ಕಕ್ಷೆಯಲ್ಲಿ ಶಸ್ತ್ರಾಸ್ತ್ರ ನಿಯೋಜಿಸಿರುವುದಾಗಿ ಹೇಳಿದ ಅಮೆರಿಕ; 'ಬಾಹ್ಯಾಕಾಶ ಶಸ್ತ್ರಾಸ್ತ್ರಗಳು' ಎಂದರೇನು?
►ಯಶ್ ರಾಜ್ ಶರ್ಮಾ – Aljazeera. com ವರದಿ

Photo Credit : aljazeera.com
ಭೂಮಿಯ ಕಕ್ಷೆಯಲ್ಲಿ ಬಾಹ್ಯಾಕಾಶ ಶಸ್ತ್ರಾಸ್ತ್ರಗಳನ್ನು ನಿಯೋಜಿಸಿರುವುದಾಗಿ ಅಮೆರಿಕ ಹೇಳಿದೆ. ಭೂಮಿಯ ಮೇಲೆ ಅಮೆರಿಕದ ಪಡೆಗಳನ್ನು ರಕ್ಷಿಸಲು ಈ "ಬಾಹ್ಯಾಕಾಶ ನಿಯಂತ್ರಣ ಶಸ್ತ್ರಾಸ್ತ್ರಗಳನ್ನು" ಬಳಸಲಾಗುವುದು ಎಂದು ಯುಎಸ್ ಏರ್ ಫೋರ್ಸ್ ಕಾರ್ಯಾಧ್ಯಕ್ಷ ಟ್ರಾಯ್ ಮೀಂಕ್ ಸೋಮವಾರ ಹೇಳಿದ್ದಾರೆ. ಇದು ಬಾಹ್ಯಾಕಾಶದ ಯುದ್ಧೋಪಕರಣಗಳ ನಿಯೋಜನೆಯಲ್ಲಿ (ಅಥವಾ ಕನಿಷ್ಠಪಕ್ಷ ಅದರ ಬಗ್ಗೆ ಮುಕ್ತವಾಗಿ ಮಾತನಾಡುವುದರಲ್ಲಿ) ಒಂದು ಮಹತ್ವದ ಹೊಸ ಅಧ್ಯಾಯವನ್ನು ತೆರೆದಿದೆ.
ಅಮೆರಿಕದ ಪ್ರತಿಸ್ಪರ್ಧಿಗಳಾದ ಚೀನಾ ಮತ್ತು ರಷ್ಯಾಕ್ಕೆ ನೀಡಿದ ಸಂದೇಶ ಎಂದು ಮೀಂಕ್ ಬಣ್ಣಿಸಿರುವ ಈ ಘೋಷಣೆಯು, ಭೂಮಿಯ ಕಕ್ಷೆಯನ್ನು ತೀವ್ರ ಸ್ಪರ್ಧಾತ್ಮಕ ಮಿಲಿಟರಿ ರಂಗವನ್ನಾಗಿ ಮಾರ್ಪಡಿಸಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ನೆಲದ ಮೇಲೆ ಸೈನಿಕ ಪಡೆಗಳಿಗೆ ಹಾಗೂ ನಾಗರಿಕ ಮೂಲಸೌಕರ್ಯಗಳಿಗೆ GPS, ಸಂವಹನ ಮತ್ತು ಗುಪ್ತಚರ ಮಾಹಿತಿಯಂತಹ ಪ್ರಮುಖ ಸೇವೆಗಳನ್ನು ಒದಗಿಸುವ ಉಪಗ್ರಹಗಳ ಮೇಲೆ ದೇಶಗಳು ಪರಸ್ಪರ ದಾಳಿ ನಡೆಸುವುದು ಯುದ್ಧದ ಭಾಗವಾಗಬಹುದು.
"ಬಾಹ್ಯಾಕಾಶ ಶಸ್ತ್ರಾಸ್ತ್ರ ನಿಯಮಗಳು 'ಬಾಹ್ಯಾಕಾಶ ನಿಯಂತ್ರಣ' ಎಂದರೆ ಬಾಹ್ಯಾಕಾಶದ ಮೇಲಿನ ಸಂಪೂರ್ಣ ಅಧಿಪತ್ಯ ಎಂದು ಹೇಳುತ್ತವೆ. ತಮ್ಮಿಚ್ಛೆಯ ಸಮಯ ಮತ್ತು ಸ್ಥಳದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದುವುದು ಹಾಗೂ ಎದುರಾಳಿಗೆ ಆ ಅವಕಾಶವನ್ನು ನಿರಾಕರಿಸುವುದೇ ಇದರ ಅರ್ಥ ಎಂದು ಅವು ವ್ಯಾಖ್ಯಾನಿಸುತ್ತವೆ" ಎಂದು ಮಿಲಿಟರಿ ಬಾಹ್ಯಾಕಾಶ ಮತ್ತು ಭದ್ರತಾ ಸಮಸ್ಯೆಗಳ ಕುರಿತು ಕೆಲಸ ಮಾಡುವ ಖಾಸಗಿ ಲಾಭರಹಿತ ಸಂಸ್ಥೆಯಾದ 'ಸೆಕ್ಯೂರ್ ವರ್ಲ್ಡ್ ಫೌಂಡೇಶನ್'ನ ಬಾಹ್ಯಾಕಾಶ ಭದ್ರತೆ ಮತ್ತು ಸ್ಥಿರತೆಯ ಮುಖ್ಯ ನಿರ್ದೇಶಕಿ ವಿಕ್ಟೋರಿಯಾ ಸ್ಯಾಮ್ಸನ್ Aljazeeraಗೆ ತಿಳಿಸಿದ್ದಾರೆ.
