ನೀವು ನೋಡುತ್ತಿರುವ ವೀಡಿಯೋ ನಿಜವೇ? AI ರಚಿತ ವೀಡಿಯೋಗಳನ್ನು ಗುರುತಿಸುವ 5 ಸ್ಮಾರ್ಟ್ ತಂತ್ರಗಳು ಇಲ್ಲಿವೆ!

ಸಾಂದರ್ಭಿಕ ಚಿತ್ರ | Photo Credit : magnific.com
ನೀವು ನೋಡುವ ವೀಡಿಯೋಗಳು ಅಸಲಿಯೇ ಅಥವಾ AI ಮಾಯಾಜಾಲವೇ? ಪತ್ತೆಹಚ್ಚಲು ಈ 5 ಸಲಹೆಗಳನ್ನು ಅನುಸರಿಸಿ.
ಗೂಗಲ್ ನ ವಿಯೋ ಮತ್ತು ಕ್ಲಿಂಗ್ ನಂತಹ AI ವೀಡಿಯೋ ರಚನಾ ಅಪ್ಲಿಕೇಶನ್ ಗಳ ಆಗಮನದ ಬಳಿಕ, ಒಂದು ಪಠ್ಯ ಪ್ರಾಂಪ್ಟ್ ನಿಂದ ನಿಮಿಷಗಳಲ್ಲಿ ಫೋಟೊರಿಯಲಿಸ್ಟಿಕ್ ದೃಶ್ಯಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೆಚ್ಚಿದ್ದು, ನೈಜ ಪ್ರಪಂಚದ ದೃಶ್ಯಗಳ ನಡುವೆ ವ್ಯತ್ಯಾಸ ಕಂಡುಹಿಡಿಯುವುದು ಕಷ್ಟಕರವಾಗಿದೆ.
ಭವಿಷ್ಯದಲ್ಲಿ ಅನೇಕ AI ಸಂಶೋಧನಾ ಪ್ರಯೋಗಾಲಯಗಳು ಮತ್ತು ಸ್ಟಾರ್ಟ್ಅಪ್ ಗಳು ರಿಯಲಿಸ್ಟಿಕ್ ಮೋಷನ್, ಲೈಟಿಂಗ್ ಮತ್ತು ಭೌತಶಾಸ್ತ್ರವನ್ನು ಅನುಕರಿಸಬಲ್ಲ ಮಾದರಿಗಳನ್ನು ನಿರ್ಮಿಸುತ್ತಿರುವುದರಿಂದ, ಈ ಪರಿಕರಗಳು ಇನ್ನಷ್ಟು ಸಮರ್ಥವಾಗುವ ಸಾಧ್ಯತೆಯಿದೆ.
AI ಉದ್ಯಮವು ಇದೀಗ ವಾಟರ್ ಮಾರ್ಕಿಂಗ್ (ಡಿಜಿಟಲ್ ಗುರುತು ಹಾಕುವುದು) ಮತ್ತು ಪ್ರೊವೆನನ್ಸ್ (ಮೂಲ/ಉಗಮವನ್ನು ದೃಢಪಡಿಸುವುದು) ಕಡೆಗೆ ಹೆಜ್ಜೆ ಇಡುತ್ತಿದೆ ಎಂದು ಹೇಳಲಾಗಿದೆ. AI ಉದ್ಯಮವು C2PA ಕಂಟೆಂಟ್ ಕ್ರೆಡೆನ್ಶಿಯಲ್ಸ್ ಮತ್ತು ಗೂಗಲ್ ನ SynthID ಮುಂತಾದ ತಂತ್ರಜ್ಞಾನಗಳನ್ನು ಬಳಸಿಕೊಂಡು ಡಿಜಿಟಲ್ ವಿಷಯದ ಮೂಲ ಮತ್ತು ಅದರಲ್ಲಿ ನಡೆದ ಬದಲಾವಣೆಗಳ ಬಗ್ಗೆ ಮಾಹಿತಿಯನ್ನು ದಾಖಲಿಸುವತ್ತ ಸಾಗುತ್ತಿದೆ. ಇದರಿಂದ, ಲಭ್ಯವಿರುವ ಮೂಲ ಮಾಹಿತಿಯ ಆಧಾರದ ಮೇಲೆ, ಯಾವ ವಿಷಯ AI-ರಚಿತ ಅಥವಾ AI-ಸಂಪಾದಿತವಾಗಿರಬಹುದು ಎಂಬುದನ್ನು ಪರಿಶೀಲಿಸಲು ನೆರವಾಗುತ್ತದೆ.
