ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ವಿಚಾರಣೆ : ಗುರುವಾರ ಸುಪ್ರೀಂ ಕೋರ್ಟ್ನಲ್ಲಿ ನಡೆದಿದ್ದೇನು?

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಗುರುವಾರ ವಿಚಾರಣೆ ನಡೆಯಿತು. ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್ಮಾಲ್ಯ ಬಾಗ್ಚಿ ಅವರ ಪೀಠವು ಈ ಪ್ರಕರಣವನ್ನು ವಿಚಾರಣೆ ನಡೆಸಿತು. ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಗೆ ಹೊರಟಿರುವ ಚುನಾವಣಾ ಆಯೋಗದ ನಿರ್ಧಾರ ಹಾಗು ಅದಕ್ಕೆ ಅನುಸರಿಸುತ್ತಿರುವ ವಿಧಾನದ ವಿರುದ್ಧ ಅನೇಕ ಸಂಘ-ಸಂಸ್ಥೆಗಳು ಮತ್ತು ರಾಜಕೀಯ ನಾಯಕರು ಅರ್ಜಿ ಸಲ್ಲಿಸಿದ್ದರು.
ಈ ವಿಚಾರದಲ್ಲಿ ನ್ಯಾಯಾಲಯವು ಯಾವ ನಿಲುವು ತಳೆದಿದೆ , ನ್ಯಾಯಾಲಯದ ಆಕ್ಷೇಪಗಳೇನು, ಆಯೋಗದ ಪ್ರತಿಕ್ರಿಯೆ ಏನು ಎಂಬುದರ ವಿವರವಾದ ವರದಿ ಇಲ್ಲಿದೆ.
ಸುಪ್ರೀಂ ಕೋರ್ಟ್ನಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ಬಿಹಾರ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವಿರುದ್ಧ ಹಲವು ಗಂಭೀರ ಆಕ್ಷೇಪಣೆಗಳನ್ನು ಎತ್ತಲಾಯಿತು. ಮುಖ್ಯವಾಗಿ, ಈ ಪರಿಷ್ಕರಣೆಯ ಸಮಯ ಮತ್ತು ವಿಧಾನದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಲಾಯಿತು.
ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೆ ಕೆಲವೇ ತಿಂಗಳುಗಳಿರುವಾಗ ಇಂತಹ ಬೃಹತ್ ಪ್ರಮಾಣದ ಪರಿಷ್ಕರಣೆ ನಡೆಸುವುದರಿಂದ ಮತದಾರರಿಗೆ ತಮ್ಮ ಹೆಸರು ಕೈಬಿಟ್ಟುಹೋದರೆ ಅದನ್ನು ಸರಿಪಡಿಸಲು ಸಾಕಷ್ಟು ಸಮಯ ಸಿಗುವುದಿಲ್ಲ ಎಂದು ಅರ್ಜಿದಾರರು ವಾದಿಸಿದರು. ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು "ನಿಮ್ಮ ಪ್ರಕ್ರಿಯೆ ಸಮಸ್ಯೆಯಲ್ಲ... ಸಮಯವೇ ಸಮಸ್ಯೆ" ಎಂದು ಅಭಿಪ್ರಾಯಪಟ್ಟರು. ಮತದಾರರ ಹೆಸರುಗಳನ್ನು ಕೈಬಿಟ್ಟರೆ, ಚುನಾವಣೆಯ ಮೊದಲು ಅದನ್ನು ಪ್ರಶ್ನಿಸಲು ಅಥವಾ ಸರಿಪಡಿಸಿಕೊಳ್ಳಲು ಅವರಿಗೆ ಸಮಯ ಸಿಗುವುದಿಲ್ಲ ಎಂದು ನ್ಯಾಯಾಲಯ ಗಮನಿಸಿತು.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಈ ಪರಿಷ್ಕರಣೆ "ಏಕಪಕ್ಷೀಯ" ಮತ್ತು "ತಾರತಮ್ಯ"ದಿಂದ ಕೂಡಿದೆ ಎಂದು ಪ್ರತಿಪಾದಿಸಿದರು. ವಿಶೇಷವಾಗಿ 2003ರ ನಂತರ ನೋಂದಾಯಿಸಿದ ಮತದಾರರು ತಮ್ಮ ಗುರುತನ್ನು ಮರುಪರಿಶೀಲಿಸಲು ನಿರ್ದಿಷ್ಟಪಡಿಸಿದ ದಾಖಲೆಗಳ ಪಟ್ಟಿಯನ್ನು ಬಳಸಬೇಕು ಎಂಬ ಆಯೋಗದ ಷರತ್ತನ್ನು ಪ್ರಶ್ನಿಸಲಾಯಿತು.
