ಗಾಝಾದಿಂದ ಹಮಾಸ್ ಸರ್ಕಾರ ವಿಸರ್ಜನೆ: ನೂತನ ಆಡಳಿತ ಮಂಡಳಿ ಹೇಗಿರಲಿದೆ?

ಇಸ್ಮಾಯಿಲ್ ಅಲ್-ತವಾಬ್ತಾ | Photo Credit : AP
ಸುಮಾರು ಎರಡು ದಶಕಗಳ ಕಾಲ ಗಾಝಾ ಪಟ್ಟಿಯನ್ನು ಆಳಿದ ಹಮಾಸ್, ಇದೀಗ ತನ್ನ ಸರ್ಕಾರವನ್ನು ವಿಸರ್ಜಿಸುವುದಾಗಿ ಘೋಷಿಸಿದೆ. ಅಲ್ಲದೆ, ಅಧಿಕಾರವನ್ನು ನೂತನ ಫೆಲೆಸ್ತೀನಿನ ತಂತ್ರಜ್ಞರ ಆಡಳಿತ ಮಂಡಳಿಗೆ ಹಸ್ತಾಂತರಿಸಲು ನಿರ್ಧರಿಸಿದೆ. ಕಳೆದ ವರ್ಷ ಕದನ ವಿರಾಮಕ್ಕೆ ಕಾರಣವಾಗಿದ್ದ, ಅಮೆರಿಕ ಬೆಂಬಲಿತ ಶಾಂತಿ ಪ್ರಕ್ರಿಯೆಯು ಸದ್ಯ ಸ್ಥಗಿತಗೊಂಡಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಮತ್ತೊಂದೆಡೆ, ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನ ನಿರಂತರ ಬಾಂಬ್ ದಾಳಿ ಮುಂದುವರಿದಿದೆ.
ವಿಶ್ಲೇಷಕರ ಪ್ರಕಾರ, ಈ ನಿರ್ಧಾರದ ಮೂಲಕ ಹಮಾಸ್ ಇಸ್ರೇಲ್ ಮೇಲೆ ಒತ್ತಡ ಹೇರಲು ಮುಂದಾಗಿದೆ. ತಾವು ಆಡಳಿತವನ್ನು ಹಸ್ತಾಂತರಿಸಲು ಸಿದ್ಧರಿದ್ದೇವೆ ಮತ್ತು ಧ್ವಂಸಗೊಂಡಿರುವ ಗಾಝಾದ ಶಾಂತಿಯುತ ಮರುನಿರ್ಮಾಣಕ್ಕೆ ಬದ್ಧರಾಗಿದ್ದೇವೆ ಎಂಬುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತೋರಿಸುವುದು ಹಮಾಸ್ ನ ಮುಖ್ಯ ಉದ್ದೇಶವಾಗಿದೆ.
"ತಳಮಟ್ಟದಲ್ಲಿ ಕೈಗೊಂಡಿರುವ ಈ ಪ್ರಮುಖ ನಿರ್ಧಾರವು ಇಸ್ರೇಲ್ ನ ಆಕ್ರಮಣ ಮತ್ತು ಜನಾಂಗೀಯ ಹತ್ಯೆಯನ್ನು ಕೊನೆಗಾಣಿಸಲು ನೆರವಾಗಲಿದೆ ಎಂದು ನಾವು ಆಶಿಸುತ್ತೇವೆ. ಇಸ್ರೇಲ್ ಸೇನೆಯು ಗಾಝಾ ಪಟ್ಟಿಯಿಂದ ಸಂಪೂರ್ಣವಾಗಿ ಹಿಂತೆಗೆದು, ಗಡಿಗಳನ್ನು ಮುಕ್ತಗೊಳಿಸಿ ಪರಿಹಾರ ಸಾಮಗ್ರಿಗಳ ಲಾರಿಗಳ ಪ್ರವೇಶಕ್ಕೆ ಅವಕಾಶ ನೀಡಲು ಹಾಗೂ ಹಸಿವಿನ ನೀತಿಯನ್ನು ಕೊನೆಗಾಣಿಸಲು ಇದು ಸಹಕಾರಿಯಾಗಲಿದೆ" ಎಂದು ಗಾಝಾ ಸರ್ಕಾರಿ ಮಾಧ್ಯಮ ಕಚೇರಿಯ ಮಹಾನಿರ್ದೇಶಕ ಇಸ್ಮಾಯಿಲ್ ಅಲ್-ತವಾಬ್ತಾ ಸೋಮವಾರದ ಪ್ರಮುಖ ಪತ್ರಿಕಾಗೋಷ್ಠಿಯ ನಂತರ Aljazeeraಗೆ ತಿಳಿಸಿದ್ದಾರೆ.