C2PA ಕಂಟೆಂಟ್ ಕ್ರೆಡೆನ್ಶಿಯಲ್ಸ್ ಒಂದು ಇಂಡಸ್ಟ್ರಿ ಸ್ಟಾಂಡರ್ಡ್ ಆಗಿದ್ದು, ಚಿತ್ರ, ವೀಡಿಯೋ, ಆಡಿಯೋ ಅಥವಾ ಪಠ್ಯವನ್ನು ಯಾವ ಸಾಧನ/ಸಾಫ್ಟ್ವೇರ್ನಲ್ಲಿ, ಯಾವಾಗ ಸೃಷ್ಟಿಸಲಾಯಿತು ಮತ್ತು ಅದರಲ್ಲಿ ಯಾವ ಬದಲಾವಣೆಗಳನ್ನು ಮಾಡಲಾಗಿದೆ ಎಂಬಂತಹ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಬಹುದು. ಅಗತ್ಯವಿದ್ದರೆ ಕಂಟೆಂಟ್ ಕ್ರಿಯೆಟರ್ ಅಥವಾ ಪ್ರಕಾಶಕರ ಮಾಹಿತಿಯನ್ನೂ ಒಳಗೊಂಡಿರಬಹುದು. ಅಂದರೆ, ಒಂದು ಫೋಟೊವನ್ನು ಯಾವುದರಲ್ಲಿ ಸೆರೆಹಿಡಿಯಲಾಗಿದೆ, ಎಲ್ಲಿ ಸಂಪಾದಿಸಲಾಗಿದೆ ಮತ್ತು ಎಲ್ಲಿ ಪ್ರಕಟಿಸಲಾಗಿದೆ ಎನ್ನುವಂತಹ ಮಾಹಿತಿಯನ್ನು ದಾಖಲಿಸಬಹುದು.
ಗೂಗಲ್ SynthID ಎನ್ನುವುದು ಗೂಗಲ್ ಅಭಿವೃದ್ಧಿಪಡಿಸಿದ ತಂತ್ರಜ್ಞಾನ. SynthID ಬೆಂಬಲಿಸುವ ಗೂಗಲ್ ನ AI ವ್ಯವಸ್ಥೆಗಳಿಂದ ಸೃಷ್ಟಿಸಲಾದ ಚಿತ್ರ, ಆಡಿಯೋ ಮತ್ತು ವೀಡಿಯೋಗಳಲ್ಲಿ ಅದು ಮಾನವನ ಕಣ್ಣಿಗೆ ಕಾಣದ ವಾಟರ್ಮಾರ್ಕ್ ಅನ್ನು ಸೇರಿಸುತ್ತದೆ. ಸೂಕ್ತ ತಂತ್ರಜ್ಞಾನದ ಮೂಲಕ ಪರಿಶೀಲಿಸಿದಾಗ ಆ ವಾಟರ್ಮಾರ್ಕ್ ಪತ್ತೆಹಚ್ಚಬಹುದು. ಆದರೆ ಇಂತಹ ವಾಟರ್ಮಾರ್ಕ್ ಎಲ್ಲಾ AI-ರಚಿತ ವಿಷಯಗಳಲ್ಲೂ ಇರಬೇಕೆಂದಿಲ್ಲ.
