ಹಾರ್ಮುಝ್ ಜಲಸಂಧಿ ತೆರೆಯಲು ಅಮೆರಿಕಕ್ಕೆ ಇರಾನ್ ನ 7 ದಿನಗಳ ಪ್ರಸ್ತಾಪವೇನು?

ಅಬ್ಬಾಸ್ ಅರಾಘ್ಚಿ, ಡೊನಾಲ್ಡ್ ಟ್ರಂಪ್ : Photo credit : PTI
ಹಾರ್ಮುಝ್ ಜಲಸಂಧಿಯನ್ನು ಏಳು ದಿನಗಳಲ್ಲಿ ಮತ್ತೆ ತೆರೆಯಲು ಅಮೆರಿಕಕ್ಕೆ ನೀಡಿರುವ ಪ್ರಸ್ತಾಪ ಇಂದಿಗೂ ಜಾರಿಯಲ್ಲಿದೆ ಎಂದು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ರವಿವಾರ (ಅಕ್ಟೋಬರ್ 18) ಇರಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇಸ್ಲಾಮಿಕ್ ಸಹಕಾರ ಸಂಸ್ಥೆಯ ಸಭೆಗಾಗಿ ಇರಾಕ್ ರಾಜಧಾನಿ ಬಾಗ್ದಾದ್ನಲ್ಲಿರುವ ಅರಾಘ್ಚಿ, "ನಮ್ಮ ನಿಲುವು ಸ್ಪಷ್ಟವಾಗಿದೆ. ಇದು ಅಮೆರಿಕಕ್ಕೆ ಸಲ್ಲಿಸಲಾದ ಏಳು ದಿನಗಳ ಪ್ರಸ್ತಾಪವನ್ನು ಆಧರಿಸಿದೆ. ಅವರು ಕೆಲವು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ನಾವು ಅವುಗಳನ್ನು ಪರಿಶೀಲಿಸುತ್ತಿದ್ದೇವೆ. ಅಮೆರಿಕದ ಕಡೆಯಿಂದ ನಿಜವಾದ ಪ್ರಾಮಾಣಿಕತೆ ಇದ್ದರೆ (ಅದು ಅವರಲ್ಲಿಲ್ಲ), ಹಾರ್ಮುಝ್ ಜಲಸಂಧಿಯನ್ನು ಮತ್ತೆ ತೆರೆಯುವ ಹಾದಿ ಅತ್ಯಂತ ಸ್ಪಷ್ಟವಾಗಿದೆ" ಎಂದು ಹೇಳಿದರು.
ತನ್ನ ಬಂದರುಗಳ ಮೇಲಿನ ಅಮೆರಿಕದ ದಿಗ್ಬಂಧನವನ್ನು ತೆರವುಗೊಳಿಸುವುದು, ತನ್ನ ತೈಲ ರಫ್ತಿನ ಮೇಲಿನ ಅಮೆರಿಕದ ನಿರ್ಬಂಧಗಳನ್ನು ಹಿಂಪಡೆಯುವುದು ಹಾಗೂ ಎಲ್ಲಾ ಪ್ರಾದೇಶಿಕ ರಂಗಗಳಲ್ಲಿನ ಸಂಘರ್ಷಗಳನ್ನು ಕೊನೆಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳು ಇರಾನ್ನ ಷರತ್ತುಗಳಲ್ಲಿ ಸೇರಿವೆ. ಅಮೆರಿಕ ಇರಾನ್ನ ಷರತ್ತುಗಳನ್ನು ಒಪ್ಪಿಕೊಂಡರೆ, ಆರು ದಿನಗಳಲ್ಲಿ ಜಲಸಂಧಿಯನ್ನು ಮತ್ತೆ ತೆರೆಯಬಹುದು ಮತ್ತು ಮರುದಿನ ಮಾತುಕತೆಗಳನ್ನು ಪುನರಾರಂಭಿಸಬಹುದು ಎಂದು ಅರಾಘ್ಚಿ ಹೇಳಿದ್ದಾರೆ.
ಹಾರ್ಮುಝ್ ಜಲಸಂಧಿ ತೆರೆಯಲು ಇರಾನ್ ಪ್ರಸ್ತಾಪ :
ಕಳೆದ ತಿಂಗಳು ನ್ಯೂಯಾರ್ಕ್ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅಬ್ಬಾಸ್ ಅರಾಘ್ಚಿ, ಫೆಬ್ರವರಿಯಿಂದ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಅಮೆರಿಕಕ್ಕೆ ಏಳು ದಿನಗಳ ಯೋಜನೆಯನ್ನು ಪ್ರಸ್ತಾಪಿಸಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು.