2025ರ ಅಕ್ಟೋಬರ್ನಲ್ಲಿ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಒಪ್ಪಂದ ಏರ್ಪಟ್ಟ ನಂತರವೂ ಗಾಝಾದಲ್ಲಿ ಕನಿಷ್ಠ 1,005 ಜನರು ಸಾವಿಗೀಡಾಗಿದ್ದಾರೆ. ಇನ್ನು 2023ರ ಅಕ್ಟೋಬರ್ನಲ್ಲಿ ಇಸ್ರೇಲ್-ಗಾಝಾ ಯುದ್ಧ ಆರಂಭವಾದಾಗಿನಿಂದ ಇದುವರೆಗೆ ಒಟ್ಟು 73,098ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ, ಇಸ್ರೇಲ್ ಇಂದಿಗೂ ಗಾಝಾ ಪಟ್ಟಿಯ ಶೇಕಡಾ 70ರಷ್ಟು ಪ್ರದೇಶವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದ್ದು, ಫೆಲೆಸ್ತೀನಿಯರನ್ನು ಅತ್ಯಂತ ಕಿರಿದಾದ ಮತ್ತು ಕಿಕ್ಕಿರಿದ ಪ್ರದೇಶಗಳಿಗೆ ಸೀಮಿತಗೊಳಿಸಿದೆ.
ಹಮಾಸ್ ನ ಈ ಇತ್ತೀಚಿನ ನಡೆ ಮತ್ತು ಫೆಲೆಸ್ತೀನಿಯರ ನೇತೃತ್ವದ ನೂತನ ಗಾಝಾ ಆಡಳಿತ ಮಂಡಳಿ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದರ ಬಗ್ಗೆ ವಿವರ ಇಲ್ಲಿದೆ.
ಹಮಾಸ್ ಘೋಷಿಸಿರುವುದೇನು?
ಮಧ್ಯ ಗಾಝಾದ ಡೈರ್ ಅಲ್-ಬಲಾಹ್ ನಲ್ಲಿರುವ ಅಲ್-ಅಕ್ಸಾ ಆಸ್ಪತ್ರೆಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಾಝಾ ಮಾಧ್ಯಮ ಕಚೇರಿಯ ಮಹಾನಿರ್ದೇಶಕ ಅಲ್-ತವಾಬ್ತಾ, ಹಮಾಸ್ ನ ಆಡಳಿತ ಮುಖ್ಯಸ್ಥ ಮೊಹಮ್ಮದ್ ಅಲ್-ಫರ್ರಾ ಅವರು ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದರು. ಇದರೊಂದಿಗೆ, ಹಮಾಸ್ ತನ್ನ ಅಧಿಕಾರವನ್ನು 'ಗಾಝಾ ಆಡಳಿತ ರಾಷ್ಟ್ರೀಯ ಸಮಿತಿ'ಗೆ (NCAG) ಹಸ್ತಾಂತರಿಸಲಿದೆ ಎಂದು ಅವರು ಪ್ರಕಟಿಸಿದರು. ಇದು ಅಮೆರಿಕದ ಮಧ್ಯಸ್ಥಿಕೆಯ ಕದನ ವಿರಾಮ ಒಪ್ಪಂದದ ಭಾಗವಾಗಿ ವಿಶ್ವಸಂಸ್ಥೆಯ ಬೆಂಬಲದೊಂದಿಗೆ ರಚನೆಯಾಗಿರುವ, ಫೆಲೆಸ್ತೀನಿಯರ ನೇತೃತ್ವದ ತಾಂತ್ರಿಕ ಸಮಿತಿಯಾಗಿದೆ.
ಗಾಝಾ ಪಟ್ಟಿಯ ದೈನಂದಿನ ವ್ಯವಹಾರಗಳನ್ನು ಸುಗಮವಾಗಿ ನಡೆಸಲು ಕೇವಲ "ತಾಂತ್ರಿಕ ಮತ್ತು ವೃತ್ತಿಪರ ಸಿಬ್ಬಂದಿ" ಮಾತ್ರ ತಮ್ಮ ಹುದ್ದೆಗಳಲ್ಲಿ ಮುಂದುವರಿಯಲಿದ್ದಾರೆ ಎಂದು ಅಲ್-ತವಾಬ್ತಾ ಸ್ಪಷ್ಟಪಡಿಸಿದರು.
"ಸಾರ್ವಜನಿಕ ಸೇವೆಗಳನ್ನು ಒದಗಿಸುವಲ್ಲಿ ತೊಡಗಿರುವ ಎಲ್ಲಾ ನೌಕರರು 'ಸರ್ಕಾರಿ ನೌಕರರು' ಆಗಿದ್ದು, ಅವರು ಗಾಝಾ ಆಡಳಿತ ರಾಷ್ಟ್ರೀಯ ಸಮಿತಿಯ ಅಡಿಯಲ್ಲಿ ಕೆಲಸ ಮಾಡಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ," ಎಂದು ಅವರು ಹೇಳಿದರು.