ಆದರೆ, ಇನ್ನೊಂದು ಬದಿಯಲ್ಲಿ ಪತ್ತೆಹಚ್ಚುವಿಕೆ ಇನ್ನೂ ಆರಂಭಿಕ ಹಂತದಲ್ಲಿದೆ. ಹೀಗಾಗಿ, AI-ರಚಿತ ಅಥವಾ AI-ಪ್ರಕ್ರಿಯೆಗೊಳಿಸಿದ ವೀಡಿಯೋವನ್ನು ಗುರುತಿಸುವುದು ಪ್ರತಿಯೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಕಲಿಯಬೇಕಾದ ಡಿಜಿಟಲ್ ಸಾಕ್ಷರತಾ ಕೌಶಲ್ಯವಾಗಿದೆ. ಹಾಗಿದ್ದರೆ, ವೀಡಿಯೋ AI-ರಚಿತವೇ ಎಂದು ತಿಳಿಯುವುದು ಹೇಗೆ?
ಮುಖಭಾವಗಳು ಮತ್ತು ದೇಹದ ಚಲನೆಗಳು
ಕೆಲವು AI-ಪ್ರಕ್ರಿಯೆಗೊಳಿಸಿದ ವೀಡಿಯೋಗಳಲ್ಲಿ ಫೋಟೊರಿಯಲಿಸ್ಟಿಕ್ ಜನರ ಕಣ್ಣು ಮಿಟುಕಿಸುವಿಕೆ, ಮುಖಭಾವಗಳು ಅಥವಾ ದೇಹದ ಚಲನೆಗಳು ಅಸಹಜವಾಗಿ ಕಾಣಿಸಬಹುದು. ಅವರ ಭಾವಭಂಗಿಗಳು ದೃಶ್ಯದ ಭಾವನೆಗಳಿಗೆ ನಿಖರವಾಗಿ ಹೊಂದಿಕೆಯಾಗದಿರುವ ಸಾಧ್ಯತೆಯೂ ಇದೆ. ಹೆಚ್ಚುವರಿಯಾಗಿ, ಅವರ ಚರ್ಮ, ಕಣ್ಣುಗಳು ಮತ್ತು ಕೂದಲಿನ ವಿನ್ಯಾಸವು ಒಂದು ಚೌಕಟ್ಟಿನಿಂದ ಇನ್ನೊಂದಕ್ಕೆ ಬದಲಾಗಬಹುದು.
ದೇಹದ ಚಲನೆಯಲ್ಲೂ ಅಸಹಜತೆ ಕಾಣಿಸಬಹುದು. ಉದಾಹರಣೆಗೆ, ವ್ಯಕ್ತಿಯ ಚಲನೆ ಅತಿಯಾಗಿ ನಯವಾಗಿ ಕಾಣುವುದು ಅಥವಾ ಭಾವಭಂಗಿಯಲ್ಲಿ ಸಹಜವಾದ ಸಣ್ಣ ಬದಲಾವಣೆಗಳು ಕಾಣಿಸದಿರುವುದು ಅನುಮಾನ ಮೂಡಿಸಬಹುದು. ಆದರೆ ಇವುಗಳ ಆಧಾರದ ಮೇಲೆ ಮಾತ್ರ ವೀಡಿಯೋ AI-ರಚಿತ ಎಂದು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ.
ಸಿಂಕ್ ಆಗದ ಆಡಿಯೋ ಮತ್ತು ತುಟಿ ಚಲನೆಗಳು
AI ಕೌಶಲ್ಯದಿಂದ ತಯಾರಿಸಿದ ಕೆಲವು ಸಿಂಥೆಟಿಕ್ ವೀಡಿಯೋಗಳಲ್ಲಿ ತುಟಿ ಚಲನೆಗಳು ಮಾತನಾಡುವ ಪದಗಳೊಂದಿಗೆ ನಿಖರವಾಗಿ ಹೊಂದಿಕೆಯಾಗದಿರುವುದು ಕಾಣಿಸಬಹುದು. ಆದರೆ ಕಳೆದ ಎರಡು ವರ್ಷಗಳಲ್ಲಿ ಧ್ವನಿ ಕ್ಲೋನಿಂಗ್ ಮತ್ತು ವೀಡಿಯೋ ತಂತ್ರಜ್ಞಾನಗಳು ವೇಗವಾಗಿ ಮುಂದುವರಿದಿವೆ. ಹೀಗಾಗಿ, ಕೇವಲ ಆಡಿಯೋ ಮತ್ತು ತುಟಿ ಚಲನೆಗಳ ಹೊಂದಾಣಿಕೆಯನ್ನು ಆಧರಿಸಿ AI-ರಚಿತ ವೀಡಿಯೋವನ್ನು ಖಚಿತವಾಗಿ ಗುರುತಿಸುವುದು ಕಷ್ಟವಾಗಬಹುದು.