ಇರಾನ್ನ ಪ್ರಸ್ತಾಪವು ಈ ಕೆಳಗಿನ ಷರತ್ತುಗಳನ್ನು ವಿಧಿಸಿತ್ತು:
► ಲೆಬನಾನ್ ಸೇರಿದಂತೆ ಎಲ್ಲಾ ಕಡೆಗಳಲ್ಲಿನ ಸಂಘರ್ಷಗಳು ಏಳು ದಿನಗಳ ಅವಧಿಯಲ್ಲಿ ಕೊನೆಗೊಳ್ಳಬೇಕು.
► ಇರಾನ್ ತೈಲದ ಮೇಲಿನ ನಿರ್ಬಂಧಗಳನ್ನು ಅಮೆರಿಕ ರದ್ದುಗೊಳಿಸಬೇಕು, ದೇಶದ ತಡೆಹಿಡಿಯಲಾದ ಆಸ್ತಿಯನ್ನು (ಕನಿಷ್ಠ 12 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ) ಬಿಡುಗಡೆ ಮಾಡಬೇಕು ಮತ್ತು ಇರಾನ್ ಮೇಲಿನ ತನ್ನ ನೌಕಾಪಡೆಯ ದಿಗ್ಬಂಧನವನ್ನು ತೆರವುಗೊಳಿಸಬೇಕು.
► ಏಳನೇ ದಿನದಂದು ಹಾರ್ಮುಝ್ ಜಲಸಂಧಿಯನ್ನು ಮುಕ್ತಗೊಳಿಸಲಾಗುತ್ತದೆ.
ಅಮೆರಿಕ ಇದಕ್ಕೆ ಒಪ್ಪಿಗೆ ಸೂಚಿಸಿದ ತಕ್ಷಣ ಇರಾನ್ ಈ ಯೋಜನೆಯನ್ನು ಜಾರಿಗೆ ತರಲಿದೆ ಎಂದು ಅರಾಘ್ಚಿ ಹೇಳಿದ್ದರು. ಜೂನ್ನಲ್ಲಿ ಇರಾನ್ ಮತ್ತು ಅಮೆರಿಕ ಒಪ್ಪಿಕೊಂಡಿದ್ದ ತಿಳುವಳಿಕಾ ಒಪ್ಪಂದದ (MoU) ಬದ್ಧತೆಗಳನ್ನು ಆಧರಿಸಿ ಈ ಪ್ರಸ್ತಾಪವನ್ನು ರೂಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಜೂನ್ನಲ್ಲಿ ನಡೆದ ಒಪ್ಪಂದವು, ಏಪ್ರಿಲ್ನಲ್ಲಿ ಘೋಷಿಸಲಾದ ಕದನ ವಿರಾಮವನ್ನು ಕಾಗದದ ಮೇಲೆ 60 ದಿನಗಳ ಕಾಲ ವಿಸ್ತರಿಸಿತ್ತು. ಈ ಅವಧಿಯಲ್ಲಿ, ಎರಡೂ ದೇಶಗಳು ಅಂತಿಮ ಒಪ್ಪಂದದ ಷರತ್ತುಗಳ ಕುರಿತು ಮಾತುಕತೆ ನಡೆಸುತ್ತಿದ್ದರೂ, ಅಮೆರಿಕವು ಇರಾನ್ ತೈಲ ರಫ್ತಿಗೆ ವಿನಾಯಿತಿ ನೀಡುತ್ತದೆ ಮತ್ತು ಪಶ್ಚಿಮ ಏಷ್ಯಾ ಯುದ್ಧ ಪ್ರಾರಂಭವಾಗುವ ಮೊದಲು ಜಾಗತಿಕ ತೈಲ ಪೂರೈಕೆಯ ಐದನೇ ಒಂದು ಭಾಗದಷ್ಟು ವ್ಯಾಪಾರ ನಡೆಯುತ್ತಿದ್ದ ಇರಾನ್ ಮತ್ತು ಒಮಾನ್ ನಡುವಿನ ಕಿರಿದಾದ ಜಲಮಾರ್ಗವಾದ ಹಾರ್ಮುಝ್ ಜಲಸಂಧಿಯ ಮೂಲಕ ಹಡಗುಗಳ ಸಂಚಾರವು ಹಂತ ಹಂತವಾಗಿ ಯುದ್ಧಪೂರ್ವ ಸ್ಥಿತಿಗೆ ಮರಳುತ್ತದೆ ಎಂಬ ಭರವಸೆಯಿತ್ತು. ಹಾರ್ಮುಝ್ ಜಲಸಂಧಿಯ ಮೂಲಕ ಸಮುದ್ರ ಸಂಚಾರವನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಇರಾನ್ ಮತ್ತು ಒಮಾನ್ "ನಿರ್ಧರಿಸುತ್ತವೆ" ಎಂದೂ ಆ ಒಪ್ಪಂದದಲ್ಲಿ ಹೇಳಲಾಗಿತ್ತು.
