ವರ್ಷಕ್ಕೊಮ್ಮೆ ಬರುವ ಬಕ್ರೀದ್ ಹಬ್ಬದ ವೇಳೆ ಪ್ರಾಣಿ ಬಲಿ ನಿಷೇಧದ ಮಾತು, ಮುಸ್ಲಿಂ ಸಮುದಾಯಗಳಿಗೆ ಎಚ್ಚರಿಕೆಯ ಹೇಳಿಕೆಗಳನ್ನು ನೀಡುವುದರ ಹಿಂದಿನ ತರ್ಕವೇನು?

PC | PTI
ಬಕ್ರೀದ್ ಹಬ್ಬಕ್ಕೆ ಇನ್ನೇನು ಕೆಲವು ದಿನಗಳಿವೆ ಎಂದಾದಾಗ ಬಿಜೆಪಿ ನಾಯಕರು, ಸಚಿವರು ಮತ್ತು ಬಿಜೆಪಿ ನೇತೃತ್ವದ ಸರ್ಕಾರಗಳ ಮುಖ್ಯಮಂತ್ರಿಗಳು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ನೀಡುವ ಎಚ್ಚರಿಕೆ ಮತ್ತು ಬೆದರಿಕೆಯ ಹೇಳಿಕೆಗಳನ್ನು ಕೊಡುತ್ತಿರುತ್ತಾರೆ.
ಇದನ್ನು ನೋಡಿದರೆ ಮುಸ್ಲಿಮರಿಗಿಂತಲೂ ಹೆಚ್ಚಾಗಿ ಹಿಂದುತ್ವವಾದಿ ಶಕ್ತಿಗಳೇ ಈದ್ ಮತ್ತು ಬಕ್ರೀದ್ ಹಬ್ಬಗಳಿಗಾಗಿ ಕಾತರದಿಂದ ಕಾಯುತ್ತಿರುವಂತೆ ತೋರುತ್ತದೆ. ಮುಸ್ಲಿಂ ಹಬ್ಬಗಳು ಹತ್ತಿರ ಬರುತ್ತಿದ್ದಂತೆಯೇ ಇವರಲ್ಲಿನ ಉತ್ಸಾಹವು ಎದ್ದು ಕಾಣುತ್ತದೆ. ಮುಸ್ಲಿಮರನ್ನು ಅವಮಾನಿಸಲು ಮತ್ತು ಕಿರುಕುಳ ನೀಡಲು ಮತ್ತೊಂದು ಅವಕಾಶ ಸಿಗಲಿದೆ ಎಂಬ ಕಾರಣಕ್ಕೆ ಈ ನಾಯಕರು ಎಷ್ಟು ಉತ್ಸುಕರಾಗಿದ್ದಾರೆ ಎಂಬುದು ಇವರ ಹೇಳಿಕೆಗಳನ್ನು ಆಲಿಸಿದರೆ ಅಥವಾ ಓದಿದರೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಅಂದಹಾಗೆ, ಈ ಹೇಳಿಕೆಗಳಲ್ಲಿ ಯಾವುದೇ ಶುಭ ಹಾರೈಕೆ ಅಥವಾ ಸದ್ಭಾವನೆಯ ಸಂದೇಶಗಳಿರುವುದಿಲ್ಲ.
ಪಶ್ಚಿಮ ಬಂಗಾಳದಲ್ಲಿ ಸಚಿವ ದಿಲೀಪ್ ಘೋಷ್ ಅವರು, ಪ್ರತಿಯೊಂದೂ "ಕಾನೂನಿನ ಚೌಕಟ್ಟಿನಲ್ಲೇ" ನಡೆಯಬೇಕು. ಯಾರೂ ಕಾನೂನು ಉಲ್ಲಂಘಿಸಲು ಅವಕಾಶ ನೀಡುವುದಿಲ್ಲ ಎಂದು ಹಿಂದಿಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಈ ಎಚ್ಚರಿಕೆಗಳು ಬಕ್ರೀದ್ ಹಬ್ಬದ ಮುನ್ನ ಮುಸ್ಲಿಮರನ್ನು ಗುರಿಯಾಗಿಸಿಕೊಂಡೇ ನೀಡಲಾದವು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಇದಕ್ಕೂ ಮುನ್ನ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ರಸ್ತೆಗಳಲ್ಲಿ ನಮಾಜ್ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಗೋಹತ್ಯೆಯ ವಿರುದ್ಧ ಆದೇಶಗಳನ್ನು ಹೊರಡಿಸಲಾಗಿತ್ತು.
