ವಿಮಾನದಲ್ಲಿ ಏರೋಪ್ಲೇನ್ ಮೋಡ್ ಆನ್ ಮಾಡದಿದ್ದರೆ ಏನಾಗುತ್ತದೆ? ನಿಯಮದ ಹಿಂದಿನ ರಹಸ್ಯ ತಿಳಿಯಿರಿ...

ಸಾಂದರ್ಭಿಕ ಚಿತ್ರ (AI Imagined)
ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರಯಾಣಕ್ಕೆ ಮೊದಲು ತಮ್ಮ ಮೊಬೈಲ್ ಫೋನ್ ಗಳನ್ನು ʼಏರೋಪ್ಲೇನ್ ಮೋಡ್ʼ ಗೆ ಬದಲಿಸಲು ನಿಯಮಿತವಾಗಿ ಕೇಳಲಾಗುತ್ತದೆ. ಬಹುತೇಕ ಪ್ರಯಾಣಿಕರು ಸೂಚನೆಯನ್ನು ಪ್ರಶ್ನಿಸದೆ ಅನುಸರಿಸುತ್ತಾರೆ. ಆದರೆ ಅತ್ಯಾಧುನಿಕ ಸ್ಮಾರ್ಟ್ಫೋನ್ಗಳು, 5ಜಿ ಸಂಪರ್ಕ ಮತ್ತು ಆಧುನಿಕ ವಿಮಾನಯಾನ ತಂತ್ರಜ್ಞಾನದ ಯುಗದಲ್ಲೂ ಈ ನಿಯಮ ಏಕೆ ಅಸ್ತಿತ್ವದಲ್ಲಿದೆ ಎಂದು ಅನೇಕರು ಅಚ್ಚರಿಪಡುತ್ತಾರೆ. ನಿರ್ಬಂಧದ ಹಿಂದೆ ನಿಜವಾದ ವೈಜ್ಞಾನಿಕ ಕಾರಣವಿದೆಯೆ ಅಥವಾ ಕೇವಲ ಹಳೆಯ ವಾಯುಯಾನ ನಿಯಮವೆ?
ಏನಿದು ಏರೋಪ್ಲೇನ್ ಮೋಡ್?
ಏರೋಪ್ಲೇನ್ ಮೋಡ್ ಎನ್ನುವುದು ಸ್ಮಾರ್ಟ್ಫೋನ್ ನ ಸೆಲ್ಯುಲಾರ್ ಸಂಪರ್ಕವನ್ನು ನಿಷ್ಕ್ರಿಯಗೊಳಿಸುವ ಒಂದು ಸೆಟ್ಟಿಂಗ್ ಆಗಿದೆ. ಅದು ನೆಲದ ಮೇಲೆ ಮೊಬೈಲ್ ನೆಟ್ವರ್ಕ್ ಟವರ್ ಗಳನ್ನು ಹುಡುಕುವುದು ಅಥವಾ ಸಂಪರ್ಕಿಸುವುದನ್ನು ತಡೆಯುತ್ತದೆ. ಅಂದರೆ ಸಾಧನವು ನಿಯಮಿತ ಸೆಲ್ಯುಲರ್ ಸಿಗ್ನಲ್ ಗಳನ್ನು ರವಾನಿಸುವುದನ್ನು ನಿಲ್ಲಿಸುತ್ತದೆ. ಆದರೆ, ಏರೋಪ್ಲೇನ್ ಮೋಡ್ ಅನ್ನು ಆನ್ ಮಾಡುವುದರಿಂದ ಫೋನ್ ನಲ್ಲಿರುವ ಪ್ರತಿ ವೈರ್ಲೆಸ್ ವೈಶಿಷ್ಟ್ಯ ಲಭ್ಯವಿಲ್ಲ ಎಂದರ್ಥವಲ್ಲ. ಪ್ರಯಾಣಿಕರು ಸಾಮಾನ್ಯವಾಗಿ ವೈಫೈ ಮತ್ತು ಬ್ಲೂಟೂತ್ ಅನ್ನು ಪ್ರತ್ಯೇಕವಾಗಿ ಆನ್ ಮಾಡಬಹುದು. ಆದರೆ ಹಾಗೆ ಮಾಡುವುದು ಏರ್ಲೈನ್ಸ್ ನ ನಿಯಮಗಳಿಗೆ ಸಂಬಂಧಿಸಿದೆ. ಇಂತಹ ಸಂದರ್ಭಕ್ಕಾಗಿ ಅನೇಕ ಏರ್ಲೈನ್ಸ್ ಸಂಸ್ಥೆಗಳು ಪ್ರಯಾಣಿಕರಿಗೆ ಪ್ರಯಾಣಿಸುವಾಗ ವಿಮಾನದಲ್ಲಿ ವೈ-ಫೈ ಸೇವೆಗಳನ್ನು ಪ್ರವೇಶಿಸಲು ಅವಕಾಶ ನೀಡುತ್ತವೆ.
ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ ನಿಮ್ಮ ಫೋನ್ ಅನ್ನು ಸ್ವಿಚ್ ಆನ್ ಮಾಡುವುದರಿಂದ ವಿಮಾನವು ಇದಕ್ಕಿದ್ದಂತೆ ನಿಯಂತ್ರಣ ಕಳೆದುಕೊಳ್ಳುತ್ತದೆ ಅಥವಾ ಅಪಘಾತಕ್ಕೆ ಒಳಗಾಗುತ್ತದೆ ಎಂದರ್ಥವಲ್ಲ. ಸೂಚನೆಗೆ ಅನೇಕ ಕಾರಣಗಳಿವೆ.
ಪ್ರಮುಖ ಕಾರಣಗಳು:
1. ಸಿಗ್ನಲ್ ಅಡ್ಡಬರುವಿಕೆಯನ್ನು ತಡೆಯುವುದು: ಏರೋಪ್ಲೇನ್ ಮೋಡ್ ನಲ್ಲಿಲ್ಲದ ಫೋನ್ ಗಳು ನಿರಂತರವಾಗಿ ನೆಲದ ಸೆಲ್ ಟವರ್ ಗಳನ್ನು ಹುಡುಕುತ್ತವೆ. ರೇಡಿಯೋ ತರಂಗಗಳನ್ನು ಹೊರಸೂಸುತ್ತವೆ. ಅನೇಕ ಸಾಧನಗಳು ಇದನ್ನು ಏಕಕಾಲದಲ್ಲಿ ಮಾಡಿದಾಗ ಅವು ಪೈಲಟ್ ಗಳ ಹೆಡ್ಸೆಟ್ ಗಳಲ್ಲಿ ಎಲೆಕ್ಟ್ರಾನಿಕ್ ಶಬ್ದ ಅಥವಾ ಝೇಂಕರಿಸುವ (buzzing) ಶಬ್ದವನ್ನು ಮಾಡಬಹುದು ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ ಜೊತೆಗಿನ ಸಂವಹನಕ್ಕೆ ಅಡ್ಡಿಪಡಿಸಬಹುದು. ಹವಾಮಾನ ಸ್ಥಿತಿಗಳು, ಗಾಳಿಯ ವೇಗ, ರನ್ವೇ ಸೂಚನೆಗಳು ಮತ್ತು ಇತರ ಕಾರ್ಯಾಚರಣೆಯ ವಿವರಗಳ ಬಗ್ಗೆ ಏರ್ ಟ್ರಾಫಿಕ್ ಕಂಟ್ರೋಲ್ನಿಂದ ನಿರ್ಣಾಯಕ ಮಾಹಿತಿ ಪಡೆಯಲಾಗುತ್ತದೆ. ಅಂತಹ ಸಂವಹನಕ್ಕೆ ಅಡ್ಡಿಯಾಗಬಹುದು.
2. ಸೂಕ್ಷ್ಮ ಏವಿಯಾನಿಕ್ಸ್ ರಕ್ಷಣೆ: ಏವಿಯಾನಿಕ್ಸ್ ಅಂದರೆ ವಾಯುಯಾನದಲ್ಲಿ ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವ ತಂತ್ರಜ್ಞಾನ. ವಿಮಾನದ ಸಂಚರಣೆ ಮತ್ತು ಸಂವಹನಕ್ಕಾಗಿ ಸೂಕ್ಷ್ಮ ಫ್ರೀಕ್ವೆನ್ಸಿಗಳನ್ನು ಅವಲಂಬಿಸಿದೆ. ಆಧುನಿಕ ವಿಮಾನಗಳು ಹೆಚ್ಚು ರಕ್ಷಣೆ ಹೊಂದಿದ್ದು, ಒಂದು ಫೋನ್ನಿಂದ ಅಪಘಾತಕ್ಕೆ ಕಾರಣವಾಗುವುದಿಲ್ಲ. ಆದರೆ ವಾಯುಯಾನದ ನಿಯಮಗಳು ಕಡಿಮೆ ಸಂಭವನೀಯತೆಯ ಅಪಾಯಗಳನ್ನು ಕಡಿಮೆ ಮಾಡಲು ಸಂಪ್ರದಾಯವಾದಿ ವಿಧಾನವನ್ನು ಅನುಸರಿಸಿತ್ತವೆ.
