ಮೆಟಾದ ಮ್ಯೂಸ್ ಇಮೇಜ್ AI ಫೀಚರ್ ಬಗ್ಗೆ ಕಳವಳ ವ್ಯಕ್ತವಾಗಲು ಕಾರಣವೇನು?

ಸಾಂದರ್ಭಿಕ ಚಿತ್ರ | Photo Credit : magnific.com
ಬಳಕೆದಾರರು ಸಾರ್ವಜನಿಕವಾಗಿ ಲಭ್ಯವಿರುವ ಫೋಟೋಗಳು ಮತ್ತು ಇತರರ ಮೀಡಿಯಾ ಕಂಟೆಂಟ್ ಅನ್ನು ಅವರ ಒಪ್ಪಿಗೆ ಇಲ್ಲದೆಯೇ ತಕ್ಷಣವೇ AI ಕಂಟೆಂಟ್ ಆಗಿ ಪರಿವರ್ತಿಸಲು ಹೊಸ ಫೀಚರ್ ಅನುಮತಿಸಿರುವುದು ಖಂಡನೆಗೆ ಕಾರಣವಾಗಿದೆ.
ಮೆಟಾ ಸೂಪರ್ ಇಂಟೆಲಿಜೆನ್ಸ್ ಲ್ಯಾಬ್ಸ್ನಿಂದ ಮೊದಲ AI-ಚಾಲಿತ ಇಮೇಜ್ ಜನರೇಶನ್ ಮಾದರಿಯಾದ ಮ್ಯೂಸ್ ಇಮೇಜ್ ಅನ್ನು ಬಿಡುಗಡೆ ಮಾಡಿದ ಕೆಲವೇ ದಿನಗಳ ನಂತರ, ಗೌಪ್ಯತೆ ಕುರಿತ ಪ್ರಶ್ನೆಗಳು ಉದ್ಭವಿಸಿದ ಹಿನ್ನೆಲೆಯಲ್ಲಿ ಅದರ ಒಂದು ಫೀಚರ್ ಅನ್ನು ಕಂಪೆನಿಯು ಸ್ಥಗಿತಗೊಳಿಸಿದೆ. ಸಾರ್ವಜನಿಕ ಇನ್ಸ್ಟಾಗ್ರಾಂ ಖಾತೆಗಳನ್ನು ಟ್ಯಾಗ್ ಮಾಡುವುದು ಹಾಗೂ ಅವರು ಸಾರ್ವಜನಿಕವಾಗಿ ಹಂಚಿಕೊಂಡ ಕಂಟೆಂಟ್ ಅನ್ನು AI ಚಿತ್ರಗಳನ್ನು ಜನರೇಟ್ ಮಾಡಲು ಅಥವಾ ಮಾರ್ಪಡಿಸಲು ಈ ಫೀಚರ್ ಮೆಟಾ AI ಚಾಟ್ಬಾಟ್ನ ಬಳಕೆದಾರರಿಗೆ ಅನುಮತಿಸಿತ್ತು.
ಅಂದರೆ, ಬಳಕೆದಾರರು ಸಾರ್ವಜನಿಕವಾಗಿ ಲಭ್ಯವಿರುವ ಫೋಟೋಗಳು ಮತ್ತು ಇತರರ ಮೀಡಿಯಾ ಕಂಟೆಂಟ್ ಅನ್ನು ಅವರ ಒಪ್ಪಿಗೆ ಇಲ್ಲದೆಯೇ ತಕ್ಷಣವೇ AI ಕಂಟೆಂಟ್ ಆಗಿ ಪರಿವರ್ತಿಸಲು ಈ ಹೊಸ ಫೀಚರ್ ಅವಕಾಶ ನೀಡುತ್ತಿತ್ತು. ಈ ಫೀಚರ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
ಕಳೆದ ಶುಕ್ರವಾರ ಹಾಲಿವುಡ್ ಸಂಘಟನೆಯಾದ SAG-AFTRA ಸೇರಿದಂತೆ ಅನೇಕರು ಗೌಪ್ಯತೆ ಕುರಿತ ಕಳವಳಗಳನ್ನು ವ್ಯಕ್ತಪಡಿಸಿದ ನಂತರ, ಮಾರ್ಕ್ ಝುಕರ್ಬರ್ಗ್ ನೇತೃತ್ವದ ಕಂಪೆನಿಯು ಈ ಫೀಚರ್ ಅನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. "ಉಪಯುಕ್ತ ಸೃಜನಶೀಲ ಟೂಲ್ ಒದಗಿಸುವುದು ಹಾಗೂ ತಮ್ಮ ಸಾರ್ವಜನಿಕ ವಿಷಯವನ್ನು ಈ ರೀತಿಯಲ್ಲಿ ಬಳಸಬಹುದೇ ಎಂಬುದರ ಬಗ್ಗೆ ಜನರಿಗೆ ನಿಯಂತ್ರಣ ನೀಡುವುದು ನಮ್ಮ ಉದ್ದೇಶವಾಗಿತ್ತು. ಈ ಫೀಚರ್ ಕುರಿತು ವ್ಯಕ್ತವಾದ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಅದು ಇನ್ನು ಲಭ್ಯವಿರುವುದಿಲ್ಲ" ಎಂದು ಮೆಟಾ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ಮಂಗಳವಾರ ಈ ಫೀಚರ್ ಪ್ರಕಟವಾದ ತಕ್ಷಣವೇ ಪ್ರತಿಕ್ರಿಯೆಗಳು ಬರಲಾರಂಭಿಸಿದ್ದವು. ಈ ಫೀಚರ್ ಕೇವಲ ಇನ್ಸ್ಟಾಗ್ರಾಂಗೆ ಸೀಮಿತವಾಗಿದೆ ಎಂದು ಕಂಪನಿ ಸಮರ್ಥಿಸಿಕೊಂಡಿತ್ತು. WhatsApp, Facebook ಮತ್ತು Messengerಗಾಗಿ ಹೆಚ್ಚಿನ AI ಫೀಚರ್ಗಳು ಹಾಗೂ ಇಂಟಿಗ್ರೇಶನ್ಗಳನ್ನು ಯೋಜಿಸಲಾಗಿದೆ. AI ವೀಡಿಯೊ ಟೂಲ್ ಕೂಡ ಬರಲಿದೆ ಎಂದು ಕಂಪನಿ ಸೂಚಿಸಿತ್ತು.
ಆದರೆ, ಫೀಚರ್ ಬಿಡುಗಡೆಯಾದ ನಂತರ ಹಾಲಿವುಡ್ ನಟರು ಮತ್ತು ಇತರ ಮಾಧ್ಯಮ ವೃತ್ತಿಪರರ ಒಕ್ಕೂಟವಾದ SAG-AFTRA ತನ್ನ ಸದಸ್ಯರು ಹಾಗೂ ಇತರ ಇನ್ಸ್ಟಾಗ್ರಾಂ ಬಳಕೆದಾರರು ಈ ಫೀಚರ್ನಿಂದ ಹೊರಗುಳಿಯುವಂತೆ ತಿಳಿಸಿತು. "ಇನ್ಸ್ಟಾಗ್ರಾಂ ಬಳಕೆದಾರರ ಚಿತ್ರಗಳನ್ನು ಅವರ ಸಮ್ಮತಿ ಇಲ್ಲದೆ ಬಳಸಬಾರದು. ಬಳಕೆದಾರರ ಒಪ್ಪಿಗೆಯಿಲ್ಲದೆ ಅವರ ಕಂಟೆಂಟ್ ಅನ್ನು ಬಳಸುವುದರಲ್ಲಿ ಅಂತರ್ಗತವಾಗಿರುವ ಸ್ಪಷ್ಟ ಅಪಾಯಗಳು ಮತ್ತು ಹಾನಿಯ ಬಗ್ಗೆ ಸಾರ್ವಜನಿಕರ ಭಾವನೆಯನ್ನು ಸಂಪೂರ್ಣವಾಗಿ ತಪ್ಪಾಗಿ ಅರ್ಥಮಾಡಿಕೊಳ್ಳಲಾಗಿದೆ" ಎಂದು ಒಕ್ಕೂಟ ಹೇಳಿದೆ.
ಈ ಫೀಚರ್ ಅನ್ನು ತೆಗೆದುಹಾಕುವ ನಿರ್ಧಾರವನ್ನು SAG-AFTRA ಸ್ವಾಗತಿಸಿದೆ. "ಒಪ್ಪಿಗೆಯಿಲ್ಲದೆ ಡಿಜಿಟಲ್ ನಕಲುಗಳನ್ನು ಮಾಡುವುದರಿಂದ ಉಂಟಾಗುವ ಅಪಾಯಗಳು ಎಲ್ಲರಿಗೂ ಚೆನ್ನಾಗಿ ತಿಳಿದಿವೆ. ಇಂತಹ ಫೀಚರ್ ಅನ್ನು ಪರಿಚಯಿಸಿರುವುದು ಅವಿವೇಕದ ಕ್ರಮವಾಗಿತ್ತು. ಅದರ ಸ್ಥಗಿತವನ್ನು ನಾವು ಪ್ರಶಂಸಿಸುತ್ತೇವೆ. ಇದು ಜವಾಬ್ದಾರಿಯುತ ಕ್ರಮವಾಗಿದೆ" ಎಂದು ಒಕ್ಕೂಟ ತಿಳಿಸಿರುವುದಾಗಿ ವರದಿಯಾಗಿದೆ.