ಮಸೀದಿಗಳಲ್ಲಿ ಪ್ರಾರ್ಥನೆಗಾಗಿ ಅಝಾನ್ ಕೂಗಲು ಬಿಡುವುದಿಲ್ಲ ಎನ್ನಲಾಗಿತ್ತು. ಇನ್ನು ಬಕ್ರೀದ್ಗೆ ಕೆಲವೇ ದಿನಗಳಿರುವಾಗ, ಈ ಹಬ್ಬಕ್ಕೆ ನೀಡಲಾಗುತ್ತಿದ್ದ ಸಾಂಪ್ರದಾಯಿಕ ಎರಡು ದಿನಗಳ ರಜೆಯನ್ನು ಕೇವಲ ಒಂದು ದಿನಕ್ಕೆ ಕಡಿತಗೊಳಿಸಲಾಗುವುದು ಎಂದು ಘೋಷಿಸಲಾಯಿತು.
ಇತ್ತ ಉತ್ತರ ಪ್ರದೇಶದ ಮುಖ್ಯಮಂತ್ರಿಗಳು, ರಸ್ತೆಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಮುಸ್ಲಿಮರಿಗೆ ಅನುಮತಿ ನೀಡುವುದಿಲ್ಲ ಎಂದು ಎಚ್ಚರಿಸಿದ್ದರು. ಒಂದು ವೇಳೆ ಅವರಿಗೆ ಈ ಸಂದೇಶ ಅರ್ಥವಾಗದಿದ್ದರೆ, ಬೇರೆ ಮಾರ್ಗಗಳ ಮೂಲಕ "ಅರ್ಥ ಮಾಡಿಸಲಾಗುವುದು" ಎಂದಿದ್ದರು.
ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ, ಮುಸ್ಲಿಮರಿಗೆ ಕುರ್ಬಾನಿಯನ್ನು (ಬಲಿ) "ಸರಿಯಾದ ರೀತಿಯಲ್ಲಿ" ನೀಡುವಂತೆ ಸಲಹೆ ನೀಡಿದ್ದರು. ಗೋಹತ್ಯೆಯ ವಿರುದ್ಧ ಅಪೀಲು ಮಾಡಿದ ಮುಸ್ಲಿಂ ಧ್ವನಿಗಳನ್ನು ಅವರು ಶ್ಲಾಘಿಸಿದರು. ಅಷ್ಟೇ ಅಲ್ಲ, ಶರ್ಮಾ ಒಂದು ಹೆಜ್ಜೆ ಮುಂದೆ ಹೋಗಿ, ಮುಂದೊಂದು ದಿನ ಬಕ್ರೀದ್ ಹಬ್ಬವು ಸಂಪೂರ್ಣವಾಗಿ ಪ್ರಾಣಿ ಬಲಿ ಮುಕ್ತವಾಗಬೇಕು ಎಂದರು. ಮುಸ್ಲಿಮರು "ಸನಾತನ ಭಾವನೆಗಳನ್ನು" ಗೌರವಿಸುತ್ತಿದ್ದಾರೆ ಮತ್ತು ಇದರಿಂದ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದು ಅವರು ಘೋಷಿಸಿದರು.
ದಿಲ್ಲಿಯ ಬಿಜೆಪಿ ನಾಯಕರು ಸಹ ಪ್ರಾಣಿ ಬಲಿ ಮತ್ತು ನಮಾಜ್ ಎರಡೂ "ಮಿತಿಯೊಳಗೆ" ಇರಬೇಕು. ನಿಗದಿಪಡಿಸಿದ ನಿಯಮಗಳಂತೆಯೇ ನಡೆಯಬೇಕು ಎಂದು ಎಚ್ಚರಿಕೆಗಳನ್ನು ನೀಡಿದರು.