ಈ ಅಗತ್ಯ ದಾಖಲೆಗಳ ಪಟ್ಟಿಯಲ್ಲಿ ಆಧಾರ್ ಕಾರ್ಡ್ ಮತ್ತು ಸ್ವತಃ ಆಯೋಗವೇ ನೀಡುವ ವೋಟರ್ ಐಡಿ ಕಾರ್ಡ್ಗಳನ್ನು ಹೊರಗಿಡಲಾಗಿದೆ ಎಂಬುದು ದೊಡ್ಡ ಆಕ್ಷೇಪಣೆಯಾಗಿತ್ತು. ಇದು ದೀರ್ಘಕಾಲದಿಂದ ಮತದಾರರ ಪಟ್ಟಿಯಲ್ಲಿರುವವರ ಮೇಲೆ ಅನಗತ್ಯ ಹೊರೆಯನ್ನು ಹಾಕುತ್ತದೆ ಎಂದು ವಾದಿಸಲಾಯಿತು.
ಮತದಾರರ ಪಟ್ಟಿಯಲ್ಲಿ ಒಮ್ಮೆ ಹೆಸರು ಸೇರಿಸಿದರೆ, ಅವರ ಪೌರತ್ವ ಇದೆ ಎಂದೇ ಊಹೆ ಇರುತ್ತದೆ ಎಂದು ಶಂಕರನಾರಾಯಣನ್ ಅವರು, ಉಲ್ಲೇಖಿಸಿದರು.
ಚುನಾವಣಾ ಕಾಯ್ದೆಯಲ್ಲಿ 'ತೀವ್ರ ಪರಿಷ್ಕರಣೆ' ಅಂದ್ರೆ (intensive revision) ಮತ್ತು 'ಸಾರಾಂಶ ಪರಿಷ್ಕರಣೆ' ಅಂದ್ರೆ (summary revision) ಎಂಬ ಎರಡು ರೀತಿಯ ಪರಿಷ್ಕರಣೆಗಳಿದ್ದರೂ, 'ವಿಶೇಷ ತೀವ್ರ ಪರಿಷ್ಕರಣೆ' ಅಂದ್ರೆ (Special Intensive Revision - SIR) ಎಂಬುದು ಹೊಸದಾಗಿದೆ ಮತ್ತು ಕಾಯ್ದೆ ಅಥವಾ ನಿಯಮಗಳಲ್ಲಿ ಇದನ್ನು ಗುರುತಿಸಿಲ್ಲ ಎಂದು ಅರ್ಜಿದಾರರು ಪ್ರತಿಪಾದಿಸಿದರು.
