WhatsApp ಪರಿಚಯಿಸಿರುವ ʼಯೂಸರ್ನೇಮ್ ಫೀಚರ್ʼ ನ ಮೂಲ ಉದ್ದೇಶವೇನು? ಇದರಿಂದ ಭದ್ರತೆ ಅಥವಾ ರಕ್ಷಣೆ ಸಿಗುವುದು ನಿಜವೇ?

Photo Credit : WhatsApp
ಒಂದೇ ಅಕೌಂಟ್ ಸೆಂಟರ್ ಇರುವುದು ಬಳಕೆದಾರರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಬದಲಾಗಿ ತಂತ್ರಜ್ಞಾನ ಸಂಸ್ಥೆಗಳಿಗೆ ಪ್ರಯೋಜನವಾಗುತ್ತದೆ. ಈ ತರಹದ ಕ್ರಮದ ಮೂಲಕ ಹೆಚ್ಚು ಡೇಟಾ ಸಂಗ್ರಹಿಸಿ ಅದರ ಮೇಲೆ ಮಾರುಕಟ್ಟೆ ಯೋಜಿಸಬಹುದಾಗಿದೆ.
ಖಾತೆಗಳನ್ನು ಸಂಪರ್ಕಿಸಲು ಒಂದೇ ಮಾರ್ಗವಾಗಿ ಫೋನ್ ಸಂಖ್ಯೆಗಳನ್ನು ಬಳಸುತ್ತಿದ್ದ ವರ್ಷಗಳ ನಂತರ ವಾಟ್ಸ್ಆ್ಯಪ್ ಬಳಕೆದಾರರ ಹೆಸರುಗಳನ್ನು (ಯೂಸರ್ನೇಮ್ ಫೀಚರ್) ತರುತ್ತಿದೆ. ಇನ್ನು ಮುಂದೆ ನೀವು ಅಪ್ಲಿಕೇಶನ್ ನಲ್ಲಿ ನಿಮ್ಮ ಸ್ವಂತ ಬಳಕೆದಾರ ಹೆಸರನ್ನು ಹೊಂದಬಹುದು. ಈ ಬಳಕೆದಾರ ಹೆಸರಿನಿಂದಲೇ ನೀವು ಇತರರನ್ನು ಸಂಪರ್ಕಿಸಬಹುದು. ಟೆಲಿಗ್ರಾಂ ಇದನ್ನು ಪರಿಚಯಿಸಿ ಕರಗತ ಮಾಡಿಕೊಂಡ ವರ್ಷಗಳ ನಂತರ ವಾಟ್ಸ್ಆ್ಯಪ್ ಈ ಫೀಚರ್ ಅನ್ನು ಏಕೆ ತರುತ್ತಿದೆ? ವಾಸ್ತವದಲ್ಲಿ ವಾಟ್ಸ್ಆ್ಯಪ್ ಬಳಕೆಯಿಂದಾಗಿ ಫೋನ್ ಸಂಖ್ಯೆಗಳು ಸುಲಭವಾಗಿ ಹಂಚಿಕೆಯಾಗುತ್ತಿವೆ. ಫೋನ್ ಸಂಖ್ಯೆ ಕೇವಲ ವಾಟ್ಸ್ಆ್ಯಪ್ ಗುರುತಾಗಿರುವುದಿಲ್ಲ. ಭಾರತದಲ್ಲಿ ಅದು ನಿಮ್ಮ ಆಧಾರ್, ಬ್ಯಾಂಕ್ ಖಾತೆ, ಯುಪಿಐ, ಸರ್ಕಾರಿ ದಾಖಲೆಗಳಿಗೆ ಲಿಂಕ್ ಆಗಿದೆ. ನೀವು ಅದನ್ನು ಅಪರಿಚಿತರು, ಹೊಸ ಸಂಪರ್ಕದ ಜೊತೆಗೆ ಹಂಚಿಕೊಂಡಾಗಲೆಲ್ಲ ಸೂಕ್ಷ್ಮ ಮಾಹಿತಿ ಹಂಚಿಕೆಯಾಗಿರುತ್ತದೆ ಎಂದು ವಾಟ್ಸ್ಆ್ಯಪ್ ನ ಮಾತೃಸಂಸ್ಥೆಯಾಗಿರುವ ಮೆಟಾ ಹೇಳುತ್ತಿದೆ.