ಬಕ್ರೀದ್ ಹಬ್ಬಕ್ಕಾಗಿ ಹಸುಗಳನ್ನು ಕಾನೂನುಬಾಹಿರವಾಗಿ ಸಾಗಿಸಲಾಗುತ್ತಿದೆ ಎಂಬ ಶಂಕೆಯ ಮೇಲೆ ವಾಹನಗಳನ್ನು ತಡೆದು ದಾಳಿ ನಡೆಸುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಈ ವಿಷಯ ಈಗ ಕೇವಲ ಹಸುಗಳಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಆಡುಗಳನ್ನೂ ಸಹ ವಶಪಡಿಸಿಕೊಳ್ಳಲಾಗುತ್ತಿದೆ. ದೆಹಲಿಯಲ್ಲಿ ಬಕ್ರೀದ್ಗೆ ಕೆಲವೇ ದಿನಗಳ ಮುನ್ನ, ನೆಹರು ಹಿಲ್ ಪಾರ್ಕ್ನಲ್ಲಿ ಆಡುಗಳ ಖರೀದಿ ಮತ್ತು ಮಾರಾಟ ನಡೆಯಬಹುದು ಎಂಬ ಸಂದೇಹದಿಂದ ಅಲ್ಲಿ ಸಾರ್ವಜನಿಕ ಚಟುವಟಿಕೆಗಳನ್ನು ನಿಷೇಧಿಸಲಾಯಿತು.
ಪವಿತ್ರ ಪ್ರಾಣಿಯ ಸಾಗಣೆಯನ್ನು ಕಣ್ಗಾವಲಿನಲ್ಲಿಡಲು ಬಕ್ರೀದ್ ಹಬ್ಬದ ಮುನ್ನಾದಿನದಂದು 'ಗೋರಕ್ಷಕ' ತಂಡಗಳನ್ನು ರಚಿಸಲಾಗುತ್ತಿದೆ. ತಮ್ಮನ್ನು ಗೋರಕ್ಷಕರು ಎಂದು ಕರೆದುಕೊಳ್ಳುವ ಇವರು ವಾಹನಗಳನ್ನು ತಡೆದು ದಾಳಿ ನಡೆಸುತ್ತಿರುವ ಬಗ್ಗೆ ಆಗಾಗ್ಗೆ ವರದಿಯಾಗಿವೆ.
ಒಂದು ಟಿವಿ ವಾಹಿನಿ ಮಕ್ಕಾದಲ್ಲಿ ಹಸುಗಳು ಮತ್ತು ಒಂಟೆಗಳನ್ನು ಬಲಿ ನೀಡಲಾಗುತ್ತದೆಯೇ ಎಂಬುದನ್ನು ತನಿಖೆ ಮಾಡಲು ಅಲ್ಲಿಗೇ ಪ್ರಯಾಣ ಬೆಳೆಸಿದೆ. ಗಾಝಾದಲ್ಲಿ ಮಕ್ಕಳು ಹತ್ಯೆಗೀಡಾಗುತ್ತಿದ್ದಾಗ ಅಥವಾ ಸುಡಾನ್ ನಲ್ಲಿ ಭೀಕರ ಮಾರಣಹೋಮಗಳು ನಿರಂತರವಾಗಿ ನಡೆಯುತ್ತಿದ್ದಾಗ ಈ ವಾಹಿನಿಗಳು ಎಂದೂ ಅಲ್ಲಿಗೆ ಹೋಗಿರಲಿಲ್ಲ. ಆದರೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ, ಈ "ಪ್ರಮುಖ" ಮಾಹಿತಿಯನ್ನು ಸಂಗ್ರಹಿಸಿ ಭಾರತೀಯ ಪ್ರೇಕ್ಷಕರಿಗೆ ತಲುಪಿಸಲು ಮಕ್ಕಾಕ್ಕೆ ಪ್ರಯಾಣಿಸುವಂತಹ ಉದಾತ್ತ ಪತ್ರಿಕೋದ್ಯಮದ ಕಸರತ್ತನ್ನು ನಡೆಸುವುದು ಅವರಿಗೆ ಸೂಕ್ತವೆನಿಸಿತು. ಅರಬಿಸ್ತಾನದ "ನೈಜ" ಮುಸ್ಲಿಮರು ಭಾರತದ "ಮತಾಂತರಗೊಂಡ" ಮುಸ್ಲಿಮರಿಗಿಂತ ಹೆಚ್ಚು ವಿವೇಕಿಗಳು ಎಂಬುದನ್ನು ತೋರಿಸುವುದಷ್ಟೇ ಇದರ ಹಿಂದಿನ ಉದ್ದೇಶವಾಗಿತ್ತು.