►ಈ ಬಾಹ್ಯಾಕಾಶ ಶಸ್ತ್ರಾಸ್ತ್ರಗಳೆಂದರೇನು?
ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಅಮೆರಿಕವು ಭೂಮಿಯ ಕಕ್ಷೆಯಲ್ಲಿ "ಶಸ್ತ್ರಾಸ್ತ್ರಗಳನ್ನು" ಸ್ಥಾಪಿಸಿದೆ ಎಂದು ವಾಯುಪಡೆಯ ಕಾರ್ಯಾಧ್ಯಕ್ಷ ಮೀಂಕ್ ಹೇಳಿದ್ದಾರೆಯೇ ವಿನಃ, ಅವುಗಳನ್ನು ಯಾವಾಗ ಅಲ್ಲಿ ಇರಿಸಲಾಗಿದೆ, ಅವುಗಳ ಸಂಖ್ಯೆ ಎಷ್ಟು ಅಥವಾ ಅವುಗಳ ನಿರ್ದಿಷ್ಟ ಕೆಲಸವೇನು ಎಂಬ ಬಗ್ಗೆ ಯಾವುದೇ ವಿವರಣೆ ನೀಡಿಲ್ಲ.
"ಬದಲಾಗುತ್ತಿರುವ ಬೆದರಿಕೆಗಳನ್ನು ಎದುರಿಸಲು ನಾವು ಇಂದು ಸಿದ್ಧರಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತೇವೆ" ಎಂದು ವಾಯು, ಬಾಹ್ಯಾಕಾಶ ಮತ್ತು ಸೈಬರ್ ಸಮ್ಮೇಳನದಲ್ಲಿ ಮೀಂಕ್ ತಿಳಿಸಿದ್ದಾರೆ. "ಈ ಕಾರಣಕ್ಕಾಗಿಯೇ ಅಮೆರಿಕವು ಈಗ ಕಕ್ಷೆಯಲ್ಲಿ ಬಾಹ್ಯಾಕಾಶ ನಿಯಂತ್ರಣ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಇವು ಶತ್ರುಗಳ ದಾಳಿಯಿಂದ ಜಂಟಿ ಪಡೆಗಳನ್ನು ರಕ್ಷಿಸಲು ಸಮರ್ಥವಾಗಿವೆ."
ಆದರೂ, ಇವು ಯಾವ ರೀತಿಯ ಶಸ್ತ್ರಾಸ್ತ್ರಗಳು, ಅವುಗಳನ್ನು ಎಲ್ಲಿ ಇರಿಸಲಾಗಿದೆ ಅಥವಾ ಅವುಗಳ ಉದ್ದೇಶವೇನು ಎಂಬ ಬಗ್ಗೆ ಅವರು ಯಾವುದೇ ವಿವರಗಳನ್ನು ನೀಡಲಿಲ್ಲ.
"ಬಾಹ್ಯಾಕಾಶ ನಿಯಂತ್ರಣ" ಎಂಬ ಸಂದರ್ಭದಲ್ಲಿ ಮೀಂಕ್ ಬಳಸಿದ "ಶಸ್ತ್ರಾಸ್ತ್ರಗಳು" ಎನ್ನುವ ಪದವೇ ಅತ್ಯಂತ ಮುಖ್ಯವಾದುದು ಎಂದು ಸ್ಯಾಮ್ಸನ್ ಹೇಳಿದ್ದಾರೆ. "ಬಾಹ್ಯಾಕಾಶ ಕ್ಷೇತ್ರವನ್ನು ನಿಯಂತ್ರಿಸಲು ಅಗತ್ಯವಿರುವ ಕಾರ್ಯಾಚರಣೆಗಳನ್ನು ಬಾಹ್ಯಾಕಾಶ ನಿಯಂತ್ರಣ ಒಳಗೊಂಡಿರುತ್ತದೆ. ಶತ್ರುಗಳ ಸಾಮರ್ಥ್ಯವನ್ನು ಹತ್ತಿಕ್ಕಲು ಚಲನಶೀಲ ಮತ್ತು ಚಲನಶೀಲವಲ್ಲದ ವಿಧಾನಗಳನ್ನು ಬಳಸಿಕೊಳ್ಳಲಾಗುತ್ತದೆ" ಎಂದು ಮೀಂಕ್ ಹೇಳಿದ್ದು, "ಈ ಸಾಮರ್ಥ್ಯಗಳನ್ನು ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಉದ್ದೇಶಗಳಿಗಾಗಿಯೂ ಬಳಸಬಹುದು" ಎಂದು ತಿಳಿಸಿದ್ದಾರೆ.
Aljazeera ಜೊತೆ ಮಾತನಾಡಿದ ಸ್ಯಾಮ್ಸನ್, "ವಿನ್ಯಾಸಗೊಳಿಸಿದ ನೈಜ ಶಸ್ತ್ರಾಸ್ತ್ರವೊಂದನ್ನು ಬಾಹ್ಯಾಕಾಶದಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಬಹಿರಂಗಪಡಿಸುತ್ತಿರುವುದು ಇದುವೇ ಮೊದಲು." ಅದಕ್ಕೂ ಮುಂಚೆ ಕೇವಲ 'ಸಾಮರ್ಥ್ಯವಿರುವ ವ್ಯವಸ್ಥೆಗಳು' ಎಂದಷ್ಟೇ ಹೇಳಲಾಗುತ್ತಿತ್ತು ಎಂದಿದ್ದಾರೆ.