ಇದೇ ವಿಷಯವಾಗಿ ಮೆಟಾ ಸಂಸ್ಥೆಯ ಹೊಸ ಬಳಕೆದಾರ ಹೆಸರು ಪರಿಚಯಿಸುವ ʼಯೂಸರ್ನೇಮ್ ಫೀಚರ್ʼ ಗೆ ಕೇಂದ್ರ ಸರ್ಕಾರ ತಡೆಯೊಡ್ಡಿದೆ. ಇದು ಸಮಸ್ಯೆಯ ಒಂದು ಮಜಲಾದರೆ ಸಮಸ್ಯೆಯ ಮತ್ತೊಂದು ಮಜಲು ವಾಟ್ಸ್ಆ್ಯಪ್ ಈಗ ಏಕೆ ಬಳಕೆದಾರ ಹೆಸರನ್ನು ಪರಿಚಯಿಸಿದೆ ಎನ್ನುವುದು!
ಇದೀಗ ಬಳಕೆದಾರ ಹೆಸರಿನ ಮೂಲಕ ಮೆಟಾ ಪ್ರತಿಯೊಬ್ಬರಿಗೂ ಒಂದು ಮೆಟಾ ಖಾತೆ ಕೇಂದ್ರವನ್ನು (ಮೆಟಾ ಅಕೌಂಟ್ ಸೆಂಟರ್) ರೂಪಿಸುತ್ತಿದೆ. ಅಂದರೆ ವಾಟ್ಸ್ಆ್ಯಪ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ, ಥ್ರೆಡ್ಗೆ ಒಂದೇ ಅಕೌಂಟ್ ಸೆಂಟರ್ ಇರುತ್ತದೆ. ಎಲ್ಲವನ್ನೂ ಪರಸ್ಪರ ಜೋಡಿಸಲಾಗುತ್ತದೆ. ಅಗತ್ಯವಿಲ್ಲದೆ ಇದ್ದರೆ ಈ ಲಿಂಕ್ ತೆಗೆದು ಹಾಕುವ ಅವಕಾಶವೂ ಇದೆ. ಹೀಗೆ ಒಂದೇ ಅಕೌಂಟ್ ಸೆಂಟರ್ ಇರುವುದು ಉತ್ತಮವೆ ಅಥವಾ ಬೇರೆ ಬೇರೆ ಇರಬೇಕೆ? ಈ ಒಂದು ಅಕೌಂಟ್ ಸೆಂಟರ್ ಮೂಲಕ ಕಂಪನಿ ಯಾವ ಡೇಟಾವನ್ನು ಕೇಂದ್ರೀಕರಿಸಲಿದೆ? ಕಂಪನಿಗಳು ಬಳಕೆದಾರನ ಹೆಸರಿನಲ್ಲಿ ಸಂಗ್ರಹವಾದ ಡೇಟಾವನ್ನು ಏನು ಮಾಡುತ್ತವೆ? ಅಥವಾ ಅದು ಬೇರೆಯವರ ಕೈಗೆ ಸಿಗುವ ಸಾಧ್ಯತೆ ಇದೆಯೆ?
ಹೀಗೆ ಒಂದೇ ಅಕೌಂಟ್ ಸೆಂಟರ್ ಇರುವುದು ಬಳಕೆದಾರರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಬದಲಾಗಿ ತಂತ್ರಜ್ಞಾನ ಸಂಸ್ಥೆಗಳಿಗೆ ಪ್ರಯೋಜನವಾಗುತ್ತದೆ. ಈ ತರಹದ ಕ್ರಮದ ಮೂಲಕ ಹೆಚ್ಚು ಡೇಟಾ ಸಂಗ್ರಹಿಸಿ ಅದರ ಮೇಲೆ ಮಾರುಕಟ್ಟೆ ಯೋಜಿಸಬಹುದಾಗಿದೆ. ಮೆಟಾ ಬಳಕೆದಾರ ಹೆಸರು ಪರಿಚಯಿಸುವ ಮೂಲಕ ಒಂದು ಸಿಂಗಲ್ ಸೆಂಟರ್ ನಲ್ಲಿ ಎಲ್ಲರ ಮಾಹಿತಿ ಸಂಗ್ರಹಿಸಲಿದೆ.
ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳಿಂದ ಮುಕ್ತವಾಗಿ ಬದುಕುವುದು ಸಾಧ್ಯವೆ? ಈ ಬಗ್ಗೆ ತಂತ್ರಜ್ಞಾನ ತಜ್ಞರು ಯಾವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ?
ಜಾಗತಿಕ ಡಿಜಿಟಲ್ ಪರಿಸರದ ಭಾಗವಾಗಿದ್ದೀರಿ ಜೋಕೆ!