ಪ್ರಾಣಿ ಹಕ್ಕುಗಳ ಸಂಘಟನೆಯಾದ 'ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್' (PETA), ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಆಡೊಂದು ತನ್ನನ್ನು ಬಲಿ ನೀಡದಂತೆ ಜನರ ಬಳಿ ಮರುಗುವಂತಹ ಪ್ರಚಾರಾಂದೋಲನವನ್ನು ಆರಂಭಿಸಿದೆ. ಅದರಲ್ಲಿ ಮಕ್ಕಳು ಪ್ರೀತಿಯಿಂದ ಆ ಪ್ರಾಣಿಯನ್ನು ಮುದ್ದಾಡುತ್ತಾರೆ. ಇಂತಹ ಅಸಹಾಯಕ ಜೀವಿಯನ್ನು ಕೊಲ್ಲಲು ಯಾರಾದರೂ ಇಷ್ಟು ನಿರ್ದಯಿಯಾಗಲು ಸಾಧ್ಯವೇ? ಎಂದು ಈ ಅಭಿಯಾನವು ಪ್ರಶ್ನಿಸುತ್ತದೆ. ಗಮನಾರ್ಹ ವಿಷಯವೆಂದರೆ, ಈ ಅಭಿಯಾನವನ್ನು ನಿಖರವಾಗಿ ಬಕ್ರೀದ್ ಹಬ್ಬಕ್ಕೆ ಮುನ್ನವೇ ಪ್ರಾರಂಭಿಸಲಾಗಿದೆ.
ಪೆಟಾ (PETA) ಸಂಸ್ಥೆಯು ಇಂತಹದ್ದೇ ಒಂದು ಅಭಿಯಾನವನ್ನು ಕಾಮಾಖ್ಯ ದೇವಸ್ಥಾನದಲ್ಲಿ ನಡೆಸಲು ಸಾಧ್ಯವೇ? ಉಪನಯನ, ಮದುವೆ ಮತ್ತು ಇತರ ಆಚರಣೆಗಳ ಸಂದರ್ಭದಲ್ಲಿ ಹಲವಾರು ಪ್ರಾಣಿ ಬಲಿಗಳು ನಡೆಯುವ ದಿಯೋಘರ್ನಲ್ಲಿ ಇಂತಹ ಪ್ರಚಾರವನ್ನು ಕೈಗೊಳ್ಳಲು ಅದಕ್ಕೆ ಸಾಧ್ಯವೇ? ಅದು ಎಂದಿಗೂ ಮಾಡಿಲ್ಲ, ಮಾಡುವುದೂ ಇಲ್ಲ. ಪೆಟಾದ ಈ ಅಭಿಯಾನದಲ್ಲಿ ಆಡುಗಳ ಮೇಲಿನ ದಯೆಗಿಂತ ಮುಸ್ಲಿಮರ ಮೇಲಿನ ದ್ವೇಷವೇ ಹೆಚ್ಚಾಗಿ ಎದ್ದು ಕಾಣುತ್ತದೆ. ಆ ದ್ವೇಷವು ಪ್ರಾಣಿ ದಯೆಯ ಭಾಷೆಯ ಮುಖವಾಡದ ಹಿಂದೆ ಪರೋಕ್ಷವಾಗಿದ್ದರೂ, ಅದನ್ನು ಗ್ರಹಿಸದಿರಲು ಸಾಧ್ಯವಿಲ್ಲ. ನಿರ್ದಯಿ ಮುಸ್ಲಿಮರು ಆಡನ್ನು ಬಲಿ ಕೊಡುವ ಬಕ್ರೀದ್ ಒಂದು ಅಮಾನವೀಯ ಹಬ್ಬ ಎಂಬುದನ್ನು ಬಿಂಬಿಸುವುದೇ ಇದರ ಹಿಂದಿನ ಆಶಯ.