ರಿಪಬ್ಲಿಕನ್ ಮತ್ತು ಡೆಮೋಕ್ರಾಟ್ ಇಬ್ಬರಿಂದಲೂ ಟೀಕೆಗೆ ಒಳಗಾಗಿದ್ದ ಈ ತಿಳುವಳಿಕಾ ಒಪ್ಪಂದವು (MoU), ಇಸ್ರೇಲ್ ಲೆಬನಾನ್ನಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವುದನ್ನೂ ಒಳಗೊಂಡಿತ್ತು. ಆದರೆ, ಎರಡೂ ಕಡೆಯಿಂದ ನಡೆದ ಉಲ್ಲಂಘನೆಗಳ ಆರೋಪದ ಬಳಿಕ ಜುಲೈ ಆರಂಭದಲ್ಲಿ ಈ ಒಪ್ಪಂದ ಮುರಿದುಬಿದ್ದಿತ್ತು.
ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಆಡಳಿತವು ತಾನು ಜೂನ್ ಒಪ್ಪಂದಕ್ಕೆ ಹಿಂತಿರುಗುವುದಿಲ್ಲ ಎಂದು ಹೇಳಿದ್ದರೂ, ನ್ಯೂಯಾರ್ಕ್ನಲ್ಲಿದ್ದ ಇರಾನ್ ಅಧಿಕಾರಿಗಳು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಡುವೆಯೇ ಅಮೆರಿಕದೊಂದಿಗೆ ರಾಜತಾಂತ್ರಿಕ ಮಾತುಕತೆಗಳಲ್ಲಿ ತೊಡಗಿಸಿಕೊಂಡಿದ್ದರು.
ಭಿನ್ನಾಭಿಪ್ರಾಯದ ಪ್ರಮುಖ ವಿಷಯಗಳು :
ಅಮೆರಿಕದಿಂದ ಪ್ರತಿಕ್ರಿಯೆ ಬಂದಿರುವುದನ್ನು ಟೆಹ್ರಾನ್ ಬಳಿಕ ಒಪ್ಪಿಕೊಂಡಿತಾದರೂ, ಹಾರ್ಮುಝ್ ಜಲಸಂಧಿಯನ್ನು ಮತ್ತೆ ತೆರೆಯಲು ಇರಾನ್ ವಿಧಿಸಿದ ಎಲ್ಲಾ ಏಳು ಷರತ್ತುಗಳನ್ನು ವಾಷಿಂಗ್ಟನ್ ಪರಿಗಣಿಸಲು ವಿಫಲವಾದ ಕಾರಣ ಮಾತುಕತೆಗಳು ಸ್ಥಗಿತಗೊಂಡಿವೆ ಎಂದು ಇರಾನ್ನ ಭದ್ರತಾ ಮುಖ್ಯಸ್ಥರು ಕಳೆದ ವಾರ ತಿಳಿಸಿದ್ದಾರೆ.
ಆರಂಭದಿಂದಲೇ ಇರಾನ್ನ ಪರಮಾಣು ಕಾರ್ಯಕ್ರಮದ ವಿಷಯವನ್ನು ಪ್ರಸ್ತಾಪಿಸಬೇಕು ಎಂಬ ವಾಷಿಂಗ್ಟನ್ನ ಪಟ್ಟು ಪ್ರಮುಖ ಭಿನ್ನಾಭಿಪ್ರಾಯದ ವಿಷಯವಾಗಿದೆ. ಈ ತಿಂಗಳ ಆರಂಭದಲ್ಲಿ ಮಾತನಾಡಿದ್ದ ಅಮೆರಿಕದ ಉಪಾಧ್ಯಕ್ಷ ಜೆ. ಡಿ. ವ್ಯಾನ್ಸ್, ಅಮೆರಿಕದ ಬೇಡಿಕೆಗಳನ್ನು ಈಡೇರಿಸಲು ಮತ್ತು ಈಗ ಎಂಟನೇ ತಿಂಗಳಿಗೆ ಕಾಲಿಟ್ಟಿರುವ ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ತನ್ನ ಯುರೇನಿಯಂ ಸಮೃದ್ಧೀಕರಣ ಸಾಮರ್ಥ್ಯವನ್ನು "ಗಣನೀಯವಾಗಿ" ಕಡಿಮೆ ಮಾಡಬೇಕು ಎಂದು ಹೇಳಿದ್ದರು.