ಈ ಶಸ್ತ್ರಾಸ್ತ್ರಗಳು ಕ್ಷಿಪಣಿಗಳಂತಹ ದಾಳಿ ನಡೆಸುವ ಶಸ್ತ್ರಾಸ್ತ್ರಗಳಾಗಿರುವುದಕ್ಕಿಂತ ಹೆಚ್ಚಾಗಿ ಬಾಹ್ಯಾಕಾಶ ಆಧಾರಿತ ಸಂವಹನ ಜಾಮಿಂಗ್ (ಸಂಪರ್ಕ ಕಡಿತಗೊಳಿಸುವ) ಸಾಧನಗಳಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಶತ್ರುಗಳ ಉಪಗ್ರಹಕ್ಕೆ ಡಿಕ್ಕಿಹೊಡೆಯಲು ವಿನ್ಯಾಸಗೊಳಿಸಲಾದ ಸ್ಯೂಸೈಡ್ ಸ್ಯಾಟಲೈಟ್ ನಂತಹ ಚಲನಶೀಲ ಶಸ್ತ್ರಾಸ್ತ್ರಗಳು ಬಾಹ್ಯಾಕಾಶದಲ್ಲಿ ವೇಗವಾಗಿ ಚಲಿಸುವ ಅಪಾಯಕಾರಿ ಅವಶೇಷಗಳು ಹರಡಲು ಕಾರಣವಾಗಬಹುದು.
ಯುಕೆಯ ಡರಮ್ ವಿಶ್ವವಿದ್ಯಾಲಯದ ಖಗೋಳ ರಾಜಕೀಯ ಸಹ ಪ್ರಾಧ್ಯಾಪಕರಾದ ಬ್ಲೆಡ್ಡಿನ್ ಬೋವೆನ್, ಬಿಬಿಸಿಯ ರೇಡಿಯೋ 4 ಟುಡೇ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, "ಈ ಶಸ್ತ್ರಾಸ್ತ್ರದ ಕಾರ್ಯವಿಧಾನ ಏನು ಎಂಬುದು ನಮಗೆ ನಿಖರವಾಗಿ ತಿಳಿದಿಲ್ಲ. ಇದು ಎಲೆಕ್ಟ್ರಾನಿಕ್ ಯುದ್ಧ ಅಥವಾ ರೇಡಿಯೋ-ಜಾಮಿಂಗ್ ಪ್ಲಾಟ್ಫಾರ್ಮ್ ಆಗಿರಬಹುದು ಎಂದು ನಾನು ನಿರೀಕ್ಷಿಸುತ್ತೇನೆ. ಇದು ಉಪಗ್ರಹ-ವಿರೋಧಿ ನಾಶಪಡಿಸಲು ಸಾಧ್ಯವಾಗದ ಒಂದು ಬಗೆಯ ಶಸ್ತ್ರಾಸ್ತ್ರವಾಗಿದೆ ಮತ್ತು ಇದರ ವಿವಿಧ ರೂಪಗಳು ಈಗಾಗಲೇ ಭೂಮಿಯ ಮೇಲೆ ಅಸ್ತಿತ್ವದಲ್ಲಿವೆ" ಎಂದಿದ್ದಾರೆ.
"ಉಪಗ್ರಹಕ್ಕೆ ನೇರವಾಗಿ ಡಿಕ್ಕಿಹೊಡೆದು ಅದನ್ನು ನಾಶಮಾಡುವಂತಹ ಶಸ್ತ್ರಾಸ್ತ್ರವಾಗಿರುವ ಸಾಧ್ಯತೆ ಬಹಳ ಕಡಿಮೆ" ಎಂದು ಅವರು ತಿಳಿಸಿದ್ದಾರೆ.
►ಯುಎಸ್ ಬಾಹ್ಯಾಕಾಶ ಪಡೆ ಎಂದರೇನು?
ಯುಎಸ್ ಬಾಹ್ಯಾಕಾಶ ಪಡೆ ಎಂಬುದು ಅಮೆರಿಕದ ಮಿಲಿಟರಿಯ ಹೊಸ ಶಾಖೆಯಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಅವಧಿಯಲ್ಲಿ 2019ರ ಡಿಸೆಂಬರ್ ನಲ್ಲಿ ಇದನ್ನು ರಚಿಸಲಾಯಿತು. ಬಾಹ್ಯಾಕಾಶದಲ್ಲಿ ಮತ್ತು ಬಾಹ್ಯಾಕಾಶದ ಮೂಲಕ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳನ್ನು ಸಂಘಟಿಸುವುದು ಮತ್ತು ನಡೆಸುವುದು ಇದರ ಜವಾಬ್ದಾರಿಯಾಗಿದೆ.