ಇದೇ ವೇಳೆ ಹಮಾಸ್ ವಕ್ತಾರ ಹಝೆಮ್ ಖಾಸೆಮ್ ಮಾತನಾಡಿ, ಈ ನಿರ್ಧಾರವು "ಕದನ ವಿರಾಮ ಒಪ್ಪಂದವನ್ನು ಜಾರಿಗೆ ತರುವ ನಿಟ್ಟಿನಲ್ಲಿ ಇಟ್ಟಿರುವ ಒಂದು ಸಕಾರಾತ್ಮಕ ಹೆಜ್ಜೆಯಾಗಿದೆ" ಎಂದಿದ್ದಾರೆ.
ನೂತನ ಗಾಝಾ ಆಡಳಿತ ಮಂಡಳಿ ಹೇಗಿರಲಿದೆ?
ಗಾಝಾ ಮೇಲಿನ ಇಸ್ರೇಲ್ ಯುದ್ಧವನ್ನು ಕೊನೆಗಾಣಿಸಲು ಅಮೆರಿಕ ಬೆಂಬಲಿತ 20 ಅಂಶಗಳ ಶಾಂತಿ ಯೋಜನೆಯ ಭಾಗವಾಗಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ 2803ರ ಅಡಿಯಲ್ಲಿ ಜನವರಿ 2026ರಲ್ಲಿ 'ಗಾಝಾ ಆಡಳಿತ ರಾಷ್ಟ್ರೀಯ ಸಮಿತಿ'ಯನ್ನು (NCAG) ರಚಿಸಲಾಯಿತು.
ಇದು ಫೆಲೆಸ್ತೀನಿನ ತಂತ್ರಜ್ಞರ ನೇತೃತ್ವದ ಮಧ್ಯಂತರ ಸಂಸ್ಥೆಯಾಗಿದ್ದು, ಯಾವುದೇ ರಾಜಕೀಯ ಪಕ್ಷಕ್ಕೆ ಸೇರದೆ ತಟಸ್ಥವಾಗಿರುವ ಹಂಗಾಮಿ ಕಮಿಷನರ್ ಅಲಿ ಅಬ್ದೆಲ್ ಹಮೀದ್ ಶಾತ್ ಇದರ ನೇತೃತ್ವ ವಹಿಸಿದ್ದಾರೆ.
ಇಸ್ರೇಲ್ ಇದುವರೆಗೆ ಈ ಸಮಿತಿಯ ಸದಸ್ಯರಿಗೆ ಗಾಝಾ ಪಟ್ಟಿಯನ್ನು ಪ್ರವೇಶಿಸಲು ಅನುಮತಿ ನೀಡಿಲ್ಲ. ಹೀಗಾಗಿ, ಈ ಸಮಿತಿಯ ತಾತ್ಕಾಲಿಕ ಪ್ರಧಾನ ಕಚೇರಿಯನ್ನು ಸದ್ಯ ಕೈರೋದಲ್ಲಿ ಸ್ಥಾಪಿಸಲಾಗಿದೆ.
"ಗಾಝಾ ಆಡಳಿತ ರಾಷ್ಟ್ರೀಯ ಸಮಿತಿಯು ತಕ್ಷಣವೇ ಗಾಝಾಗೆ ಪ್ರವೇಶಿಸಿ, ತನ್ನ ರಾಷ್ಟ್ರೀಯ ಹಾಗೂ ಆಡಳಿತಾತ್ಮಕ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಪೂರಕವಾದ ಕ್ರಮಗಳನ್ನು ಶೀಘ್ರವಾಗಿ ಕೈಗೊಳ್ಳಬೇಕು ಎಂದು ನಾವು ಎಲ್ಲಾ ಸಂಬಂಧಪಟ್ಟ ವಲಯಗಳಿಗೆ ಕರೆ ನೀಡುತ್ತೇವೆ. ಇದು ನಮ್ಮ ಉದಾತ್ತ ಫೆಲೆಸ್ತೀನಿನ ಜನರ ಹೋರಾಟದ ಶಕ್ತಿಯನ್ನು ಹೆಚ್ಚಿಸಲು ಮತ್ತು ಅವರ ಗಾಯಗಳಿಗೆ ಮುಲಾಮು ಹಚ್ಚಲು ಸಹಾಯ ಮಾಡುತ್ತದೆ" ಎಂದು ಅಲ್-ತವಾಬ್ತಾ ಸೋಮವಾರ ಮಾಧ್ಯಮಗಳಿಗೆ ತಿಳಿಸಿದರು.
ಈ ಸಮಿತಿಯು (NCAG) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶಾಂತಿ ಮಂಡಳಿಯ ಹೈಕಮಿಷನರ್ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ವರದಿ ಒಪ್ಪಿಸಬೇಕಾಗುತ್ತದೆ. ಪ್ರಸ್ತುತ ವೆಸ್ಟ್ ಬ್ಯಾಂಕ್ ಅನ್ನು ನಿಯಂತ್ರಿಸುತ್ತಿರುವ ಫೆಲೆಸ್ತೀನಿಯನ್ ಅಥಾರಿಟಿ (PA) ಸಂಸ್ಥೆಯು 2027ರ ವೇಳೆಗೆ ಈ ಆಡಳಿತವನ್ನು ತನ್ನ ಕೈಗೆ ತೆಗೆದುಕೊಳ್ಳುವ ನಿರೀಕ್ಷೆಯಿದೆ.
ಈ ಸಮಿತಿಯ ಮುಖ್ಯ ಉದ್ದೇಶ ನಾಗರಿಕ ವ್ಯವಹಾರಗಳನ್ನು ನಿರ್ವಹಿಸುವುದಾಗಿದೆ. ಅಂದರೆ ಆರೋಗ್ಯ, ಶಿಕ್ಷಣ ಮತ್ತು ನೀರಿನ ಸೌಲಭ್ಯಗಳನ್ನು ಮರುಸ್ಥಾಪಿಸುವುದು ಇದರ ಪ್ರಮುಖ ಕೆಲಸವಾಗಿರುತ್ತದೆ. ಇದರೊಂದಿಗೆ ಏಕೀಕೃತ ಪೊಲೀಸ್ ಪಡೆಯ ಅಡಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯನ್ನೂ ಇದಕ್ಕೆ ನೀಡಲಾಗಿದೆ.
ಸೋಮವಾರ 'X' ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಹಂಚಿಕೊಂಡಿರುವ ಸಮಿತಿಯ ಮುಖ್ಯಸ್ಥ ಶಾತ್, ಹಮಾಸ್ ನ ಘೋಷಣೆಯನ್ನು ತಾವು ಗಮನಿಸಿದ್ದು, ಕೆಲವು "ಮೂಲಸೌಕರ್ಯ ಮತ್ತು ಅಗತ್ಯ" ಪರಿಸ್ಥಿತಿಗಳು ಸೃಷ್ಟಿಯಾದರೆ ಮಾತ್ರ ಗಾಝಾ ಪಟ್ಟಿಯ ಆಡಳಿತವನ್ನು ವಹಿಸಿಕೊಳ್ಳಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.
"ನಮ್ಮ ಕಾರ್ಯನಿರ್ವಹಣೆಗೆ ಅಗತ್ಯವಾದ ಪೂರಕ ವಾತಾವರಣ ನಿರ್ಮಾಣವಾದ ತಕ್ಷಣ, ಗಾಝಾ ಆಡಳಿತ ರಾಷ್ಟ್ರೀಯ ಸಮಿತಿಯು ತನ್ನ ರಾಷ್ಟ್ರೀಯ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂಬುದನ್ನು ನಾವು ಸ್ಪಷ್ಟಪಡಿಸುತ್ತೇವೆ" ಎಂದು ಶಾತ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಮಿತಿಯು ಪರಿಣಾಮಕಾರಿಯಾಗಿ ಕೆಲಸ ಮಾಡಲು, ಸ್ಪಷ್ಟ ಅಧಿಕಾರ ಹೊಂದಿರುವ ಏಕೈಕ ಕಾನೂನು ಚೌಕಟ್ಟಿನಡಿಯಲ್ಲಿ ಕಾರ್ಯನಿರ್ವಹಿಸುವ ಒಂದು ಆಡಳಿತ ಮಂಡಳಿ ಇರಬೇಕು. ಆ ಆಡಳಿತಕ್ಕೆ ಉತ್ತರದಾಯಿಯಾಗಿರುವ ಏಕೀಕೃತ ಭದ್ರತಾ ವ್ಯವಸ್ಥೆ ಇರಬೇಕಿರುವುದು ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದ್ದಾರೆ.
ಹಾಗಾದರೆ, ಹಮಾಸ್ ನಿಶ್ಯಸ್ತ್ರೀಕರಣಗೊಳ್ಳುತ್ತಿದೆ ಎಂದರ್ಥವೇ?