“ಇಂದು ನಾವು ಬಳಸುವ ಫೇಸ್ಬುಕ್, ಇನ್ಸ್ಟಾಗ್ರಾಂ, ವಾಟ್ಸ್ಆಪ್ ಇವು ಕೇವಲ ಪ್ರತ್ಯೇಕ ಅಪ್ಲಿಕೇಶನ್ಗಳಲ್ಲ. ಅವು ಒಂದೇ ಡಿಜಿಟಲ್ ಪರಿಸರದ ಭಾಗಗಳು. ನಾವು ಏನು ಓದುತ್ತೇವೆ, ಯಾರೊಂದಿಗೆ ಮಾತನಾಡುತ್ತೇವೆ, ಯಾವ ವಿಷಯಗಳನ್ನು ಹುಡುಕುತ್ತೇವೆ, ಯಾವ ಜಾಹೀರಾತುಗಳ ಮೇಲೆ ನಿಲ್ಲುತ್ತೇವೆ, ಯಾವ ವೆಬ್ಸೈಟ್ಗಳಿಗೆ ಭೇಟಿ ನೀಡುತ್ತೇವೆ—ಇಂತಹ ಮಾಹಿತಿಗಳ ಸಂಯೋಜನೆಯಿಂದ ನಮ್ಮ ಬಗ್ಗೆ ಅತ್ಯಂತ ವಿವರವಾದ ಡಿಜಿಟಲ್ ಚಿತ್ರಣವನ್ನು ರೂಪಿಸಬಹುದು. ಇದು ಕೇವಲ ಜಾಹೀರಾತುಗಳನ್ನು ತೋರಿಸುವ ವಿಷಯವಲ್ಲ. ಒಬ್ಬ ವ್ಯಕ್ತಿಯ ಆಸಕ್ತಿ, ಆರ್ಥಿಕ ಸ್ಥಿತಿ, ರಾಜಕೀಯ ಒಲವು, ಧಾರ್ಮಿಕ ಅಭಿರುಚಿ, ಖರೀದಿ ಸ್ವಭಾವ, ದಿನನಿತ್ಯದ ಅಭ್ಯಾಸಗಳು—ಇವೆಲ್ಲವನ್ನೂ ಅಲ್ಗರಿದಮ್ಗಳು ಊಹಿಸುವ ಮಟ್ಟಿಗೆ ಮಾಹಿತಿ ಸಂಗ್ರಹವಾಗುವ ಅಪಾಯ ಇದೆ. ಪ್ರಶ್ನೆ ಏನೆಂದರೆ, ಈ ಮಾಹಿತಿಯ ಮೇಲೆ ನಿಜವಾದ ನಿಯಂತ್ರಣ ಯಾರದು? ಬಳಕೆದಾರನದೋ, ಕಂಪನಿಯದೋ?” ಎಂದು ಪ್ರಶ್ನಿಸುತ್ತಾರೆ ತಂತ್ರಜ್ಞಾನ ತಜ್ಞರಾದ ಕುಮಾರ್ ಎಸ್.
ಎಐ ಮಾದರಿಗಳ ತರಬೇತಿಗೆ ಪೋಸ್ಟ್ಗಳ ಬಳಕೆ
ಅವರ ಪ್ರಕಾರ, “ಇನ್ನೊಂದು ಕಳವಳಕಾರಿ ಬೆಳವಣಿಗೆ ಎಂದರೆ ಎಐ. ಸಾರ್ವಜನಿಕವಾಗಿ ಹಂಚಿಕೊಳ್ಳುವ ಪೋಸ್ಟ್ಗಳು, ಚಿತ್ರಗಳು, ಬರಹಗಳು ಮುಂತಾದವುಗಳನ್ನು ಎಐ ಮಾದರಿಗಳ ತರಬೇತಿಗೆ ಬಳಸುವ ಬಗ್ಗೆ ವಿಶ್ವದಾದ್ಯಂತ ಚರ್ಚೆಗಳು ನಡೆಯುತ್ತಿವೆ. ಅನೇಕ ಬಳಕೆದಾರರಿಗೆ ತಮ್ಮ ಸೃಜನಶೀಲ ಕೃತಿಗಳು ಅಥವಾ ವೈಯಕ್ತಿಕ ಅಭಿವ್ಯಕ್ತಿಗಳನ್ನು ಈ ರೀತಿಯಾಗಿ ಬಳಸಲ್ಪಡಬಹುದು ಎಂಬ ಅರಿವೇ ಇರುವುದಿಲ್ಲ.”