ಅವಾಸ್ತವಿಕ ಬೆಳಕು–ನೆರಳುಗಳು
ಕೆಲವು AI-ರಚಿತ ವೀಡಿಯೋಗಳು ನೈಜ-ಜಗತ್ತಿನ ಲೈಟಿಂಗ್ ಮತ್ತು ಭೌತಶಾಸ್ತ್ರದ ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸದೆ ಇರಬಹುದು. ಉದಾಹರಣೆಗೆ, ಬೆಳಕು ಎಡಬದಿಯಿಂದ ಬಂದರೆ ನೆರಳು ಸಾಮಾನ್ಯವಾಗಿ ಬಲಬದಿಗೆ ಬೀಳಬೇಕು. ಆದರೆ AI-ರಚಿತ ವೀಡಿಯೋದಲ್ಲಿ ನೆರಳಿನ ಕೋನ ಅಥವಾ ದಿಕ್ಕು ಅಸಹಜವಾಗಿ ಕಾಣಬಹುದು.
ಪ್ರತಿಬಿಂಬವು ವಸ್ತುವಿಗೆ ಅಥವಾ ವ್ಯಕ್ತಿಯ ಚಲನೆಗೆ ಹೊಂದಿಕೆಯಾಗದಿರುವ ಸಾಧ್ಯತೆಯೂ ಇದೆ. ಉದಾಹರಣೆಗೆ, ವ್ಯಕ್ತಿ ನಗುತ್ತಿದ್ದರೆ ಪ್ರತಿಬಿಂಬದಲ್ಲಿ ಅದೇ ರೀತಿಯ ಬದಲಾವಣೆ ಕಾಣಿಸದಿರಬಹುದು.
ದೃಶ್ಯ ಬದಲಾದಾಗ ಬೆಳಕಿನ ದಿಕ್ಕು ಅಥವಾ ತೀವ್ರತೆ ತಾರ್ಕಿಕ ಕಾರಣವಿಲ್ಲದೆ ಅಸಹಜವಾಗಿ ಬದಲಾಗಬಹುದು. ಅಂದರೆ, ಒಂದು ಶಾಟ್ನಲ್ಲಿ ಹಿಂಬದಿಯಿಂದ ಬೆಳಕಿದ್ದರೆ, ಮುಂದಿನ ಶಾಟ್ ನಲ್ಲಿ ಕಾರಣವಿಲ್ಲದೆ ಮುಂಭಾಗದಿಂದ ಬೆಳಕು ಬರುವಂತೆ ಕಾಣಬಹುದು.
ಒಟ್ಟಿನಲ್ಲಿ, ನೆರಳು, ಪ್ರತಿಬಿಂಬ, ಬೆಳಕು ಮುಂತಾದವುಗಳಲ್ಲಿ ಕಾಣಿಸುವ ಇಂತಹ ಅಸಹಜತೆಗಳು ವೀಡಿಯೋ AI-ರಚಿತವಾಗಿರಬಹುದೆಂಬ ಅನುಮಾನ ಮೂಡಿಸಬಹುದು. ಆದರೆ ಇವುಗಳ ಆಧಾರದ ಮೇಲೆ ಮಾತ್ರ ವೀಡಿಯೋವನ್ನು AI-ರಚಿತ ಎಂದು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ.