ಇತ್ತ ಮುಸ್ಲಿಮರ ಮೇಲಿನ ದಾಳಿಗಳು ಈಗ ವರ್ಷಪೂರ್ತಿ ಮುಂದುವರಿಯುತ್ತಲೇ ಇರುತ್ತವೆ. ಇದಕ್ಕಾಗಿ ಅವರು ಈದ್ ಅಥವಾ ಬಕ್ರೀದ್ನಂತಹ ಸಂದರ್ಭಗಳಿಗಾಗಿ ಕಾಯಬೇಕಾಗಿಲ್ಲ. ರಸ್ತೆಗಳಲ್ಲಿ, ಉಪಾಹಾರಗೃಹಗಳಲ್ಲಿ, ರೈಲು ಮತ್ತು ಬಸ್ಸುಗಳಲ್ಲಿ ಎಲ್ಲಿ ಬೇಕಾದರೂ, ಯಾವುದೇ ಸಮಯದಲ್ಲಿ, ಯಾವುದೇ ನೆಪದಲ್ಲಿ ಮುಸ್ಲಿಮರ ಮೇಲೆ ದಾಳಿ ನಡೆಸಬಹುದು, ಹಲ್ಲೆ ಮಾಡಬಹುದು ಮತ್ತು ಕೊಲ್ಲಬಹುದು. ಇದು ಭಾರತದಲ್ಲಿ ಈಗ ಸಾಮಾನ್ಯ ಸಂಗತಿಯಾಗಿದ್ದು, ಸುದ್ದಿಯಾಗುವುದೂ ನಿಂತುಹೋಗಿದೆ. ಆದರೆ ಬಕ್ರೀದ್ ಹಬ್ಬ ಹತ್ತಿರವಾಗುತ್ತಿದ್ದಂತೆ, ಮುಸ್ಲಿಂ ವಿರೋಧಿ ದ್ವೇಷದ ಈ ಅಭಿಯಾನವು ಮತ್ತಷ್ಟು ತೀವ್ರತೆಯನ್ನು ಪಡೆದುಕೊಳ್ಳುತ್ತದೆ.
ಎಲ್ಲಕ್ಕಿಂತ ಹೆಚ್ಚು ವಿಷಾದನೀಯ ಸಂಗತಿಯೆಂದರೆ, ಸಭ್ಯ ಹಿಂದೂಗಳೂ ಸಹ ಮುಸ್ಲಿಮರ ವಿರುದ್ಧದ ಈ ದ್ವೇಷವನ್ನು ಗುರುತಿಸಲು ಹಲವು ಬಾರಿ ವಿಫಲರಾಗುತ್ತಾರೆ. ರಸ್ತೆಗಳಲ್ಲಿ ಏಕೆ ಪ್ರಾರ್ಥನೆ ಸಲ್ಲಿಸಬೇಕು ಎಂದು ಅನೇಕ ಹಿಂದೂಗಳು ಮುಗ್ಧವಾಗಿ ಪ್ರಶ್ನಿಸುತ್ತಾರೆ. ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ರಸ್ತೆ ನಮಾಜ್ ಮೇಲಿನ ನಿರ್ಬಂಧಗಳನ್ನು ಅವರು ಸಮಂಜಸವಾದ ಕ್ರಮಗಳು ಎಂದು ಪರಿಗಣಿಸುತ್ತಾರೆ. ಆದರೆ ಪ್ರತಿ ಮಂಗಳವಾರ ಹನುಮಾನ್ ದೇವಾಲಯಗಳ ಹೊರಗಿನ ರಸ್ತೆಗಳು ಗಂಟೆಗಟ್ಟಲೆ ಏಕೆ ಬಂದ್ ಆಗಿರುತ್ತವೆ ಎಂದು ಅವರು ಎಂದಿಗೂ ಪ್ರಶ್ನಿಸುವುದಿಲ್ಲ. ಪ್ರತಿಯೊಂದು ಹಿಂದೂ ಹಬ್ಬದ ಸಂದರ್ಭದಲ್ಲೂ ರಸ್ತೆಗಳು ಮೂರ್ತಿಗಳು ಮತ್ತು ಮೆರವಣಿಗೆಗಳಿಂದ ತುಂಬಿರುತ್ತವೆ.