ಅನುಮತಿ, ಪಾರದರ್ಶಕತೆ ಮತ್ತು ಬಳಕೆದಾರರ ಹಕ್ಕುಗಳ ಬಗ್ಗೆ ಇನ್ನೂ ಅನೇಕ ಪ್ರಶ್ನೆಗಳಿಗೆ ತಂತ್ರಜ್ಞಾನ ಸಂಸ್ಥೆಗಳು ಉತ್ತರಿಸಬೇಕಿವೆ. ಇದರ ಜೊತೆಗೆ, ಸಾವಿರಾರು ವೆಬ್ಸೈಟ್ಗಳು ಮತ್ತು ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಅಳವಡಿಸಲಾಗಿರುವ ಟ್ರ್ಯಾಕಿಂಗ್ ತಂತ್ರಜ್ಞಾನಗಳ ಮೂಲಕ, ಬಳಕೆದಾರರು ಸಾಮಾಜಿಕ ಜಾಲತಾಣದ ಹೊರಗೆ ಏನು ಮಾಡುತ್ತಾರೆ ಎಂಬ ಮಾಹಿತಿಯನ್ನೂ ಸಂಗ್ರಹಿಸುವ ಸಾಮರ್ಥ್ಯ ದೊಡ್ಡ ತಂತ್ರಜ್ಞಾನ ಕಂಪನಿಗಳಿಗೆ ಇದೆ. ಒಂದು ಅಪ್ಲಿಕೇಶನ್ನಿಂದ ಹೊರಬಂದ ನಂತರವೂ ನಮ್ಮ ಡಿಜಿಟಲ್ ಹೆಜ್ಜೆಗುರುತುಗಳನ್ನು ಅನುಸರಿಸುವ ವ್ಯವಸ್ಥೆ, ವೈಯಕ್ತಿಕ ಗೌಪ್ಯತೆಯ ಮಿತಿಗಳನ್ನು ಪ್ರಶ್ನಿಸುವಂತಿದೆ.
ಎಂಡ್-ಟು-ಎಂಡ್ ಎನ್ಕ್ರಿಪ್ಷನ್ ರಕ್ಷಣೆ ಸಾಧ್ಯವೆ?
“ವಾಟ್ಸ್ಆ್ಯಪ್ ಕುರಿತು ಹೇಳುವುದಾದರೆ, ಸಂದೇಶಗಳ ವಿಷಯವು ಎಂಡ್-ಟು-ಎಂಡ್ ಎನ್ಕ್ರಿಪ್ಷನ್ ಮೂಲಕ ರಕ್ಷಿಸಲ್ಪಟ್ಟಿದೆ ಎಂದು ಕಂಪನಿ ಹೇಳುತ್ತದೆ. ಅಂದರೆ ಸಂದೇಶದ ವಿಷಯವನ್ನು ಕಂಪನಿಯೂ ಓದಲು ಸಾಧ್ಯವಿಲ್ಲ ಎಂಬುದು ಅದರ ತಾಂತ್ರಿಕ ವಿನ್ಯಾಸ. ಈ ಬಗ್ಗೆ ವಾಟ್ಸ್ಆ್ಯಪ್ ಸ್ಪಷ್ಟವಾಗಿ ತನ್ನ ಅಪ್ಲಿಕೇಶನ್ನಲ್ಲಿ ಬರೆದು ನೀಡಿದೆ. ಆದರೆ ಯಾರೊಂದಿಗೆ ಮಾತನಾಡಿದ್ದೀರಿ, ಎಷ್ಟು ಹೊತ್ತು ಮಾತನಾಡಿದ್ದೀರಿ, ಯಾವ ಸಾಧನ ಬಳಸಿದ್ದೀರಿ, ಯಾವ ಸಮಯದಲ್ಲಿ ಸಂಪರ್ಕ ಹೊಂದಿದ್ದೀರಿ ಎಂಬಂತಹ ಮೆಟಾಡೇಟಾ ಕೂಡ ವ್ಯಕ್ತಿಯ ಬದುಕಿನ ಬಗ್ಗೆ ಸಾಕಷ್ಟು ಮಾಹಿತಿ ನೀಡಬಲ್ಲದು! ಈ ಅಂಶದ ಬಗ್ಗೆ ಗೌಪ್ಯತಾ ಹೋರಾಟಗಾರರು ನಿರಂತರವಾಗಿ ಕಳವಳ ವ್ಯಕ್ತಪಡಿಸುತ್ತಿದ್ದಾರೆ” ಎನ್ನುತ್ತಾರೆ ಕುಮಾರ್ ಎಸ್.