ಪ್ಲಾಟ್ಫಾರ್ಮ್ ಲೇಬಲ್ ಗಳು
ಮೇಲೆ ತಿಳಿಸಿರುವಂತೆ, ಅನೇಕ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳು AI-ರಚಿತ ಅಥವಾ AI-ಸಂಪಾದಿತ ವಿಷಯವನ್ನು ಗುರುತಿಸಲು ಲೇಬಲ್ ಗಳನ್ನು ಬಳಸುತ್ತಿವೆ. ಈ ಲೇಬಲ್ಗಳು ವೀಡಿಯೋದ ಫ್ರೇಮ್ ನಲ್ಲೇ ಕಾಣಿಸಿಕೊಳ್ಳಬೇಕು ಎಂದೇನಿಲ್ಲ; ವೇದಿಕೆಯ ಆಧಾರದ ಮೇಲೆ ಪೋಸ್ಟ್ ಅಥವಾ ಅದರ ಮೆನುವಿನಲ್ಲಿಯೂ ಕಾಣಿಸಿಕೊಳ್ಳಬಹುದು.
ಉದಾಹರಣೆಗೆ, ಇನ್ಸ್ಟಾಗ್ರಾಮ್ ನಲ್ಲಿ ವೀಡಿಯೋದ ಬಳಿ ಸಣ್ಣ “AI info” ಅಥವಾ “Altered or synthetic content” ಎನ್ನುವ ಟ್ಯಾಗ್ ಕಾಣಿಸಿಕೊಳ್ಳಬಹುದು. ಆದರೆ ಕೆಲವೊಮ್ಮೆ ನೈಜ ಚಿತ್ರಗಳನ್ನು AI-ರಚಿತವೆಂದು ತಪ್ಪಾಗಿ ಲೇಬಲ್ ಮಾಡಿದ ಸಂದರ್ಭಗಳೂ ಇವೆ. ಹೀಗಾಗಿ, ಲೇಬಲ್ ಇದೆ ಅಥವಾ ಇಲ್ಲ ಎಂಬುದನ್ನು ಮಾತ್ರ ಆಧರಿಸಿ ವೀಡಿಯೋ ನೈಜವೇ ಅಥವಾ AI-ರಚಿತವೇ ಎಂದು ನಿರ್ಧರಿಸಬಾರದು.
ವೀಡಿಯೋ ಮೂಲ ಹುಡುಕಿ
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಲು ಬಯಸುವ ಬಳಕೆದಾರರು, ವೀಡಿಯೋ ಪೋಸ್ಟ್ ಮಾಡಿದ ಖಾತೆಯನ್ನು ಪರಿಶೀಲಿಸಬಹುದು. ಖಾತೆ ಯಾವಾಗ ರಚಿಸಲಾಗಿದೆ, ಅದರ ಪೋಸ್ಟಿಂಗ್ ಇತಿಹಾಸ, ಬಳಕೆದಾರರ ಹೆಸರು ಮತ್ತು ಪ್ರೊಫೈಲ್ ಚಿತ್ರ ಇತ್ಯಾದಿ ವಿವರಗಳನ್ನು ಪರಿಶೀಲಿಸಬಹುದು.
ಸಾಮಾನ್ಯವಾಗಿ, ಹೊಸದಾಗಿ ರಚಿಸಿದ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಪೋಸ್ಟ್ ಮಾಡುವ ಖಾತೆಗಳಿಂದ ಬಂದ ವೀಡಿಯೋಗಳನ್ನು ಹೆಚ್ಚುವರಿ ಪರಿಶೀಲನೆಯೊಂದಿಗೆ ಪರಿಗಣಿಸುವುದು ಉತ್ತಮ. ವೀಡಿಯೋದ ಮೂಲ ಪೋಸ್ಟ್ ಅಥವಾ ವಿಶ್ವಾಸಾರ್ಹ ಸುದ್ದಿ ಮೂಲವನ್ನು ಹುಡುಕುವುದರಿಂದ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಹಾಯವಾಗಬಹುದು.
ಸೌಜನ್ಯ: ಇಂಡಿಯನ್ ಎಕ್ಸ್ಪ್ರೆಸ್