ಟೆಹ್ರಾನ್ ಪ್ರಕಾರ, ಮಾತುಕತೆಗಳು ಆರಂಭದಲ್ಲಿ ಹಾರ್ಮುಝ್ ಜಲಸಂಧಿಯನ್ನು ಮತ್ತೆ ತೆರೆಯುವುದು ಮತ್ತು ಆ ಜಲಮಾರ್ಗದಲ್ಲಿ ಭದ್ರತೆಯನ್ನು ಮರುಸ್ಥಾಪಿಸುವುದರ ಮೇಲಷ್ಟೇ ಗಮನ ಹರಿಸಬೇಕು. ಯುದ್ಧ ಪ್ರಾರಂಭವಾಗುವ ಮೊದಲು, ಇರಾನ್ ಮತ್ತು ಒಮಾನ್ ನಡುವಿನ ಈ ಕಿರಿದಾದ ಜಲಮಾರ್ಗವು ಜಾಗತಿಕ ತೈಲ ಮತ್ತು ಎಲ್ಎನ್ಜಿ ವ್ಯಾಪಾರದ ಐದನೇ ಒಂದು ಭಾಗದಷ್ಟು ಸಾಗಾಟಕ್ಕೆ ಬಳಕೆಯಾಗುತ್ತಿತ್ತು.
ನವೆಂಬರ್ನಲ್ಲಿ ನಡೆಯಲಿರುವ ಅಮೆರಿಕದ ಮಧ್ಯಂತರ ಚುನಾವಣೆಗೆ ಮುನ್ನವೇ ಎರಡೂ ಕಡೆಯವರು ಒಪ್ಪಂದಕ್ಕೆ ಬರುವುದು "ಉತ್ತಮ" ಎಂದು ಅರಾಘ್ಚಿ ಕಳೆದ ತಿಂಗಳು ಸುಳಿವು ನೀಡಿದ್ದರು. ಟೆಹ್ರಾನ್ "ಯಾವುದೇ ಧಾವಂತದಲ್ಲಿಲ್ಲ" ಎಂದು ಅವರು ಪ್ರತಿಪಾದಿಸಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ UNGA ಭಾಷಣದಲ್ಲಿ, ನವೆಂಬರ್ 3ರ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷವು ಅಧಿಕಾರ ಕಳೆದುಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿ ಇರಾನ್ ಸರ್ಕಾರವು ಒಪ್ಪಂದ ಮಾಡಿಕೊಳ್ಳುವುದನ್ನು ತಡೆಹಿಡಿಯುತ್ತಿದೆ ಎಂದು ಆರೋಪಿಸಿದ್ದರು.
ಪ್ರಸ್ತುತ, ರಿಪಬ್ಲಿಕನ್ನರು ಅಮೆರಿಕ ಕಾಂಗ್ರೆಸ್ನ ಎರಡೂ ಸದನಗಳಾದ ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ನಿಯಂತ್ರಣ ಹೊಂದಿದ್ದಾರೆ. ನವೆಂಬರ್ 3ರ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಡೆಮೋಕ್ರಾಟ್ಗಳು ಸ್ವಲ್ಪ ಮೇಲುಗೈ ಹೊಂದಿದ್ದಾರೆ ಎಂದು ಇತ್ತೀಚಿನ ಸಮೀಕ್ಷೆಗಳು ಸೂಚಿಸುತ್ತವೆ.
ಯುದ್ಧ ಮುಂದುವರಿದಂತೆ ಇರಾನ್ನ ಅರ್ಥವ್ಯವಸ್ಥೆಯು ತೀವ್ರ ಸಂಕಷ್ಟಕ್ಕೆ ಸಿಲುಕಿರುವುದರಿಂದ, ಒಪ್ಪಂದಕ್ಕೆ ಬರುವುದು ಇರಾನ್ಗೂ ಅತ್ಯಂತ ಮಹತ್ವದ್ದಾಗಿದೆ. ಗಗನಕ್ಕೇರಿರುವ ಆಹಾರ ಹಣದುಬ್ಬರ, ಔಷಧಗಳ ಕೊರತೆ ಮತ್ತು ವ್ಯಾಪಾರ-ವಹಿವಾಟಿಗೆ ನಿರಂತರ ಅಡಚಣೆಗಳು ಹೆಚ್ಚಿನ ಇರಾನಿಯನ್ನರ ಮೇಲೆ ತೀವ್ರ ಪರಿಣಾಮ ಬೀರಿವೆ.
ಸೌಜನ್ಯ: indianexpress.com