ನಾಗರಿಕ ಬಾಹ್ಯಾಕಾಶ ಅನ್ವೇಷಣೆಯ ಮೇಲೆ ಗಮನಹರಿಸುವ 'ನಾಸಾ' ಸಂಸ್ಥೆಯಂತೆ ಅಲ್ಲದೆ, ಬಾಹ್ಯಾಕಾಶ ಪಡೆಯು ಯುಎಸ್ ವಾಯುಪಡೆಯ ಭಾಗವಾಗಿದೆ. ಇದು ವರ್ಜೀನಿಯಾದ ಆರ್ಲಿಂಗ್ಟನ್ನಲ್ಲಿರುವ ಪೆಂಟಗನ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ 'ಯುಎಸ್ ಬಾಹ್ಯಾಕಾಶ ಕಮಾಂಡ್' ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಮಿಲಿಟರಿ ಉಪಗ್ರಹಗಳನ್ನು ನಿರ್ವಹಿಸುವುದು ಮತ್ತು ರಕ್ಷಿಸುವುದು, ಉಪಗ್ರಹ ಸಂವಹನ ಹಾಗೂ GPS ಸೇವೆಗಳನ್ನು ಒದಗಿಸುವುದು, ಬಾಹ್ಯಾಕಾಶದಲ್ಲಿನ ವಸ್ತುಗಳು ಮತ್ತು ಸಂಭಾವ್ಯ ಬೆದರಿಕೆಗಳನ್ನು ಮೇಲ್ವಿಚಾರಣೆ ಮಾಡುವುದು ಹಾಗೂ ಭೂಮಿಯ ಮೇಲಿನ ಅಮೆರಿಕದ ಪಡೆಗಳಿಗೆ ಬೆಂಬಲ ನೀಡುವುದು ಇದರ ಜವಾಬ್ದಾರಿಗಳಲ್ಲಿ ಸೇರಿವೆ.
ಬಾಹ್ಯಾಕಾಶ ಪಡೆಯ ವೆಬ್ಸೈಟ್ ಹೀಗೆ ಹೇಳುತ್ತದೆ: "ಚೀನಾ ಮತ್ತು ರಷ್ಯಾ ದೇಶಗಳು ತಮ್ಮ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಮತ್ತು ಅಮೆರಿಕದ ಬಾಹ್ಯಾಕಾಶ ಸೇವೆಗಳ ಮೇಲಿನ ಅವಲಂಬನೆಯನ್ನು ಮುಕ್ತಾಯಗೊಳಿಸಲು ಹೊಸ ಬಾಹ್ಯಾಕಾಶ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತಿವೆ. ಅಮೆರಿಕದ ಬಾಹ್ಯಾಕಾಶ ಆಧಾರಿತ ಸಾಮರ್ಥ್ಯಗಳನ್ನು ಅಡ್ಡಿಪಡಿಸುವ ಮತ್ತು ದುರ್ಬಲಗೊಳಿಸುವ ಉದ್ದೇಶದಿಂದ ಚೀನಾ ಮತ್ತು ರಷ್ಯಾ ಅತ್ಯಾಧುನಿಕ ಬಾಹ್ಯಾಕಾಶ ವಿರೋಧಿ ಸಾಮರ್ಥ್ಯಗಳನ್ನು ಪರೀಕ್ಷಿಸುತ್ತಿವೆ ಮತ್ತು ನಿಯೋಜಿಸುತ್ತಿವೆ."
►ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರಗಳ ನಿಯೋಜನೆಯನ್ನು ಮಿತಿಗೊಳಿಸುವ ಒಪ್ಪಂದಗಳು ಇಲ್ಲವೇ?
ಇವೆ, ಆದರೆ ಅವು ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರಗಳ ಮೇಲೆ ಸಂಪೂರ್ಣ ನಿಷೇಧವನ್ನು ಹೇರುವುದಿಲ್ಲ.
ಪ್ರಮುಖ ಒಪ್ಪಂದವೆಂದರೆ 1967ರ ಹೊರಗಿನ ಬಾಹ್ಯಾಕಾಶ ಒಪ್ಪಂದ. ಇದು ಪರಮಾಣು ಶಸ್ತ್ರಾಸ್ತ್ರಗಳು ಅಥವಾ ಇತರ ಸಾಮೂಹಿಕ ಮಾರಣಹೋಮದ ಅಸ್ತ್ರಗಳನ್ನು ಕಕ್ಷೆಯಲ್ಲಿ ಇರಿಸುವುದನ್ನು ಅಥವಾ ಬಾಹ್ಯಾಕಾಶದಲ್ಲಿ ನೆಲೆಗೊಳಿಸುವುದನ್ನು ನಿಷೇಧಿಸುತ್ತದೆ. ಇದು ಚಂದ್ರ ಹಾಗೂ ಇತ್ಯಾದಿ ಖಗೋಳ ಕಾಯಗಳ ಮೇಲೆ ಮಿಲಿಟರಿ ನೆಲೆಗಳು ಮತ್ತು ಶಸ್ತ್ರಾಸ್ತ್ರ ಪರೀಕ್ಷೆಗಳನ್ನೂ ಸಹ ನಿಷೇಧಿಸುತ್ತದೆ.
ಈ ಒಪ್ಪಂದವು ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ಭೂಮಿಯ ಕಕ್ಷೆಯಲ್ಲಿ ಇರಿಸುವುದನ್ನು ನೇರವಾಗಿ ನಿಷೇಧಿಸುವುದಿಲ್ಲ. ಇದರರ್ಥ ಸಾಂಪ್ರದಾಯಿಕ ಉಪಗ್ರಹ-ವಿರೋಧಿ ಶಸ್ತ್ರಾಸ್ತ್ರಗಳು, ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳು ಅಥವಾ ಇತರ ಬಾಹ್ಯಾಕಾಶ ವಿರೋಧಿ ಸಾಮರ್ಥ್ಯಗಳು ಸ್ವಯಂಚಾಲಿತವಾಗಿ ನಿಷೇಧಿಸಲ್ಪಟ್ಟಿಲ್ಲ.