ಗಾಝಾ ಶಾಂತಿ ಪ್ರಕ್ರಿಯೆಯ ಎರಡನೇ ಹಂತ ಆರಂಭವಾಗುವುದಕ್ಕೂ ಮುನ್ನ ಹಮಾಸ್ ತನ್ನ ಆಯುಧಗಳನ್ನು ತ್ಯಜಿಸಬೇಕು ಎಂದು ಇಸ್ರೇಲ್ ಮತ್ತು ಅಮೆರಿಕ ಪದೇ ಪದೇ ಒತ್ತಾಯಿಸುತ್ತಾ ಬಂದಿವೆ. ಆದರೆ, ಗಾಝಾದಿಂದ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಬೇಕೆಂಬ ಮೊದಲ ಹಂತದ ಒಪ್ಪಂದದ ಶರತ್ತನ್ನು ಇಸ್ರೇಲ್ ಕೂಡ ಈವರೆಗೆ ಈಡೇರಿಸಿಲ್ಲ ಎಂದು ಹಮಾಸ್ ವಾದಿಸುತ್ತಿದೆ.
ಸೋಮವಾರ ಕೈಗೊಂಡ ತನ್ನ ಪ್ರಕಟಣೆಯಲ್ಲಿ ಹಮಾಸ್ ನಿಶ್ಯಸ್ತ್ರೀಕರಣದ ಬಗ್ಗೆ ನೇರವಾಗಿ ಎಲ್ಲಿಯೂ ಪ್ರಸ್ತಾಪಿಸಿಲ್ಲ. ಆದರೂ, ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆಯ ಭಾಗವಾಗಿ ಭದ್ರತೆಯ ಜವಾಬ್ದಾರಿಯನ್ನು ಬಿಟ್ಟುಕೊಡಲು ತಾನು ಸಿದ್ಧವಿರುವುದಾಗಿ ಅದು ಹೇಳಿದೆ.
ಹಮಾಸ್ ನ ಈ ನಿರ್ಧಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್, ಈ ನಡೆಯನ್ನು ತಳ್ಳಿಹಾಕಿದ್ದಾರಲ್ಲದೆ ಇದೊಂದು "ತಂತ್ರ" ಎಂದು ಕರೆದಿದ್ದಾರೆ.
"ಹಮಾಸ್ ಸಂಸ್ಥೆಯು ಗಾಝಾದಲ್ಲಿ 'ಹಿಜ್ಬುಲ್ಲಾ ಮಾದರಿ'ಯನ್ನು ಮರುಸೃಷ್ಟಿಸಲು ಪ್ರಯತ್ನಿಸುತ್ತಿದೆ. ಕಸ ಸಂಗ್ರಹಣೆ ಮತ್ತು ಇತರ ಪೌರಕಾರ್ಮಿಕ ಸೇವೆಗಳ ಜವಾಬ್ದಾರಿಯನ್ನು ತಂತ್ರಜ್ಞರ ಆಡಳಿತ ಮಂಡಳಿಗೆ ವಹಿಸಿ, ಮಿಲಿಟರಿ ಶಕ್ತಿಯಾಗಿ ತಾನೇ ಮುಂಚೂಣಿಯಲ್ಲಿ ಮುಂದುವರಿಯುವುದು ಹಮಾಸ್ ನ ಯೋಜನೆಯಾಗಿದೆ. ಹಮಾಸ್ ಬಳಿ ಆಯುಧಗಳು ಇರುವ ತನಕ, ಯಾವುದೇ ನಾಗರಿಕ ಸರ್ಕಾರ ರಚನೆಯಾದರೂ ಅದು ಹಮಾಸ್ ಹೇಳಿದಂತೆಯೇ ಕೇಳಬೇಕಾಗುತ್ತದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
"ಟ್ರಂಪ್ ಅವರ ಶಾಂತಿ ಯೋಜನೆಯು ಸಂಪೂರ್ಣವಾಗಿ ಜಾರಿಗೆ ಬರಬೇಕು ಎಂದು ಇಸ್ರೇಲ್ ಒತ್ತಾಯಿಸುತ್ತದೆ. ಹಮಾಸ್ ಸೇರಿದಂತೆ ಇತರ ಎಲ್ಲಾ ಉಗ್ರಗಾಮಿ ಸಂಘಟನೆಗಳ ನಿಶ್ಯಸ್ತ್ರೀಕರಣ ಮತ್ತು ಗಾಝಾ ಪಟ್ಟಿಯನ್ನು ಸಂಪೂರ್ಣವಾಗಿ ಸೇನಾಮುಕ್ತಗೊಳಿಸುವುದೇ ಈ ಯೋಜನೆಯ ಮುಖ್ಯ ತತ್ವಗಳಾಗಿವೆ" ಎಂದು ಸಾರ್ ತಿಳಿಸಿದ್ದಾರೆ.
ಹಮಾಸ್ ಈಗಲೇ ಈ ನಿರ್ಧಾರವನ್ನು ಪ್ರಕಟಿಸಲು ಕಾರಣವೇನು?