AI ಫೀಚರ್ಗಳು ಸಾರ್ವಜನಿಕವಾಗಿ ಹಂಚಿಕೊಂಡ ವಿಷಯಗಳನ್ನು ಹೇಗೆ ಬಳಸುತ್ತವೆ ಎಂಬುದರ ಬಗ್ಗೆ ಬಳಕೆದಾರರಿಗೆ ಸ್ಪಷ್ಟ ನಿಯಂತ್ರಣ ನೀಡುವಂತೆ ತಂತ್ರಜ್ಞಾನ ಕಂಪನಿಗಳ ಮೇಲೆ ಒತ್ತಡ ಹೆಚ್ಚಾಗುತ್ತಿರುವುದು ಈ ಫೀಚರ್ ಸ್ಥಗಿತಗೊಂಡಿರುವುದರಿಂದ ಸ್ಪಷ್ಟವಾಗಿದೆ.
ಮೆಟಾದ AI ಟೂಲ್ಗಳು ಇದೇ ಮೊದಲ ಬಾರಿಗೆ ಪರಿಶೀಲನೆಗೆ ಒಳಗಾಗಿಲ್ಲ. ಇದಕ್ಕೂ ಮೊದಲು AI-ಚಾಲಿತ ಸ್ಮಾರ್ಟ್ಗ್ಲಾಸ್ಗಳ ವಿಚಾರದಲ್ಲೂ ಮೆಟಾ ಗೌಪ್ಯತೆ ಕುರಿತ ಕಳವಳಗಳನ್ನು ಎದುರಿಸಿತ್ತು. ಮಾತ್ರವಲ್ಲದೆ, ಇತ್ತೀಚಿನ ತಿಂಗಳುಗಳಲ್ಲಿ ಕಂಪೆನಿಯು ತನ್ನ AI ಮಾದರಿಗಳಿಗೆ ತರಬೇತಿ ನೀಡಲು ಬಳಸಿದ ಡೇಟಾದ ಕುರಿತು ಕಾನೂನು ಸವಾಲುಗಳನ್ನು ಎದುರಿಸಿದೆ. ಪ್ರಕಾಶಕರು, ಹಕ್ಕುಸ್ವಾಮ್ಯ ಪಡೆದ ವಿಷಯವನ್ನು ಅನುಮತಿಯಿಲ್ಲದೆ ಬಳಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ಮೊಕದ್ದಮೆಗಳು ಹಕ್ಕುಸ್ವಾಮ್ಯದ ಮೇಲೆ ಕೇಂದ್ರೀಕೃತವಾಗಿದ್ದರೂ, ಪಾರದರ್ಶಕತೆ, ಒಪ್ಪಿಗೆ ಹಾಗೂ AI ಕಂಪನಿಗಳು ಸಾರ್ವಜನಿಕವಾಗಿ ಲಭ್ಯವಿರುವ ವಿಷಯವನ್ನು ಹೇಗೆ ಬಳಸುತ್ತವೆ ಎಂಬುದರ ಕುರಿತು ಕಳವಳವನ್ನು ಮತ್ತಷ್ಟು ಬಲಪಡಿಸಿವೆ.
ಇದೇ ಹಿನ್ನೆಲೆಯಲ್ಲಿ ನೋಡಿದರೆ, ಮ್ಯೂಸ್ ಇಮೇಜ್ ಬಿಡುಗಡೆಯೂ ಒಪ್ಪಿಗೆ ಕುರಿತ ಕಳವಳವನ್ನು ಹುಟ್ಟುಹಾಕಿದೆ. ಏಕೆಂದರೆ, ಈ ಫೀಚರ್ ಸಾರ್ವಜನಿಕ ಇನ್ಸ್ಟಾಗ್ರಾಂ ಖಾತೆಗಳಿಂದ ಪಡೆಯುವ ವಿಷಯವನ್ನು ಅವಲಂಬಿಸಿದೆ.