ಇಂತಹ ಕಾನೂನು ತೊಡಕುಗಳು ವ್ಯಾಖ್ಯಾನಿಸಲು ಅವಕಾಶ ನೀಡುತ್ತವೆ ಮತ್ತು ಬಾಹ್ಯಾಕಾಶದಲ್ಲಿ ಮಿಲಿಟರಿ ಚಟುವಟಿಕೆಗಳನ್ನು ಹೆಚ್ಚಿಸುವ ಪ್ರಸ್ತುತ ಅಂತಾರಾಷ್ಟ್ರೀಯ ಪ್ರಯತ್ನಗಳ ಪ್ರಮುಖ ಕೇಂದ್ರಬಿಂದುವಾಗಿವೆ.
►ಅಮೆರಿಕದ ಈ ಘೋಷಣೆಗೆ ರಷ್ಯಾ ಮತ್ತು ಚೀನಾ ಹೇಗೆ ಪ್ರತಿಕ್ರಿಯಿಸಿವೆ?
ಬಾಹ್ಯಾಕಾಶದ "ಶಸ್ತ್ರಾಸ್ತ್ರೀಕರಣ, ಅದನ್ನು ಯುದ್ಧಭೂಮಿಯಾಗಿ ಪರಿವರ್ತಿಸುವುದು ಹಾಗೂ ಅಲ್ಲಿ ಶಸ್ತ್ರಾಸ್ತ್ರ ಪೈಪೋಟಿ ನಡೆಸುವುದು" ಸರಿಯಲ್ಲ ಎಂದು ಎಚ್ಚರಿಕೆ ನೀಡಿರುವ ಚೀನಾದ ವಿದೇಶಾಂಗ ಸಚಿವಾಲಯವು ಈ ನಡೆಯನ್ನು ವಿರೋಧಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವಾಲಯದ ವಕ್ತಾರ ಗುವೋ ಜಿಯಾಕುನ್, "ಬಾಹ್ಯಾಕಾಶದಲ್ಲಿ ತನ್ನ ಮಿಲಿಟರಿ ಸಾಮರ್ಥ್ಯವನ್ನು ವಿಸ್ತರಿಸುವುದನ್ನು ಮತ್ತು ಯುದ್ಧಕ್ಕೆ ಸಜ್ಜಾಗುವುದನ್ನು ನಿಲ್ಲಿಸುವಂತೆ ನಾವು ಅಮೆರಿಕವನ್ನು ಒತ್ತಾಯಿಸುತ್ತೇವೆ" ಎಂದು ತಿಳಿಸಿದ್ದಾರೆ.
ಬಾಹ್ಯಾಕಾಶವು "ಯಾವುದೇ ಶಸ್ತ್ರಾಸ್ತ್ರಗಳಿಲ್ಲದೆ ಮುಕ್ತವಾಗಿರಬೇಕು" ಎಂದು ರಷ್ಯಾ ಕರೆ ನೀಡಿದೆ.
ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಮಾತನಾಡಿ, "ಬಾಹ್ಯಾಕಾಶದ ಸಂಪೂರ್ಣ ಸೈನ್ಯೀಕರಣ ಮುಕ್ತಾಯಗೊಳ್ಳುವತ್ತ ಕೆಲಸ ಮಾಡಲು ನಾವು ವಿಶಾಲವಾದ ಅಂತರರಾಷ್ಟ್ರೀಯ ಒಮ್ಮತವನ್ನು ಎದುರು ನೋಡುತ್ತಿದ್ದೇವೆ" ಎಂದಿದ್ದಾರೆ.
►ರಷ್ಯಾ ಮತ್ತು ಚೀನಾ ಕೂಡ ಬಾಹ್ಯಾಕಾಶ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿವೆಯೇ?
ಉಪಗ್ರಹಗಳು ಮತ್ತು ಇತರ ಬಾಹ್ಯಾಕಾಶ ವ್ಯವಸ್ಥೆಗಳಿಗೆ ಅಡ್ಡಿಪಡಿಸಲು, ಅವುಗಳನ್ನು ನಿಷ್ಕ್ರಿಯಗೊಳಿಸಲು ಅಥವಾ ನಾಶಪಡಿಸಲು ವಿನ್ಯಾಸಗೊಳಿಸಲಾದ ವಿವಿಧ ಬಾಹ್ಯಾಕಾಶ ವಿರೋಧಿ ಸಾಮರ್ಥ್ಯಗಳನ್ನು ಚೀನಾ ಮತ್ತು ರಷ್ಯಾ ಎರಡೂ ದೇಶಗಳು ಅಭಿವೃದ್ಧಿಪಡಿಸುತ್ತಿವೆ ಎಂದು ಸಂಶೋಧನಾ ಸಂಸ್ಥೆಗಳು ಮತ್ತು ಥಿಂಕ್ ಟ್ಯಾಂಕ್ಗಳ ಸ್ವತಂತ್ರ ವರದಿಗಳು ತಿಳಿಸುತ್ತವೆ.