ಗಾಝಾ ಪಟ್ಟಿಯ ಆಡಳಿತವನ್ನು ಬಿಟ್ಟುಕೊಡಲು ಹಮಾಸ್ ನಿಜಕ್ಕೂ ಸಿದ್ಧವಿಲ್ಲ ಎಂಬ ಇಸ್ರೇಲ್ ನ ವಾದವನ್ನು ಸುಳ್ಳಾಗಿಸಲು ಹಮಾಸ್ ಈ ಯೋಜಿತ ಹೆಜ್ಜೆಯನ್ನು ಇಟ್ಟಿರಬಹುದು ಎಂದು ಯುರೋಪಿಯನ್ ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್ನ ರಾಜಕೀಯ ವಿಶ್ಲೇಷಕ ಮುಹಮ್ಮದ್ ಶೆಹಾದಾ Aljazeeraಗೆ ತಿಳಿಸಿದ್ದಾರೆ.
"ಹಮಾಸ್ ತನ್ನ ಬಲವನ್ನು ಮರುಸಂಘಟಿಸುತ್ತಿದೆ. ಗಾಝಾದಲ್ಲಿ ಹಮಾಸ್ ಸರ್ಕಾರವೇ ಸಂಪೂರ್ಣ ನಿಯಂತ್ರಣ ಹೊಂದಿದೆ; ಅದು ಕೇವಲ ಸಮಯ ವ್ಯರ್ಥ ಮಾಡುತ್ತಿದೆ ಎಂಬ ಇಸ್ರೇಲ್ ನ ಸತತ ಪ್ರಯತ್ನಗಳ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ. ಹಮಾಸ್ ತನ್ನ ಸಂಪೂರ್ಣ ಪ್ರಭುತ್ವವನ್ನು ಮರುಸ್ಥಾಪಿಸಲು ಬಯಸುತ್ತದೆಯೇ ಹೊರತು ಆಡಳಿತದಿಂದ ಹೊರನಡೆಯುವ ಯಾವುದೇ ಉದ್ದೇಶ ಅದಕ್ಕಿಲ್ಲ ಎಂದು ಇಸ್ರೇಲ್ ಹಲವು ತಿಂಗಳುಗಳಿಂದ ಟ್ರಂಪ್ ಆಡಳಿತವನ್ನು ನಂಬಿಸಲು ಯತ್ನಿಸುತ್ತಿತ್ತು" ಎಂದು ಶೆಹಾದಾ ಹೇಳಿದ್ದಾರೆ.
ಕಳೆದ ಮೇ ತಿಂಗಳಲ್ಲಿ, ಗಾಝಾಕ್ಕಾಗಿ ಟ್ರಂಪ್ ನೇಮಿಸಿದ್ದ ಉನ್ನತ ಪ್ರತಿನಿಧಿ ನಿಕೊಲಾಯ್ ಮ್ಲಾಡೆನೋವ್ ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸಲ್ಲಿಸಿದ ವರದಿಯಲ್ಲಿ, ಶಾಂತಿ ಪ್ರಕ್ರಿಯೆ ವಿಳಂಬವಾಗಲು ಹಮಾಸ್ ಕಾರಣ ಎಂದು ದೂಷಿಸಿದ್ದರು.
ಮಾಜಿ ಅಧ್ಯಕ್ಷ ಜೋ ಬೈಡನ್ ಅವರ ಅವಧಿಯಲ್ಲಿ 2023ರಲ್ಲಿ ಅಮೆರಿಕ ನೇತೃತ್ವದ ಮಾತುಕತೆಗಳು ಪ್ರಾರಂಭವಾದಾಗಿನಿಂದಲೇ ತಾವು ಅಧಿಕಾರದಿಂದ ಕೆಳಗಿಳಿಯಲು ಸಿದ್ಧರಿರುವುದಾಗಿ ಸೂಚನೆ ನೀಡಿದ್ದೆವು ಎಂದು ಹಮಾಸ್ ಹೇಳುತ್ತಿದೆ. ಆ ಸಮಯದಲ್ಲಿ ಈ ವಿಷಯಕ್ಕೆ ಹೆಚ್ಚಿನ ಬೆಂಬಲ ಅಥವಾ ಮನ್ನಣೆ ಸಿಕ್ಕಿರಲಿಲ್ಲ ಎಂದು ವಿಶ್ಲೇಷಕ ಶೆಹಾದಾ ನೆನಪಿಸಿದ್ದಾರೆ.