ಅದು ಗಣೇಶ ಚತುರ್ಥಿ, ರಥಯಾತ್ರೆ, ರಾಮನವಮಿ, ದುರ್ಗಾಪೂಜೆ, ಸರಸ್ವತಿ ಪೂಜೆ, ಮಹಾವೀರಿ ಅಖಾಡ ಮೆರವಣಿಗೆಗಳು, ಹನುಮಾನ್ ಜಯಂತಿ ಅಥವಾ ಇತರ ಯಾವುದೇ ಹಬ್ಬಗಳಿರಲಿ, ರಸ್ತೆಗಳನ್ನು ಕೇವಲ ಒಂದು ದಿನಕ್ಕೆ ಮಾತ್ರವಲ್ಲ, ಸತತವಾಗಿ ಹಲವು ದಿನಗಳ ಕಾಲ ಆಕ್ರಮಿಸಿಕೊಳ್ಳಲಾಗುತ್ತದೆ. ಇನ್ನು ಒಂದು ತಿಂಗಳ ಕಾಲ ನಡೆಯುವ ಕನ್ವರ್ ಯಾತ್ರೆಯ ಅವಧಿಯಲ್ಲಂತೂ ಇಡೀ ಹೆದ್ದಾರಿಗಳನ್ನೇ ಅಧಿಕೃತವಾಗಿ ಕನ್ವರಿಯಾಗಳಿಗೆ ಬಿಟ್ಟುಕೊಡಲಾಗುತ್ತದೆ.
ಹಿಂದೂ ಹಬ್ಬಗಳ ಸಂದರ್ಭದಲ್ಲಿ ಹಿಂದೂ ಮುಖ್ಯಮಂತ್ರಿಗಳು ಯಾರಾದರೂ, ಪ್ರತಿ ಹೆಜ್ಜೆಗೂ ಇರುವ ದೇವಾಲಯಗಳ ಒಳಗಡೆಯೇ ತಮ್ಮ ಪೂಜೆ-ಪುನಸ್ಕಾರಗಳನ್ನು ಸೀಮಿತಗೊಳಿಸಬೇಕು ಎಂದು ಎಂದಾದರೂ ಮನವಿ ಮಾಡಿದ್ದನ್ನು ನಾವು ಕೇಳಿದ್ದೇವೆಯೇ? ಇತರರಿಗೆ ತೊಂದರೆಯಾಗದ ರೀತಿಯಲ್ಲಿ ಹಬ್ಬಗಳನ್ನು ಆಚರಿಸಬೇಕು ಎಂದು ಹಿಂದೂಗಳಿಗೆ ಎಂದಾದರೂ ಯಾವುದೇ ಎಚ್ಚರಿಕೆಯನ್ನು ನೀಡಲಾಗಿದೆಯೇ?