ವಾಷಿಂಗ್ಟನ್ ಡಿಸಿಯಲ್ಲಿರುವ ವಿದೇಶಾಂಗ ನೀತಿ ಥಿಂಕ್ ಟ್ಯಾಂಕ್ ಆಗಿರುವ 'ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಇಂಟರ್ನ್ಯಾಷನಲ್ ಸ್ಟಡೀಸ್' (CSIS), ಈ ಎರಡೂ ದೇಶಗಳು ಚಲನಶೀಲ ಮತ್ತು ಚಲನಶೀಲವಲ್ಲದ ಬಾಹ್ಯಾಕಾಶ ವಿರೋಧಿ ಶಸ್ತ್ರಾಸ್ತ್ರಗಳನ್ನು ಹೊಂದಿವೆ ಅಥವಾ ಅಭಿವೃದ್ಧಿಪಡಿಸುತ್ತಿವೆ ಎಂದು ಗುರುತಿಸಿದೆ.
ಮಾಸ್ಕೋ ಮತ್ತು ಬೀಜಿಂಗ್ ಎರಡೂ ದೇಶಗಳು ನೇರ-ಏರಿಕೆಯ ಉಪಗ್ರಹ-ವಿರೋಧಿ ಶಸ್ತ್ರಾಸ್ತ್ರಗಳನ್ನು ಹಾಗೂ ಜಾಮಿಂಗ್, ಸ್ಪೂಫಿಂಗ್ ಮತ್ತು ಸೈಬರ್ ಕಾರ್ಯಾಚರಣೆಗಳ ಸಾಮರ್ಥ್ಯಗಳನ್ನು ಹೊಂದಿವೆ ಎಂದು 2025ರ CSIS ವರದಿ ತಿಳಿಸುತ್ತದೆ.
'ಸೆಕ್ಯೂರ್ ವರ್ಲ್ಡ್ ಫೌಂಡೇಶನ್'ನ ಸ್ಯಾಮ್ಸನ್ Aljazeera ಜೊತೆ ಮಾತನಾಡುತ್ತಾ, "ಚೀನಾ ಮತ್ತು ರಷ್ಯಾ ಬಾಹ್ಯಾಕಾಶ ಆಧಾರಿತ ಜಾಮಿಂಗ್ ಸಾಧನಗಳನ್ನು ಹೊಂದಿವೆ" ಎಂಬುದನ್ನು ತಮ್ಮ ವರದಿಗಳಲ್ಲಿ ಒತ್ತಿಹೇಳಲಾಗಿದೆ ಎಂದು ತಿಳಿಸಿದ್ದಾರೆ. ಆದ್ದರಿಂದಲೇ, "ಅಮೆರಿಕದ ಬಳಿಯೂ ಅವು ಇಲ್ಲದಿರುವುದು ಆಶ್ಚರ್ಯಕರ ಸಂಗತಿಯಾಗಿದೆ ಎಂದು ನಾನು ಯಾವಾಗಲೂ ಭಾವಿಸಿದ್ದೆ" ಎಂದು ಅವರು ಹೇಳಿದ್ದಾರೆ.
ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಬೋವೆನ್ ಅವರು, "ಕಳೆದ 10 ವರ್ಷಗಳಲ್ಲಿ, ರಷ್ಯಾ ಮತ್ತು ಚೀನಾ ಬಾಹ್ಯಾಕಾಶದಲ್ಲಿ ಹೆಚ್ಚಿನ ತಾಂತ್ರಿಕ ಚಲನೆಗಳನ್ನು ಮಾಡುತ್ತಿವೆ. ಅಂದರೆ, ಪಾಶ್ಚಾತ್ಯ ದೇಶಗಳ ಉಪಗ್ರಹಗಳ ಅತ್ಯಂತ ಹತ್ತಿರಕ್ಕೆ ಹಾರಾಟ ನಡೆಸುವುದು, ಅವುಗಳನ್ನು ಪರಿಶೀಲಿಸುವುದು ಮತ್ತು ಫೋಟೋಗಳನ್ನು ತೆಗೆಯುವ ಕೆಲಸ ಮಾಡುತ್ತಿವೆ. ಮತ್ತೊಂದು ಸಂದರ್ಭದಲ್ಲಿ, ಚೀನಾದವರು 'ಸ್ಪೇಸ್ ಟಗ್' ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಅಂದರೆ, ಉಪಗ್ರಹದ ಬಳಿಗೆ ತೆರಳಿ ಅದನ್ನು ಹಿಡಿದು ಬೇರೆ ಕಕ್ಷೆಗೆ ಸ್ಥಳಾಂತರಿಸಬಲ್ಲ ವಾಹನವದು" ಎಂದು ಹೇಳಿದ್ದಾರೆ.
ಅದು ತನ್ನದೇ ಆದ ಹಳೆಯ ಉಪಗ್ರಹವನ್ನು ಬೇರೆಡೆಗೆ ಸ್ಥಳಾಂತರಿಸಲು ಮಾತ್ರ ಅಂತಹ ಕೌಶಲ್ಯವನ್ನು ಚೀನಾ ಪ್ರದರ್ಶಿಸಿದೆ ಎಂದು ಅವರು ಹೇಳಿದರು.
►ಇತರ ದೇಶಗಳ ಪರಿಸ್ಥಿತಿ ಏನು?