ಆರ್ಜೆಡಿ ಸಂಸದ ಮನೋಜ್ ಝಾ, ತೃಣಮೂಲ ಕಾಂಗ್ರೆಸ್ ಸಂಸದೆ ಮಹುಆ ಮೊಯಿತ್ರಾ ಸೇರಿದಂತೆ ಹಲವು ರಾಜಕೀಯ ನಾಯಕರು ಈ ಪ್ರಕ್ರಿಯೆಯು ಲಕ್ಷಾಂತರ ಮತದಾರರನ್ನು, ವಿಶೇಷವಾಗಿ ಬಡವರು, ವಲಸಿಗರು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಮತದಾನದಿಂದ ಹೊರಗಿಡಲು ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಬಿಹಾರದಲ್ಲಿ ಬಹಳ ಕಡಿಮೆ ಜನರು ಪಾಸ್ಪೋರ್ಟ್ ಅಥವಾ ಮೆಟ್ರಿಕ್ಯುಲೇಷನ್ ಪ್ರಮಾಣಪತ್ರಗಳಂತಹ ಚುನಾವಣಾ ಆಯೋಗ ಕೇಳಿರುವ ದಾಖಲೆಗಳನ್ನು ಹೊಂದಿದ್ದಾರೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಿದರು.
ಮತದಾರರ ಆಧಾರ್ ಕಾರ್ಡ್ , ವೋಟರ್ ಐಡಿ, ಪಡಿತರ ಚೀಟಿ ಪರಿಗಣಿಸಲು ಕೋರ್ಟ್ ಸೂಚನೆ ನೀಡಿದೆ. ಚುನಾವಣಾ ಆಯೋಗ ಕೊಟ್ಟಿರುವ 11 ದಾಖಲೆಗಳ ಪಟ್ಟಿ ಸಮಗ್ರವಾಗಿಲ್ಲ ಎಂದು ನ್ಯಾಯಾಲಯವು ಗಮನಿಸಿತು.
"ಆದ್ದರಿಂದ, ನಮ್ಮ ಪ್ರಾಥಮಿಕ ದೃಷ್ಟಿಯಲ್ಲಿ, ಪಟ್ಟಿಯು ಸಮಗ್ರವಾಗಿಲ್ಲದ ಕಾರಣ, ನ್ಯಾಯದ ಹಿತದೃಷ್ಟಿಯಿಂದ ಚುನಾವಣಾ ಆಯೋಗ ಆಧಾರ್ ಕಾರ್ಡ್, ಚುನಾವಣಾ ಆಯೋಗವು ನೀಡಿದ ಎಲೆಕ್ಟೋರಲ್ ಫೋಟೋ ಐಡೆಂಟಿಟಿ ಕಾರ್ಡ್ ಅಂದ್ರೆ ಎಪಿಕ್ ಕಾರ್ಡ್ ಮತ್ತು ಪಡಿತರ ಚೀಟಿಯನ್ನು ಸಹ ಪರಿಗಣಿಸುವುದು ನ್ಯಾಯವಾದ ನಡೆ" ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿತು.
ಆದರೆ ಈ ದಾಖಲೆಗಳ ಆಧಾರದಲ್ಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಬೇಕು ಎಂದು ಇದು ಆದೇಶ ಅಲ್ಲ. ಈ ದಾಖಲೆಗಳನ್ನು ಸ್ವೀಕರಿಸಬೇಕೇ ಅಥವಾ ತಿರಸ್ಕರಿಸಬೇಕೇ ಎಂಬ ವಿವೇಚನಾ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ. ನೀವು ಆಧಾರ್ ಕಾರ್ಡ್ ಅನ್ನು ತಿರಸ್ಕರಿಸಲು ಸೂಕ್ತ ಕಾರಣಗಳಿದ್ದರೆ ತಿರಸ್ಕರಿಸಿ, ಆದರೆ ಅದಕ್ಕೆ ಕಾರಣ ಕೊಡಿ ಎಂದು ನ್ಯಾಯಾಲಯ ಮೌಖಿಕವಾಗಿ ಸ್ಪಷ್ಟಪಡಿಸಿತು.