ಮುಸ್ಲಿಮರು ತಮ್ಮ ಹಬ್ಬಗಳ ಸಂದರ್ಭದಲ್ಲಿ ಸಾರ್ವಜನಿಕವಾಗಿ ಯಾವುದೇ ಉನ್ಮಾದವನ್ನು ಸೃಷ್ಟಿಸುವುದಿಲ್ಲ. ಕ್ರಿಶ್ಚಿಯನ್ನರೂ ಸಹ ಹಾಗೆ ಮಾಡುವುದಿಲ್ಲ. ಅವರು ಎಂದಿಗೂ ದೇವಾಲಯಗಳ ಮುಂದೆ ಮೆರವಣಿಗೆ ನಡೆಸಿ ಪ್ರಾಣಿ ಬಲಿ ಕೊಡುವುದಿಲ್ಲ. ಮೊಹರಂ ಹಬ್ಬದ ಸಂದರ್ಭದಲ್ಲೂ ಮುಸ್ಲಿಮರು ದೇವಾಲಯಗಳ ಮುಂದೆ ನಿಂತು ಶೋಕಾಚರಣೆ ಮಾಡುವುದಿಲ್ಲ. ಆದರೆ ಮಸೀದಿಗಳ ಮುಂದೆ ಜೋರಾಗಿ ಸಂಗೀತ ನುಡಿಸಲು, ಮಸೀದಿಯ ಆವರಣದೊಳಗೆ ನುಗ್ಗಲು ಮತ್ತು ಮುಸ್ಲಿಂ ಧಾರ್ಮಿಕ ಚಿಹ್ನೆಗಳನ್ನು ಅಪವಿತ್ರಗೊಳಿಸಲು ಕೇವಲ ಹಿಂದೂಗಳಷ್ಟೇ ಹಠ ಹಿಡಿಯುತ್ತಾರೆ. ಅವರು ತಮ್ಮ ಧಾರ್ಮಿಕ ಮೆರವಣಿಗೆಗಳಲ್ಲಿ ಮುಸ್ಲಿಮರ ವಿರುದ್ಧ ಘೋಷಣೆಗಳನ್ನು ಕೂಗುತ್ತಾರೆ. ಮುಸ್ಲಿಮರನ್ನು ನಿಂದಿಸುವ ಹಾಡುಗಳನ್ನು ಹಾಕುತ್ತಾರೆ. ಇದನ್ನು ಮಾಡದಿದ್ದರೆ ಅವರ ಧಾರ್ಮಿಕ ಆನಂದವೇ ಅಪೂರ್ಣವೆನಿಸುತ್ತದೆ ಎನ್ನುವಂತಿದೆ ಇಂದಿನ ಪರಿಸ್ಥಿತಿ.
ಮುಸ್ಲಿಮರು ತಮ್ಮ ಹಬ್ಬಗಳ ಸಂದರ್ಭದಲ್ಲಿ ಸಂಯಮ ಕಾಯ್ದುಕೊಳ್ಳುವುದನ್ನು ನಾವು ಗಮನಿಸಬಹುದು. ಆದರೆ ದುರದೃಷ್ಟವಶಾತ್, ಈ ಸಂದರ್ಭಗಳಲ್ಲಿ ಹಿಂದೂ ಸಮಾಜದೊಳಗಿನ ಮುಸ್ಲಿಂ ವಿರೋಧಿ ದ್ವೇಷವು ಚರಂಡಿಯ ನೀರು ಉಕ್ಕಿ ಹರಿಯುವಂತೆ ಹೊರಬರಲಾರಂಭಿಸುತ್ತದೆ. ಮುಸ್ಲಿಮರು ತಮ್ಮ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸುವುದನ್ನು ತಡೆಯುವುದರಿಂದ ಸಿಗುವ ಆನಂದವಾದರೂ ಎಂತಹುದು? ಏಕೆ ಹೀಗೆ? ಹಿಂದೂ ಸಮಾಜವು ತನ್ನೊಳಗಿನ ಈ ಮಾನಸಿಕ ಅಸ್ವಸ್ಥತೆಯನ್ನು ಎಂದಾದರೂ ಎದುರಿಸಿ ಸರಿಪಡಿಸಿಕೊಳ್ಳುವುದೇ?
ಸೌಜನ್ಯ: thewire.in