ಉದಯಿಸುತ್ತಿರುವ ಈ ಬಾಹ್ಯಾಕಾಶ ಶಸ್ತ್ರಾಸ್ತ್ರ ಸ್ಪರ್ಧೆಯು ಅಮೆರಿಕ, ರಷ್ಯಾ ಮತ್ತು ಚೀನಾಕ್ಕೆ ಮಾತ್ರ ಸೀಮಿತವಾಗಿಲ್ಲ. ಭಾರತವು ಕೂಡ ತನ್ನ ಉಪಗ್ರಹ-ವಿರೋಧಿ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಮತ್ತು ಇತರ ಉಪಗ್ರಹಗಳ ಜೊತೆಜೊತೆಯಾಗಿ ಕಾರ್ಯನಿರ್ವಹಿಸಬಲ್ಲ ಬಾಹ್ಯಾಕಾಶ ನೌಕೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ.
ಫ್ರಾನ್ಸ್ ಕೂಡ ಕಕ್ಷೆಯಲ್ಲಿ ಪರಸ್ಪರ ಕಾರ್ಯನಿರ್ವಹಿಸಬಲ್ಲ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ. ಮತ್ತೊಂದೆಡೆ ಬ್ರಿಟನ್, ಅಮೆರಿಕದೊಂದಿಗೆ ಸೇರಿ ಬಾಹ್ಯಾಕಾಶದಲ್ಲಿ ಸಹಕಾರಿ ಕಾರ್ಯಾಚರಣೆಗಳನ್ನು ನಡೆಸಿದೆ.
ಉದಾಹರಣೆಗೆ, ಇರಾನ್ ದೇಶವು ಉಪಗ್ರಹ ಆಧಾರಿತ ಸೇವೆಗಳಿಗೆ ಜಾಮಿಂಗ್ ಮತ್ತು ಸ್ಪೂಫಿಂಗ್ ಮಾಡುವ ಮೂಲಕ ಬಾಹ್ಯಾಕಾಶ ಯುದ್ಧದ ತೆರೆಮರೆಯ ಮುಖವನ್ನು ಪ್ರತಿನಿಧಿಸುತ್ತದೆ ಎಂದು 'SWF' ಸಂಸ್ಥೆಯ 2026ರ ವರದಿಯು ತಿಳಿಸಿದೆ. ಇಸ್ರೇಲ್ ಕೂಡ ಮಹತ್ವವಾದ ಮಿಲಿಟರಿ ಬಾಹ್ಯಾಕಾಶ ಮತ್ತು ಎಲೆಕ್ಟ್ರಾನಿಕ್ ಯುದ್ಧ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಿದೆ. ಆದರೂ, ಅದು ಅವಶೇಷಗಳನ್ನು ಸೃಷ್ಟಿಸುವ ಯಾವುದೇ ASAT ಪರೀಕ್ಷೆಯನ್ನು ನಡೆಸಿರುವ ಬಗ್ಗೆ ಸಾರ್ವಜನಿಕ ದಾಖಲೆಗಳಿಲ್ಲ.
ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾದಂತಹ ದೇಶಗಳು ಸಹ ಅತ್ಯಾಧುನಿಕ ಬಾಹ್ಯಾಕಾಶ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಪೈಪೋಟಿ ನಡೆಸುತ್ತಿವೆ.
►ಬಾಹ್ಯಾಕಾಶವೇ ಯುದ್ಧದ ಮುಂದಿನ ರಣರಂಗವೇ?
ಭೂಮಿಯ ಕಕ್ಷೆಯಲ್ಲಿ ಶಸ್ತ್ರಾಸ್ತ್ರಗಳನ್ನು ನಿಯೋಜಿಸಿರುವುದಾಗಿ ಅಮೆರಿಕ ನೀಡಿರುವ ಘೋಷಣೆಯು ಬಾಹ್ಯಾಕಾಶ ತಂತ್ರಜ್ಞಾನದ ದೃಷ್ಟಿಯಿಂದ ಮೂಲಭೂತವಾಗಿ ಹೊಸ ಆಘಾತವೇನಲ್ಲ ಎಂದು ಸ್ಯಾಮ್ಸನ್ ಅಲ್ ಜಝೀರಾಕ್ಕೆ ತಿಳಿಸಿದ್ದಾರೆ. "ಇದು ಕೇವಲ ಬಾಹ್ಯಾಕಾಶವನ್ನು ಶಸ್ತ್ರಸಜ್ಜಿತಗೊಳಿಸುವುದನ್ನು ಸಾಮಾನ್ಯಗೊಳಿಸುತ್ತದೆ" ಎಂದು ಅವರು ಹೇಳಿದರು.
"ಬಾಹ್ಯಾಕಾಶವು ಯಾವಾಗಲೂ ಸಂಘರ್ಷಕ್ಕೆ ಎಡೆಮಾಡಿಕೊಡುವ ಸಾಮರ್ಥ್ಯವಿರುವ ಕ್ಷೇತ್ರವಾಗಿದೆ. ಈ ಘೋಷಣೆಯು ಅಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ" ಎಂದಿದ್ದಾರೆ ಸ್ಯಾಮ್ಸನ್.