"ಹಮಾಸ್ ನ ಈ ಇತ್ತೀಚಿನ ನಡೆಯು, ಟ್ರಂಪ್ ಅವರ 20 ಅಂಶಗಳ ಶಾಂತಿ ಯೋಜನೆಗೆ ಇಸ್ರೇಲ್ ಮಾತ್ರವೇ ಅಡ್ಡಿಪಡಿಸುತ್ತಿದೆ ಎಂಬುದನ್ನು ಡೊನಾಲ್ಡ್ ಟ್ರಂಪ್ ಅವರಿಗೆ ತೋರಿಸಿಕೊಡುವ ಪ್ರಯತ್ನವಾಗಿದೆ" ಎಂದು ಶೆಹಾದಾ ವಿಶ್ಲೇಷಿಸಿದ್ದಾರೆ. ಹಮಾಸ್ ಸರ್ಕಾರ ವಿಸರ್ಜನೆಯ ವಿವರಗಳ ಬಗ್ಗೆ ತಲೆಕೆಡಿಸಿಕೊಳ್ಳದ ಟ್ರಂಪ್, ತಮ್ಮ ಈ ನಡೆಯನ್ನು ಕೇವಲ ಒಂದು ಸಕಾರಾತ್ಮಕ ಹೆಜ್ಜೆ ಎಂದು ಘೋಷಿಸಬಹುದು ಎಂಬ ನಿರೀಕ್ಷೆ ಆ ಸಂಘಟನೆಗಿದೆ.
ಮುಖ್ಯವಾಗಿ, ಗಾಝಾದ ಬಹುಪಾಲು ಪ್ರದೇಶವನ್ನು ತನ್ನ ನಿಯಂತ್ರಣದಲ್ಲೇ ಇಟ್ಟುಕೊಂಡು, ಭವಿಷ್ಯದ ಯಾವುದೇ ಆಡಳಿತವನ್ನು ಇಸ್ರೇಲಿ ಅಧಿಕಾರಿಗಳು 'ನ್ಯೂ ರಾಫಾ' ಎಂದು ಕರೆಯುವ ಒಂದು ಸಣ್ಣ ಪ್ರದೇಶಕ್ಕೆ ಮಾತ್ರ ಸೀಮಿತಗೊಳಿಸುವ ಇಸ್ರೇಲ್ ನ 'ಅಪಾಯಕಾರಿ' ಯೋಜನೆಗೆ ತಡೆಯೊಡ್ಡುವುದು ಕೂಡ ಹಮಾಸ್ ನ ಉದ್ದೇಶವಾಗಿದೆ ಎಂದು ಶೆಹಾದಾ ತಿಳಿಸಿದ್ದಾರೆ.
ಟ್ರಂಪ್ ಆಡಳಿತವು ಈ ಹಿಂದೆ ಗಾಝಾದಲ್ಲಿ 'ಹ್ಯುಮಾನಿಟೇರಿಯನ್ ಸಿಟಿ' ಎಂದು ಕರೆಯಲಾಗುವ ಇಸ್ರೇಲ್ ನ ಯೋಜನೆಗಳನ್ನು ಬೆಂಬಲಿಸಿತ್ತು. ವಿಮರ್ಶಕರು ಇದನ್ನು 'ಕಾನ್ಸಂಟ್ರೇಷನ್ ಕ್ಯಾಂಪ್' ಎಂದು ಕರೆದಿದ್ದಾರೆ.
ಸೋಮವಾರ ಹಮಾಸ್ ನ ಈ ಪ್ರಕಟಣೆಗೆ ಪ್ರತಿಕ್ರಿಯಿಸಿರುವ ಟ್ರಂಪ್ ಅವರ ಶಾಂತಿ ಮಂಡಳಿಯು 'X' ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಈ ಘೋಷಣೆಯನ್ನು ಗಮನಿಸಿದ್ದೇವೆ. ಆದರೆ ನಾವು ಕೇವಲ ಮಾತುಗಳನ್ನಲ್ಲ, ಪ್ರತ್ಯಕ್ಷ ಕ್ರಮಗಳನ್ನು ನಿರೀಕ್ಷಿಸುತ್ತಿದ್ದೇವೆ ಎಂದು ತಿಳಿಸಿದೆ.
"ಅಂತಿಮವಾಗಿ, ಗಾಝಾ ಜನರ ತುರ್ತು ಅಗತ್ಯಗಳನ್ನು ಪೂರೈಸಲು ನಾವು ಕೇವಲ ಭರವಸೆಗಳನ್ನಲ್ಲ, ಅವರ ನಡೆಗಳನ್ನು ಆಧರಿಸಿ ನಿರ್ಧಾರ ಕೈಗೊಳ್ಳುತ್ತೇವೆ" ಎಂದು ಮಂಡಳಿ ಪೋಸ್ಟ್ ಮಾಡಿದೆ.
"'ಒಂದೇ ಆಡಳಿತ, ಒಂದೇ ಕಾನೂನು ಮತ್ತು ಒಂದೇ ಆಯುಧ' ಎಂಬುದು ನಮ್ಮ ಮುಖ್ಯ ತತ್ವವಾಗಿದೆ. ಇದರರ್ಥ, ಸಮಗ್ರ ಗಾಝಾ ಶಾಂತಿ ಯೋಜನೆ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ 2803ರಲ್ಲಿ ಉಲ್ಲೇಖಿಸಿರುವಂತೆ ಎಲ್ಲಾ ಆಯುಧಗಳು ಗಾಝಾ ಆಡಳಿತ ರಾಷ್ಟ್ರೀಯ ಸಮಿತಿಯ ನಿಯಂತ್ರಣಕ್ಕೆ ಒಳಪಡಬೇಕು" ಎಂದು ಶಾಂತಿ ಮಂಡಳಿ ಸ್ಪಷ್ಟಪಡಿಸಿದೆ.
