗಳು ದಕ್ಷಿಣ ಭಾರತದ ಆರ್ಥಿಕ ಬೆಳವಣಿಗೆ ಮತ್ತು ಜನರ ಜೀವನೋಪಾಯಕ್ಕೆ ಪ್ರಮುಖ ಆಧಾರವಾಗಿವೆ.
ಇದಲ್ಲದೆ, ಈ ಪ್ರದೇಶವು ಜನಸಂಖ್ಯೆಯೇನೂ ಕಡಿಮೆ ಇಲ್ಲ . ಇದು ಕಾಳುಮೆಣಸು, ಏಲಕ್ಕಿ, ದಾಲ್ಚಿನ್ನಿ, ಮಾವು ಮತ್ತು ಹಲಸಿನಂತಹ ಬೆಳೆಗಳ ತೋಟಗಳನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ, ಮಾಲಿನ್ಯಕಾರಕ ಕೈಗಾರಿಕೆಗಳಿಂದ ಈ ಪ್ರದೇಶವನ್ನು ರಕ್ಷಿಸುವುದು ಅತ್ಯಂತ ಅತ್ಯಗತ್ಯವಾಗಿದೆ.
ಹೆಚ್ಚಿನ ರಕ್ಷಣೆ ನೀಡಬೇಕು ಮತ್ತು ಇಎಸ್ಎ ವ್ಯಾಪ್ತಿಯಿಂದ ಗ್ರಾಮಗಳನ್ನು ಹೊರಗಿಡಬೇಕು ಎಂದು ಒತ್ತಾಯಿಸಿ ಕೇರಳದಲ್ಲಿ ನಾಗರಿಕ ವಲಯದಿಂದ ಪ್ರತಿಭಟನೆಗಳು ನಡೆದಿವೆ. ಇಂಥದ್ದೇ ಪ್ರತಿಭಟನೆಗಳು ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲೂ ಕಂಡುಬಂದಿವೆ.
ಕೃಪೆ: indianexpress.com