ಯುಎಸ್ ಬಾಹ್ಯಾಕಾಶ ಪಡೆಯ ವಕ್ತಾರರೊಬ್ಬರು ಎಬಿಸಿ ನ್ಯೂಸ್ ಜತೆ ಮಾತನಾಡಿ, ಯುಎಸ್ ಕಾರ್ಯಾಚರಣಾ ಪಡೆಗಳ ಸೂಚನೆಯ ಮೇರೆಗೆ ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಉದ್ದೇಶಗಳಿಗಾಗಿ ಈ ಸಾಮರ್ಥ್ಯಗಳನ್ನು ಬಳಸಬಹುದು. 2007ರಿಂದಲೂ ರಷ್ಯಾ ಮತ್ತು ಚೀನಾ ದೇಶಗಳು ಶಸ್ತ್ರಾಸ್ತ್ರ ಪರೀಕ್ಷೆಗಳು ಹಾಗೂ ಕಾರ್ಯಾಚರಣೆಗಳನ್ನು ನಡೆಸುತ್ತಿರುವುದರ ಬಗ್ಗೆ ವಾಷಿಂಗ್ಟನ್ ಎಚ್ಚರಿಸುತ್ತಾ ಬಂದಿದೆ ಎಂದಿದ್ದಾರೆ.
"ಅವರ ಈ ಚಟುವಟಿಕೆಗಳಿಂದಾಗಿ, ಬಾಹ್ಯಾಕಾಶವು ಯುದ್ಧಭೂಮಿ ಎಂಬುದು ಈಗ ಯಾವುದೇ ಅನುಮಾನವಿಲ್ಲದ ವಿಚಾರವಾಗಿದೆ. ಮುಕ್ತ ಸಂವಹನವು ತಡೆಗಟ್ಟುವಿಕೆಯನ್ನು ಬಲಪಡಿಸುತ್ತದೆ, ಎದುರಾಳಿಗಳ ತಪ್ಪು ಲೆಕ್ಕಾಚಾರಗಳನ್ನು ತಡೆಯುತ್ತದೆ ಮತ್ತು ಇತರ ಸೇನೆಗಳ ಜೊತೆಗೆ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಸಾಮಾನ್ಯಗೊಳಿಸುತ್ತದೆ" ಎಂದು ವಕ್ತಾರರು ಹೇಳಿದ್ದಾರೆ.
ಮೀಂಕ್ ಅವರ ಹೇಳಿಕೆಯು "ಗೆರೆಯನ್ನು ದಾಟಿದೆ" ಎಂದು ಹೇಳಿರುವ ಸ್ಯಾಮ್ಸನ್, ಇದು "ಚೀನಾ ಮತ್ತು ರಷ್ಯಾ ಕೂಡ ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರಗಳಿವೆ ಎಂದು ಘೋಷಿಸಲು ಪ್ರೋತ್ಸಾಹಿಸಬಹುದು ಅಥವಾ ಅಮೆರಿಕದ ಮಿತ್ರರಾಷ್ಟ್ರಗಳು ಕೂಡ ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರಗಳನ್ನು ಇರಿಸಲು ಬಯಸುವಂತೆ ಮಾಡಬಹುದು. ಬಾಹ್ಯಾಕಾಶ ವಿರೋಧಿ ಸಾಮರ್ಥ್ಯಗಳು ಈಗಾಗಲೇ ವ್ಯಾಪಕವಾಗಿ ಹರಡುತ್ತಿವೆ. ಈ ಘೋಷಣೆಯು ಆ ಪ್ರವೃತ್ತಿಯನ್ನು ಮತ್ತಷ್ಟು ವೇಗಗೊಳಿಸುತ್ತದೆ. ಇದು ನಂಬಲಾಗದಷ್ಟು ಅಸ್ಥಿರತೆಯನ್ನುಂಟು ಮಾಡುತ್ತದೆ ಮತ್ತು ಅಮೆರಿಕದ ರಾಷ್ಟ್ರೀಯ ಭದ್ರತಾ ಗುರಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತದೆ" ಎಂದಿದ್ದಾರೆ.
ಬಾಹ್ಯಾಕಾಶವನ್ನು ಶಸ್ತ್ರಸಜ್ಜಿತಗೊಳಿಸಲು ಬಾಗಿಲು ತೆರೆಯುವುದರಿಂದ ಅಮೆರಿಕವೇ ಅತಿ ಹೆಚ್ಚು ನಷ್ಟ ಅನುಭವಿಸಲಿದೆ. ಈ ಗ್ರಹದ ಪ್ರತಿಯೊಬ್ಬ ವ್ಯಕ್ತಿಯೂ ಯಾವುದೋ ಒಂದು ರೀತಿಯಲ್ಲಿ ಬಾಹ್ಯಾಕಾಶ ಆಧಾರಿತ ದತ್ತಾಂಶ ಮತ್ತು ಸೇವೆಗಳನ್ನು ಬಳಸುತ್ತಿದ್ದಾರೆ. ಬಾಹ್ಯಾಕಾಶ ಪ್ರವೇಶ ಅಥವಾ ಅದರ ಬಳಕೆಗೆ ಯಾವುದೇ ರೀತಿಯ ಅಡ್ಡಿಯುಂಟಾದರೆ, ಅದು ಕೇವಲ ಬಾಹ್ಯಾಕಾಶ ಶಕ್ತಿಗಳನ್ನಲ್ಲ, ಬದಲಿಗೆ ಎಲ್ಲರನ್ನೂ ಬಾಧಿಸುತ್ತದೆ ಎಂದು ಸ್ಯಾಮ್ಸನ್ ಎಚ್ಚರಿಸಿದ್ದಾರೆ.
ಸೌಜನ್ಯ: Aljazeera.com