3. ಮೊಬೈಲ್ ನೆಟ್ವರ್ಕ್ಗಳು ಕಾರ್ಯನಿರ್ವಹಿಸುವ ವಿಧಾನ: ಸೆಲ್ಯುಲಾರ್ ಸಂಪರ್ಕದ ಮೇಲಿನ ನಿರ್ಬಂಧಕ್ಕೆ ಮತ್ತೊಂದು ಕಾರಣವೆಂದರೆ ಮೊಬೈಲ್ ನೆಟ್ವರ್ಕ್ಗಳು ಕಾರ್ಯನಿರ್ವಹಿಸುವ ವಿಧಾನ. ವಾಣಿಜ್ಯ ವಿಮಾನಗಳು ಹೆಚ್ಚಿನ ವೇಗದಲ್ಲಿ ಮತ್ತು ಗಣನೀಯ ಎತ್ತರದಲ್ಲಿ ಚಲಿಸುತ್ತವೆ. ಆಗ ವಿಭಿನ್ನ ವ್ಯಾಪ್ತಿಯ ಪ್ರದೇಶಗಳಲ್ಲಿ ಫೋನ್ /ನೆಲದ ಮೊಬೈಲ್ ಟವರ್ ಗಳಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಬಹುದು. ವಿಮಾನದ ವೇಗ ಮತ್ತು ಎತ್ತರದಲ್ಲಿ ಬಳಸುವಂತೆ ನೆಟ್ವರ್ಕ್ಗಳನ್ನು ಅಗತ್ಯವಾಗಿ ವಿನ್ಯಾಸಗೊಳಿಸಲಾಗಿಲ್ಲ. ಹೀಗಾಗಿಯೇ ಟೇಕಾಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಪೈಲಟ್ಗಳು ಮತ್ತು ಕ್ಯಾಬಿನ್ ಸಿಬ್ಬಂದಿ ಜಾಗರೂಕರಾಗಿರುತ್ತಾರೆ.
4. ಪ್ರಯಾಣಿಕರ ಅರಿವು ಮತ್ತು ಸುರಕ್ಷತೆ: ಟೇಕಾಫ್ ಮತ್ತು ಲ್ಯಾಂಡಿಂಗ್ ಹಾರಾಟದ ನಿರ್ಣಾಯಕ ಹಂತಗಳಾಗಿವೆ. ಫೋನ್ ಗೊಂದಲಗಳನ್ನು ಸೀಮಿತಗೊಳಿಸುವುದರಿಂದ ಪ್ರಯಾಣಿಕರು ಸುರಕ್ಷತಾ ಬ್ರೀಫಿಂಗ್ಗಳನ್ನು ಕೇಳಲು ಮತ್ತು ತುರ್ತು ಪರಿಸ್ಥಿತಿ ಸಂಭವಿಸಿದಲ್ಲಿ ತ್ವರಿತವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗಿಸುತ್ತದೆ.
5. ಬ್ಯಾಟರಿ ಸಂರಕ್ಷಣೆ: ಸೆಲ್ಯುಲಾರ್ ಹುಡುಕಾಟಗಳನ್ನು ಆಫ್ ಮಾಡುವುದರಿಂದ ದೂರದ ಟವರ್ ಗಳನ್ನು ತಲುಪಲು ಪ್ರಯತ್ನಿಸುವುದರಿಂದ ಫೋನ್ಗಳ ಬ್ಯಾಟರಿ ಖಾಲಿಯಾಗುವುದನ್ನು ತಡೆಯಬಹುದು.
ಆದ್ದರಿಂದ ಎಲೆಕ್ಟ್ರಾನಿಕ್ ಸಾಧನಗಳನ್ನು ನಿಗದಿತ ಕ್ರಮದಲ್ಲಿ ಇಡುವುದು ವಿಮಾನದೊಳಗೆ ಸುರಕ್ಷತೆ ಮತ್ತು ಸನ್ನದ್ಧತೆ ಕಾಪಾಡಿಕೊಳ್ಳುವ ವಿಸ್ತರಿತ ಅಗತ್ಯದ ಭಾಗವಾಗಿದೆ.