ಅರ್ಜಿದಾರರು ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ ನಡೆಸುವ ಅಧಿಕಾರ, ಕೈಗೊಂಡ ವಿಧಾನ ಮತ್ತು ಪರಿಷ್ಕರಣೆಗಾಗಿ ನಿಗದಿಪಡಿಸಿರುವ ಅಲ್ಪಾವಧಿಯ ಸಮಯದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಆಯೋಗದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರು, ಮತದಾರರ ಪಟ್ಟಿ ಪರಿಷ್ಕರಿಸುವ ಅಧಿಕಾರ ಆಯೋಗಕ್ಕೆ ಇದೆ ಎಂದು ಪ್ರತಿಪಾದಿಸಿದರು. 2003ರ ನಂತರ ಮತದಾರರ ಪಟ್ಟಿ ಗಣಕೀಕರಣಗೊಂಡಿದ್ದು, ಅಂದಿನಿಂದ ತೀವ್ರ ಪರಿಷ್ಕರಣೆ ನಡೆದಿಲ್ಲ ಎಂದು ಅವರು ಸಮರ್ಥಿಸಿಕೊಂಡರು.
ನ್ಯಾಯಾಲಯವು ECI ನಿಗದಿಪಡಿಸಿದ ಪರಿಷ್ಕರಣೆಯ ವೇಳಾಪಟ್ಟಿಯ ಬಗ್ಗೆ ಗಂಭೀರ ಸಂದೇಹ ವ್ಯಕ್ತಪಡಿಸಿತು.
"ಈ ವೇಳಾಪಟ್ಟಿ ವಾಸ್ತವಿಕವೇ ಎಂಬ ಬಗ್ಗೆ ನಮಗೆ ಗಂಭೀರ ಸಂದೇಹವಿದೆ. ಇದು ಪ್ರಾಯೋಗಿಕತೆಯ ಪ್ರಶ್ನೆ" ಎಂದು ನ್ಯಾಯಮೂರ್ತಿ ಧುಲಿಯಾ ಹೇಳಿದರು. "ಈ ದಾಖಲೆಗಳನ್ನು ತಕ್ಷಣ ಕೇಳಿದರೆ, ನಾನೇ ಈಗ ನೀಡಲು ಸಾಧ್ಯವಿಲ್ಲ. ಪ್ರಾಯೋಗಿಕತೆಯನ್ನು, ಸಮಯದ ಮಿತಿಯನ್ನು ನೋಡಿ" ಎಂದೂ ಅವರು ಹೇಳಿದರು.
ಆಯೋಗದ ಪರ ವಕೀಲರು ಜುಲೈ 21ರೊಳಗೆ ಪ್ರತಿ-ಅಫಿಡವಿಟ್ ಸಲ್ಲಿಸಲು ಸಮ್ಮತಿಸಿದರು. ಆಗಸ್ಟ್ 1ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟಿಸುವ ನಿಗದಿತ ದಿನಾಂಕದ ಮೊದಲು, ಜುಲೈ 28, 2025 ರಂದು ಮುಂದಿನ ವಿಚಾರಣೆ ನಡೆಯಲಿದೆ. ಈ ಹಂತದಲ್ಲಿ ಯಾವುದೇ ಮಧ್ಯಂತರ ತಡೆ ಆದೇಶಕ್ಕೆ ಅರ್ಜಿದಾರರು ಒತ್ತಾಯಿಸಲಿಲ್ಲ.
ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 28, 2025ಕ್ಕೆ ನಿಗದಿಯಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಹಾಗು ಬಿಹಾರದ ಚುನಾವಣಾ ಪ್ರಕ್ರಿಯೆಯ ಮೇಲೆ ಇದರ ಪರಿಣಾಮವೇನು ಮತ್ತು ಲಕ್ಷಾಂತರ ಮತದಾರರ ಹಕ್ಕುಗಳನ್ನು ಇದು ಹೇಗೆ ರಕ್ಷಿಸುತ್ತದೆ ಎಂಬುದನ್ನು ಕಾದು ನೋಡಬೇಕು.