ಗಾಝಾದಲ್ಲಿ ಕದನ ವಿರಾಮ ಮತ್ತು ಶಾಂತಿ ಪ್ರಕ್ರಿಯೆಯ ಪ್ರಸ್ತುತ ಸ್ಥಿತಿ ಹೇಗಿದೆ?
ಕಳೆದ ಅಕ್ಟೋಬರ್ನಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಲಾದ ನಂತರ, ಅದರ ಎರಡನೇ ಹಂತಕ್ಕೆ ಹೇಗೆ ಮುನ್ನಡೆಯಬೇಕು ಎಂಬ ವಿಷಯದಲ್ಲಿ ಮಾತುಕತೆಗಳು ಸ್ಥಗಿತಗೊಂಡಿವೆ. ಈ ಎರಡನೇ ಹಂತವು ಹಮಾಸ್ ನ ನಿಶ್ಯಸ್ತ್ರೀಕರಣ ಮತ್ತು ಗಾಝಾದ ಮರುನಿರ್ಮಾಣದ ಯೋಜನೆಗಳನ್ನು ಒಳಗೊಂಡಿದೆ.
ವಿವಾದಕ್ಕೆ ಕಾರಣವಾಗಿರುವ ಪ್ರಮುಖ ಅಂಶಗಳೆಂದರೆ, ಮೊದಲ ಹಂತದ ಷರತ್ತುಗಳನ್ನು ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ಹಮಾಸ್ ಪಟ್ಟು ಹಿಡಿದಿರುವುದು. ಇದರಲ್ಲಿ ಗಾಝಾಕ್ಕೆ 'ಸಾಕಷ್ಟು' ಪ್ರಮಾಣದ ಮಾನವೀಯ ನೆರವು ನೀಡುವುದು, ನಿರಾಶ್ರಿತ ಫೆಲೆಸ್ತೀನಿಯರು ತಮ್ಮ ಮನೆಗಳಿಗೆ ಮರಳಲು ಅವಕಾಶ ನೀಡುವುದು ಮತ್ತು ಗಾಝಾ ಪಟ್ಟಿಯಿಂದ ಇಸ್ರೇಲ್ ತನ್ನ ಸೇನೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವ ಭರವಸೆಗಳು ಸೇರಿವೆ.
ಗಾಝಾಕ್ಕೆ ಇಂದಿಗೂ ಪರಿಹಾರ ಸಾಮಗ್ರಿಗಳ ಪೂರೈಕೆ ಸೀಮಿತವಾಗಿಯೇ ಇರುವುದರಿಂದ ಮತ್ತು ದಿನನಿತ್ಯದಂತೆ ಬಾಂಬ್ ದಾಳಿಗಳು ಮುಂದುವರಿದಿರುವುದರಿಂದ, ಇಸ್ರೇಲ್ ಈ ಷರತ್ತುಗಳನ್ನು ಈಡೇರಿಸಿಲ್ಲ ಎಂದು ಹಮಾಸ್ ಪದೇ ಪದೇ ಆರೋಪಿಸುತ್ತಿದೆ. ತಾವು ಅಧಿಕಾರದಿಂದ ಕೆಳಗಿಳಿಯುವುದಾಗಿ ಹಮಾಸ್ ಸೋಮವಾರ ಘೋಷಿಸಿದ ನಂತರವೂ ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನ ದಾಳಿಗಳು ಮುಂದುವರಿದಿವೆ ಎಂದು Aljazeeraದ ಹನಿ ಮಹಮೂದ್ ವರದಿ ಮಾಡಿದ್ದಾರೆ.
ಮತ್ತಷ್ಟು ದಾಳಿಗಳಿಗೆ ಸಂಚು ರೂಪಿಸುತ್ತಿರುವ ಗಾಝಾದಲ್ಲಿನ ಹಮಾಸ್ ಕಾರ್ಯಕರ್ತರನ್ನು ತಾವು ಗುರಿಯಾಗಿಸಿಕೊಂಡಿರುವುದಾಗಿ ಇಸ್ರೇಲ್ ವಾದಿಸುತ್ತಿದೆ. ಆದರೆ, ಈ ದಾಳಿಗಳಲ್ಲಿ ಮಕ್ಕಳು ಸೇರಿದಂತೆ ಹಲವಾರು ಸಾಮಾನ್ಯ ನಾಗರಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.






